

| ಭಾರತಿ. ಎ ಕೊಪ್ಪ
ಲತಾಳಿಗೆ ಸ್ನೇಹಿತೆಯರು ಮನೆಗೆ ಕರೆದಾಗ, ಸಂಬಂಧಿಕರ ಮನೆಯ ಯಾವುದಾದರು ಕಾರ್ಯಕ್ರಮಗಳಿಗೆ ಕರೆದಾಗ ಹೋಗಲು ಬಹಳ ಇಷ್ಟ. ಆದರೆ ಪತಿ ಯಾವಾಗಲೂ ವ್ಯಾಪಾರ-ವ್ಯವಹಾರದಲ್ಲಿ ಬ್ಯುಸಿ ಇರುವ ಕಾರಣದಿಂದ ಅವರಿಗೆ ಎಲ್ಲಿಗೂ ಕರೆದುಕೊಂಡು ಹೋಗಲು ಸಮಯವಿಲ್ಲ. ಹೋಗಬೇಕೆನಿಸಿದರೆ ಆಟೋದಲ್ಲೋ, ಟ್ಯಾಕ್ಸಿಯಲ್ಲೋ ಹೋಗು ಎಂಬ ಸಲಹೆ. ಆ ಸಂದರ್ಭದಲ್ಲೆಲ್ಲ ನಾನು ಒಂದು ದ್ವಿಚಕ್ರ ವಾಹನ ಓಡಿಸಲು ಕಲಿತಿದ್ರೆ ಈ ರೀತಿ ಎಲ್ಲ ಕೆಲಸಗಳಿಗೂ ಪತಿಯ ಕಾರನ್ನೇ ಕಾಯುವುದು ಬೇಡವಿತ್ತು ಎಂಬ ಚಿಂತನೆ ಲತಾಳ ಮನದಲ್ಲಿ ಮೂಡುತ್ತಿತ್ತು. ಆದರೆ ಟು ವೀಲರ್ ಓಡಿಸುವಾಗ ಅಪಘಾತವಾದರೆ? ನನಗೆ ಕಲಿಯಲು ಸಾಧ್ಯವೆ? ಈ ರೀತಿಯ ಭಯ ಅವಳನ್ನು ಟು ವೀಲರ್ ರೈಡಿಂಗ್ ಕಲಿಯದಂತೆ ತಡೆಯುತ್ತಿತ್ತು.
ಬದಲಾದ ಕಾಲಘಟ್ಟದಲ್ಲಿ ಮಹಿಳೆಯರ ದೈನಂದಿನ ಜೀವನದಲ್ಲಿ ಆಪ್ತ ಸಂಗಾತಿಯಂತೆ ದ್ವಿಚಕ್ರ ವಾಹನಗಳು ಬೇಕು. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಒಮ್ಮೊಮ್ಮೆ ಸಹಪ್ರಯಾಣಿಕರಿಂದ, ಕಾಡುವ ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಸ್ವತಃ ಒಂದು ಸ್ಕೂಟರ್ ಅಥವಾ ಬೈಕ್ ಇದ್ದರೆ ಓಡಾಟ ಆರಾಮವಾಗುತ್ತದೆ. ಮನೆಯ ಮಕ್ಕಳಿಗಂತೂ ಅಮ್ಮನ ಬೈಕಿನಲ್ಲಿ ಹಿಂದೆ ಕುಳಿತುಕೊಂಡು ಹೋಗುವುದೆಂದರೆ ಅಂಬಾರಿಯಲ್ಲಿ ಕುಳಿತಷ್ಟು ಹೆಮ್ಮೆ. ತನ್ನ ಸಂತೋಷಕ್ಕೆ ಮಾತ್ರವಲ್ಲದೆ ಮುದ್ದಿನ ಮಕ್ಕಳ ಸಂತೋಷದ ಪ್ರಯಾಣಕ್ಕೂ ಅಮ್ಮನ ದ್ವಿಚಕ್ರ ವಾಹನ ನೆರವಾಗುತ್ತದೆ. ಔದ್ಯೋಗಿಕ ರಂಗದಲ್ಲಿರುವ ಮಹಿಳೆಯರಿಗೆ ಕ್ಯಾಬ್ಗಾಗಿ ಕಾಯುವ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸಮಯಕ್ಕೆ ಹೊಂದಿಕೊಂಡು ಹೋಗುವ ಬವಣೆ ತಪ್ಪಿಸಿ, ತಮ್ಮ ಕೆಲಸಗಳಿಗೆ ತಾವೇ ಸಮಯ ಹೊಂದಾಣಿಕೆ ಮಾಡಿಕೊಳ್ಳಲು ಟು ವೀಲರ್ ಎಂಬುದೊಂದು ಸ್ನೇಹಿತೆ ಇದ್ದಂತೆ. ಗೃಹಿಣಿಯಾಗಿ ಮನೆಯ ಜವಾಬ್ದಾರಿ ನಿಭಾಯಿಸುವಲ್ಲಿ ಪ್ರತಿಯೊಂದು ಸಣ್ಣಪುಟ್ಟ ವಸ್ತುಗಳ ಖರೀದಿಗೂ ಮನೆಯ ಗಂಡಸರ ಕಾರು ಅಥವಾ ಬೈಕಿಗೆ ಕಾದು, ಅವರ ಸಮಯ ಮತ್ತು ನಮ್ಮ ಸಮಯ ಎರಡೂ ವ್ಯರ್ಥವಾಗುವುದನ್ನು ತಪ್ಪಿಸಲು ದ್ವಿಚಕ್ರ ವಾಹನ ಸಮಯಕ್ಕಾಗುವ ಸಹವರ್ತಿ!
