

ಸುತ್ತಮುತ್ತಲಿನ ವಾತಾವರಣಕ್ಕೆ ಅಗುಣವಾಗಿ, ಅವರವರ ಮೆದುಳಿನ ಸಾಮರ್ಥ್ಯಕ್ಕನುಗುಣವಾಗಿ, ವೃತ್ತಿಜೀವನ, ವೈಯಕ್ತಿಕ ಅಭ್ಯಾಸ- ಹವ್ಯಾಸ, ಅಗತ್ಯಗಳು ಹೀಗೆ ಅನೇಕ ಕಾರಣಗಳಿಂದಾಗಿ ಮಾನಸಿಕ ಬೆಳವಣಿಗೆ ಆಗುತ್ತದೆ. ವಯಸ್ಸು ಬೆಳೆದಂತೆ ಮನಸ್ಸು ಬೆಳೆಯುತ್ತದೆ ಎನ್ನುವುದು ಕೆಲವು ಮಟ್ಟಿಗೆ ಮಾತ್ರ ಸತ್ಯ.
ಬಹಳಷ್ಟು ಸಲ ಪಾಲಕರು ಮನೆಯಲ್ಲಿ ಅನಾನುಕೂಲಕರ ವಾತಾವರಣವಿದ್ದಾಗ ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ತಮ್ಮ ಪಾತ್ರದ ಬಗ್ಗೆ ಚಿಂತಿತರಾಗುತ್ತಾರೆ. ನಕಾರಾತ್ಮಕ ಪ್ರಭಾವ ಮಕ್ಕಳ ಮೇಲೆ ಆಗದಿರುವಂತೆ ಹೇಗೆ ಎಚ್ಚರಿಕೆ ವಹಿಸಬೇಕು ಎಂದು ಪ್ರಶ್ನಿಸುತ್ತಾರೆ. ಕೆಲವು ಸಾಮಾನ್ಯ ಸಂಗತಿಗಳೆಂದರೆ ಧೂಮಪಾನ,ಮದ್ಯಪಾನ, ತಂಬಾಕು ಸೇವನೆ, ಇತ್ಯಾದಿ. ದುರ್ವ್ಯಸನ ಇರುವ ತಂದೆ- ತಾಯಿ, ಅಜ್ಜ- ಅಜ್ಜಿ ಚಿಕ್ಕಪ್ಪ-ಚಿಕ್ಕಮ್ಮ ಯಾರೊಬ್ಬರು ಮಕ್ಕಳಿಗೆ ನಿಯಮಿತವಾಗಿ ಮನೆಯಲ್ಲಿಯೇ ಕಾಣಸಿಗುತ್ತಾರೆ.
ಕುಡಿದು ಬಂದ ಗಂಡನನ್ನು ಹೆಂಡತಿ ಚೆನ್ನಾಗಿ ಬೈಯುತ್ತಿದ್ದರೆ, ಅದನ್ನು ನೋಡುತ್ತಿರುವ ಮಕ್ಕಳಿಗೆ ಅಮ್ಮನ ಒರಟುತನ ಎದ್ದು ಕಾಣಬಹುದು, ಮೌನವಾಗಿರುವ ಅಪ್ಪನೇ ಸರಿ ಎಂದು ಮಕ್ಕಳಿಗೆ ಅನ್ನಿಸಬಹುದು. ಅದೇ ರೀತಿ ದಿನಾಲೂ ಕುಡಿದು ಬಂದು ಹೆಂಡತಿಯ ಮೇಲೆ ದೌರ್ಜನ್ಯ ಮಾಡುವುದನ್ನು ನೋಡುತ್ತಿರುವ ಮಕ್ಕಳ ದೃಷ್ಟಿಯಲ್ಲಿ ಅಪ್ಪ ದುರುಳ -ದುಷ್ಟ ಎಂದು ಅನ್ನಿಸಬಹುದು. ಇವರಲ್ಲಿ ಎಷ್ಟುಜನ ದುರ್ವ್ಯಸನವನ್ನು ಬಿಟ್ಟು ಮಿಕ್ಕೆಲ್ಲ ವಿಷಯದಲ್ಲಿ ಸಜ್ಜನರಂತೆ ಕಾಣುತ್ತಾರೆ ಹಾಗೂ ತಮ್ಮ ದುರ್ವ್ಯಸನದ ಬಗ್ಗೆ ಮಕ್ಕಳ ಎದುರಿನಲ್ಲಿ ಪರಾಕ್ರಮಿಗಳಂತೆಯೂ ತೋರಿಸಿಕೊಳ್ಳಬಹುದು.
