

ಭಾರತದಲ್ಲಿ ಮಾಂಟೆಸ್ಸರಿಯನ್ನು ಪರಿಚಯಿಸಿದವರು ಶಿಕ್ಷಣತಜ್ಞ ಗಿಜುಭಾಯಿ ಬದೇಕಾ. ಅವರ ಪುಸ್ತಕ- ‘ದಿವ್ಯಸ್ವಪ್ನ’ ಶಿಕ್ಷಣದ ಹಲವು ಸಂಗತಿಗಳ ಬಗ್ಗೆ ಹೊಸ ಹೊಳಹು ನೀಡುತ್ತದೆ. ‘ನಮ್ಮ ಮಕ್ಕಳಲ್ಲಿ ಕೀಟಗಳಿಂದ ಹಿಡಿದು ನಕ್ಷತ್ರಗಳವರೆಗೆ ಸಾವಿರಾರು ಆಸಕ್ತಿ, ಕುತೂಹಲಗಳು ಇವೆ. ಆದರೆ, ಇದೆಲ್ಲ ತರಗತಿಯಲ್ಲಿನ ಅಧ್ಯಯನಕ್ಕೆ ಅಪ್ರಸ್ತುತವೆಂದು ದೇಶದ ಶಾಲಾಸಂಸ್ಕೃತಿ ಪರಿಗಣಿಸಿದೆ’ ಎಂದು ಅವರ ಪುಸ್ತಕದಲ್ಲಿ ಹೇಳಿರುವ ಮಾತು ನೂರು ಪ್ರತಿಶತ ನಿಜ. ‘ಶಿಕ್ಷಕ ಪಠ್ಯಪುಸ್ತಕದಲ್ಲಿ ಇರುವುದನ್ನು ಕಲಿಸುವುದು ಮತ್ತು ಮಕ್ಕಳನ್ನು ಪರೀಕ್ಷೆಗೆ ಸಿದ್ಧಮಾಡುವುದಷ್ಟೇ ತನ್ನ ಕೆಲಸ ಎಂದು ಭಾವಿಸಿದ್ದಾನೆ. ಇದು ನಿಜವಾದ ಶಿಕ್ಷಣ ಅಲ್ಲ. ಮಗುವಿನ ಕುತೂಹಲವನ್ನು ಪೋಷಿಸುವುದು ತಮ್ಮ ಜವಾಬ್ದಾರಿಯ ಒಂದು ಭಾಗವೆಂದು ಶಿಕ್ಷಕರಿಗೆ ಅನ್ನಿಸುವುದೇ ಇಲ್ಲ. ಅಥವಾ ಶಿಕ್ಷಕರು ಜವಾಬ್ದಾರಿಯನ್ನು ಪೂರೈಸುವಂತಹ ಪರಿಸ್ಥಿತಿಯನ್ನು ಶಾಲೆಯು ಒದಗಿಸುವುದಿಲ್ಲ’ ಎಂದೂ ಗಿಜುಭಾಯಿ ಹೇಳಿದ್ದಾರೆ. ಈ ಪುಸ್ತಕ ಬರೆದಿದ್ದು 1930ರ ದಶಕದಲ್ಲಾದರೂ, ಇಂದಿಗೂ ಪ್ರಸ್ತುತವೆನಿಸುತ್ತದೆ.
