

ಐಬಿಪಿಎಸ್ ಪರೀಕ್ಷೆಗಳು ಇಲ್ಲಿವರೆಗೆ ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ನಡೆಯುತ್ತಿದ್ದವು. ಕನ್ನಡ ಸೇರಿ ಅನೇಕ ಭಾಷೆಗಳ ಹೋರಾಟದ ಪರಿಣಾಮವಾಗಿ ಆರ್ಬಿಐ ನಿರ್ದೇಶನದ ಮೇರೆಗೆ ಆರ್ಥಿಕ ಇಲಾಖೆ ಇತ್ತೀಚೆಗಷ್ಟೆ ಕನ್ನಡ ಸೇರಿ 13 ಭಾಷೆಗಳಲ್ಲಿ ಪರೀಕ್ಷೆ ನಡೆಸುತ್ತಿದೆ. ಇದು ಸಂತಸದ ಸಂಗತಿ. ಕನ್ನಡಿಗರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಕನ್ನಡದಲ್ಲಿ ಪರೀಕ್ಷೆ ಅವಕಾಶವನ್ನು ಕ್ಲರಿಕಲ್ ಹುದ್ದೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಧಿಕಾರಿ ಹುದ್ದೆಗಳಿಗೆ ಇಂಗ್ಲಿಷ್ ಹಾಗೂ ಹಿಂದಿಯೇ ಉಳಿದುಕೊಂಡಿದೆ. ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ ನೀಡಿದ್ದು ಸಂತಸದ ಸಂಗತಿಯಾದರೂ, ಕರ್ನಾಟಕದಲ್ಲಿರುವ ಹುದ್ದೆಗಳಲ್ಲಿ ಕನ್ನಡಿಗರಿಗೆ ಇಂತಿಷ್ಟು ಹುದ್ದೆಗಳನ್ನು ಮೀಸಲಿಡುವ ಕುರಿತು ಸರ್ಕಾರ ಆಲೋಚಿಸಬೇಕು. ಈ ಮೂಲಕ ಕನ್ನಡಿಗ ಅಭ್ಯರ್ಥಿಗಳಿಗೆ ಹೆಚ್ಚು ಅವಕಾಶ ನೀಡಬೇಕು ಎಂದು ಮನವಿ ಮಾಡುತ್ತೇನೆ.
ಆಯ್ಕೆ ಮಾದರಿ: ಬ್ಯಾಂಕ್ನಲ್ಲಿ ಕ್ಲರಿಕಲ್ ಹುದ್ದೆ ಹಾಗೂ ಪಿಒ ಹುದ್ದೆಗಳ ಜತೆಗೆ ಸ್ಪೆಷಲಿಸ್ಟ್(ಎಸ್ಒ) ಹುದ್ದೆಗಳಿಗೂ ಆಯ್ಕೆ ಮಾಡಿಕೊಳ್ಳುತ್ತಾರೆ. ವರ್ಷಕ್ಕೆ ಒಂದೇ ಬಾರಿ ಈ ಆಯ್ಕೆಗಳು ನಡೆಯುತ್ತವೆ. ಕ್ಲರಿಕಲ್ ಹುದ್ದೆಗೆ ಪ್ರಿಲಿಮ್್ಸ, ಮೈನ್ಸ್ ಮಾತ್ರ ಇರುತ್ತದೆ. ಅಧಿಕಾರಿ ಹುದ್ದೆಗೆ ಇವೆರಡರ ಜತೆಗೆ ಸಂದರ್ಶನ ಇರುತ್ತದೆ. ಇಲ್ಲಿವರೆಗೆ ಐಬಿಪಿಎಸ್ನಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ಮಾತ್ರ ನೀಡಲಾಗುತ್ತಿತ್ತು. ಇದೀಗ ಎಸ್ಬಿಐ ಮಾದರಿಯಲ್ಲಿ ಪ್ರಬಂಧ ಹಾಗೂ ಪತ್ರ ಬರೆಯುವ ಮಾದರಿಯನ್ನೂ ಹೊಂದಿರುತ್ತವೆ.
