ಸ್ವೇಚ್ಛಾಚಾರದ ತಾಂಡವಕ್ಕೆ ಬೇಕಿದೆ ಬ್ರೇಕ್| ರಾಘವೇಂದ್ರ ಎಸ್. ಶ್ರೀವತ್ಸ ಅವರ ಅಂಕಣ

aa
Published on
‘ಆಚಾರವಿಲ್ಲದ ನಾಲಿಗೆ ನಿನ್ನ ನೀಚಬುದ್ಧಿಯ ಬಿಡು ನಾಲಿಗೆ’ ಎಂಬ ಪುರಂದರದಾಸರ ಎಚ್ಚರಿಕೆಯ ನುಡಿ ಇಂದಿಗೂ ಪ್ರತಿಧ್ವನಿಸುತ್ತಿದೆ. ಮುನಾವರ್ ಫರೂಕಿ ಎಂಬಾತ ಕಾಮಿಡಿ ಶೋ ಮಾಡುವ ಸೋಗಿನಲ್ಲಿ ಹಿಂದೂ ದೇವ-ದೇವತೆಗಳ ಬಗ್ಗೆ ತುಚ್ಛವಾಗಿ ಮಾತನಾಡಿ ಬಂಧಿಸಲ್ಪಟ್ಟಿದ್ದ. ಆತನಿಗೆ ಸುಪ್ರೀಂ ಕೋರ್ಟಿನಿಂದ ಜಾಮೀನು ಸಿಕ್ಕಿದೆ. ಮೊದಲು ಜಾಮೀನು ಕೋರಿ ಸಲ್ಲಿಸಿದ್ದ ಆತನ ಅರ್ಜಿಯನ್ನು ತಿರಸ್ಕರಿಸಿದ್ದ ಮಧ್ಯಪ್ರದೇಶ ಹೈಕೋರ್ಟ್ ಕಿವಿಮಾತೊಂದನ್ನು ಹೇಳಿದೆ. ನಮ್ಮ ಸಂವಿಧಾನದ ಪರಿಚ್ಛೇದ 51(e) ಮತ್ತು (f) ಪ್ರಸ್ತಾಪ ಮಾಡುತ್ತ, ‘ಎಲ್ಲ ಧರ್ಮಗಳಲ್ಲೂ ಸಾಮರಸ್ಯವನ್ನು ಸಾರಿ ಭ್ರಾತೃತ್ವ ಪಸರಿಸುತ್ತ ನಮ್ಮ ಘನ ಪರಂಪರೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಮೂಲಭೂತ ಕರ್ತವ್ಯ’ ಎಂಬುದನ್ನು ನೆನಪಿಸಿಕೊಟ್ಟಿದೆ. ಅನ್ವರ್ಥವೇನೋ ಎಂಬಂತೆ ಅಮೆಜಾನ್ ಪ್ರೖೆಮ್ಲ್ಲಿ ಬಿಡುಗಡೆಗೊಂಡ ‘ತಾಂಡವ್’ ಧಾರವಾಹಿಯನ್ನು ವಿರೋಧಿಸಿ ನೆಟ್ಟಿಗರಲ್ಲಿ ಆಕ್ರೋಶ ತಾಂಡವವಾಡುತ್ತಿದೆ. ಈ ಧಾರಾವಾಹಿಯ ನಿರ್ವಪಕ, ನಿರ್ದೇಶಕ ಮತ್ತು ನಟರು ತಮ್ಮ ವಿರುದ್ಧ ಬೇರೆ ಬೇರೆ ರಾಜ್ಯಗಳಲ್ಲಿ ದಾಖಲಾಗಿರುವ ಎಫ್​ಐಆರ್​ಗಳಲ್ಲಿ ತಮ್ಮನ್ನು ಬಂಧಿಸಬಾರದೆಂದು ಕೋರಿ ಸುಪ್ರೀಂ ಕೋರ್ಟಿನ ಮೊರೆಹೋಗಿದ್ದರು. ಆ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ‘ನಿಮ್ಮ ವಾಕ್ ಸ್ವಾತಂತ್ರ್ಯ ಅಪರಿಮಿತವಲ್ಲ’ ಹಾಗೂ ‘ಚಿತ್ರಕಥೆಯನ್ನು ಓದಿ ಅರ್ಥೈಸಿಕೊಂಡೇ ನಟನೆಗೆ ಒಪ್ಪಿಕೊಂಡಿದ್ದೀರಿ, ಇತರರ ಧಾರ್ವಿುಕ ಭಾವನೆಗಳಿಗೆ ನೀವು ಹಾನಿಮಾಡುವುದು ಸಲ್ಲ’ ಎಂದು ಅಭಿಪ್ರಾಯಪಟ್ಟಿರುವುದಾಗಿ ವರದಿಯಾಗಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂಟರ್ನೆಟ್ ಮೂಲಕ ಸುಲಭವಾಗಿ ಲಭ್ಯವಾಗುವ ಓವರ್ ದಿ ಟಾಪ್ (OTT) ಮಾಧ್ಯಮಗಳ ನಿಯಂತ್ರಣದ ಹಾಗೂ ಕಾನೂನಿನ ಚೌಕಟ್ಟಿನ ಅವಲೋಕನ ಸಮಂಜಸವಷ್ಟೇ.

