

ನ್ಯಾಯಾಧೀಶತನ ಎಂದರೆ ಮತ್ತೊಬ್ಬರ ಬಗ್ಗೆ ನಮ್ಮ ದೃಷ್ಟಿಕೋನ ವ್ಯಕ್ತಿಯ ಜತೆಗೆ ಇರುವ ನಮ್ಮ ಬಾಂಧವ್ಯ ಮತ್ತು ನಾವು ಪಡೆದ ಮಾಹಿತಿ ನಮ್ಮ ಅನುಭವಗಳ ಮೇಲೆ ಇನ್ನೊಬ್ಬರು ಸರಿ ಅಥವಾ ತಪ್ಪು ಎಂದು ನಿರ್ಧಾರ ಮಾಡಿ ಬಿಡುತ್ತೇವೆ. ಒಮ್ಮೆ ನಿರ್ಧಾರ ಮಾಡಿದ ಮೇಲೆ ಮಾತಿನಲ್ಲಿ ನಡವಳಿಕೆಯಲ್ಲಿ ಮುಂದಿನ ಎಲ್ಲ ಯೋಜನೆಗಳಲ್ಲಿ ಈ ರೀತಿಯ ತೀರ್ಮಾನ ಅಥವಾ ತೀರ್ಪು ಅನೇಕ ರೀತಿಯಲ್ಲಿ ಹೊರ ಹೊಮ್ಮುತ್ತಲೇ ಇರುತ್ತದೆ.
ಇನ್ನೊಬ್ಬರ ಬಗ್ಗೆ ನಮ್ಮೊಳಗಿನ ನಿಲುವಿನಲ್ಲಿ ಒಳ್ಳೆಯವರು,- ಕೆಟ್ಟವರು, ಜಾಣ- ದಡ್ಡ...., ಇದೆಲ್ಲವೂ ನಮ್ಮ ಮನಸ್ಸಿನಲ್ಲಿ ಹೊರಹೊಮ್ಮಿದ ತೀಪುಗಳೇ ಆಗಿದೆ. ಅದೇ ವ್ಯಕ್ತಿಯ ಬಗ್ಗೆ ಎಲ್ಲರ ತೀರ್ಪು ಅದೇ ಆಗಿರಬೇಕು ಎಂದೇನೂ ಇಲ್ಲ.
ವಕೀಲಿತನ ಎಂದರೆ ನಮ್ಮ ಬಗ್ಗೆ, ನಮ್ಮ ಮಿತ್ರರ ಬಗ್ಗೆ, ಶತ್ರುಗಳ ಬಗ್ಗೆ ನಮ್ಮೊಳಗೆ ಒಂದು ವಿಚಾರ ಮಂಡನೆ ನಡೆಯುತ್ತಲೇ ಇರುತ್ತದೆ. ಅದರಲ್ಲಿಯೂ ಮನಸ್ಸಿನ ಒಳಗಿನ ತೀರ್ಪಗಳಿಗೆ ಅಡಿಪಾಯವೆಂದರೆ ತರ್ಕಬದ್ಧವಾಗಿ, ಅವರವರ ಸಾಮರ್ಥ್ಯಕ್ಕನುಗುಣವಾಗಿ ಒಂದು ವಾದಸರಣಿ ಅಚ್ಚೊತ್ತಿರುತ್ತದೆ. ಈ ಒಳಗಿನ ವಾದಸರಣಿಯಲ್ಲಿ ಒಂದೇ ರೀತಿಯಾದ ದೃಷ್ಟಿಕೋನ ಕಂಡುಬರುತ್ತದೆ.
