

2001ರ ಸೆ.11ರಂದು ಅಮೆರಿಕದ ಮೇಲೆ ತಾಲಿಬಾನಿಗಳು ನಡೆಸಿದ ದಾಳಿಗೆ ಪ್ರತಿಯಾಗಿ ಅಮೆರಿಕವು ಅಫ್ಘಾನಿಸ್ತಾನದ ಮೇಲಿನ ತಾಲಿಬಾನಿಗಳ ಹಿಡಿತ ತಪ್ಪಿಸಲು ನಡೆಸಿದ ಕಾರ್ಯಾಚರಣೆ ಯಾವ ಯುದ್ಧಕ್ಕೂ ಕಡಿಮೆಯಾಗಿರಲಿಲ್ಲ. ಕೆಲ ವರ್ಷಗಳ ಹಿಂದೆಯಷ್ಟೇ ಅಂತ್ಯ ಹಾಡಲಾದ ಆ ಕಾರ್ಯಾಚರಣೆ ಬರೋಬ್ಬರಿ 20 ವರ್ಷ ನಡೆಯಿತು. ಸಂಪೂರ್ಣ ಅಫ್ಘಾನಿಸ್ತಾನದ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದ ತಾಲಿಬಾನಿಗಳ ಹಿಡಿತದಿಂದ ತಪ್ಪಿಸಲು ನೆಲ ಮತ್ತು ವಾಯುಮಾರ್ಗದಿಂದ ಅವರ ಅಡಗುತಾಣ ಮತ್ತು ಶಸ್ತ್ರಾಸ್ತ್ರ ಸಂಗ್ರಹಾಗಾರಗಳ ಮೇಲೆ ಬಾಂಬುಗಳ ಸುರಿಮಳೆಗೈಯ್ಯಲಾಯಿತು. ಆ ದಿನಗಳಲ್ಲಿ ತಮ್ಮ ನೆತ್ತಿ ಮೇಲೆ ಸದಾ ಅಮೆರಿಕದ ರಾಷ್ಟ್ರಧ್ವಜವನ್ನು ಹೊಂದಿರುವ ಯುದ್ಧವಿಮಾನ ಮತ್ತು ಡ್ರೋನ್ಗಳು ಹಾರುವ ದೃಶ್ಯ ಅಫ್ಘಾನಿಗಳಿಗೆ ಮಾಮೂಲು ಎನ್ನುವಂತಾಗಿತ್ತು.
ಇದೀಗ ‘ವಾಷಿಂಗ್ಟನ್ ಪೋಸ್ಟ್’ ಪ್ರಕಟಿಸಿದ ವರದಿ ಪ್ರಕಾರ ಹೀಗೆ ಹಾರುತ್ತಿದ್ದ ಆ ಡ್ರೋನ್ಗಳು ಅಸಂಖ್ಯಾತ ಬಾಂಬುಗಳನ್ನಷ್ಟೇ ಅಲ್ಲದೇ ಟನ್ಗಟ್ಟಲೆ ಗಸಗಸೆ ಬೀಜಗಳನ್ನೂ ನೆಲಕ್ಕೆಸೆದಿದ್ದವು. ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಯ ರಹಸ್ಯ ಕಾರ್ಯಾಚರಣೆಯೊಂದರ ಭಾಗವಾಗಿದ್ದ ಈ ಎಸೆಯುವಿಕೆಯ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಈ ಯೋಜನೆಯ ಸಾಧಕ ಬಾಧಕಗಳ ಕುರಿತು ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ತರಕಾರಿ ಬೀಜಗಳನ್ನು ಎಸೆಯುವುದರ ಮೂಲಕವೂ ಯುದ್ಧವನ್ನು ಗೆಲ್ಲಬಹುದೇ? ಏನಿದರ ಅಸಲಿಯತ್ತು? ನೋಡೋಣ. ಪಾಪಾವೆರ್ ಸೊಮ್ನಿಫೆರಮ್ ಇದು ಗಸಗಸೆ ಗಿಡದ ವೈಜ್ಞಾನಿಕ ಹೆಸರು. ಅಫೀಮು ತಯಾರಾಗುವುದು ಗಸಗಸೆ ಹೂವಿನಿಂದ. ಗಸಗಸೆ ಗಿಡದ ಹೂವು ಅರಳಿ ಅದರ ಪಕಳೆಗಳು ಉದುರಿ ಹೋದ ನಂತರ ನಡುವಿನ ಗಟ್ಟಿ ಭಾಗವು ಗಿಡದಲ್ಲೇ ಉಳಿದಿರುತ್ತದೆ.
ಇನ್ನೂ ಪೂರ್ತಿ ಒಣಗಿರದ ಈ ಭಾಗದೊಳಗೆ ತುಂಬಿರುವ ಅಂಟನ್ನು ಚಾಕುವಿನಿಂದ ಕತ್ತರಿಸಿ ಹೊರತೆಗೆಯಲಾಗುತ್ತದೆ. ಬಿಳಿ ಬಣ್ಣದಲ್ಲಿರುವ ಈ ಗಾಢದ್ರವ್ಯವನ್ನು ಒಂದು ದಿನ ಪೂರ್ತಿ ಬಿಸಿಲಿನಲ್ಲಿ ಒಣಗಿಸಿದ ನಂತರ ಅದು ಕಂದು ಬಣ್ಣದ ಗೋಂದಿನ ಸ್ವರೂಪ ತಾಳುತ್ತದೆ. ಈ ಗೋಂದೇ ಅಫೀಮು. ಪಕಳೆಗಳು ಉದುರಿದ ನಂತರವೂ ಆ ಹೂವಿನ ಉಳಿದ ಭಾಗವನ್ನು ಗಿಡದಲ್ಲೇ ಬಿಟ್ಟಲ್ಲಿ ಅದು ಪೂರ್ತಿ ಒಣಗಿ ಉದುರಿಬಿದ್ದು ಪುಡಿಪುಡಿಯಾಗುತ್ತದೆ. ಈ ಪುಡಿಯೇ ಗಸಗಸೆ. ಇತ್ತೀಚಿನ ದಿನಗಳಲ್ಲಿ ಔಷಧೀಯ ಕ್ಷೇತ್ರದ ಬೇಡಿಕೆಗಾಗಿ ದೊಡ್ಡ ಪ್ರಮಾಣದಲ್ಲಿ ಗಸಗಸೆಯನ್ನು ಬೆಳೆಯುವವರು ಯಂತ್ರಗಳನ್ನು ಬಳಸಿ ಸಂಪೂರ್ಣ ಗಸಗಸೆ ಗಿಡಗಳನ್ನೇ ಕತ್ತರಿಸಿ ನೇರವಾಗಿ ಅವುಗಳನ್ನು ವಿದ್ಯುತ್ಚಾಲಿತ ಗಾಣಗಳಲ್ಲಿ ತೂರಿಸಿ ಅಂಟನ್ನು ತಯಾರಿಸುವ ಹೊಸ ತಂತ್ರವನ್ನು ಬಳಸುತ್ತಿದ್ದಾರೆ.
ಅಫೀಮು ಬಹೂಪಯೋಗಿ ವಸ್ತು. ಅದು ಹತ್ತು ಹಲವು ಅಲ್ಕಲೈಡ್ಗಳನ್ನು ಹೊಂದಿದೆ. ಅಂದಹಾಗೆ ಅಲ್ಕಲೈಡ್ಗಳು ನೈಸರ್ಗಿಕವಾಗಿ ಲಭ್ಯವಿರುವ ಸಾವಯವ ಸಂಯುಕ್ತಗಳು. ಹಲವು ಸಸ್ಯ, ಶಿಲೀಂಧ್ರ ಮತ್ತು ಬ್ಯಾಕ್ಟಿರಿಯಾಗಳು ಇವುಗಳನ್ನು ಹೇರಳವಾಗಿ ಹೊಂದಿರುತ್ತವೆ. ಕಾಫಿ, ಚಹಾ, ತಂಬಾಕು ಸೇವಿಸಿದಾಗ ಅವು ನೀಡುವ ಆಹ್ಲಾದಕತೆಗೆ ಕಾರಣವಾಗಿರುವ ಕೆಫೀನ್, ನಿಕೊಟಿನ್ಗಳೆಲ್ಲ ಅಲ್ಕಲೈಡ್ನ ಉದಾಹರಣೆಗಳು. ಅಫೀಮಿನ ವಿಷಯಕ್ಕೆ ಬಂದರೆ ಮುಖ್ಯವಾಗಿ ಅದು ಮಾರ್ಫಿನ್, ಕೊಡೈನ್, ದಬೈನ್ ಮತ್ತು ಪಪಾವರೈನ್ ಹೀಗೆ ನಾಲ್ಕು ಪ್ರಮುಖ ಅಲ್ಕಲೈಡ್ಗಳನ್ನು ಹೊಂದಿದೆ. ಅವುಗಳಲ್ಲಿ ಮಾರ್ಫಿನ್ ಅತ್ಯುತ್ತಮ ನೋವುನಿವಾರಕ. ಕೊಡೈನ್ ಕೆಮ್ಮಿಗೆ ರಾಮಬಾಣ. ದಬೈನ್ಅನ್ನು ನೋವುನಿವಾರಕ ತಯಾರಿಸಲು, ಪಪಾವರೈನ್ಅನ್ನು ಸ್ನಾಯುಸೆಳೆತದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಹೀಗಾಗಿ ಅಫೀಮಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಬೇಡಿಕೆಯಿದೆ.
