

ಒಂದು ಮಧ್ಯಾಹ್ನ ಪುಟ್ಟ ಸೋದರ ತುಂಬಾ ಅಳುತ್ತಿದ್ದ ಕಾರಣ ಅವನಿಗೆ ಬಿಸ್ಕತ್ ತರಲು ರೇಷ್ಮಾ ರಸ್ತೆಯ ಬದಿಯಲ್ಲಿದ್ದ ಅಂಗಡಿಗೆ ನಡೆದುಕೊಂಡು ಹೋಗುತ್ತಿದ್ದಳು. ಆಗ ಅವಳ ಎದುರಿನಿಂದ ಬಂದ ಕಾರೊಂದು ಅವಳ ಪಕ್ಕದಲ್ಲಿಯೇ ಬಂದು ನಿಂತಿತು. ಕಾರಿನಿಂದ ಇಳಿದ ಮಹಿಳೆ ರೇಷ್ಮಾಳನ್ನು ನಿಲ್ಲಿಸಿ ಯಾರದೋ ಅಡ್ರೆಸ್ ಕೇಳತೊಡಗಿದಳು. ರೇಷ್ಮಾ ಉತ್ತರಿಸಲು ಹೊರಟಾಗ ಅದೇ ಕಾರಿನಿಂದಿಳಿದ ಇಬ್ಬರು ದಾಂಡಿಗರು ಅವಳ ಬಾಯಿಯನ್ನು ಮುಚ್ಚಿ ಅನಾಮತ್ತಾಗಿ ಅವಳನ್ನು ಕಾರಿಗೆ ಎತ್ತಿ ಹಾಕಿಕೊಂಡರು. ಕಾರಿನಲ್ಲಿ ಅವಳ ಕೈಕಟ್ಟಿ ಬಾಯಿಗೆ ಬಟ್ಟೆ ತುರುಕಿದರು. ಕಾರು ಎಲ್ಲಿಗೋ ಹೊರಟುಹೋಯಿತು.
ಇತ್ತ ಬಹಳ ಹೊತ್ತಾದರೂ ರೇಷ್ಮಾ ಬಾರದಿದ್ದಾಗ ವಿಮಲಾಳ ಮಕ್ಕಳು ಜೋರಾಗಿ ಅಳತೊಡಗಿದರು. ಆಗ ಅವಳ ಗುಡಿಸಿಲಿನ ಪಕ್ಕದವರು ಬಂದರು. ರೇಷ್ಮಾ ಮನೆಯಲ್ಲಿಲ್ಲದಿರುವುದನ್ನು ಕಂಡು ಆಶ್ಚರ್ಯಗೊಂಡು ವಿಮಲಾಗೆ ಸುದ್ದಿ ಮುಟ್ಟಿಸಿದರು. ಕೊಳೆಗೇರಿಯ ಲೀಡರ್ ಒಬ್ಬನ ನೆರವಿನಿಂದ ಸ್ಥಳೀಯ ಪೊಲೀಸ್ ಠಾಣೆಗೆ ಹೋದ ವಿಮಲಾ, ರೇಷ್ಮಾ ಕಾಣೆಯಾಗಿರುವ ಬಗ್ಗೆ ದೂರಿತ್ತಳು. ಯಾರ ಜತೆಯೋ ಓಡಿಹೋಗಿರಬಹುದು, ಅವಳಿಗೆ ಫೋನ್ ಮಾಡಿ ನೋಡಿದಿಯಾ? ಎಂದು ಪೊಲೀಸರು ಕೇಳಿದಾಗ ರೇಷ್ಮಾಳ ಬಳಿ ಫೋನ್ ಇಲ್ಲದಿರುವುದಾಗಿ ವಿಮಲಾ ತಿಳಿಸಿದಳು. ಎರಡು ದಿನ ಕಾದು ಅಲ್ಲಿಯವರೆಗೂ ಬರದಿದ್ದರೆ ಠಾಣೆಗೆ ಮತ್ತೆ ಬರಲು ಹೇಳಿದ ಪೊಲೀಸರು ವಿಮಲಾಳನ್ನು ಸಾಗಹಾಕಿದರು.
