

ನೀಲಕಂಠ ಎಂಬ ರಾಜನಿಗೆ ರಾಮು ಹಾಗೂ ಶಾಮು ಎಂಬ ಮಕ್ಕಳಿರುತ್ತಾರೆ. ಪತ್ನಿ ತೀರಿಕೊಂಡಿದ್ದರಿಂದ ರಾಜ ನಂದಿನಿ ಎಂಬಾಕೆಯನ್ನು ಮದುವೆಯಾಗುತ್ತಾನೆ. ಅವರಿಗೆ ನಂದ ಎಂಬ ಮಗ ಹುಟ್ಟುತ್ತಾನೆ. ಒಂದು ದಿನ ನಂದ ಹಾಗೂ ಶಾಮು ಕಾಡಿಗೆ ಹೋಗುತ್ತಾರೆ. ಕತ್ತಲಾಗುತ್ತಾ ಬಂದರೂ ಅವರಿಬ್ಬರೂ ಅರಮನೆಗೆ ಹಿಂದಿರುಗದೇ ಇದ್ದಿದ್ದನ್ನು ಗಮನಿಸಿದ ಅಣ್ಣ ರಾಮು ಅವರನ್ನು ಹುಡುಕಿಕೊಂಡು ಕಾಡಿಗೆ ಬರುತ್ತಾನೆ. ಕಾಡಿನಲ್ಲಿ ನಂದ ಹಾಗೂ ಶಾಮುಗೆ ಹಾವು ಕಚ್ಚಿದ್ದರಿಂದ ಇಬ್ಬರೂ ಮೃತರಾಗಿರುತ್ತಾರೆ.
ಆಗ ರಾಮು ಅಲ್ಲೇ ಇದ್ದ ಹಾವಿಗೆ ಕೇಳುತ್ತಾನೆ, ‘ನನ್ನ ತಮ್ಮಂದಿರಿಗೇಕೆ ಕಚ್ಚಿದೆ?’ ಎಂದು. ಆಗ ಹಾವಿಗೆ ಏನು ಹೇಳಬೇಕೆಂದು ತಿಳಿಯದೆ, ‘ನನ್ನನ್ನು ಕ್ಷಮಿಸು. ತಿಳಿಯದೆ ತಪ್ಪಾಗಿದೆ. ಇದಕ್ಕಾಗಿ ನಾನು ಇವರಿಬ್ಬರಲ್ಲಿ ಒಬ್ಬರಿಗೆ ಜೀವ ಬರಿಸಬಹುದು. ಯಾರಿಗೆ ಜೀವದಾನ ನೀಡಲಿ ಕೇಳು’ ಎನ್ನುತ್ತದೆ. ಆಗ ರಾಮು ‘ನಂದನಿಗೆ ಜೀವದಾನ ಮಾಡು’ ಎನ್ನುತ್ತಾನೆ. ಅದಕ್ಕೆ ಹಾವು ‘ನಂದನಿಗೆ ಯಾಕೆ? ಶಾಮು ನಿನ್ನ ಒಡಹುಟ್ಟಿದವನು ಅಲ್ಲವೇ?’ ಎನ್ನುತ್ತದೆ.
ಆಗ ರಾಮು, ನಾನು ಮತ್ತು ಶಾಮು ದೊಡ್ಡವರು, ನಂದ ಇನ್ನೂ ಚಿಕ್ಕವನು. ಅಲ್ಲದೇ ಇವನಿಲ್ಲದಿದ್ದರೆ ಅವನ ತಾಯಿ ತುಂಬಾ ನೊಂದುಕೊಳ್ಳಬಹುದು’ ಎನ್ನುತ್ತಾನೆ. ರಾಮುವಿನ ಉತ್ತರದಿಂದ ಸಂತಸಗೊಂಡ ಹಾವು ಇಬ್ಬರಿಗೂ ಮರುಜೀವ ನೀಡಿ, ಅವರಿಗೆ ಆಶೀರ್ವದಿಸಿ ಅಲ್ಲಿಂದ ಹೊರಟು ಹೋಗುತ್ತದೆ. ನಂತರ ಮೂವರೂ ಅರಮನೆಗೆ ಹಿಂದಿರುಗಿ ಅನ್ಯೋನ್ಯವಾಗಿ ಬದುಕುತ್ತಾರೆ.
| ವೈಭವಿ ಎಚ್.ಎಸ್ 4ನೇ ತರಗತಿ, ನಂದನ ಎಜುಕೇಷನಲ್ ಟ್ರಸ್ಟ್, ಶಿವಮೊಗ್ಗ