ಹೆಚ್ಚಿನ ಸಂದರ್ಭದಲ್ಲಿ ವ್ಯಕ್ತಿ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಏಕಮುಖ ವಾದಸರಣಿ ಹೆಚ್ಚು. ಯಾರಾದರೂ ಎದುರಿಗೆ ಇರಲಿ ಬಿಡಲಿ ಮನಸ್ಸಿನಲ್ಲಿಯೇ ನಡೆಯುವ ಈ ವಾದ ಸರಣಿಗೆ ಹೆಚ್ಚಿನ ಪ್ರಾಮುಖ್ಯವಿದೆ. ಈ ವಾದ ಸರಣಿ ಹಾಗೂ ತೀರ್ಪಗಳು ಮನುಷ್ಯನ ವ್ಯಕ್ತಿತ್ವವನ್ನು ನಿರ್ವಿುಸುತ್ತದೆ.ಪ್ರತಿಯೊಬ್ಬ ವ್ಯಕ್ತಿಯು ಬದುಕಿನ ಬಗ್ಗೆ ಬೆಳೆಸಿಕೊಳ್ಳುವ ದೃಷ್ಟಿಕೋನಕ್ಕೆ ಇವೆ ಹಿನ್ನೆಲೆಯಾಗಿದೆ. ಇದು ಯಾವಾಗಲೂ ಸಕಾರಾತ್ಮಕವಾಗಿ ಇರಬೇಕೆಂದೇನೂ ಇಲ್ಲ. ಅವರವರ ಸಂದರ್ಭ, ಪರಿಸ್ಥಿತಿ,ಅನುಭವ, ಸ್ವಭಾವ, ಅಗತ್ಯಕ್ಕನುಗುಣವಾಗಿ ಇವುಗಳು ನಡೆಯುತ್ತಿರುತ್ತದೆ.
ಇದೆರಡೂ ಮನುಷ್ಯನ ಸಹಜತೆಗೆ ಹಾಗೂ ವಿಕಾಸಕ್ಕೆ ಎಷ್ಟೋ ಸಲ ಅಡ್ಡಿಪಡಿಸುತ್ತವೆೆ. ವರ್ಷಗಳು ಕಳೆದಂತೆ ಬಹಳಷ್ಟು ಜನಕ್ಕೆ ಇದರ ಹೊರತಾಗಿ ಜೀವನವನ್ನು ವಿಭಿನ್ನವಾಗಿ ನೋಡುವ ದೃಷ್ಟಿಕೋನ, ಕುತೂಹಲ, ಆಸಕ್ತಿ, ಉತ್ಸಾಹ, ಹೊಸತನ ಇತ್ಯಾದಿ ಕಲಿಯಲು ಅಗತ್ಯವಾದ ಸಲಕರಣೆಗಳು ಕುಂಠಿತಗೊಂಡು ಬಿಡುತ್ತದೆ. ಇಂತಹ ಸ್ವಭಾವವನ್ನು ಹೊಂದಿರುವ ಪೋಷಕರು, ಪಾಲಕರು, ಶಿಕ್ಷಕರು ಸಮಗ್ರ ಮಕ್ಕಳ ಬೆಳವಣಿಗೆಯಲ್ಲಿ ತೊಂದರೆಯನ್ನುಂಟು ಮಾಡುವ ಸಾಧ್ಯತೆ ತುಂಬಾ ಹೆಚ್ಚಾಗಿರುತ್ತದೆ. ಕೆಳಗಿನ ಕೆಲವು ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ನಿಮ್ಮ ಉತ್ತರ ಹೇಳಿಕೊಂಡು ನಂತರ ಲೇಖನ ಓದುವುದನ್ನು ಮುಂದುವರೆಸಿ.
1) ‘ತಂದೆ’ ಪದವನ್ನು ವಾಕ್ಯದಲ್ಲಿ ಬಳಸಿರಿ. 2) Nataraja / Nadaraja ಇವೆರಡರಲ್ಲಿ ಯಾವುದು ಸರಿ? 3)ಒಂದು + ಒಂದು ಎಷ್ಟು? 4) ದ್ರವ ರೂಪವನ್ನು ಬಿಸಿ ಮಾಡಿದಾಗ ಯಾವ ರೂಪಕ್ಕೆ ಪರಿವರ್ತನೆಗೊಳ್ಳುತ್ತದೆ. 5) ಬೆಳಕಿನ ಉದಯದ ಚಿತ್ರಣ ಬರೆಯಿರಿ. ಇಲ್ಲಿ ಆದಷ್ಟು ಸರಳವಾದ ಪ್ರಶ್ನೆಗಳನ್ನು ಮಾತ್ರ ಕೇಳಲಾಗಿದೆ ಇಂತಹ ನೂರಾರು ಸಾವಿರಾರು ಪ್ರಯೋಗಗಳು ಅಭ್ಯಾಸದಲ್ಲಿ ಈಗಾಗಲೇ ಇವೆ.