ಪೆನ್ನು ಪೇಪರ್ ಕೆಲಸ ಅಲ್ಲ: ಬ್ಯಾಂಕಿಂಗ್ ಕೆಲಸ ಎಂದ ಕೂಡಲೆ ಅನೇಕರು, ಇದು ಟೇಬಲ್ ಎದುರು ಕುಳಿತು ಪೆನ್ನು ಪೇಪರ್ ಮೂಲಕ ನಡೆಸುವ ಕೆಲಸ ಎಂದು ಮೂಗು ಮುರಿಯುತ್ತಾರೆ. ಆದರೆ ಈಗ ಬ್ಯಾಂಕಿಂಗ್ ಹುದ್ದೆಗಳ ಮಾದರಿ ಬದಲಾಗಿದೆ. ತಾಂತ್ರಿಕ ಶಿಕ್ಷಣ ಪಡೆದವರಾಗಿದ್ದರೆ ಬ್ಯಾಂಕ್ನಲ್ಲೆ ಐಟಿ ಅಧಿಕಾರಿ ಆಗಬಹುದು. ಬಿಎಸ್ಸಿ ಕೃಷಿ ಓದಿದ್ದರೆ ಕೃಷಿ ಅಧಿಕಾರಿಯಾಗಬಹುದು. ಹಿಂದಿ ವ್ಯಾಸಂಗ ಮಾಡಿದ್ದರೆ ರಾಜಭಾಷಾ ಅಧಿಕಾರಿ ಆಗಬಹುದು. ಎಲ್ಎಲ್ಬಿ ಓದಿದ್ದರೆ ಕಾನೂನು ಅಧಿಕಾರಿ ಆಗಬಹುದು. ಇತ್ತೀಚೆಗೆ ಹೊಸ ಸೇರ್ಪಡೆ ಎಂದರೆ, 2016ರಿಂದ ಬ್ಯಾಂಕ್ಗಳಲ್ಲೆ ಆಫೀಸ್ ಅಟೆಂಡೆಂಟ್ ನೇಮಕವೂ ಆಗುತ್ತಿದೆ. 10ನೇ ತರಗತಿ ಪಾಸಾದವರು ಗ್ರೂಪ್ ಡಿ ಹಾಗೂ ಸಿ ಹುದ್ದೆಗಳಿಗೆ ನೇಮಕ ಆಗಬಹುದು.
ವಯೋಮಿತಿ ವಿವರ: ಸಾಮಾನ್ಯ ಅಭ್ಯರ್ಥಿಗಳಿಗೆ, ಕ್ಲರಿಕಲ್ ಹುದ್ದೆಗೆ 20-28 ವರ್ಷ, ಪ್ರೊಬೆಷನರಿ ಅಧಿಕಾರಿ ಹುದ್ದೆಗೆ 20-30 ವರ್ಷ, ಎಸ್ಬಿಐ ಪಿಒ ಹುದ್ದೆಗೆ 21-30 ವರ್ಷ ವಯೋಮಿತಿ ಇದೆ. ಎಲ್ಲ ಹುದ್ದೆಗಳಿಗೂ ಒಬಿಸಿ ಅಭ್ಯರ್ಥಿಗಳಿಗೆ ಹೆಚ್ಚುವರಿ ಮೂರು ವರ್ಷ, ಎಸ್ಸಿಎಸ್ಟಿ ಅಭ್ಯರ್ಥಿಗಳಿಗೆ ಹೆಚ್ಚುವರಿ 5 ವರ್ಷ ವಿನಾಯಿತಿ ನೀಡಲಾಗುತ್ತದೆ.
ಪ್ರಶ್ನೆಪತ್ರಿಕೆ ದೋಷರಹಿತವಾಗಿರಲಿ: ಕನ್ನಡದಲ್ಲಿ ಪ್ರಶ್ನೆ ಪತ್ರಿಕೆ ನೀಡುತ್ತಾರಾದರೂ ಅದರಲ್ಲಿ ಅನೇಕ ದೋಷಗಳಿರುವುದು ಬೇಸರದ ಸಂಗತಿ.ಈ ಕುರಿತು ಹಿಂದಿನಿಂದಲೂ ಸಂಸ್ಥೆಗೆ ತಿಳಿಸುತ್ತಿದ್ದೇವೆ. ದೋಷವಿಲ್ಲದಂತೆ ಪ್ರಶ್ನೆಪತ್ರಿಕೆ ನೀಡಲಿ ಎಂದು ಮನವಿ ಮಾಡುತ್ತೇವೆ.
