ರಾಜಧರ್ಮ, ರಾಜನೀತಿ; ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಎಂದರೇನು?

PROTEST
Published on
ಮದ್ಯನಿಷೇಧ, ಗೋಹತ್ಯಾ ನಿಷೇಧಕ್ಕೆ ಕರೆಕೊಟ್ಟ ಗಾಂಧಿ ಯಾರು? ಇಸ್ಲಾಮಿಯರ ತಂತ್ರಗಾರಿಕೆ ತಿಳಿಯದೆ ಆಲಿ ಸಹೋದರರ ವಂಚನೆಗೆ ಮರುಳಾದ ಗಾಂಧಿ ಯಾರು? ಪಾಕ್ ನಿರ್ವಣಕ್ಕೆ, ಅದರ ಹಿಂಸಾವಿಹಾರಿಗಳ ಇಂದಿನವರೆಗಿನ ಭಾರತಕ್ಕೂ ಮೂಲಕಾರಣರಾದ ಗಾಂಧಿ ಯಾರಯ್ಯ?

ಬ್ರಿಟಿಷ್ ಆಳಿಕೆಯ ದುಷ್ಕಾಲದಲ್ಲಿ ಹುಟ್ಟಿದವನು ನಾನು. ನನ್ನ ಹದಿನಾಲ್ಕನೇ ವರ್ಷದ ವಯಸ್ಸಿನಲ್ಲಿ ಸ್ವಾತಂತ್ರ್ಯ ಬಂತು. ನನ್ನ ಏಳನೇ ವರ್ಷದ ಕಾಲದಲ್ಲಿ ನಮ್ಮೂರಿನಲ್ಲಿ ಹಿಂದೂ ಮಹಾಸಭಾ ಚಟುವಟಿಕೆ ಜೋರಾಗಿತ್ತು. ಚಳವಳಿಗಾರರ ಹಿಂದೆ ನಾನೂ ಊರು ಸುತ್ತುತ್ತಿದ್ದೆ. ಇನ್ನೊಂದೆಡೆ ಬೇರೆ ‘ಗಾಂಧಿ ಕಿ ಜೈ, ‘ವಂದೇಮಾತರಂ’ ಕೂಗು ಜೋರಾಗುತ್ತಿತ್ತು. ಅಲ್ಲೂ ಸುತ್ತುತ್ತಿದ್ದೆ. ‘ಬ್ರಿಟಿಷರು ಈ ದೇಶದಿಂದ ತೊಲಗುವಂತಾದರೆ ಸಾಕು’ ಎಂದಷ್ಟು ಮಾತ್ರ ನನ್ನ ವಾರಿಗೆಯವರಿಗೆ ಆಗ ತಿಳಿದಿದ್ದು ಸತ್ಯ. ಸ್ವಾತಂತ್ರ್ಯ ಬಂದ ಮೇಲೆ ಏನಾಗುತ್ತದೆ? ಯಾರು ಆಳುತ್ತಾರೆ? ಎಂಥ ಆಳ್ವಿಕೆ? ಅಲ್ಲಿ ಯಾರಿಗೆ ಸುಖ? ಶಾಂತಿ?- ಇವು ಯಾವುದೂ ಆಗ ಗೊತ್ತಿರಲಿಲ್ಲ.

