

ಒಂದು ಹಳ್ಳಿಯಲ್ಲಿ ಒಬ್ಬಳು ಮಹಿಳೆ ಇದ್ದಳು. ಅವಳ ಮಗನಿಗೆ ಮದುವೆಯಾಗಿ ಪತ್ನಿಯೊಂದಿಗೆ ಪಟ್ಟಣದಲ್ಲಿ ವಾಸವಿದ್ದನು. ಹಳ್ಳಿಯಲ್ಲೇ ಬೆಳೆದರೂ ಅವನಿಗೆ ಪ್ರಕೃತಿಯ ಬಗ್ಗೆ ಹಾಗೂ ಹಳ್ಳಿ ಬಗ್ಗೆ ತುಂಬಾ ನಿರಾಸಕ್ತಿ ಇತ್ತು. ತಾಯಿಯ ಆರೋಗ್ಯ ಸರಿಯಿಲ್ಲದ ಕಾರಣ ಆಕೆಯನ್ನು ನೋಡಲು ಒಂದು ದಿನ ಹಳ್ಳಿಗೆ ಬಂದನು. ತಾಯಿ ಮಗನನ್ನು ನೋಡಿ ತುಂಬಾ ಸಂತೋಷಪಟ್ಟಳು. ಆದರೆ ಮಗನಿಗೆ ತಾಯಿಯನ್ನು ನೋಡಿ ತುಂಬಾ ಬೇಸರವಾಯಿತು. ಅವನು ಕೇಳಿದನು, ‘ಅಮ್ಮ ನೀನು ಇಲ್ಲಿ ಒಬ್ಬಳೇ ಯಾಕೆ ಇರುತ್ತೀಯಾ? ನಿನಗೆ ಯಾರಿದ್ದಾರೆ ಇಲ್ಲಿ. ಆರೋಗ್ಯ ಬೇರೆ ಸರಿಯಿಲ್ಲ. ಇಲ್ಲಿ ನಿನ್ನ ನೋಡಿಕೊಳ್ಳಲು ಯಾರೂ ಇಲ್ಲ. ಹಾಗಾಗಿ ನಮ್ಮ ಜತೆ ಪಟ್ಟಣಕ್ಕೆ ಬಾ’ ಎನ್ನುತ್ತಾನೆ.
ಅದಕ್ಕೆ ತಾಯಿ, ‘ನನಗೆ ಇಲ್ಲಿ ಯಾರೂ ಇಲ್ಲ ಅಂತ ಯಾರು ಹೇಳಿದ್ದು ನಿನಗೆ. ಈ ಪ್ರಕೃತಿ ಇದೆ. ಗಿಡ-ಮರ, ಪ್ರಾಣಿ-ಪಕ್ಷಿ ಹಾಗೂ ಗ್ರಾಮದ ಜನ ನನ್ನ ಜೊತೆ ಇದ್ದಾರೆ’ ಎನ್ನುತ್ತಾಳೆ. ಆಗ ಮಗ ಕೋಪಗೊಂಡು, ‘ನೀನು ಯಾವಾಗಲೂ ಈ ಹಳ್ಳಿಯ ಪ್ರಕೃತಿಯ ಬಗ್ಗೆ ಮಾತನಾಡುತ್ತಿರುತ್ತೀಯಾ. ಏನಿದೆ ಈ ಪ್ರಕೃತಿಯಲ್ಲಿ? ಪಟ್ಟಣದಲ್ಲಿ ನಿನಗೆ ಏನು ಬೇಕಾದರೂ ಸಿಗುತ್ತದೆ. ಅದಕ್ಕೆ ನಮ್ಮ ಜೊತೆ ಪಟ್ಟಣಕ್ಕೆ ಬಂದುಬಿಡು’ ಎಂದನು. ತಾಯಿ ಒಪ್ಪಿಗೆ ನೀಡಲಿಲ್ಲ. ಆಕೆ ಮಗನಿಗೆ ಹೇಳಿದಳು. ‘ನೀನು ಒಮ್ಮೆ ಈ ಪ್ರಕೃತಿ ಸೌಂದರ್ಯ ನೋಡು, ನಿನಗೇ ಗೊತ್ತಾಗುತ್ತದೆ’ ಎಂದಳು.
ಅವನು ಒಪ್ಪಿ ಹಳ್ಳಿ ನೋಡಲು ಹೊರಟನು. ದಾರಿಯಲ್ಲಿ ಅವನಿಗೆ ಒಂದು ಹಾವು ಕಚ್ಚಿ ಕುಸಿದು ಬಿದ್ದನು. ಆಗ ವ್ಯಕ್ತಿಯೊಬ್ಬ ಓಡಿ ಬಂದು ಅಲ್ಲೇ ಇದ್ದ ಎಲೆಯ ರಸ ಹಚ್ಚಿ ಉಪಚರಿಸಿದನು. ಕೆಲ ಸಮಯದಲ್ಲೇ ಅವನು ಚೇತರಿಸಿಕೊಂಡನು. ಆಗ ಮಗ ಯೋಚಿಸಿದನು. ಇದೇ ರೀತಿ ಪಟ್ಟಣದಲ್ಲಾಗಿದ್ದರೆ ಯಾರೂ ನನ್ನನ್ನು ಉಪಚರಿಸುತ್ತಿರಲಿಲ್ಲ. ಇಲ್ಲಿ ನಿಜವಾಗಿಯೂ ನೆಮ್ಮದಿ ಇದೆ ಎಂದು ಯೋಚಿಸಿ ತನ್ನ ಹೆಂಡತಿಯೊಂದಿಗೆ ಹಳ್ಳಿಗೆ ಮರಳಲು ನಿರ್ಧರಿಸಿದನು.