ವೇತನದ ವಿವರ: ಬ್ಯಾಂಕಿಂಗ್ ಹುದ್ದೆಗಳಲ್ಲಿ ವೇತನ ಪ್ರಮಾಣ ಸಾಕಷ್ಟು ಗೌರವಯುತ ಮಟ್ಟದಲ್ಲಿದೆ ಎಂಬುದೂ ಅನೇಕರನ್ನು ಆಕರ್ಷಿಸುತ್ತಿದೆ. ಕ್ಲರಿಕಲ್ ಹುದ್ದೆಗೆ ಮಾಸಿಕ ಒಟ್ಟು ವೇತನ 35,000 ರೂ.ನಿಂದ ಆರಂಭವಾಗುತ್ತದೆ. ಪಿಒ ಹುದ್ದೆಗೆ 52,630 ರೂ., ಎಸ್ಬಿಐ ಪಿಒ ಹುದ್ದೆಗೆ 68,577 ರೂ. ಇದೆ. ಪದವಿ ಕಾಲೇಜುಗಳಲ್ಲಿ ಯುಜಿಸಿ ಹಂತದ ವೇತನ ಪಡೆಯುವುದಕ್ಕೆ ಬಹುತೇಕ ಸಮಾನವಾದ ವೇತನವನ್ನು ಪದವಿ ವ್ಯಾಸಂಗ ಮಾಡಿದವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪಡೆಯುತ್ತಾರೆ.
ವಿಷಯದಲ್ಲಿ ಬದಲಾವಣೆ: ಮೇನ್ಸ್ ಪರೀಕ್ಷೆಯಲ್ಲಿ ರೀಸನಿಂಗ್ ಜತೆಗೆ ಕಂಪ್ಯೂಟರ್ ಜ್ಞಾನ ಸೇರ್ಪಡೆಯಾಗಿದೆ. ಸಾಮಾನ್ಯ ಇಂಗ್ಲಿಷ್, ಆರ್ಥಿಕ ಜ್ಞಾನದ ಜತೆಗೆ ಪಿಒ ಹುದ್ದೆಗಳಿಗೆ ಪ್ರಬಂಧ ಬರವಣಿಗೆ ಹಾಗೂ ಪತ್ರ ಬರಹ ಸಹ ಇರುತ್ತದೆ.
ಪರೀಕ್ಷೆ ಎದುರಿಸುವ ಮಿತಿ: ಐಬಿಪಿಎಸ್ನಲ್ಲಿ ಪರೀಕ್ಷೆ ಎದುರಿಸಲು ಯಾವುದೇ ಮಿತಿ ಇಲ್ಲ. ಎಷ್ಟು ಬಾರಿಯಾದರೂ ಪರೀಕ್ಷೆ ಬರೆಯಬಹುದು. ಎಸ್ಬಿಐನಲ್ಲಿ ಜನರಲ್ ವರ್ಗದವರಿಗೆ 4, ಒಬಿಸಿ 7 ಬಾರಿ ಪರೀಕ್ಷೆ ಬರೆಯಬಹುದು ಹಾಗೂ ಎಸ್ಸಿಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ಮಿತಿಯಿಲ್ಲ.
