_1775411969657.webp?w=480&auto=format%2Ccompress&fit=max)
_1775411969657.webp?w=480&auto=format%2Ccompress&fit=max)
ಕಳೆದ ವಾರ ಚಂದ್ರನ ಸುತ್ತು ಹಾಕಲು ‘ಒರಾಯಿನ್’ ಬಾಹ್ಯಾಕಾಶ ನೌಕೆಯಲ್ಲಿ ಕುಳಿತು ಅರ್ಟಿಮಿಸ್-2 ಮಿಷನ್ಗೆ ತೆರಳಿರುವ ನಾಸಾದ ಗಗನಯಾನಿಗಳ ತಂಡದ ಪಯಣ ನಿಗದಿಯಂತೆ ನಡೆಯುತ್ತಿದ್ದು ಅಲ್ಲಿಂದ ಕ್ಷಣಕ್ಷಣದ ಮಾಹಿತಿಗಳು, ರೋಚಕ ಚಿತ್ರಗಳು ಮತ್ತು ವಿಡಿಯೋಗಳು ಭೂಮಿಗೆ ತಲುಪುತ್ತಿವೆ.
ಐವತ್ತು ವರ್ಷಗಳ ನಂತರ ಮಾನವ ಸಹಿತ ಬಾಹ್ಯಾಕಾಶ ನೌಕೆಯೊಂದು ಚಂದಿರನಿಗೆ ‘ಹಾಯ್’ ಹೇಳಲು ಹೊರಟಿರುವ ಕಾರಣದಿಂದ ಸಹಜವಾಗಿಯೇ ಭೂಲೋಕದಲ್ಲಿ ಕುತೂಹಲ ಮನೆ ಮಾಡಿದ್ದು ಅದನ್ನು ತಣಿಸಲೆಂದೇ ‘ಓಟುಓ’ ಎಂಬ ತಂತ್ರಜ್ಞಾನವನ್ನು ಬಳಸಿ ನೇರವಾಗಿ ‘ಒರಾಯಿನ್’ 4ಕೆ ಸಾಮರ್ಥ್ಯದ ದೃಶ್ಯಾವಳಿಗಳನ್ನು ಭೂಮಿಗೆ ಕಳಿಸುತ್ತಿದೆ. ಕಡಿಮೆ ತೂಕದ ಮತ್ತು ಕಡಿಮೆ ಸ್ಥಳಾವಕಾಶವನ್ನು ಬೇಡುವ ಈ ಉಪಕರಣ ಹೆಚ್ಚು ವಿವರ, ಸ್ಪಷ್ಟ ಧ್ವನಿ ಮತ್ತು ದೃಶ್ಯಾವಳಿಗಳನ್ನು ತಕ್ಷಣಕ್ಕೆ ಕಳಿಸುವ ಸಾಮರ್ಥ್ಯ ಹೊಂದಿರುವುದು ಈ ಬಾರಿಯ ಪಯಣದ ವಿಶೇಷ.
ಹೀಗೆ ಕಳಿಸಲಾಗುವ ಧ್ವನಿ ಮತ್ತು ದೃಶ್ಯಗಳ ಸಂದೇಶವನ್ನು ಮೆಕ್ಸಿಕೊ, ಕ್ಯಾಲಿಫೋರ್ನಿಯಾ ಮತ್ತು ಆಸ್ಟ್ರೇಲಿಯಾದಲ್ಲಿ ಸ್ಥಾಪಿಸಲಾಗಿರುವ ಕೇಂದ್ರಗಳು ಸ್ವೀಕರಿಸಿ ಪ್ರಸಾರ ಮಾಡುತ್ತವೆ. ಹೀಗಾಗಿ ತಡೆರಹಿತ ಸಂದೇಶದ ಜತೆಗೆ ಗಗನಯಾನಿಗಳೊಂದಿಗೆ ನೇರ ವಿಡಿಯೋ ಕಾನ್ಪರೆನ್ಸ್ನಂತಹ ವ್ಯವಸ್ಥೆಗಳು ಅರ್ಟಿಮಿಸ್-2 ಮಿಷನ್ನಲ್ಲಿ ಸಾಧ್ಯವಾಗಿದೆ. ಮಜಾ ಅಂದ್ರೆ, ಇದರ ಹೊರತಾಗಿಯೂ ಐವತ್ತು ವರ್ಷಗಳ ಹಿಂದೆ ಅಪೊಲೊ ಯಾನದಲ್ಲಿ ನೀಲ್ ಆಮರ್್ಸ್ಟ್ರಾಂಗ್ ಮತ್ತು ಬಜ್ ಆಲಿನ್ ಚಂದ್ರನಿಂದ ಭೂಮಿಗೆ ಸಂರ್ಪಸಲು ಬಳಸಿದ್ದ ಎಸ್ ಬ್ಯಾಂಡ್ ತಂತ್ರಜ್ಞಾನದ ಸಂಪರ್ಕ ಸಾಧನಗಳನ್ನು ಈ ಬಾರಿಯೂ ಬಳಸಿಕೊಳ್ಳಲಾಗಿದೆ.
