ತಂತ್ರಜ್ಞಾನದ ಗಾಳಿಯಲ್ಲಿ ತೂರಿಕೊಳ್ಳುತ್ತಿರುವ ಕ್ರೀಡಾಪಟುಗಳು

ವಿಶೇಷ ಅಂಕಣ
ವಿಶೇಷ ಅಂಕಣ
Published on

ಅದು 2000ನೇ ಇಸವಿಯ ಸೆಪ್ಟೆಂಬರ್ ಮೂರನೇಯ ತಾರೀಕು. ಅಮೆರಿಕದ ಟೆಕ್ಸಾಸ್ ಕ್ರೀಡಾಂಗಣದಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಹೇಳಿಕೇಳಿ ಅದು ಅಲ್ಲಿನ ಪ್ರತಿಷ್ಠಿತ ನ್ಯಾಷನಲ್ ಫುಟ್ಬಾಲ್ ಲೀಗ್ ಪಂದ್ಯಾವಳಿಯ ಎರಡು ಜನಪ್ರಿಯ ತಂಡಗಳಾದ ‘ದಲ್ಲಾಸ್ ಕೌಬಾಯ್ಸ್​ ಹಾಗೂ ‘ಫಿಲಿಡೆಲ್ಪಿಯಾ ಈಗಲ್ಸ್’ ನಡುವೆ ನಡೆಯುತ್ತಿದ್ದ ಹಣಾಹಣಿ. ಒಂದೆಡೆ ಭಾನುವಾರದ ರಜಾದಿನದಂದು ಫುಟ್ಬಾಲ್​ನ ಮಜಾ ಸವಿಯಲು ನೆರೆದಿದ್ದ ಇತ್ತಂಡಗಳ ಸುಮಾರು ಅರವತ್ತೆರೆರಡು ಸಾವಿರ ಅಭಿಮಾನಿಗಳ ಹಷೋದ್ಗಾರ ಮುಗಿಲು ಮುಟ್ಟಿದ್ದರೆ, ಮತ್ತೊಂದೆಡೆ ಮೈದಾನದಲ್ಲಿ ತಮ್ಮ ಕಾಲ್ಚಳಕ ತೋರಿಸಬೇಕಿದ್ದ ಆಟಗಾರರು ಏದುಸಿರು ಬಿಡುತ್ತಿದ್ದರು. ಕಾರಣವಿಷ್ಟೆ ಅಂದು ಸ್ಥಳೀಯ ತಾಪಮಾನವು ನಲವತ್ತೆರಡು ಡಿಗ್ರಿ ಸೆಲ್ಸಿಯಸ್​ಗೆ ತಲುಪಿ, ಆ ಪಂದ್ಯಕ್ಕೆ ನ್ಯಾಷನಲ್ ಫುಟ್ಬಾಲ್ ಲೀಗ್ ಇತಿಹಾಸದಲ್ಲಿಯೇ ಅತಿ ಹೆಚ್ಚು ತಾಪಮಾನದಲ್ಲಿ ನಡೆದ ಪಂದ್ಯಗಳಲ್ಲೊಂದು ಎಂಬ ಕುಖ್ಯಾತಿಯನ್ನು ಅಂಟಿಸಿತ್ತು. ಕಾದ ಕಾವಲಿಯಂತಾಗಿದ್ದ ಮೈದಾನದಲ್ಲಿ ಸ್ನಾಯುಸೆಳೆತಕ್ಕೆ ಒಳಗಾಗಿದ್ದ ಆಟಗಾರರು ಸುಸ್ತು ಹೊಡೆದಿದ್ದರು. 