ಅತಿ ಕಡಿಮೆ ಸಮಯ: ಐಬಿಪಿಎಸ್ ಪರೀಕ್ಷೆಯಲ್ಲಿ ಈ ಮೊದಲು 60 ನಿಮಿಷದಲ್ಲಿ 100 ಪ್ರಶ್ನೆ ಎದುರಿಸಬೇಕಿತ್ತು. ಪ್ರತಿ ಪ್ರಶ್ನೆಗೆ 36 ಸೆಕೆಂಡ್ ಸಿಗುತ್ತಿತ್ತು. ಈಗ ಸೆಕ್ಷನ್ವಾರು ಸಮಯ ನೀಡಿದ್ದಾರೆ. ಅಂದರೆ ಉದಾಹರಣೆಗೆ ಇಂಗ್ಲಿಷ್ಗೆ 20 ನಿಮಿಷ ನೀಡಿದ್ದಾರೆ. ಎಷ್ಟು ಬೇಗನೆ ಈ ವಿಷಯದ ಉತ್ತರ ನೀಡಿದರೂ ಉಳಿದ ಸಮಯದ ನಂತರವೇ ಮುಂದಿನ ವಿಷಯ ಪರಿಹರಿಸಬಹುದು. ನೆಗೆಟಿವ್ ಮಾರ್ಕಿಂಗ್ ಸಹ ಇರುತ್ತದೆ. ಐಬಿಪಿಎಸ್ ಆರ್ಆರ್ಬಿ ನೇಮಕಾತಿಯಲ್ಲಿ ಪ್ರತಿ ಪ್ರಶ್ನೆಗೆ ಕೇವಲ 31.75 ಸೆಕೆಂಡ್ ಸಿಗುತ್ತದೆ. ಇಷ್ಟೇ ಸಮಯದಲ್ಲಿ ಪ್ರಶ್ನೆಯನ್ನು ಓದಿ, ಅರ್ಥೈಸಿಕೊಂಡು, ಉತ್ತರ ಆಲೋಚಿಸಿ, ಮರು ಆಲೋಚಿಸಿ, ತಪು್ಪಗಳಿದ್ದರೆ ಸರಿಪಡಿಸಬೇಕಾದ ಸವಾಲು ಇರುತತದೆ. ಸರ್ಕಾರಿ ಹುದ್ದೆಗಳಲ್ಲಿ ಅತ್ಯಂತ ಕಡಿಮೆ ಕಾಲಾವಕಾಶ ನೀಡುವ ಪರೀಕ್ಷೆ ಐಬಿಪಿಎಸ್.
14,000 ಹುದ್ದೆಗಳ ಮಹಾ ನೇಮಕಾತಿ: ಈ ಬಾರಿಯ ನೇಮಕಾತಿಗಳ ಭರ್ತಿಗೆ 5,858 ಕ್ಲರಿಕಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈಗ 2,000 ಹುದ್ದೆಗಳನ್ನು ಹೆಚ್ಚಿಸಿ 7,858 ಹುದ್ದೆಗಳಿಗೆ ನೇಮಕ ಮಾಡುತ್ತಿದ್ದಾರೆ. ಪಿಒ, ಎಸ್ಬಿಐ ಪಿಒ- ಸೇರಿ ಈ ಬಾರಿ ಬರೋಬ್ಬರಿ 14 ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಆಂಗ್ಲಭಾಷೆ, ಸಾಮಾನ್ಯ ಜ್ಞಾನ ತುಂಬಾ ಕಷ್ಟ. ಎಷ್ಟು ಮತ್ತು ಯಾವ ರೀತಿ ಓದಬೇಕೆಂದು ತಿಳಿಯುತ್ತಿಲ್ಲ. ಟಿಪ್ಸ್ ಕೊಡಿ.
ವಿಷಯ ಯಾವುದೇ ಇರಲಿ, ಪ್ರಶ್ನೆ ಪತ್ರಿಕೆಯ ಮಾದರಿಯನ್ನು ಚೆನ್ನಾಗಿ ಫಾಲೋ ಮಾಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಳೇ ಪ್ರಶ್ನೆ ಪತ್ರಿಕೆಗಳಲ್ಲಿರುವುದನ್ನೇ ಹೆಚ್ಚಾಗಿ ಮರಳಿ ಕೇಳುತ್ತಾರೆ. ಮತ್ತೆ, ಯಾವುದೋ ಒಂದು ವಿಷಯದಲ್ಲಿ ಪಾಸಾದಲ್ಲಿ, ಸಾಲುವುದಿಲ್ಲ. ಎಲ್ಲ ವಿಷಯದಲ್ಲೂ ಪಾಸ್ ಆಗಬೇಕು. ಹಳೇ ಪ್ರಶ್ನೆ ಪತ್ರಿಕೆಗಳನ್ನೇ ಹೆಚ್ಚಾಗಿ ಓದಬೇಕು.
ಪ್ರಬಂಧಕ್ಕೆ ವಿಷಯದ ಆಯ್ಕೆ, ಹೆಚ್ಚು ಅಂಕ ದೊರೆಯುವಂತೆ ಬರೆಯುವುದು ಹೇಗೆ?
