ಪ್ರಾಣಿಗಳ ಆನುವಂಶಿಕ ವೈವಿಧ್ಯಕ್ಕೆ ಸೇತುವಾಗುವುದೇ ತಂತ್ರಜ್ಞಾನ?

ವಿಶೇಷ ಅಂಕಣ
ವಿಶೇಷ ಅಂಕಣ
Published on

(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

ಮೊದಲನೆಯ ಕಂತಿನಲ್ಲಿ ಬರುವ ಪೂರ್ತಿ ಗಂಡು ಉಣ್ಣಿಗಳು ಅಲ್ಲೇ ಹೊರಗೆ ಎರಡನೆಯ ಕಂತಿನ ಮರಿಗಳಿಗಾಗಿ ಕಾಯುತ್ತಿರುತ್ತವೆ. ಇದೀಗ ಎರಡನೆಯ ಕಂತಿನ ಮರಿಗಳ ಸರದಿ. ಈ ಕಂತಿನಲ್ಲಿ ಬರುವವೆಲ್ಲ ಸಂಪೂರ್ಣ ಹೆಣ್ಣುಗಳು. ಆ ಹೆಣ್ಣು ಉಣ್ಣಿಗಳು ಹೊರಬರುತ್ತಿದ್ದಂತೆಯೇ ಅವುಗಳಿಗಾಗಿಯೇ ಕಾಯುತ್ತಿದ್ದ ಗಂಡುಗಳು ಮೇಲೆರಗಿ ಮಿಲನಕ್ರಿಯೆಯನ್ನು ಪೂರ್ಣಗೊಳಿಸುತ್ತವೆ. ಒಂದು ಬಾರಿ ಸುಮಾರು ಇನ್ನೂರರಿಂದ ಇನ್ನೂರೈವತ್ತು ಮರಿಗಳಿಗೆ ಜನ್ಮನೀಡುವ ತಾಯಿ ಉಣ್ಣಿಯ ಮರಿಗಳಲ್ಲಿ ಶೇ. 90ರಷ್ಟು ಹೆಣ್ಣು ಮರಿಗಳೇ ಆಗಿರುತ್ತವೆ. 

ಕುಟುಂಬವೊಂದರಲ್ಲಿ ಸಂತಾನೋತ್ಪತ್ತಿಯು ಯಾವುದೇ ಬಾಹ್ಯಜೀವಿಯ ಅಥವಾ ಆನುವಂಶೀಯ ವಸ್ತುವಿನ ಪ್ರವೇಶವಿಲ್ಲದೆ ಮುಚ್ಚಿದ ಚಕ್ರ (ಕ್ಲೋಸ್ಡ್ ಸೈಕಲ್) ವ್ಯವಸ್ಥೆಯಲ್ಲಿ ಜರುಗುವುದಕ್ಕೆ ಈ ಉಣ್ಣಿಗಳೊಂದು ಅತ್ಯುತ್ತಮ ಉದಾಹರಣೆ. ಡೆನ್ಮಾರ್ಕಿನ ಕೋಪನ್ ಹೇಗನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇತ್ತೀಚೆಗೆ ಆಫ್ರಿಕಾದ ಆನೆಗಳ ಜೀವನ ಶೈಲಿಯ ಕುರಿತು ನಡೆಸಿದ ಸಂಶೋಧನೆಯಲ್ಲಿ ಬಹಿರಂಗವಾದ ಹೊಸ ವಿಷಯಗಳು ಆತಂಕಕಾರಿಯಾಗಿವೆ. ಆ ವಿಜ್ಞಾನಿಗಳು ಗಮನಿಸಿದಂತೆ ಹೆಚ್ಚಿದ ಮಾನವ ಚಟುವಟಿಕೆಗಳ ಪರಿಣಾಮದಿಂದ ಆನೆಗಳ ನೈಸರ್ಗಿಕ ವಲಸೆಯ ಹೆದ್ದಾರಿಗಳು ಆಕ್ರಮಿತವಾಗಿ, ಇದರಿಂದ ಗಜಗಳ ದೂರವಲಸೆಯ ಮೇಲೆ ನೇರ ಪರಿಣಾಮ ಉಂಟಾಗಿದೆ.

