ಎರಡು ಬೇಲಿಗಳು ಗಡಿ ದಾಟಿದ ಕುತೂಹಲದ ಕತೆ

ಎರಡು ಬೇಲಿಗಳು ಗಡಿ ದಾಟಿದ ಕುತೂಹಲದ ಕತ
ಎರಡು ಬೇಲಿಗಳು ಗಡಿ ದಾಟಿದ ಕುತೂಹಲದ ಕತ
Published on
ಇತ್ತೀಚೆಗೆ ಗೋಕರ್ಣದ ಸಾಣಿಕಟ್ಟೆಗೆ ಕಾರ್ಯನಿಮಿತ್ತ ಹೋಗಿದ್ದ ನನಗೆ ಪರಿಚಯದ ಹಿರಿಯರೊಬ್ಬರ ಜೊತೆಗೆ ಹರಟುವ ಅವಕಾಶ ಸಿಕ್ಕಿತ್ತು. ಸಾಣಿಕಟ್ಟೆ 1720ರಿಂದ ಉಪ್ಪಿನ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವುದಲ್ಲದೆ, ಕರ್ನಾಟಕದ ಅತ್ಯಂತ ಹಳೆಯ ವಿದ್ಯುತ್ ಕಾರ್ಖಾನೆಯನ್ನೂ ಹೊಂದಿದೆ. 1952ರಲ್ಲಿ ಇಲ್ಲಿನ ಉಪ್ಪು ತಯಾರಿಕೆಯ ಸಂಸ್ಥೆಗಳೆಲ್ಲ ಒಗ್ಗೂಡಿ ಸಹಕಾರಿ ಸಂಘವನ್ನು ಸ್ಥಾಪಿಸಿದಾಗ ಅದು ಭಾರತದ ಪ್ರಥಮ ಉಪ್ಪು ತಯಾರಿಕಾ ಸಹಕಾರಿ ಸಂಘವೆಂಬ ಖ್ಯಾತಿಗೆ ಪಾತ್ರವಾಗಿತ್ತು. 1930ರಲ್ಲಿ ಗಾಂಧೀಜಿ ದಂಡಿಯಾತ್ರೆಯಿಂದ ಸ್ಫೂರ್ತಿಪಡೆದ ಸ್ಥಳೀಯ ಸೇನಾನಿಗಳು ಅದೇ ವರ್ಷ ಏಪ್ರಿಲ್‌ನಲ್ಲಿ ಸಾಣಿಕಟ್ಟೆಯಿಂದ ಅನತಿದೂರದಲ್ಲಿರುವ ಅಂಕೋಲೆಯ ಪೂಜಗೇರಿಯಲ್ಲಿ ಉಪ್ಪನ್ನು ತಯಾರಿಸಿ ಸಾಂಕೇತಿಕ ಸತ್ಯಾಗ್ರಹವನ್ನಾಚರಿಸಿದ್ದರು. ಇದು ಅಂಕೋಲೆಗೆ "ಕರ್ನಾಟಕದ ಬಾರ್ಡೋಲಿ' ಎಂಬ ಹೆಸರನ್ನು ತಂದುಕೊಟ್ಟಿದೆ. ಹಿಂದೊಮ್ಮೆ ಬ್ರಿಟಿಷರು ಉಪ್ಪನ್ನು ಕಾಪಿಟ್ಟುಕೊಳ್ಳಲು ದೊಡ್ಡ ಬೇಲಿಯೊಂದನ್ನು ನಿರ್ಮಿಸಿದ್ದರು ಎಂಬ ಹೊಸ ವಿಷಯವೊಂದು ಆ ಹಿರಿಯರ ಜೊತೆಗಿನ ಮಾತುಕತೆಯ ವೇಳೆ ಗೊತ್ತಾಯಿತು. ಆಸಕ್ತಿಯಿಂದ ಲಭ್ಯವಿರುವ ಮೂಲಗಳನ್ನು ಜಾಲಾಡಿಸಿದ ನಂತರ ಗೊತ್ತಾಗಿದ್ದಿಷ್ಟು.