ಸಾಮಾನ್ಯವಾಗಿ ಪ್ರಚಲಿತ ಆರ್ಥಿಕತೆ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡಬೇಕು. ಹಳೇ ಮಾದರಿಯಲ್ಲಿ ಬರೆಯುವುದನ್ನು ಬಿಡಿ. ಪತ್ರಿಕೆಗಳಲ್ಲಿ ಅಂಕಣಕಾರರು ಬರೆಯುವ ಶೈಲಿಯನ್ನು ಅನುಸರಿಸಿ. ಸೃಜನಾತ್ಮಕತೆಗೆ ಹೆಚ್ಚಿನ ಅಂಕಗಳಿರಲಿದೆ.
ನಾನು ಆಂಗ್ಲ ಭಾಷೆಯಲ್ಲಿ ವೀಕ್ ಇದ್ದೇನೆ. ಸ್ಟ್ರಾಂಗ್ ಮಾಡಲು ಟಿಪ್ಸ್ ಕೊಡಿ.
ಆಂಗ್ಲ ಭಾಷೆಯಲ್ಲಿ ವೀಕ್ ಇದ್ದೇನೆ ಎಂಬ ಮನೋಕಲ್ಪನೆ ಬಿಟ್ಟು ಬಿಡಿ. ಕನ್ನಡದಲ್ಲಿ ಸ್ಟ್ರಾಂಗ್ ಇದ್ದೀರಲ್ವಾ,, ಅದನ್ನು ಆಲೋಚನೆ ಮಾಡಿ. ಮಾತೃಭಾಷೆ ಕಲಿತ ವ್ಯಕ್ತಿ ಯಾವುದೇ ವಿಷಯವನ್ನೂ ಸುಲಭವಾಗಿ ಕಲಿಯಬಲ್ಲ ವನಾಗಿರುತ್ತಾನೆ. ಆಂಗ್ಲಭಾಷೆ ಕಲಿಯುವುದಕ್ಕೆ ಪುಸ್ತಕ ಓದುವುದಕ್ಕಿಂತ ಬದ ಲಾಗಿ ಪತ್ರಿಕೆಗಳನ್ನು ಓದಿ. ನ್ಯೂಸ್ ಚಾನೆಲ್ಗಳನ್ನು ನೋಡಿ. ಸಾಧ್ಯವಾದಷ್ಟು ಸ್ನೇಹಿತರ ಜತೆಗೆ ಆಂಗ್ಲಭಾಷೆಯಲ್ಲೇ ಮಾತನಾಡುವುದಕ್ಕೆ ಮುಂದಾಗಿ.
ಬ್ಯಾಂಕ್ ಹುದ್ದೆಗಳಿಗೆ ಕನ್ನಡಿಗರು ಆಯ್ಕೆಯಾಗುವ ಸಂಖ್ಯೆ ಕಡಿಮೆ ಏಕೆ?
ಕನ್ನಡಿಗರಿಗೆ ಆಂಗ್ಲ ಭಾಷೆಯ ಭಯ ಇನ್ನೂ ಕಡಿಮೆಯಾಗಿಲ್ಲ ಎಂಬುದು ಒಂದು ಕಾರಣ. ಪಠ್ಯಕ್ರಮದ ಅವ್ಯವಸ್ಥೆಯಿಂದ ಕೂಡಿರುವುದು ಮತ್ತೊಂದು ಕಾರಣವಾಗಿದೆ. ನೆರೆ ರಾಜ್ಯಗಳಲ್ಲಿ ಒಂದೇ ಪಠ್ಯಕ್ರಮ ವ್ಯಾಸಂಗ ಮಾಡಿದರೆ ಸಾಕು ಅದೇ ಎಲ್ಲ ನೇಮಕಾತಿಗೂ ಸರಿಯಾಗಲಿದೆ. ಇಲ್ಲಿ, ಪ್ರತಿಯೊಂದು ಪ್ರತಿ ವಿಷಯವನ್ನು ವ್ಯಾಸಂಗ ಮಾಡಬೇಕು. ಪರೀಕ್ಷೆ ಬರೆದು ಹುದ್ದೆ ಸಿಗಲಿಲ್ಲವಾದರೆ, ಅವನು ರೋಸಿ ಹೋಗಿರುತ್ತಾನೆ. ಮರಳಿ ಪ್ರಯತ್ನಕ್ಕೆ ಮುಂದಾಗುವುದಿಲ್ಲ.
ಮಾಕ್ ಟೆಸ್ಟ್ನಲ್ಲಿ ಅಂಕ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು?