ಊರಾಚೆ ಒಂದು ಮಸೀದಿ ತಲೆ ಎತ್ತಿದ್ದು, ಅದು ಕಾಳಿಕಾ ದೇವಿಯ ಗುಡಿಯಿದ್ದ ಜಾಗವಾಗಿದ್ದು, ಅದನ್ನು ವಾಪಸ್ಸು ಪಡೆಯಲು ಹಿಂದೂಗಳು ಅಶಕ್ತರಾಗಿದ್ದ ಕಾಲ. ಹಿಂದೂಗಳ ರಕ್ಷಣೆ ಕಾಂಗ್ರೆಸ್ಸು, ಗಾಂಧಿ, ಟೋಪಿಗಳ ಹೊಣೆಯಾಗಿರಲಿಲ್ಲ ಎಂಬುದು ಆಗ ನನ್ನಂಥ ಬಾಲಕರಿಗೆ ತಿಳಿದಿರಲಿಲ್ಲ. ನನ್ನ ಸುಪ್ತಮಾನಸ ಅದೇಕೋ ಅದು ಹೇಗೋ ಅತ್ತ ತಿರುಗಲಿಲ್ಲ! ಸ್ಕೂಲಿನಲ್ಲಿ ಯಾರೂ ರಾಷ್ಟ್ರಪ್ರಜ್ಞೆಯ ಬಗ್ಗೆ ಉದ್ಭೋಧಕ ಭಾಷಣ ಮಾಡುತ್ತಿರಲಿಲ್ಲ.

ಭಯದ ವಾತಾವರಣ. ದಿನಂಪ್ರತಿ, ಬೆಳಗ್ಗೆ ‘ವಂದೇಮಾತರಂ’, ‘ಗಾಂಧಿ ಕಿ ಜೈ’ ಕೂಗುತ್ತ ಸಾಲುಸಾಲಾಗಿ ನಗರ ಪ್ರದಕ್ಷಿಣೆ ಮಾಡುತ್ತ ನಾವು ಹುಡುಗರು ಈ ದಿನಚರ್ಯು ಕಾಪಾಡುತ್ತಿದ್ದೆವು. ನನ್ನ ತಂದೆ ಆಗ ಹಾಸಿಗೆ ಹಿಡಿದಿದ್ದರು. ಅವರಿಗೆ ರಾಷ್ಟ್ರಭಕ್ತಿಯ ಪ್ರಜ್ಞೆ ಇತ್ತು. ಶಾಸ್ತ್ರಜ್ಞರೂ, ಆಚಾರಶೀಲರೂ, ಪಾರಂಪರಿಕ ವಿದ್ಯಾಧನರೂ ಆಗಿದ್ದ ನನ್ನ ತಂದೆಗೆ ಏನು ನಡೆಯುತ್ತಿದೆ ಎಂಬುದು ಗೊತ್ತಿತ್ತು-ನನ್ನ ಊಹೆ.

ಒಂದು ದಿನ ಸರದಿ ಕಾಂಗ್ರೆಸ್ ಬಾವುಟ ಹಿಡಿದು ಮುಂಚೂಣಿಯಲ್ಲಿ ನಿಂತು ಚಳವಳಿಯ ನೇತಾರನಾಗುವ ಹೊಣೆ ನನ್ನ ಮೇಲೆ ಬಿತ್ತು. ಗಂಟಲೂ ಜೋರಾಗಿತ್ತು. ಸ್ಕೂಲಿನ ಹೆಡ್​ವಾಸ್ಟರು-ಐಯ್ಯಂಗಾರರು-ನಮ್ಮ ಮನೆಗೆ ಹೋಗಿ, ‘ನಿಮ್ಮ ಮಗ ಗಾಂಧಿ ಕಿ ಜೈ’ ಎನ್ನುತ್ತಿದ್ದಾನೆ! ಗುರುಗಳೇ ಅವನಿಗೆ ಜೈಲಾಗುತ್ತದೆ, ತಪ್ಪಿಸಿ’ ಎಂದು ಗೋಗರೆದರು. ಹಾಸಿಗೆಯಲ್ಲಿದ್ದ ತಂದೆ, ಸಂತೃಪ್ತಿಯಿಂದ ಕಣ್ಣರಳಿಸಿ-‘ಹಾಗೋ! ನನ್ನ ಆಶೀರ್ವಾದವಿದೆ. ಏನು ಮಾಡಬೇಕೆಂದು ದೈವ ಅವನ ಕೈಲಿ ಮಾಡಿಸುತ್ತಿದೆ. ಹೋಗಿ’ ಎಂದು ಮೇಷ್ಟ್ರರನ್ನು ನಿರಾಸೆಗೊಳಿಸಿ ಕಳುಹಿಸಿದರು.

