ಜನಮತ| ಉದಾರ ವ್ಯಕ್ತಿತ್ವದ ಉದಾಸಿ

CM-Udasi
Published on

ಸನ್ಮಾನ್ಯ, ಈ ಪದವನ್ನು ಅರ್ಥವತ್ತಾಗಿ ಯಾರಿಗಾದರೂ ಬಳಸಬೇಕು ಅಂದ್ರೆ ಅದು ಕೆಲ ದಿನಗಳ ಹಿಂದೆ ಕೆಲಾಸವಾಸಿಗಳಾದ ಸಿ.ಎಂ. ಉದಾಸಿಯವರಿಗೆ. ಕಾರಣವಿಲ್ಲದೆ ಈ ಮಾತು ಹೇಳ್ತಾ ಇಲ್ಲ. ನನ್ನ ಅನುಭವಕ್ಕೆ ಬಂದ ಒಂದು ಸಂದರ್ಭ. ಕೆಂಗೇರಿಯಿಂದ ತಾವರೆಕೆರೆವರೆಗೆ ರಸ್ತೆ ಇತ್ತು. ರಸ್ತೆ ಅನ್ನೋದಕ್ಕಿಂತ ತಗ್ಗುದಿಣ್ಣೆ, ಕಲ್ಲು, ಮುಳ್ಳು ಹರಡಿದ ದಾರಿ ಅನ್ನೋದೆ ಸರಿ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯಲ್ಲಿ ವಿಚಾರಿಸಿ ಅಂತ ಯಾರೋ ಅಂದರು. ವಿಧಾನಸೌಧದಲ್ಲಿ ಚ್​ೀ ಇಂಜಿನಿಯರ್​ರನ್ನು ಮಾತನಾಡಿಸಿ, "ರಸ್ತೆ ಯಾಕೆ ಹೀಗಿದೆ. ಪ್ರತಿವರ್ಷ ರಸ್ತೆ ರಿಪೇರಿಗೆ ಹಣ ಬಿಡುಗಡೆಯಾಗುತ್ತಿಲ್ಲವಾ?' ಅಂದೆ. "ಆಗುತ್ತೆ' ಅಂದರು. "ಮತ್ತೆ ರಿಪೇರಿ ಯಾಕಾಗಲ್ಲ?' ಅಂದಿದ್ದಕ್ಕೆ ತಲೆ ತಗ್ಗಿಸಿದರು.

