

ಒಂದು ಮನೆಯಲ್ಲಿ ಉದ್ಯೋಗಸ್ಥ ಮಹಿಳೆ ಎಂದಿನಂತೆ ಕೆಲಸಕ್ಕೆ ಹೊರಟಿದ್ದಳು. ಹೊರಡುವ ಮುನ್ನ, ಮನೆಯ ಕಪಾಟಿಗೆ ಬೀಗ ಜಡಿದು ಕೀಲಿ ಕೈಯ್ಯನ್ನು ಪರ್ಸಿನೊಳಗೆ ಹಾಕಿಕೊಂಡಳು. ಅಂತೆಯೇ ಮನೆಯ ಕೆಲಸದಾಕೆಗೆ ಮಗುವನ್ನು ಹುಷಾರಾಗಿ ನೋಡಿಕೋ ಎಂದು ಹೇಳಿ ಹೊರಡುವಷ್ಟರಲ್ಲಿ, ಇದೆಲ್ಲವನ್ನು ನೋಡುತ್ತಿದ್ದ ಮಗು ಅಮ್ಮನನ್ನು ಕೇಳಿತು: ‘ಅಮ್ಮಾ ಮನೆಯ ಕಪಾಟಿನ ಚಾವಿಯನ್ನು ಯಾಕೆ ಕೆಲಸದವಳ ಕೈಯ್ಯಲ್ಲಿ ಕೊಡುತ್ತಿಲ್ಲ?’ ಉತ್ತರವಾಗಿ ಅಮ್ಮ ಹೇಳಿದಳು. ಅದನ್ನೆಲ್ಲಾ ಅವಳ ಕೈಗೆ ಹೇಗೆ ಕೊಡೋದು ಮಗು? ಏಕೆ ಕೊಡಬಾರದು ಎಂದು ಮಗು ಮರು ಪ್ರಶ್ನಿಸಲು ಆಕೆ ಮಗುವನ್ನು ಗುಟ್ಟಾಗಿ ಕರೆದು ಕಿವಿಯೊಳಗೆ ಹೇಳಿದಳು: ‘ಅದರ ಒಳಗೆ ಬೆಲೆ ಬಾಳುವ
ಚಿನ್ನಾಭರಣ ಹಣ ಎಲ್ಲಾ ಇದೆ. ಅದನ್ನೆಲ್ಲಾ ಈಕೆಯ ಕೈಗೆ ಹೇಗೆ ಕೊಡಲು ಸಾಧ್ಯ? ಒಂದು ವೇಳೆ ಅವನ್ನೆಲ್ಲಾ ಎತ್ಕೊಂಡು ಆಕೆ ಮನೆಯಿಂದ ಓಡಿ ಹೋಗಿಬಿಟ್ಟರೆ? ಇವನ್ನೆಲ್ಲಾ ಅಷ್ಟೊಂದು ಪರಿಚಯವಿಲ್ಲದ ಈ ಕೆಲಸದವಳ ಕೈಯ್ಯಲ್ಲಿ ಕೊಡಬಾರದು’. ಇದನ್ನು ಕೇಳಿದ ಮಗು ಅಮ್ಮನನ್ನು ಪ್ರಶ್ನಿಸಿತು. ‘ಹಾಗಾದರೆ ಯಾಕೆ ಅಮ್ಮ, ನನ್ನನ್ನು ಮಾತ್ರ ಅವಳ ಕೈಯ್ಯಲ್ಲಿ ಕೊಟ್ಟು ದಿನವಿಡೀ ಬಿಟ್ಟು ಹೋಗ್ತೀಯಾ?’ ಮಗುವಿನ ಈ ಮಾತಿಗೆ ಅಮ್ಮನ ಬಳಿ ಉತ್ತರವಿಲ್ಲವಾಗಿತ್ತು.