ಇತ್ತ ರೇಷ್ಮಾಳನ್ನು ಅಪಹರಣ ಮಾಡಿದ್ದವರು ಅವಳನ್ನು ನಗರದಿಂದ 35 ಕಿ.ಮೀ ದೂರದಲ್ಲಿದ್ದ ತೋಟದ ಮನೆಯೊಂದಕ್ಕೆ ಕರೆದುಕೊಂಡು ಹೋದರು. ಆ ಮನೆ ರವೂಫ್ ಎನ್ನುವವನದಾಗಿತ್ತು. ಅಂದಾಜು 40 ವರ್ಷ ವಯಸ್ಸಿನ ಆತ ಮನೆಯಲ್ಲಿ ತನ್ನ ಪತ್ನಿ ಸಲ್ಮಾ ಹಾಗೂ ಸೋದರನೊಡನೆ ವಾಸಿಸುತ್ತಿದ್ದ. ಆ ರಾತ್ರಿ ಆತ ರೇಷ್ಮಾಳನ್ನು ಪದೇಪದೆ ರೇಪ್ ಮಾಡಿದ. ಮಾರನೆಯ ದಿನ ಅವಳನ್ನು ಶುಶ್ರೂ›ಷೆ ಮಾಡಿದ ಸಲ್ಮಾ, ‘ನಿನ್ನನ್ನು ನಾವು ಅಪಹರಿಸಿರುವುದು ನಿನ್ನ ಲಾಭಕ್ಕಾಗಿಯೇ ಎಂದು ತಿಳಿ. ಇನ್ನು ಕೆಲವೇ ಸಮಯದಲ್ಲಿ ನೀನು ಮದುವೆಯನ್ನು ಆಗುವವಳು. ಆಗ ನಿನ್ನ ಗಂಡ ನಿನಗೇನು ಮಾಡುತ್ತಾನೆ ಎನ್ನುವುದನ್ನು ರವೂಫ್ ಮಾಡಿ ತೋರಿಸಿದ ಅಷ್ಟೇ. ನಾವು ಹೇಳಿದಂತೆ ನೀನು ನಡೆದುಕೊಂಡರೆ ನೀನು ಲಕ್ಷಾನುಗಟ್ಟಲೇ ಹಣವನ್ನು ಸಂಪಾದಿಸಿ ನಮ್ಮಂತೆಯೇ ಶ್ರೀಮಂತಳಾಗುವೆ’ ಎಂದಳು. ಆ ಬಾಲಕಿಗೆ ನಡೆಯುತ್ತಿರುವುದೇನು ಎನ್ನುವುದೇ ತಿಳಿಯಲಿಲ್ಲ. ತಾನು ಎಲ್ಲಿಗೆ ಬಂದಿರುವೆ ಎನ್ನುವುದೂ ತಿಳಿದಿರಲಿಲ್ಲ. ತನ್ನ ಚಿಕ್ಕಮ್ಮನನ್ನು ನೆನೆಸಿಕೊಂಡು ಕಣ್ಣೀರು ಹಾಕತೊಡಗಿದಳು. ಆಗ ಅವಳನ್ನು ಸಮಾಧಾನ ಮಾಡಿದ ಸಲ್ಮಾ, ‘ಇನ್ನು ಮುಂದೆ ಇದೇ ನಿನ್ನ ಮನೆಯೆಂದು ತಿಳಿ. ಇಲ್ಲಿ ನಿನ್ನನ್ನು ರಾಣಿಯಂತೆ ನಾವು ನೋಡಿಕೊಳ್ಳುತ್ತೇವೆ, ಆದರೆ, ನೀನು ನಾವು ಹೇಳಿದಂತೆ ನಡೆಯಬೇಕಷ್ಟೇ’ ಎಂದು ಹೇಳಿ ರೇಷ್ಮಾಳಿಗೆ ಉತ್ತಮ ಬಟ್ಟೆಗಳನ್ನೂ ಆಭರಣಗಳನ್ನೂ ನೀಡಿದಳು. ಅವುಗಳನ್ನು ಧರಿಸಿದ ಆ ಬಾಲಕಿ ಸಂತಸಗೊಂಡಳು. ಅವಳಿಗೆ ದಿನವೂ ರುಚಿಕರ ಆಹಾರವನ್ನು ನೀಡುತ್ತಾ ಅವಳನ್ನು ಉತ್ತಮ ರೀತಿಯಲ್ಲಿ ಆ ದಂಪತಿ ಸಾಕತೊಡಗಿದರು. ಪತ್ನಿಯಾಗಿ ಗಂಡನೊಡನೆ ಹೇಗೆ ವರ್ತಿಸಬೇಕು ಎನ್ನುವ ಪಾಠವನ್ನು ಪ್ರತಿದಿನವೂ ಅವಳಿಗೆ ಕಲಿಸತೊಡಗಿದರು. ಹತ್ತು ದಿನಗಳ ನಂತರ ರೇಷ್ಮಾ ತನ್ನ ಚಿಕ್ಕಮ್ಮನನ್ನೇ ಮರೆತಳು.
