ಅಳಿಸಿ ಹೋದವು ಬೆರಳಚ್ಚು ಜನಕರ ಹೆಜ್ಜೆಗುರುತುಗಳು

ಅಳಿಸಿ ಹೋದವು ಬೆರಳಚ್ಚು ಜನಕರ ಹೆಜ್ಜೆಗುರುತುಗಳು
Published on: 

(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

ಇತ್ತೀಚೆಗೆ ನಾರ್ವೆ ಮತ್ತು ಆಸ್ಟ್ರೇಲಿಯಾ ದೇಶಗಳ ವಿಧಿವಿಧಾನ ಲ್ಯಾಬ್​ಗಳು ನಡೆಸಿರುವ ಪ್ರಯೋಗವೊಂದು ವಿಧಿವಿಧಾನ ವಿಜ್ಞಾನಿಗಳ ಅಡಿಯಲ್ಲಿ ಸದ್ದು ಮಾಡುತ್ತಿದೆ. ಅಪರಾಧ ತನಿಖೆಯಲ್ಲಿ ನೆರವಾಗುವ ನಿಟ್ಟಿನಲ್ಲಿ ವಿಧಿವಿಧಾನ ತಂತ್ರಜ್ಞಾನದ ಬತ್ತಳಿಗೆ ಸಾಂಪ್ರದಾಯಿಕ ವಿಧಾನಗಳಾದ ಬೆರಳಚ್ಚು, ವಾಸನೆಯ ಜಾಡಿನ ಜೊತೆ ನವನವೀನ ವಿಧಾನಗಳು ಸೇರ್ಪಡೆಗೊಳ್ಳುತ್ತಲಿವೆ. ದಿನ ಕಳೆದಂತೆ ಅಪರಾಧಿಗಳು ತಮ್ಮನ್ನು ತಾಂತ್ರಿಕವಾಗಿ ಹೆಚ್ಚು ಅಪ್​ಡೇಟ್​ ಮಾಡಿಕೊಳ್ಳುತ್ತ ಯಾವ ಸುಳಿವುಗಳನ್ನೂ ಬಿಡದೇ ಘಟನಾ ಸ್ಥಳದಿಂದ ಕಾಲುಕೀಳುವ ಘಟನೆಗಳು ಹೆಚ್ಚಾದಂತೆ ತನಿಖಾ ಸಂಸ್ಥೆಗಳೂ ತಮ್ಮ ಕುಣಿಕೆಯನ್ನು ಮತ್ತಷ್ಟು ಬಿಗಿಗೊಳಿಸುವುದು ಅನಿವಾರ್ಯವಾಗಿದೆ. ಒಂದಂತೂ ನಿಜ. ಎಷ್ಟು ಕಾಳಜಿ ವಹಿಸಿದರೂ ಅಪರಾಧಿಗೆ ಒಂದೂ ಸುಳಿವನ್ನೂ ಬಿಡದೇ ಸ್ಥಳದಿಂದ ನಿರ್ಗಮಿಸುವುದು ಹೆಚ್ಚೂಕಮ್ಮಿ ಅಸಾಧ್ಯ. ಏಕೆಂದರೆ ಮಾನವನ ಸಹಿತ ಎಲ್ಲ ಜೀವಿಗಳೂ ತಾವಿರುವ ಸ್ಥಳದಲ್ಲಿ ತಮ್ಮ ಕುರುಹುಗಳನ್ನು ಬಿಟ್ಟು ಹೋಗುವುದೊಂದು ನೈಸರ್ಗಿಕ ಪ್ರಕ್ರಿಯೆ. ಅದು ನಾವು ಮುಟ್ಟುವ ವಸ್ತುಗಳ ಮೇಲೆ ಮೂಡುವ ಬೆರಳಚ್ಚು, ಉಸಿರಾಡುವಾಗ ಮತ್ತು ಮಾತಾಡುವಾಗ ಹಾರುವ ಎಂಜಲು, ತಲೆಯಿಂದ ಬೀಳುವ ಹೊಟ್ಟು ಮತ್ತು ಕೂದಲು ಅಥವಾ ಚರ್ಮದಿಂದ ಉದುರುವ ಒಣ ಜೀವಕೋಶಗಳೇ ಆಗಿರಬಹುದು. ಈ ನೈಸರ್ಗಿಕ ಪ್ರಕ್ರಿಯೆಯೇ ವಿಧಿವಿಧಾನ ತಂತ್ರಜ್ಞರಿಗೆ ಅಪರಾಧಿಗಳತ್ತ ದಾರಿತೋರುವ ಲಾಟೀನುಗಳು. ತನಿಖಾ ಮೂಲಗಳು ಹೇಳುವಂತೆ ಕಳ್ಳತನ, ಲೂಟಿಯಂತಹ ಅಪರಾಧಗಳು 9ರಿಂದ 15 ನಿಮಿಷಗಳ ಒಳಗೆ ಮುಗಿಯುತ್ತವೆ. ಹೀಗಾಗಿ ಸಿಕ್ಕ ಸುಳಿವುಗಳಲ್ಲಿ ಅಪರಾಧ ನಡೆದ ಸಮಯದ ಮತ್ತು ಬೇರೆ ಸಮಯದಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿರುವವರ ಸುಳಿವುಗಳನ್ನು ಪ್ರತ್ಯೇಕಿಸಿ ನೈಜ ಅಪರಾಧಿಯನ್ನು ತಲುಪುವುದರಲ್ಲೇ ತನಿಖಾ ತಂಡದ ಕೌಶಲ್ಯ ಅಡಗಿದೆ. ಈ ವಿಷಯವನ್ನು ಚೆನ್ನಾಗಿ ಅರಿತಿರುವ ಹೊಸ ಜಮಾನಾದ ಅಪರಾಧಿಗಳು ಕೈಗವಸು, ಮುಖಗವಚ, ಮೈಹೊದಿಕೆಗಳಂತಹ ವಿಧಾನಗಳನ್ನು ಬಳಸಿ ಸುಳಿವುಗಳನ್ನು ಮರೆಮಾಚುವ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇಂತಹ ತಂತ್ರಗಳಿಗೆ ಪ್ರತಿತಂತ್ರಗಳನ್ನು ಹೂಡಿ ತನಿಖಾ ತಂಡಗಳಿಗೆ ನೆರವಾಗಲು ವಿಜ್ಞಾನಿಗಳಿಗೆ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಅನಿವಾರ್ಯವಾಗಿದೆ.

ಅಪರಾಧಿಗಳು ಕೈಗವಸು, ಮುಖಗವಚ, ಮೈಹೊದಿಕೆಗಳಂತಹ ಸಾಧನಗಳನ್ನು ಬಳಸಿ ತಾವು ಸ್ಪರ್ಶಿಸಿದ ವಸ್ತುಗಳ ಮೇಲೆ ಕುರುಹುಗಳು ಮೂಡುವುದನ್ನು ಒಂದು ಮಟ್ಟಿಗೆ ತಪ್ಪಿಸಬಹುದು. ಆದರೆ ದೇಹವು ಬಾಹ್ಯವಾಗಿ ಹೊರಹಾಕುವ ಕುರುಹುಗಳನ್ನು ನಿಲ್ಲಿಸಲು ಸಾಧ್ಯವೇ ಇಲ್ಲ. ಏಕೆಂದರೆ ನಮ್ಮ ದೇಹವು ಒಣಹೊಟ್ಟು, ಕೂದಲು, ಚರ್ಮದಿಂದ ಸತ್ತ ಜೀವಕೋಶಗಳನ್ನು ನಿರಂತರವಾಗಿ ಹೊರಹಾಕುತ್ತಿರುತ್ತದೆ. ಈ ಪ್ರಕ್ರಿಯೆ ಒಂದೆಡೆಯಾದರೆ ಮತ್ತೊಂದೆಡೆ ನಾವು ಮಾತನಾಡುವಾಗ ಬಾಯಿಯಿಂದ ಹೊರಹೊಮ್ಮುವ ಎಂಜಲಿನ ಕಣಗಳು, ಉಸಿರಾಡುವಾಗ ಹೊರಬರುವ ಶ್ವಾಸದೊಳಗಿನ ಕಣಗಳು, ಚರ್ಮದಿಂದ ಹೊರಸೂಸುವ ಬೆವರಿನ ಹನಿಗಳು ಇವುಗಳೆಲ್ಲ ನಮ್ಮ ದೇಹದಿಂದ ಹೊರಬಂದ ಮೇಲೆ ಸೂಕ್ಷ್ಮ ಕಣಗಳಾಗಿ ಗಾಳಿಯಲ್ಲಿ ತೇಲುತ್ತಲೇ ಇರುತ್ತವೆ. ಪ್ರಯೋಗಶಾಲೆಯಲ್ಲಿ ಈ ಕಣಗಳ ವಂಶವಾಹಿ ಪರೀಕ್ಷೆಯನ್ನು ನಡೆಸಿ ಅವು ಯಾರ ದೇಹದ ಮೂಲಕ ಹೊರಹೊಮ್ಮಿದವು ಎಂದು ಗುರುತಿಸಲು ಸಾಧ್ಯವಿದೆ. ಹೀಗಾಗಿ ಇದನ್ನು ಪರಿಸರ ವಂಶವಾಹಿಗಳು (Environmental DNA) ಎಂದು ಹೇಳಲಾಗುತ್ತದೆ.