ಹೀಗಾಗಿ ಆನೆಗಳ ಗುಂಪುಗಳು ಒಂದು ವಲಯಕ್ಕಷ್ಟೇ ಸೀಮಿತವಾಗುತ್ತಿದ್ದು ಅವುಗಳಲ್ಲಿ ಆನುವಂಶಿಕ ವೈವಿಧ್ಯ ಕಡಿಮೆಯಾಗುತ್ತಿದೆ. ವಲಸೆಯ ವ್ಯಾಪ್ತಿ ಕುಗ್ಗಿದ ಕಾರಣ ಆನೆಗಳ ವಂಶಾಭಿವೃದ್ಧಿಯ ಪ್ರಕ್ರಿಯೆಯು ಕುಟುಂಬಕ್ಕಷ್ಟೆ ಸೀಮಿತವಾಗಿರುವುದು ಮುಂಬರುವ ಪೀಳಿಗೆಗಳ ಮೇಲೆ ಅನೇಕ ದುಷ್ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಯಿದೆ. ಆಫ್ರಿಕಾದ ಆನೆಗಳಲ್ಲಿ ಎರಡು ಪ್ರಮುಖ ತಳಿಗಳಿವೆ. ಲೊಕ್ಸೊದೊಂಟಾ ಸೈಕ್ಲೋಟಿಸ್ ತಳಿಗಳನ್ನು ಆಡುಭಾಷೆಯಲ್ಲಿ ಕಾಡಾನೆಗಳೆಂದು ಹೇಳಲಾಗುತ್ತಿದ್ದರೆ, ಲೊಕ್ಸೊದೊಂಟಾ ಆಫ್ರಿಕಾನಾ ಎಂಬ ಎರಡನೇ ಪೈಕಿಯ ತಳಿಗಳನ್ನು ಸಾವಣ್ಣ ಆನೆಗಳೆಂದು ಕರೆಯಲಾಗುತ್ತದೆ. 

ಇಲ್ಲಿಯವರೆಗೆ ಯಾವ ಅಡೆತಡೆಗಳಿಲ್ಲದೆ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ಈ ಆನೆಗಳಲ್ಲಿ ತಮ್ಮ ವಲಸೆಯ ಕಾರಣ ಗುಂಪು ಗುಂಪುಗಳಲ್ಲಷ್ಟೆ ಅಲ್ಲದೆ ಅಂತರ ತಳಿಗಳ ನಡುವೆಯೂ ಮಿಲನಕ್ರಿಯೆ ನಡೆದು ಆರೋಗ್ಯಕರ ಆನುವಂಶಿಕ ವೈವಿಧ್ಯ ಕಂಡುಬರುತ್ತಿತ್ತು. ಆದರೆ ಇದೀಗ ಬೇಟೆ, ಅರಣ್ಯನಾಶ, ವಲಸೆಯ ಹಾದಿಯಲ್ಲಿ ಹೆದ್ದಾರಿ ಮತ್ತು ಕಟ್ಟಡ ಕಾಮಗಾರಿಗಳಂತಹ ಮಾನವ ಸೃಷ್ಟಿತ ಅಡೆತಡೆಗಳು ಆನೆ ವಲಸೆಯನ್ನು ಮೊಟಕುಗೊಳಿಸಿವೆ. ಸೋದರಸಂಬಂಧದಲ್ಲಿ ಅಥವಾ ರಕ್ತಸಂಬಂಧದೊಳಗೆ ನಡೆಯುವ ಸಂಸಾರಬಂಧವು ಪ್ರಾಣಿಗಳಲ್ಲಷ್ಟೇ ಅಲ್ಲ, ಮನುಷ್ಯನಲ್ಲೂ ತನ್ನದೇ ಆದ ಅಪಾಯಗಳನ್ನು ಹೊತ್ತುತರುತ್ತದೆ. ಇದನ್ನು ವೈಜ್ಞಾನಿಕವಾಗಿ ವಿಮಶಿಸುವುದಾದರೆ ಮಾನವನ ಡಿಎನ್​ಎಯು 23 ಜೋಡಿ ವರ್ಣತಂತುಗಳನ್ನು ಹೊಂದಿರುತ್ತದೆ. 

