ಕ್ರಿಸ್ಮಸ್ ಸಂದೇಶ | ಪ್ರೀತಿ, ಸಹಬಾಳ್ವೆ, ಐಕ್ಯತೆ ನಮ್ಮ ಧ್ಯೇಯ

Christmas 2
Published on

ಜಗತ್ತನ್ನು ಕೋವಿಡ್ ಮಹಾಮಾರಿ ಆವರಿಸಿಕೊಂಡು ಜನರ ಬದುಕನ್ನು ಏರುಪೇರು ಮಾಡಿರುವ ಈ ಹೊತ್ತಿನಲ್ಲಿ ಸಂಭ್ರಮದಿಂದ ಆಚರಿಸುವ ಕ್ರಿಸ್ಮಸ್ ಎದುರಾಗಿದೆ. ಕಷ್ಟದಲ್ಲಿರುವವರಿಗೆ ನೆರವು, ನೋವುಂಡವರಿಗೆ ಪ್ರೀತಿ ತೋರುವ ಮೂಲಕ ಹಬ್ಬವನ್ನು ಸರಳವಾಗಿ ಆಚರಿಸೋಣ ಎಂದು ಕ್ರೈಸ್ತ ಧರ್ಮಗುರುಗಳು ಕರೆ ನೀಡಿದ್ದಾರೆ.

- ಡಾ. ಜೆರಾಲ್ಡ್ ಲೋಬೊ, ಉಡುಪಿ ಬಿಷಪ್

ವಿಶ್ವವು ಆರೋಗ್ಯ, ನೆಮ್ಮದಿ ಹಾಗೂ ಶಾಂತಿ-ಸಮಾಧಾನಗಳಿಗಾಗಿ ಹಾತೊರೆಯುತ್ತಿರುವ ಈ ಕಾಲದಲ್ಲಿ ಯೇಸು ಕ್ರಿಸ್ತರ ಜನನದ ಮಹೋತ್ಸವ ಕ್ರಿಸ್ಮಸ್ ಭರವಸೆಯ ಕಿರಣದಂತೆ ಹೊಮ್ಮಿ, ಬರಲಿರುವ ಹೊಸ ಬದುಕಿಗೆ ಪೀಠಿಕೆ ಹಾಕುವಂತಿದೆ.

ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಈ ಕಾಲದಲ್ಲಿ ನಮ್ಮ ನೆರೆಯವರಲ್ಲಿ ಪ್ರೀತಿ, ಸಹಬಾಳ್ವೆ, ಐಕ್ಯತೆ ಎಂಬ ಬೀಜವನ್ನು ಬಿತ್ತಿ ಎಲ್ಲೆಡೆ ಶಾಂತಿ ಮತ್ತು ಸೌಹಾರ್ದತೆ ಸ್ಥಾಪಿಸುವ ಕಾರ್ಯ ನಮ್ಮದಾಗಬೇಕಿದೆ. ‘ಇವನಾರವ ಎನ್ನದಿರಯ್ಯ, ಇವ ನಮ್ಮವ ಎನ್ನಿರಯ್ಯ’ ಎಂಬ ಬಸವಣ್ಣನವರ ವಚನದಂತೆ ಯಾರನ್ನೂ ಪ್ರತ್ಯೇಕಿಸದೆ ಎಲ್ಲರನ್ನೂ ನಮ್ಮವರೆಂದು ಸ್ವೀಕರಿಸುವ ಉದಾರತೆ ನಮ್ಮಲ್ಲಿ ಬೆಳೆಯಬೇಕು. ಇದೇ ನಾವು ಪರರಿಗೆ ನೀಡುವ ಕ್ರಿಸ್​ವುಸ್ ಉಡುಗೊರೆ.

ಇದೇ ಸಂದೇಶವನ್ನು ಅಕ್ಟೋಬರ್ ತಿಂಗಳಲ್ಲಿ ಪೋಪ್ ಫ್ರಾನ್ಸಿಸ್​ರವರು ‘ನಾವೆಲ್ಲ ಸಹೋದರ ಸಹೋದರಿಯರು’ ಎಂಬ ವಿಶ್ವಪತ್ರದ ಮೂಲಕ ವಿಶ್ವಕ್ಕೆ ನೀಡಿದರು. ಈ ವಿಶ್ವಪತ್ರದಲ್ಲಿ ಎಲ್ಲ ಮಾನವರು ತಮ್ಮ ಧರ್ಮ, ಜಾತಿ, ವರ್ಗ, ಪ್ರಾಂತ್ಯ, ಸಂಸ್ಕೃತಿ, ರೀತಿ-ರಿವಾಜುಗಳು ಇನ್ನಿತರ ಸೀಮೆಗಳನ್ನು ದಾಟಿ ಮಾನವೀಯತೆ ಎಂಬ ವಿಶ್ವಧರ್ಮದಡಿ ಒಂದಾಗಲು ಕರೆ ನೀಡಿದ್ದಾರೆ.

ಈ ವಿಷಮ ಕಾಲದಲ್ಲಿ ಕ್ರಿಸ್ಮಸ್ ಆಚರಣೆ ಹೆಚ್ಚು ಪ್ರಸ್ತುತವೆನಿಸುತ್ತದೆ. ಸ್ವತಃ ಮಾತೆ ಮರಿಯ ಮತ್ತು ಜೋಸೆಫ್ ತಮ್ಮ ಕಂದ ಯೇಸುವಿನೊಂದಿಗೆ ಇಂತಹ ವಿಷಮ ಪರಿಸ್ಥಿತಿಗೆ ಒಳಗಾಗಿದ್ದರು. ಕಷ್ಟದಲ್ಲಿ ಸಿಲುಕಿದವರೆಲ್ಲರಿಗೂ ಈ ಕ್ರಿಸ್ಮಸ್ ಸಾಂತ್ವನದಾಯಕವಾಗಿದ್ದು, ಹೊಸ ಮಾರ್ಗ ತೋರಿ, ಹೊಸ ಬದುಕಿನೆಡೆಗೆ ಮುನ್ನಡೆಸಲಿ ಎಂಬುದೇ ನಮ್ಮ ಹಾರೈಕೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net