ಎಷ್ಟೋ ಕಾಲಾನಂತರ ಆ ಹೆಡ್​ವೆುೕಷ್ಟರೇ ನನಗೆ ಹೇಳಿದ್ದು. ಅಂದು ನಮ್ಮ ಎಲ್ಲ ಹುಡುಗರನ್ನೂ ಪೊಲೀಸರು ಹಿಡಿದು, ಲಾರಿಯಲ್ಲಿ ನಾಯಿಗಳಂತೆ ಕೂಡಿ ಹಾಕಿ, ಊರಾಚೆ, ಯಾವುದೋ ಕಾಡಿನಲ್ಲಿ ಬಿಟ್ಟು ಹೊರಟುಹೋದರು! ಜೈಲು ಒಂದೇ ಇದ್ದು ಒಬ್ಬಿಬ್ಬರಿಗೆ ಮಾತ್ರ ಅಲ್ಲಿ ಜಾಗ ಇತ್ತು ಎಂಬುದು ಕಾರಣ.

ಅಂತೂ ನಾನು ‘ಸ್ವಾತಂತ್ರ್ಯ ಓರಾಟ’ಗಾರನಾದ ಕತೆ ಇದು. ಅನ್ನ, ಆಹಾರ, ನೀರು, ವಿಶ್ರಾಂತಿ, ಸಮಾಧಾನ ಹೇಳುವವರಿಲ್ಲದೆ, ರಾತ್ರಿಯ ತನಕ ಅಲ್ಲಿ ಕಾಡಲ್ಲೆ ಇದ್ದು, ಸರಿರಾತ್ರಿಯಲ್ಲಿ ಯಾರೋ ಊರಿಗೆ ಕರೆತಂದು ಸೇರಿಸಿದರು-ಯಾರು? ಆ ಕಾಡು ಒಂದು ತಾಂಡ. ಅಲ್ಲಿನ ನಾಯಕರು, ನನ್ನ ತಂದೆಗೆ ತಿಳಿದವರು. ತಾಂಡೆ ಒಬ್ಬ ಗುರಿಕಾರರ ಆಳಿಕೆಯ ಪ್ರದೇಶವಾಗಿದ್ದು, ಅವರು ನನ್ನ ತಂದೆಯ ಶಿಷ್ಯರಾಗಿದ್ದು, ಅವರ ಮೂಲಕ ನಮಗೆ ಬಿಡುಗಡೆಯ ಅವಕಾಶ ಸಿಕ್ಕಿತು. ನನ್ನ ತಂದೆ ಹೆಮ್ಮೆಪಟ್ಟರು-ಆಶೀರ್ವದಿಸಿದರು. ನಾನು ಈ ಸ್ಮರಣೆಯನ್ನು ಸ್ವಂತಲಾಭಕ್ಕೆ ಈವರೆಗೆ ಬಳಸಿಕೊಂಡಿಲ್ಲ, ನನಗೆ ‘ವಂದೇಮಾತರಂ’ ಹೃದಯಕ್ಕೆ ಮುಟ್ಟಿ ತಂಪು ಎರೆದಿತ್ತು ಹೊರತು ‘ಗಾಂಧಿ ಕಿ ಜೈ’ ಎಂಬುದಲ್ಲ!