"ಹೇಳಿ ಪರ್ವಾ ಇಲ್ಲ' ಎಂದು ಒತ್ತಾಯಿಸಿದಾಗ, "ಅದು ಆಯಾ ಶಾಸಕರಿಗೆ ಸೇರುತ್ತೆ ಮೇಡಮ್​, ಅವರು ಮಾಡಿಸ್ಬೇಕು' ಅಂತಂದ್ರು. "ಅಲ್ಲ ರಸ್ತೆ ಮಾಡೋ ಕೆಲ್ಸ ನಿಮ್ಮದಲ್ವಾ?' ಎಂದೆ. "ನಿಮಗಿದೆಲ್ಲ ತಿಳಿಯೋದಿಲ್ಲ ಬಿಡಿ' ಅಂದ್ರು. ನಿಜ್ವಾಗ್ಲೂ ನನಗೇನೂ ತಿಳಿಯಲಿಲ್ಲ. ಆದರೆ ನನಗೆ ಒಳಗುಟ್ಟು ತಿಳಿಯೋದಕ್ಕಿಂತ ರಸ್ತೆ ಸರಿಯಾಗಬೇಕಿತ್ತು. "ಬಸ್​ ರೂಟ್​ ಬೇರೆ. ಮಕ್ಕಳು, ವೃದ್ಧರು ಎಲ್ಲ ಬಸ್ಸಲ್ಲಿ ಪ್ರಯಾಣಿಸುತ್ತಾರೆ. ಬೆನ್ನೆಲ್ಲ ಬಿದ್ದೋಗುತ್ತೆ. ನನ್ನ ಅನುಭವಾನೂ ಇದೆ, ಏನು ಮಾಡೋದು? ಎಷ್ಟು ವರ್ಷಗಳಿಂದ ಹೀಗೇ ಇದೆ' ಎಂದೆ. ಅವು, "ನಾನೊಂದು ಹೇಳ್ತೀನಿ ಮೇಡಮ್​ ಹಾಗ್ಮಾಡಿ. ನಾನು ರಸ್ತೆ ಮಾಡಿಸ್ತೀನಿ. ಸಾಹೇಬರಿಗೆ ಒಂದು ಪತ್ರ ಬರೆದು ನೀವೇ ಹೋಗಿ ಕೊಟ್ಟು ಒಂದು ಮಾತು ಹೇಳಿದರೆ ಅವರು ಆದೇಶ ಮಾಡುತ್ತಾರೆ. ಆಗ ಕೆಲಸ ಆಗುತ್ತೆ' ಅಂದ್ರು. ಅವು ಹೇಳಿದ ಸಾಹೇಬ್ರು ಉದಾಸಿಯವರು. ಆವಾಗಿನ ಲೋಕೋಪಯೋಗಿ ಮಂತ್ರಿಗಳು. ನಾನು ಆಗಷ್ಟೇ ಎಂಎಲ್​ಸಿಯಾಗಿದ್ದೆ. ನಾನು ಪತ್ರ ಕೆಯಲ್ಲಿ ಹಿಡಿದು ಹೋದ್ರೆ ಅದೆಷ್ಟು ಆಸ್ಥೆಯಿಂದ ಸ್ವೀಕರಿಸಿ, "ಆಯ್ತು ತಾಯಿ ಮಾಡ್ಸೋಣ' ಅಂದ್ರು. ಅವರ ಸರಳತೆ, ಸಜ್ಜನಿಕೆ ನನ್ನನ್ನು ವಿನಮ್ರಳನ್ನಾಗಿಸಿತು. ಕೆಲವೇ ದಿನಗಳಲ್ಲಿ ಇಂಜಿನಿಯರ್​ ಬಂದು "ಮೇಡಮ್​ ಕೆಲಸ ಶುರು ಮಾಡ್ತಾ ಇದೀನಿ' ಅಂತ ಅಂದ್ರು. ನಾಲ್ಕು ತಿಂಗಳಲ್ಲಿ 16 ಕಿಲೋಮೀಟರ್​ ರಸ್ತೆಯನ್ನು ಸಮರ್ಪಕವಾಗಿ ಮಾಡಿ ಮುಗ್ಸಿದ್ರು. ಹಾನಗಲ್ಲಿಗೆ ಒಮ್ಮೆ ಅವರು ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು.

ತಮ್ಮ ಮನೆಗೂ ಆಹ್ವಾನಿಸಿದ್ರು. ಅಲ್ಲಿನ ಜನ ಹೇಳಿದ್ದು, "ಇವರು ಮಂತ್ರಿಯಾದ್ಮೇಲೆ ನಮ್ಮ ಊರಿಗೆ ಒಳ್ಳೆಯ ರಸ್ತೆಗಳಾಗಿವೆ. ನೋಡಿ ಎಷ್ಟು ಕೆಲ್ಸ ಮಾಡ್ತಿದಾರೆ ನಮ್ಮ ಉದಾಸಿಯವರು'. ಮಿತಭಾಷಿಯಾಗಿದ್ದ ಉದಾಸಿ ಕಾರ್ಯತತ್ಪರತೆಯಿಂದ, ಸೌಮ್ಯ ಸ್ವಭಾವದಿಂದ ಎಲ್ಲರ ಗೌರವಾದರಗಳನ್ನು ಗಳಿಸಿದ್ದರು. ಅವರಂಥ ನಿಗರ್ವಿ ಕಾರ್ಯಶೀಲ ಮಂತ್ರಿಗಳು ವಿರಳ. ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಗೌರವಪೂರ್ಣ ನಮನಗಳು.

| ಡಾ.ಎಸ್​.ಆರ್​.ಲೀಲಾ ವಿಧಾನ ಪರಿಷತ್​ ಮಾಜಿ ಸದಸ್ಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net