

| ಕೆ.ಬಿ. ಶುಭ ಬೆಂಗಳೂರು
ಅಕ್ಟೋಬರ್ 2 ಮಹಾತ್ಮಗಾಂಧಿ ತಾತನ ಜನ್ಮದಿನ. ಗಾಂಧಿ ಎಂದಕೂಡಲೆ ಬಿಳಿ ಉಡುಪಿನಲ್ಲಿ ಊರುಗೋಲು ಹಿಡಿದುಕೊಂಡಿರುವ ವ್ಯಕ್ತಿತ್ವ ಕಣ್ಣಮುಂದೆ ಬರುತ್ತದೆ. ಗಾಂಧಿ ಜಯಂತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಆಂದೋಲನವನ್ನಾಗಿ ರೂಪಾಂತರಿಸಿದ್ದಾರೆ. ಈ ಅಭಿಯಾನವನ್ನು ಗಾಂಧಿ ಜಯಂತಿಯಂದು ಮಾತ್ರ ಅನುಸರಿಸದೆ, ನಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯ ಇದೆ. ಈ ಮುಂಚೆ ಶಾಲಾದಿನ ಗಳಲ್ಲಿ ಶಾಲಾ ತರಗತಿ, ಆವರಣ ಎಲ್ಲವನ್ನೂ ಸ್ವಚ್ಛ ಮಾಡುವ ಕೆಲಸ ವಿದ್ಯಾರ್ಥಿಗಳದ್ದೇ ಆಗಿರುತ್ತಿತ್ತು. ಪ್ರತಿ ದಿನ ಒಂದೊಂದು ತರಗತಿ ಮಕ್ಕಳು ಶಾಲಾ ಸ್ವಚ್ಛತೆ ನೋಡಿಕೊಳ್ಳುತ್ತಿದ್ದರು. ಇದರಿಂದ ಕಲಿಕೆ, ಶಾಲಾಭಿಮಾನ, ಪರಿಸರ ಹಾಳುಮಾಡಬಾರದೆಂಬ ಮನಸ್ಥಿತಿ ಬೆಳೆಯುತ್ತದೆ. ‘ನಮ್ಮ ಶಾಲೆ’ ಎಂಬ ಶಾಲಾಭಿಮಾನ ಬೆಳೆಸಿಕೊಂಡು ಕೆಲಸ ಮಾಡಿದರೆ ಯಾವುದೂ ನಮಗೆ ಕಷ್ಟವಲ್ಲ ಹಾಗೂ ನಮ್ಮ ಗೌರವಕ್ಕೂ ಧಕ್ಕೆ ತರುವುದಿಲ್ಲ. ಇಂದು ಸಾಕಷ್ಟು ಗ್ರಾಮೀಣ ಶಾಲೆಗಳಲ್ಲಿ ಮಕ್ಕಳು ಶಾಲಾಭಿಮಾನ ಬೆಳೆಸಿಕೊಂಡು, ಶಿಕ್ಷಕರೊಂದಿಗೆ ಸೇರಿಕೊಂಡು, ಶಾಲಾ ಆವರಣ ಸ್ವಚ್ಛತೆ, ಗಿಡಗಳಿಗೆ ನೀರೆರೆಯುವುದು ಸೇರಿದಂತೆ ಸಾಕಷ್ಟು ಚಟುವಟಿಕೆಗಳಲ್ಲಿ ಕೈಜೋಡಿಸುತ್ತಾರೆ. ಇಂತಹ ಮಕ್ಕಳಲ್ಲಿ ಜೀವನಮೌಲ್ಯ ಹೆಚ್ಚಿರುತ್ತದೆ. ಈ ಬಗ್ಗೆ ನಾವೇನು ಮಾಡಬಹುದು ಎಂದು ತಜ್ಞರ, ವಿದ್ಯಾರ್ಥಿಗಳ ಅಭಿಪ್ರಾಯ ಇಲ್ಲಿ ನೀಡಲಾಗಿದೆ.
ಇಷ್ಟು ದಿನ ಶಾಲೆ ರಜೆ ಇದ್ದಿದ್ದರಿಂದ ಈ ಮೊದಲು ನೆಟ್ಟಿದ್ದ ಗಿಡಗಳೆಲ್ಲ ನಾಶವಾಗಿದ್ದವು. ಈಗ ಶಾಲಾರಂಭವಾಗಿದ್ದು, ಎಲ್ಲ ಸ್ನೇಹಿತರು ಹೊಸ ಗಿಡಗಳನ್ನು ತಂದು ನೆಟ್ಟಿದ್ದೇವೆ. ತರಗತಿ ಕಸ ಗುಡಿಸುವುದು, ಬೋರ್ಡ್ ಸ್ವಚ್ಛತೆ ಕಾಪಾಡುವುದು, ನಮ್ಮ ಉಗುರು, ಸಮವಸ್ತ್ರ, ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡುವುದನ್ನು ಶಾಲೆಯಿಂದ ಕಲಿತಿದ್ದೇವೆ.