ಅಂತಹುದರಲ್ಲಿ ಬ್ರೇಕ್ ಸಮಯದಲ್ಲಿ ಫಿಲಿಡೆಲ್ಪಿಯಾ ಈಗಲ್ಸ್ ತಂಡದ ಆಟಗಾರರಿಗೆ ತರಬೇತುದಾರನ ಅಣತಿಯಂತೆ ಪುಟ್ಟ ಬಾಟಲ್​ನಲ್ಲಿದ್ದ ದ್ರಾವಣವೊಂದನ್ನು ಕುಡಿಸಲಾಯಿತು. ಅಷ್ಟೇ ಬ್ರೇಕ್ ಮುಗಿಸಿ ವಾಪಸ್ ಫೀಲ್ಡಿಗಿಳಿದ ಫಿಲಿಡೆಲ್ಪಿಯಾ ಈಗಲ್ಸ್ ತಂಡದ ಆಟಗಾರರ ವರಸೆಯೇ ಬದಲಾಗಿತ್ತು. ಎದುರಾಳಿ ತಂಡದ ಮೇಲೆ ಮುಗಿಬಿದ್ದ ತಂಡದ ಆಟಗಾರರು ಗೋಲ್ ಮೇಲೆ ಗೋಲ್​ನ್ನು ಬಾರಿಸುತ್ತ 41-14ರ ಅಂತರದಲ್ಲಿ ಪಂದ್ಯವನ್ನು ಗೆದ್ದುಕೊಂಡರು. ಪಂದ್ಯ ಮುಗಿದ ಮೇಲೆ ಎಲ್ಲರ ಬಾಯಲ್ಲೂ ಆ ಚಮತ್ಕಾರಿ ದ್ರಾವಣದ ಕುರಿತೇ ಚರ್ಚೆ. ಅದು ಎಷ್ಟರ ಮಟ್ಟಿಗೆ ಎಂದರೆ ಆ ಪಂದ್ಯವನ್ನು ಇಂದಿಗೂ ಆ ದ್ರಾವಣದ ಹೆಸರಿನಿಂದಲೇ ಕರೆಯಲಾಗುತ್ತದೆ. ಅಂದು ಇದ್ದಕ್ಕಿದ್ದಂತೆಯೇ ಬೆಳಕಿಗೆ ಬಂದ ಆ ದ್ರಾವಣವನ್ನು ಹೆಚ್ಚಿನ ತಾಪಮಾನದಲ್ಲಿ ಆಡುವ ಸನ್ನಿವೇಶದಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಬೇರೆ ಕ್ರೀಡೆಗಳ ಘಟಾನುಘಟಿ ಕ್ರೀಡಾಪಟುಗಳೂ ಬಳಸಲಾರಂಭಿಸಿದರು. 

ನಮ್ಮಲ್ಲಿ ಕ್ರಿಕೆಟ್​ನ ಕಿಂಗ್ ವಿರಾಟ್ ಕೊಹ್ಲಿ ಸಹ ಬೇಸಿಗೆಯ ದಿನಗಳಲ್ಲಿ ಜರುಗುವ ಐಪಿಎಲ್​ನಂತಹ ಪಂದ್ಯಗಳಲ್ಲಿ ಸಣ್ಣ ಬಾಟಲಿಯಲ್ಲಿ ಆ ದ್ರಾವಣವನ್ನು ಕುಡಿಯುವುದನ್ನು ನೀವೂ ಗಮನಿಸಿರಬಹುದು. ಅದೆಲ್ಲ ಸರಿ ಅಷ್ಟಕ್ಕೂ ಆ ದ್ರಾವಣವೇನು ಗೊತ್ತಾ? ಬೇಸಿಗೆಯಲ್ಲಿ ಅಜ್ಜಿ ಉಪ್ಪಿನಕಾಯಿಯನ್ನು ಹುದುಗಿಸಲು ಮತ್ತದನ್ನು ಹಾಳಾಗದೇ ಇಡಲು ಪಿಂಗಾಣಿಯ ಭರಣಿಯಲ್ಲಿ ತುಂಬಿಸಿಡುವ ಉಪ್ಪಿನಕಾಯಿಯ ರಸ! ಹಾಗಿದ್ದಲ್ಲಿ ನಿಜಕ್ಕೂ ಅದೊಂದು ಸೂಪರ್ ಪವರ್ ಕೊಡುವ ಚಮತ್ಕಾರಿ ಔಷಧವಾ? ತಾಳಿ, ಅಲ್ಲೂ ಒಂದು ಮಜವಾದ ಟ್ವಿಸ್ಟ್ ಇದೆ.  