ಹಿಮಾಚಲಪ್ರದೇಶದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸುವ ಜತೆಗೆ ಪತ್ತೆಯಾದ ಅಂತಹ ಉಪಕರಣಗಳನ್ನು ಜಪ್ತು ಮಾಡುವ ಮತ್ತು ಐನೂರು ರೂ. ದಂಡ ವಿಧಿಸುವ ಕಾನೂನನ್ನು ಅಲ್ಲಿನ ಸರ್ಕಾರ ಜಾರಿಗೆ ತಂದಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶ ಕೂಡ ಈ ರೀತಿಯ ಕ್ರಮಕ್ಕೆ ಮುಂದಾಗುವ ಇಂಗಿತವನ್ನು ಈಗಾಗಲೇ ವ್ಯಕ್ತಪಡಿಸಿವೆ. ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸುವ ಈ ಟ್ರೆಂಡ್ ಕಳೆದ ವರ್ಷವೇ ಜಾಗತಿಕ ಮಟ್ಟದಲ್ಲಿ ಕಂಡುಬಂದಿತ್ತು. ಆಸ್ಟ್ರೇಲಿಯಾ ಈ ನಿರ್ಧಾರ ತಳೆದ ಮೊದಲ ದೇಶವೆಂಬ ಖ್ಯಾತಿಗೆ ಪಾತ್ರವಾದರೆ ನಂತರ ಬ್ರಿಟನ್, ಡೆನ್ಮಾರ್ಕ್, ಫ್ರಾನ್ಸ್ ಮುಂತಾದ ದೇಶಗಳು ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿರ್ಬಂಧಿಸುವ ಕಾನೂನನ್ನು ಜಾರಿಗೆ ತಂದವು. ಇವರೆಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋದ ಚೀನಾ ಅಲ್ಲಿನ ಮೊಬೈಲ್ಗಳಲ್ಲಿ ಅಪ್ರಾಪ್ತ ವಯಸ್ಕರಿಗೆಂದೇ ಹೊಸ ಲಾಗಿನ್ ವಿಧಾನವನ್ನು ಸೃಷ್ಟಿಸಿ ಅದರಲ್ಲಿ ಬಳಕೆದಾರರ ವಯಸ್ಸಿಗೆ ಅನುಸಾರವಾಗಿ ಮೊಬೈಲ್ ಬಳಕೆಯ ಸಮಯ ನಿಗದಿಪಡಿಸುವ ಜತೆಗೆ ಜಾಲತಾಣಗಳ ಬಳಕೆಯ ಅನುಮತಿ ನೀಡುವ ಹೊಸ ಪದ್ಧತಿಯನ್ನು ಪರಿಚಯಿಸಿತು.