ಅಭ್ಯಾಸದ ಹೊರತಾಗಿ ಬೇರೆ ಏನು ಮಾಡುವುದಕ್ಕೆ ಆಗುವುದಿಲ್ಲ. ಹಳೇ ಪ್ರಶ್ನೆ ಪತ್ರಿಕೆಯನ್ನು ಚೆನ್ನಾಗಿ ಅಭ್ಯಾಸ ಮಾಡಿ. ಕಾನ್ಸೆಫ್ಟ್ ಅರ್ಥ ಮಾಡಿಕೊಂಡು ಉತ್ತರ ನೀಡಿ.
ನಾನು ಸಾಕಷ್ಟು ವರ್ಷದಿಂದ ಪರೀಕ್ಷೆ ಬರೆಯುತ್ತಿದ್ದೇನೆ. ಆದರೆ, ಪಾಸ್ ಆಗುತ್ತಿಲ್ಲ ಏನು ಮಾಡಬೇಕು?
ಹಳೇ ಪ್ರಶ್ನೆ ಪತ್ರಿಕೆಯೊಂದಿಗೆ ಅಭ್ಯಾಸ ಮಾಡಬೇಕು. ವಿವಿಧ ವೆಬ್ಸೈಟ್ ನೋಡಬೇಕು. ಇತ್ತೀಚಿನ ದಿನಗಳಲ್ಲಿ ಯಾವ ಟ್ರೆಂಡ್ ಇದೆ ಎಂದು ತಿಳಿದು ಇದರ ಬಗ್ಗೆ ಅಭ್ಯಾಸ ನಡೆಸಿದರೆ, ಪಾಸ್ ಆಗಬಹುದು.
ಕೊಟ್ಟಿರುವ ಅವಧಿಯಲ್ಲಿ ಪ್ರಶ್ನೆ ಪತ್ರಿಕೆಗೆ ಉತ್ತರಿಸುವುದು ಕಷ್ಟ ಅಲ್ವ?
ಒಂದು ಪ್ರಶ್ನೆಗೆ ಉತ್ತರಿಸಲು 36 ಸೆಕೆಂಡ್ ನೀಡಲಾಗಿದೆ. ಸಾಮಾನ್ಯವಾಗಿ ಉತ್ತರಿಸಲು 3 - 6 ಸೆಕೆಂಡ್ ಸಾಕು. ಕಾನ್ಸೆಪ್ಟ್ ಅರಿಯದ ಹೊರತು ಶೀಘ್ರವಾಗಿ ಉತ್ತರಿಸುವುದು ಕಷ್ಟ. ಸಾರ್ಟ್ಕಟ್ ಕಲಿಯಬೇಕು.
ಬಹುತೇಕರು ರಿಸರ್ವ್ ಲಿಸ್ಟ್ನಲ್ಲಿದ್ದು, ಇದನ್ನು ಪ್ರಶ್ನಿಸಿ ಕೋರ್ಟ್ನಲ್ಲಿ ದಾವೆ ಹೂಡಿ ಕೆಲಸ ಪಡೆಯಬಹುದಾ?
ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಚೆನ್ನಾಗಿ ಓದಿಕೊಳ್ಳಬೇಕು. ಈ ಹಿಂದೆ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ಕೆಲಸ ತೆಗೆದುಕೊಂಡಿದ್ದರು. ಆನಂತರ ಇದನ್ನು ಪ್ರಶ್ನಿಸಿ ಅಭ್ಯರ್ಥಿಗಳು ಕೇಸು ದಾಖಲು ಮಾಡಿದ್ದಕ್ಕೆ, ಬಹುತೇಕರು ಕೆಲಸ ಕಳೆದುಕೊಂಡರು. ಹೈಕೋರ್ಟ್ಗೆ ಹೋಗುವುದಾದರೆ, ನಿಗದಿತ ಅವಧಿಯಲ್ಲೇ ಹೋಗಬೇಕು.
ಕಂಪ್ಯೂಟರ್ ಕಲಿಯದಿದ್ದರೆ, ಹಿನ್ನಡೆ ಆಗಲಿದೆಯಾ?