ಏತನ್ಮಧ್ಯೆ ರೇಷ್ಮಾ ಮರಳಿ ಬಾರದ ಕಾರಣ ಆತಂಕಗೊಂಡ ವಿಮಲಾ ಮತ್ತೆ ಪೊಲೀಸ್ ಠಾಣೆಗೆ ಹೋಗಿ ದೂರನ್ನು ಕೊಟ್ಟಳು. ಆಗಲೂ ಪೊಲೀಸರು ಹಾರಿಕೆಯ ಉತ್ತರವನ್ನೇ ಕೊಟ್ಟರೇ ಹೊರತು ಅವಳ ದೂರನ್ನು ದಾಖಲಿಸಲಿಲ್ಲ. ಇನ್ನೆರಡು ಬಾರಿ ಠಾಣೆಗೆ ಎಡತಾಕಿದ ವಿಮಲಾ ರೇಷ್ಮಾ ಯಾವುದೋ ಯುವಕನ ಜತೆ ಓಡಿಹೋಗಿದ್ದು ಮನೆಗೆ ಬರುವುದಿಲ್ಲವೆಂದು ರ್ತಸಿ ಸುಮ್ಮನಾದಳು.
ಎರಡು ತಿಂಗಳ ನಂತರ ಅವಳಿಗೆ ಒಬ್ಬ ಉತ್ತಮ ಗಂಡನನ್ನು ನೋಡಿರುವುದಾಗಿಯೂ ಶೀಘ್ರದಲ್ಲಿಯೇ ಮದುವೆ ಮಾಡಿಸುವುದಾಗಿ ರೇಷ್ಮಾಳಿಗೆ ಸಲ್ಮಾ ಹೇಳಿದಳು. ರೇಷ್ಮಾಳನ್ನು ಮಾರನೆಯ ದಿನ ವಿಮಾನದಲ್ಲಿ ಆ ದಂಪತಿ ಬೇರೊಂದು ಊರಿಗೆ ಕರೆದುಕೊಂಡು ಯಾರದೋ ಬಂಗಲೆಗೆ ಹೋದರು. ಅಲ್ಲೊಂದು ಶ್ರೀಮಂತ ಕುಟುಂಬ ವಾಸಿಸುತ್ತಿದ್ದು ಅಲ್ಲಿದ್ದ ಅಂದಾಜು ನಲವತ್ತು ವರ್ಷದವನಾಗಿದ್ದ ವರನೊಬ್ಬನಿಗೆ ರೇಷ್ಮಾಳನ್ನು ತೋರಿಸಿದರು. ಅವರಿಗೆ ರೇಷ್ಮಾ ಅಪ್ರಾಪ್ತ ಬಾಲಕಿಯೆಂದು ತಿಳಿಸಿ ಅವಳನ್ನು ಲಗ್ನವಾಗುವುದು ಕಾನೂನು ರೀತ್ಯಾ ಅಪರಾಧವಾಗುತ್ತದೆ, ಆದರೂ ತಾವು ಅವಳನ್ನು ಮದುವೆ ಮಾಡಿಕೊಡಲು ಬಂದಿದ್ದೇವೆ ಎಂದರು. ಆ ವರ ಮದುವೆಯಾಗಲು ಒಪ್ಪಿದ. ಅವನ ಮನೆಯವರಿಂದ ರವೂಫ್ ವಧು ಶುಲ್ಕವಾಗಿ ಮೂರು ಲಕ್ಷ ರೂ.ಗಳನ್ನು ಪಡೆದ. ಸ್ಥಳದಲ್ಲಿಯೇ ನಿಶ್ಚಿತಾರ್ಥವನ್ನು ಮಾಡಿ ಎರಡೇ ದಿನಗಳ ನಂತರ ಮದುವೆಯನ್ನು ನಿಶ್ಚಯ ಮಾಡಲಾಯಿತು.