ಈ ಮೇಲಿನ ಪ್ರಶ್ನೆಗಳಿಗೆ ಮಕ್ಕಳು ಕೊಟ್ಟ ಉತ್ತರಗಳ ಉದಾಹರಣೆಗಳು ಹೀಗಿವೆ. ಇದೆಲ್ಲಾ ಶಿಕ್ಷಕರು ಪೋಷಕರು ಮಕ್ಕಳ ಸಮಸ್ಯೆಯನ್ನು ಹೇಳಿಕೊಳ್ಳುವಾಗ ಹಂಚಿಕೊಂಡಿರುವ ಸಂದರ್ಭಗಳಾಗಿವೆ.
1) ತಂದೆಯೆಂದರೆ ಅಪ್ಪ ಎಂದು ಅರ್ಥೈಸಿಕೊಂಡು ಕೆಲವು ಮಕ್ಕಳು ಉತ್ತರ ಬರೆದರೆ, ಇನ್ನೂ ಕೆಲವರು ತಾನೇನೂ ತಂದಿದ್ದೇನೆ ಎನ್ನುವ ಅರ್ಥದಲ್ಲಿ ಬರೆದಿರುತ್ತಾರೆ. ಶಿಕ್ಷಕರು ಏನು ಕೇಳಿದ್ದಾರೆ ಎನ್ನುವುದಕ್ಕಿಂತ ತಮಗೇನು ಅನ್ನಿಸುತ್ತದೆ ಎನ್ನುವುದರ ಬಗ್ಗೆ ಹೆಚ್ಚು ಪ್ರಾಮುಖ್ಯ ಇದೆ.
2) ಬೇರೆ ಬೇರೆ ಭಾಷೆಗಳ ಹಿನ್ನೆಲೆಯಿಂದ ಬರುವ ಮಕ್ಕಳಿಗೆ ಅವರ ಮಾತೃಭಾಷೆಗನುಗುಣವಾಗಿ ನಡರಾಜ ಎನ್ನುವುದು ಸರಿ ಎಂದು ಅನಿಸುತ್ತದೆ. ಸ-ಶ, ಸ-ಪ,ಲ-ಳ ಹೀಗೆ ಅಗಣಿತವಾಗಿ ಬರವಣಿಗೆ ಹಾಗೂ ಉಚ್ಛಾರಗಳಲ್ಲಿ ವೈವಿಧ್ಯ ಕಂಡುಬರುತ್ತದೆ.
3) ಒಂದು ನದಿ ಇನ್ನೊಂದು ನದಿಯ ಜತೆ ಸೇರಿದಾಗ ಒಂದೇ ಕಾಣುತ್ತದೆ. 1 + 1 ಗ್ಲಾಸ್ ನೀರನ್ನು ಪಾತ್ರೆಗೆ ಹಾಕಿದಾಗ ಅದು ಒಂದು ಆಗಿರುತ್ತದೆ.
4) ದೋಸೆ, ಇಡ್ಲಿ ಇತ್ಯಾದಿ ಅಡುಗೆ ಮಾಡುವುದನ್ನು ನೋಡುವ ಮಕ್ಕಳು ದ್ರವವನ್ನು ಬಿಸಿಮಾಡಿದಾಗ ಗಟ್ಟಿಯಾಗುತ್ತದೆ ಎಂದು ಗ್ರಹಿಸಬಹುದು.
5) ಸೂರ್ಯ ಒಂದು ನಕ್ಷತ್ರ. ಅಂತಹ ಕೋಟ್ಯಂತರ ನಕ್ಷತ್ರಗಳಿವೆ ಎಂದು ಅರ್ಥಮಾಡಿಕೊಂಡ ಮಗುವೂಂದು ಎರಡು ಸೂರ್ಯರ ಮಧ್ಯದಲ್ಲಿ ಒಂದು ಬೆಟ್ಟವನ್ನು ಚಿತ್ರಿಸಿತ್ತು. ಎರಡು ಸೂರ್ಯರನ್ನು ಬೇರ್ಪಡಿಸಲು ಒಂದು ಬೆಟ್ಟದ ಕಲ್ಪನೆಯನ್ನು ಮಾಡಿಕೊಂಡಿದೆ. ಆದರೆ ಸಾಮಾನ್ಯವಾಗಿ ಕಾಣುವ ಚಿತ್ರಗಳಲ್ಲಿ ಎರಡು ಬೆಟ್ಟಗಳ ಮಧ್ಯದಲ್ಲಿ ಒಂದು ಸೂರ್ಯ ಇರುತ್ತದೆ.