ರೋಗಿಗಳ ಪ್ರಾಣ ಉಳಿಸುವಲ್ಲಿ ಇಷ್ಟೆಲ್ಲ ಪ್ರಮುಖ ಪಾತ್ರ ವಹಿಸುವ ಅಫೀಮು ಅದೇ ಜೀವಕ್ಕೆ ಮಾರಕವೂ ಹೌದು. ಅಫೀಮನ್ನು ರಾಸಾಯನಿಕ ಪ್ರಕ್ರಿಯೆಗೊಳಪಡಿಸಿ ಹೆರಾಯಿನ್ ತಯಾರಿಸುತ್ತಾರೆ. ಅತ್ಯಂತ ಅಮಲುದಾಯಕ, ಟಾಕ್ಸಿಕ್ ವಸ್ತುವಾಗಿರುವ ಹೆರಾಯಿನ್ ಒಂದು ನಿಷೇಧಿತ ಪದಾರ್ಥ. ಈ ಎರಡು ಕಾರಣಗಳಿಂದ ಅಫೀಮು ಔಷಧ ತಯಾರಕರಿಗೆ ಮತ್ತು ಮಾದಕ ವಸ್ತುಗಳ ಸಾಗಾಣಿಕೆದಾರರಿಗೆ ಅತ್ಯಂತ ಬೇಡಿಕೆಯ ವಸ್ತು. ಜಗತ್ತಲ್ಲಿ ಗಸಗಸೆ ಬೆಳೆಯುವವರನ್ನು ಎರಡು ಗುಂಪಿನಲ್ಲಿ ವಿಂಗಡಿಸಬಹುದು. ಮೊದಲನೆಯವರು ಅಡುಗೆಗೆ, ಔಷಧ ತಯಾರಿಕೆಗೆ ಪೂರ್ವಾನುಮತಿಯೊಂದಿಗೆ ಬೆಳೆಯುವವರು. ಎರಡನೆಯವರು ಮಾದಕ ಜಾಲಗಳಿಗೆ ಪೂರೈಸುವವರು.
ಝೆಕ್ ಗಣರಾಜ್ಯ, ಭಾರತ, ತಾಸ್ಮಾನಿಯ, ಆಸ್ಟ್ರೇಲಿಯಾ, ಟರ್ಕಿ, ಫ್ರಾನ್ಸ್ ಮತ್ತು ಸ್ಪೇನ್ ಔಷಧ ಉತ್ಪಾದನೆ ಮತ್ತು ಅಡುಗೆಗಾಗಿ ಗಸಗಸೆ ಬೆಳೆದರೆ ಮ್ಯಾನ್ಮಾರ್, ಅಫ್ಘಾನಿಸ್ತಾನ್, ಮೆಕ್ಸಿಕೊದಂಥ ದೇಶಗಳು ಮಾದಕಜಾಲಗಳಿಗಾಗಿಯೇ ಉತ್ಪಾದಿಸುತ್ತಿವೆ. ಔಷಧ ತಯಾರಿಕೆಗಾಗಿ ಗಸಗಸೆ ರಫ್ತು ಮಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಭಾರತದಲ್ಲಿ ಈ ಕೃಷಿಗೆ ಶತಮಾನಗಳ ಇತಿಹಾಸವಿದೆ. 15ನೇ ಶತಮಾನದಲ್ಲಿ ಮಧ್ಯಪ್ರದೇಶ, ಗುಜರಾತಿನಲ್ಲಿ ಆರಂಭವಾದ ಈ ಕೃಷಿಗೆ ಮೊಘಲರು ಹೆಚ್ಚಿನ ರಾಜಸ್ವ ಸಂಗ್ರಹಣೆಗಾಗಿ ಒತ್ತು ನೀಡಿದರು. ಆದರೆ ಮುಂದೆ ಬ್ರಿಟಿಷರ ಆಡಳಿತದಲ್ಲಿ ಆಂಗ್ಲರು ಗಸಗಸೆ ಕೃಷಿಯನ್ನು ಹೆಚ್ಚು ಪಸರಿಸಿದರು. ಇದನ್ನು ಮುಖ್ಯವಾಗಿ ಚೀನಾದೊಡನೆ ಚಹಾ ಮತ್ತು ರೇಷ್ಮೆಗೆ ವಿನಿಮಯವಾಗಿ ಬಳಕೆಯಾಗುತ್ತಿತ್ತು. ಈಗ ಕೇಂದ್ರೀಯ ಮಾದಕದೃವ್ಯಗಳ ಇಲಾಖೆಯ ಆಧೀನದಲ್ಲಿ ಗಸಗಸೆಯನ್ನು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಆಯ್ದ ವಿಭಾಗಗಳ ರೈತರಿಗೆ ಪೂರ್ವಾನುಮತಿ ನೀಡಿ ಸಂಪೂರ್ಣ ಇಲಾಖೆಯ ನಿಗಾದಲ್ಲಿ ಬೆಳೆಯಲಾಗುತ್ತದೆ.