ತಾವು ಇಳಿದುಕೊಂಡಿದ್ದ ಹೋಟೆಲ್ಲಿಗೆ ಎಲ್ಲರೂ ವಾಪಸಾದಾಗ ರೇಷ್ಮಾ ಸಲ್ಮಾಳಿಗೆ ತನಗೆ ನಿಶ್ಚಯವಾಗಿದ್ದ ವರ ತನಗೆ ಇಷ್ಟವಾಗಲಿಲ್ಲ ಎಂದಳು. ಆಗ ಸಲ್ಮಾ ‘ಏನು ಚಿಂತಿಸಬೇಡ ಮಗಳೇ, ಲಗ್ನವಾದ ರಾತ್ರಿ ನಿನ್ನ ಗಂಡನಿಗೆ ನಾನು ಕೊಡುವ ಔಷಧಿಯನ್ನು ಹಾಲಿನ ಜತೆ ಬೆರೆಸಿ ಕುಡಿಸು, ಆತ ನಿದ್ರೆಗೆ ಜಾರುತ್ತಾನೆ. ಆಗ ಅವನ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕದ್ದು ಅಲ್ಲಿಂದ ಹೊರಗೆ ಬಾ. ನಾವು ನಿನಗಾಗಿ ಕಾಯುತ್ತಿರುತ್ತೇವೆ, ಆನಂತರ ಇಲ್ಲಿಂದ ಹೊರಟುಬಿಡೋಣ’ ಎಂದಳು. ತನ್ನ ಲಗ್ನದ ಮೊದಲ ರಾತ್ರಿ ಸಲ್ಮಾ ತನಗೆ ಸೂಚಿಸಿದಂತೆಯೇ ಮಾಡಿದ ರೇಷ್ಮಾ, ತನ್ನ ಗಂಡನ ಮನೆಯವರು ಕೊಟ್ಟ ಆಭರಣಗಳು, ಗಂಡನ ಚೈನ್, ಉಂಗುರ ಮುಂತಾದುವನ್ನು ಕದ್ದು ಮಧ್ಯರಾತ್ರಿಯ ನಂತರ ಹೊರಗೆ ಬಂದಳು. ಸಲ್ಮಾ ಮತ್ತು ರವೂಫ್ ತಾವು ತಂದಿದ್ದ ಕಾರಿನಲ್ಲಿ ಅವಳನ್ನು ತಮ್ಮ ತೋಟದ ಮನೆಗೆ ಕರೆತಂದರು. ರೇಷ್ಮಾಳ ಕೃತ್ಯದ ಬಗ್ಗೆ ವರನ ಮನೆಯವರು ದೂರನ್ನೇ ಕೊಡಲಿಲ್ಲ. ಏಕೆಂದರೆ ಅವರಿಗೆ ತಾವೇ ಅರೆಸ್ಟ್ ಆಗುವ ಭಯವಿತ್ತು. ಇದಲ್ಲದೆ, ರವೂಫ್ ತನ್ನ ಹೆಸರನ್ನು ಮೋಹನ್ಲಾಲ್ ಎಂದು ತಿಳಿಸಿ ಸುಳ್ಳು ವಿಳಾಸವನ್ನು ಕೊಟ್ಟಿದ್ದ.