ಅಮೆಜಾನ್ ಪ್ರೈಮ್ ನೆಟ್​ಫ್ಲಿಕ್ಸ್, ಡಿಸ್ನಿ ಹಾಟ್​ಸ್ಟಾರ್ ಅಂತಹ ಇಂಟರ್ನೆಟ್ ಆಧಾರಿತ ಮಾಧ್ಯಮಗಳು ಒಟಿಟಿ ಮಾಧ್ಯಮಗಳೆಂದು ಕರೆಸಿಕೊಡಲ್ಪಡುತ್ತವೆ. ದೃಶ್ಯಮಾಧ್ಯಮಗಳನ್ನು ಚಲನಚಿತ್ರ (ಸಿನಿಮಾ), ಟೆಲಿವಿಷನ್ (ಕೇಬಲ್ ಟಿವಿ ಅಥವಾ ಕಿರುತೆರೆ) ಹಾಗೂ ಇಂಟರ್ನೆಟ್ ಆಧಾರಿತ ಮಾಧ್ಯಮಗಳೆಂದು ಗುರುತಿಸಬಹುದಾಗಿದೆ. ಚಲನಚಿತ್ರಗಳ ನಿಯಂತ್ರಣಕ್ಕೆ ಅದಕ್ಕೇ ಸಂಬಂಧಿಸಿದ ಸಿನಿಮಾಟೋಗ್ರಾಫ್ ಕಾಯ್ದೆ ಇದೆ. ಅದರಡಿ ಯಾವುದೇ ಚಿತ್ರ ಸಾರ್ವಜನಿಕವಾಗಿ ಪ್ರದರ್ಶನ ಮಾಡುವ ಮೊದಲೇ ಸೆನ್ಸಾರ್ ಮಾಡುವ ವ್ಯವಸ್ಥೆಯಿದೆ. Central Board of Film Certification (CBFC)

ಮಂಡಳಿ ಚಿತ್ರವನ್ನು ವೀಕ್ಷಿಸಿ ಆಕ್ಷೇಪಾರ್ಹ ವಿಷಯಗಳಿದ್ದಲ್ಲಿ ಬದಲಾವಣೆಗಳನ್ನು ಸೂಚಿಸಬಹುದು ಹಾಗೂ ಚಿತ್ರಗಳಿಗೆ "U', "A', "UA' ಹಾಗೂ "S' ಎಂಬ ಸರ್ಟಿಫಿಕೇಟ್​ಗಳನ್ನು ನೀಡುವ ವ್ಯವಸ್ಥೆ ಇದೆ. ಒಂದು ಚಿತ್ರ ಯಾವ ವಯಸ್ಸಿನವರಿಗೆ ಅಥವಾ ಯಾವುದೇ ಒಂದು ನಿರ್ದಿಷ್ಟ ವರ್ಗದವರಿಗೆ ಮಾತ್ರ ಸೂಕ್ತ ಎನ್ನುವ ಆಧಾರದ ಮೇಲೆ ಹೀಗೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಟೆಲಿವಿಷನ್ ಮೂಲಕ ಬಿತ್ತರವಾಗುವ ಕಾರ್ಯಕ್ರಮಗಳು ಕೇಬಲ್ ಟಿವಿ ನಿಯಂತ್ರಣ ಕಾಯ್ದೆಯ ಚೌಕಟ್ಟಿಗೆ ಒಳಪಡುತ್ತವೆ. Programme Code ಮತ್ತು Advertising Code ಎಂಬ ಸಂಹಿತೆಗಳಿಗನುಸಾರ ಕಾರ್ಯಕ್ರಮಗಳು ಬಿತ್ತರಿಸಲ್ಪಡುತ್ತವೆ. ಚಲನಚಿತ್ರ ಹಾಗೂ ಟಿವಿಗಳ ವಿಷಯ ಹೀಗಾದರೆ ಇಂಟರ್ನೆಟ್ ಮೂಲಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಒಟಿಟಿ ಮಾಧ್ಯಮಗಳು ಯಾವುದೇ ನಿರ್ದಿಷ್ಟ ಕಾನೂನಿನ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ಸಾರ್ವತ್ರಿಕವಾಗಿ ಅನ್ವಯವಾಗುವ ಭಾರತೀಯ ದಂಡಸಂಹಿತೆ ಹಾಗೂ ಮಾಹಿತಿ-ತಂತ್ರಜ್ಞಾನ ಕಾಯ್ದೆಗಳನ್ನು ಹೊರತುಪಡಿಸಿ ಸದ್ಯಕ್ಕೆ ಯಾವುದೇ ಕಾನೂನು ಈ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ. ಮಾಹಿತಿ-ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69-A ಪ್ರಕಾರ ಕಂಪ್ಯೂಟರ್​ಗಳ ಮೂಲಕ ಪಸರಿಸುವ ಮಾಹಿತಿಯನ್ನು ದೇಶದ ಸುರಕ್ಷತೆ, ಸಾಮಾಜಿಕ ವ್ಯವಸ್ಥೆ ಕಾಪಾಡುವಂತಹ ತೀವ್ರ ಪರಿಸ್ಥಿತಿಗಳಲ್ಲಿ ಮಾತ್ರ ತಡೆಯುವ ಅಧಿಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ದತ್ತವಾಗಿರುತ್ತದೆ. ಅನ್ಯಥಾ ಆಕ್ಷೇಪಣೀಯ ಕಾರ್ಯಕ್ರಮಗಳನ್ನು ಬಿತ್ತರಿಸಿದ್ದಕ್ಕಾಗಿ ಕಾನೂನಾತ್ಮಕವಾಗಿ ಶಿಕ್ಷೆಗೆ ಅವಕಾಶವಿದೆಯೇ ಹೊರತು ಸಾರ್ವಜನಿಕವಾಗಿ ಬಿತ್ತರವಾಗುವ ಮುನ್ನ ಕಾರ್ಯಕ್ರಮಗಳ ನಿಯಂತ್ರಣಕ್ಕೆ ಅವಕಾಶವಿಲ್ಲ.

ಚಲನಚಿತ್ರಗಳಿಗೆ ಈ ರೀತಿಯ ನಿಯಂತ್ರಣ ಇದ್ದಾಗ್ಯೂ ಸುಲಭವಾಗಿ ಇಂಟರ್ನೆಟ್ ಮೂಲಕ ಸಕಲರನ್ನೂ ತಲುಪುವ ಒಟಿಟಿ ಮಾಧ್ಯಮಗಳಿಗೆ ಈ ರೀತಿಯ ಸೆನ್ಸಾರ್ಷಿಪ್ ಇಲ್ಲದಿರುವುದರ ಪರಿಣಾಮವನ್ನು ಇತ್ತೀಚಿನ ಬೆಳವಣಿಗೆಗಳಲ್ಲಿ ನಾವು ಕಾಣಬಹುದು. ಸೆನ್ಸಾರ್ಷಿಪ್ ಮಾನ್ಯವೇ ಹಾಗೂ ಅಗತ್ಯವೇ ಎನ್ನುವ ಬಗ್ಗೆ ನಮ್ಮ ನ್ಯಾಯಾಂಗದ ನಿಲುವು ಸ್ವಾರಸ್ಯಕರ. 1970ರಲ್ಲಿ ಇತ್ಯರ್ಥವಾದ ಕೆ.ಎ.