ಗಸಗಸೆ ಬೆಳೆಯಲು ಶೀತಲ, ಶುಷ್ಕ ವಾತಾವರಣ ಬೇಕು. ಹೀಗಾಗಿ ಭೂಮಧ್ಯ ಪ್ರದೇಶ, ಪಶ್ಚಿಮ ಏಷ್ಯಾ ಮತ್ತು ಭಾರತದ ಹಲವು ಪ್ರದೇಶಗಳು ಈ ಬೆಳೆಗೆ ಹೇಳಿ ಮಾಡಿಸಿದಂತಿವೆ. 1970ರವರೆಗೂ ಅಫ್ಘಾನಿಸ್ತಾನದಲ್ಲಿ ಗಸಗಸೆ ಕೃಷಿ ಅಷ್ಟಕ್ಕಷ್ಟೇ ಎನ್ನುವಂತಿತ್ತು. ನಂತರ ನಡೆದ ಬೆಳವಣಿಗೆಗಳಲ್ಲಿ ಆಗಿನ ಸೋವಿಯತ್ ಯೂನಿಯನ್ ಅಲ್ಲಿನ ಸರ್ಕಾರಕ್ಕೆ ಸಹಾಯಹಸ್ತ ನೀಡಲು ಮುಂದೆ ಬಂದಾಗ ಅಮೆರಿಕ ತನ್ನ ಬದ್ಧವೈರಿಯ ನಡೆಗೆ ವಿರುದ್ಧವಾಗಿ ಅಫ್ಘಾನಿಸ್ತಾನದಲ್ಲಿ ಜಿಹಾದಿ ಗುಂಪುಗಳನ್ನು ಉತ್ತೇಜಿಸಲು ಆರ್ಥಿಕ ನೆರವು ನೀಡಿತು. ‘ಆಪರೇಷನ್ ಸೈಕ್ಲೋನ್’ ಹೆಸರಿನಲ್ಲಿ ನಡೆದ ಈ ಆರ್ಥಿಕ ನೆರವಿನ ಒಂದು ಭಾಗ ಈ ‘ಗಸಗಸೆ ಕೃಷಿ’. ದೊಡ್ಡಣ್ಣನ ಕೃಪಾಕಟಾಕ್ಷದಲ್ಲಿ ನಡೆದ ಈ ಅಫೀಮು ತಯಾರಿಕಾ ಕಾರ್ಯಕ್ರಮ ಅಲ್ಲಿನ ಭಯೋತ್ಪಾದಕರಿಗೆ ಆರಾಮವಾಗಿ ದುಡ್ಡು ಸಂಪಾದಿಸುವ ಮಾರ್ಗವಾಗಿ ಪರಿಣಮಿಸಿ ಬಲುಬೇಗ ಆ ರಾಷ್ಟ್ರದಲ್ಲಿ ಮತ್ತಷ್ಟು ಗಸಗಸೆ ರೈತರ ಹುಟ್ಟಿಗೆ ಕಾರಣವಾಯಿತು. ಜತೆಗೆ ಅಫ್ಘಾನಿಸ್ತಾನದ ಯುವಜನತೆ ಸುಲಭವಾಗಿ ಎಟಕುವ ಮಾದಕ ವಸ್ತುವಿಗೆ ದಾಸರಾದರು.