ಇದಾದ ಒಂದು ತಿಂಗಳ ನಂತರ ರವೂಫ್ ದಂಪತಿ ರೇಷ್ಮಾಳನ್ನು ಇನ್ನೊಂದು ರಾಜ್ಯಕ್ಕೆ ಕರೆದುಕೊಂಡು ಹೋದರು. ಅಲ್ಲಿಯೂ ಈ ಹಿಂದೆ ಮಾಡಿದ ರೀತಿಯೇ ರೇಷ್ಮಾಳ ಲಗ್ನ ಮಾಡಿ ಸಾಕಷ್ಟು ಹಣ ಸಂಪಾದಿಸಿದರು. ಈ ಬಾರಿ ರೇಷ್ಮಾ ಮೂರ್ನಾಲ್ಕು ದಿನ ತನ್ನ ಗಂಡನ ಮನೆಯಲ್ಲಿದ್ದು ಭಾರಿ ಪ್ರಮಾಣದ ಹಣವನ್ನು ಕದ್ದು ತಂದಳು. ಇದೇ ರೀತಿಯೇ ರವೂಫ್, ಮುಂದಿನ ಎರಡು ವರ್ಷಗಳಲ್ಲಿ ರೇಷ್ಮಾಳ ಮದುವೆಯನ್ನು ದೇಶದ ನಾನಾ ರಾಜ್ಯಗಳಲ್ಲಿ ಆರು ಇತರ ವರರೊಂದಿಗೆ ಮಾಡಿಕೊಟ್ಟ.
ಏತನ್ಮಧ್ಯೆ ಚಿಕ್ಕ ವಯಸ್ಸಿನ ವಧುಗಳಿಗಾಗಿ ಹೆಚ್ಚಿನ ಬೇಡಿಕೆ ಬರುತ್ತಿದ್ದ ಕಾರಣ ರವೂಫ್ ರೇಷ್ಮಾಳನ್ನು ನಿವೃತ್ತಿಗೊಳಿಸಬೇಕೆಂದು ತೀರ್ವನಿಸಿದಾಗ ಆತ ರೇಷ್ಮಾಳನ್ನು ಕರೆದು, ‘ಇನ್ನು ಮುಂದೆ ನಿನ್ನ ಸುಳ್ಳು ಲಗ್ನಗಳನ್ನು ಮಾಡುವುದಿಲ್ಲ. ಆದರೆ, ನಾನು ಇಲ್ಲಿಗೆ ಕರೆತರುವ ಬಾಲಕಿಯರಿಗೆ ಯಾವ ರೀತಿ ವಧುವಿನಂತೆ ವರ್ತಿಸಬೇಕೆನ್ನುವ ತರಬೇತಿಯನ್ನು ನೀನು ಕೊಡಬೇಕು. ನಿನಗೆ ಕೆಲವೇ ತಿಂಗಳ ನಂತರ 18 ವರ್ಷವಾಗುವುದರಿಂದ ನಿನ್ನನ್ನು ಸೂಕ್ತ ವರನೊಂದಿಗೆ ಮದುವೆ ಮಾಡಿ ಇಲ್ಲಿಂದ ಕಳಿಸಿಕೊಡುತ್ತೇನೆ, ಇದು ನಿನಗಿಷ್ಟವಿಲ್ಲದಿದ್ದರೆ ನಿನ್ನ ಪಾಲಿನ ಹಣ ಕೊಡುತ್ತೇನೆ, ನೀನು ಎಲ್ಲಿಗೆ ಬೇಕಾದರೂ ಹೋಗಬಹುದು. ಆಯ್ಕೆ ನಿನ್ನದು’ ಎಂದ. ‘ಸದ್ಯಕ್ಕೆ ನಾನು ಇಲ್ಲಿಯೇ ಇರುವೆ’ ಎಂದಳು ರೇಷ್ಮಾ.