ಅಸಲಿಗೆ ಸೆಕೆ ಮಿತಿಮೀರಿದಾಗ ನಾವುಗಳು ಫುಟ್ಬಾಲ್, ಹಾಕಿ ಅಥವಾ ಕ್ರಿಕೆಟ್​ನಂತಹ ಹೆಚ್ಚು ದೈಹಿಕ ಸಾಮರ್ಥ್ಯ ಬೇಡುವ ಚಟುವಟಿಕೆಗಳನ್ನು ಕೈಗೊಂಡಾಗ ಬೆವರಿನ ಜೊತೆಯಲ್ಲಿ ಹೊರಹೋಗುವ ಪೋಟಾಸಿಯಮ್ ಮೆಗ್ನಿಸಿಯಮ್ ಮತ್ತು ಲವಣಾಂಶಗಳಿಂದ ದೇಹದಲ್ಲಿ ನಿರ್ಜಲೀಕರಣವು ಉಂಟಾಗುತ್ತವೆ. ಅದರ ಪರಿಣಾಮವೇ ಸ್ನಾಯುಸೆಳೆತ. 

ಅಂತಹ ಸನ್ನಿವೇಶದಲ್ಲಿ ಆಟಗಾರರು ಆಟದಲ್ಲಿ ಮುಂದುವರಿಯಲು ನೀರಿನ ಜೊತೆಗೆ ದೇಹದಿಂದ ಹೊರಹೋಗಿರುವ ಲವಣಾಂಶಗಳನ್ನೂ ಮತ್ತೆ ಸೇವಿಸಬೇಕಾಗುತ್ತದೆ. ಆದರೆ ಇಲ್ಲೊಂದು ತೊಂದರೆಯಿದೆ. ಆಟಗಾರ ಸೇವಿಸಿದ ಲವಣಾಂಶಗಳು ದೇಹದೊಳಗೆ ಸೇರಿಕೊಂಡು ಆತನ ಸ್ನಾಯುಗಳು ಪುನಃ ಚೇತರಿಸಿಕೊಂಡು ತಮ್ಮ ಮೂಲಸ್ಥಿತಿಗೆ ಬರಲು ಸ್ವಲ್ಪ ಸಮಾಯಾವಕಾಶ ಬೇಕು. ಆದರೆ ಫುಟ್ಬಾಲ್ ಸೇರಿದಂತೆ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸ್ಪರ್ಧೆಯ ತುರುಸು ಹೇಗಿರುತ್ತದೆಯೆಂದರೆ ಆಟಗಾರನಿಗೆ ಸಿಗುವ ಕೆಲ ನಿಮಿಷಗಳ ಬಿಡುವಿನಲ್ಲಿಯೇ ಆತ ಚೇತರಿಸಿಕೊಂಡು ಮುಂದಿನ ಸುತ್ತಿಗೆ ಅಣಿಯಾಗಬೇಕು. ಕೊನೆಯಲ್ಲಿ ಅದುವೇ ಸೋಲು ಗೆಲುವಿನ ನಡುವಿನ ಗೆರೆಯನ್ನು ದಾಟುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅಂತಹುದೊಂದು ಸವಾಲಿಗೆ ಉತ್ತರವೇ ಉಪ್ಪಿನಕಾಯಿಯ ರಸ. ಇದೀಗ ಮತ್ತೆ ವಿರಾಟ್ ಕೊಹ್ಲಿಯ ವಿಷಯಕ್ಕೆ ಬರೋಣ. ನೀವೊಂದು ಗಮನಿಸಿದ್ದೀರಾ? ಬಿರುಬೇಸಿಗೆಯ ಪಂದ್ಯಗಳಲ್ಲಿ ಆತ ಬ್ಯಾಟಿಂಗ್ ಮಾಡುವಾಗ ತೆಗೆದುಕೊಳ್ಳುವ ಪುಟ್ಟ ಬ್ರೇಕ್​ಗಳಲ್ಲಿ ಆ ಸಣ್ಣ ಬಾಟಲಿಯನ್ನೆತ್ತಿ ಕುಡಿಯುವುದಕ್ಕಿಂತ ಮುಕ್ಕಳಿಸಿ ಉಗಿಯೋದೇ ಹೆಚ್ಚು. 