ನೌಕೆಯು ಚಂದ್ರನನ್ನು ಸುತ್ತುವಾಗ ಆತನ ಬೆನ್ನಹಿಂದೆ ಹೋಗಿ ಭೂಮಿ ಮರೆಯಾಗುವ ಸುಮಾರು 41 ನಿಮಿಷಗಳ ಕಾಲ ಲೇಸರ್ ಕಿರಣಗಳನ್ನು ಚಂದ್ರಮ ತಡೆಹಿಡಿಯಲಿದ್ದಾನೆ. ಆ ಸಮಯದಲ್ಲಿ ಮತ್ತೆ ಎಸ್ ಬ್ಯಾಂಡ್ ಎಂಬ ಹಳೇ ಗಂಡನ ಪಾದವನ್ನು ಹಿಡಿಯಲಿದೆ ನಾಸಾ. ಇದಷ್ಟೇ ಅಲ್ಲ, ಪ್ರಥಮ ಚಂದ್ರಯಾನದ ನಂತರದ ಐವತ್ತು ವರ್ಷಗಳ ಕಾಲ ಅಂತರಿಕ್ಷದಲ್ಲಿ ಸಾಕಷ್ಟು ಸೈಕಲ್ ಹೊಡೆದು ಗಳಿಸಿಕೊಂಡಿರುವ ಅನುಭವಗಳನ್ನೆಲ್ಲ ಬಳಸಿರುವ ನಾಸಾ ಈ ಬಾರಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಗಗನಯಾತ್ರಿಗಳ ಪಯಣವನ್ನು ಹೆಚ್ಚು ಸುಖಕರವಾಗಿಸಲು ಒತ್ತು ನೀಡಿದೆ.
ಅಂಥವುಗಳಲ್ಲಿ ಬರೋಬ್ಬರಿ 30 ಮಿಲಿಯನ್ ಅಮೆರಿಕನ್ ಡಾಲರ್, ಅಂದರೆ ಅಜಮಾಸು 278 ಕೋಟಿ ರೂ. ಖರ್ಚು ಮಾಡಿ ನಿರ್ವಿುಸಿರುವ ಸಂಡಾಸು ಎಲ್ಲರ ಹುಬ್ಬೇರುವಂತೆ ಮಾಡಿದೆ. ಅಂಥದೇನಪ್ಪಾ ವಿಶೇಷ ಈ ಪಾಯಖಾನೆಯಲ್ಲಿ ಎಂದು ತಿಳಿಯುವ ಮೊದಲು ಈ ಹಿಂದಿನ ಚಂದ್ರಸ್ಪರ್ಶದ ಪಯಣದ ಅಪೋಲೊ 11 ಸೇರಿದಂತೆ ಉಳಿದ ಗಗನಯಾನದ ವಾಹನಗಳಲ್ಲಿನ ‘ನೈಸರ್ಗಿಕ ಕರೆ’ಯ ವ್ಯವಸ್ಥೆ ಕುರಿತು ಸ್ವಲ್ಪ ತಿಳಿದುಕೊಳ್ಳೋಣ. ಬಾಹ್ಯಾಕಾಶವನ್ನು 1961ರಲ್ಲಿ ಪ್ರವೇಶಿಸಿ ಆ ಮೂಲಕ ಅಂತಹುದೊಂದು ಪ್ರಥಮವನ್ನು ಸಾಧಿಸಿದ ಮಾನವನೆಂಬ ಖ್ಯಾತಿ ಗಳಿಸಿದ ಯೂರಿ ಗ್ಯಾಗರಿನ್ ಪಯಣಿಸಿದ ನೌಕೆ ‘ವೊಸ್ತೊಕ್ 1’ನಿಂದ ಹಿಡಿದು ಚಂದ್ರಮನ ಮೇಲೆ ಮೊದಲ ಹೆಜ್ಜೆಯನ್ನಿಟ್ಟ ನೀಲ್ ಆರ್ಮ್ಸ್ಟ್ರಾಂಗ್ನ ಅಪೋಲೊ-11ವರೆಗೂ ಮಾನವ ಸಹಿತ ಬಾಹ್ಯಾಕಾಶ ನೌಕೆಗಳನ್ನು ರೂಪಿಸಿದ ತಂತ್ರಜ್ಞರು ಅವುಗಳ ತಾಂತ್ರಿಕ ಕೌಶಲ್ಯಗಳ ಕುರಿತು ತಲೆ ಕೆಡಿಸಿಕೊಂಡಿದ್ದಷ್ಟು ಅದರಲ್ಲಿ ಪಯಣಿಸುವವರ ನೈಸರ್ಗಿಕ ಅವಶ್ಯಕತೆಗಳ ಕುರಿತು ಮಂಡೆಬಿಸಿ ಮಾಡಿಕೊಂಡಿರಲಿಲ್ಲ.
ಹೀಗಾಗಿ ಆ ತಪ್ಪುಗಳ ಹೊರೆಯನ್ನು ಪಯಣಿಸಿದ ಗಗನಯಾನಿಗಳು ಹೊತ್ತುಕೊಳ್ಳಬೇಕಾಯಿತು. ಅಪೋಲೊ-11ರಲ್ಲಿ ಪಯಣಿಸಿದ ಮೂವರು ಗಗನಯಾತ್ರಿಗಳಾದ ಯೂರಿ ಗ್ಯಾಗರಿನ್, ಬಜ್ ಆಲ್ಡಿ›ನ್ ಮತ್ತು ಪೈಲಟ್ ಮೈಕಲ್ ಕಾಲಿನ್ಸ್ ಅವರ ಸಮವಸ್ತ್ರಕ್ಕೆ ಜಿಪ್ ಮೂಲಕ ಕಳಚಿ ಜೋಡಿಸಬಹುದಾದ ವ್ಯವಸ್ಥೆಯಿತ್ತು. ಮೂತ್ರ ವಿಸರ್ಜನೆಗಾಗಿ ಒಂದು ಪುಟ್ಟ ಬ್ಯಾಗ್, ಅದಕ್ಕೆ ಜೋಡಿಸಿದಂತೆ ಒಂದು ಪೈಪ್, ಅದರ ತುದಿಗೊಂದು ಮನೆ ನಲ್ಲಿ ನೀರಿಗೆ ಜೋಡಿಸಲಾಗುವ ರಬ್ಬರಿನ ನಿಪ್ಪಲ್ ಮಾದರಿಯ ವ್ಯವಸ್ಥೆಯಿತ್ತು. ಇದನ್ನು ಬಳಸಿ ಗಗನಯಾತ್ರಿಗಳು ಹಗುರಾಗಬೇಕಿತ್ತು.