ಕೆಲವು ದಿನಗಳ ನಂತರ ರವೂಫ್ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿಕೊಂಡು ಬಂದು ತನ್ನ ತೋಟದ ಮನೆಯಲ್ಲಿಟ್ಟು ಅವರಿಗಾಗಿ ವರರನ್ನು ಹುಡುಕತೊಡಗಿದ್ದ. ಅವರಿಬ್ಬರಿಗೂ ರೇಷ್ಮಾಳೇ ಸಲ್ಮಾಳ ಜತೆ ತರಬೇತಿ ನೀಡುತ್ತಿದ್ದಳು. ಅವರಲ್ಲೊಬ್ಬ ಬಾಲಕಿ ನೀತು ಉತ್ತಮ ಮನೆತನಕ್ಕೆ ಸೇರಿದವಳಾಗಿದ್ದಳು. ನೀತುಳ ತಂದೆ ಅವಳ ಅಪಹರಣದ ಬಗ್ಗೆ ದೂರನ್ನು ನೀಡಿ ಅವಳನ್ನು ಹುಡುಕಲು ಭಾರಿ ಒತ್ತಡವನ್ನು ಹೇರಿದ್ದರು. ಒಂದು ದಿನ ನೀತು ಸಲ್ಮಾಳ ಸೆಲ್ ಫೋನ್ ಅಪಹರಿಸಿ ಅದರ ಮೂಲಕ ತನ್ನ ತಂದೆಗೆ ಕರೆಮಾಡಿ ತಾನಿರುವ ತಾಣದ ಬಗ್ಗೆ ಮಾಹಿತಿಯಿತ್ತಳು. ಸೆಲ್ ಫೋನಿನ ಲೊಕೇಷನ್ ಸರ್ಚ್ ಮಾಡಿದ ಪೊಲೀಸರು ಕೆಲವೇ ಗಂಟೆಗಳ ನಂತರ ರವೂಫ್ನ ತೋಟದ ಮನೆಗೆ ದಾಳಿ ಮಾಡಿ ರೇಷ್ಮಾ ಸೇರಿದಂತೆ ಇತರ ಬಾಲಕಿಯರನ್ನು ರಕ್ಷಿಸಿದರು. ರವೂಫ್, ಸಲ್ಮಾ ಮತ್ತೊಬ್ಬನನ್ನು ಬಂಧಿಸಿದರು. ನಂತರ ರೇಷ್ಮಾಳ ಅಪಹರಣದ ಬಗ್ಗೆಯೂ ಇನ್ನೊಂದು ಪ್ರಕರಣವನ್ನು ದಾಖಲಿಸಿ ಮೂರೂ ಕೇಸುಗಳಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದರು. ನ್ಯಾಯಾಲಯವು ಮಕ್ಕಳ ಕಳ್ಳಸಾಗಾಣಿಕೆ ಮಾಡಿದ ಆರೋಪದ ಮೇಲೆ ಎಲ್ಲ ಆರೋಪಿಗಳಿಗೂ ಏಳು ವರ್ಷಗಳ ಕಠಿಣ ಜೈಲು ವಾಸ ನೀಡಿತು. ಮಾನವ ಕಳ್ಳಸಾಗಣೆ ಮಾನವತೆಗೊಂದು ಕಳಂಕವಾಗಿದ್ದು ಅದರ ಫಲವಾಗಿಯೇ ವ್ಯವಸ್ಥಿತ ಅಪರಾಧಗಳಾಗಿ ಹಿಂಸಾಕೃತ್ಯಗಳು ಹೆಚ್ಚುತ್ತವೆ. ಇಂತಹ ಸಾಗಣೆ ನೂತನ ರೀತಿಯ ಗುಲಾಮಗಿರಿಯಾಗಿದೆ ಎನ್ನುತ್ತಾರೆ ಬರಾಕ್ ಒಬಾಮ. ಇಂತಹ ಹೀನ ಅಪರಾಧದ ಬಗ್ಗೆ ನಾವೆಲ್ಲರೂ ಎಚ್ಚರಿಕೆಯಿಂದ ಇರಲೇಬೇಕಾಗಿದೆ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)