ಅಬ್ಬಾಸ್ ಎನ್ನುವ ಬರಹಗಾರ-ನಿರ್ವಪಕರ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠ ಈ ಪ್ರಶ್ನೆಯನ್ನು ಪರಿಗಣಿಸಿದೆ. "A Tale of Four Cities' ಎಂಬ ಸಾಕ್ಷ್ಯಚಿತ್ರವೊಂದನ್ನು ರೂಪಿಸಿದ ಅಬ್ಬಾಸ್ ಅವರು ಚಿತ್ರಗಳ ಸೆನ್ಸಾರ್ಷಿಪ್ ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಗಳಿಗೆ ಧಕ್ಕೆ ತರುವುದರಿಂದ ಸಾಂವಿಧಾನಿಕವಾಗಿ ಅಸಿಂಧು ಎಂದು ವಾದಿಸಿದ್ದರು. ಆ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ ದೃಶ್ಯಮಾಧ್ಯಮಗಳಲ್ಲಿ ಮುಖ್ಯವಾದ ಚಲನಚಿತ್ರಗಳು ಯಾವುದೇ ಒಂದು ಪುಸ್ತಕ ಅಥವಾ ಚಿತ್ರಕಲೆಗೆ ಹೋಲಿಸಿದರೆ ಜನಸಾಮಾನ್ಯರ ಮೇಲೆ ಅತಿಹೆಚ್ಚು ಪ್ರಭಾವ ಬೀರುತ್ತವೆ, ಹಾಗಾಗಿ ಅವುಗಳ ನಿಯಂತ್ರಣ ಅತ್ಯವಶ್ಯ ಮತ್ತು ಸೆನ್ಸಾರ್​ಷಿಪ್ ಪ್ರಜೆಗಳ ಸ್ವಾತಂತ್ರ್ಯಕ್ಕೆ ವ್ಯತಿರಿಕ್ತವಾದುದಲ್ಲ ಎಂದು ತೀರ್ಪಿತ್ತಿದೆ. ಚಲನಚಿತ್ರಗಳ ಸೆನ್ಸಾರ್ಷಿಪ್ ಅತ್ಯವಶ್ಯವೆಂದು ನಿರ್ಧರಿಸಿದ್ದಾಗ್ಯೂ ಅವುಗಳ ಪ್ರದರ್ಶನವನ್ನು ಅತಿಯಾಗಿ ನಿರ್ಬಂಧಿಸುವ ರಾಜ್ಯಸರ್ಕಾರಗಳ ಪ್ರಯತ್ನವನ್ನು ನ್ಯಾಯಾಲಯ ತಳ್ಳಿಹಾಕಿದೆ. ‘ಪದ್ಮಾವತ್’ ಹಾಗೂ ‘ಆರಕ್ಷಣ್’ ಚಿತ್ರಗಳ ಪ್ರದರ್ಶನವನ್ನು ರಾಜ್ಯಸರ್ಕಾರಗಳು ನಿಷೇಧಿಸಿದ ಸಂದರ್ಭದಲ್ಲಿ CBFC ಮಂಡಳಿ ಸರ್ಟಿಫಿಕೇಟ್ ಕೊಟ್ಟ ನಂತರವೂ ಚಿತ್ರಗಳ ಪ್ರದರ್ಶನಕ್ಕೆ ನಿಷೇಧ ಹೇರುವುದು ಅಮಾನ್ಯವೆಂದು ಅಭಿಪ್ರಾಯಪಟ್ಟಿದೆ. ಅರ್ಥಾತ್ ಸಾರ್ವಜನಿಕ ಪ್ರದರ್ಶನಕ್ಕೆ ಮುನ್ನವೇ ಚಿತ್ರಗಳನ್ನು ಸೆನ್ಸಾರ್ ಮಾಡುವ ಅವಶ್ಯಕತೆಗೆ ಒತ್ತುಕೊಟ್ಟಂತಾಗಿದೆ.