ಹೌದು, ಮುದ್ದು ಮಕ್ಕಳಿಗೆ ಬೇಕಾದುದು ಬರೇ ಸೌಕರ್ಯ ಸೌಲಭ್ಯಗಳಲ್ಲ; ಸಂಪತ್ತು ಸವಲತ್ತುಗಳಲ್ಲ; ಅಮ್ಮನ ಮಮತೆಯ ಮಡಿಲು ಕೂಡ. ಮಕ್ಕಳಿಗೆ ನಾವು ಎಲ್ಲವನ್ನೂ ಕೊಡುತ್ತೇವೆ. ಪ್ರೀತಿ, ಮಮತೆ, ವಾತ್ಸಲ್ಯ ಮತ್ತು ನಮ್ಮ ಸಮಯದ ಹೊರತಾಗಿ! ಮಕ್ಕಳ ಮೇಲೆ ಹಣವನ್ನು ಖರ್ಚು ಮಾಡುವುದಕ್ಕಿಂತಲೂ ಅವರ ಜೊತೆ ಸಮಯವನ್ನು ಕಳೆಯುವುದೇ ಮೇಲು ಹಾಗೂ ಅವಶ್ಯಕ. ಮಗು ಹುಟ್ಟಿದ ತಕ್ಷಣ ಅಮ್ಮನ ಜೊತೆಗಿದ್ದ ಅದರ ಕರುಳ ಬಳ್ಳಿಯನ್ನು ಕತ್ತರಿಸುತ್ತಾರೆ. ಮಗುವಿಗೆ ಸ್ವಾತಂತ್ರ್ಯ ನೀಡಲು! ಆದರೆ ಅದು ಅಮ್ಮನಿಗೆ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಅಲ್ಲ! ಕಾರಣ ಹೆತ್ತವರ ಮತ್ತು ಮಕ್ಕಳ ಸಂಬಂಧವೆಂದರೆ ಅದು
ಬರಿಯ ಕೊರಳ ಸಂಬಂಧವಲ್ಲ: ಯಾರಿಂದಲೂ ಕಡಿದು ಹಾಕಲು ಸಾಧ್ಯವಾಗದ ಕರುಳ ಸಂಬಂಧ. ಹೊತ್ತು ಹೆತ್ತು ಸಾಕಿ ಸಲಹಿದ ಅಮ್ಮನಿಂದ ದೂರವಾದಾಗ ಮಕ್ಕಳು ಅನಾಥರಾಗುತ್ತಾರೆ.
ಕಾರಣ ಯಾರೂ ಏನೂ ಆಗಬಹುದು, ಎಷ್ಟೂ ಹತ್ತಿರವಾಗಬಹುದು. ಆದರೆ ಅಮ್ಮನಂತೆ ಯಾರು ಆದಾರು? ನಿರ್ಮಲ ನಿಷ್ಕಳಂಕ ನಿಷ್ಕಾಮ ಪ್ರೀತಿಯನ್ನು ಯಾರು ಕೊಟ್ಟಾರು?.
ಈ ನಿಜವನ್ನೇ ಸಾರುವ ಜಾನಪದ ಹಾಡೊಂದು ಹೀಗಿದೆ. ‘ತೊಟ್ಟಿಲೊಳು ಆಡುತಿಹ ನನಕಂದ, ಬೆಟ್ಟೇಕೆ ಚೀಪುತಿಹೆ? ಹೊಟ್ಟೆ ತುಂಬುವುದೇ ಅದರಿಂದ! ಬಳಿಬಾರೋ ನನಕಂದ. ಮೊಲೆಹಾಲುಣಿಸುವೆ ಮನತುಂಬ, ಅದುವೇ ನನಗಾನಂದ’. ಅದಕ್ಕೇ ಮಗು ಕೂಡ ಹೇಳುತ್ತಿರುತ್ತದೆ. ಗುದ್ದು ಕೊಟ್ಟರು ಪರವಾಗಿಲ್ಲ, ಮುದ್ದು ಮಾಡುವ ಅಮ್ಮನಿರಬೇಕು.