ಯಾಕೆ ಹೀಗೆ? ವಿಷಯವಿರೋದು ಅಲ್ಲೇ. ಉಪ್ಪಿನಕಾಯಿಯ ರಸವು ತಕ್ಷಣವೇ ನಿರ್ಜಲೀಕರಣದಿಂದ ಉಂಟಾಗುವ ಸ್ನಾಯುಸೆಳೆತವನ್ನು ಗುಣಪಡಿಸುವ ಔಷಧೀಯ ಸತ್ವವನ್ನೇನೂ ಹೊಂದಿಲ್ಲ. ಆದರೆ ಬೆದರುಬೊಂಬೆಯಂತೆ ಅದನ್ನು ತೋರಿಸಿ ದೇಹಕ್ಕೆ ಮಂಕುಬೂದಿ ಎರಚುವ ತಂತ್ರವಿದು. ಹುಳಿಯುಪ್ಪುನೀರಿನ ರುಚಿಯ ಉಪ್ಪಿನಕಾಯಿಯ ರಸವು ನಮ್ಮ ನಾಲಿಗೆಯ ಹಿಂಭಾಗದಲ್ಲಿರುವ ಸಂವೇದಕಗಳನ್ನು ಎಚ್ಚರಗೊಂಡಂತೆ ಅವುಗಳು ಜಾಗ್ರತಗೊಂಡು ಮಿದುಳಿಗೆ ಸಂದೇಶವನ್ನು ರವಾನಿಸುತ್ತವೆ. ಅದು ತಲುಪುತ್ತಿದ್ದಂತೆಯೇ ಮಿದುಳು ಸೆಳೆತಕ್ಕೊಳಗಾದ ಆ ಸ್ನಾಯುಗಳಿಗೆ ಸಡಿಲಗೊಳಿಸುವ ಸಂದೇಶವನ್ನು ರವಾನಿಸಿ ತೊಂದರೆಯನ್ನು ಪರಿಹರಿಸುತ್ತದೆ. ಇದೊಂಥರ ಪರಾವರ್ತಿತ ಪ್ರತಿಕ್ರಿಯೆಯಾಗಿರುವ ಕಾರಣ ಕಿಂಗ್ ಕೊಹ್ಲಿ ಉಪ್ಪಿನಕಾಯಿಯ ರಸವನ್ನು ನಾಲಿಗೆಯ ಸಂವೇದಕಗಳಿಗೆ ರ್ಸ³ಸುವಂತೆ ಮುಕ್ಕಳಿಸಿ ಉಗಿಯುವುದು. ಉಪ್ಪಿನಕಾಯಿಯ ರಸವನ್ನು ಕುಡಿದಾಗ ಹಲವರಿಗೆ ಹೊಟ್ಟೆ ತೊಳೆಸಿ ವಾಂತಿಯಾಗುವ ಕಾರಣದಿಂದ ಕ್ರೀಡಾವೈದ್ಯರು ಸೀಮಿತ ಪ್ರಮಾಣದಲ್ಲಿಯೇ ಅದನ್ನು ನೀಡುತ್ತಾರೆ. 