ಶಾಲಾಶಿಕ್ಷಣದ ಗುರಿ ನಿಜಕ್ಕೂ ಮಕ್ಕಳನ್ನು ಪರೀಕ್ಷೆಗೆ ಸಿದ್ಧಪಡಿಸುವುದು ಮಾತ್ರವಾದರೆ, ದೇಶವು 26.43 ಕೋಟಿ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ದಾಖಲಿಸಿಕೊಂಡು, 96.86 ಲಕ್ಷ ಶಿಕ್ಷಕರೊಂದಿಗೆ 15.07 ಲಕ್ಷ ಶಾಲೆಗಳನ್ನು ನಡೆಸುವ ಅಗತ್ಯವೇ ಇಲ್ಲ. ಕಠಿಣವಾದ ಎಸ್ಒಪಿಗಳನ್ನು ಮತ್ತು ಪಠ್ಯಪುಸ್ತಕಗಳನ್ನು ತಯಾರಿಸಿ ಅವುಗಳನ್ನು ಮಕ್ಕಳ ಮನೆಗಳಿಗೆ ತಲುಪಿಸಿ, ಪರೀಕ್ಷಾ ಕೇಂದ್ರಗಳಲ್ಲಿ ಗೊತ್ತುಪಡಿಸಿದ ದಿನಗಳಲ್ಲಿ ಅವರ ಕಂಠಪಾಠದ ಶಕ್ತಿಯನ್ನು ಪರೀಕ್ಷಿಸಿದರೆ ಸಾಕು. ಶಾಲೆಗಳಲ್ಲಿ ಕಲಿಕೆಯ ಅಂತಿಮ ಗುರಿ ಖಂಡಿತವಾಗಿಯೂ ಪರೀಕ್ಷೆಗಳಲ್ಲ ಎಂಬ ವಾಸ್ತವವನ್ನು ನಾವೆಲ್ಲ ಯಾವಾಗ ಮನಗಾಣುವುದು? ಸಮಗ್ರ ಬೆಳವಣಿಗೆ ಮತ್ತು ಅಭಿವೃದ್ಧಿ ಹಾದಿಯಲ್ಲಿ ಮಗು ದಾಟಬೇಕಾದ ಹಲವು ಮೈಲಿಗಲ್ಲುಗಳಲ್ಲಿ ಅದೊಂದು ಪ್ರಮುಖ ಹಂತ.
ಹೊಸ ಶಿಕ್ಷಣ ನೀತಿಯ ಬಗ್ಗೆ, ಅದರ ವೈಶಿಷ್ಟ್ಯಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ‘ಕಠಿಣ ಪ್ರತ್ಯೇಕತೆಗಳಿಲ್ಲ’ ಮತ್ತು ‘ಅಂತರಗಳ ನಿಮೂಲನೆ’ ಎಂಬ ಎರಡು ಕುತೂಹಲಕಾರಿ ಆಯಾಮಗಳಿವೆ. ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಠಾನಕ್ಕಾಗಿ ದೇಶವು ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ. ಎಲ್ಲ ಶಾಲೆಗಳಲ್ಲಿ ಉನ್ನತ-ಗುಣಮಟ್ಟದ ಶಿಕ್ಷಣಕ್ಕಾಗಿ ರಾಜ್ಯ ಮಾನದಂಡ ನಿಗದಿ ಪ್ರಾಧಿಕಾರ (ಎಸ್ಎಸ್ಎಸ್ಎ) ಸ್ಥಾಪಿಸುವ ಮೂಲಕ ಸಾಮಾನ್ಯ ಮಾನದಂಡಗಳ ನಿಯಮ ಮತ್ತು ಸಾಧನೆಯ ಅಗತ್ಯವನ್ನು ಹೇಳುತ್ತಿದೆ- ಅಂದರೆ, ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳ ನಡುವೆ ಯಾವುದೇ ಅಂತರ ಇಲ್ಲ. ಹಾಗೆಯೇ, ಇದು ಶಾಲಾಪೂರ್ವದಿಂದ ಉನ್ನತ ಶಿಕ್ಷಣದವರೆಗೆ ಕಲಿಯುವಲ್ಲಿ ನಿರಂತರತೆಯನ್ನು ಖಾತರಿಪಡಿಸುತ್ತದೆ- ಅಂದರೆ ಕಠಿಣವಾದ ಪ್ರತ್ಯೇಕತೆಗಳಿಲ್ಲ.
ಮಗುವಿನ ತಾಯ್ನುಡಿ/ಭಾಷೆಯಲ್ಲಿ ಬೋಧನೆಗೆ ಆದ್ಯತೆ ನೀಡಲಾಗಿದೆ. ಸಂಖ್ಯಾಶಾಸ್ತ್ರ ಮತ್ತು ಇತರ ಎಲ್ಲ ವಿಷಯಗಳನ್ನು ಪ್ರಾದೇಶಿಕ/ರಾಜ್ಯಭಾಷೆಯಲ್ಲಿ ಬೋಧಿಸುವುದರಿಂದ ಭಾಷೆಯ ತಡೆಗೋಡೆ ಇಲ್ಲವಾಗಲಿದೆ. ಹಾಗಾಗಿ, ಇನ್ನು ಮುಂದೆ ಬೋಧನಾಕ್ರಮವು ಮಗುವಿನಿಂದ ಸಂಪರ್ಕ ಕಡಿದುಕೊಳ್ಳುವುದಿಲ್ಲ. ಬೋಧನಾಕ್ರಮವು ಚಟುವಟಿಕೆ ಆಧಾರಿತ ಮತ್ತು ಪ್ರಯೋಗಾಧಾರಿತವಾಗಿರಬೇಕು. ಅಂದರೆ ಕಥೆ ಹೇಳುವುದು, ಕಲೆ ಮತ್ತು ಕರಕುಶಲ, ಕ್ರೀಡೆ, ರಂಗಭೂಮಿ ಇತ್ಯಾದಿಗಳ ಮೂಲಕ ಅರಿವಿನ ಬೆಳವಣಿಗೆಯಾಗುತ್ತದೆ.
