ಪರಿಸರ ಸಮತೋಲನಕ್ಕೆ ಸಾಮೂಹಿಕ ಬದ್ಧತೆ ಅಗತ್ಯ..

SDM
Published on
ಕಾಡನ್ನು ನಾಶ ಮಾಡಬೇಡಿ, ಪರಿಸರವನ್ನು ಉಳಿಸಿ, ಪರಿಸರದ ಸಮತೋಲನ ಕಾಪಾಡದಿದ್ದಲ್ಲಿ ಮುಂದೊಂದು ದಿವಸ ಮಾನವಕುಲ ಮತ್ತು ಪ್ರಾಣಿಗಳ ಜೀವನ ಅಸಹನೀಯವಾಗುತ್ತದೆ ಎಂದು ತಜ್ಞರು ಹಿಂದಿನಿಂದಲೂ ಎಚ್ಚರಿಸುತ್ತ ಬಂದಿದ್ದಾರೆ. ಆದರೆ, ಇದರ ಗಂಭೀರತೆ ಇತ್ತೀಚೆಗೆ ಅರಿವಿಗೆ ಬರುತ್ತಿದೆ.

ಕೆಲ ದಿನಗಳ ಹಿಂದೆ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಸುದ್ದಿ ಗಮನ ಸೆಳೆಯಿತು. ಅಸ್ಸಾಂನಲ್ಲಿ ಮೋಟಾರು ಸೈಕಲ್ ಸವಾರನೊಬ್ಬ ಬೈಕಿನ ಮೇಲೆ ಇಟ್ಟು ಹೋಗಿದ್ದ ಹೆಲ್ಮೆಟನ್ನು ಆನೆ ಬಾಯಿಯಲ್ಲಿ ಇಟ್ಟುಕೊಂಡ ಘಟನೆ. ಆನೆ ಹೀಗೇಕೆ ಮಾಡಿತು ಎಂದು ಸಂಶೋಧನೆಯಾಗಬೇಕಿದೆ ಎಂದು ಆ ವರದಿಯಲ್ಲಿ ಬರೆದಿದ್ದರು. ಅಂದರೆ ಹಸಿವು ನೀಗಿಸಿಕೊಳ್ಳಲು ತರಕಾರಿ, ಹಣ್ಣೆಂದು ಭಾವಿಸಿತೋ ಅಥವಾ ಆಟಕ್ಕಾಗಿ ಹೆಲ್ಮೆಟನ್ನು ಬಾಯಿಗೆ ಇಟ್ಟುಕೊಂಡಿತೋ ಎಂಬ ಸಂದೇಹ. ಆನೆಗಳು ಪ್ರತಿಯೊಂದು ತರಕಾರಿ ಅಥವಾ ಹಣ್ಣನ್ನು ಸೊಂಡಿಲಿನಿಂದ ಮೂಸಿ ನೋಡಿ ಸ್ವೀಕರಿಸುತ್ತವೆ. ಹಸಿವಾದಾಗ ಸಿಕ್ಕಿದ ಹಣ್ಣುಗಳನ್ನು ತಿಂದುಬಿಡುತ್ತವೆ. ಸಾಮಾನ್ಯವಾಗಿ ಬಾಳೆಹಣ್ಣು ಅಥವಾ ಸಿಹಿ ಹಣ್ಣುಹಂಪಲುಗಳನ್ನು ಸ್ವೀಕರಿಸುತ್ತವೆ. ಆದರೆ, ಕಿತ್ತಳೆಹಣ್ಣು, ಮೂಸಂಬಿ, ದಾಳಿಂಬೆ ಮುಂತಾದ ಹುಳಿಹಣ್ಣುಗಳನ್ನು ಸ್ವೀಕರಿಸುವುದಿಲ್ಲ. ಅಂತಹ ಸೂಕ್ಷ್ಮಮತಿ ಇರುವ ಆನೆ ಹೆಲ್ಮೆಟ್ ಮುಟ್ಟಿದ್ದು ಹೇಗೆ?