ಒಮ್ಮೆ ಒಂದು ತಾಯಿ ಮತ್ತು ಮಗು ಕಿರಿದಾದ ಸೇತುವೆಯನ್ನು ದಾಟುತ್ತಿದ್ದರು. ತಾಯಿ ಮಗುವಿಗೆ ಹೇಳಿದಳು: ‘ಮಗೂ, ಕೆಳಗೆ ಬಿದ್ದು ಹೋಗುವ ಭಯ ಇದೆ. ನೀನು ನನ್ನ ಕೈಯ್ಯನ್ನು ಗಟ್ಟಿಯಾಗಿ ಹಿಡಿದುಕೋ’. ಆಗ ಮಗ
ಹೇಳಿದ : ‘ಇಲ್ಲ ಅಮ್ಮ ನೀನೇ ನನ್ನ ಕೈಯ್ಯನ್ನು ಗಟ್ಟಿಯಾಗಿ ಹಿಡಿದುಕೋ?’ ‘ಯಾಕೆ? ಇವೆರಡರಲ್ಲಿ ಏನು ವ್ಯತ್ಯಾಸವಿದೆ?’ ಎಂದು ಅಮ್ಮ ಪ್ರಶ್ನಿಸಲು ಮಗ ಉತ್ತರಿಸಿದ: ‘ತುಂಬಾ ವ್ಯತ್ಯಾಸವಿದೆಯಮ್ಮಾ, ನಾನು ನಿನ್ನ ಕೈ ಹಿಡಿದುಕೊಂಡು ನಡೆಯುವಾಗ ಒಂದು ವೇಳೆ ಜಾರಿ ಬಿದ್ದು ನಮ್ಮಿಬ್ಬರ ಜೀವಕ್ಕೇ ಆಪತ್ತು ಬಂದರೆ, ನಾನು ನಿನ್ನ ಕೈಯ್ಯನ್ನು ಬಿಟ್ಟು ನನ್ನನ್ನು ರಕ್ಷಿಸಿಕೊಳ್ಳಬಹುದು. ಆದರೆ, ನೀನು ಮಾತ್ರ ನನ್ನ ಕೈಯ್ಯನ್ನು ಬಿಡಲಾರೆ ಎಂಬ ನಂಬಿಕೆ ನನಗಿದೆ’.
ಇದು ಪ್ರಶ್ನಾತೀತವಾದ ಅಮ್ಮನ ಪ್ರೀತಿಯನ್ನು ಸಾರಿ ಹೇಳುತ್ತದೆ. ಇಂತಹ ಪ್ರೀತಿಯಿಂದ ಮಕ್ಕಳು ವಂಚಿತರಾಗಬಾರದು. ಇಷ್ಟಕ್ಕೂ ಅಮ್ಮ ಮಕ್ಕಳ ಪಾಲನೆ, ಪೋಷಣೆ, ರಕ್ಷಣೆಯನ್ನು ಮಾಡುತ್ತಿರುತ್ತಾಳೆ. ಮಗು ಹಸುಳೆಯಾಗಿದ್ದಾಗ ಅದರ ಮಲಮೂತ್ರಗಳನ್ನು ಸ್ವಚ್ಛಗೊಳಿಸುತ್ತಾಳೆ. ಬೆಳೆಯುತ್ತಿದ್ದಂತೆ ಓಡುವಾಗ, ಆಟ ಆಡುವಾಗ ಬಿದ್ದು ಗಾಯ ಮಾಡಿಕೊಳ್ಳುವ ಮಗುವನ್ನು ಅಪಾಯಗಳಿಂದ ರಕ್ಷಿಸಿ ಪಾಲಿಸುತ್ತಾಳೆ. ಮತ್ತೆ ಬಾಲ್ಯದಲ್ಲಿ ಮಗುವಿಗೆ ಶಿಕ್ಷಣ ಸಂಸ್ಕಾರವನ್ನು ಕೊಟ್ಟು ಮೌಲ್ಯಗಳನ್ನು ತಿಳಿಸುವ ಕರ್ತವ್ಯ ನಿಭಾಯಿಸುತ್ತಾಳೆ. ಮುಂದೆ ಆರ್ಥಿಕ ಸ್ಥಿತಿಗತಿಯನ್ನೂ ನಿಭಾಯಿಸುವಲ್ಲೂ ಸೂಕ್ತ ಮಾರ್ಗದರ್ಶನ ಮಾಡುತ್ತಾ ವೈಶ್ಯ ಧರ್ಮವನ್ನು ಪರಿಪಾಲಿಸುತ್ತಾಳೆ. ಒಟ್ಟಿನಲ್ಲಿ ಅಮ್ಮ ಮಾಡದ ಕೆಲಸಗಳೇ ಇಲ್ಲ. ಆದುದರಿಂದಲೇ ಆಕೆ ಪೂಜನೀಯ ಪೂರ್ಣವತಾರಿ.