ಇತ್ತೀಚೆಗೆ ಸೈಕ್ಲಿಂಗ್, ಹಾಯಿದೋಣಿಯಂತಹ ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ತರಬೇತುದಾರರು ಅಡುಗೆಸೋಡಾವನ್ನು ತಿನ್ನಿಸುವ ಪರಿಪಾಠ ಶುರುವಾಗಿದೆ. ಕಾರಣವಿಷ್ಟೇ ದೇಹವನ್ನು ವಿಪರೀತ ದಂಡಿಸುವ ಇಂತಹ ಕ್ರೀಡೆಗಳಲ್ಲಿ ಒಂದು ಹಂತದ ನಂತರ ಕ್ರೀಡಾಪಟುಗಳ ಸ್ನಾಯುಗಳಲ್ಲಿ ಜಲಜನಕದ ಆಯಾನುಗಳು ಸೃಷ್ಟಿಯಾಗಿ ಅವುಗಳು ಸ್ನಾಯುಗಳನ್ನು ಆಮ್ಲೀಯವಾಗಿಸುತ್ತವೆ. ಇದರಿಂದ ಅವುಗಳಲ್ಲಿ ಸುಸ್ತು ಕಾಣಿಸಿಕೊಂಡು ಕ್ರೀಡಾಳು ಅಶಕ್ತನಾಗುತ್ತಾನೆ. ಈ ಆಮ್ಲೀಯತೆಯನ್ನು ಸರಿದೂಗಿಸಲು ತರಬೇತುದಾರರು ಕಂಡುಕೊಂಡ ಉಪಾಯವೇ ಅಡುಗೆಸೋಡಾ. ಅದು ಕ್ಷಾರೀಯ ಪದಾರ್ಥವಾಗಿರುವ ಕಾರಣ ರಕ್ತದ ಮೂಲಕ ಸ್ನಾಯುಗಳನ್ನು ತಲುಪಿ ಆಮ್ಲೀಯತೆಯನ್ನು ಕಡಿಮೆಮಾಡಿ ಸ್ನಾಯುಗಳನ್ನು ನಿರುಮ್ಮಳಗೊಳಿಸುತ್ತದೆ. ಇದರಿಂದ ಕ್ರೀಡಾಳು ತನ್ನ ಸ್ನಾಯುಗಳ ಮೇಲೆ ಮತ್ತಷ್ಟು ಕಾರ್ಯಭಾರವನ್ನು ಹಾಕಲು ಸಮರ್ಥನಾಗುತ್ತಾನೆ. ಅಡುಗೆಸೋಡಾ ಸೇವಿಸಿದರೆ ವಾಯುವಿನಿಂದ ಹೊಟ್ಟೆಕಟ್ಟುವುದು, ಅಜೀರ್ಣತೆಯಂಥ ತೊಂದರೆ ಗ್ಯಾರಂಟಿ. 

ಹೀಗಾಗಿ ಸೈಕ್ಲಿಂಗ್, ಹಾಯಿದೋಣಿಯಂತಹ ಕಡಿಮೆ ಸಮಯದಲ್ಲಿ ಮುಗಿಯುವ ಪಂದ್ಯಾವಳಿಗಳಲ್ಲಿ ಸ್ನಾಯುಗಳ ಬಳಲುವಿಕೆಯನ್ನು ಮುಂದೂಡಲು ಅಲ್ಪಪ್ರಮಾಣದಲ್ಲಿ ಸೇವಿಸುವಂತೆ ಆಟಗಾರರಿಗೆ ಕ್ರೀಡಾವೈದ್ಯರು ಶಿಫಾರಸ್ಸು ಮಾಡುತ್ತಿದ್ದಾರೆ. ಇದೇ ತಿಂಗಳ ಮೊದಲ ವಾರದಲ್ಲಿ ನಡೆದ ಮೊನಾಕೊ ಡೈಮಂಡ್ ಲೀಗ್​ನ ಒಂದುಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವು ಕೆನ್ಯಾ ದೇಶದ ಎಮಾನ್ಯುಲ್ ವಾನ್ಯೋನ್ಯಿ ಎಂಬ ಓಟಗಾರನ ಪಾಲಾಯಿತು. ಎರಡು ನಿಮಿಷ ಹನ್ನೊಂದು ಸೆಕಂಡ್ ಎಂಭತ್ಮೂರು ಮಿಲಿ ಸೆಕಂಡ್​ಗಳಲ್ಲಿ ಆ ದೂರ ಕ್ರಮಿಸಿದ ಎಮಾನ್ಯುಲ್ ಆ ಮೂಲಕ ಇಪ್ಪತ್ತೇಳು ವರ್ಷಗಳಿಂದ ಯಾರೂ ಮುರಿಯಲಾರದ ದಾಖಲೆಯನ್ನು ಅಳಿಸಿ ಹಾಕಿದ್ದ. ಆಸಕ್ತಿಕರ ವಿಷಯವೆಂದರೆ ಎರಡನೇ ಸ್ಥಾನ ಪಡೆದ ಜೇಕ್ ವೈಟ್ ಮನ್ ಎಂಬ ಬ್ರಿಟನ್​ನ ಓಟಗಾರ ಕೆಲವೇ ಮಿಲಿಸೆಕಂಡ್​ಗಳಿಂದ ಹಿಂದಿದ್ದ.