ಈ ವರ್ಣತಂತುಗಳ ಜತೆ ಸಾವಿರಾರು ಜೀನ್ ಅಥವಾ ವಂಶವಾಹಿಗಳು ಸೇರಿಕೊಂಡಿರುತ್ತವೆ. ಈ ವಂಶವಾಹಿಗಳು ನಮ್ಮೆಲ್ಲರ ಕಣ್ಣು, ಕೂದಲಿನ ಬಣ್ಣ, ರಕ್ತದ ಗುಂಪು ಹೀಗೆ ವಿವಿಧ ದೈಹಿಕ ಚಹರೆಗಳನ್ನು ನಿರ್ಧರಿಸುತ್ತವೆ. ಇಂತಹ ವಂಶವಾಹಿಗಳಲ್ಲಿ ಎರಡು ವಿಧ, ಪ್ರಬಲ (ಡಾಮಿನಂಟ್) ಮತ್ತು ಅಪ್ರಬಲ ಅಥವಾ ಅವಲಂಬಿತ (ರಿಸೆಸಿವ್). ನಾವು ನಮ್ಮ ಹೆತ್ತವರಿಂದ ಆನುವಂಶಿಕವಾಗಿ ಪಡೆದುಕೊಳ್ಳುವ ಗುಣಲಕ್ಷಣಗಳು ಅವರ ವಂಶವಾಹಿಗಳು ಯಾವ ಗುಂಪಿಗೆ ಸೇರಿದವು ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಉದಾಹರಣೆಗೆ, ತಂದೆ ನೀಲಿ ಕಣ್ಣಿನವನಾಗಿದ್ದು ತಾಯಿ ಕಂದು ಬಣ್ಣದ ಕಣ್ಣಿನವರಾಗಿದ್ದಲ್ಲಿ ಹುಟ್ಟುವ ಮಗುವಿಗೆ ಕಂದು ಬಣ್ಣದ ಕಣ್ಣಿರುತ್ತದೆ. ಏಕೆಂದರೆ ಕಂದು ಬಣ್ಣವು ಪ್ರಬಲ ವಂಶವಾಹಿ. ಅದರರ್ಥ ಪ್ರಬಲ ವಂಶವಾಹಿಯು ಮಗುವಿನಲ್ಲಿ ಕಂಡುಬರಲು ತಾಯಿ ಅಥವಾ ತಂದೆ ಇಬ್ಬರಲ್ಲಿ ಒಬ್ಬರಲ್ಲಿದ್ದರೆ ಸಾಕು. ಆದರೆ ಅಪ್ರಬಲ ವಂಶವಾಹಿಯು ಇಬ್ಬರಲ್ಲಿಯೂ ಇರಬೇಕಾದದ್ದು ಅವಶ್ಯ. 

ರಕ್ತಸಂಬಂಧದೊಳಗೆ ನಡೆಯುವ ಸಂಸಾರಬಂಧದಲ್ಲಿರುವ ಅಪಾಯವೇನೆಂದರೆ ಅಪ್ರಬಲ ವಂಶವಾಹಿಗಳಿಂದ ಮಗುವಿಗೆ ಆನುವಂಶಿಕ ಕಾಯಿಲೆಗಳು ಒಂದೇ ವಂಶವೃಕ್ಷದ ಟಿಸಿಲುಗಳಾದ ತಂದೆ ಮತ್ತು ತಾಯಿಯ ಮೂಲಕ ವರ್ಗಾವಣೆಯಾಗುವ ಸಾಧ್ಯತೆಯನ್ನು ಅವು ಹೆಚ್ಚಿಸುತ್ತವೆ. ಈ ಮೊದಲಿನ ನೀಲಿ ಕಣ್ಣಿನ ತಂದೆ ಮತ್ತು ಕಂದು ಬಣ್ಣದ ತಾಯಿಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಅವರ ಕುಟುಂಬದಲ್ಲಿ ಕಿವುಡುತನ ಇದೆ ಎಂದುಕೊಂಡರೆ ಅಪ್ರಬಲ ವಂಶವಾಹಿಯಾಗಿರುವ ಆ ನ್ಯೂನತೆಯು ಪಾಲಕರಿಬ್ಬರ ಕಡೆಯಿಂದಲೂ ಮಗುವಿಗೆ ಬಳುವಳಿಯಾಗಿ ವರ್ಗಾವಣೆಯಾಗುವ ಸಾಧ್ಯತೆ ಹೆಚ್ಚು. ಇದನ್ನೇ ಅಂಕಿಅಂಶಗಳಲ್ಲಿ ಹೇಳುವುದಾದರೆ ಅಂದಾಜಿನಂತೆ ಇಂತಹ ಸಾಧ್ಯತೆಗಳು ಕುಟುಂಬದೊಳಗಿನ ಸಂಬಂಧದ ಸಂತಾನದಲ್ಲಿ ಶೇ. 2-3ರಷ್ಟಿದ್ದರೆ ಕುಟುಂಬದ ಹೊರಗಿನ ಮದುವೆಗಳಲ್ಲಿ ಶೇ. 4-7ರಷ್ಟಿರುತ್ತದೆ.

ಈ ಎಲ್ಲ ಅಪಾಯಗಳ ಹೊರತಾಗಿಯೂ ಸೋದರಸಂಬಂಧದೊಳಗೆ ಮದುವೆಗಳು ನಡೆಯುತ್ತಲೇ ಇವೆ. ಭೌಗೋಳಿಕವಾಗಿ ನೋಡುವುದಾದರೆ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ, ದಕ್ಷಿಣ ಏಷ್ಯಾದ ಹಲವು ದೇಶಗಳಲ್ಲಿ ಈ ಪದ್ಧತಿ ವ್ಯಾಪಕವಾಗಿದೆ. ಅಂಕಿಅಂಶಗಳು ಹೇಳುವಂತೆ ಜಾಗತಿಕವಾಗಿ ಪಾಕಿಸ್ತಾನ ಅತಿಹೆಚ್ಚು ಸೋದರಸಂಬಂಧಿ ಮದುವೆಗಳನ್ನು ನಡೆಸುವ ದೇಶ. ಅಲ್ಲಿ ನಡೆಯುವ ಶೇ. 61 ಮದುವೆಗಳು ರಕ್ತಸಂಬಂಧದಲ್ಲೇ ನಡೆಯುತ್ತವೆ. ನಂತರದ ಸ್ಥಾನದಲ್ಲಿರುವ ಕುವೈತ್ ಮತ್ತು ಕತಾರ್​ಗಳಲ್ಲಿ ಇದು ಶೇ. 54ರ ಆಸುಪಾಸಿನಲ್ಲಿದೆ. 2019-21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಗಣತಿಯ ವರದಿ ಹೇಳುವಂತೆ ಭಾರತದಲ್ಲಿ ರಕ್ತಸಂಬಂಧದೊಳಗೆ ನಡೆಯುವ ವಿವಾಹ ಪ್ರಮಾಣ ಶೇ. 10ರ ಆಸುಪಾಸಿನಲ್ಲಿದ್ದು ಅದರಲ್ಲಿ ಪ್ರಾದೇಶಿಕವಾಗಿ ಬಹಳಷ್ಟು ಭಿನ್ನತೆಯನ್ನು ನಾವು ಕಾಣಬಹುದು. ಉದಾಹರಣೆಗೆ, ದಕ್ಷಿಣ ಭಾರತದಲ್ಲಿ ಅದು ಶೇ. 23ರಿಂದ 28ರಷ್ಟಿದ್ದರೆ ಈಶಾನ್ಯ ಭಾರತದಲ್ಲಿ ಅದು ಶೇ. 3ರ ಆಸುಪಾಸಿನಲ್ಲಿದೆ. 

