

ಲಂಕೆಯಲ್ಲಿ ಯುದ್ಧ ನಡೆಯುತ್ತಿರುವಾಗ ಲಕ್ಷ್ಮಣನು ಇಂದ್ರಜಿತುವಿನ ಬಾಣಾಘಾತದಿಂದ ಮೂರ್ಛೆ ಹೋದದ್ದು, ಹನುಮಂತನನ್ನು ಸಂಜೀವಿನಿ ಸಸ್ಯಕ್ಕಾಗಿ ಕಳಿಸಿದ್ದು ಗೊತ್ತೇ ಇದೆ. ಆದರೆ ಆ ಸಸ್ಯದ ಪರಿಚಯವಿಲ್ಲದ ಹನುಮಂತ, ಇಡೀ ಪರ್ವತವನ್ನೇ ಹೊತ್ತುತರುತ್ತಾನೆ. ನೂರು ಯೋಜನ ವಿಸ್ತೀರ್ಣದ ಸಮುದ್ರವನ್ನೇ ಲಂಘಿಸಿದ ಮಹಾಪರಾಕ್ರಮಿಗೆ ಪರ್ವತವನ್ನು ಹೊತ್ತುತರುವುದು ಕಷ್ಟದ ಕೆಲಸವೆ? ಕೊನೆಗೆ, ಸಂಜೀವಿನಿ ಗಿಡದ ಔಷಧದಿಂದ ಲಕ್ಷ್ಮಣ ಗುಣಹೊಂದುತ್ತಾನೆ. ಅಷ್ಟೇ ಅಲ್ಲ, ಇಂದ್ರಜಿತುವನ್ನು ಸೋಲಿಸುತ್ತಾನೆ. ಅಂತಿಮವಾಗಿ ರಾಮನು ರಾವಣದ ವಧೆ ಮಾಡುವ ಮೂಲಕ ಎಲ್ಲವೂ ಸುಖಾಂತ್ಯವಾಗುತ್ತದೆ.
ಇದು ರಾಮಾಯಣದ ಕತೆಯಾದರೆ, ಇಂದಿನ ವಿಜ್ಞಾನಿಗಳು ಕರೊನಾ ಎಂಬ ಮಹಾಮಾರಿ ಜತೆಗೆ ಸೆಣಸುತ್ತಿದ್ದಾರೆ. ಈಗ ಬಳಸಲಾಗುತ್ತಿರುವ ವಿವಿಧ ಲಸಿಕೆಗಳು ಕರೊನಾ ಓಡಿಸಲು ‘ಸಂಜೀವಿನಿ’ ಆಗಬಹುದೆಂಬ ಆಶಾವಾದದ ನಡುವೆಯೇ, ಕರೊನಾ ಎರಡನೇ-ಮೂರನೇ ಅಲೆ ವೇಗವಾಗಿ ಬೀಸುತ್ತಿದೆ. ಹಿಂದೆಲ್ಲ ಲಸಿಕೆ ಸಂಶೋಧನೆಗೆ ಸಾಮಾನ್ಯವಾಗಿ ನಾಲ್ಕಾರು ವರ್ಷ ತಗುಲುತ್ತಿದ್ದರೆ ಈಗ ಕರೊನಾ ಸನ್ನಿವೇಶದಲ್ಲಿ ಒಂದು ಒಂದೂವರೆ ವರ್ಷದಲ್ಲೇ ಲಸಿಕೆ ಬಂದುಬಿಟ್ಟಿದೆ (ಮೊದಲಿಗಿಂತ ಈಗ ವೈದ್ಯಕೀಯ ವಿಜ್ಞಾನ ಮುಂದುವರಿದಿದೆ ಎಂಬುದು ಕೂಡ ನಿಜ). ಈ ಕಾರಣಕ್ಕಾಗಿಯೇ ಕೆಲವರು ಈ ಲಸಿಕೆಗಳ ಸುರಕ್ಷತೆ ಬಗ್ಗೆ ಸಣ್ಣ ಸಂದೇಹವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಸಹ ಲಸಿಕೆಗಳನ್ನು ಎಮರ್ಜೆನ್ಸಿ ಬಳಕೆಗೆ ಎಂದೇ ಅನುಮತಿ ನೀಡಿದೆ. ಆದರೆ ಆರೋಗ್ಯ ತಜ್ಞರು ಮತ್ತು ವೈದ್ಯಕೀಯ ಸಂಶೋಧಕರ ಪ್ರಕಾರ, ಲಸಿಕೆ ತೆಗೆದುಕೊಂಡರೆ ತೊಂದರೆಯೇನೂ ಇಲ್ಲ. ಕೆಲವರಿಗೆ ಮಾತ್ರ ಜ್ವರ, ಮೈಕೈನೋವು ಮುಂತಾದ ತೊಂದರೆಗಳು ಕಾಣಿಸಿಕೊಂಡಿವೆ. ‘ಯಾವುದೇ ಲಸಿಕೆಯಾದರೂ ಇಂಥದು ಸಹಜ’ಎಂದು ತಜ್ಞರು ಹೇಳುತ್ತಾರೆ. ಕರೊನಾ ಅಲೆ ಜೋರಾಗಿರುವ ಈ ಸಂದರ್ಭದಲ್ಲಿ, ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದರ ಜತೆಗೆ, ಹೆಚ್ಚೆಚ್ಚು ಜನರು ಲಸಿಕೆ ತೆಗೆದುಕೊಳ್ಳುವುದು ವೈರಸ್ ಪ್ರಸರಣಕ್ಕೆ ಕಡಿವಾಣ ಹಾಕಬಲ್ಲ ಪ್ರಮುಖ ಉಪಾಯ ಎಂದೇ ತಜ್ಞರು ವಾದಿಸುತ್ತಾರೆ. ಹೀಗಾಗಿ ಸಾರ್ವತ್ರಿಕ ಲಸಿಕಾ ಅಭಿಯಾನವನ್ನು ಇನ್ನಷ್ಟು ಚುರುಕುಗೊಳಿಸಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.
ಹಾಗೆನೋಡಿದಲ್ಲಿ, ಲಸಿಕೆ ವಿಚಾರದಲ್ಲಿ ಭಾರತವೇ ಮುಂಚೂಣಿ. ಸದ್ಯ ದೇಶದಲ್ಲಿ ಪ್ರತಿದಿನ 30 ಲಕ್ಷಕ್ಕಿಂತ ಅಧಿಕ ಡೋಸೇಜ್ ಲಸಿಕೆ ಹಾಕಲಾಗುತ್ತಿದೆ. ಇದು ಜಾಗತಿಕವಾಗಿ ದೈನಿಕದ ಅಧಿಕ ಪ್ರಮಾಣ (ನೆರೆಹೊರೆ ದೇಶಗಳು ಸೇರಿ ಹಲವು ದೇಶಗಳಿಗೆ ವ್ಯಾಕ್ಸಿನ್ ರವಾನಿಸುವ ಮೂಲಕ ಭಾರತ ‘ವ್ಯಾಕ್ಸಿನ್ ಡಿಪ್ಲೊಮಸಿ’ಯನ್ನೂ ಅನುಸರಿಸುತ್ತಿರುವುದು ವಿಶ್ವದ ಗಮನ ಸೆಳೆದಿದೆ. ದೇಶದಲ್ಲಿ ಲಸಿಕೆ ಬೇಡಿಕೆ ಹೆಚ್ಚುತ್ತಿರುವುದರಿಂದ ರಫ್ತು ಮಾಡಬಾರದು ಎಂದು ವಿಪಕ್ಷಗಳು ಆಗ್ರಹಿಸುತ್ತಿವೆಯಾದರೂ ಸರ್ಕಾರ ಒಪ್ಪಿಲ್ಲ.) ಜುಲೈ ಅಂತ್ಯದ ಹೊತ್ತಿಗೆ 30 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಬೇಕೆಂಬುದು ಕೇಂದ್ರ ಸರ್ಕಾರದ ಉದ್ದೇಶ. ಅಂದರೆ, ಸುಮಾರು 60 ಕೋಟಿ ಡೋಸ್ ಲಸಿಕೆ ಬೇಕಾಗುತ್ತದೆ. ಆದರೆ ಇಷ್ಟು ಪ್ರಮಾಣದಲ್ಲಿ ಸದ್ಯ ಉತ್ಪಾದನೆ ಆಗುತ್ತಿಲ್ಲ. ಈಗಿನ ಲೆಕ್ಕದ ಪ್ರಕಾರ, ಜುಲೈ ಕೊನೆಯ ವೇಳೆಗೆ ಸುಮಾರು 30 ಕೋಟಿ ಡೋಸ್ ಲಸಿಕೆ ತಯಾರಾಗುತ್ತದೆಂದು ಅಂದಾಜಿಸಲಾಗಿದೆ. ಅಂದರೆ, ಲಸಿಕೆ ಉತ್ಪಾದನೆ ವೇಗ ತೀವ್ರವಾಗಿ ಹೆಚ್ಚಬೇಕಾಗುತ್ತದೆ.
