

ನಾನು ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದೇನೆ. ಸುಗಮ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನದೇ ಫ್ಯೂಶನ್ ತಂಡ ಕಟ್ಟಿ, ರಾಗ ಆಧಾರಿತ ಫ್ಯೂಶನ್ ಕಾರ್ಯಕ್ರಮಗಳನ್ನು ದೇಶಾದ್ಯಂತ ಕೊಟ್ಟಿದ್ದೇನೆ. ಇದೆಲ್ಲ ಸಾಧ್ಯವಾಗಿದ್ದು ಶಾಸ್ತ್ರೀಯ ಸಂಗೀತದ ಅಡಿಪಾಯದಿಂದ. ಎಲ್ಲ ತರಹದ ಸಂಗೀತಕ್ಕೂ ಮೂಲ ಶಾಸ್ತ್ರೀಯ ಸಂಗೀತ. ನಾನು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಲಿತು ಬಾಲ್ಯದಿಂದಲೂ ಅದನ್ನು ಪ್ರಚಾರ, ಪ್ರಸಾರ ಮಾಡುತ್ತಲೇ ಬಂದಿದ್ದೇನೆ. ಆ ಕಾರಣಕ್ಕೆ ಕರ್ನಾಟಕ, ಪಾಶ್ಚಾತ್ಯ, ಜನಪದ ಹೀಗೆ ಯಾವುದೇ ಪ್ರಕಾರದ ಸಂಗೀತದಲ್ಲಿ ಬೇಕಾದರೂ ನಾನು ಹೊಂದಿಕೊಳ್ಳಬಹುದು. ಇದೇ ಶಾಸ್ತ್ರೀಯ ಸಂಗೀತದ ನಿಜವಾದ ಶಕ್ತಿ. ಪ್ರತಿಯೊಂದು ಸಂಗೀತ ಪ್ರಕಾರಕ್ಕೂ ತನ್ನದೇ ಆದ ಸ್ಥಾನಮಾನಗಳಿವೆ. ಆದರೆ, ಶಾಸ್ತ್ರೀಯ ಸಂಗೀತಕ್ಕೆ ಇನ್ನೂ ಹೆಚ್ಚಿನ ಪ್ರಾಶಸ್ಱ ಸಿಗಲಿ ಎಂಬುದು ನನ್ನ ಕಳಕಳಿ.
ಈಗ್ಯಾಕೆ ಈ ಮಾತು ಎಂದರೆ, ನಮ್ಮಲ್ಲಿ ಎಷ್ಟೊಂದು ಮಾಧ್ಯಮಗಳಿವೆ, ನೂರಾರು ಟಿವಿ ಚಾನಲ್ಗಳಿವೆ, ಆದರೆ ಶಾಸ್ತ್ರೀಯ ಸಂಗೀತದ ಪರಿಚಯ, ಚರ್ಚೆಯನ್ನು ಯಾವುದೇ ಚಾನಲ್ ಮಾಡುತ್ತಿಲ್ಲ. ಅದಕ್ಕೆ ಸಿಗಬೇಕಾದ ಮಾನ್ಯತೆ ಸಿಗುತ್ತಿಲ್ಲ. ಇಷ್ಟಕ್ಕೂ ಶಾಸ್ತ್ರೀಯ ಸಂಗೀತವನ್ನು ಯಾಕೆ ಮೂಲೆಗುಂಪು ಮಾಡಲಾಗುತ್ತಿದೆ? ಒಬ್ಬ ಶಾಸ್ತ್ರೀಯ ಸಂಗೀತಗಾರ ಬೆಳಕಿಗೆ ಬರಬೇಕು ಎಂದರೆ ಎರಡ್ಮೂರು ದಶಕಗಳ ಕಾಲ ಸಾಧನೆ ಮಾಡಬೇಕು. ಗುರು ಸಾನಿಧ್ಯದಲ್ಲಿ ನಿತ್ಯ ಸಾಧನೆ ಮಾಡಿದರೆ, 40-50ನೇ ವಯಸ್ಸಿಗೆ ಅವನು ಅದ್ಭುತ ಗಾಯಕನೋ, ವಾದಕನೋ ಆಗುತ್ತಾನೆ. ಅಷ್ಟು ಸಾಧನೆ ಮಾಡಿ ಕಛೇರಿ ಕೊಟ್ಟಾಗ, ಆಗುವ ಸಂತೋಷದ ಗುಂಗು ವರ್ಷಾನುಗಟ್ಟಲೆ ಇರುತ್ತದೆ. ಅದನ್ನು ಬಿಟ್ಟು ಕೆಲವು ಚಿತ್ರಗೀತೆಗಳನ್ನು ಕಲಿತು, ಸ್ಟೇಜ್ ಶೋಗಳಲ್ಲಿ ಹಾಡಿ, ಅವರವರೇ ಅವರವರನ್ನು ಲೆಜೆಂಡ್ಗಳೆಂದು ಕರೆದುಕೊಳ್ಳುವುದು ಎಷ್ಟು ಸರಿ? ನಮ್ಮ ನಾಡಿನಲ್ಲಿ ಅದ್ಭುತ ಪ್ರತಿಭೆಗಳಿದ್ದಾರೆ. ಕಷ್ಟಕರವಾದ ಚಿತ್ರಗೀತೆಗಳನ್ನು ಕಲಿತು ಹಾಡುವ ಕ್ಷಮತೆ ಅವರಿಗಿದೆ. ಅವರನ್ನು ನೋಡಿದರೆ ಒಂದು ಕಡೆ ಸಂತೋಷ, ಇನ್ನೊಂದು ಕಡೆ ಬೇಸರ ಎರಡೂ ಆಗುತ್ತದೆ. ಅವರೆಲ್ಲ ತಮ್ಮ ಪ್ರತಿಭೆಯನ್ನು ಹತ್ತಿಪ್ಪತ್ತು ಸಿನಿಮಾ ಹಾಡುಗಳನ್ನು ಕಲಿಯುವುದಕ್ಕೆ ಸೀಮಿತಗೊಳಿಸಿಕೊಳ್ಳುತ್ತಿದ್ದಾರೆ. ಒಳ್ಳೆಯ ಗುರುವಿನ ಹತ್ತಿರ ಶಾಸ್ತ್ರೀಯ ಸಂಗೀತ ಕಲಿತರೆ, ಅವರಿಗೂ ಒಳ್ಳೆಯದು, ಆ ಕ್ಷೇತ್ರಕ್ಕೂ ಒಳ್ಳೆಯದಾಗುತ್ತದೆ. ಎಲ್ಲರೂ short time glamour ಹಿಂದೆ ಬೀಳುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ನಂತರ ಎಲ್ಲಿ ಹೋಗುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಕಾರ್ಯಕ್ರಮದಲ್ಲಿ ಮೆಚ್ಚುಗೆ ಸಿಗಲಿ, ಯೂಟ್ಯೂಬ್ನಲ್ಲಿ ಲೈಕ್ಸ್ ಸಿಗಲಿ ಎಂದಷ್ಟೇ ಯೋಚನೆಯಾಗಿದೆ. ಅದರಿಂದ ಅವರ ವೃತ್ತಿ ಸಹ ಮುಂದಕ್ಕೆ ಹೋಗುವುದಿಲ್ಲ.