ಈ ವಿಷಯದಲ್ಲಿ ತಮಿಳುನಾಡು ಅತಿಹೆಚ್ಚು ಅಂದರೆ ಶೇ. 30ರಷ್ಟು ಸೋದರಸಂಬಂಧಿ ಮದುವೆಗಳನ್ನು ಆಯೋಜಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದು ಇಂತಹ ಶೇ. 27ರಷ್ಟು ಮದುವೆಗಳನ್ನು ಜರುಗಿಸುವ ಕರ್ನಾಟಕ 3ನೇ ಸ್ಥಾನದಲ್ಲಿದೆ. ರಕ್ತಸಂಬಂಧದೊಳಗೆ ನಡೆಯುವ ವಿವಾಹ ಸಂಪ್ರದಾಯವು ಶತಮಾನಗಳಷ್ಟು ಪುರಾತನವಾದದ್ದು. ಹಿಂದಿನ ಕಾಲದಲ್ಲಿ ರಾಜರು, ಸುಲ್ತಾನರು ತಮ್ಮ ಸಾಮ್ರಾಜ್ಯವನ್ನು ಕಾಪಿಟ್ಟುಕೊಳ್ಳಲು ಅಥವಾ ಆಡಳಿತವನ್ನು ತಮ್ಮ ಕುಟುಂಬದ ನಿಯಂತ್ರಣದಲ್ಲೇ ಇಟ್ಟುಕೊಳ್ಳಲು ಈ ಪದ್ಧತಿಗೆ ಮೊರೆ ಹೋಗುತ್ತಿದ್ದರು. ಇದೊಂದು ಜಾಗತಿಕ ಪ್ರಕ್ರಿಯೆಯಾಗಿತ್ತು ಎಂಬುದಕ್ಕೆ 2015ರಲ್ಲಿ ಈಜಿಪ್ಟ್​ನ ಮಮ್ಮಿಗಳ ಮೇಲೆ ನಡೆದ ವೈಜ್ಞಾನಿಕ ಗಣತಿಯ ಫಲಿತಾಂಶವೇ ಸಾಕ್ಷಿ. ಅಲ್ಲಿನ 259 ರಾಜಮನೆತನದ ಮಮ್ಮಿಗಳನ್ನು ಅವಲೋಕಿಸಿದ ತಂಡಕ್ಕೆ ಅವರ ಚಹರೆಗಳು ಒಂದೇ ಮಾದರಿಯನ್ನು ಅನುಸರಿಸುತ್ತಿರುವುದು ಕಂಡುಬಂತು.

ಉದಾಹರಣೆಗೆ, ಎಲ್ಲ ಮಹಿಳೆಯರು ಅಲ್ಲಿನ ಸರಾಸರಿ ಎತ್ತರಕ್ಕಿಂತ ಕಡಿಮೆ ಮತ್ತು ಎಲ್ಲ ಪುರುಷರು ಸರಾಸರಿಗಿಂತ ಹೆಚ್ಚು ಎತ್ತರವಾಗಿದ್ದರು. ಇದು ಅಲ್ಲಿ ತಲೆತಲಾಂತರದಿಂದ ಸಾಮ್ರಾಜ್ಯಗಳ ಆಡಳಿತಕ್ಕಾಗಿ ರಕ್ತಸಂಬಂಧದೊಳಗೆ ವಿವಾಹವನ್ನು ಮಾಡುವ ಸಂಪ್ರದಾಯವನ್ನು ಆಚರಿಸಿರುವುದಕ್ಕೆ ಸಾಕ್ಷಿಯಾಗಿತ್ತು. ಭಾರತವೂ ಸೇರಿದಂತೆ ಎಲ್ಲೆಡೆ ಈಗಲೂ ಕುಟುಂಬಗಳು ತಮ್ಮ ಕೌಟುಂಬಿಕ ಆಸ್ತಿ ಪಾಲು ಮಾಡುವುದನ್ನು ತಪ್ಪಿಸಲು ಈ ಪದ್ಧತಿ ಅಳವಡಿಸಿಕೊಳ್ಳುತ್ತವೆ. ಇದರ ಹೊರತಾಗಿ ಮತ್ತೊಂದೆಡೆ ಸಣ್ಣ ಪಂಗಡಗಳು ಮತ್ತು ಚಿಕ್ಕ ಸಂಖ್ಯಾಬಲವುಳ್ಳ ಉಪಜಾತಿಗಳು ತಮ್ಮವರನ್ನೇ ಮದುವೆಯಾಗುವ ಸಂಪ್ರದಾಯಕ್ಕೆ ತಲೆಬಾಗಿ ಹೆಚ್ಚಿನ ಆಯ್ಕೆಯಿಲ್ಲದೆ ರಕ್ತಸಂಬಂಧದೊಳಗೆ ವಿವಾಹಗಳನ್ನು ನಡೆಸುತ್ತಿದ್ದಾರೆ. ಆದರೆ ಈ ಆಚರಣೆಗೆ ಕೆಲ ಅಪವಾದಗಳೂ ಇವೆ. ಹೆಚ್ಚು ಬುಡಕಟ್ಟು ಜನಾಂಗಗಳನ್ನು ಹೊಂದಿರುವ ಈಶಾನ್ಯ ಭಾರತದಲ್ಲಿನ ಹೆಚ್ಚಿನ ಬುಡಕಟ್ಟುಗಳಲ್ಲಿ ತಮ್ಮದೇ ಬುಡಕಟ್ಟಿನವರನ್ನು ವರಿಸುವುದು ನಿಷಿದ್ಧ. ಹೀಗಾಗಿ ಅಲ್ಲಿ ಭಾರತದಲ್ಲೇ ಅತಿ ಕಡಿಮೆ ರಕ್ತಸಂಬಂಧ ಮದುವೆಗಳು ಕಂಡುಬರುತ್ತವೆ.

ಈಗ ಮತ್ತೊಮ್ಮೆ ಪ್ರಾಣಿಗಳ ವಿಷಯಕ್ಕೆ ಬರೋಣ. ವಂಶಾಭಿವೃದ್ಧಿಯ ಪ್ರಕ್ರಿಯೆಯು ಕುಟುಂಬಕ್ಕಷ್ಟೆ ಸೀಮಿತವಾಗುವುದರಿಂದ ಉಂಟಾಗುವ ತೊಂದರೆಗಳು ಅವುಗಳಿಗೂ ಅನ್ವಯವಾಗುತ್ತವೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಹಾಗಾಗುವುದಕ್ಕೆ ಕಾರಣ ಮಾತ್ರ ನಾವೇ. ಪ್ರಯೋಗಶಾಲೆಗಳಲ್ಲಿ ಪ್ರಯೋಗಕ್ಕಾಗಿ ಬಳಸುವ ಇಲಿಗಳನ್ನು ರಕ್ತಸಂಬಂಧದಲ್ಲೇ ಹುಟ್ಟಿರುವಂತೆ ನೋಡಿಕೊಳ್ಳಲಾಗುತ್ತದೆ. ಇದರಿಂದ ಪ್ರಯೋಗಗಳನ್ನು ಪುನರಾವರ್ತಿಸಿ, ಫಲಿತಾಂಶವನ್ನು ಪುನರ್ವಿಮಶಿಸಲು ಸಹಾಯವಾಗುತ್ತದೆ ಎಂಬುದು ವಿಜ್ಞಾನಿಗಳ ಅಂಬೋಣ. ಇದೇ ರೀತಿ ಹೈನುಗಾರಿಕೆಗೆಂದೇ ಸಾಕಲಾಗುವ ಕೆಲವು ಜಾತಿಯ ಹಸುಗಳಲ್ಲಿ, ತುಪ್ಪಳಕ್ಕಾಗಿ ಸಾಕಲಾಗುವ ಕೆಲ ಜಾತಿಯ ಆಡುಗಳಲ್ಲಿ ಅವುಗಳ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಪ್ರೀಮಿಯಂ ತಳಿಯ ಸಾಕುನಾಯಿಗಳಲ್ಲಿ ಮಾರಾಟಕ್ಕೆ ಅನುಗುಣವಾಗುವಂತೆ ಅವುಗಳ ಚಹರೆಗಳನ್ನು ಕಾಪಿಟ್ಟುಕೊಳ್ಳಲು ಅವುಗಳ ಮಾಲೀಕರು ಮರಿಗಳು ಒಂದೇ ವಂಶವೃಕ್ಷದ ಟಿಸಿಲುಗಳಾಗಿರುವಂತೆ ಎಚ್ಚರ ವಹಿಸುತ್ತಾರೆ. 