1999ರಿಂದ ಯಾರೂ ಮುರಿಯಲಾರದ ಆ ದಾಖಲೆಯನ್ನು ಒಂದೇ ಸ್ಪರ್ಧೆಯಲ್ಲಿ ಇಬ್ಬಿಬ್ಬರು ಹೊಸಕಿ ಹಾಕಿದ್ದು ಕ್ರೀಡಾಲೋಕದಲ್ಲಿ ಭಾರಿ ಚರ್ಚೆಗೊಳಗಾಯಿತು. ಅದು ಕೊನೆಗೆ ಬಂದು ನಿಂತಿದ್ದು ಅವರುಗಳು ಅಂದು ಧರಿಸಿದ್ದ ಶೂಗಳ ಮೇಲೆ. ಆ ಶೂ ಪ್ರತಿಷ್ಠಿತ ಕ್ರೀಡಾ ಉತ್ಪನ್ನಗಳ ತಯಾರಿಕಾ ಕಂಪನಿಯೊಂದು ಮಾರುಕಟ್ಟೆಗೆ ಪರಿಚಯಿಸಿರುವ ನೂತನ ಮಾಡೆಲ್. ಅದರ ಕೆಳಗೆ ಕಾರ್ಬನ್ ಪಟ್ಟಿಗಳಿದ್ದು ವಿಶಿಷ್ಟ ಫೋಮ್ಂದ ತಯಾರಾಗಿದೆ. ಅತಿಕಡಿಮೆ ತೂಕದ ಈ ಶೂ ಧರಿಸಿ ಓಡುವಾಗ ಓಟಗಾರನ ಶಕ್ತಿವ್ಯಯವನ್ನು ಕಡಿಮೆಗೊಳಿಸುವ ಮೂಲಕ ಆತನ ಕ್ಷಮತೆಯನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಹೀಗೆ ತಾಂತ್ರಿಕತೆ ಇಂದಿನ ಜಮಾನಾದ ಆಟಗಾರರ ಕಾಲುಬುಡಕ್ಕೂ ಬಂದು ತಲುಪಿದ್ದು ಆ ಮೂಲಕ ಅವರುಗಳಿಗೆ ಅನುಕೂಲಕರ ಸನ್ನಿವೇಶವನ್ನು ಸೃಷ್ಟಿಸುವುದರಿಂದ ಹಳೆಯ ದಾಖಲೆಗಳನ್ನು ಮುರಿಯುವುದು ಇದೀಗ ಸುಲಭಸಾಧ್ಯವೆಂಬುದು ಅಂದಿನ ಕಾಲದ ಕ್ರೀಡಾಪಟುಗಳ ಕಂಪ್ಲೇಂಟು.