ಚಿತ್ರಮಂದಿರಗಳಲ್ಲಿ ಅಥವಾ ಟಿವಿ ಮೂಲಕ ಪ್ರಸಾರಗೊಳ್ಳುವ ಚಿತ್ರಗಳೇ ಸಮಾಜದ ಮೇಲೆ ಪ್ರಭಾವ ಬೀರಬಹುದಾದರೆ ಅತಿ ಸುಲಭವಾಗಿ ಇಂಟರ್ನೆಟ್ ಮೂಲಕ ಕ್ಷಣಮಾತ್ರದಲ್ಲಿ ವಿಶ್ವದಾದ್ಯಂತ ಪಸರಿಸಿ ಜನಸಾಮಾನ್ಯರ ಮನಸೂರೆಗೊಳ್ಳುವ ಒಟಿಟಿ ಕಾರ್ಯಕ್ರಮಗಳ ಪ್ರಭಾವ ಬಣ್ಣಿಸಲಸದಳ. ಇಂತಹ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ಮೊಬೈಲ್ ಫೋನ್ ಮತ್ತಿತರ ಇಂಟರ್ನೆಟ್ ಸೌಲಭ್ಯವುಳ್ಳ ಯಾವುದೇ ಉಪಕರಣಗಳ ಮೂಲಕ ಲಭ್ಯವಾಗಿಬಿಡುತ್ತವೆ. ನಗರ, ಪಟ್ಟಣಗಳಷ್ಟೇ ಅಲ್ಲ ಗ್ರಾಮಾಂತರ ಪ್ರದೇಶಗಳಲ್ಲೂ ಈ ಕಾರ್ಯಕ್ರಮಗಳು ವಯಸ್ಕರು ಮಕ್ಕಳಾದಿಯಾಗಿ ಎಲ್ಲರಿಗೂ ಕೈಗೆಟಕುತ್ತವೆ. ಒಟಿಟಿ ಮಾಧ್ಯಮಗಳಲ್ಲಿನ ಎಲ್ಲ ಕಾರ್ಯಕ್ರಮಗಳನ್ನು ಎಲ್ಲರೂ ವೀಕ್ಷಿಸಬಹುದಾಗಿರುವುದು ದಿಟವಷ್ಟೇ. ಹೆಚ್ಚು ಶ್ರಮ ಹಾಗೂ ಹಣಗಳ ಖರ್ಚಿಲ್ಲದೆ ಈ ಕಾರ್ಯಕ್ರಮಗಳು ಎಲ್ಲರಿಗೂ ಮುಟ್ಟುತ್ತಿವೆ. ಮೊಬೈಲ್ ಕರೆನ್ಸಿ ರೀಚಾರ್ಜ್ ಮಾಡಿದರೂ ಅದರೊಟ್ಟಿಗೆ ಪುಕ್ಕಟೆಯಾಗಿ ಒಟಿಟಿ ಮಾಧ್ಯಮಗಳು ಸುಲಭಗಮ್ಯವಾಗುತ್ತವೆ. ಕರೊನಾ ಲಾಕ್​ಡೌನ್ ಕಾಲದಲ್ಲಂತೂ ಮೊಬೈಲ್ ಕಂಪನಿಗಳಿಗೆ ಹಾಗೂ ಒಟಿಟಿ ಮಾಧ್ಯಮಗಳಿಗೆ ಸುಗ್ಗಿಯಾಗಿತ್ತು. ಹೀಗಿರುವಾಗ ಇಷ್ಟೊಂದು ಪ್ರಭಾವಶಾಲಿಯಾದ ದೃಶ್ಯಮಾಧ್ಯಮದ ನಿಯಂತ್ರಣ ಇಲ್ಲದಿರುವುದು ವಿಪರ್ಯಾಸವಲ್ಲವೇ? ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯೂ ಈ ನಿಟ್ಟಿನಲ್ಲಿ ವಿಚಾರ ಮಾಡುತ್ತಿರುವುದಾಗಿ ವರದಿಯಾಗಿದೆ.

ಒಟಿಟಿ ಮಾಧ್ಯಮಗಳವರು ತಾವೇ ಮುಂದಾಗಿ ಸ್ವನಿಯಂತ್ರಣಕ್ಕೆ ಸಂಹಿತೆಯೊಂದನ್ನು ರೂಪಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಕೆಲವು ಕಾರ್ಯಕ್ರಮಗಳು ಕೆಲವೊಂದು ವಯೋಮಿತಿಯವರಿಗೆ ಸೂಕ್ತವಲ್ಲ ಎಂದು ಪ್ರಕಟಿಸುವುದನ್ನು ಹೊರತುಪಡಿಸಿ ಅಂತಹ ಕಾರ್ಯಕ್ರಮಗಳು ಅಪ್ರಾಪ್ತ ವಯಸ್ಸಿನವರು ವೀಕ್ಷಿಸದಂತೆ ತಡೆಯುವುದು ಅಸಾಧ್ಯವೇ ಸರಿ.