ಸಾಕಷ್ಟು ವರ್ಷಗಳ ಹಿಂದೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಂಪ್ಯೂಟರ್ ಸಾಕ್ಷರತೆಯನ್ನು ಕಡ್ಡಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಬೇಸಿಕ್ ಕಂಪ್ಯೂಟರ್ ಕೋರ್ಸ್ ಮಾಡಿಕೊಳ್ಳುವುದು ಉತ್ತಮ.
ನಾನು ಬಿ.ಕಾಂ ಪೂರ್ಣಗೊಳಿಸಿದ್ದೇನೆ. ಬ್ಯಾಂಕ್ ಪರೀಕ್ಷೆಗೆ ಸಿದ್ಧತೆ ಹೇಗೆ ನಡೆಸುವುದು? ಎಷ್ಟು ಸಮಯ ಬೇಕು?
ಕನಿಷ್ಠ 6ರಿಂದ 8 ತಿಂಗಳು ಬೇಕೇ ಬೇಕು. ಅಭ್ಯರ್ಥಿಗಳ ಜ್ಞಾನದ ಶಕ್ತಿಯ ಆಧಾರದ ಮೇಲೆ ಅವಧಿ ನಿಗದಿಯಾಗಲಿದೆ. ಕೆಲವು 3-4 ವರ್ಷ ತೆಗೆದುಕೊಳ್ಳುವವರು ಸಹ ಇದ್ದಾರೆ. ಪರೀಕ್ಷೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ತರಬೇತಿ ಪಡೆದುಕೊಳ್ಳುವುದು ಅಗತ್ಯ.
ಬ್ಯಾಂಕಿಂಗ್ ನೇಮಕಾತಿಯಲ್ಲಿ ನಾವು ಎಷ್ಟೇ ಚೆನ್ನಾಗಿ ಉತ್ತರ ನೀಡಿದರೂ, ಕನ್ನಡಿಗರಿಗೆ ಆದ್ಯತೆ ಕಡಿಮೆ ಏಕೆ?
ನಿಜ ಈ ರೀತಿಯ ಮಾತುಗಳು ಹಲವಾರು ಅಭ್ಯರ್ಥಿಗಳಿಂದ ಕೇಳಿ ಬಂದಿವೆ. ಇದಕ್ಕೆ ಪರಿಹಾರ ಸಿಗಬೇಕಾದರೆ, ರಾಜ್ಯದಲ್ಲಿರುವ ಹುದ್ದೆಗಳು ರಾಜ್ಯದ ಅಭ್ಯರ್ಥಿಗಳಿಗೆಂದು ಮೀಸಲಿಡಬೇಕು. ಇದಕ್ಕೆ ರಾಜಕಾರಣಿಗಳು ಮತ್ತು ಕನ್ನಡ ಪರ ಸಂಘಟನೆಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ಅಭ್ಯರ್ಥಿಗಳು ಆತ್ಮವಿಶ್ವಾಸ ಕಳೆದುಕೊಳ್ಳಬಾರದು.
ಬ್ಯಾಂಕ್ ಪರೀಕ್ಷೆಗಳಿಗೆ ಯಾವ ರೀತಿಯಲ್ಲಿ ಸಿದ್ಧತೆ ನಡೆಸಬೇಕು.?
ರಾಜ್ಯ ಮತ್ತು ಕೇಂದ್ರ ಪಠ್ಯಪುಸ್ತಕವನ್ನು ಚೆನ್ನಾಗಿ ಅಭ್ಯಾಸ ಮಾಡಬೇಕು. ಕೇವಲ ಕೋಚಿಂಗ್ ಸೆಂಟರ್ ಮಾತ್ರವಲ್ಲ. ಕನ್ನಡ ಪರ ಸಂಘಟನೆಗಳು ಮಾತ್ರವಲ್ಲ. ಕೆಲವು ಸರ್ಕಾರದ ಇಲಾಖೆಗಳು ಮೂಲಕ ಉಚಿತವಾದ ತರಬೇತಿ ನೀಡುತ್ತಿದ್ದು, ಇದನ್ನು ಬಳಕೆ ಮಾಡಿಕೊಳ್ಳಬೇಕು. ವಿಜಯವಾಣಿ ಪತ್ರಿಕೆ ಪ್ರಕಟಿಸುತ್ತಿರುವ 1 ರೂ. ಬೆಲೆಯ ವಿಜಯವಾಣಿ ‘ವಿದ್ಯಾರ್ಥಿ ಮಿತ್ರ’ ಓದಿ.