ಇನ್ನು ಬಹಿರ್ದೆಸೆಗೆ ಕಲ್ಪಿಸಿರುವ ವ್ಯವಸ್ಥೆ ಕೂಡ ಇದಕ್ಕಿಂತ ಹೆಚ್ಚೇನೂ ಉತ್ತಮವಾಗಿರಲಿಲ್ಲ. ಒಂದು ರಬ್ಬರಿನ ಬ್ಯಾಗು, ಅದರ ಬಾಯಿಗೆ ಅಂಟಿಸಬಹುದಾದ ಟೇಪು, ಜತೆಗೆ ಆ ಬ್ಯಾಗಿನಲ್ಲಿ ಬೆರಳನ್ನಷ್ಟೇ ತೂರಿಸಬಹುದಾದ ಹೊದಿಕೆಯುಳ್ಳ ರಬ್ಬರಿನ ಬಲೂನು. ಆ ಬ್ಯಾಗನ್ನು ಪೃಷ್ಟಕ್ಕೆ ಅಂಟಿಸಿಕೊಂಡು ಉದರವನ್ನು ಹಗುರ ಮಾಡಿಕೊಳ್ಳಬೇಕಿತ್ತು. ಗಗನಯಾನಿಗಳೇ ಹೇಳಿದಂತೆ ಮುಕ್ಕಾಲು ಘಂಟೆ ತಗಲುತ್ತಿದ್ದ ಈ ಕಾರ್ಯಾಚರಣೆಯ ಕತೆ ಅಷ್ಟಕ್ಕೇ ಮುಗಿಯುವುದಿಲ್ಲ. ರಬ್ಬರ್ ತೂರುಬೆರಳಿನ ತುದಿಗಿರುವ ಪೇಪರ್ ನ್ಯಾಪ್ಕಿನ್ ಬಳಸಿ ಸ್ವಚ್ಛತಾ ಕಾರ್ಯ ಮುಗಿದ ಕೂಡಲೇ ಆ ಬ್ಯಾಗಿನ ಬಾಯಿಯನ್ನು ಗಟ್ಟಿಯಾಗಿ ಕಟ್ಟಿ ಭದ್ರವಾಗಿ ಭೂಮಿಗೆ ಮರಳಿ ತರುವ ಹೊಣೆ ಯಾತ್ರಿಗಳದ್ದು. ಇದು ಗಗನಯಾನದ ಪ್ರೋಟೋಕಾಲ್ನ ಒಂದು ಭಾಗವಾಗಿದ್ದು ಹೀಗೆ ತರಲಾದ ಚೀಲದೊಳಗಿನ ಮಲ ಪರೀಕ್ಷೆ ಮಾಡಿ ಅದರಲ್ಲಿರುವ ಬ್ಯಾಕ್ಟೀರಿಯಾಗಳ ಕುರಿತು ನಾಸಾ ಪ್ರಕಟಿಸಿರುವ ವರದಿ ಇನ್ನೂ ಆ ಸಂಸ್ಥೆಯ ಬಳಿ ಇದೆ.