ಈ ಪ್ರಕ್ರಿಯೆಯು ಹೀಗೆ ಅಭಿವೃದ್ಧಿಪಡಿಸಿದ ಪ್ರಾಣಿಗಳಲ್ಲಿ ಹಲವು ನ್ಯೂನತೆಗಳಿಗೆ ಕಾರಣವಾಗುತ್ತಿರುವುದು ಸಂಶೋಧನೆಗಳಿಂದ ಗೊತ್ತಾಗುತ್ತಿದೆ. ಇಂಗ್ಲೆಂಡಿನ ಸಂಸ್ಥೆಯೊಂದು ಸಾಕುನಾಯಿಗಳ ಮೇಲೆ ಸಂಶೋಧನೆ ನಡೆಸಿತು. ಅವುಗಳಲ್ಲಿ ಸೀಮಿತ ಆನುವಂಶಿಕ ವೈವಿಧ್ಯತೆ ಇರುವ ಕಾರಣಕ್ಕೆ ಹೃದಯ ಸಂಬಂಧಿ ಕಾಯಿಲೆ, ಕಿವುಡುತನದಂತಹ ಆನುವಂಶಿಕ ಕಾಯಿಲೆಗಳು ಕಂಡುಬರುತ್ತಿವೆ. ಹೆಚ್ಚಿದ ಮಾನವನ ಚಟುವಟಿಕೆಗಳು ಪ್ರಾಣಿಗಳಲ್ಲಿ ದೂರಗಾಮಿ ಪರಿಣಾಮವನ್ನುಂಟು ಮಾಡುತ್ತಿವೆ. ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಕಾಡಿನ ವ್ಯಾಪ್ತಿ ಕುಗ್ಗಿ ಪ್ರಾಣಿಗಳು ಬೀದಿಗೆ ಬರುತ್ತಿವೆ.

 ಇದು ಸಾಲದ್ದಕ್ಕೆ ನಮ್ಮ ಕಾಮಗಾರಿಗಳು ಅವುಗಳ ವಲಸೆಯ ದಾರಿಗೆ ಅಡೆತಡೆಗಳನ್ನು ಸೃಷ್ಟಿಸಿ ಆನುವಂಶಿಕ ಕಾಯಿಲೆಗಳಿಗೆ ಕಾರಣವಾಗುತ್ತಿವೆ. ತಡವಾದರೂ ಇದನ್ನು ಅರ್ಥೈಸಿಕೊಂಡ ಚಿಂತಕರ ಚಾವಡಿಯು ಪ್ರಾಣಿಗಳ ವಾಸಸ್ಥಾನದ ಮೂಲಕ ಹಾದುಹೋಗುವ ಮೂಲಭೂತ ಸೌಕರ್ಯಗಳನ್ನು ನಿರ್ವಿುಸುವಾಗ ಅವುಗಳ ನೈಸರ್ಗಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕೆಲ ಸೌಲಭ್ಯಗಳನ್ನು ರೂಪಿಸುತ್ತಿರುವುದು ಇತ್ತೀಚೆಗೆ ಅಲ್ಲಲ್ಲಿ ಕಂಡುಬರುತ್ತಿದೆ. ಭಾರತದಲ್ಲಿಯೂ ಈ ಟ್ರೆಂಡು ಇತ್ತೀಚೆಗೆ ಶುರುವಾಗಿದೆ. ನೂತನವಾಗಿ ನಿರ್ವಿುಸಲಾಗುತ್ತಿರುವ ಅಭಯಾರಣ್ಯಗಳ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಾಣಿಗಳಿಗೆಂದೇ ಅಂಡರ್​ಪಾಸ್ ಮತ್ತು ಓವರ್ ಪಾಸ್​ಗಳನ್ನು ನಿರ್ವಿುಸಲಾಗಿದೆ. 