ನಮ್ಮ ದೇಶದಲ್ಲೀಗ ಕೋವಿಶಿಲ್ಡ್ ಮತ್ತು ಕೊವ್ಯಾಕ್ಸಿನ್ ಎಂಬ ಎರಡು ಲಸಿಕೆಗಳು ಬಳಕೆಯಲ್ಲಿದೆ. ರಷ್ಯಾದಲ್ಲಿ ಸಿದ್ಧವಾಗಿರುವ ಸ್ಪುಟ್ನಿಕ್ ಲಸಿಕೆ ಬಳಕೆಗೂ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಮಾಸಾಂತ್ಯಕ್ಕೆ ಅದು ಲಭ್ಯವಾಗುವ ನಿರೀಕ್ಷೆ ಇದೆ. ಇದಲ್ಲದೆ, ಇನ್ನೂ ಮೂರ್ನಾಲ್ಕು ವ್ಯಾಕ್ಸಿನ್ಗಳು ಸರದಿಯಲ್ಲಿದ್ದು, ಕೇಂದ್ರ ಸರ್ಕಾರ ಅವಕ್ಕೆ ಶೀಘ್ರ ಅನುಮೋದನೆ ನೀಡುವ ಸಾಧ್ಯತೆ ಇದೆ. ತರುವಾಯ ಲಸಿಕಾಭಿಯಾನಕ್ಕೆ ಇನ್ನಷ್ಟು ಬಲ ಬರಲಿದೆ. ದೇಶದಲ್ಲಿ ಈವರೆಗೆ ಸುಮಾರು 12 ಕೋಟಿ ಡೋಸ್ನಷ್ಟು ಲಸಿಕೆ ಹಾಕಲಾಗಿದೆ. ಹೈದರಾಬಾದಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತ್ ಬಯೋಟೆಕ್ ದೇಶಿಯವಾಗಿ ಕಂಡುಹಿಡಿದಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದನೆ ಮಾಡುತ್ತಿದೆ. ವಿಶ್ವದ ದೊಡ್ಡ ಲಸಿಕಾ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಕೋವಿಶಿಲ್ಡ್ ವ್ಯಾಕ್ಸಿನ್ ಅನ್ನು ತಯಾರಿಸುತ್ತಿದೆ. ಈ ಕೋವಿಶಿಲ್ಡ್ ಲಸಿಕೆಯನ್ನು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಬ್ರಿಟನ್ನಿನ ಆಸ್ಟ್ರಾಜೆನೆಕಾ ಕಂಪನಿ ಸಂಶೋಧಿಸಿದ್ದು, ಸೀರಂ ಇನ್ಸ್ಟಿಟ್ಯೂಟ್ ಲಸಿಕೆ ತಯಾರಿಕೆಯ ಗುತ್ತಿಗೆ ಪಡೆದಿದೆ. ‘ಲಸಿಕೆ ಉತ್ಪಾದನೆಗೆ ಬೇಕಾದ ಬಾಟಲಿ, ಫಿಲ್ಟರ್ ಮುಂತಾದ ವಸ್ತುಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಬೇಕಿದೆ. ಆದರೆ ಅಮೆರಿಕ ಸದ್ಯ ಆ ಸಾಮಗ್ರಿಗಳ ರಫ್ತಿಗೆ ನಿಷೇಧ ಹೇರಿರುವುದರಿಂದ ಕಚ್ಚಾವಸ್ತುಗಳ ತುಟಾಗ್ರತೆ ಉಂಟಾಗಿ, ಅಂದುಕೊಂಡ ಪ್ರಮಾಣದಲ್ಲಿ ಉತ್ಪಾದನೆ ಸಾಧ್ಯವಾಗುತ್ತಿಲ್ಲ’ ಎಂದು ಸೀರಂ ಇನ್ಸ್ಟಿಟ್ಯೂಟ್ ಹೇಳಿದೆ. ಆ ಸಂಸ್ಥೆ ತಿಂಗಳೊಂದಕ್ಕೆ 10 ಕೋಟಿ ಡೋಸ್ ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆಯಾದರೂ, ಸದ್ಯ ಆರೇಳು ಕೋಟಿಯಷ್ಟು ಡೋಸ್ ತಯಾರಾಗುತ್ತಿದೆ ಎಂಬ ಮಾಹಿತಿ ಇದೆ. ಜಾಗತಿಕವಾಗಿ ಅನೇಕ ದೇಶಗಳು ಸಹ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಿವೆ. ಆದರೂ ಕಣ್ಣಿಗೆ ಕಾಣದ ವೈರಾಣು ಮನುಕುಲವನ್ನು ಹೈರಾಣು ಮಾಡುತ್ತಿದೆ. ಈ ಅಲೆಯನ್ನು ಕಟ್ಟಿಹಾಕಲು ವೈದ್ಯಕೀಯ ವಿಜ್ಞಾನ ಪರಿಶ್ರಮಿಸುತ್ತಿದೆ....
====
ಕರೊನಾ ಪ್ರಕರಣಗಳು ಹೆಚ್ಚುತ್ತಿದ್ದಂತೆ, ಕಳೆದ ವರ್ಷ ಮಾರ್ಚ್ ಅಂತ್ಯಭಾಗದಲ್ಲಿ ಮತ್ತು ನಂತರದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಲಾಕ್ಡೌನ್ ಮತ್ತಿತರ ಕ್ರಮಗಳನ್ನು ತೆಗೆದುಕೊಂಡಿದ್ದು ಗೊತ್ತೇ ಇದೆ. ಇನ್ನೊಂದೆಡೆ, ಜನರು ಕೂಡ ಮನೆಮದ್ದು, ಸಾಂಪ್ರದಾಯಿಕ ಅಡುಗೆ ಮುಂತಾದ ಕ್ರಮಗಳಿಗೆ ಮೊರೆಹೋದರು. ಹೈಫೈ ಲೈಫಿನ ಭರದಲ್ಲಿ, ಚೈನೀಸ್ ವಗೈರೆ ತಿನಿಸುಗಳ ಮೋಹದಲ್ಲಿ ಮರೆತೇಹೋದಂತಿದ್ದ ನಮ್ಮ ಪ್ರಾಚೀನ ಅಡುಗೆ ಜ್ಞಾನ ಮತ್ತೆ ಅನಾವರಣಗೊಂಡಿತು. ಆಯುರ್ವೆದ ಔಷಧಗಳಿಗೆ ಭರ್ಜರಿ ಬೇಡಿಕೆ ಬಂತು. ಆಯುಷ್ ಇಲಾಖೆ ಕ್ರಿಯಾಶೀಲವಾಯಿತು. ಇಷ್ಟೆಲ್ಲದರ ನಡುವೆ, ಧಾರ್ವಿುಕ, ಆಧ್ಯಾತ್ಮಿಕ ವಲಯ ಕೂಡ ಸುಮ್ಮನುಳಿಯಲಿಲ್ಲ. ಈ ರಂಗದ ಪ್ರಮುಖರು ಸನ್ನಿವೇಶವನ್ನು ಸೂಕ್ಷ್ಮವಾಗಿ ಅವಲೋಕಿಸಿ ತಮ್ಮದೇ ಆದ ರೀತಿಯಲ್ಲಿ ಪರಿಹಾರಾತ್ಮಕ ಕ್ರಮಗಳಿಗೆ ಮುಂದಾದರು. ಇದಕ್ಕೆ ಒಂದು ಉದಾಹರಣೆ ನೀಡುವುದಾದರೆ- ಸೋಂದಾ ಸ್ವರ್ಣವಲ್ಲೀ ಮಠ ತೆಗೆದುಕೊಂಡ ವೈವಿಧ್ಯಮಯ ಹೆಜ್ಜೆಗಳು. ಕರೊನಾ ಕಾಲಿಟ್ಟ ಆರಂಭಿಕ ಹಂತದಲ್ಲಿಯೇ ಪರಿಸ್ಥಿತಿಯನ್ನು ಗ್ರಹಿಸಿದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು, ತಕ್ಷಣವೇ ಕ್ರಮಕ್ಕೆ ಮುಂದಾದರು. ಮೊದಲಿಗೆ ಮಠದಲ್ಲಿಯೇ ನಿರಂತರವಾಗಿ 200 ದಿನ ಚಂಡಿಹವನ ನೆರವೇರಿತು. ಒಟ್ಟಾರೆಯಾಗಿ 700ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಚಂಡಿಹವನ ನೆರವೇರಿದ್ದು ವಿಶೇಷ. ನಂತರದಲ್ಲಿ ಹಳ್ಳಿಗಳಲ್ಲಿ ಮತ್ತು ಮನೆಗಳಲ್ಲಿ ಧನ್ವಂತರಿ ಹೋಮ, ಧನ್ವಂತರಿ ಸಹಸ್ರನಾಮಗಳನ್ನು ನಡೆಸಲು ನಿಶ್ಚಯಿಸಲಾಯಿತು. ಹೋಮಹವನದಿಂದ ಧಾರ್ವಿುಕ ಪ್ರಯೋಜನಗಳ ಜತೆಗೆ ವಾತಾವರಣದ ಮೇಲೆ ಹಾಗೂ ವ್ಯಕ್ತಿಯ ಮೇಲೂ ಸಕಾರಾತ್ಮಕ ಪರಿಣಾಮ ಆಗುತ್ತದೆ ಎಂಬುದು ಶ್ರದ್ಧಾಳುಗಳ ದೃಢ ವಿಶ್ವಾಸ. ಇನ್ನೊಂದೆಡೆ, ಸ್ವರ್ಣವಲ್ಲೀ ಮಠದ ಹವ್ಯಕ ಕಾರ್ಯಪಡೆ ನೇತೃತ್ವದಲ್ಲಿ ಹಳ್ಳಿಹಳ್ಳಿಗಳಲ್ಲಿ ಸುಮಾರು ಮೂರು ತಿಂಗಳ ಕಾಲ ಯೋಗ ಮತ್ತು ಪ್ರಾಣಾಯಾಮ ಶಿಬಿರಗಳನ್ನು ಹಮ್ಮಿಕೊಳ್ಳಲಾಯಿತು.
ಈ ಉಪಕ್ರಮ ಇಷ್ಟ್ಟ್ಕೇ ನಿಲ್ಲದೆ, ಎಲ್ಲ ಸಮುದಾಯದ ಜನರಿಗೂ ಯೋಗಲಾಭ ದೊರೆಯಬೇಕು ಎಂಬ ಉದ್ದೇಶದಿಂದ ಮಠದ ಗ್ರಾಮಾಭ್ಯುದಯ ಸಮಿತಿ ವತಿಯಿಂದ ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಯೋಗ ಶಿಬಿರಗಳು ನಡೆಯುತ್ತಿವೆ. ಇದಲ್ಲದೆ, ಕರೊನಾಗೆ ಮುನ್ನೆಚ್ಚರಿಕೆಯಾಗಿ ಮಠದ ವತಿಯಿಂದ ಆಯುರ್ವೆದ ಔಷಧಗಳನ್ನು ಕೂಡ ಲಾಭಾಪೇಕ್ಷೆಯಿಲ್ಲದೆ ದೊಡ್ಡ ಪ್ರಮಾಣದಲ್ಲಿ ವಿತರಿಸಲಾಯಿತು. ಈ ಹೆಜ್ಜೆಗಳಲ್ಲದೆ, ಸರ್ಕಾರದ ಕೋವಿಡ್ ಮಾರ್ಗಸೂಚಿ ಪ್ರಕಾರ, ಮಠಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಯಿತು. ಮಠವೊಂದು ಕರೊನಾ ಸನ್ನಿವೇಶವನ್ನು ಅಂದಾಜಿಸಿ ಕ್ಷಿಪ್ರವಾಗಿ ಈ ರೀತಿಯ ಕ್ರಮಗಳನ್ನು ಕೈಗೊಂಡಿದ್ದು ವಿಶೇಷವೇ ಸರಿ. ‘ನಾವು ಈ ಕ್ರಮಗಳ ಪರಿಣಾಮದ ಬಗ್ಗೆ ಈವರೆಗೆ ವೈಜ್ಞಾನಿಕ ವಿಶ್ಲೇಷಣೆ ನಡೆಸಿಲ್ಲವಾದರೂ, ಒಟ್ಟಾರೆಯಾಗಿ ಒಳ್ಳೆಯ ಫಲಿತಾಂಶ ಕಂಡುಬಂದಿದೆ’ ಎಂದು ಸ್ವರ್ಣವಲ್ಲೀ ಮಠದ ಹವ್ಯಕ ಕಾರ್ಯಪಡೆಯ ಪ್ರಧಾನ ಸಂಚಾಲಕ, ಹಿರಿಯ ಪತ್ರಕರ್ತ ಸಚ್ಚಿದಾನಂದ ಹೆಗಡೆ ಭತ್ತಗುತ್ತಿಗೆ ಅವರು ಹೇಳುತ್ತಾರೆ. ನಾಡಿನ ಬೇರೆ ಬೇರೆ ಮಠಗಳು ಸಹ ಕರೊನಾ ಮಾರ್ಗಸೂಚಿ ಪಾಲನೆ ಜತೆಗೆ ಹೋಮಹವನದಂತಹ ಕಾರ್ಯ ನಡೆಸಿದವು. ಅಗ್ನಿಹೋತ್ರ ಮಾಡುವ ಮೂಲಕ ಕರೊನಾ ದೂರಮಾಡಬಹುದು ಎಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಪ್ರತಿಪಾದಿಸುತ್ತಿದ್ದಾರೆ. ಅವರ ಸಲಹೆಯ ಮೇರೆಗೆ, ಮುಜರಾಯಿ ಇಲಾಖೆ ಮುಖಾಂತರ ರಾಜ್ಯದ ಮಠಮಂದಿರಗಳಲ್ಲಿ ಆಗ್ನಿಹೋತ್ರ ನಡೆಸುವ ಕುರಿತು ಸೂಚನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿರುವುದು ಕುತೂಹಲಕಾರಿ ಬೆಳವಣಿಗೆ. ಈ ಸಲಹೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಕಾರ್ಯರೂಪಕ್ಕಿಳಿಸಿದ್ದೇ ಆದಲ್ಲಿ ವಿಶಿಷ್ಟ ಪ್ರಯೋಗವೊಂದಕ್ಕೆ ರಾಜ್ಯ ಸಾಕ್ಷಿಯಾಗಬಹುದು.
ಧಾರ್ವಿುಕ, ಆಧ್ಯಾತ್ಮಿಕ ಕಾರ್ಯಗಳ ಜತೆಗೆ, ಜನರ ಮನೋದೈಹಿಕ ಪ್ರಯೋಜನಕ್ಕಾಗಿ ಯೋಗ-ಪ್ರಾಣಾಯಾಮ ಶಿಬಿರಗಳನ್ನು ನಡೆಸಿದ್ದು, ಕರೊನಾ ಮುನ್ನೆಚ್ಚರಿಕೆಯಾಗಿ ಔಷಧ ವಿತರಿಸಿದ್ದು, ಮತ್ತು ಕರೊನಾ ಮಾರ್ಗಸೂಚಿ ಪಾಲನೆ ಮಾಡಿದ್ದು - ಹೀಗೆ ಮಠವೊಂದು ಕರೊನಾ ವಿಚಾರದಲ್ಲಿ ಬಹು ಆಯಾಮದ ಕ್ರಮಗಳನ್ನು ಕೈಗೊಂಡಿದ್ದು ದಾಖಲಾರ್ಹ ಸಂಗತಿ.| ಸಚ್ಚಿದಾನಂದ ಹೆಗಡೆ ಭತ್ತಗುತ್ತಿಗೆ, ಸ್ವರ್ಣವಲ್ಲೀ ಮಠದ ಹವ್ಯಕ ಕಾರ್ಯಪಡೆಯ ಪ್ರಧಾನ ಸಂಚಾಲಕ
ಅಗ್ನಿಹೋತ್ರದಿಂದ ವಾತಾವರಣದ ಮೇಲೆ ಆಗುವ ಪರಿಣಾಮದ ಬಗ್ಗೆ ಅನೇಕ ಅಧ್ಯಯನಗಳು ನಡೆದಿದ್ದು, ಕೃಷಿಯಲ್ಲಿ ಕೂಡ ಇದರ ಉಪಯೋಗ ಆಗುತ್ತಿರುವುದು ಗಮನಿಸಬೇಕಾದ ಸಂಗತಿ. ಭೋಪಾಲದಲ್ಲಿ ಯೂನಿಯನ್ ಕಾರ್ಬೆಡ್ ಕಾರ್ಖಾನೆಯಿಂದಾದ ವಿಷಾನಿಲ ಸೋರಿಕೆ ಸಂದರ್ಭದಲ್ಲಿ, ಸಾವಿರಾರು ಜನರು ಸಾವನ್ನಪ್ಪಿದ್ದರು. ಆದರೆ ಅಲ್ಲೆ ಹತ್ತಿರದ ಒಂದು ಕುಟುಂಬ ಮಾತ್ರ ಬಚಾವಾಗಿತ್ತು. ಇದು ಹೇಗಾಯಿತೆಂದು ಪರಿಶಿಲಿಸಿದಾಗ, ಆ ಕುಟುಂಬದವರು ಅಗ್ನಿಹೋತ್ರ ಮಾಡುತ್ತಿದ್ದ ಸಂಗತಿ ತಿಳಿದುಬಂದಿತ್ತು.