ಇದೇ ವ್ಯವಸ್ಥೆಯನ್ನು ಅದರ ಹಿಂದಿನ ಅಪೋಲೊ-10ರ ಪಯಣದಲ್ಲೂ ಕಲ್ಪಿಸಲಾಗಿದ್ದು ಅದರಲ್ಲಿ ಪಯಣಿಸಿದ್ದ ತಂಡದ ನಾಯಕನಾಗಿದ್ದ ಥಾಮಸ್ ಸ್ಟಾಫರ್ಡ್ ಹೊಟ್ಟೆ ಹಗುರ ಮಾಡಿಕೊಂಡು ಚೀಲದ ಬಾಯಿ ಕಟ್ಟುವಾಗ ಆಕಸ್ಮಾತ್ತಾಗಿ ಅದು ಬಿಚ್ಚಿಹೋಗಿ ಅದರೊಳಗಿನ ವಸ್ತು ಹೊರಗೆ ಬಂದು ನೌಕೆಯೊಳಗಿನ ಕಡಿಮೆ ಗುರುತ್ವಾಕರ್ಷಣೆಯ ಕಾರಣಕ್ಕೆ ಎಲ್ಲೆಡೆ ತೇಲಾಡಿ ಆಭಾಸವಾಗಿದ್ದೂ ಇದೆ. ಇಂತಹ ತೊಂದರೆಗಳ ಬಗ್ಗೆ ಅರಿತುಕೊಂಡ ಗಗನಯಾನಿಗಳು ನಂತರದ ದಿನಗಳಲ್ಲಿ ಪಯಣದ ಮೊದಲೇ ಜಾಪಾಳಮಾತ್ರೆ ನುಂಗಿ ಹೊಟ್ಟೆ ಖಾಲಿಯಾಗಿಸಿಕೊಂಡು ಅಥವಾ ಪಚನಕ್ರಿಯೆಯನ್ನು ನಿಧಾನಗೊಳಿಸುವ ಔಷಧಿಗಳನ್ನು ನುಂಗಿ ಪಯಣದ ಕಷ್ಟವನ್ನು ಕಡಿಮೆಯಾಗಿಸುವ ಉಪಾಯ ಮಾಡತೊಡಗಿದರು. ಅಪೋಲೊ-11ರ ಚಂದ್ರಯಾನದ ಸಂದರ್ಭದಲ್ಲಿ ಗಗನನೌಕೆಯಲ್ಲಿದ್ದ ವ್ಯವಸ್ಥೆಯೇನೋ ಓಕೆ. ನೌಕೆಯಿಂದ ಹೊರಬಂದು ಚಂದ್ರಮನ ನೆಲದ ಮೇಲೆ ಕಳೆದ 21 ಘಂಟೆ 36 ನಿಮಿಷದ ಸಮಯದಲ್ಲಿ ಆ ಗಗನಯಾನಿಗಳು ಏನು ವ್ಯವಸ್ಥೆ ಮಾಡಿಕೊಂಡಿದ್ದರು ಎಂಬ ಪ್ರಶ್ನೆಗೆ ಆಗ ಉತ್ತರ ಸಿಕ್ಕಿರಲಿಲ್ಲ.
