

| ಶಿವು ಹುಣಸೂರು
ಹದಿನೇಳು ವರ್ಷ ದೇಶ ರಕ್ಷಣೆ ಮಾಡಿ, ನಿವೃತ್ತಿ ಹೊಂದಿದ ಬಳಿಕ ಹುಟ್ಟೂರಿಗೆ ಬಂದ ಯೋಧ, ಪ್ರಸ್ತುತ ಕೋಕೋಪಿಟ್ ಸಾವಯವ ಗೊಬ್ಬರ ಘಟಕ ಸ್ಥಾಪಿಸಿ ‘ಜೈ ಜವಾನ್ - ಜೈ ಕಿಸಾನ್’ ವಾಣಿಯನ್ನು ಮೊಳಗಿಸಿದ್ದಾರೆ.
ಹುಣಸೂರು ತಾಲೂಕು ಎಮ್ಮೆಕೊಪ್ಪಲು ಗ್ರಾಮದ ಮೋಹನ್ಕುಮಾರ್, ವಾಯುಸೇನಾ ವಿಭಾಗದ ವಿವಿಧ ಹುದ್ದೆಗಳಲ್ಲಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿ 2016ರಲ್ಲಿ ಸ್ವಯಂ ನಿವೃತ್ತಿ ಹೊಂದಿದರು. ಇದೀಗ ಗ್ರಾಮದಲ್ಲೇ ಯಶಸ್ವಿನಿ ಗೋಲ್ಡ್ ಕೋಕೋಪಿಟ್ ಸಾವಯವ ಗೊಬ್ಬರ ತಯಾರಿಕಾ ಘಟಕ ಸ್ಥಾಪನೆ ಮಾಡಿ, ಹಲವು ರೈತರಿಗೆ ನೆರವಾಗಿದ್ದಾರೆ.
ಎಲ್ಲ ಬೆಳೆಗಳಿಗೂ ಕೋಕೋಪಿಟ್: ತಾಲೂಕಿನ ಬಿಳಿಕೆರೆ ಹೋಬಳಿ ಶೇ.80 ಮಳೆಯಾಶ್ರಿತ ಕೃಷಿ ಪ್ರದೇಶವಾಗಿದೆ. ಹಾಗಾಗಿ, ಈ ಭಾಗದ ರೈತರು ತಂಬಾಕಿಗಿಂತ ತರಕಾರಿ, ಹೂವು, ಹಣ್ಣಿನ ಬೆಳೆಗಳನ್ನು ಬೆಳೆದು ಪಕ್ಕದ ಮೈಸೂರಿಗೆ ತೆರಳಿ ಮಾರಾಟ ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ರೈತರು ಬೆಳೆಯುವ ಪ್ರತಿಯೊಂದು ಬೆಳೆಗೂ ಕೋಕೋಪಿಟ್ ಬಳಸಲು ಆರಂಭಿಸಿದ್ದು, ಉತ್ತಮ ಇಳುವರಿ ಪಡೆಯುತ್ತಿದ್ದಾರೆ.
30 ಕುಟುಂಬಗಳಿಗೆ ಜೀವನ: ಮೋಹನ್ಕುಮಾರ್ ಸ್ಥಾಪಿಸಿರುವ ಘಟಕದಲ್ಲಿ 30ಕ್ಕೂ ಹೆಚ್ಚು ಕೆಲಸಗಾರರು ದುಡಿಯುತ್ತಿದ್ದು, ಅವರಿಗೆ ಸ್ಥಳೀಯವಾಗಿ ಉದ್ಯೋಗ ದೊರಕಿರುವ ಸಮಾಧಾನವಿದೆ. ಪ್ರತಿದಿನ ಕನಿಷ್ಠ 32 ಸಾವಿರ ಕೆಜಿ ಕೋಕೋಪಿಟ್ ತಯಾರಿಸಿ ಮಾರಾಟ ಮಾಡುವ ಮೂಲಕ ದಾಖಲೆ ನಿರ್ವಿುಸಿದ್ದಾರೆ.
ಅಂತಾರಾಜ್ಯ ಮಾರಾಟಗಾರ: ಅತ್ಯಂತ ವೈಜ್ಞಾನಿಕವಾಗಿ, ಗುಣಮಟ್ಟದಿಂದ ಇಸಿ ಮತ್ತು ಪಿಎಚ್ ಲೆವೆಲ್ಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಖಾತ್ರಿಪಡಿಸಿಕೊಂಡು ಅಂತಿಮ ಹಂತದಲ್ಲಿ ಮೈಕ್ರೋನ್ಯೂಟ್ರಿಯೆಂಟ್ಗಳನ್ನು ಸೇರಿಸಿ ಗೊಬ್ಬರ ತಯಾರಿಸಿ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಇದೀಗ ಇವರ ಘಟಕದ ಗೊಬ್ಬರಕ್ಕೆ ಕೇರಳ, ತಮಿಳುನಾಡು, ಮಹಾರಾಷ್ಟ್ರದಲ್ಲೂ ಬೇಡಿಕೆಯಿದೆ. ರಾಜ್ಯದ ಮೈಸೂರು, ಕೊಡಗು, ಚಾಮರಾಜನಗರ, ಹಾಸನ, ಮಂಡ್ಯ, ದಾವಣಗೆರೆ, ಬೆಳಗಾವಿ ಮುಂತಾದ ಜಿಲ್ಲೆಗಳಿಗೆ ಪೂರೈಕೆಯಾಗುತ್ತಿದೆ.
ವಿಶೇಷತೆಗಳು: ತೆಂಗಿನ ನಾರಿನಿಂದ ತಯಾರಾದ ಈ ಗೊಬ್ಬರ ಬಳಕೆಯಿಂದ ಮಣ್ಣಿನಲ್ಲಿ ಗಾಳಿಯಾಡುವಿಕೆ ಹೆಚ್ಚಿಸುತ್ತದೆ. ನೀರಿನ ಅಂಶವನ್ನು ಹೆಚ್ಚು ಕಾಲ ಹಿಡಿದಿಡುವ ಶಕ್ತಿ ಇದೆ. ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಇತ್ತೀಚಿನ ದಿನಗಳಲ್ಲಿ ಶುಂಠಿ ಬೆಳೆಗೂ ಈ ಗೊಬ್ಬರವನ್ನು ರೈತರು ಬಳಸುತ್ತಿದ್ದಾರೆ.