ಚಲನಚಿತ್ರ ಅಥವಾ ಟಿವಿಗಳಿಗೆ ಇಂತಹ ನಿರ್ಬಂಧವನ್ನು ಜಾರಿಗೊಳಿಸುವುದು ಸುಲಭಸಾಧ್ಯ. ಉದಾಹರಣೆಗೆ "A'' ಸರ್ಟಿಫಿಕೇಟ್ ಇರುವ ಚಿತ್ರದ ಪ್ರದರ್ಶನಕ್ಕೆ ಅಪ್ರಾಪ್ತರ ಪ್ರವೇಶವನ್ನು ತಡೆಯಬಹುದು. ಅಂತೆಯೇ ಮಕ್ಕಳಿಗೆ ಸೂಕ್ತವೆನಿಸದ ಕೆಲವು ಕಾರ್ಯಕ್ರಮಗಳನ್ನು ದೂರದರ್ಶನದಲ್ಲಿ ತಡರಾತ್ರಿಯಲ್ಲಿ ಪ್ರಸಾರ ಮಾಡುತ್ತಿದುದು ನಮ್ಮೆಲ್ಲರ ಅನುಭವಕ್ಕೆ ಬಂದಿದೆ. ಒಟಿಟಿ ಮಾಧ್ಯಮದವರ ಸ್ವಯಂಪ್ರೇರಿತ ನಿಯಂತ್ರಣ ಎಂಬುದು ಮಾಯಾಜಿಂಕೆ ಎನ್ನುವುದು ನಮ್ಮ ಕರ್ನಾಟಕ ಹೈಕೋರ್ಟಿನ ಗಮನಕ್ಕೂ ಬಂದಿದೆ. ಪದ್ಮನಾಭ್ ಶಂಕರ್ ಎಂಬ ಹಿರಿಯ ನಾಗರಿಕರೊಬ್ಬರು ಒಟಿಟಿ ಮಾಧ್ಯಮಗಳ ನಿಯಂತ್ರಣದ ಅವಶ್ಯಕತೆಯನ್ನು ಆಧರಿಸಿ ಸಿನಿಮಾಟೋಗ್ರಾಫ್ ಕಾಯ್ದೆಯನ್ನು ಈ ಮಾಧ್ಯಮಕ್ಕೂ ಅನ್ವಯಗೊಳಿಸಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯನ್ನು ವಿರೋಧಿಸಿದ ಒಟಿಟಿ ಮಾಧ್ಯಮಗಳವರು ತಮ್ಮ ಸ್ವಯಂಪ್ರೇರಿತ ನಿಯಂತ್ರಣಾ ಸಂಹಿತೆ ಇರುವುದೆಂದೂ ಮಾಹಿತಿ-ತಂತ್ರಜ್ಞಾನ ಕಾಯ್ದೆಯಡಿ ನಿಯಂತ್ರಣಕ್ಕೆ ಅವಕಾಶವಿರುವುದೆಂದೂ ವಾದಿಸಿದ್ದರು. ಸ್ವಯಂಪ್ರೇರಿತ ನಿಯಂತ್ರಣಾ ಸಂಹಿತೆ ಪ್ರಜೆಗಳಿಗೆ ಯಾವುದೇ ಹಕ್ಕನ್ನೂ ಕೊಡುವುದಿಲ್ಲವಾದ್ದರಿಂದ ಈ ನಿಟ್ಟಿನಲ್ಲಿ ಪರಿಣಾಮಕಾರಿಯಲ್ಲವೆಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಸಿನಿಮಾಟೋಗ್ರಾಫ್ ಕಾಯ್ದೆಯನ್ನು ಒಟಿಟಿ ಮಾಧ್ಯಮಗಳಿಗೆ ಅನ್ವಯಗೊಳಿಸಲು ಸಾಧ್ಯವಿಲ್ಲವೆಂದು ತಿಳಿಸಿ ಮಾಹಿತಿ-ತಂತ್ರಜ್ಞಾನ ಕಾಯ್ದೆಯಲ್ಲಿನ ವ್ಯವಸ್ಥೆಯ ದೃಷ್ಟಿಯಿಂದ ಅರ್ಜಿಯನ್ನು ಸ್ವೀಕರಿಸದೇ ಇದ್ದರೂ ಅರ್ಜಿದಾರರು ಅತಿಮುಖ್ಯವಾದ ವಿಷಯವನ್ನು ಪ್ರಸ್ತಾಪಿಸಿದ್ದಾರೆಂದೂ ಕೇಂದ್ರ ಸರ್ಕಾರ ಆ ಮುಖ್ಯ ಕಾಳಜಿಯ ಬಗ್ಗೆ ಕ್ರಮ ಕೈಗೊಳ್ಳುತ್ತದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದೆ. ಇದರಂತೆಯೇ Justice for Rights Foundation ಎನ್ನುವ ಸಂಸ್ಥೆ ಒಟಿಟಿ ಮಾಧ್ಯಮಗಳ ನಿಯಂತ್ರಣದ ಬಗ್ಗೆ ಸರ್ಕಾರಕ್ಕೆ ನಿರ್ದೇಶನ ಕೋರಿ ದೆಹಲಿ ಹೈಕೋರ್ಟಿನ ಮೊರೆಹೋಗಿದ್ದರು. ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಈಗ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಇಷ್ಟೆಲ್ಲದರ ಸಾರಾಂಶವೇನೆಂದರೆ ಪ್ರಭಾವಶಾಲಿಯಾದ ಇಂಟರ್ನೆಟ್ ಆಧಾರಿತ ಒಟಿಟಿ ಮಾಧ್ಯಮಗಳ ನಿಯಂತ್ರಣಕ್ಕೆ ಬಲವಾದ ಕಾನೂನು ವ್ಯವಸ್ಥೆಯ ತುರ್ತು ಅವಶ್ಯಕತೆಯಿದೆ. ಪ್ರಸಾರವಾಗುವ ಮುನ್ನವೇ ಕಾರ್ಯಕ್ರಮಗಳನ್ನು ಸೆನ್ಸಾರ್ ಮಾಡುವುದೂ ಅವಶ್ಯವೆನಿಸುವುದು ಇತ್ತೀಚಿನ ಅನುಭವವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸೃಜನಶೀಲತೆಯ ಸೋಗಿನಲ್ಲಿ ಧಾರ್ವಿುಕ ಭಾವನೆಗಳಿಗೆ ಚ್ಯುತಿ ತರುವುದು, ಯಾವೊಬ್ಬ ವ್ಯಕ್ತಿ ಅಥವಾ ಪ್ರದೇಶವನ್ನು ತುಚ್ಛವಾಗಿ ಬಿಂಬಿಸುವುದು ಅಕ್ಷಮ್ಯ. ತಾಂಡವ್ ಹಾಗೂ ಮಿರ್ಜಾಪುರ್ ಅಂತಹ ವೆಬ್ ಧಾರಾವಾಹಿಗಳು ಜನರ ಭಾವನೆಗಳನ್ನು ಕೆರಳಿಸಿರುವ ವಿವಾದಗಳು ನ್ಯಾಯಾಲಯದ ಅಂಗಳದಲ್ಲಿವೆ. ಸರ್ವಾಂತರಯಾಮಿಯಾದ ಇಂಟರ್ನೆಟ್ ಯುಗದಲ್ಲಿಯೂ ಸಾಮರಸ್ಯದೊಂದಿಗೆ ಶಾಂತಿಯುತ ಸಹಬಾಳ್ವೆ ನಡೆಸುವುದು ಸಂವಿಧಾನದ ಕಟ್ಟಪ್ಪಣೆ. ಈ ನಿಟ್ಟಿನಲ್ಲಿ ‘ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ’ ಎಂಬ ಬಸವಣ್ಣನವರ ವಚನ ನಮಗೆ ದಾರಿದೀಪವಾಗಲಿ.

(ಲೇಖಕರು ಸುಪ್ರೀಂ ಕೋರ್ಟ್ ಹಿರಿಯ ವಕೀಲರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net