ಅದು ಹತ್ತೊಂಬತ್ತನೇ ಶತಮಾನದ ಆರಂಭದ ಕತೆ. ಬ್ರಿಟಿಷರು ಭಾರತದಲ್ಲಿ ನಿಧಾನವಾಗಿ ತಮ್ಮ ಸಾಮ್ರಾಜ್ಯದ ವ್ಯಾಪ್ತಿಯನ್ನು ಹಿಗ್ಗಿಸುತ್ತಿದ್ದರು. ಅಖಂಡ ಭಾರತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಅವರ ಗುರಿ ಆ ಹೊತ್ತಿನಲ್ಲಿ ಸಾಧ್ಯವಾಗಿರಲಿಲ್ಲ. ಭಾರತದಲ್ಲಿ ತಮ್ಮ ಖಜಾನೆಯನ್ನು ತುಂಬಿಕೊಳ್ಳುವ ಯಾವ ಅವಕಾಶವನ್ನೂ ತಪ್ಪಿಸಿಕೊಳ್ಳಲು ಸಿದ್ಧವಿರದ ಅವರುಗಳು ಅಡುಗೆಯ ಅತಿಮುಖ್ಯ ಭಾಗವಾಗಿರುವ ಉಪ್ಪಿಗೆ ದೊಡ್ಡ ಪ್ರಮಾಣದಲ್ಲಿ ಕರವನ್ನು ನಿಗದಿಪಡಿಸಿದ್ದರು. ಈ ಕರವು ಬ್ರಿಟಿಷರ ಆಡಳಿತದಲ್ಲಿದ್ದ ಪ್ರಾಂತ್ಯಕ್ಕಷ್ಟೇ ಸೀಮಿತವಾಗಿದ್ದ ಕಾರಣ ಉಳಿದ ಪ್ರಾಂತ್ಯಗಳಲ್ಲಿನ ಉಪ್ಪಿನ ದರಕ್ಕೂ ಬ್ರಿಟಿಷರ ಪ್ರಾಂತ್ಯದ ದರಕ್ಕೂ ಭಾರಿ ವ್ಯತ್ಯಾಸವಿತ್ತು. ಇದು ಗಡಿಭಾಗದಿಂದ ಕಡಿಮೆ ದರದ ಉಪ್ಪು ಕಳ್ಳದಾರಿಯಿಂದ ಬ್ರಿಟಿಷರ ಆಡಳಿತದ ಪ್ರಾಂತ್ಯದೊಳಗೆ ನುಸುಳುವುದಕ್ಕೆ ಕಾರಣವಾಯಿತು. ಬೊಕ್ಕಸಕ್ಕೆ ನಷ್ಟವಾಗುತ್ತಿರುವುದನ್ನು ಅರಿತ ಬ್ರಿಟಿಷ್ ಆಡಳಿತವು ತಮ್ಮ ವ್ಯಾಪ್ತಿಯ ಪ್ರದೇಶದೊಳಗೆ ತೆರಿಗೆ ಪಾವತಿಸದ ಉಪ್ಪು ನುಸುಳುವುದನ್ನು ತಡೆಯಲು ಮುಳ್ಳುಗಿಡಗಳ ಬೇಲಿಯನ್ನು ನಿರ್ಮಿಸಿತು. ಜೊತೆಗೆ ಆ ಬೇಲಿಗುಂಟ ಸಾವಿರಾರು ಸಿಪಾಯಿಗಳನ್ನೂ ನಿಯೋಜಿಸಲಾಯಿತು. ಮೂಲಗಳ ಪ್ರಕಾರ 1869ರಲ್ಲಿ ಈ ಕಾರ್ಯಕ್ಕೆ 1200 ಸಿಪಾಯಿಗಳು ಮತ್ತು 1727 ನಾಕೆಗಳನ್ನು ನಿಯೋಜಿಸಲಾಯಿತು. ಕಾಲಕ್ರಮೇಣ ಬ್ರಿಟಿಷ್ ಸಾಮ್ರಾಜ್ಯವು ವಿಸ್ತಾರವಾದಂತೆಲ್ಲ ಬೇಲಿಯೂ ಬೆಳೆಯುತ್ತ ಹೋಗಿ 1869ರ ಹೊತ್ತಿಗೆ ಇಂದಿನ ಪಾಕಿಸ್ತಾನದಲ್ಲಿರುವ ಮುಲ್ತಾನ್‌ನಿಂದ ಒಡಿಶಾವರೆಗೆ ನಾಲ್ಕು ಸಾವಿರ ಕಿಲೋಮೀಟರ್ ಉದ್ದಕ್ಕೆ ಚಾಚಿಕೊಂಡಿತ್ತು.