ಖ್ಯಾತ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ ಅವರ ‘ತುಳಸಿ’ ಕಾದಂಬರಿಯಲ್ಲಿ, ವಾಮಾಚಾರಕ್ಕೆ ಒಳಗಾದ ಬಾಲಕಿಯೊಬ್ಬಳನ್ನು ರಕ್ಷಿಸಲೋಸುಗ ಮಂತ್ರವಾದಿ ಮತ್ತು ವಿಜ್ಞಾನಿ ಇಬ್ಬರೂ ತಮ್ಮದೇ ಆದ ಸಿದ್ಧಾಂತ ಮತ್ತು ಕಾರ್ಯಗಳ ಮೂಲಕ ಯತ್ನಿಸುವ ಚಿತ್ರಣವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದರು. ಇಬ್ಬರ ಉದ್ದೇಶವೂ ಒಂದೇ- ಆ ಅಮಾಯಕ ಮಗುವನ್ನು ಕಾಪಾಡುವುದು. ಆದರೆ ಇಬ್ಬರೂ ಅನುಸರಿಸಿದ ಹಾದಿ ಮಾತ್ರ ಭಿನ್ನ. ಈ ನಡುವೆ ಇಬ್ಬರ ನಡುವೆ ವಾಗ್ವಾದ, ತರ್ಕ ನಡೆದರೂ ಗುರಿಯಿಂದ ವಿಮುಖರಾಗಲಿಲ್ಲ.
ಈಗ ಇಡೀ ಜಗತ್ತು ಕರೊನಾ ಕಪಿಮುಷ್ಟಿಯಲ್ಲಿ ಸಿಲುಕಿದೆ. ಆದಷ್ಟು ಬೇಗ ಇದರಿಂದ ಹೊರಬರದಿದ್ದರೆ ಮನುಕುಲಕ್ಕೆ ಮತ್ತಷ್ಟು ತೊಂದರೆ ಪಕ್ಕಾ. ಈಗ ಆದ ಹಾನಿ ತುಂಬಲಿಕ್ಕೇ ಇನ್ನು ಎಷ್ಟು ವರ್ಷ ಬೇಕೋ! ಪರಿಹಾರದ ನಿಟ್ಟಿನಲ್ಲಿ ಅವರವರ ಪ್ರಯತ್ನವನ್ನು ಅವರವರು ಮುಂದುವರಿಸಲಿ. ಯಾರನ್ನೂ ಯಾವುದನ್ನೂ ಹೀಗಳೆಯದೆ, ಕಾರ್ಯಸಾಧುವಾದ, ಕಾರ್ಯಸಾಧ್ಯವಾದ ಎಲ್ಲವನ್ನೂ ಗೌರವಿಸುತ್ತ, ಒಪು್ಪತ್ತ ಸಾಗುವ ಸಾಮೂಹಿಕ ಹೊಣೆಗಾರಿಕೆ ಇಂದಿನ ತರ್ತ. ಹಾದಿ ಬೇರೆಬೇರೆಯಾದರೂ ಗುರಿ ಒಂದೇ.. ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದಂತೆ- ‘ಎಷ್ಟು ಮತಗಳೋ ಅಷ್ಟು ಪಥಗಳು.’ ಆದರೆ ಎಲ್ಲರ ಉದ್ದೇಶವೂ ಒಂದೇ- ಅದುವೇ ದೈವಸಾನ್ನಿಧ್ಯ.
ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು
ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ
ಜಸವು ಜನಜೀವನಕೆ- ಮಂಕುತಿಮ್ಮ
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)