ತರಗತಿಗಳಲ್ಲಿ ಒಂದೇ ರೀತಿಯ ಆಸನ ವ್ಯವಸ್ಥೆಯನ್ನು (ಎಲ್ಲ ಮಕ್ಕಳು ಬೋರ್ಡ್ನತ್ತ ಮುಖ ಮಾಡಿ ಕೂರುವುದು) ಬದಲಿಸುವುದು ಅಗತ್ಯ. ಕಲೆ, ಆಟೋಟಗಳು ಮತ್ತು ಇತರ ಆಕರ್ಷಕ ಚಟುವಟಿಕೆಗಳೊಂದಿಗೆ ಕಲಿಕೆ ಸಂತೋಷದಾಯಕವಾಗಿರಬೇಕು, ಮಕ್ಕಳ ಉತ್ಸಾಹ ಹೆಚ್ಚಿಸುವಂತಿರಬೇಕು.
ಆಸನ ವ್ಯವಸ್ಥೆಯು ಬದಲಾಗುತ್ತಿರಬೇಕು. ಕೆಲವೊಮ್ಮೆ ವೃತ್ತದಲ್ಲಿ, ಆದರೆ ಬಹುತೇಕ ಸಮಯದಲ್ಲಿ ಗುಂಪುಗಳಲ್ಲಿ ಇರಬೇಕು. ನಿಗದಿತ ಪಠ್ಯಪುಸ್ತಕಗಳನ್ನು ಮಾತ್ರ ಆಧರಿಸಿ ಕಲಿಯುವುದರಿಂದ ಹೆಚ್ಚಿನ ವಿಷಯಗಳನ್ನು, ಹೊಸ ಚಟುವಟಿಕೆಗಳನ್ನು ಕಲಿಯಲು ಆಗುವುದಿಲ್ಲ. ಆಟಿಕೆಗಳು, ಬೊಂಬೆಗಳು, ನಿಯತಕಾಲಿಕೆಗಳು, ವರ್ಕ್ಶೀಟ್ಗಳು, ಕಾಮಿಕ್ ಮತ್ತು ಕಥೆಪುಸ್ತಕಗಳು, ಪ್ರಕೃತಿನಡಿಗೆಗಳು, ಸ್ಥಳೀಯ ಕರಕುಶಲ, ಗಣ್ಯವ್ಯಕ್ತಿಗಳ ಭೇಟಿ, ತರಗತಿ ಆರ್ಕೆಸ್ಟ್ರಾಗಳು, ನೃತ್ಯ ಸಂಯೋಜನೆ ಇತ್ಯಾದಿ ಚಟುವಟಿಕೆಗಳನ್ನು ಆಗಾಗ ಆಯೋಜಿಸುತ್ತಿರಬೇಕು. ವಿವಿಧ ಬೋಧನೆ ಮತ್ತು ಕಲಿಕಾ ಸಾಮಗ್ರಿಗಳು ಮತ್ತು ವಿಧಾನಗಳ ಮೂಲಕ ಕಲಿಕೆಯನ್ನು ವೈವಿಧ್ಯಮಯಗೊಳಿಸಬೇಕು.
ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆಗಳೇ ಅಂತಿಮವಾಗಿವೆ. ಎನ್ಇಪಿ 2020 ಈ ಒಂದು ದೊಡ್ಡ ಅಡಚಣೆಯನ್ನು ನಿವಾರಿಸುತ್ತಿದೆ. ಅಂದರೆ, ಪಠ್ಯಪುಸ್ತಕಗಳಲ್ಲಿ ಇರುವುದನ್ನು ಮಾತ್ರ ಪರೀಕ್ಷಿಸುವ ಪದ್ಧತಿ ಕಡಿಮೆಯಾಗಲಿದೆ. ಸೂಕ್ತ ವಾತಾವರಣದಲ್ಲಿರುವ ಮಗು ಸಹಭಾಗಿತ್ವ, ವಿಮರ್ಶಾತ್ಮಕವಾಗಿ ಯೋಚಿಸುವುದು, ಸಮಸ್ಯೆಗಳನ್ನು ಪರಿಹರಿಸುವುದು, ಸೃಜನಶೀಲವಾಗಿ ಇರುವುದು, ಸಂವಹನವನ್ನು ನಿರಂತರವಾಗಿ ಕಲಿಯುತ್ತಿರುತ್ತದೆ ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ. ಮಗುವಿನ ಕಲಿಕೆ ಪಠ್ಯಪುಸ್ತಕ ಜ್ಞಾನಕ್ಕೆ ಮಾತ್ರ ಸೀಮಿತವಾಗಿಲ್ಲದಿರುವುದರಿಂದ ವರ್ಷಾಂತ್ಯದ ಪರೀಕ್ಷೆ ಮಗುವಿನ ಸಂಪೂರ್ಣ ಸಾಮರ್ಥ್ಯ ಅಥವಾ ಅನನ್ಯತೆಯನ್ನು ಪ್ರತಿಬಿಂಬಿಸುವುದಿಲ್ಲ. ಆದ್ದರಿಂದ, ನಾವು ಪರೀಕ್ಷೆಗಳನ್ನು ಮೀರಿ ನೋಡಬೇಕಾಗಿದೆ. ಮೌಲ್ಯಮಾಪನವನ್ನು ಕಲಿಕೆಯ ಸಾಧನವಾಗಿ ನೋಡಬೇಕು ಅಷ್ಟೇ.
ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದೊಂದಿಗೆ, ನಮ್ಮ ಮೌಲ್ಯಮಾಪನ ವಿಧಾನವು ಮಹತ್ವದ ಬದಲಾವಣೆ ಕಾಣಲಿದೆ. ಕಡಿಮೆ ಮೌಲ್ಯಮಾಪನವಿದ್ದರೂ, ಪರಿಣಾಮಕಾರಿ ಆಗಿರಲಿದೆ. ಕಡಿಮೆ ಪಠ್ಯಕ್ರಮದಿಂದ ಆಳವಾದ ಅಧ್ಯಯನ ಸಾಧ್ಯವಾಗಲಿದೆ. ಕಡಿಮೆ ವಿಷಯಗಳಿದ್ದರೂ ಹೆಚ್ಚು ದಕ್ಷತೆ ಹೊಂದಲು ಅನುವಾಗಲಿದೆ. ಪಠ್ಯಪುಸ್ತಕಗಳ ಹೊರೆ ಕಡಿಮೆ ಆಗಿ, ವೈವಿಧ್ಯಮಯ ಕಲಿಕೆಗೆ ಒತ್ತು. ಕಡಿಮೆ ಒತ್ತಡ, ಹೆಚ್ಚು ಸಂತೋಷ. ಸ್ವಯಂ ಮತ್ತು ಸಹಪಾಠಿಗಳ ಮೌಲ್ಯಮಾಪನಕ್ಕೆ ಆದ್ಯತೆ. ಇದೆಲ್ಲದರ ಪರಿಣಾಮವಾಗಿ ಸಹಜವಾಗಿಯೇ ಅಡೆತಡೆಗಳು ಕಡಿಮೆಯಾಗಲಿವೆ; ಹೆಚ್ಚಿನ ಸಂಪರ್ಕಗಳು ಸೃಷ್ಟಿಯಾಗುತ್ತವೆ!
(ಪ್ರಧಾನಿಯವರೊಂದಿಗಿನ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದ ಮತ್ತೊಂದು ಆವೃತ್ತಿಯಲ್ಲಿ https://innovateindia.mygov.in/ppc&2021/ ಮೂಲಕ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರು ಭಾಗವಹಿಸಬಹುದು.)
(ಲೇಖಕರು ಶಿಕ್ಷಣ ಸಚಿವಾಲಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಯೋಜನೆಯ ಕಾರ್ಯದರ್ಶಿ)