ಮೇಲಿನ ಈ ಎಲ್ಲಾ ಉದಾಹರಣೆಗಳು ಕೂಡ ಒಬ್ಬೊಬ್ಬ ಓದುಗರಲ್ಲಿ ಒಂದೊಂದು ರೀತಿಯ ಸಂವಾದ, ಸೃಷ್ಟಿಸುತ್ತದೆ.
ಅವರವರ ಮನಸ್ಥಿತಿಗೆ, ದೃಷ್ಟಿಕೋನಕ್ಕನುಗುಣವಾಗಿ ಮಾನಸಿಕ ತರಂಗಗಳನ್ನು ಸೃಷ್ಟಿಸುತ್ತದೆ. ಇದು ಕ್ರಿಯೆಗೆ ಸಹಜವಾದ ಪ್ರತಿಕ್ರಿಯೆ. ಆದರೆ ಒಂದು ಕ್ಷಣ ನಿಮ್ಮ ಪೂರ್ವಭಾವಿ ದೃಷ್ಟಿಕೋನವನ್ನು ಬದಿಗಿಟ್ಟು, ಮನಸ್ಸನ್ನು ಶಾಂತಗೊಳಿಸಿ, ವಿಭಿನ್ನ ದೃಷ್ಟಿಯಿಂದ ನೋಡುವ ಹೊಸತನ ಬೆಳೆಸಿಕೊಂಡಲ್ಲಿ ಹೊಸದಾದ ಲೋಕವೇ ತೆರೆದುಕೊಳ್ಳುತ್ತದೆ.
ಈ ಹೊಸತನವನ್ನು ಅನುಭವಿಸಲು ಇಲ್ಲಿ ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ್ಣೆುೕಲಿನ ಎಲ್ಲಾ ಸಂದರ್ಭಗಳಲ್ಲಿ ಮಗು, ತಾಯಿ, ತಂದೆ , ಶಿಕ್ಷಕ ಹೀಗೆ ಎಲ್ಲಾ ನಾಲ್ಕೂ ಪಾತ್ರಗಳಲ್ಲಿ ಒಳಹೊಕ್ಕು ನೋಡಲು ಸಿದ್ಧರಾಗಿ. ್ಣಮ್ಮ ಅನಿಸಿಕೆಯನ್ನು ಪ್ರತಿಯೊಂದು ದೃಷ್ಟಿಕೋನದಿಂದ ಬರೆಯಿರಿ. ಅಂದರೆ ಮಗುವಿನ ಸ್ಥಿತಿಯಲ್ಲಿ ನಿಂತು ನೋಡಿದಾಗ ನಿಮಗೆ ಹೇಗನ್ನಿಸುತ್ತದೆ. ತನಗೆ ಸರಿಯೆನ್ನಿಸಿದರೂ, ಪ್ರತಿಯೊಬ್ಬರೂ ತಪ್ಪು ಎಂದು ಹೇಳುತ್ತಿರುವಾಗ ಮಗುವಿನ ಮನಸ್ಥಿತಿ ಏನಾಗಬಹುದು.