ಈ ಸುದ್ದಿ ಬರುವ ಮೊದಲೇ ಕಾಡುಪ್ರಾಣಿಗಳ ಆಹಾರದ ಕೊರತೆ ಬಗ್ಗೆ ಮಾಹಿತಿಗಳು ಬರುತ್ತಿದ್ದವು. ಕಾಡುಪ್ರಾಣಿಗಳು ಬಾಳೆ, ಅಡಿಕೆ, ಕಬ್ಬು ಮತ್ತು ತರಕಾರಿ ತೋಟಕ್ಕೆ ನುಗ್ಗಿ ದಾಂಧಲೆ ಮಾಡುವ ಸುದ್ದಿ ವರದಿಯಾಗುತ್ತಿದ್ದವು. ಇದಕ್ಕೆ ಕಾರಣ ಕಾಡು ನಾಡಾಗಿರುವುದರಿಂದ ಅನೇಕ ಪ್ರಾಣಿಗಳು ಹಾಗೂ ಪಕ್ಷಿಗಳು ಸಿದ್ಧವಿರುವ ಕೃಷಿಭೂಮಿಗೆ ಹಗಲಿನಲ್ಲಿ ದಾಳಿ ಇಡುತ್ತವೆ ಅಥವಾ ಕಾಡುಹಂದಿ, ಕಡವೆ, ಜಿಂಕೆ, ಮೊಲ, ಹೆಗ್ಗಣ, ಇಲಿಗಳು ಮುಂತಾದ ಪ್ರಾಣಿಗಳು ರಾತ್ರಿಯೂ ಪ್ರವೇಶ ಮಾಡುತ್ತವೆ.

ಶ್ರೀಕ್ಷೇತ್ರದ ಆಶ್ರಯದಲ್ಲಿ ಉಜಿರೆಯಲ್ಲಿ ನಡೆಯುತ್ತಿರುವ ರತ್ನಮಾನಸ ವಿದ್ಯಾರ್ಥಿ ನಿಲಯದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ತೊಡಗಿಸಿಕೊಳ್ಳುವ ತರಬೇತಿ ಮತ್ತು ಮಾರ್ಗದರ್ಶನ ಕೊಡಲಾಗುತ್ತದೆ. ಅದರ ಆಡಳಿತ ನಿರ್ದೇಶಕರಾಗಿದ್ದ ಕಾಶ್ಮೀರ್ ಮಿನೇಜಸ್​ರ ಬಳಿ ಒಮ್ಮೆ ವಿದ್ಯಾರ್ಥಿಗಳು ತೋಟದಿಂದ ತರಕಾರಿ ಬೆಳೆಗಳು, ಕೆಲವು ಹಣ್ಣುಹಂಪಲುಗಳು ಕಾಣೆಯಾಗುತ್ತಿರುವ ವರದಿ ಸಲ್ಲಿಸಿದರು. ಈ ವಿಷಯದಲ್ಲಿ ಸೂಕ್ಷ್ಮ ತಿಳಿದಂಥ ಮಿನೇಜಸ್ ತೋಟಕ್ಕೆ ರಾತ್ರಿ ಹೊತ್ತು ಪ್ರಾಣಿಗಳು ಪ್ರವೇಶಿಸುವ ದಾರಿಯನ್ನು ಗುರುತಿಸಿದರು. ಹೆಚ್ಚಾಗಿ ಮಳೆ ನೀರು ಹರಿದು ಹೋಗುವ ಕಿಂಡಿಗಳು ಮತ್ತು ಕೆಲವು ಸೂಕ್ಷ್ಮದಾರಿಗಳನ್ನು ಗುರುತಿಸಿ ಅಲ್ಲಿ ಕೆಲವು ತರಕಾರಿ ಗಿಡಗಳನ್ನು ಬೆಳೆಸಲು ಸೂಚಿಸಿದರು. ಇದರಿಂದಾಗಿ ರಾತ್ರಿ ಹೊತ್ತಿನಲ್ಲಿ ತೋಟಕ್ಕೆ ಪ್ರವೇಶಮಾಡಲು ಪ್ರಯತ್ನಿಸುತ್ತಿರುವ ಪ್ರಾಣಿಗಳಿಗೆ ದಾರಿಯಲ್ಲಿಯೇ ಆಹಾರ ಸಿಕ್ಕಿ ಅದನ್ನು ತಿಂದು ಹಿಂದೆ ಹೋಗುತ್ತಿದ್ದುದರಿಂದ ತೋಟದ ಒಳಗೆ ಪ್ರವೇಶ ಮಾಡುವ ಸಂದರ್ಭ ಕಡಿಮೆಯಾಯಿತು. ಅಹಿಂಸಾತ್ಮಕವಾದ ಈ ಸಣ್ಣ ಚಿಂತನೆಯಿಂದ ತಕ್ಕಮಟ್ಟಿಗೆ ಪ್ರಾಣಿಗಳಿಗೆ ಆಹಾರ ಒದಗಿತು ಮತ್ತು ಕೃಷಿಕರ ಸಮಸ್ಯೆ ಬಗೆಹರಿಯಿತು.

ಬೆಳೆಗಳನ್ನು ನಾಶಮಾಡುವ ಪ್ರಾಣಿಗಳನ್ನು ನಿಯಂತ್ರಿಸಲು ಬಹಳಷ್ಟು ಮಂದಿ ಹಿಂಸೆಯ ಮಾರ್ಗ ಹಿಡಿಯುತ್ತಾರೆ. ಅಹಿಂಸಾತ್ಮಕ ದಾರಿ ಅನುಸರಿಸುವುದು ಉತ್ತಮ. ಕಾಡುಪ್ರಾಣಿಗಳು ಕೃಷಿಕರ ತೋಟ ಪ್ರವೇಶಿಸದಂತೆ ಮಾಡಲು ಕಾಡಿನಲ್ಲಿ ಅವುಗಳಿಗೆ ಆಹಾರ ಸಿಗುವ ವ್ಯವಸ್ಥೆ ಮಾಡುವುದು ಅಗತ್ಯ. ಆನೆ, ಕೋತಿಗಳು, ಕಡವೆ, ಜಿಂಕೆಗಳು, ಕಾಡುಹಂದಿಗಳು, ನವಿಲುಗಳು ಸಾಮಾನ್ಯವಾಗಿರುವಂತಹ ಪ್ರಾಣಿಗಳು. ಶುದ್ಧ ಸಸ್ಯಾಹಾರಿಗಳಾದ ಇವು ಬೇಸಿಗೆಯ ಮೂರು ತಿಂಗಳಲ್ಲಿ ಕಾಡಿನಲ್ಲಿ ಆಹಾರ ದೊರಕದೆ ತೋಟಗಳಿಗೆ ಪ್ರವೇಶಿಸಿ ಕಬ್ಬು, ಅಡಿಕೆ, ಏಲಕ್ಕಿ, ಕೊಕೋ, ಬಾಳೆಹಣ್ಣು ಮತ್ತು ತರಕಾರಿಗಳನ್ನು ತಿನ್ನುತ್ತವೆ ಮತ್ತು ಅಷ್ಟೇ ಹಾಳುಗೆಡವುತ್ತವೆ. ಇತ್ತೀಚಿನ ವರ್ಷಗಳಲ್ಲಿ ವನ್ಯರಕ್ಷಣೆ ಮತ್ತು ಕಾಡಿನಲ್ಲಿ ಮರ ನೆಡುವ ಕಾರ್ಯಗಳು ಹೆಚ್ಚಾಗುತ್ತಿವೆ. ಆದರೆ, ಹೀಗೆ ನೆಟ್ಟ ಮರಗಳಲ್ಲಿ ಅಕೇಶಿಯಾ, ಮಾಂಜಿಯಮ್ ಸಾಗುವಾನಿ, ದೇವದಾರು ಮತ್ತು ಕಾಗದ ತಯಾರಿಗಾಗಿ ನೀಲಗಿರಿ ಇತ್ಯಾದಿಗಳೇ ಹೆಚ್ಚು. ನೀವು ಹೆಸರು ಹೇಳಿದ ತಕ್ಷಣವೇ ಊಹಿಸಬಲ್ಲಿರಿ. ಇವು ಹಣ್ಣು ಕೊಡುವ ಗಿಡಗಳಲ್ಲ ಹಾಗೂ ಭೂಮಿಯಲ್ಲಿರುವ ನೀರನ್ನು ಇಂಗಿಸುವ ಪ್ರಭೇದಗಳಿಗೆ ಸೇರಿದವು ಎಂದು. ಎತ್ತರದಿಂದ ಅಥವಾ ಉಪಗ್ರಹದಿಂದ ಕಾಣುವಾಗ ಹಸಿರಾಗಿ ಕಂಡರೂ ಇವು ಪ್ರಾಣಿಗಳಿಗೆ ಆಹಾರ ನೀಡಲಾರವು. ವನ್ಯಜೀವಿಗಳು ಕಡಿಮೆ ಆಗುತ್ತ ಹೋದ ಹಾಗೆ ನಾಡು ಬೆಳೆಯುತ್ತ ಹೋಯಿತು. ಕಾಡು ನಾಶವಾಗುತ್ತ ಹೋಯಿತು.