ಕಾರಣ ತಿಳಿಯದೆಯೂ ಒಮ್ಮೊಮ್ಮೆ ಮನಸ್ಸು ಒಂದು ಸರಿಗ್ರಹಿಕೆಯನ್ನು ಹಿಡಿದು ಬಿಡುತ್ತದೆ. ಅದನ್ನು ‘ಆರನೆಯ ಪ್ರಜ್ಞೆ-sixth sense-ಎನ್ನುತ್ತಾರೆಂಬುದು ಆಮೇಲೆ ತಿಳಿಯಿತು. ಮನಸ್ಸಿನ ಶಕ್ತಿ, ಬುದ್ಧಿಗೂ ತಿಳಿಯುವುದಿಲ್ಲ. ಅದು ಗ್ರಹಿಸುತ್ತದೆ, ಇದು ರ್ಚಚಿಸುತ್ತದೆ, ವಿಶ್ಲೇಷಿಸುತ್ತದೆ. ಗ್ರಹಿಕೆ ಮೊದಲು. ಅಲ್ಲಿ ದೈವೀ ಅಂಶ ಹೊಕ್ಕರೆ ನೀವು ಖುಷಿಯಾಗುತ್ತೀರಿ. ಸುಭಾಷರಾಗುತ್ತೀರಿ, ಸಾವರ್ಕರ್ ಆಗುತ್ತೀರಿ, ಶಿವಾಜಿಯಾಗುತ್ತೀರಿ, ರಾಣಿ ಝಾನ್ಸಿ, ಚೆನ್ನಮ್ಮ ಆಗುತ್ತೀರಿ, ಮದಕರಿ ನಾಯಕರಾಗುತ್ತೀರಿ.

ಆ ದೈವೀ ಅಂಶ ಸೇರದಿದ್ದರೆ ಅನರ್ಥವಾಗಿ ಪ್ರಥಮ ಗ್ರಹಿಕೆ, ಮರಣಾಂತಿಕವಾಗಿ ನೀವು ನೆಹ್ರೂ, ಇಂದಿರಾ, ರಾಜೀವರಾಗುತ್ತೀರಿ. ಪುಂಡು ಪೋಕರಿಗಳು ದೇಶದ್ರೋಹಿಗಳ ಬೆನ್ನಿಗೆ ನಿಂತು ‘ಗಾಂಧಿವಾದಿ’ ಹಣೆಪಟ್ಟಿ ಹಚ್ಚಿಕೊಂಡು, ಸ್ವಾತಂತ್ರ್ಯ ಹೋರಾಟಗಾರರ ನೈಜ ಸಾಲಿನಲ್ಲಿದ್ದೂ, ಅಮೃತಮಥನ ಕಾಲದ ದೇವತೆಗಳ ಗುಂಪಿನಲ್ಲಿ ಸ್ವರ್ಭಾನು ಸೇರಿ, ರಾಹು-ಕೇತುಗಳಾದಂತೆ, ಲೋಕವನ್ನು ಕಾಡುತ್ತೀರಿ! ಗಾಂಧಿ ಎಲ್ಲಿ ಸೇರುತ್ತಾರೆ? ಯೋಚಿಸಿ-‘ಗಾಂಧಿವಾದಿ’ ಎನಿಸುವ ಮುನ್ನ ಯೋಚಿಸಿ. ಗಾಂಧಿ ದೇಶ ವಿಭಜನೆಗೆ ವಿರೋಧಿಸಿ, ‘ನನ್ನ ಹೆಣದ ಮೇಲೆ ದೇಶ ತುಂಡು’ ಎನ್ನುತ್ತಿದ್ದವರು, ವಿಭಜನೆಗೆ ಒಪ್ಪಿದರಲ್ಲ? ಅದು ಯಾವ ಗಾಂಧಿ? ಇದು ಯಾವ ಗಾಂಧಿ? ‘ರಘುಪತಿರಾಘವ’ ಎಂದ ಗಾಂಧಿ ಮೋಪ್ಲಾ ಚಳವಳಿಯಲ್ಲಿ ಹಿಂಸಾವಿಹಾರಿಗಳ ಪರ ನಿಂತು, ಬೆನ್ನು ತಟ್ಟಿ, ನೊಂದ, ಹಿಂಸಿತ ಹಿಂದೂಗಳಿಗೆ ‘ಅಹಿಂಸಾ’ ಪುಕ್ಕಟೆ ಬೋಧನೆ ಮಾಡಿದರಲ್ಲ? ಇದು ಯಾವ ಗಾಂಧಿ? ನನ್ನ "who killed gandhi' ಪುಸ್ತಕದ ತುಂಬ ಈ ವಿರೋಧಾಭಾಸದ ಉದಾಹರಣೆಗಳಿವೆ.

