ಅನಿಸಿಕೆ: ಚೀನೀ ಆ್ಯಪ್​ಗಳ ನಿಷೇಧ ಭಾರತೀಯ ಸ್ಟಾರ್ಟಪ್​ಗಳಿಗೆ ಸದವಕಾಶ

Edit-2
Published on

ಮೊಬೈಲ್ ಅಪ್ಲಿಕೇಶನ್​ಗಳು- ವಾಟ್ಸ್ ಆಪ್, ಫೇಸ್​ಬುಕ್, ಇನ್​ಸ್ಟಾಗ್ರಾಮ್ ಯೂಟ್ಯೂಬ್, ಜಿಮೇಲ್, ಪೇಟಿಎಂ ಅಥವಾ ಟಿಕ್​ಟಾಕ್ ಯಾವುದೇ ಆಗಿರಲಿ ಅವುಗಳ ಪ್ರಕಾಶಕರಿಗೆ ಹೆಚ್ಚಿನ ಪ್ರಮಾಣದ ಆದಾಯವನ್ನು ನೀಡುತ್ತವೆ ಮತ್ತು ಅವು ನಿಮ್ಮ ಫೋನ್ ಮತ್ತು ಟ್ಯಾಬ್ಲೆಟ್​ಗಳನ್ನು ಕೆಲಸ, ವೈಶಿಷ್ಟ್ಯಗಳ ದೃಷ್ಟಿಯಿಂದ ಸ್ಮಾರ್ಟ್ ಮಾಡುತ್ತವೆ. ಭಾರತದಲ್ಲಿ ಪ್ರಸಕ್ತ ಬಳಸಲಾಗುವ ಹೆಚ್ಚಿನ ಆಪ್​ಗಳನ್ನು ವಿದೇಶಿ ಕಂಪನಿಗಳು ಮುಖ್ಯವಾಗಿ ಪಾಶ್ಚಿಮಾತ್ಯ ದೇಶಗಳು ಮತ್ತು ಇತ್ತೀಚೆಗೆ ಚೀನಾ ನಿರ್ವಿುಸಿ, ನಿರ್ವಹಿಸುತ್ತಿವೆೆ. ಭಾರತದಲ್ಲಿ 800 ಮಿಲಿಯನ್​ಗೂ ಹೆಚ್ಚು ಸ್ಮಾರ್ಟ್​ಫೋನ್ ಬಳಕೆದಾರರಿದ್ದಾರೆ. ಇದರಿಂದಾಗಿ ನಾವು ಅಪ್ಲಿಕೇಶನ್ ತಯಾರಕರು ಗಣನೀಯ ಆದಾಯವನ್ನು ಗಳಿಸಲು ಸಹಾಯ ಮಾಡುತ್ತಿದ್ದೇವೆ. ವೇಗವಾಗಿ ಬೆಳೆಯುತ್ತಿರುವ ಟಿಕ್​ಟಾಕ್ ಮಾರುಕಟ್ಟೆಗಳಲ್ಲಿ ಭಾರತವೂ ಒಂದಾಗಿದೆ (ಈಗ ಆ ಆಪ್​ಗೆ ಭಾರತದಲ್ಲಿ ನಿಷೇಧ ಹೇರಲಾಗಿದೆ). ಇದರ ವಿಶ್ವದಾದ್ಯಂತದ 2 ಬಿಲಿಯನ್ ಡೌನ್​ಲೋಡ್​ಗಳಲ್ಲಿ ಶೇಕಡ 30 ರಷ್ಟು ಪಾಲನ್ನು ಭಾರತ ಹೊಂದಿದೆ.

ಹತ್ತು ವರ್ಷಗಳ ಹಿಂದೆ ಚೀನಾದಲ್ಲಿ ಇದೇ ಪರಿಸ್ಥಿತಿ ಇತ್ತು. ಅಮೆರಿಕ ಮತ್ತು ಯುರೋಪ್​ನಲ್ಲಿ ಆಪ್​ಗಳು ಅಭಿವೃದ್ಧಿ ಹೊಂದಿದಾಗ ಅವು ಪ್ರಪಂಚದ ಗಮನ ಸೆಳೆದವು. ಕೆಲವೇ ಸಮಯದಲ್ಲಿ, ಚೀನಾ ಸರ್ಕಾರವು ದೇಶದಲ್ಲಿ ಈ ಹಲವು ಅಪ್ಲಿಕೇಶನ್​ಗಳ ಬಳಕೆಯನ್ನು ನಿಷೇಧಿಸಿತು. ಉದಾಹರಣೆಗೆ, ಚೀನಾದಲ್ಲಿ ವಾಟ್ಸ್​ಆಪ್​ನ್ನು ನಿರ್ಬಂಧಿಸಲಾಗಿದೆ. ಚೀನಾದ ದೇಶೀ ಕಂಪನಿಗಳು ಉದಯಿಸಲು ಮತ್ತು ಗುಣಮಟ್ಟದ ಅಪ್ಲಿಕೇಶನ್​ಗಳನ್ನು ನಿರ್ವಿುಸಲು ಈ ನಿಷೇಧವು ಸಹಾಯ ಮಾಡಿತು. ‘ವೀಚಾಟ್’ನಂಥ ಚೀನೀ ಅಪ್ಲಿಕೇಶನ್​ಗಳು ವಿದೇಶಿ ಸ್ಪರ್ಧಿಗಳು ಮಾರುಕಟ್ಟೆಯಿಂದ ನಿರ್ಗಮಿಸಿದ ನಂತರ ಹೆಚ್ಚಿನ ಲಾಭವನ್ನು ಪಡೆದಿವೆ. ಹಾಗೆಯೇ, ಗೂಗಲ್ ಮ್ಯಾಪ್ ಸೇರಿ ಎಲ್ಲ ಗೂಗಲ್ ಅಪ್ಲಿಕೇಶನ್​ಗಳನ್ನು ಚೀನಾದಲ್ಲಿ ನಿಷೇಧಿಸಲಾಗಿದೆ ಮತ್ತು ಇದು ‘ಬೈದು’ (ಜನಪ್ರಿಯ ಸರ್ಚ್ ಇಂಜಿನ್) ಗೆ ಇದೇ ರೀತಿಯ ಅಪ್ಲಿಕೇಶನ್​ಗಳನ್ನು ತರಲು ಅನುವು ಮಾಡಿಕೊಟ್ಟಿತು. ಫೇಸ್​ಬುಕ್, ಟ್ವಿಟರ್ ಮತ್ತು ಇನ್​ಸ್ಟಾಗ್ರಾಮ್ಳಿಗೆ ಪರ್ಯಾಯವಾಗಿರುವ ಅಲಿಪೇ ಮತ್ತು ಕ್ಯೂಕ್ಯೂಬ್ ಕಥೆಯೂ ಅದೇ ಆಗಿದೆ. ಅಲಿಬಾಬಾ ಗ್ರೂಪ್​ನಂಥ ಚೀನೀ ವೆಂಚರ್ ನಿಧಿಗಳಿಂದ ಅವುಗಳಿಗೆ ಹೆಚ್ಚಿನ ಹಣದ ನೆರವು ಒದಗಿಸಲಾಗಿದೆ. ಈ ಆಪ್ ಕಂಪನಿಗಳು ಈಗ ತಮ್ಮ ಪಾಶ್ಚಾತ್ಯ ಸಹವರ್ತಿಗಳಷ್ಟೇ ಮೌಲ್ಯಗಳನ್ನು ಹೊಂದಿವೆ. ಇತ್ತೀಚಿನ ದಿನಗಳಲ್ಲಿ, ಇಂಥ ಹಲವಾರು ಚೀನೀ ಅಪ್ಲಿಕೇಶನ್​ಗಳು ಭಾರತದಲ್ಲಿ ಆವರಿಸಿವೆ.

