

ಜಗತ್ತನ್ನು ಕೋವಿಡ್ ಮಹಾಮಾರಿ ಆವರಿಸಿಕೊಂಡು ಜನರ ಬದುಕನ್ನು ಏರುಪೇರು ಮಾಡಿರುವ ಈ ಹೊತ್ತಿನಲ್ಲಿ ಸಂಭ್ರಮದಿಂದ ಆಚರಿಸುವ ಕ್ರಿಸ್ಮಸ್ ಎದುರಾಗಿದೆ. ಕಷ್ಟದಲ್ಲಿರುವವರಿಗೆ ನೆರವು, ನೋವುಂಡವರಿಗೆ ಪ್ರೀತಿ ತೋರುವ ಮೂಲಕ ಹಬ್ಬವನ್ನು ಸರಳವಾಗಿ ಆಚರಿಸೋಣ ಎಂದು ಕ್ರೈಸ್ತ ಧರ್ಮಗುರುಗಳು ಕರೆ ನೀಡಿದ್ದಾರೆ.
ಕೋವಿಡ್ ಸಂಕಷ್ಟವನ್ನು ಎಲ್ಲರೂ ಅನುಭವಿಸಿದ್ದಾರೆ. ನಾವೇನು ಉಳಿಸಿದ್ದೇವೆಯೋ ಅದನ್ನು ಬಡವರೊಂದಿಗೆ ಹಂಚಿಕೊಂಡು, ಸರಳ ಕ್ರಿಸ್ಮಸ್ ಆಚರಿಸೋಣ. ಹೊಸ ವರ್ಷದಲ್ಲಿ ಬಡವರ ಮನೆಗಳ ದುರಸ್ತಿ ಹಾಗೂ ಇತರ ಸೌಕರ್ಯಗಳ ಅಭಿವೃದ್ಧಿಗೆ ಪ್ರಯತ್ನಿಸಿ, ಅಶಕ್ತರನ್ನು ಸಬಲರನ್ನಾಗಿಸಲು ಪ್ರಯತ್ನಿಸೋಣ.
ಚಿಂದಿ ಬಟ್ಟೆಯಲ್ಲಿ ಸುತ್ತಿದ್ದ ಹಾಗೂ ಗೋದಲಿಯಲ್ಲಿ ಮಲಗಿದ್ದ ಬಾಲಯೇಸು ಆಹಾರವಿಲ್ಲದೆ ಹಸಿದ ಹೊಟ್ಟೆಯಲ್ಲಿ ನಿದ್ದೆಗೆ ಜಾರುವ ಬಡವರ ಕಷ್ಟಗಳನ್ನು ಅನುಭವಿಸಿದವರು. ಬೀದಿಬದಿಗಳಲ್ಲಿ ಮಲಗುವ ನಿರಾಶ್ರಿತರ ಆತಂಕಗಳನ್ನು ಅರಿತವರು. ಇಂತಹ ಸಮಾಜದಲ್ಲಿರುವ ಅಶಕ್ತರೊಡನೆ ನಾವು ಬೆರೆತು ಕ್ರಿಸ್ಮಸ್ ಆಚರಿಸೋಣ.
ನಾವು ನ್ಯಾಯಕ್ಕಾಗಿ ಹಾತೊರೆಯುತ್ತೇವೆ. ಅನ್ಯಾಯವಾದಾಗ ದುಃಖವಾಗುತ್ತದೆ. ಇಂದು ರೈತರು, ಮಾನವಹಕ್ಕುಗಳ ಹೋರಾಟಗಾರರು ನ್ಯಾಯಕ್ಕಾಗಿ ಎದ್ದು ನಿಲ್ಲಲು ನಮ್ಮನ್ನು ಕರೆಯುತ್ತಿದ್ದಾರೆ. ಅವನ್ನು ಗಾಢವಾಗಿ ಆಲಿಸೋಣ. ಇತರರೊಡನೆ ಸೌಹಾರ್ದತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ. ಸಹೋದರತೆ ಮತ್ತು ಸಾಮಾಜಿಕ ಮಿತ್ರತ್ವವನ್ನು ಬೆಳೆಸಲು ಸಂಪರ್ಕದ ಸಂಸ್ಕೃತಿ ಮತ್ತು ಸಂವಾದದ ಸಂಸ್ಕೃತಿಯನ್ನು ಪೋಷಿಸೋಣ. ನಾವೆಲ್ಲ ದೇವರ ಒಂದೇ ಕುಟುಂಬದ ಸದಸ್ಯರು.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..