ಸವಾರರ ಸಂಖ್ಯೆ ಏರಿಕೆ: ಮೋಟಾರ್ ಸೈಕಲ್ ಇಂಡಸ್ಟ್ರಿ ಕೌನ್ಸಿಲ್ ಆಫ್ ಇಂಡಿಯಾ ಇತ್ತೀಚೆಗೆ ನಡೆಸಿದ ರಾಷ್ಟ್ರೀಯ ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಸರಿಸುಮಾರು 20% ಮೋಟಾರ್ ಸೈಕಲ್ ರೈಡರ್ಗಳು ಮಹಿಳೆಯರಾಗಿದ್ದಾರೆ. ಇತ್ತೀಚಿನ ಮತ್ತೊಂದು ಸಮೀಕ್ಷೆಯ ಪ್ರಕಾರ ಪ್ರತಿ ನಾಲ್ಕು ಸ್ಕೂಟರ್ ಮಾರಾಟದಲ್ಲಿ ಒಂದು ಸ್ಕೂಟರ್ ಖರೀದಿ ಮಾಡುವವರು ಮಹಿಳೆಯರೇ ಆಗಿದ್ದಾರೆ. ಅದರಲ್ಲೂ 64% ಸ್ಕೂಟರ್ ಖರೀದಿಸುವ ಮಹಿಳೆಯರು 30 ವಯಸ್ಸು ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರೇ ಆಗಿದ್ದಾರೆ. ಈ ಅಂಕಿ-ಅಂಶ ಯುವತಿಯರು ಹೆಚ್ಚಾಗಿ ದ್ವಿಚಕ್ರ ವಾಹನ ಸವಾರಿ ಮಾಡುವುದರಲ್ಲಿ ಒಲವು ತೋರಿಸುತ್ತಿದ್ದಾರೆ ಎಂಬುದನ್ನು ಎತ್ತಿ ಹಿಡಿಯುತ್ತದೆ.
ನಾವು ತೊಡಗುವ ಕೆಲಸದ ಜಯ, ಅಪಜಯಗಳಿಗೆ ಮನಸ್ಸಿನ ವಿಶ್ವಾಸವೇ ಒಂದು ದೊಡ್ಡ ಸಾಧನ ಎಂಬ ಶಿವರಾಮ ಕಾರಂತರ ನುಡಿಯಂತೆ, ವಿಶ್ವಾಸದಿಂದ ಯಾವ ಕೆಲಸ ಮಾಡಿದರೂ ಅದು ಯಶಸ್ವಿಯಾಗುತ್ತದೆ. ಪುರುಷರಂತೆ ಮಹಿಳೆಯರು ಕೂಡ ಎಲ್ಲ ಬಗೆಯ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡುವ ಅಭ್ಯಾಸ ಮಾಡಿಕೊಂಡರೆ ದೈನಂದಿನ ಕೆಲಸ ಕಾರ್ಯಗಳು, ಔದ್ಯೋಗಿಕ ಜೀವನ, ಸ್ವಯಂ ಉದ್ಯೋಗ ಈ ಎಲ್ಲ ರಂಗಗಳನ್ನು ಹೆಚ್ಚು ಒತ್ತಡವಿಲ್ಲದೆ ನಿಭಾಯಿಸಬಹುದು. ಒಂಟಿಯಾಗಿ ಮೋಟಾರ್ ಸೈಕಲ್ ರೈಡ್ ಮಾಡುವುದರಿಂದ ಮನಸ್ಸಿನ ಉಲ್ಲಾಸ ಹೆಚ್ಚುತ್ತದೆ. ಮನೋಲ್ಲಾಸಕ್ಕಾಗಿ, ಸ್ವಾವಲಂಬಿಯಾಗಿ ಅನೇಕ ಕೆಲಸಗಳ ನಿರ್ವಹಣೆಯ ಆಪ್ತಮಿತ್ರನಂತೆ ಮಹಿಳೆಯರು ದ್ವಿಚಕ್ರ ವಾಹನ ಬಳಸುವಂತಾಗಬೇಕು.