ಹತ್ತರಿಂದ ಹನ್ನೆರಡು ಅಡಿ ಎತ್ತರ ಮತ್ತು ಹದಿನಾಲ್ಕು ಅಡಿ ಅಗಲಕ್ಕೆ ಬೆಳೆದುಕೊಂಡಿದ್ದ ಕಾವಲು ಬೇಲಿಯಲ್ಲಿ ಪ್ರಮುಖವಾಗಿ ಬೆಳೆಸಿದ್ದು ಅಮಟೆಕಾಯಿ, ಕೌಳಿ ಹಣ್ಣು, ಕರಿಜಾಲಿ, ಪಾಪಾಸುಕಳ್ಳಿ ಮತ್ತು ಬಿದಿರು ಗಿಡಗಳನ್ನು. ಸಾಮಾನ್ಯವಾಗಿ ಪಶ್ಚಿಮ ಘಟ್ಟ ಮತ್ತು ನೀಲಗಿರಿ ಶ್ರೇಣಿಯಲ್ಲಿ ಕಂಡುಬರುವ ಈ ಗಿಡಗಳು ಉತ್ತರ ಭಾರತಕ್ಕೆ ಪರಿಚಯವಾದದ್ದೇ ಈ ಬೃಹತ್ ಮುಳ್ಳುಬೇಲಿಯಿಂದ. 1879ರ ವೇಳೆಗೆ ಭಾರತದ ಹೆಚ್ಚಿನ ಭಾಗದಲ್ಲಿ ಬ್ರಿಟಿಷರು ಸಾಮ್ರಾಜ್ಯವನ್ನು ವಿಸ್ತರಿಸಿದ್ದ ಕಾರಣ ಉಪ್ಪಿನ ತೆರಿಗೆ ದೇಶಾದ್ಯಂತ ಏಕರೂಪವಾಯಿತು. ಹೀಗಾಗಿ ಮುಳ್ಳುಗಿಡಗಳ ಬೇಲಿಯ ನಿರ್ವಹಣೆಯನ್ನು ಸರ್ಕಾರ ಕೈಬಿಟ್ಟಿತು. ಇದರಿಂದ ಗಿಡಗಳೆಲ್ಲ ಸೊರಗಿ ಬೇಲಿ ಸಾಯತೊಡಗಿತು. ಚೀನಾದ ಮಹಾಗೋಡೆಯ ರೀತಿಯಲ್ಲಿ ನಿರ್ಮಾಣವಾಗಿದ್ದು, ಬ್ರಿಟಿಷರ ದೌರ್ಜನ್ಯದ ಸಾಯುಧನಂತಿದ್ದ ಆ ಮುಳ್ಳುಬೇಲಿಯನ್ನು ನಂತರದ ತಲೆಮಾರುಗಳು ಮರೆತು ಹೋದವು.