ಅಂಕಿ ಅಂಶಗಳು ಹೇಳುವಂತೆ 1990ರಷ್ಟರಲ್ಲಿ ಜಾಗತಿಕವಾಗಿ ಮಾದಕ ಜಾಲಕ್ಕೆ ಪೂರೈಕೆಯಾಗುವ ಆಫೀಮಿನಲ್ಲಿ ಮುಕ್ಕಾಲು ಪಾಲು ಅಫ್ಘಾನಿಸ್ತಾನ್ ಮೂಲದ್ದಾಗಿತ್ತು. ದೊಡ್ಡಣ್ಣನ ಈ ಟಾಕ್ಸಿಕ್ ಕಾರ್ಯಾಚರಣೆಯ ಕತೆಗೆ ಇಲ್ಲೊಂದು ತಿರುವು ಇದೆ. ತನ್ನ ಬದ್ಧವೈರಿಯ ವಿರುದ್ಧ ಕತ್ತಿ ಮಸೆಯಲು ಅಮೆರಿಕವು ಅಫೀಮು ತಯಾರಿಕೆಯ ಹುಳವನ್ನೇನೋ ಅಫ್ಘಾನಿಸ್ತಾನದೊಳಗೆ ಬಿಡುವಲ್ಲಿ ಯಶಸ್ವಿಯಾಯಿತು. ಆದರೆ ಅದು ಪೆಡಂಭೂತವಾಗಿ ಬೆಳೆದು ಅಲ್ಲಿ ತಯಾರಾಗುತ್ತಿದ್ದ ಅಫೀಮಿನ ಹೆಚ್ಚಿನ ಭಾಗ ಮಾದಕ ವಸ್ತುಗಳ ಸಾಗಾಣಿಕೆದಾರರ ಜಾಲದ ಮೂಲಕ ಅಮೆರಿಕದೊಳಗೆ ಬಂದು ಅಲ್ಲಿನ ಯುವಜನತೆಯ ವ್ಯಸನದ ಮೂಲವಾಯಿತು. ಇದು ಅಮೆರಿಕದ ಆಡಳಿತಕ್ಕೆ ಗೊತ್ತಾಗುವಷ್ಟರಲ್ಲಿ ಬಹಳ ತಡವಾಗಿತ್ತು. ಆದರೂ ಅದನ್ನು ರಿಪೇರಿ ಮಾಡುವ ನಿಟ್ಟಿನಲ್ಲಿ ನಡೆಸಿದ ಒಂದು ಪ್ರಯತ್ನವೇ ಈ ಗಸಗಸೆ ಬೀಜಗಳ ಎಸೆಯುವಿಕೆ ಕಾರ್ಯಾಚರಣೆ.
‘ವಾಷಿಂಗ್ಟನ್ ಪೋಸ್ಟ್’ ವರದಿ ಪ್ರಕಾರ ಸಿಐಎ ಕಾರ್ಯಾಚರಣೆಯಲ್ಲಿ ಎಸೆಯಲ್ಪಟ್ಟ ಗಸಗಸೆ ಬೀಜಗಳು ಅತ್ಯಂತ ಕಡಿಮೆ ಇಳುವರಿ ನೀಡುವಂತಹ ಜೈವಿಕವಾಗಿ ಮಾರ್ಪಾಡು ಮಾಡಿರುವ ಬೀಜಗಳಾಗಿದ್ದು ಇವುಗಳ ವಿನ್ಯಾಸ ಹೇಗಿದೆಯೆಂದರೆ ಅಫ್ಘಾನಿಸ್ತಾನದಲ್ಲಿ ಬೆಳೆಯಲಾಗುತ್ತಿದ್ದ ಸ್ಥಳೀಯ ಗಸಗಸೆ ಗಿಡಗಳು ಬೆಳೆದು ನಿಲ್ಲುವ ಮೊದಲೇ ಈ ಗಿಡಗಳು ಎದ್ದು ನಿಲ್ಲುವಂಥವು. ಯೋಜನೆಯ ಮೂಲ ಉದ್ದೇಶ ಈ ಗಿಡಗಳು ಸ್ಥಳೀಯ ಗಸಗಸೆ ಗಿಡಗಳ ಜತೆಗೆ ಪರಾಗಸ್ಪರ್ಶವಾಗಿ ನಂತರ ಹುಟ್ಟಿಬರುವ ಪೈರಿನ ಇಳುವರಿ ಪೀಳಿಗೆಯಿಂದ ಪೀಳಿಗೆಗೆ ಕಡಿಮೆಯಾಗುತ್ತ ಕೊನೆಗೆ ಅಲ್ಲಿನ ಬೆಳೆಗಾರರಿಗೆ ಈ ಕೃಷಿ ಲಾಭದಾಯಕವಲ್ಲ ಎನ್ನುವ ಮಟ್ಟಿಗೆ ಇಳಿಸುವುದಾಗಿತ್ತು. ಆದರೆ ಈ ಆಶಯ ಎಷ್ಟರಮಟ್ಟಿಗೆ ಪೂರ್ತಿಯಾಗಿದೆ ಎನ್ನುವುದಕ್ಕೆ ನಿಖರ ಅಂಕಿಅಂಶಗಳಿಲ್ಲ.