| ಮಮತಾ 10ನೇ ತರಗತಿ, ಸರ್ಕಾರಿ ಪ್ರೌಢ ಶಾಲೆ, ಹೆಬ್ಬಾಳ
ಕಸದಿಂದ ರಸ ತೆಗೆಯುವ ಪರಿಪಾಠ ಬೆಳೆಸಲಾಗುತ್ತಿದೆ. ಶಾಲೆಗಳಲ್ಲಿ ಪ್ರವಾಸೋದ್ಯಮ ಮೂಲಕ ಪರಿಸರ ಹಾಗೂ ಸ್ವಚ್ಛತೆ ಕಾಪಾಡುವ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಎನ್ಎಸ್ಎಸ್, ಸ್ಕೌಟ್ಸ್ ಮೂಲಕ ವಿದ್ಯಾರ್ಥಿಗಳಿಗೆ ಚರಂಡಿ, ಕೆರೆ, ಗ್ರಾಮ, ನಗರದ ಸ್ವಚ್ಛತೆ ಕಾಪಾಡುವ ಕೆಲಸ ಮಾಡಿಸಬೇಕು. ತಿಂಗಳಲ್ಲಿ ಒಂದು ದಿನ ಈ ಕೆಲಸಗಳಿಗಾಗಿ ಮೀಸಲಿಡಬೇಕು. ಚಟುವಟಿಕೆ ಆಧಾರಿತ ಶಿಕ್ಷಣ ಅಗತ್ಯವಿದೆ.
| ಎಚ್.ಕೆ.ಮಂಜುನಾಥ್ ಅಧ್ಯಕ್ಷ, ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ
ಇತರ ದೇಶದಲ್ಲಿನ ವ್ಯವಸ್ಥೆ: ಭಾರತದಲ್ಲಿ ಮಾತ್ರವಲ್ಲದೇ ಇತರ ದೇಶಗಳಲ್ಲೂ ಮಕ್ಕಳಿಂದ ಶಾಲಾ ಸ್ವಚ್ಛತಾ ಕಾರ್ಯಮಾಡಿಸಲಾಗುತ್ತದೆ. ಜಪಾನ್, ಸಿಂಗಾಪುರ, ದಕ್ಷಿಣ ಕೊರಿಯಾ ಹಾಗೂ ಇತರ ದೇಶಗಳಲ್ಲಿ ತರಗತಿಯ ಕಸ ಗುಡಿಸುವುದರಿಂದ ಹಿಡಿದು ಅಗತ್ಯ ಸ್ವಚ್ಛತಾ ಕಾರ್ಯವನ್ನು ಮಕ್ಕಳಿಂದಲೇ ಮಾಡಿಸಲಾಗುತ್ತದೆ.
ಸ್ವಚ್ಛ ಭಾರತ ಎಂದ ಕೂಡಲೆ ದೇಶದ ಸ್ವಚ್ಛತೆ ಕಡೆ ಎಲ್ಲರೂ ಗಮನ ಹರಿಸುತ್ತೇವೆ. ಇದಕ್ಕೂ ಮೊದಲು ಸ್ವ-ಸ್ವಚ್ಛತೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಮಕ್ಕಳು ತಮ್ಮ ಉಗುರಿನಿಂದ ಹಿಡಿದು ಕೂದಲು ಕಟ್ಟಿಕೊಳ್ಳುವುದು, ಉಡುಗೆ-ತೊಡುಗೆವರೆಗೂ ಸ್ವಚ್ಛತೆ ಕಾಪಾಡಿಕೊಳ್ಳಬೇಕಿದೆ. ಊಟ ಮಾಡಿದ ಮೇಲೆ ಕೈ ತೊಳೆಯುವುದು ಕೂಡ ಸ್ಚಚ್ಛತೆಯ ಒಂದು ಭಾಗವೇ. ಶಾಲೆಗಳಲ್ಲಿ ಮಕ್ಕಳಿಂದ ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸಿ ವಾರದ ಉತ್ತಮ ತರಗತಿ ಪ್ರಶಸ್ತಿ ನೀಡುವ ಪರಿಪಾಠ ಬೆಳೆಸಬಹುದು. ಇದು ಮಕ್ಕಳಿಗೆ ಪ್ರೋತ್ಸಾಹದಾಯಕವಾಗಿರುತ್ತದೆ.
| ಪ್ರೊ.ಬಿ.ಆರ್. ಗೋಪಾಲ ನಿವೃತ್ತ ಪ್ರಾಂಶುಪಾಲ