ಕೆಲ ವರ್ಷಗಳ ಹಿಂದೆ ಬಜ್ ಆಲ್ಡಿ›ನ್ ಸಂದರ್ಶನವೊಂದರಲ್ಲಿ ಅದರ ಉತ್ತರವನ್ನು ಬಹಿರಂಗಪಡಿಸಿದರು. ಚಂದ್ರನಡಿಗೆಯ ಸಂದರ್ಭದಲ್ಲಿ ಆ ಗಗನಯಾನಿಗಳು ಅದಕ್ಕಾಗಿಯೇ ಅಭಿವೃದ್ಧಿಪಡಿಸಿದ ಫೀಕಲ್ ಕಂಟೇನ್ವೆುಂಟ್ ಸಿಸ್ಟೆಮ್ ಅರ್ಥಾತ್ ಮಲಧಾರಣಾ ವ್ಯವಸ್ಥೆಯನ್ನು ಧರಿಸಿಕೊಂಡಿದ್ದರಂತೆ. ಹೆಸರು ಕೇಳಿ ಅದರಲ್ಲೇನೋ ವಿಶೇಷವಿದೆ ಎಂದು ನೀವೆಂದುಕೊಂಡರೆ ನಿಮ್ಮ ಊಹೆ ತಪ್ಪು. ದೇಸಿ ಡೈಪರ್ಗೆ ವಿಜ್ಞಾನಿಗಳು ಒಂದು ವೈಜ್ಞಾನಿಕ ಹೆಸರನ್ನಿಟ್ಟಿದ್ದರು ಅಷ್ಟೇ. ಗಗನಯಾನದ ಕಕ್ಕಸಿನ ತೊಂದರೆಯನ್ನು ಗಗನಯಾನಿಗಳು ಹೇಳುತ್ತಿದ್ದರೂ ತಾಂತ್ರಿಕ ತಂಡ ಅದರ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಇದು ಮುಂದಿನ ಹಲವು ವರ್ಷಗಳವರೆಗೆ ಹಾಗೇ ಮುಂದುವರೆಯಿತು. ಎಪ್ಪತ್ತರ ದಶಕದಲ್ಲಿ ನಾಸಾ ನಿರ್ವಿುಸಿದ ಪ್ರಥಮ ಬಾಹ್ಯಾಕಾಶ ನಿಲ್ದಾಣ ಸ್ಕೈಲ್ಯಾಬ್ ಅಂತಹುದೊಂದು ವ್ಯವಸ್ಥೆಯನ್ನು ಪರಿಚಯಿಸಿದ ಪ್ರಥಮವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಬಾಹ್ಯಾಕಾಶದಲ್ಲಿನ ತೊಂದರೆಯೇನೆಂದರೆ ಗುರುತ್ವಾಕರ್ಷಣೆಯ ಗೈರಿನಲ್ಲಿ ಗಗನಯಾನಿಗಳು ತೂಕವನ್ನು ಕಳೆದುಕೊಳ್ಳುತ್ತಾರೆ. ಜತೆಗೆ ಅವರ ದೇಹದಲ್ಲಿ ದ್ರವ್ಯಗಳು ಸರಿಸಮನಾಗಿ ಹರಡಿಕೊಳ್ಳುತ್ತವೆ. ಈ ದ್ರವ್ಯಗಳ ಹರಡುವಿಕೆಯನ್ನು ಗಮನಿಸುವ ಕಿಡ್ನಿಗಳು ಮೂತ್ರವಿಸರ್ಜನೆಗೆ ಕುಮ್ಮಕ್ಕು ನೀಡುತ್ತವೆ. ಹೀಗಾಗಿ ಬಾಹ್ಯಾಕಾಶವನ್ನು ಪ್ರವೇಶಿಸಿದ ಕೆಲ ಹೊತ್ತಿನಲ್ಲೇ ಯಾತ್ರಿಗಳಿಗೆ ನೈಸರ್ಗಿಕ ಕರೆಗೆ ಒತ್ತಡವಾಗುವುದು ಸಾಮಾನ್ಯ. 1961ರಲ್ಲಿ ಮಾನವ ಸಹಿತ ಬಾಹ್ಯಾಕಾಶ ಪ್ರವೇಶದ ರೇಸಿನಲ್ಲಿ ರಷ್ಯಾ ಮುನ್ನಡೆ ಸಾಧಿಸಿದ ಮುಂದಿನ ತಿಂಗಳಿನಲ್ಲೇ ಅಮೆರಿಕ ಹಾರಿಸಿದ ಫ್ರೀಡಮ್7 ನೌಕೆಯನ್ನೇರಿ ಹೊರಟಿದ್ದ ಅಲೆನ್ ಶೆಫರ್ಡ್ ಎಂಬ ಗಗನಯಾನಿ ಈ ಪ್ರಕ್ರಿಯೆಯ ಮೊದಲ ಬಲಿ. ಆತನ ಪಯಣದ ಅವಧಿ 15 ನಿಮಿಷವೆಂದು ಮೊದಲೇ ನಿಕ್ಕಿಯಾಗಿದ್ದ ಕಾರಣ, ಅಲ್ಲಿ ಮೂತ್ರ ವಿಸರ್ಜನೆಯ ವ್ಯವಸ್ಥೆ ಬಗ್ಗೆ ಖುದ್ದು ಅಲೆನ್ ಸೇರಿದಂತೆ ಯಾರೂ ಗಮನಹರಿಸಿರಲಿಲ್ಲ. ಆದರೆ ಆತನ ನೌಕೆ ಮೇಲೆ ಚಿಮ್ಮಿ ಗುರುತ್ವಾಕರ್ಷಣೆಯ ಪರಿಧಿಯನ್ನು ಮೀರಿ ಹೊರ ನಡೆದಿದ್ದೇ ಸೈ, ಆತನಿಗೆ ಕರೆ ಬಂದು ಚೊಣ್ಣ ಒದ್ದೆ ಮಾಡಿಕೊಳ್ಳುವ ಪರಿಸ್ಥಿತಿ ಒದಗಿತ್ತು.