ಶಬ್ದಮಾಲಿನ್ಯದಿಂದ ಅವುಗಳನ್ನು ಪಾರು ಮಾಡಲು ಸೂಕ್ತ ಪ್ರದೇಶಗಳಲ್ಲಿ ಹೆದ್ದಾರಿಗುಂಟ ಎತ್ತರದ ಗೋಡೆಗಳು, ನಿಯಮಿತ ಸಮಯದ ವಾಹನ ಸಂಚಾರ ಇವೆಲ್ಲ ಪ್ರಾಣಿಗಳನ್ನು ರಸ್ತೆ ಅಪಘಾತಗಳಿಂದ ಪಾರು ಮಾಡಲು ಅಳವಡಿಸಿಕೊಳ್ಳುತ್ತಿರುವ ಉಪಕ್ರಮಗಳು. ಈ ನಿಟ್ಟಿನಲ್ಲಿ ವೀರಾಂಗನಾ ದುರ್ಗಾವತಿ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 45 ಹೆಚ್ಚು ಗಮನ ಸೆಳೆದಿದೆ. ಮಧ್ಯಪ್ರದೇಶದಿಂದ ಛತ್ತೀಸಗಢವನ್ನು ಸಂರ್ಪಸುವ ಹೆದ್ದಾರಿಯ ಈ ಭಾಗದ 12 ಕಿಮೀ ಉದ್ದದ ದಾರಿಯಲ್ಲಿ ಪ್ರಾಣಿಗಳು ಹಾದುಹೋಗಲೆಂದೇ ನಿರ್ವಿುಸಿರುವ 25 ಅಂಡರ್​ಪಾಸ್​ಗಳಿದ್ದು ಅವು ಹೆದ್ದಾರಿಗೆ ಬರದಂತೆ ತಡೆಯಲು ಇಕ್ಕೆಲದಲ್ಲಿ 8 ಅಡಿ ಎತ್ತರದ ಉಕ್ಕಿನ ಬೇಲಿಯನ್ನು ನಿರ್ವಿುಸಲಾಗಿದೆ. ಇದೇ ಭಾಗದಲ್ಲಿ ಬರುವ 2 ಕಿಮೀ ಉದ್ದದ ಘಟ್ಟದ ರಸ್ತೆಗೆ 5 ಮಿಲಿಮೀಟರ್ ದಪ್ಪವಿರುವ ಕೆಂಪು ಬಣ್ಣದ ಥರ್ವೇ ಪ್ಲಾಸ್ಟಿಕ್ ಟೈಲ್ಸ್ ಅಳವಡಿಸಲಾಗಿದ್ದು ಇದು ಚಾಲಕರಿಗೆ ವೇಗವನ್ನು 40 ಕಿಮೀಗಿಂತ ಕಡಿಮೆ ಮಾಡುವುದರ ಮೂಲಕ ಸಂಭವಿಸಬಹುದಾದ ಪ್ರಾಣಿಗಳ ಜತೆಗಿನ ಅಪಘಾತದ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ ಎಂಬುದು ಇದರ ವಿನ್ಯಾಸಕಾರರ ಅಂಬೋಣ. ಅದು ನಿಜವಾದಲ್ಲಿ ಖಂಡಿತ ಖುಷಿಯ ವಿಚಾರವೇ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net