ಈ ಬಾರಿಯ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗಳಲ್ಲಂತೂ ಎಲ್ಲ ತಂಡಗಳೂ ನೂತನ ತಂತ್ರಜ್ಞಾನಕ್ಕೆ ಮೊರೆ ಹೋಗಿದ್ದವು. ಅಭ್ಯಾಸ ಪಂದ್ಯಗಳೂ ಸೇರಿದಂತೆ ಎಲ್ಲ ಪಂದ್ಯಗಳಲ್ಲಿಯೂ ಆಟಗಾರರು ಜರ್ಸಿಯೊಳಗೆ ತೊಡುವ ಅರ್ಧ ಬನಿಯನ್ ಮಾದರಿಯ ಒಳ ಉಡುಪಿನಲ್ಲಿ ಜಿಪಿಎಸ್ ಸಂವೇದಕವನ್ನು ಧರಿಸಿದ್ದರು. ಮತ್ತೆ ಕೆಲ ತಂಡದ ಆಟಗಾರರಿಗೆ ಅದರ ಜೊತೆಗೆ ಕಾಲಿಗೂ ಕೆಲವು ಉಪಕರಣಗಳನ್ನು ತೊಡಿಸಲಾಗಿತ್ತು. ಜಿಪಿಎಸ್ ಉಪಕರಣವು, ಆಟಗಾರನೊಬ್ಬ ಮೈದಾನದಲ್ಲಿ ಓಡಾಡುವ ದೂರ, ಆತನ ಕ್ಷಮತೆಯ ಜೊತೆಗೆ ಪಂದ್ಯದ ಅತ್ಯವಶ್ಯ ಘಟ್ಟದಲ್ಲಿ ಆತನ ಸ್ಪಂದನೆಯ ಕುರಿತು ಮಾಹಿತಿಯನ್ನು ನೀಡಿದರೆ, ಕಾಲಿಗೆ ಅಳವಡಿಸಲಾಗಿರುವ ಗ್ಯಾಜೆಟ್​ಗಳು ಆತ ಚೆಂಡನ್ನು ರ್ಸ³ಸುವ ಪರಿ, ದೈಹಿಕ ಆರೋಗ್ಯ ಹೀಗೆ ಕ್ಷಣಕ್ಷಣದ ವಿವರಗಳನ್ನು ಮೈದಾನದ ಹೊರಗೆ ಕೂತು ಎದುರಾಳಿಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಿದ್ದ ತಂಡದ ಥಿಂಕ್​ಟ್ಯಾಂಕ್​ಗೆ ನೀಡುತ್ತಿದ್ದವು.

ಇದು ಅಂತಾರಾಷ್ಟ್ರೀಯ ಪಂದ್ಯಗಳ ಬೆಳವಣಿಗೆಯಾದರೆ ಮತ್ತೊಂದೆಡೆ ಕೃತಕ ಬುದ್ಧಿಮತ್ತೆಯೂ ಸೇರಿದಂತೆ ನೂತನ ತಂತ್ರಜ್ಞಾನಗಳು ದೇಸಿಯ ಮಟ್ಟದಲ್ಲೂ ನಿಧಾನವಾಗಿ ಕ್ರೀಡಾಕ್ಷೇತ್ರವನ್ನು ಆವರಿಸಿಕೊಳ್ಳುತ್ತಿವೆ. ಇದು ಪ್ರತಿಭೆಗಳನ್ನು ಗುರುತಿಸಿ ಆಯ್ಕೆ ಮಾಡುವುದರಿಂದ ಹಿಡಿದು, ನಂತರ ಅವರಿಗೆ ತರಬೇತಿ ನೀಡಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ತರಕ್ಕೆ ಸಜ್ಜುಗೊಳಿಸುವಲ್ಲಿಗೆ ‘ಸರ್ವಂ ಎಐ ಮಯಂ’. ಆರ್​ಸಿಬಿ ತಂಡವು ಕೃತಕ ಬುದ್ಧಿಮತ್ತೆಯನ್ನು ಬಳಸಿ ಅವಿನಾಶ್ ಸಿಂಗ್ ಮತ್ತು ಹಿಮಾಂಶು ಶರ್ಮ ಎಂಬ ಇಬ್ಬರು ಯುವ ಆಟಗಾರರನ್ನು ಆಯ್ಕೆ ಮಾಡಿದ್ದುದರ ಕುರಿತು ಹಿಂದೊಮ್ಮೆ ಇದೇ ಅಂಕಣದಲ್ಲಿ ಬರೆದಿದ್ದೆ. ಭಾರತೀಯ ಕ್ರೀಡಾ ಪ್ರಾಧಿಕಾರವು ‘ಸ್ಪೀಡ್ ಎಐ’ ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಾಂಶವನ್ನು ಯುವಕ್ರೀಡಾಳುಗಳನ್ನು ತರಬೇತಿಗೊಳಿಸಲು ಅವರ ದೈಹಿಕ ಸಾಮರ್ಥ್ಯವನ್ನು ಅಳೆಯಲು ಬಳಸುತ್ತಿದೆ. 