ಗಗನಯಾನಿಗಳಿಗೆ ತಮ್ಮ ಪಯಣದಲ್ಲಿ ಅವರು ಅನುಭವಿಸಿದ ಅತ್ಯಂತ ತ್ರಾಸದಾಯಕ ಸಂಗತಿಯೇನೆಂದು ಕೇಳಿದರೆ ಹೆಚ್ಚಿನವರು ಹೇಳುವ ಉತ್ತರ ‘ಟಾಯ್ಲೆಟ್ಟಿಗೆ ಹೋಗುವುದು’. ಈ ಸಂಗತಿ ನಾಸಾದ ಗಮನದಲ್ಲೂ ಇದ್ದ ಕಾರಣ ಅರ್ಟಿಮಿಸ್-2 ಮಿಷನ್ನಲ್ಲಿ ಕಕ್ಕಸಿನ ವಿನ್ಯಾಸಕ್ಕೆ ಅವರು ವಿಶೇಷ ಒತ್ತು ನೀಡಿದ್ದರು. ಇಷ್ಟು ವರ್ಷಗಳ ನಂತರ ಕನಸು ನನಸಾಗುತ್ತಿರುವ ಕಾರಣಕ್ಕೋ ಏನೋ ‘ಜಾಗತಿಕ ತಾಜ್ಯ ನಿರ್ವಹಣಾ ವ್ಯವಸ್ಥೆ’ (ಯುನಿವರ್ಸಲ್ ವೇಸ್ಟ್ ಮ್ಯಾನೇಜ್ವೆುಂಟ್ ಸಿಸ್ಟೆಮ್ ಯುಡಬ್ಲ್ಯುಎಂಎಸ್) ಎಂಬ ಇಷ್ಟುದ್ದದ ಹೆಸರನ್ನು ಹೊಂದಿರುವ ಈ ವ್ಯವಸ್ಥೆ ಪಾಶ್ಚಿಮಾತ್ಯ ಶೈಲಿಯ ಟಾಯ್ಲೆಟ್ಟಿನ ವಿನ್ಯಾಸವನ್ನು ಹೋಲುತ್ತಿದ್ದು ಅದರಲ್ಲಿ ಗಗನಯಾನಿಗಳು ನೌಕೆಯೊಳಗಿನ ತೇಲಾಡುವ ಪರಿಸ್ಥಿತಿಯಲ್ಲಿ ತಮ್ಮನ್ನು ಸಂಭಾಳಿಸಿಕೊಂಡು ಕೂತು ಹಗುರಾಗಲು ಅಕ್ಕಪಕ್ಕದಲ್ಲಿ ಹಿಡಿಕೆಗಳಿವೆ. ಅತಿ ಮುಖ್ಯವಾಗಿ ಯಾತ್ರಿಗಳ ಖಾಸಗಿತನಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಇದನ್ನು ಮುಚ್ಚಬಲ್ಲ ಬಾಗಿಲುಳ್ಳ ಪುಟ್ಟ ಕೊಠಡಿಯಲ್ಲಿ ಇರಿಸಲಾಗಿದೆ. ಈ ಬಾರಿಯ ಚಂದ್ರಯಾನದಲ್ಲಿ ಓರ್ವ ಮಹಿಳೆಯೂ ಇರುವುದು ಈ ವ್ಯವಸ್ಥೆಯ ಹಿಂದಿರುವ ಪ್ರಮುಖ ಕಾರಣ. ಯುಡಬ್ಲ್ಯುಎಂಎಸ್ನಲ್ಲಿ ಮೂತ್ರವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಅದನ್ನು ಬಾಹ್ಯಾಕಾಶದಲ್ಲಿ ವಿಸರ್ಜಿಸಲಾಗುತ್ತದೆ ಹಾಗೂ ಮಲವನ್ನು ಕೊಳವೆಗಳ ಮೂಲಕ ಗಾಳಿಯಾಡದ ಡಬ್ಬದಲ್ಲಿ ಮುಚ್ಚಿಟ್ಟು ಮರಳಿ ಬಂದು ಅದರಲ್ಲಿನ ಬ್ಯಾಕ್ಟೀರಿಯಾಗಳ ಚಟುವಟಿಕೆಯನ್ನು ಅಭ್ಯಸಿಸಲು ಬಳಸಿಕೊಳ್ಳಲಾಗುತ್ತದೆ.
ಈ ಪೂರ್ತಿ ಕಾರ್ಯಾಚರಣೆಯಲ್ಲಿ ತಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದು ನಿರ್ವಾತ ಯಂತ್ರಗಳನ್ನು ಬಳಸುವ ಮೂಲಕ. ಇಂತಹುದೇ ತಾಜ್ಯ ನಿರ್ವಹಣಾ ವ್ಯವಸ್ಥೆ ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್ಎಸ್)ದಲ್ಲೂ ಇದೆ. ಫರಕು ಏನೆಂದರೆ, ಅಲ್ಲಿ ಗಗನಯಾನಿಗಳ ಮೂತ್ರ ಮತ್ತು ಬೆವರನ್ನೂ ಮರುಬಳಕೆ ಮಾಡಲಾಗುತ್ತದೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಹೆಚ್ಚು ದಿನಗಳ ತಂಗುವಿಕೆಯ ಕಾರಣ ದೂರಗಾಮಿ ಯೋಜನೆಯನ್ನು ಬಳಸಲಾಗಿದ್ದು ಕಕ್ಕಸಿನಿಂದ ಮೂತ್ರ ಮತ್ತು ನೌಕೆಯ ಹವಾನಿಯಂತ್ರಣ ವ್ಯವಸ್ಥೆಯಿಂದ ಬೆವರನ್ನು ಸಂಗ್ರಹಿಸಿ ಅದರಲ್ಲಿ ರಾಸಾಯನಿಕಗಳನ್ನು ಸೇರಿಸಿ ಸೂಕ್ಷ್ಮಜೀವಿಗಳು ಬೆಳೆಯದಂತೆ ನೋಡಿಕೊಳ್ಳಲಾಗುತ್ತದೆ.