ಗಾಂಧಿವಾದಿಗಳು ಓದುವರೇ? ಪ್ರಜೆಗಳಿಂದ ಆರಿಸಿ ಬಾರದ ಗಾಂಧಿ, ಪ್ರಥಮ ಪ್ರಧಾನಿ ಪಟ್ಟವನ್ನು ನೆಹ್ರೂಗೆ ಕಟ್ಟಿ, ಚುನಾಯಿತರಾದ ಪಟೇಲರನ್ನು ತುಳಿದರಲ್ಲ? ಇದು ಯಾವ ಗಾಂಧಿ? ‘ಸತ್ತ ಮೇಲೆ ಪಾಕಿಸ್ತಾನದಲ್ಲಿ ಹೋಗಿ ನೆಲೆಸುವ’ ಪ್ರಕಟ ಬಯಕೆಯನ್ನು ಹೊರಹಾಕಿದ್ದು, ಜಿನ್ನಾರಿಗೆ ಹೆದರಿದ್ದು ಯಾವ ಗಾಂಧಿ? ‘ಉಪ್ಪಿನ ಸತ್ಯಾಗ್ರಹ=ಸರಿ!’ ‘ಕ್ವಿಟ್ ಇಂಡಿಯಾ’ ಸರಿ, ಅದನ್ನು ಖಿಲಾಫತ್ ಚಳವಳಿಗೆ ಬಲಿ ಕೊಟ್ಟದ್ದು, ‘ಆಡಿನ ಮಾಂಸ ತಿಂದು, ತಪ್ಪಾಯಿತು’ ಎಂದು ಬರೆದದ್ದು ಯಾವ ಗಾಂಧಿ? ಮದ್ಯನಿಷೇಧ, ಗೋಹತ್ಯಾ ನಿಷೇಧಕ್ಕೆ ಕರೆಕೊಟ್ಟ ಗಾಂಧಿ ಯಾರು? ಇಸ್ಲಾಮಿಯರ ತಂತ್ರಗಾರಿಕೆ ತಿಳಿಯದೆ ಆಲಿ ಸಹೋದರರ ವಂಚನೆಗೆ ಮರುಳಾದ ಗಾಂಧಿ ಯಾರು? ಪಾಕ್ ನಿರ್ವಣಕ್ಕೆ, ಅದರ ಹಿಂಸಾವಿಹಾರಿಗಳ ಇಂದಿನವರೆಗಿನ ಭಾರತಕ್ಕೂ ಮೂಲಕಾರಣರಾದ ಗಾಂಧಿ ಯಾರಯ್ಯ? ಟೆರರ್ ಮೂಲ ಅರಿಯದ, ಯಾವ ಹಿಂದೂ, ಇಸ್ಲಾಂ ಗ್ರಂಥಗಳನ್ನೂ ಓದದ, ಬೈಬಲಿನಲ್ಲೂ ಬರೀ Sermon on the Mount ಓದಿಕೊಂಡ ಸಾರಾಸಗಟು ಎಲ್ಲವನ್ನೂ ಸಮೀಕರಿಸಿ ಅನರ್ಥ ಮಾಡಿದ ಗಾಂಧಿ ಯಾರು? ಸ್ವದೇಶೀ, ಗ್ರಾಮ ನೈರ್ಮಲ್ಯ, ಚಾರಿತ್ರ್ಯ ಶುದ್ಧಿ-ಡಿವಿಜಿ ಅವರ ಒಂದು ಕವನ ಪ್ರಶಂಸೆಯಲ್ಲಿ ಬಂದಂತೆ-ಇವನ್ನು ಜಪ ಮಾಡುತ್ತ ಕೋಟಿಕೋಟಿ ಭಾರತೀಯರಿಗೆ ದಾರಿ ತೋರಿಸುವ ಹೊಣೆ ಹೊತ್ತು ಒಬ್ಬರು ಇಂದು ನಮ್ಮನ್ನು ಖಳಖೂಳರ ಕೈಗೆ ಒಪ್ಪಿಸಿದ್ದು, ಆಕಸ್ಮಿಕವೇ? ಯೋಜಿತವೇ? ಈ ಯೋಜನೆಯಲ್ಲಿ ಸೋಪು ಹಚ್ಚಿದವರಾರು? ಬೋಳಿಸಿದವರಾರು? ಮೌಂಟ್ ಬ್ಯಾಟನ್? ಜಿನ್ನಾ? ಬ್ರಿಟಿಷ್ ದಾಸ್ಯದ ಅಳಿಯದ ಗುಲಾಮಿ ಬುದ್ಧಿ? ಯಾರನ್ನು ಹಳಿಯುತ್ತೀರಿ? ಸ್ವಾತಂತ್ರ್ಯ ಬಂದಿದೆಯೇ?