ಚೀನಾದ 59ಕ್ಕಿಂತ ಹೆಚ್ಚಿನ ಆಪ್​ಗಳನ್ನು ಕೇಂದ್ರ ಸರ್ಕಾರವು ನಿಷೇಧ ಮಾಡಿದ್ದು, ಭಾರತೀಯ ಸ್ಟಾರ್ಟಪ್​ಗಳಿಗೆ ವರದಾನ. ಗುಣಮಟ್ಟದ ಸ್ಥಳೀಯ ಅಪ್ಲಿಕೇಶನ್​ಗಳನ್ನು ನಿರ್ವಿುಸಿ ಭಾರತೀಯ ಮಾರುಕಟ್ಟೆಯಲ್ಲಿ ಹತೋಟಿ ಸಾಧಿಸಲು ಮತ್ತು ಮುಂದೊಂದು ದಿನ ಜಾಗತಿಕವಾಗಿ ವಿಸ್ತರಿಸಲು ಒಂದು ಅವಕಾಶವಾಗಬಹುದು. ಆದರೆ ಈ ದಾರಿ ಖಂಡಿತವಾಗಿಯೂ ಸುಲಭವಾದುದಲ್ಲ.

ಭಾರತೀಯ ಯುವಕರು ಖಂಡಿತವಾಗಿಯೂ ಇಂಥ ಆಪ್​ಗಳನ್ನು ಅಭಿವೃದ್ಧಿಪಡಿಸುವ ತಂತ್ರಜ್ಞಾನ ಸಾಮರ್ಥ್ಯನ್ನು ಹೊಂದಿದ್ದಾರೆ. ಫೇಸ್​ಬುಕ್ ಮತ್ತು ಗೂಗಲ್​ನಂಥ ತಂತ್ರಜ್ಞಾನ ದಿಗ್ಗಜ ಕಂಪನಿಗಳ ಅಪ್ಲಿಕೇಶನ್ ಉತ್ಪನ್ನಗಳಲ್ಲಿ ಇವರು ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ. ಅಂತಹ ಕೆಲಸಕ್ಕೆ ಅಗತ್ಯವಾದ ಕೌಶಲವು ದೇಶದಲ್ಲಿ ನಿರಂತರವಾಗಿ ವಿಸ್ತರಿಸುತ್ತಿದೆ. ಇತ್ತೀಚೆಗೆ, ಐಐಟಿ ಮದ್ರಾಸ್ ಎಲ್ಲ ಹೈಯರ್ ಸೆಕೆಂಡರಿ ಪದವೀಧರರಿಗೆ ಡೇಟಾ ವಿಜ್ಞಾನದಲ್ಲಿ ಆನ್​ಲೈನ್ ಬಿಎಸ್ಸಿ ಪದವಿಯನ್ನು ಪ್ರಾರಂಭಿಸಿದೆ. ಇದು ಹೆಚ್ಚಿನ ಸಂಖ್ಯೆಯ, ಗುಣಮಟ್ಟದ ಅಪ್ಲಿಕೇಶನ್ ಡೆವಲಪರ್​ಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ.

ಇಷ್ಟಾದರೂ, ಮೊಬೈಲ್ ಅಪ್ಲಿಕೇಶನ್​ಗಳು ಯಶಸ್ಸು ಕಾಣಲು ತಂತ್ರಜ್ಞಾನಕ್ಕಿಂತ ಹೆಚ್ಚಿನದನ್ನು ಬಯಸುತ್ತವೆ. ಬಳಕೆದಾರರ ಕಲ್ಪನೆಯನ್ನು ತಕ್ಷಣವೇ ಸೆರೆಹಿಡಿಯುವಂತೆ ಜನಪ್ರಿಯ ಅಪ್ಲಿಕೇಶನ್​ಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಅವುಗಳ ನೋಟ ಮತ್ತು ಭಾವನೆಯೊಂದಿಗೆ, ವಿನ್ಯಾಸದ ಸೌಂದರ್ಯ, ಬಳಕೆದಾರ ಇಂಟರ್ಫೇಸ್ ಮತ್ತು ನೂತನ ವೈಶಿಷ್ಟ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ವಿುಸಲಾಗಿರುತ್ತದೆ. ಹಾಗೆಯೇ, ಅವುಗಳು ನಿರಂತರವಾಗಿ ವಿನ್ಯಾಸ ಮತ್ತು ಮರುವಿನ್ಯಾಸ, ಹೊಸ ವೈಶಿಷ್ಟ್ಯಗಳ ಸೇರ್ಪಡೆ, ಪ್ರತಿ ಪ್ರದೇಶದ ಬಳಕೆದಾರರ ಅಭ್ಯಾಸವನ್ನು ಪ್ರತಿಬಿಂಬಿಸಲು ಮತ್ತು ಬಳಕೆದಾರರನ್ನು ಮತ್ತಷ್ಟು ತೊಡಗಿಸಿಕೊಳ್ಳಲು ಕೆಲಸ ಮಾಡುತ್ತವೆ. ಇದಕ್ಕೆ ಪ್ರತಿಭಾವಂತರ ತಂಡದ ಅಗತ್ಯವಿದೆ. ಆಪ್​ಗಳು ಮಾರುಕಟ್ಟೆಯಲ್ಲಿ ಮುನ್ನುಗ್ಗಲು ಸಾಕಷ್ಟು ಆರ್ಥಿಕ ಶಕ್ತಿಯ ಅಗತ್ಯವಿದೆ. ಇವೆಲ್ಲವೂ ಸ್ಟಾರ್ಟಪ್​ಗೆ