ನಮ್ಮ ದೇಹದಿಂದ ಹೊರಹಾಕಲಾಗುವ ಪರಿಸರ ವಂಶವಾಹಿಗಳ ಪ್ರಮಾಣ ಮತ್ತು ಅವು ಅಲ್ಲಿನ ವಾತಾವರಣದಲ್ಲಿ ಎಷ್ಟು ಸಮಯ ತೇಲುತ್ತವೆ ಎಂಬುದು ಸ್ಥಳೀಯವಾಗಿ ಬೀಸುವ ಗಾಳಿ, ತಾಪಮಾನ ಮತ್ತು ಶುಷ್ಕತೆಯಂತಹ ವಾತಾವರಣ ಸಂಬಂಧಿ ವಿಷಯಗಳ ಮೇಲೆ ನಿರ್ಭರವಾಗಿರುತ್ತದೆ. ಹೀಗಾಗಿ ಮನೆ ಮತ್ತು ಆಫೀಸಿನಂತಹ ಒಳಾಂಗಣದ ವ್ಯವಸ್ಥೆಯಲ್ಲಿ ಪರಿಸರ ವಂಶವಾಹಿಗಳು ಹೆಚ್ಚು ಸಮಯ ಅಂದರೆ ಅರ್ಧದಿಂದ ಒಂದು ಗಂಟೆಯವರೆಗೆ ತೇಲುತ್ತಿರುತ್ತವೆ. ನಾರ್ವೆ ಮತ್ತು ಆಸ್ಟ್ರೇಲಿಯಾದ ವಿಧಿವಿಧಾನ ಲ್ಯಾಬ್​ಗಳು ನಡೆಸಿದ ಪ್ರಯೋಗದಲ್ಲಿ ಒಂದು ಅಣಕು ಅಪರಾಧವನ್ನು ನಡೆಸಿ ಅದು ನಡೆದ ಸ್ಥಳದ ಗಾಳಿಯ ಮಾದರಿಯನ್ನು ಪುಟ್ಟ ಪಂಪ್​ ಮೂಲಕ ಸೆಳೆದು ಫಿಲ್ಟರ್​ ಕಾಗದದ ಒಳಗಿನಿಂದ ಹಾಯಿಸಲಾಯಿತು. ಆ ಕಾಗದದ ಮೇಲೆ ಜಮಾವಣೆಗೊಂಡ ಕಣಗಳನ್ನು ಡಿಎನ್​ಎ ಪರೀಕ್ಷೆಗೆ ಒಳಪಡಿಸಿದಾಗ ಅಣಕು ಅಪರಾಧ ಜರುಗಿದ ಸ್ಥಳದಲ್ಲಿದ್ದ ಶೇ. 85ರಷ್ಟು ಜನರ ಡಿಎನ್​ಎಯನ್ನು ಕರಾರುವಾಕ್ಕಾಗಿ ಗುರುತಿಸಲಾಯಿತು.

ಅಪರಾಧಿಗಳು ಹೆಚ್ಚು ಹೆಚ್ಚು ಅಪ್​ಡೇಟ್​ ಆಗುತ್ತ ಯಾವ ಸುಳಿವುಗಳನ್ನೂ ಉಳಿಸದೇ ಹೈಟೆಕ್​ ಅಪರಾಧಗಳನ್ನು ನಡೆಸುತ್ತಿರುವ ಇಂದಿನ ದಿನಗಳಲ್ಲಿ ತನಿಖಾ ಸಂಸ್ಥೆಗಳೂ ಹೆಚ್ಚು ಸುಧಾರಿತ ತಂತ್ರಜ್ಞಾನದ ಭಾಗವಾಗಿ ತನಿಖೆಯಲ್ಲಿ ಪರಿಸರ ವಂಶವಾಹಿ ಪರೀಕ್ಷಾ ತಂತ್ರಜ್ಞಾನ ಖಂಡಿತ ನೆರವಾಗಬಲ್ಲದು. ಅಣಕು ಪ್ರಯೋಗದ ಸಮಯದಲ್ಲಿ ವಿಧಿವಿಧಾನ ಲ್ಯಾಬ್​ನ ತಂತ್ರಜ್ಞರು ಗಮನಿಸಿದಂತೆ ಅಪರಾಧ ಸ್ಥಳದ ಗಾಳಿಯ ಮಾದರಿಯಲ್ಲಿ ಅಲ್ಲಿದ್ದವರ ಹೊರತಾಗಿಯೂ ಇನ್ನೂ ಕೆಲವರ ಡಿಎನ್​ಎ ಪತ್ತೆಯಾಯಿತು. ಇದು ಈ ತಂತ್ರಜ್ಞಾನದ ಮಿತಿ ಕೂಡ ಹೌದು. ಅಂದರೆ ಅಪರಾಧ ನಡೆದ ಸ್ಥಳದಲ್ಲಿ ಅದು ಜರುಗಿದ ಮೊದಲು ಮತ್ತು ನಂತರದ ಒಂದು ನಿಗದಿತ ಸಮಯದೊಳಗೆ ಸ್ಥಳಕ್ಕೆ ಬಂದು ಭೇಟಿ ನೀಡಿದವರ ಡಿಎನ್​ಎ ಕುರುಹುಗಳೂ ಗಾಳಿಯಲ್ಲಿ ಉಳಿದುಕೊಂಡಿರುತ್ತವೆ. ಹೀಗಾಗಿ ಪರಿಸರ ವಂಶವಾಹಿ ಪರೀಕ್ಷಾ ತಂತ್ರಜ್ಞಾನ ಬೆರಳಚ್ಚಿನ ರೀತಿಯಲ್ಲಿ ನೇರವಾಗಿ ಅಪರಾಧ ಸಾಬೀತುಪಡಿಸಲು ನೆರವಾಗದಿದ್ದರೂ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದವರ ಬಗ್ಗೆ ಮಾಹಿತಿ ನೀಡಬಲ್ಲದು. ನೇರ ಸಹಾಯ ಗೈರುಹಾಜರಿಯಲ್ಲಿ ತನಿಖಾ ತಂಡಕ್ಕೆ ಪೂರಕ ಸಹಾಯವಾಗಿ ಖಂಡಿತ ಇದು ನೆರವಾಗುವುದಂತೂ ಹೌದು.

ಅಪರಾಧಗಳ ಪತ್ತೆಯಲ್ಲಿ ಇಂದಿಗೂ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿರುವ ಬೆರಳಚ್ಚು ಅತ್ಯಂತ ವಿಶ್ವಾಸಾರ್ಹ ವೈಯಕ್ತಿಕ ಗುರುತು. ಏಕೆಂದರೆ ವ್ಯಕ್ತಿಯೋರ್ವನ ಬೆರಳಚ್ಚು ಆತನ ಅವಳಿಯನ್ನೂ ಸೇರಿದಂತೆ ಜಗತ್ತಿನಲ್ಲಿ ಇನ್ಯಾರ ಜೊತೆಗೂ ಹೊಂದಾಣಿಕೆಯಾಗದು. ಹೀಗಾಗಿ ಷರಾ ಹಾಕುವುದರಿಂದ ಹಿಡಿದು ಮೊಬೈಲ್​ ಸ್ಕ್ರೀನ್​ ತೆರೆಯಲು ನಮ್ಮ ಬೆರಳಚ್ಚನ್ನು ನಮ್ಮ ವೈಯಕ್ತಿಕ ಗುರುತನ್ನಾಗಿ ಬಳಸಲಾಗುತ್ತದೆ. ಹೊಸದಾಗಿ ಮೊಬೈಲ್​ನಲ್ಲಿ ನಾವು ನಮ್ಮ ಬೆರಳಚ್ಚನ್ನು ಪಾಸ್​ಕೀಯನ್ನಾಗಿ ಸೆಟ್​ ಮಾಡುವಾಗ ಅದು ಸಂವೇದಕದ ಮೂಲಕ ಬೆಳಕನ್ನು ಹಾಯಿಸಿ ನಮ್ಮ ಬೆರಳ ಮೇಲಿನ ವಕ್ರ ರೇಖೆಗಳನ್ನು ಒಂದು ಗಣಿತದ ಸೂತ್ರವನ್ನಾಗಿ ಬದಲಿಸಿ ಮೊಬೈಲ್​ನಲ್ಲಿ ಶೇಖರಿಸಿಟ್ಟುಕೊಳ್ಳುತ್ತದೆ. ನಾವು ಪ್ರತಿ ಬಾರಿ ಸಂವೇದಕದ ಮುಂದೆ ಬೆರಳನ್ನು ಒತ್ತಿದಾಗ ಆ ವಕ್ರರೇಖೆಗಳು ಶೇಖರಿಸಿಟ್ಟುಕೊಂಡ ಸೂತ್ರಕ್ಕೆ ತಾಳೆಯಾಗುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿ ಪರವಾನಿಗೆ ನೀಡುತ್ತದೆ. ಆದರೆ ಶೇಖರಿಸಿಟ್ಟುಕೊಂಡ ಸೂತ್ರವನ್ನು ಮತ್ತೊಮ್ಮೆ ಬೆರಳಚ್ಚನ್ನಾಗಿ ಬದಲಿಸಲು ಅದಕ್ಕೆ ಅಸಾಧ್ಯ. ಅಷ್ಟರಮಟ್ಟಿಗೆ ನಮ್ಮ ಬೆರಳಚ್ಚು ಬೇರೆ ಯಾವ ಕಾರ್ಯಕ್ಕೂ ಬಳಕೆಯಾಗದ ರೀತಿಯಲ್ಲಿ ಮೊಬೈಲ್​ ನಲ್ಲಿ ಸುರಕ್ಷಿತ.

ಅದೇ ಅಪರಾಧ ತನಿಖೆಯ ವಿಷಯಕ್ಕೆ ಬಂದರೆ ಭಾರತದಲ್ಲಿ ಅಪರಾಧಿಗಳ ಬೆರಳಚ್ಚುಗಳನ್ನು ಸಂಗ್ರಹಿಸಲೆಂದು "ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ವ್ಯವಸ್ಥೆ'ಯನ್ನು ಸ್ಥಾಪಿಸಲಾಗಿದೆ. "ರಾಷ್ಟ್ರೀಯ ಅಪರಾಧ ದಾಖಲೆ ಸಂಗ್ರಹಾಗಾರದ ಸುಪರ್ದಿಯಲ್ಲಿ ಕಾರ್ಯನಿರ್ವಹಿಸುವ ಈ ವ್ಯವಸ್ಥೆಯ ಹೊರತಾಗಿಯೂ ಹಲವು ರಾಜ್ಯಗಳು ತಮ್ಮದೇ ಆದ ಅಪರಾಧ ಬೆರಳಚ್ಚು ಸಂಗ್ರಹಾಗಾರವನ್ನು ಹೊಂದಿವೆ. ಅಪರಾಧ ತನಿಖೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿರುವ ಇಂತಹ ಕೇಂದ್ರೀಕೃತ ವ್ಯವಸ್ಥೆಯನ್ನು ಇದೀಗ ಎಲ್ಲ ದೇಶಗಳೂ ಹೊಂದಿವೆ. ಆದರೆ ಸುಮಾರು 130 ವರ್ಷಗಳ ಹಿಂದೆಯೇ ಇಂಥದೊಂದು ಆಲೋಚನೆಯನ್ನು ಹರಿಬಿಟ್ಟು ಜಗತ್ತಿನ ಪ್ರಪ್ರಥಮ ಕೇಂದ್ರೀಕೃತ ಬೆರಳಚ್ಚು ಸಂಗ್ರಹಾಗಾರವನ್ನು ಸ್ಥಾಪಿಸಿದ ಮೊದಲ ದೇಶವೆಂಬ ಶ್ರೇಯ ಭಾರತಕ್ಕೆ ಸಲ್ಲುತ್ತದೆ.

1890ರಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಬಂಗಾಳವು ಅಪರಾಧಿಗಳ ದಾಖಲೆಯಲ್ಲಿ ಅವರ ಚಹರೆಗಳ ಜೊತೆಗೆ ತೂಕ, ಎತ್ತರ, ಸೊಂಟದ ಸುತ್ತಳತೆಯಂತಹ ದೈಹಿಕ ಮಾಪನಗಳನ್ನೂ ನಮೂದಿಸಿಕೊಳ್ಳುವ ಸಂಪ್ರದಾಯವನ್ನು ಅಳವಡಿಸಿಕೊಂಡಿತ್ತು. 1896ರಲ್ಲಿ ಅಲ್ಲಿನ ಪೊಲೀಸ್​ ಮಹಾನಿರ್ದೇಶಕರಾಗಿ ಆಡಳಿತ ವಹಿಸಿಕೊಂಡ ಸರ್​ ಎಡ್ವರ್ಡ್​ ಹೆನ್ರಿ ಈಗಿರುವ ಅಪರಾಧಿಗಳ ದಾಖಲೆಯಲ್ಲಿ ಬೆರಳಚ್ಚನ್ನೂ ಸೇರಿಸುವಂತೆ ಆದೇಶಿಸಿದರು. ಆದೇಶದಂತೆ, ಅಪರಾಧಿಗಳ ಬೆರಳಚ್ಚುಗಳ ಸಂಗ್ರಹವೇನೋ ನಡೆಯಿತು. ಆದರೆ ಅವುಗಳನ್ನು ಕ್ರಮಬದ್ಧವಾಗಿ ಜೋಡಿಸಿ ಜರೂರತ್ತು ಬಂದಾಗ ಶಂಕಿತರ ಬೆರಳಚ್ಚಿನ ಜೊತೆಗೆ ತಾಳೆ ಹಾಕಲು ಕರಾರುವಾಕ್ಕಾದ ವ್ಯವಸ್ಥೆಯೊಂದನ್ನು ಕಲ್ಪಿಸಬೇಕಿತ್ತು. ಈ ಕಾರ್ಯವನ್ನು ಹೆನ್ರಿ ತಮ್ಮ ಕೆಳಗೆ ಕಾರ್ಯನಿರ್ವಹಿಸುತ್ತಿದ್ದ ಯುವ ಸಬ್​ ಇನ್​ಸ್ಪೆಕ್ಟರ್​ಗಳಾದ ಅಜಿಜುಲ್​ ಹಕ್​ ಮತ್ತು ಹೇಮಚಂದ್ರ ಬೋಸ್​ ಅವರಿಗೆ ವಹಿಸಿದರು. ಹಕ್​ ತಮ್ಮ ಬಳಿಯಿದ್ದ ಸಾವಿರಾರು ಅಪರಾಧಿಗಳ ಐದು ಬೆರಳುಗಳ ಬೆರಳಚ್ಚುಗಳನ್ನು ಗಣಿತದ ಸೂತ್ರದ ಮೂಲಕ ಸರಳೀಕರಿಸಿ ಆ ಸೂತ್ರದಿಂದ ಬರುವ ಫಲಿತಾಂಶದ ಆಧಾರದ ಮೇಲೆ ಅವುಗಳನ್ನು 1024 ಗುಂಪುಗಳಲ್ಲಿ ವಿಂಗಡಿಸಿದರು. ತದನಂತರ ಆಯಾ ಗುಂಪಿಗೆ ಒಂದು ಕಡತವನ್ನಿಟ್ಟು ಉಗ್ರಾಣದಲ್ಲಿ ಕ್ರಮಬದ್ಧವಾಗಿ ಜೋಡಿಸಿಡಲಾಯಿತು. ಉದಾಹರಣೆಗೆ ಸೂತ್ರದ ಅನುಸಾರ ಅಪರಾಧಿಯೋರ್ವನ ಒಂದೊಂದು ಬೆರಳಿನ ಫಲಿತಾಂಶವು ಕ್ರಮವಾಗಿ 1, 3, 7, 8 ಮತ್ತು 9 ಎಂದಿಟ್ಟುಕೊಳ್ಳೋಣ. ಹೀಗಿರುವಾಗ ಐದು ಬೆರಳುಗಳ ಒಟ್ಟು ಮೊತ್ತ 28 ಆಗುವುದರಿಂದ ಆ ವ್ಯಕ್ತಿಯ ಬೆರಳಚ್ಚಿನ ಕಡತಕ್ಕೆ 28ನೇ ಕ್ರಮಾಂಕವನ್ನು ನೀಡಿ ಅನುಕ್ರಮವಾಗಿ ಆ ಜಾಗದಲ್ಲಿಡಲಾಗುತ್ತಿತ್ತು. ಮತ್ತೊಂದೆಡೆ ಹೇಮಚಂದ್ರ ಬೋಸ್​ ಬೆರಳಚ್ಚುಗಳ ವಿನ್ಯಾಸ ಮತ್ತು ಅವುಗಳ ನಡುವಿನ ಸೂಕ್ಷ್ಮ ವ್ಯತ್ಯಾಸಗಳನ್ನು ಹೆಚ್ಚು ಆಳವಾಗಿ ಅಭ್ಯಸಿಸಿದರು. ಇವರಿಬ್ಬರ ಪರಿಶ್ರಮದ ಪರಿಣಾಮವಾಗಿ 1897ರಲ್ಲಿ ಸರ್ಕಾರವು ಹೀಗೆ ಜೋಡಿಸಿಡಲಾದ ವ್ಯವಸ್ಥೆಯನ್ನು ಕಲಕತ್ತೆಯ ಸುವ್ಯವಸ್ಥಿತ ಕಟ್ಟಡಕ್ಕೆ ಸ್ಥಳಾಂತರಿಸಿ ರಾಷ್ಟ್ರೀಯ ಬೆರಳಚ್ಚು ಸಂಗ್ರಹಾಗಾರವೆಂದು ಅಧಿಕೃತವಾಗಿ ಘೋಷಿಸಿತು. ಈ ಮೂಲಕ ಅದು ಜಗತ್ತಿನ ಪ್ರಪ್ರಥಮ ಬೆರಳಚ್ಚು ಸಂಗ್ರಹಾಗಾರವೆಂಬ ಖ್ಯಾತಿಗೆ ಪಾತ್ರವಾಯಿತು.

ಈ ಯಶಸ್ಸಿನ ಬೆನ್ನಲ್ಲೇ ಹೆನ್ರಿ ಈ ಪೂರ್ತಿ ವ್ಯವಸ್ಥೆಯ ಕುರಿತು ಪ್ರಬಂಧವೊಂದನ್ನು ಪ್ರಕಟಿಸಿ ಸಂಪೂರ್ಣ ಶ್ರೇಯವನ್ನು ತಮ್ಮ ಹೆಸರಿಗೆ ದಾಖಲಿಸಿಕೊಂಡರು. ನಿರೀಕ್ಷೆಯಂತೆ ಅದರಲ್ಲಿ ಹಕ್​ ಮತ್ತು ಬೋಸ್​ ಕುರಿತು ಉಲ್ಲೇಖವಿರಲಿಲ್ಲ. 1916ರಲ್ಲಿ ಬೋಸ್​ ಬೆರಳಚ್ಚಿನ ವಿವರಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಟೆಲಿಗ್ರಾಫ್​ ಕೋಡ್​ ಮುಖಾಂತರ ರವಾನಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರು. ವಿಪರ್ಯಾಸವೆಂದರೆ ಇದಾದ ಐದು ವರ್ಷಗಳ ನಂತರ 1921ರಲ್ಲಿ ಸ್ಕಾಟ್ಲೆಂಡ್​ಯಾರ್ಡ್​ನ ಸರ್​ ಚಾರ್ಲ್ಸ್​ ಕಾಲಿನ್ಸ್​ ಈ ತಂತ್ರಜ್ಞಾನದ ಕುರಿತು ಪ್ರಬಂಧವನ್ನು ಮಂಡಿಸಿ ಅಂತಾರಾಷ್ಟ್ರೀಯ ಮನ್ನಣೆ ಪಡೆದು ಇತಿಹಾಸದ ಪುಟದಲ್ಲಿ ಈ ತಂತ್ರಜ್ಞಾನದ ಜನಕನೆಂಬ ಖ್ಯಾತಿಗೆ ಪಾತ್ರರಾದರು.

ಈ ಮೂಲಕ ಬೆರಳಚ್ಚಿನ ಮೂಲಕ ಅಪರಾಧ ಪತ್ತೆ ತಂತ್ರಜ್ಞಾನದಲ್ಲಿ ಬಹುದೊಡ್ಡ ಕಾಣಿಕೆ ನೀಡಿದ ಇಬ್ಬರು ಭಾರತೀಯರ ಹೆಜ್ಜೆಗುರುತುಗಳು ಯಾರಿಗೂ ಕಾಣದೇ ಇತಿಹಾಸದ ಪುಟಗಳಲ್ಲಿ ಅಳಿಸಿ ಹೋದವು.