ಈ ನಡುವೆ ಅಮೆರಿಕದ ಮಿಲಿಟರಿ ಕಾರ್ಯಾಚರಣೆ ಮುಗಿದು ತಾಲಿಬಾನ್ ಆಡಳಿತ ಮತ್ತೆ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ ಸ್ಥಳೀಯ ಯುವಜನತೆ ಮಾದಕ ವಸ್ತುಗಳ ದಾಸರಾಗುತ್ತಿರುವುದನ್ನು ಗಮನಿಸಿ ಒಂದೆರಡು ವರ್ಷ ಅಲ್ಲಿ ಅಫೀಮು ಕೃಷಿಯನ್ನು ನಿರ್ಬಂಧಿಸಲಾಗಿತ್ತು. ಆದರೆ ಇದರಿಂದ ಅಲ್ಲಿನ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದ ಕಾರಣ ಅದು ಮತ್ತೆ ಅಲ್ಲಿ ಆರಂಭವಾಗಿದೆಯೆಂಬ ಸುದ್ದಿ ಇದೀಗ ಕೇಳಿ ಬರುತ್ತಿದೆ. ಆದರೆ ಅದು ಈ ಮೊದಲಿನಂತೆ ಅಲ್ಲಿನ ಪೂರ್ವ ಭಾಗದಿಂದ ಸ್ಥಳಾಂತರಿಸಿ ದಕ್ಷಿಣ ಭಾಗಕ್ಕೆ ಆಡಳಿತದ ನಿಗಾದಲ್ಲಿ ನಡೆಯುತ್ತಿದೆ. ಹೀಗಾಗಿ ಸಿಐಎಯ ಯೋಜನೆ ಕೈಕೊಡುವ ಸಾಧ್ಯತೆ ಹೆಚ್ಚು ಎನ್ನುವುದು ಪರಿಣತರ ಅಭಿಪ್ರಾಯ.
ವರದಿ ಪ್ರಕಟವಾಗುತ್ತಿದಂತೆಯೇ ಅಮೆರಿಕದ ಈ ‘ಬೀಜ ಎಸೆತ ಕಾರ್ಯಾಚರಣೆ’ ಕುರಿತು ದೇಶದಲ್ಲೇ ಅಪಸ್ವರ ಎದ್ದಿದ್ದು ಕೋಟಿ ಕೋಟಿ ಡಾಲರ್ ನುಂಗಿದ ಈ ಯೋಜನೆಯೊಂದು ಮೂರ್ಖ ಕಾರ್ಯಕ್ರಮವೆಂದು ಎಲ್ಲೆಡೆ ಜರಿಯಲಾಗುತ್ತಿದೆ. ಆದರೆ ಅದು ಹೇಳಿಕೇಳಿ ದೊಡ್ಡಣ್ಣ. ತಾನು ಬಿಟ್ಟ ಬಾಣ ತಿರುಗಿಬಂದು ತನ್ನನ್ನೇ ಚುಚ್ಚಿದರೂ ಮೀಸೆ ಮಣ್ಣಾಗದ ರೀತಿ ಪೋಸು ನೀಡುತ್ತಿದೆ. ಮತ್ತೊಂದೆಡೆ ಹಿಂಬಾಗಿಲಿನಿಂದ ಎಂಟ್ರಿ ಕೊಡುತ್ತಿರುವ ಅಫ್ಘಾನಿ ಅಫೀಮು ಅಮೆರಿಕದ ಯುವಜನತೆಯ ಆರೋಗ್ಯವನ್ನು ಬರ್ಬಾದು ಮಾಡುವುದಂತೂ ಅವ್ಯಾಹತವಾಗಿ ಮುಂದುವರೆದಿದೆ.