-Be Honest! ಬಂದಿದ್ದರೆ ಇಲ್ಲಿ ಈಗ ಇಟಲಿಯ ಮಹಿಳೆ ಕಾಂಗ್ರೆಸ್ಸಿನ ನಾಯಕಿಯಾಗಿರಲು ಪ್ರಾಚೀನ ಕಾರಣಪುರುಷರು ಯಾರು?

ದೀರ್ಘಾಯುಷ್ಯ ವರವೂ ಆಗುತ್ತದೆ, ಶಾಪವೂ ಆದೀತು. ಭಾರತೀಯರು ತುಂಬ ಗೌರವಿಸುವ ಗಾಯತ್ರಿಮಂತ್ರವು ‘ಧಿಯೋ ಯೋನಃ ಪ್ರಚೋದಯಾತ್’ ಎಂಬಲ್ಲಿ, ‘ದೇವರೇ, ನಮಗೆ ಸದ್ಬುದ್ಧಿಯನ್ನು ಕೊಟ್ಟು ಸತ್ಕಾರ್ಯಕ್ಕೆ ಪ್ರಚೋದಿಸು’ ಎಂದು ಪ್ರೇರಿಸುತ್ತದಲ್ಲ? ಅದು ನಿರಂತರವಿದ್ದರೆ ದೀರ್ಘಾಯುಷ್ಯಕ್ಕೆ ಅರ್ಥ. 125 ವರ್ಷ ಬದುಕಿದ್ದ ಶ್ರೀಕೃಷ್ಣ, ಶ್ರೀರಾಮಾನುಜರು, ಈಗ ತೀರಿಕೊಂಡ ಸುಧಾಕರ ಚತುರ್ವೆದಿಯವರು, ಇನ್ನೂ ನೂರರ ಹತ್ತಿರ ಇರುತ್ತ ಎಲೆ ಮರೆ ಕಾಯಿಗಳಂತೆ, ಮೌನವಾಗಿ ಜನಸೇವೆ ಮಾಡುತ್ತಿರುವ ಅನೇಕಾನೇಕರು ಯಾರೂ ಪ್ರಚಾರಪ್ರಿಯರಾಗಲಿಲ್ಲ. ಯಮನಿಗೆ ನಚಿಕೇತ ಹೇಳುತ್ತಾನೆ-‘ಅತಿ ದೀಘೋ ಜೀವಿತೇ ಕೋ ರಮೇತ?’ ಎಂದು. ಬುದ್ಧಿಕೆಟ್ಟು, ಶರೀರ ರೋಗಗ್ರಸ್ತವಾಗಿ, ಇತರರಿಗೂ ಭಾರವಾಗಿ, ಇದ್ದರೂ ಸತ್ತಂತಿರುವ ಹತಭಾಗ್ಯರು ಯಾವ ‘ವಾದಿ’ಗಳಾದರೇನು? ‘ದೇವೋ ವಃಸುತಾ ಪ್ರಾರ್ಪಯಾತು ಶ್ರೇಷ್ಠ ತಮಾಯ ಕರ್ಮಣೇ’ ಎನ್ನುತ್ತದೆ ಕೃಷ್ಣ ಯಜುಃಸಂಹಿತೆಯ ಮೊದಲ ಸೂಕ್ತ. ‘ಶ್ರೇಷ್ಠವಾದ ಕಾರ್ಯಗಳಿಗೆ ಸೂರ್ಯಾಂತರ್ಯಾಮಿಯಾದ ದೇವರು ನಮ್ಮನ್ನು ಪ್ರಚೋದಿಸಲಿ’ ಎಂಬುದನ್ನು ಬೆಂಗಳೂರಿನ ಟೌನ್​ಹಾಲ್ ಮುಂದಿನ ಚಳವಳಿಗಳಲ್ಲಿ ಕಾಣುತ್ತೀರಾ?