1893ರಲ್ಲಿ ರಚಿತವಾಗಿದ್ದ ಪುಸ್ತಕವೊಂದರಲ್ಲಿ ಆ ಮಹಾಬೇಲಿಯ ಕುರಿತು ಉಲ್ಲೇಖವಿತ್ತು. ಲಂಡನ್‌ನ ಹಳೆಯ ಲೈಬ್ರರಿಯೊಂದರಲ್ಲಿ ಆ ಪುಸ್ತಕವು ರಾಯ್ ಮೊಕ್ಸ್ ಹ್ಯಾಮ್ ಎಂಬ ಲೇಖಕನಿಗೆ 1994ರಲ್ಲಿ ಸಿಕ್ಕಿತು. ಅದನ್ನೋದಿ ಕುತೂಹಲ ತಡೆಯಲಾಗದೆ ಮುಂದಿನ ಮೂರು ವರ್ಷಗಳ ಕಾಲ ಭಾರತದಲ್ಲೆಲ್ಲ ಸುತ್ತಿ ಆ ಬೇಲಿಯ ಅಳಿದುಳಿದ ಕುರುಹುಗಳನ್ನೆಲ್ಲ ಜಾಲಾಡಿಸಿ ಬರೆದ ಪುಸ್ತಕ "ದಿ ಗ್ರೇಟ್ ಹೆಡ್ಜ್ ಆಫ್ ಇಂಡಿಯಾ' ಪ್ರಕಟವಾದ ನಂತರ ಈ ವಿಷಯ ಮತ್ತೆ ಮುನ್ನೆಲೆಗೆ ಬಂತು.
ಭಾರತದ ಯಾವುದೋ ಮೂಲೆಯಲ್ಲಿದ್ದ ಮುಳ್ಳುಗಿಡಗಳು ಬ್ರಿಟಿಷರ ಉಪ್ಪಿನ ತೆರಿಗೆಯಿಂದ ಸೀಮೋಲ್ಲಂಘನಗೈದು ಇನ್ನೊಂದು ಭಾಗದಲ್ಲಿ ಹರಡಿಕೊಳ್ಳಲು ಕಾರಣವಾಯಿತೋ ಅದೇ ರೀತಿ ಅವರದ್ದೇ ಆಡಳಿತದಲ್ಲಿ ಮತ್ತೊಂದು ಸಸ್ಯ ಗಡಿದಾಟಿ ಭಾರತದೊಳಗೆ ಬಂತು. ಭೂತಾಳೆ ಕೆಲವೊಂದು ಕಡೆ ಕತ್ತಾಳೆ ಎಂದೂ ಕರೆಯಲಾಗುವ ಈ ಗಿಡದ ಮೂಲ ಮೆಕ್ಸಿಕೋ. 19ನೇ ಶತಮಾನದ ಮಧ್ಯಭಾಗದಲ್ಲಿ ಭಾರತದಲ್ಲಿ ರೈಲು ಸೇವೆ ಆರಂಭವಾದೊಡನೆ ಬಲುಬೇಗ ಜನಪ್ರಿಯತೆಗಳಿಸಿದರೂ ಜೊತೆಗೆ ರೈಲು ಹಳಿಗಳಿಗೆ ಅಡ್ಡ ನಿಂತು ಪ್ರಾಣಕೊಡುತ್ತಿದ್ದ ಜಾನುವಾರುಗಳನ್ನು ನಿಯಂತ್ರಿಸುವ ಹೊಸದೊಂದು ತಲೆಬೇನೆ ಆಡಳಿತ ವರ್ಗಕ್ಕೆ ಹೊತ್ತುತಂತು. ಅವುಗಳನ್ನು ತಡೆಯಲು ಹಳಿಗುಂಟ ಗೋಡೆಗಳನ್ನು ನಿರ್ಮಿಸುವುದು ಆರ್ಥಿಕವಾಗಿ ಭಾರಿ ವೆಚ್ಚದ ಬಾಬ್ತು ಆಗಿದ್ದ ಕಾರಣ, ಬೇಗ ಹಬ್ಬಿಕೊಳ್ಳುವ ಮುಳ್ಳಿನ ಗಿಡಗಳನ್ನು ನೆಡುವ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಯಿತು. ಈ ಕಾರ್ಯಕ್ಕೆ ಬ್ರಿಟಿಷರು ಆಯ್ದುಕೊಂಡಿದ್ದು ಭೂತಾಳೆ ಗಿಡವನ್ನು. ಈ ಮುಳ್ಳು ಗಿಡವನ್ನು ನಂತರದ ದಿನಗಳಲ್ಲಿ ನಮ್ಮ ರೈತರೂ ಬೇಲಿಯಾಗಿ ಬಳಸಲಾರಂಭಿಸಿದರು. ರೈಲ್ವೆಯ ತಾಂತ್ರಿಕತೆ ಉತ್ತಮಗೊಳ್ಳುತ್ತಿದ್ದಂತೆ ಈ ಮುಳ್ಳಿನಗಿಡವನ್ನು ಬಳಸುವುದು ಕಡಿಮೆಯಾದರೂ, ರೈತರು ಹೊಲಕ್ಕೆ ಬೇಲಿಯನ್ನಾಗಿ ಉಪಯೋಗಿಸುವುದು ಮುಂದುವರಿದಿತ್ತು. ಹೀಗೆ ಭೂತಾಳೆ ಗಿಡವು ಹೊಲದ ಸೀಮೆಯನ್ನು ದಾಟಿ ಕಾಡುಮೇಡುಗಳಲ್ಲಿ ನುಗ್ಗಿತು. ನಾಲ್ಕಾಣೆ ಪ್ರಯೋಜನಕ್ಕೆ ಬಾರದ ಮುಳ್ಳುಮೈ ಗಿಡವೆಂಬ ಹಣೆಪಟ್ಟಿ ಅಂಟಿಸಲಾಗಿದ್ದ ಗಿಡದ ನಸೀಬು ಒಂದು ದಿನ ಖುಲಾಯಿಸಬಹುದೆಂದು ಬಹುಶಃ ಯಾರೂ ಅಂದುಕೊಂಡಿರಲಿಕ್ಕಿಲ್ಲ.
"ಟೆಕಿಲಾ' ಎನ್ನುವುದು ಮೆಕ್ಸಿಕೋ ದೇಶದ ಜಲಿಸ್ಕೊ ರಾಜ್ಯದಲ್ಲಿರುವ ಒಂದು ಊರಿನ ಹೆಸರು. ಅಸಲಿಗೆ ಆ ರಾಜ್ಯದ ಹೆಚ್ಚಿನ ಪ್ರದೇಶವು ಶತಮಾನಗಳ ಹಿಂದೊಮ್ಮೆ ಜ್ವಾಲಾಮುಖಿಯೊಂದು ಬಾಯ್ತೆರೆದು ಉಗುಳಿ ತಣ್ಣಗಾಗಿರುವ ಜಾಗ. ಹೀಗಾಗಿ ಅಲ್ಲಿನ ಫಲವತ್ತಾದ ಕೆಂಪುಮಣ್ಣಿನ ಪ್ರದೇಶದಲ್ಲಿ ಸ್ಥಳೀಯರು ನೀಲಿ ಭೂತಾಳೆಯನ್ನು ಬೆಳೆಯುತ್ತಾರೆ. ಸ್ಥಳೀಯರು ಹದಿನಾರನೇ ಶತಮಾನದಲ್ಲಿ ಇಲ್ಲಿನ ಕಾಡುಗಳಲ್ಲಿ ಕುರುಚಲು ಗಿಡವಾಗಿ ಢಾಳಾಗಿ ಬೆಳೆದಿದ್ದ ನೀಲಿ ಭೂತಾಳೆ ಗಿಡದ ರಸವನ್ನು ಭಟ್ಟಿ ಇಳಿಸಿ ಮದ್ಯವನ್ನು ತಯಾರಿಸುವ ಕಲೆಯನ್ನು ಕರಗತ ಮಾಡಿಕೊಂಡರು. ಸ್ಥಳೀಯ ವೈಶಿಷ್ಟ್ಯವಾಗಿ ಆ ಪ್ರದೇಶಕ್ಕೆ ಸೀಮಿತವಾಗಿದ್ದ ಆ ಪೇಯವು ನಿಧಾನವಾಗಿ ತನ್ನ ಜನಪ್ರಿಯತೆಯನ್ನು ಹೊರಲೋಕಕ್ಕೆ ವಿಸ್ತರಿಸಿಕೊಂಡಿತು. ಇದು ಮುಂದುವರಿದು ದೇಶದ ಗಡಿಯನ್ನೂ ಮೀರಿ ಸಪ್ತಸಾಗರದಾಚೆಗೂ ಹಬ್ಬಿಕೊಂಡಿತು. ಇಂದು ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಈ ಮದ್ಯವು ಬೇಡಿಕೆಯಲ್ಲಿ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿರುವುದು ಅದರ ಜನಪ್ರಿಯತೆಯನ್ನು ಹೇಳುತ್ತದೆ. ಟೆಕಿಲಾವೀಗ ಮೆಕ್ಸಿಕೋದ ರಾಷ್ಟ್ರೀಯ ಮದ್ಯ. ಟೆಕಿಲಾ ಊರಿನ ಆಸುಪಾಸಿನ ಪ್ರದೇಶವನ್ನು ಯುನೆಸ್ಕೋ 2006ರಲ್ಲಿ ಪಾರಂಪರಿಕ ತಾಣವನ್ನಾಗಿ ಘೋಷಿಸಿದೆ. ಹದಿನಾರನೇ ಶತಮಾನದಲ್ಲಿ ಅಲ್ಲಿನ ಜನರು ಟೆಕಿಲಾ ಮದ್ಯವನ್ನು ತಯಾರಿಸಲು ಬಳಸುತ್ತಿದ್ದ ಭಟ್ಟಿಗಳನ್ನು, ನೀಲಿ ಭೂತಾಳೆ ಗಿಡದ ಹೊಲಗಳನ್ನು ಹಾಗೇ ಕಾಪಿಟ್ಟುಕೊಂಡು ಪ್ರವಾಸಿತಾಣವನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಇವುಗಳನ್ನು ನೋಡಲು ಪ್ರತಿವರ್ಷ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಅಲ್ಲದೆ, ಟೆಕಿಲಾ ಮದ್ಯಕ್ಕೆ "ಡಿನಾಮಿನೇಷನ್ ಆಫ್ ಒರಿಜಿನ್' ಸಂರಕ್ಷಣೆಯನ್ನು ನೀಡಲಾಗಿದೆ. ಅಂದರೆ ಟೆಕಿಲಾ ಮದ್ಯವನ್ನು ಈ ಪ್ರದೇಶದಲ್ಲಿ ಇಲ್ಲಿಯ ಸ್ಥಳೀಯ ಬೆಳೆಗಳನ್ನಷ್ಟೇ ಉಪಯೋಗಿಸಿ ಇಲ್ಲಿನ ಪದ್ಧತಿಗೆ ಅನುಸಾರವಾಗಿ ತಯಾರಿಸತಕ್ಕದ್ದು. ಇನ್ನೂ ಸರಳವಾಗಿ ಹೇಳಬೇಕೆಂದರೆ ಮೆಕ್ಸಿಕೋ ದೇಶದಲ್ಲಿ ಬಿಟ್ಟು ಮತ್ಯಾವುದೇ ಪ್ರದೇಶದಲ್ಲಿ ಇದನ್ನು ತಯಾರಿಸುವಂತಿಲ್ಲ. ಮೆಕ್ಸಿಕೋದಲ್ಲಿ ವಾರ್ಷಿಕವಾಗಿ ಆರು ಬಿಲಿಯನ್ ಡಾಲರ್‌ನಷ್ಟು ಮೌಲ್ಯದ ಟೆಕಿಲಾ ಉತ್ಪಾದನೆಯಾಗುತ್ತಿದ್ದು ಅದರಲ್ಲಿ ನಾಲ್ಕು ಬಿಲಿಯನ್ ಡಾಲರ್ ಮೌಲ್ಯದ ಸರಕನ್ನು ರಫ್ತು ಮಾಡಲಾಗುತ್ತದೆ.