‘ಎಐ ಸ್ಕೌಟ್’ ಎಂಬುದು ಇತ್ತೀಚೆಗೆ ಖಾಸಗಿ ಕ್ರೀಡಾ ತರಬೇತಿ ಕೇಂದ್ರಗಳು ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಹೆಚ್ಚು ಬಳಸುತ್ತಿರುವ ಕೃತಕ ಬುದ್ಧಿಮತ್ತೆಯಾಧಾರಿತ ಆಪ್. ಇಲ್ಲಿ ತಾನಿದ್ದ ಕಡೆಯಿಂದಲೇ ಯುವ ಆಟಗಾರನೊಬ್ಬ ತನ್ನ ಕ್ರೀಡಾ ಪ್ರತಿಭೆಯನ್ನು ವಿಡಿಯೋ ಮೂಲಕ ಕ್ರೀಡಾ ತರಬೇತಿ ಕೇಂದ್ರಗಳಿಗೆ ಪ್ರದರ್ಶಿಸಿ ಅವರಲ್ಲಿ ಪ್ರವೇಶಾತಿಗೆ ಕೋರಬಹುದು. ಕೂತಲ್ಲಿಯೇ ಆಪ್ ಮೂಲಕ ಆತನ ಸಾಮರ್ಥ್ಯವನ್ನು ಅಳೆಯುವ ರಿಲಯನ್ಸ್ ಫೌಂಡೇಶನ್​ನಂತಹ ಪ್ರತಿಷ್ಠಿತ ಕ್ರೀಡಾ ತರಬೇತಿ ಕೇಂದ್ರಗಳು ಇತ್ತೀಚಿನ ದಿನಗಳಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸರಳಗೊಳಿಸಿವೆ. ಹಾಂ..., ಇಲ್ಲಿ ತಪ್ಪು ವಯಸ್ಸನ್ನು ನಮೂದಿಸಿ ಪ್ರವೇಶಾತಿ ಪಡೆಯುವಂತಹ ಹಳೆಯ ಚಾಳಿಗಳಿಗೂ ಆಪ್ ಕಡಿವಾಣ ಹಾಕಿ ತರಬೇತಿ ಕೇಂದ್ರಗಳ ಮಂಡೆಬಿಸಿಯನ್ನು ಕಡಿಮೆಗೊಳಿಸಿದೆ.

1983ರಲ್ಲಿ ಭಾರತದ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಾಗ ಆ ತಂಡಕ್ಕೆ ಕೋಚ್, ಮ್ಯಾನೇಜರ್, ತಂತ್ರಗಾರ, ಡಯಟಿಸ್ಟ್ ಎಲ್ಲ ಪಾತ್ರಗಳನ್ನೂ ಮಾನಸಿಂಗ್ ಎಂಬುವವರೊಬ್ಬರೇ ನಿಭಾಯಿಸಿದ್ದರು. ಇಂದಿನ ದಿನಗಳಲ್ಲಿ ಆಟಗಾರರಿಗೆ ಕೈಗೊಂದು, ಕಾಲಿಗೊಂದು ಇ-ಕಡಗ. ಹಿಂದಿಷ್ಟು ಪರಿಣತರು. ತಂತ್ರಜ್ಞಾನದಿಂದ ಖಂಡಿತ ಲಾಭವಿದೆ ಖರೆ. ಆದರೆ ಕ್ರೀಡೆಯಲ್ಲೂ ಇದೀಗ ಮಾನವ ಯಂತ್ರವಾಗಿ, ಯಂತ್ರವು ತಂತ್ರವಾಗುತ್ತಿದೆಯಾ ಎಂಬುದೊಂದು ಸಣ್ಣ ಕಳವಳ ಅಷ್ಟೇ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net