‘Me too' ಫಲಕಗಳನ್ನು ಹಿಡಿದು ಕಾರ್ನಾಡರು ‘ನಾನು ನಗರ ನಕ್ಸಲ್, ಹಿಡಿದು ಬಂಧಿಸಿರಿ’ ಎಂದು ಅಲ್ಲೇ ಚಳವಳಿ ಮಾಡಿದಾಗ, ಇದು ಸ್ವಾತಂತ್ರ್ಯ ಹಕ್ಕು ಎಂಬ ಭ್ರಮೆಯಿಂದ ಅಲ್ಲಿ ಅವರೊಡನೆ ಇದ್ದ ಶತಾಯುಷಿ ಯಾರು? ಈಗ ಮೋದಿ-ವಿರೋಧಿಯಾಗಿ, ಪಾಕ್ ಹಸ್ತಕರೊಡನೆ ಕೈ ಜೋಡಿಸುತ್ತಿರುವ ಶತಾಯುಷಿ ಯಾರು? ಬೆಂಗಳೂರಿನಲ್ಲಿ ಎಷ್ಟೋ ಸಭೆ, ಚಳವಳಿ, ಕಾರ್ಯಕ್ರಮಗಳು ದಿನಾ ನಡೆಯುತ್ತವೆ.

ಜನರನ್ನು ಕೂಡಿಸಲು ಅಲ್ಲಿ ಗಾಂಧಿವಾದಿಗಳೂ ಬೇಕು, ಶತಾಯುಷಿಗಳೂ ಬೇಕು-ಇಲ್ಲ, ಹಿಂದುಮುಂದು ತಿಳಿಯದೆ ಮಾತಾಡುವ ಹಾಸ್ಯಗಾರರೂ ಬೇಕು, ಸಿಕ್ಕಿದ್ದಕ್ಕೆಲ್ಲ ತಮಟೆ ಬಡಿಯುತ್ತ, ಎಮ್ಮೆ, ಕತ್ತೆಗಳ ಮೇಲೆ ಕೂತು, ಮಕ್ಮಲ್ ಟೋಪಿ ಧರಿಸಿ, ತಾನು ಹೇಳುವುದು, ತನಗೇ ತಿಳಿಯದ ಭಾಷಣಕಾರರೂ ಬೇಕು. ಕೆಲವರಿಗೆ ಕಾಂಗ್ರೆಸ್ಸಿನ ಸಂಬಳ, ಜೆಡಿಎಸ್ ಕೃಪಾಪೋಷಣೆ. ದಿನಾ ಈ ಸಂಬಳ, ಪೊಗದಿ=ಗ್ರೋತ್​ಗಳಿಗೇ ಕಾಯುತ್ತಿರುವ ತಿಳಿಗೇಡಿ, ಕಿಡಿಗೇಡಿ ಸಂಘಗಳೂ ಸದಾ ಇರುತ್ತವೆ. ಫ್ರೀಡಂ ಪಾರ್ಕ್ ಎಂದರಲ್ಲ? ಅಲ್ಲಿ ಒಂದು ಕಾಲದಲ್ಲಿ ಜೈಲು ಇತ್ತಲ್ಲ? ಜೈಲು=ಫ್ರೀಡಂ? ಸಮೀಕರಣ ಚೆನ್ನಾಗಿದೆಯಪ್ಪ! ಹಿಂದೆ ಮಾರಿಗುಡಿಗಳಲ್ಲಿ ಕುರಿ, ಆಡು ಕಡಿಯುತ್ತಿದ್ದರು. ಆ ಮುನ್ನ ಮಾಲೆ ಹಾಕಿ, ಗುಲಾಲ್ ಹಚ್ಚಿ ತಮಟೆ ಬಡಿದು ಕೊಲ್ಲುತ್ತಿದ್ದ ಪ್ರಾಣಿಗಳಂತೆ ಈಗ ರಾಜಕೀಯ ಮಾರಣಹೋಮಗಳಲ್ಲಿ ಶತಾಯುಷಿಗಳು, ಹೋರಾಟಗಾರರು, ಗಾಂಧಿವಾದಿಗಳು ತೊಡಗಿಸಿಕೊಳ್ಳಬೇಕೆ?