ಟೆಕಿಲಾ ಜಾಗತಿಕವಾಗಿ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿರುವುದು ಭಾರತದಲ್ಲಿನ ಮದಿರೆಯ ತಯಾರಕರ ಗಮನಕ್ಕೂ ಬಂತು. ಆದರೆ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುವಲ್ಲಿರುವ ಕಾನೂನಾತ್ಮಕ ತೊಂದರೆಗಳ ಕಾರಣಕ್ಕೆ ಯಾರೂ ಆ ಗೋಜಿಗೆ ಹೋಗಿರಲಿಲ್ಲ. ಇನ್ನೂರಕ್ಕೂ ಹೆಚ್ಚು ಪ್ರಭೇದಗಳಿರುವ ಭೂತಾಳೆ ಗಿಡಗಳ ಐದು ಪ್ರಭೇದಗಳು ಭಾರತದಲ್ಲಿ ಬೆಳೆಯುತ್ತವೆ. 2011ರಲ್ಲಿ ಗೋವಾ ಮೂಲದ ಡೆಸ್ಮಂಡ್ ನಝರೆತ್ ಎಂಬ ಉದ್ಯಮಿಯೊಬ್ಬರು ಭಾರತದಲ್ಲಿ ಲಭ್ಯವಿರುವ ಭೂತಾಳೆಯನ್ನು ಬಳಸಿ ಟೆಕಿಲಾದ ಭಾರತೀಯ ಆವೃತ್ತಿಯನ್ನು ತಯಾರಿಸುವ ಸಾಹಸಕ್ಕೆ ಕೈ ಹಾಕಿದರು. ಅದಕ್ಕಾಗಿ ಅವರು ಆಯ್ದುಕೊಂಡಿದ್ದು ದಕ್ಕಣ ಪ್ರಸ್ಥಭೂಮಿಯನ್ನು. ಅಲ್ಲಿ ಕಂಡುಬರುವ ಭೂತಾಳೆ ಗಿಡಗಳು ಈ ಕಾರ್ಯಕ್ಕೆ ಸೂಕ್ತವಾಗಿವೆ ಎಂಬುದನ್ನು ಕಂಡುಕೊಂಡು ಸ್ಥಳೀಯ ರೈತರನ್ನು ಸಂಪರ್ಕಿಸಿ ಅವರಿಗೆ ಇಲ್ಲಿನ ಬಂಜರು ಪ್ರದೇಶಗಳಲ್ಲಿ ಬೆಳೆದುಕೊಂಡಿರುವ ಭೂತಾಳೆ ಗಿಡಗಳನ್ನು ಕಡಿದು ತಂದು ಭಟ್ಟಿಗೆ ಸಾಗಿಸುವ ತರಬೇತಿ ನೀಡಿದರು. ಭೂತಾಳೆ ಗಿಡಗಳು ತಮ್ಮ ಮಧ್ಯಭಾಗದಲ್ಲಿ ಸಕ್ಕರೆಯನ್ನು ಶೇಖರಿಸಿಕೊಳ್ಳುತ್ತವೆ. ಈ ಸಕ್ಕರೆಯು ಕೆಲದಿನಗಳಲ್ಲಿಯೇ ಗಿಡದ ಉಳಿದ ಭಾಗಕ್ಕೆ ರವಾನೆಯಾಗುವ ಕಾರಣಕ್ಕೆ ಅಷ್ಟರೊಳಗೆ ಕಡಿದು ಸಕ್ಕರೆಯನ್ನು ಹೊರತೆಗೆದು ಭಾರತೀಯ ಟೆಕಿಲಾವನ್ನು ತಯಾರಿಸಲಾಗುತ್ತದೆ. ಕಾಲಕ್ರಮೇಣ ಈ ಕಾರ್ಯದಲ್ಲಿ ರೈತರು ಪರಿಣತಿ ಪಡೆದು ಕೊಡು ಮತ್ತು ಕೊಳ್ಳುವವರಿಬ್ಬರ ಆತ್ಮವಿಶ್ವಾಸ ಹೆಚ್ಚಿದ ಮೇಲೆ ಆ ರೈತರೇ ತಮ್ಮ ಹೊಲದಲ್ಲಿ ಭೂತಾಳೆ ಕೃಷಿಗಿಳಿದರು. ಮತ್ತೊಂದೆಡೆ ಡೆಸ್ಮಂಡ್ ಉಪಗ್ರಹದ ನೆರವಿನಿಂದ ಸೂಕ್ತ ಪ್ರದೇಶವನ್ನು ಆಧರಿಸಿ ಅಲ್ಲಿ ಭೂತಾಳೆಯ ಹೊಲವನ್ನು ನಿರ್ಮಿಸಿದರು.
ಡೆಸ್ಮಂಡ್‌ರ ಪ್ರಯತ್ನವು ಫಲನೀಡಿದ್ದು, ಭಾರತದಲ್ಲಿ ಇದೀಗ ಹಲವು ಸ್ವದೇಶಿ ಟೆಕಿಲಾ ಬ್ರಾಂಡ್‌ಗಳು ಹುಟ್ಟಿಕೊಂಡಿವೆ. ನಮ್ಮಲ್ಲಿ ತಯಾರಾಗುವ ಟೆಕಿಲಾ ವಿದೇಶಿ ಬ್ರಾಂಡ್‌ಗಳ ತುಲನೆಯಲ್ಲಿ ಅರ್ಧದರಕ್ಕೆ ದೊರೆಯುತ್ತಿವೆ. 2026ರಲ್ಲಿ ಭಾರತದ ಟೆಕಿಲಾ ಉತ್ಪಾದನೆಯ ಮಾರುಕಟ್ಟೆಯ ಮೌಲ್ಯ 476 ಮಿಲಿಯನ್ ಡಾಲರ್ ಆಗಿದ್ದು ಅದು 2033ರಲ್ಲಿ 949 ಮಿಲಿಯನ್ ಡಾಲರ್ ವರೆಗೆ ತಲುಪುವ ನಿರೀಕ್ಷೆಯಿದೆ. ಪ್ರತಿವರ್ಷ ಶೇಕಡ 30ರ ದರದಲ್ಲಿ ಪ್ರಗತಿ ಸಾಧಿಸಿರುವ ಈ ಕ್ಷೇತ್ರವು ಜಾಗತಿಕವಾಗಿ ಅತಿವೇಗವಾಗಿ ಬೆಳೆಯುತ್ತಿರುವ ಟೆಕಿಲಾ ಮಾರುಕಟ್ಟೆಯೆಂಬ ಹಿರಿಮೆಗೆ ಪಾತ್ರವಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಪ್ರಕೃತಿ ವಿಕೋಪದಿಂದ ಬಳಲಿರುವ ಕರ್ನಾಟಕವೂ ಸೇರಿದಂತೆ ದಕ್ಕಣ ಪ್ರಸ್ಥಭೂಮಿಯ ರೈತನ ಮುಖದಲ್ಲಿ ಈ ಬೇಲಿಗಿಡವು ಮಂದಹಾಸ ಮೂಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net