ಹಿಂದೆ ಒಂದು ಲೇಖನ ಓದಿದ ನೆನಪು. ಒಬ್ಬ ಜಮೀನ್ದಾರಿಗೆ ಸಾಕಷ್ಟು ಆಸ್ತಿ ಇತ್ತು. ಅವರು ತಮ್ಮ ಸ್ವಾಧೀನದಲ್ಲಿರುವ ಕಾಡನ್ನು ರಕ್ಷಣೆ ಮಾಡುತ್ತಿದ್ದರು. ಆಗ ಅನೇಕ ಮಂದಿ ಅವರಿಗೆ, ‘ನೀವು ಕಾಡನ್ನು ಹೀಗೆ ಬಿಟ್ಟಿದ್ದೀರಿ. ಸುಮಾರು 10-12 ಎಕರೆ ಜಾಗ ಇದೆ. ಕಾಡನ್ನು ಕಡಿದು ತೆಂಗು, ಅಡಿಕೆ ತೋಟ ಮಾಡಿದರೆ ಸಾಕಷ್ಟು ಲಾಭದಾಯಕವಾಗುತ್ತದೆ. ಈ ಫಲವತ್ತಾದ ಭೂಮಿಯಲ್ಲಿ ಕಾಡನ್ನು ಬೆಳಿಸಿಕೊಂಡಿದ್ದಿರಲ್ಲ...?’ ಎಂದರು. ಆಗ ಅವರು, ‘ನನ್ನ ಆಯುಷ್ಯ ಕಾಲದಲ್ಲಿ ಯಾವುದೇ ಕಾರಣಕ್ಕೂ ಕಾಡು ನಾಶ ಮಾಡುವುದಿಲ್ಲ. ಈ ಅರಣ್ಯವನ್ನು ರಕ್ಷಣೆ ಮಾಡಿ ಪರಿಸರಕ್ಕೆ ಹಾಗೂ ನಮ್ಮ ಗದ್ದೆ, ಕೃಷಿಭೂಮಿಗೆ ಬೇಕಾಗುವಂಥ ಸೊಪು್ಪಗಳನ್ನು ಸಾಗಿಸಿ, ಉಪಯೋಗಕ್ಕೆ ಬೇಕಾದ ಕಟ್ಟಿಗೆಗಳನ್ನು ಬಿದ್ದ ಮರಗಳಿಂದ ಮಾಡಿಕೊಳ್ಳುತ್ತೇನೆ. ಖಂಡಿತವಾಗಿ ಕಾಡು ನಾಶಮಾಡೋದಿಲ್ಲ’ ಎನ್ನುತ್ತಿದ್ದರಂತೆ. ಅವರ ಕಾಲವಾಯಿತು. ಬಳಿಕ ಅವರ ಮಗ ಮಾಡಿದ ಮೊದಲನೇ ಕೆಲಸವೆಂದರೆ ಕಾಡನ್ನು ಕಡಿದು, ಅಡಕೆ, ತೆಂಗು ತೋಟಗಳನ್ನು ಇಟ್ಟ. ಮುಂದೆ 30 ವರ್ಷ ಆದಮೇಲೆ ಅವನು ವೃದ್ಧಾಪ್ಯದಲ್ಲಿದ್ದಾಗ ಗ್ರಾಮಸ್ಥರು, ‘ಅಲ್ಲಯ್ಯ ಈಗ ಕಾಲ ಬದಲಾಗಿದೆ. ಭೂಮಿಗೆ ಸಾಕಷ್ಟು ಬೆಲೆ ಬಂದಿದೆ. ಈ ಭೂಮಿಯನ್ನು ಸೈಟ್​ಗಳನ್ನಾಗಿ ಪರಿವರ್ತಿಸಿ ಮಾರಿದರೆ ಎಷ್ಟು ಲಾಭದಾಯಕ. ನೀನು ಇನ್ನೂ ಅಡಿಕೆ-ತೆಂಗು ತೋಟ ಅಂತ ಇಟ್ಟುಕೊಂಡು ಕಷ್ಟಪಡ್ತಾ ಇದ್ದಿಯಲ್ಲ. ರೋಗ ಜಾಸ್ತಿ ಆಗಿದೆ, ಕೂಲಿಗೆ ಜನ ಸಿಗುವುದಿಲ್ಲ’ ಎಂದರಂತೆ. ‘ಇಲ್ಲ, ನನ್ನ ಆಯಸ್ಸಿನ ಕಾಲದಲ್ಲಿ ಸಾಧ್ಯವಾದಷ್ಟರ ಮಟ್ಟಿಗೆ ಈ ತೋಟವನ್ನೇ ರಕ್ಷಣೆ ಮಾಡುತ್ತೇನೆ. ತೋಟ ಕಡಿಯುವುದಿಲ್ಲ’ ಎಂದನಂತೆ. ಅವನ ಆಯಸ್ಸು ಕೂಡ ಮುಗಿಯಿತು. ನಂತರ ಆತನ ಮಕ್ಕಳು ಈ ತೋಟದ ಫಲವತ್ತಾದ ಭೂಮಿಯನ್ನು ಸೈಟ್​ಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಿ ಹೆಚ್ಚು ಹಣ ಸಂಪಾದಿಸಿ, ಊರು ಬಿಟ್ಟು ನಗರಕ್ಕೆ ವಲಸೆ ಹೋದರು. ಈ ಪರಿವರ್ತನೆಯನ್ನು ನಾವು ಗಮನಿಸಿದ್ದೇವೆ.

ಇತ್ತೀಚಿನ ವರ್ಷಗಳಲ್ಲಿ ಪರಿಸರ ಅಸಮತೋಲನದಿಂದಾಗಿ ಅನೇಕ ಸಮಸ್ಯೆಗಳು ಉಂಟಾಗಿವೆ. ಕೆರೆಗಳು ಹೂಳು ತುಂಬಿ ನಾಶವಾಗಿವೆ. ಈಗ ಸರ್ಕಾರದ ನೀರು ಸರಬರಾಜು ಯೋಜನೆಯಿಂದ ಕುಡಿಯಲು ನೀರು ಬರುತ್ತದೆ. ಹಾಗಾಗಿ ಎಷ್ಟೋ ಕೆರೆಗಳ ಕಡೆಗೆ ನಿರ್ಲಕ್ಷ್ಯವಾಗಿ, ಬತ್ತಿ ಹೋದವು. ಅನೇಕ ಮಂದಿ ಕೃಷಿಕರು ಕೃಷಿಭೂಮಿಯಲ್ಲಿ ಕೊಳವೆಬಾವಿ ತೆಗೆಸಿದ್ದಾರೆ. ಇಂತಹ ಸಂದರ್ಭದಲ್ಲಿ ನಾಡು ಮತ್ತು ಕಾಡು ಎರಡನ್ನೂ ಉಳಿಸುವ ಪ್ರಯತ್ನಗಳು ನಡೆಯಬೇಕಾಗಿದೆ. ಈಗಿರುವ ಅನಿಶ್ಚಿತತೆ ಬಗ್ಗೆ ಕಳೆದ 50 ವರ್ಷಗಳಿಂದಲೂ ಪರಿಸರ ತಜ್ಞರು ಎಚ್ಚರಿಕೆ ಕೊಡುತ್ತ ಬಂದಿದ್ದಾರೆ. ‘ಕಾಡನ್ನು ನಾಶಮಾಡಬೇಡಿ, ಪರಿಸರವನ್ನು ಉಳಿಸಿ, ಪರಿಸರದ ಸಮತೋಲನ ಕಾಪಾಡದಿದ್ದಲ್ಲಿ ಮುಂದೊಂದು ದಿವಸ ಮಾನವಕುಲ ಮತ್ತು ಪ್ರಾಣಿಗಳ ಜೀವನ ಅಸಹನೀಯವಾಗುತ್ತದೆ’ ಎಂದು ತಿಳಿಸುತ್ತ ಬಂದಿದ್ದಾರೆ. ಆದರೆ, ಇದರ ಗಂಭೀರತೆ ಇತ್ತೀಚೆಗೆ ಅರಿವಿಗೆ ಬರುತ್ತಿದೆ. ಬೇಸಿಗೆಯಲ್ಲಿ ಬಿಸಿಲು ಜಾಸ್ತಿ ಆಗಿದೆ. ಮಳೆಗಾಲದಲ್ಲಿ ಮಳೆಯೂ ಜಾಸ್ತಿ. ಕೆನಡಾದಲ್ಲಿ ಜುಲೈ ತಿಂಗಳಲ್ಲಿ ಚಳಿ ಇರುವ ಬದಲು 42 ಡಿಗ್ರಿ ಬಿಸಿಲು ಆವರಿಸಿದೆಯಂತೆ.

ವನ್ಯಜೀವಿಗಳ ನಾಶ, ಅರಣ್ಯನಾಶ, ಪರಿಸರನಾಶದಿಂದಾಗಿ ಮನುಷ್ಯರಿಗೂ ಕಷ್ಟವಾಗಿದೆ. ಸದ್ಯ ಮನುಷ್ಯರು ಹೇಗೋ ಹೊಂದಿಸಿಕೊಂಡು ಹೋಗುತ್ತಾರೆ. ಅಂದರೆ ಕುಡಿಯಲು ಬಾಟ್ಲಿಯಲ್ಲಿ ನೀರು ಸಿಗುತ್ತ್ತೆ. ಸ್ನಾನ ಮಾಡದಿದ್ದರೂ ಏನೂ ಸಮಸ್ಯೆ ಇಲ್ಲ. ಬೇಕಾದಷ್ಟು ಸುಗಂಧದ್ರವ್ಯಗಳು, ಮತ್ತಿತರ ವಸ್ತುಗಳು ಪರ್ಯಾಯವಾಗಿ ಇರುವುದರಿಂದ ಯಾವುದರ ಕೊರತೆಯನ್ನೂ ತುಂಬಿಸಿಕೊಂಡು ಹೋಗಲು ಮನುಷ್ಯರಿಗೆ ಸಾಧ್ಯ ಇದೆ. ಆದರೆ ಪ್ರಾಣಿಗಳಿಗೆ ಈ ರೀತಿಯ ಬದುಕು ಸಾಧ್ಯವಿಲ್ಲ. ಅವು ಅನಾಥವಾಗಿವೆ. ಅವುಗಳ ಕೂಗನ್ನು ಕೇಳುವವರಿಲ್ಲ. ‘ನಾವು ಬದುಕಬೇಕು, ಇತರರನ್ನೂ ಬದುಕಲು ಬಿಡಬೇಕು’ (Live and let live) ಎಂಬ ತತ್ತ್ವ ಪಾಲಿಸಬೇಕಿದೆ. ಜೈನ ಧರ್ಮದಲ್ಲೂ ಈ ತತ್ತ್ವವನ್ನು ವಿಶೇಷವಾಗಿ ಉಲ್ಲೇಖಿಸಲಾಗಿದೆ.

ಬದುಕು ಮತ್ತು ಬದುಕಲು ಬಿಡು, ಜೀವ ಮತ್ತು ಜೀವನ ನೋಡಿಕೊಳ್ಳುವಂತಹ ಅನಿವಾರ್ಯತೆ ಇದೆ ಎಂದು ಮನಗಂಡು ನಾನು ಕರ್ನಾಟಕ ಸರ್ಕಾರಕ್ಕೆ ಒಂದು ಪತ್ರ ಬರೆದೆ. ಕಾಡುಪ್ರಾಣಿಗಳು ಕೃಷಿಭೂಮಿಗೆ ಪ್ರವೇಶಿಸುತ್ತಿವೆ. ಬೆಳೆಗಳನ್ನು ತಿಂದು ನಾಶ ಮಾಡುತ್ತಿವೆ. ಕಾಡಿನಿಂದ ಪ್ರಾಣಿಗಳು ಕೃಷಿಭೂಮಿಗೆ ಬರದಂತೆ ತಡೆಯಲು ಕಾಡಿನಲ್ಲಿರುವ ಪ್ರಾಣಿಗಳಿಗೂ ಆಹಾರ ಒದಗಿಸುವಂಥ ವ್ಯವಸ್ಥೆ ಆಗಬೇಕು. ಇದಕ್ಕಾಗಿ ಹಣ್ಣಿನ ವೃಕ್ಷಗಳನ್ನು ನೆಡಬೇಕು. ಮತ್ತು ಅವುಗಳಿಗೆ ರಕ್ಷಣೆ ಕೊಡಬೇಕು ಎಂದು ಸೂಚಿಸಿದ್ದೆ. ಅರಣ್ಯ ಇಲಾಖೆಯ ಮಂತ್ರಿಗಳಾದ ಅರವಿಂದ ಲಿಂಬಾವಳಿಯವರು ಈ ಪತ್ರಕ್ಕೆ ತಕ್ಷಣ ಸ್ಪಂದಿಸಿ ಉನ್ನತ ಅಧಿಕಾರಿಗಳನ್ನು ಹಾಗೂ ಸ್ಥಳೀಯ ಶಾಸಕರನ್ನು ಅಹ್ವಾನಿಸಿ ಧರ್ಮಸ್ಥಳದಲ್ಲಿ ಸಭೆಯನ್ನು ಏರ್ಪಡಿಸಿದರು. ಈ ಸಭೆಯಲ್ಲಿ, ‘ಹೆಗ್ಗಡೆಯವರ ದೃಷ್ಟಿಯನ್ನು ನಾನು ಒಪ್ಪಿಕೊಂಡಿದ್ದೇನೆ. ಈ ದಿಸೆಯಲ್ಲಿ ನಾವು ಅರಣ್ಯ ಇಲಾಖೆಯವರು ಕೂಡ ಸ್ಪಂದಿಸಬೇಕು’ ಎನ್ನುವ ಆದೇಶ ಕೊಟ್ಟರು. ಆ ಸಂದೇಶದಂತೆ ಪರಿಸರ ದಿನವಾದ ಜೂನ್ 5 ರಂದು ಧರ್ಮಸ್ಥಳ ಕ್ಷೇತ್ರದಲ್ಲಿ ಹಣ್ಣಿನ ಗಿಡ ನೆಡುವುದರ ಜೊತೆಗೆ ಅರಣ್ಯ ರಕ್ಷಣೆ ಬಗ್ಗೆ ಸಂಕಲ್ಪ ಸ್ವೀಕರಿಸಲಾಯಿತು. ಅಂದರೆ ಎಲ್ಲರೂ ಕೈಯೆತ್ತಿ ಪ್ರತಿಜ್ಞೆಮಾಡಿ ‘ಅರಣ್ಯ ರಕ್ಷಣೆ ಮಾಡುತ್ತೇವೆ, ಪರಿಸರ ರಕ್ಷಣೆ ಮಾಡುತ್ತೇವೆ. ವನ್ಯಜೀವಿಗಳ ಮೇಲೆ ಪ್ರೇಮ, ಕಾಳಜಿ, ಪ್ರೀತಿ ತೋರುತ್ತೇವೆ’ ಎಂಬ ವಚನ ತೆಗೆದುಕೊಂಡೆವು.