ಕೆಲವರಿಗೆ ಹೊತ್ತು ಹೋಗುವುದಿಲ್ಲ. ಮಾಜಿ ರಾಷ್ಟ್ರಾಧ್ಯಕ್ಷರು, ಮಾಜಿ ಮುಖ್ಯಮಂತ್ರಿಗಳು ಯಾರೇ ಇರಲಿ, ಅವರು ‘ಕರೆದರೆ ಬರಬಾರದೆ’ ಎಂಬಂತೆ ಹೋಗಿ ಬಾಯಿಗೆ ಬಂದಿದ್ದು ಹೇಳುವುದಿದೆಯಲ್ಲ? ಅಯ್ಯಗಳಿರಾ? ಅಪ್ಪಗಳಿರಾ? ಒಮ್ಮೆ ನನ್ನನ್ನು ರಾಜ್ಯಮಟ್ಟದ ಸಂಯೋಜಿತ ಸಭೆ ಒಂದು ಅತಿಥಿಯಾಗಿ ಕರೆಯಿತು. ಕಾರಣ? ಒಪ್ಪಿದ್ದವರು ಕೈಕೊಟ್ಟಿದ್ದರು! ನಾನು ಹೇಳಿದೆ, ‘ಇದು ನನ್ನ ವಿಷಯ ಅಲ್ಲ. ಓದದೆ, ಚಿಂತಿಸದೆ ಕೂಡಲೇ ಮಾತನಾಡಲಾರೆ’ ಎಂದೆ. ಅವರು ಬಿಡಲಿಲ್ಲ. ‘ಸುಮ್ಮನೆ ಬಂದು ಅಧ್ಯಕ್ಷ ಸ್ಥಾನದಲ್ಲಿ ಕೂತರೆ ಸಾಕು’ ಅಂತ ಹೇಳಿದಾಗ ‘ಎದ್ದು ಹೋಗಿ’ ಎನ್ನಬೇಕಾಯಿತು. ಅದಕ್ಕೆ ಪರಿಷತ್ತುಗಳು, ಅಕಾಡೆಮಿಗಳು, ಬಹುಮಾನ ವಿತರಿಸುವ, ಪುರಸ್ಕಾರ ಹೇರುವ ಸಂಸ್ಥೆಗಳು ಇವೆ. ‘ಬೇಕು ಬೇಡೆಯವರ ನಾ ಕಾಣೆ’ ಎಂದು ಕುಮಾರವ್ಯಾಸ, ಉತ್ತರಕುಮಾರನ ವಿಜೃಂಭಣೆಗೆ ಒಗ್ಗರಣೆ ಹಾಕುತ್ತಾನೆ. ‘ಅಯ್ಯೋ! ಗಾಂಧಿವಾದಿಗಳೇ, ನಿಮಗೀ ಗತಿಯೋ? ಅಥವಾ ನೀವು ಗಾಂಧಿ ಕ್ಯಾಂಪ್​ನಲ್ಲಿರುವುದೇ ಸರಿ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net