ನಂತರ ಆ ದ್ರವ್ಯವನ್ನು ಹಲವು ಹಂತಗಳ ಸೋಸುಕಗಳ ಮೂಲಕ ಹಾಯಿಸಿ ಮೊದಲು ನೀರನ್ನು ಪ್ರತ್ಯೇಕಿಸಿ ಆ ನೀರಿನಿಂದ ಹಾನಿಕಾರಕ ವಸ್ತುಗಳನ್ನು ಹೊರತೆಗೆದು ಕುದಿಸಲಾಗುತ್ತದೆ.ಈ ಪ್ರಕ್ರಿಯೆಯಿಂದ ಹೊರಬಂದ ನೀರನ್ನು ಪರೀಕ್ಷಿಸಿ ಅದು ಯಾತ್ರಿಗಳ ಬಳಕೆಗೆ ಸೂಕ್ತವಾದ ಗುಣಮಟ್ಟಕ್ಕೆ ಅನುಗುಣವಾಗಿದೆಯೆಂದು ಖಾತ್ರಿಪಡಿಸಿಕೊಂಡ ಮೇಲೆಯೇ ಮರುಬಳಸಲಾಗುತ್ತದೆ. ಬಾಹ್ಯಾಕಾಶ ನಿಲ್ದಾಣದ ತಾಜ್ಯಮರುಬಳಕೆ ವ್ಯವಸ್ಥೆಯ ಕ್ಷಮತೆ ಶೇ. 98ರಷ್ಟಿದ್ದು ಅರ್ಟಿಮಿಸ್-2 ಮಿಷನ್ ಕೇವಲ 10 ದಿನಗಳ ಯಾತ್ರೆಯಾಗಿರುವ ಕಾರಣಕ್ಕೆ ಇಲ್ಲಿ ಆ ಯೋಜನೆ ಕೈಬಿಡಲಾಗಿದೆ.
ಮಜಾ ಅಂದ್ರೆ, ಹಲವಾರು ತೊಂದರೆಗಳಿಗೆ ಪರಿಹಾರವಾಗಿ ಬಂದ ವಿಶ್ವದ ಅತ್ಯಂತ ದುಬಾರಿ ಪಾಯಖಾನೆ, ‘ಓರಾಯಿನ್’ ಅಂತರಿಕ್ಷಕ್ಕೆ ಚಿಮ್ಮಿದ ಕೆಲ ಘಂಟೆಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿತು. ಆದರೆ ತಕ್ಷಣ ತಾವೇ ಫೀಲ್ಡಿಗಿಳಿದು ರಿಪೇರಿ ಮಾಡಿಕೊಂಡ ನಾಲ್ವರು ಗಗನಯಾತ್ರಿಗಳು ಇದೀಗ ನಿರುಮ್ಮಳವಾಗಿದ್ದಾರೆ. ಚಂದ್ರನ ಅಂಗಳದಲ್ಲಿ ಫುಟ್ಬಾಲ್ ಆಡುವ, ಮಂಗಳನ ನೆಲದ ಮೇಲೆ ಮನೆ ಮನೆ ಕಟ್ಟುವ ಕನಸು ಕಾಣುತ್ತಿರುವ ನಾವು ಅದನ್ನು ನನಸಾಗಿಸುವವರ ಮೂಲಭೂತ ಅವಶ್ಯಕತೆಯನ್ನು ಪೂರೈಸಲು ಇಷ್ಟೊಂದು ದಿನ ಕಳೆದಿದ್ದು ವಿಪರ್ಯಾಸವೇ ಸರಿ.