ಸವಾಲುಗಳಾಗಿವೆ.

ಈ ಸವಾಲುಗಳ ಹೊರತಾಗಿಯೂ, ಭಾರತದ ಸ್ಟಾರ್ಟಪ್ ಸಮುದಾಯವು ಈ ಕೆಲಸವನ್ನು ಕೈಗೆತ್ತಿಕೊಳ್ಳಲು ಶಕ್ತಿ ಮತ್ತು ಪ್ರಬುದ್ಧತೆಯನ್ನು ಹೊಂದಿದೆ. ಇಂತಹ ಅವಕಾಶ ಮೊದಲೂ ಇತ್ತು, ಅದೀಗ ಈ ನಿಷೇಧದಿಂದ ಮತ್ತಷ್ಟು ಬಲಗೊಂಡಿದೆ, ಅದನ್ನು ಸಮರ್ಥವಾಗಿ ನಿಭಾಯಿಸಿ ಯಶಸ್ವಿಯಾಗುವುದು ಅವಗಳಿಗೆ ಬಿಟ್ಟದ್ದು. ಇದಕ್ಕೆ ಕಠಿಣ ಪರಿಶ್ರಮ ಬೇಕು, ಇನ್ನೊಬ್ಬರ ವೈಫಲ್ಯಗಳಿಂದ ನಿರಂತರವಾಗಿ ಕಲಿಯಬೇಕು ಮತ್ತು ಎಲ್ಲ ಅಡೆತಡೆಗಳನ್ನು ಎದುರಿಸಿ ನಿಲ್ಲಬೇಕು. ಅದಕ್ಕಾಗಿಯೇ ಇದನ್ನು ಸ್ಟಾರ್ಟಪ್ ಎಂದು ವ್ಯಾಖ್ಯಾನಿಸಲಾಗಿದೆ. ಅದೃಷ್ಟವಶಾತ್, ಭಾರತದಲ್ಲಿಂದು ಸ್ಟಾರ್ಟಪ್ ವ್ಯವಸ್ಥೆಯು ಸಾಕಷ್ಟು ವಿಸ್ತಾರವಾಗಿದೆ, ಒಂದಲ್ಲದಿದ್ದರೆ ಇನ್ನೊಂದರಲ್ಲಿ ಯಶಸ್ವಿಯಾಗಲು ಅವಕಾಶವಿದೆ. ನಮ್ಮ ಮೊಬೈಲ್ ಫೋನ್​ಗಳಲ್ಲಿ ಭಾರತೀಯ ಅಪ್ಲಿಕೇಶನ್​ಗಳನ್ನು ಆದ್ಯತೆಯ ಆಯ್ಕೆಯಾಗಿ ಬಳಸುವ ದಿನಗಳಿಗಾಗಿ ನಾವು ಎದುರು ನೋಡುತ್ತಿದ್ದೇವೆ.

(ಲೇಖಕರು ಐಐಟಿ ಮದ್ರಾಸ್ ಇನ್ಕ್ಯುಬೇಷನ್ ಸೆಲ್​ನ ತಜ್ಞರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net