ಶಾಸ್ತ್ರೀಯ ಸಂಗೀತ ಕಲಿತರೆ, ಪ್ರತಿದಿನ ಹಾಡಬೇಕು ಅಥವಾ ಕಾರ್ಯಕ್ರಮ ಕೊಡಬೇಕು ಅಂತೇನೂ ಇಲ್ಲ. ಪ್ರತಿದಿನ ರಾಗ ಆಲಾಪನೆಗಳನ್ನು ಕೇಳಿದರೆ, ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಶಾಸ್ತ್ರೀಯ ಸಂಗೀತದಲ್ಲಿ ರೋಗ ನಿವಾರಿಸುವ ಶಕ್ತಿ ಇದೆ. ಅದಕ್ಕೆ ನೂರಾರು ವರ್ಷಗಳ ಪರಂಪರೆ ಇದೆ. ನಮ್ಮ ಪೂರ್ವಜರು ಹಲವು ವರ್ಷಗಳ ಅಧ್ಯಯನದ ನಂತರ ಎಲ್ಲ ರಾಗಗಳ ಮಹತ್ವಗಳನ್ನು ಬರೆದಿಟ್ಟಿದ್ದಾರೆ. ಇವೆಲ್ಲವೂ ದಾಖಲೆಯಾಗಿವೆ. ಆದರೆ, ಚಿತ್ರಗೀತೆಗಳಿಗೆ ಹೆಚ್ಚು ಇತಿಹಾಸ ಇಲ್ಲ. ಹೆಚ್ಚೆಂದರೆ 80 ವರ್ಷ. ಶಾಸ್ತ್ರೀಯ ಸಂಗೀತ ಮತ್ತು ಚಿತ್ರಗೀತೆಗಳ ನಡುವೆ ಅಮೂಲ್ಯವಾದದ್ದು ಯಾವುದು? ಯಾವುದರ ಬಗ್ಗೆ ನಮಗೆ ಹೆಚ್ಚು ಒಲವು, ಆಸಕ್ತಿ ಇರಬೇಕು? ಯಾವುದನ್ನು ನಾವು ಹೆಚ್ಚು ಕಾಪಾಡಿಕೊಳ್ಳಬೇಕು? ಈ ಪ್ರಶ್ನೆ ಎಲ್ಲರಿಗೂ ಅನ್ವಯಿಸುತ್ತದೆ. ಪ್ರತಿಯೊಬ್ಬರಲ್ಲೂ ಒಂದು ಫ್ರೀಕ್ವೆನ್ಸಿ ಇರುತ್ತದೆ. ಸಂಗೀತ ಕಲಿತಿರಬೇಕು, ಶಾಸ್ತ್ರ ಗೊತ್ತಿರಬೇಕು ಅಂತೇನಿಲ್ಲ. ಅದೇ ಕಾರಣಕ್ಕೆ, ಸಾಮಾನ್ಯ ಜನ ಸಹ ಶಾಸ್ತ್ರೀಯ ಸಂಗೀತ ಕೇಳಿದಾಗ ಎಂಥಾ ಅದ್ಭುತ ಅಂತೆನಿಸುತ್ತದೆ. ಯಾವುದೋ ಸ್ವರಸಂಚಾರ ಕೇಳಿದಾಗ ಅವರಲ್ಲೊಂದು ಸಂಚಲನ ಉಂಟಾಗುತ್ತದೆ. ಆ ಶಕ್ತಿ ಶಾಸ್ತ್ರೀಯ ಸಂಗೀತಕ್ಕೆ ಮಾತ್ರ ಇದೆ. ಆ ಕಾರಣಕ್ಕೆ ಇಡೀ ವಿಶ್ವದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತವನ್ನು ‘ಸಂಗೀತದ ಪಿತಾಮಹ’ ಎಂದು ಗುರುತಿಸುತ್ತಾರೆ. ಭಾರತೀಯ ಶಾಸ್ತ್ರೀಯ ಸಂಗೀತದಿಂದ ಬೇರೆ ಎಲ್ಲ ಸಂಗೀತಗಳು ಹುಟ್ಟಿರುವುದು. ಮೂಲ ಇರುವುದೇ ನಮ್ಮಲ್ಲಿ. ಹಾಗಾಗಿ, ನಮಗೆ ಹೆಚ್ಚು ಗೌರವ ಮತ್ತು ಕಾಳಜಿ ಇರಬೇಕಲ್ಲವೇ?
ಚಿತ್ರಗೀತೆಗಳಿಗೂ, ಶಾಸ್ತ್ರೀಯ ಸಂಗೀತಕ್ಕೂ ಹೋಲಿಕೆ ಸಾಧ್ಯವಿಲ್ಲ. ಅವರೆಡಕ್ಕೂ ತುಂಬ ವ್ಯತ್ಯಾಸವಿದೆ. ಕಮರ್ಷಿಯಲ್ ಸಂಗೀತ ಹೆಚ್ಚು ಜನರಿಗೆ ಸಹಜವಾಗಿ ತಲುಪುತ್ತದೆ. ಅದರ ನಡುವೆಯೂ ಶಾಸ್ತ್ರೀಯ ಸಂಗೀತವನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಏಕೆಂದರೆ, ಅದು ನಮ್ಮ ದೇಶದ ಭವ್ಯ ಮತ್ತು ಪ್ರಾಚೀನ ಪರಂಪರೆ. ಸರ್ಕಾರದ ಮುಂದೆ ಹಲವು ಸಮಸ್ಯೆಗಳಿರುವಾಗ, ಕಲೆ ಕೊನೆಯ ಆದ್ಯತೆ ಆಗುತ್ತದೆ. ಕಾಪೋರೇಟ್ ಸಂಸ್ಥೆಗಳು ಸಾವಿರಾರು ಜನರಿಗೆ ಕೆಲಸ ಕೊಡುತ್ತವೆ. ಸಂಗೀತ ಮತ್ತು ಇತರ ಕಲೆಗಳಲ್ಲಿ ತೊಡಗಿಸಿಕೊಂಡವರಿಗೆ ಕೆಲಸ ಕೊಟ್ಟರೆ, ಸಂಸ್ಥೆಗಳಿಗೂ ಹೆಮ್ಮೆ ಇರುತ್ತದೆ, ಹಲವು ಸಂಗೀತಗಾರರಿಗೆ ಉತ್ತೇಜನ ಸಿಗುತ್ತದೆ. ಕೆಲವು ಬ್ಯಾಂಕ್ಗಳಲ್ಲಿ, ರೈಲ್ವೇಯಲ್ಲಿ ಸ್ಪೋರ್ಟ್ಸ್ ಕೋಟಾದಡಿ ಕೆಲಸಕ್ಕೆ ಸೇರುತ್ತಾರೆ. ಅದೇ ರೀತಿ ಮ್ಯೂಸಿಕ್ ಕೋಟಾ ಮಾಡಿದರೆ ಅನುಕೂಲವಾಗುತ್ತದೆ. ಇನ್ನು, ಶಾಲೆಗಳಲ್ಲಿ ಚಿಕ್ಕಂದಿನಿಂದಲೇ ಶಾಸ್ತ್ರೀಯ ಸಂಗೀತವನ್ನು ಕಲಿಸಿದರೆ, ಉದ್ಯೋಗವೂ ಸೃಷ್ಟಿಯಾಗುತ್ತದೆ ಮತ್ತು ಮಕ್ಕಳಿಗೂ ಬಾಲ್ಯದಿಂದಲೇ ಆಸಕ್ತಿ ಬೆಳೆಯುತ್ತದೆ.
ಇದರ ಕಡೆ ನಾವು ಗಮನಹರಿಸದಿದ್ದರೆ, ಮುಂದೊಂದು ದಿನ ಬಾಲಿವುಡ್ ಸಂಗೀತವೇ ನಮ್ಮ ಭಾರತೀಯ ಸಂಗೀತ ಆಗಿಬಿಡುತ್ತದೇನೋ ಎಂಬ ಭಯ ಶಾಸ್ತ್ರೀಯ ಸಂಗೀತಗಾರರನ್ನು ಕಾಡುತ್ತಿದೆ. ಒಂದು ಕಡೆ ಶಾಸ್ತ್ರೀಯ ಸಂಗೀತದ ಅಧ್ಯಯನ ನಡೆಯುತ್ತಿದೆ, ಕಲಾವಿದರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ, ಅನೇಕ ಯುವಪ್ರತಿಭೆಗಳು ಮಿಂಚುತ್ತಿವೆ. ನಾನು ಇತ್ತೀಚೆಗೆ Ragatainment ಎಂಬ ಕಾರ್ಯಕ್ರಮ ಮಾಡಿ 52 ವಾರಗಳ ಕಾಲ, ವಾರಕ್ಕೆ ಎರಡರಂತೆ 101 ರಾಗಗಳನ್ನು ನುಡಿಸಿದೆ. ಸಂಗೀತದಲ್ಲಿ 101 ರಾಗ ಇದೆಯಾ ಎಂದು ಹಲವರು ಪ್ರಶ್ನಿಸಿದರು. ಒಂದು ಉಲ್ಲೇಖದ ಪ್ರಕಾರ 5 ಸಾವಿರ ರಾಗಗಳಿವೆ. ಇದು ಬಹಳಷ್ಟು ಕಲಾವಿದರಿಗೇ ಗೊತ್ತಿಲ್ಲ. ಶಾಸ್ತ್ರೀಯ ಸಂಗೀತ ಎನ್ನುವುದು Beautiful combination of science and art. ಆ ರಾಗಸಂಗೀತದಲ್ಲಿ ಮುಳುಗಿದಾಗ ಆಗುವ ಅನುಭೂತಿ, ಶಬ್ದಗಳಲ್ಲಿ ವರ್ಣಿಸಲಿಕ್ಕೆ ಸಾಧ್ಯವಿಲ್ಲ. ಹಾಗಂತ ಈಗ ಶಾಸ್ತ್ರೀಯ ಸಂಗೀತವನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಎಂದಲ್ಲ. 40 ವರ್ಷಗಳ ಹಿಂದೆಯೂ ಚಿತ್ರಗೀತೆ ಮತ್ತು ಶಾಸ್ತ್ರೀಯ ಸಂಗೀತ ನಡುವೆ ಅಂತರವಿತ್ತು. ಈಗಲೂ ಇದೆ. 40 ವರ್ಷಗಳ ನಂತರವೂ ಮುಂದುವರಿಯುತ್ತದೆ. ಆದರೆ, ಶಾಸ್ತ್ರೀಯ ಸಂಗೀತವನ್ನು ಉಳಿಸಿ ಬೆಳೆಸುವ ಕೆಲಸದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು.
ಇದು ಶಾಸ್ತ್ರೀಯ ನೃತ್ಯ, ಜನಪದ ಸಂಗೀತ ಎಲ್ಲದಕ್ಕೂ ಅನ್ವಯಿಸುತ್ತದೆ. ಯಾವ್ಯಾವ ಕಲೆಗಳಿಗೆ ನಾವು mainstreamನಲ್ಲಿ ಪ್ರಾಮುಖ್ಯ ಕೊಡುತ್ತಿಲ್ಲವೋ, ಎಲ್ಲದಕ್ಕೂ ಪ್ರಾಮುಖ್ಯ ಕೊಡಬೇಕು. ಪ್ರಾರಂಭದಿಂದಲೇ ಪ್ರತಿಭಾನ್ವಿತ ಯುವಕರಿಗೆ, ಮಕ್ಕಳಿಗೆ ಪೋ›ತ್ಸಾಹಿಸಿದರೆ ಶಾಸ್ತ್ರೀಯ ಸಂಗೀತ ಬೆಳೆಯುತ್ತದೆ. ಅದೇನು ಕಬ್ಬಿಣದ ಕಡಲೆ ಅಲ್ಲ. ಯಾರು ಬೇಕಾದರೂ ಕಲಿಯಬಹುದು. ಬಹಳಷ್ಟು ಜನರಿಗೆ ಶಾಸ್ತ್ರೀಯ ಸಂಗೀತವೆಂದರೆ, ಬೋರಿಂಗ್ ಎಂಬ ನಂಬಿಕೆ ಇದೆ. ಆದರೆ, ಅದು ನಿಜವಲ್ಲ. ನಾವು ಮುಕ್ತಮನಸ್ಸಿನಿಂದ ಅರ್ಥ ಮಾಡಿಕೊಂಡರೆ, ಕಲಿತರೆ ಎಲ್ಲವೂ ಸುಲಭ. ಹಾಗಾಗಿ ಸರ್ಕಾರ, ಕಾರ್ಪೋರೇಟ್, ಮಾಧ್ಯಮ, ಜನಸಾಮಾನ್ಯರು ಎಲ್ಲರೂ ಕೈಜೋಡಿಸಿದರೆ, ಈ ಕಲೆ ಇನ್ನಷ್ಟು ಬೆಳೆಯುತ್ತದೆ, ಇಡೀ ಪ್ರಪಂಚವನ್ನು ತನ್ನ ಸ್ವರಮಾಧುರ್ಯದಲ್ಲಿ ಆವರಿಸಿಕೊಂಡು ವಿಜೃಂಭಿಸುತ್ತದೆ.
(ಲೇಖಕರು ಖ್ಯಾತ ಕೊಳಲು ವಾದಕರು)