ತಾಯಿ- ತಂದೆಯರ ಸ್ಥಾನದಲ್ಲಿ ನಿಂತಾಗ ನಿಮ್ಮ ಮಗು ಈ ರೀತಿ ಮಾಡಿದ್ದಲ್ಲಿ ನಿಮಗೆ ಹೇಗೆನ್ನಿಸುತ್ತದೆ. ನೀವೇನಾದರೂ ಶಿಕ್ಷಕರಾಗಿದ್ದಲ್ಲಿ ನೀವು ಹೇಳಿಕೊಟ್ಟ ಪಾಠವನ್ನು ಬೇರೆ ರೀತಿಯಲ್ಲಿ ಗ್ರಹಿಸಿದ ಮಗು ಈ ರೀತಿ ನಡೆದುಕೊಂಡಲ್ಲಿ ನಿಮಗೆ ಹೇಗೆನ್ನಿಸುತ್ತದೆ. ಇನ್ನೊಬ್ಬರ ಮನಸ್ಸಿನಲ್ಲಿ ನಡೆಯಬಹುದಾದ ವಿಚಾರ- ವಿಮರ್ಶೆ ಭಾವನೆಗಳನ್ನು ಅನುಭವಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿ. ್ಣೕವೇನಾದರೂ ಮಗುವಿನ ಮಾನಸಿಕ/ ಶೈಕ್ಷಣಿಕ ಸಮಸ್ಯೆಯನ್ನು ನಿವಾರಿಸುವ- ನಿಭಾಯಿಸುವ ತಜ್ಞರಾಗಿದ್ದಲ್ಲಿ ಹೇಗೆ ಯೋಚಿಸುತ್ತೀರಿ? ಇಲ್ಲಿ ವ್ಯಕ್ತಿನಿಷ್ಠೆ ಗಿಂತ ಸತ್ಯನಿಷ್ಠೆ ಹೆಚ್ಚು ಇರಬೇಕಾಗುತ್ತದೆ? ಹೀಗೆ ಕೆಲವೇ ಕೆಲವು ವಿಭಿನ್ನ ಪಾತ್ರಗಳಲ್ಲಿ ನಿಂತು ಒಂದೇ ವಿಷಯವನ್ನು ವಿಭಿನ್ನ ದೃಷ್ಟಿಕೋನದಿಂದ ಗಮನಿಸಿ.
ಈ ಚಟುವಟಿಕೆ ಏನಾದರೂ ನೀವು ಮಾಡಿದಲ್ಲಿ ಮನುಷ್ಯನ ಮನೋಲೋಕ, ಅದರ ವಿಭಿನ್ನತೆ, ವೈವಿಧ್ಯತೆ ತೆರೆದುಕೊಳ್ಳುತ್ತದೆ. ಇಲ್ಲಿ ಸರಿ ತಪ್ಪು ಎನ್ನುವ ವಿಶ್ಲೇಷಣೆಗಳಿಗಿಂತ ತಮ್ಮದೇ ದೃಷ್ಟಿಕೋನದಲ್ಲಿ ತೊಳಲಾಡುತ್ತಿರುವ ಇಡೀ ಮಾನವ ಸಂಕುಲದ ಬಗ್ಗೆ ಒಂದು ರೀತಿಯ ಅನುಕಂಪ ಏರ್ಪಡುತ್ತದೆ. ಬದುಕೆನ್ನುವುದು ಈ ಎಲ್ಲ ವೈವಿಧ್ಯತೆಗಳನ್ನು ವಿಭಿನ್ನತೆಗಳನ್ನು ಗುರುತಿಸುವ, ಆಸ್ವಾದಿಸುವ, ಕಲಿಯುವ ಆನಂದಿಸುವ, ಕುತೂಹಲದಿಂದ ನೋಡುವ, ಆಶ್ಚರ್ಯ ಹಾಗೂ ಅದ್ಭುತದಿಂದ ಕೂಡಿದ ಒಂದು ಹೊಸಲೋಕ ವಾಗುತ್ತದೆ.
ಭಾವನೆ -ಬಾಂಧವ್ಯಗಳ ಮಾನಸಿಕ ಸಂಕಷ್ಟದಿಂದ ತುಂಬಿ ಬದುಕು ಎಂದು ಭಾರ ಎನಿಸಲಾರದು. ಎಲ್ಲಕ್ಕಿಂತ ಹೆಚ್ಚಾಗಿ, ಮಕ್ಕಳನ್ನು ಅರ್ಥಮಾಡಿಕೊಂಡು ಅವರ ಸಾಮರ್ಥ್ಯಕ್ಕನುಗುಣವಾಗಿ ಸಹಾಯ -ಸಹಕಾರ ನೀಡುವ ಸಹೃದಯದತೆ ಹೆಚ್ಚುತ್ತದೆ. ನ್ಯಾಯಾಧೀಶತನ ಮಾಡುವ ಭರದಲ್ಲಿ ಮಕ್ಕಳಿಂದ ದೂರವಾಗದೆ, ಅವರ ಒಡನಾಡಿಯಾಗಿ ಸ್ನೇಹ ಬಾಂಧವ್ಯ ಬೆಳೆಸಿಕೊಳ್ಳುವ ಅವಕಾಶ ಹೆಚ್ಚುತ್ತದೆ. ಬದುಕನ್ನು ನಿರ್ವಹಿಸಬೇಕೇ ಹೊರತು ನಿರ್ಧರಿಸಿ ಬಿಡಬಾರದು.