ಈ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುವುದು ಹೇಗೆ ಎಂಬ ಯೋಚನೆ ಬಂದಾಗ ನಮ್ಮ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಮತ್ತು ಅಧಿಕಾರಿಗಳು ವಿಶೇಷ ಆಸಕ್ತಿ ತಳೆದು ಗ್ರಾಮೀಣ ಮಟ್ಟದಲ್ಲಿ ‘ಶೌರ್ಯ’ ಎಂಬ ಸಂಘಟನೆಯನ್ನು ಕಟ್ಟಿದರು. ಈ ಶೌರ್ಯ ಸಂಘಟನೆಯ ಮುಖ್ಯ ಉದ್ದೇಶವೇನೆಂದರೆ ಗ್ರಾಮದಲ್ಲಿ ಏನಾದರೂ ಆಪತ್ತು ಬಂದಾಗ ಅವರ ರಕ್ಷಣೆಗೆ ಹೋಗುವುದು, ಪ್ರಕೃತಿ ವಿಕೋಪವಾದಾಗ ಅದರ ಪರಿಹಾರಕ್ಕೆ ಸ್ಪಂದಿಸುವಂಥದ್ದು ಇತ್ಯಾದಿ. ಮುಖ್ಯವಾಗಿ, ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳನ್ನು ನಡೆಸುವುದು. ಶೌರ್ಯ ಸಂಘಟನೆಯ ಸ್ವಯಂಸೇವಕರು ಅಲ್ಲಲ್ಲಿ ಗಿಡಗಳನ್ನು ನೆಡುತ್ತಿದ್ದಾರೆ. ವೃಕ್ಷಗಳನ್ನು ರಕ್ಷಣೆ ಮಾಡುತ್ತಿದ್ದಾರೆ ಮತ್ತು ಇದರ ಮಧ್ಯೆ ಅನೇಕ ರೀತಿಯ ‘ಪರಿಸರ ಸ್ಪರ್ಶ’ ಅಂದರೆ ಪ್ರಾಣಿಗಳು ಎಲ್ಲಿಯಾದರೂ ಕಾಡಿನಲ್ಲಿ ಕಷ್ಟದಲ್ಲಿದ್ದರೆ, ಅವುಗಳಿಗೆ ಏನಾದರೂ ಗಾಯಗಳಾಗಿ ನೋವಾಗಿದ್ದರೆ ಸ್ಪಂದಿಸಿ ರಕ್ಷಣೆ ಮಾಡುತ್ತಿದ್ದಾರೆ.

ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂಬುದೇ ಆಶಯ. ಈ ಲೇಖನ ಓದುವವರು ಕೂಡ ಸುತ್ತಮುತ್ತ ಪರಿಸರವನ್ನು ಗಮನಿಸಲಿ. ಇಂಥ ಬದಲಾವಣೆ, ಸುಧಾರಣೆಗೆ ನಾಂದಿಹಾಡಲಿ. ಅನೇಕ ದೇಶಗಳಲ್ಲಿ ಪ್ರತಿ ಮನೆಯಲ್ಲಿಯೂ ಅವಕಾಶವಿದ್ದಲ್ಲಿ ಗಿಡಗಳನ್ನು ನೆಡುತ್ತಾರೆ. ತರಕಾರಿ ತೋಟಗಳನ್ನು ಮಾಡುತ್ತಾರೆ. ಮತ್ತು ಮೊಲಗಳಿಂದ ಹಿಡಿದು ಅಳಿಲು, ಹಕ್ಕಿಗಳನ್ನು ಗುರುತಿಸಿ ಅವುಗಳಿಗೆ ಆನಂದ ನೀಡುತ್ತಾರೆ. ನಮಗೆ ಆಶ್ಚರ್ಯವಾಗುವಂತೆ ನಮ್ಮ ಸುತ್ತಮುತ್ತ ಗಿಡಗಳಲ್ಲಿ ಎಷ್ಟೊಂದು ವೈವಿಧ್ಯಮಯ ಪಕ್ಷಿಗಳು ಇದ್ದಾವೆ. ಅವುಗಳನ್ನು ನೋಡಿ ರಕ್ಷಿಸುವ ಹೊಣೆಗಾರಿಕೆ ನಮ್ಮದು ಎನ್ನುವ ಪ್ರಜ್ಞೆ ಬೆಳೆಯುತ್ತಿದೆ. ಈ ಪ್ರಜ್ಞೆ ಸಮಷ್ಟಿಯಾಗಿ ಬೆಳೆಯಲಿ ಎಂದು ಆಶಿಸುತ್ತೇನೆ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net