ಮೋಟಾರ್ ಸೈಕಲ್ ರೈಡರ್ಸ್ ತಿಂಗಳು: 2007ರಿಂದ ಪ್ರತಿವರ್ಷ ಮೇ ತಿಂಗಳ ಮೊದಲ ಶನಿವಾರವನ್ನು ಅಂತಾರಾಷ್ಟ್ರೀಯ ಮಹಿಳಾ ಮೋಟಾರ್ ಸೈಕಲ್ ರೈಡರ್ಗಳ ದಿನ ಎಂದು ಆಚರಿಸಲಾಗುತ್ತದೆ. ಅಂತೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜುಲೈ ತಿಂಗಳನ್ನು ಮಹಿಳಾ ಮೋಟಾರ್ ಸೈಕಲ್ ರೈಡರ್ಸ್ ತಿಂಗಳು ಎಂದು ಆಚರಿಸಲಾಗುತ್ತದೆ.
ರ್ಯಾಲಿಗೂ ಸೈ: ಐಶ್ವರ್ಯ ಪಿಸ್ಸೆ ಎಂಬ ಬೆಂಗಳೂರಿನ ಬೆಡಗಿ 2018ರಲ್ಲಿ ವಿಶ್ವ ಮೋಟಾರ್ ಸ್ಪೋರ್ಟ್ಸ್ನಲ್ಲಿ ಸಂಚಲನ ಮೂಡಿಸಿದ್ದರು. 23 ನೇ ವಯಸ್ಸಿನಲ್ಲಿ ಮೋಟಾರ್ ಸೈಕಲ್ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಈ ಪಟ್ಟಕ್ಕೆ ಏರಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇನ್ನೋರ್ವ ಖ್ಯಾತ ಮಹಿಳೆ ದೆಹಲಿಯ ರೋಶನಿ ಮಿಸ್ಬಾ. ಅವರ ಬೈಕ್ ಕ್ರೇಜ್ನ ಹಾದಿಯಲ್ಲಿ ಬೈಕ್ ಹೆಣ್ಣು ಮಕ್ಕಳಿಗಲ್ಲ ಎಂದು ಅನೇಕರು ಅವರನ್ನು ಧೈರ್ಯಗೆಡುವಂತೆ ಮಾಡಿದ್ದರು. ಆದರೆ ತಂದೆಯ ಪೋ›ತ್ಸಾಹದಿಂದ ಅವರೊಬ್ಬ ಉತ್ತಮ ಸ್ಪೋರ್ಟ್ಸ್ ಬೈಕ್ ರೈಡರ್ ಆಗಿ ಹೊರಹೊಮ್ಮಿದ್ದಾರೆ.
ಬೈಕರ್ನಿ ಅಸೋಸಿಯೇಷನ್: ಮಹಿಳಾ ಮೋಟಾರ್ ಸೈಕಲಿಸ್ಟ್ಗಳಿಗಾಗಿ ಭಾರತದಲ್ಲಿ ಮೊದಲ ಬಾರಿಗೆ 2011ರಲ್ಲಿ ಪುಣೆಯಲ್ಲಿ ಬೈಕರ್ನಿ ಅಸೋಸಿಯೇಷನ್ ಆರಂಭವಾಯಿತು. ಪ್ರಸ್ತುತ ದೇಶಾದ್ಯಂತ ಸುಮಾರು 2000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಈ ಅಸೋಸಿಯೇಷನ್ನಲ್ಲಿ ಮಹಿಳಾ ಬೈಕರ್ಗಳಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ಮೋಟಾರ್ ಸೈಕಲ್ ಅಸೋಸಿಯೇಷನ್ನಿಂದ ಗುರುತಿಸಲ್ಪಟ್ಟ ಭಾರತದ ಏಕೈಕ ಸಂಸ್ಥೆ ಬೈಕರ್ನಿ.
ಆಧುನಿಕ ಯುಗದಲ್ಲಿ ಮಹಿಳೆಯರಿಗೆ ಟು ವೀಲರ್ಗಳು ಉಪಯುಕ್ತ ಎಂಬುದು ಸತ್ಯವಾದರೂ, ವಾಹನ ದಟ್ಟಣೆಯ ಈ ಕಾಲದಲ್ಲಿ ಎಚ್ಚರಿಕೆಯಿಂದ ಚಾಲನೆ ಮಾಡಬೇಕಾದುದು ಕೂಡ ಬಹಳ ಮುಖ್ಯ. ಮಳೆಗಾಲದಲ್ಲಂತೂ ನೀರಿನಿಂದ ತೊಯ್ದು ಹೋಗಿರುವ ಕಾಂಕ್ರೀಟ್ ರಸ್ತೆಗಳಲ್ಲಿ, ಗುಂಡಿಗಳಿಂದ ಕೂಡಿರುವ ಕೆಲವು ಗ್ರಾಮೀಣ ಭಾಗದ ಮಣ್ಣಿನ ರಸ್ತೆಗಳಲ್ಲಿ ರೈನ್ಕೋಟ್ ಹಾಕಿಕೊಂಡು ಮಳೆಯಲ್ಲಿ ಚಾಲನೆ ಮಾಡುವಾಗ ಬಹಳಷ್ಟು ಎಚ್ಚರಿಕೆ ಬೇಕು.