ಇವೆಲ್ಲ ಮಕ್ಕಳ ಮೇಲೆ ಗೊತ್ತಿಲ್ಲದೆಯೇ ಪ್ರಭಾವ ಬೀರುತ್ತವೆ. ಇದರಿಂದ ಮಕ್ಕಳ ಮನಸ್ಸಿನಲ್ಲಿ ದುರ್ವ್ಯಸನಿಗಳ ಉತ್ತಮ ನಡವಳಿಕೆ ಉಳ್ಳವರು ದುರ್ವ್ಯಸನ ತಪ್ಪೇನೂ ಅಲ್ಲ ಇತ್ಯಾದಿ ಭ್ರಮೆ ಉಂಟಾಗಬಹುದು ಮತ್ತು ಅಂತಹ ಕೆಲಸದಲ್ಲಿ ತೊಡಗಿಸಿಕೊಳ್ಳಲು ಪ್ರಚೋದನೆ ಕೊಡಬಹುದು.
ಇದನ್ನು ನಿರ್ವಹಿಸಲು ಕೆಲವು ವಿಧಾನಗಳನ್ನು ತಿಳಿದುಕೊಳ್ಳೋಣ. ಮೊದಲನೆಯದಾಗಿ ತನ್ನ ಮನಸ್ಸಿನ ಮೇಲೆ ತನಗೆ ಹಿಡಿತದಲ್ಲಿ ಇಲ್ಲದೇ ದುರ್ವ್ಯಸನಕ್ಕೆ ಒಳಗಾಗುವುದು ಒಂದು ಮಾನಸಿಕ ಕಾಯಿಲೆ. ನಿಮಾನ್ಸ್ನಂಥ ಸಂಸ್ಥೆಗಳು ಇಂತಹ ತೊಂದರೆಗಳ ನಿವಾರಣೆಗಾಗಿ ಸೇವಾ ಕೇಂದ್ರಗಳನ್ನು ಪ್ರಾರಂಭಿಸಿವೆ. ದೇಶಾದ್ಯಂತ ದುಶ್ಚಟ ನಿವಾರಣಾ ಕೇಂದ್ರಗಳು, ಶಿಬಿರಗಳು, ಚಿಕಿತ್ಸೆಗಳು, ಸಮಾಲೋಚನೆ ಕೇಂದ್ರಗಳು ಲಭ್ಯ ಇವೆ.
ಮಕ್ಕಳಿಗೆ ತಿಳಿವಳಿಕೆ ಹೇಳುವ ಮೊದಲು ಯಾವುದೇ ದುಶ್ಚಟವನ್ನು ಮಾನಸಿಕ ಕಾಯಿಲೆ ಎಂದು ಕುಟುಂಬದ ಸದಸ್ಯರು ಗ್ರಹಿಸಬೇಕು, ಅರ್ಥಮಾಡಿಕೊಳ್ಳಬೇಕು ಹಾಗೂ ಒಪ್ಪಿಕೊಳ್ಳಬೇಕು. ಇದರಿಂದ ಕುಟುಂಬದ ಸದಸ್ಯರಿಗೆ ಸಮಸ್ಯೆಯ ನಿರ್ವಹಣೆಗೆ ಹಾಗೂ ನಿವಾರಣೆಗೆ ಹೊಸ ಉಪಾಯ ಗೋಚರಿಸುತ್ತದೆ. ಸೂಕ್ತ ಚಿಕಿತ್ಸೆಯಿಂದ ಇವುಗಳನ್ನು ಹಿಡಿತದಲ್ಲಿ ಇಡಬಹುದು ಅಥವಾ ಪೂರ್ತಿಯಾಗಿ ನಿವಾರಿಸಿಕೊಳ್ಳಬಹುದು ಎನ್ನುವ ದಾರಿ ತೆರೆದುಕೊಳ್ಳುತ್ತದೆ.
ಇದರ ಬಗ್ಗೆ ಮಕ್ಕಳಿಗೆ ಹೇಳುವಾಗ ಸ್ಪಷ್ಟವಾಗಿ ಇದೊಂದು ಮಾನಸಿಕ ಕಾಯಿಲೆ ಎಂದು ಅವರ ಮನಸ್ಸಿಗೆ ಅರ್ಥವಾಗುವಂತೆ ಭಾವೋದ್ವೇಗವಿಲ್ಲದೆ ತಿಳಿಹೇಳಬೇಕು. ಉದಾಹರಣೆಗೆ ರಕ್ತದೊತ್ತಡವಿರುವ ವ್ಯಕ್ತಿಗೆ ರೋಗಿ ಎಂದು ಪರಿಗಣಿಸಿ ದೈನಂದಿಕ ಜೀವನದಿಂದ ದೂರ ಇಡಲಾಗುವುದಿಲ್ಲ, ಹಾಗೆಯೇ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡುವುದೂ ಇಲ್ಲ. ಆದರೆ ಕಾಯಿಲೆ ಇರುವುದಂತೂ ನಿಜ. ಅವರ ಜೀವನ ಶೈಲಿ, ದೃಷ್ಟಿಕೋನ, ಆಹಾರಗಳ ಸೇವನೆಯಿಂದಾಗಿ ಕಾಯಿಲೆ ಹೆಚ್ಚಾಗುತ್ತದೆ ಅಥವಾ ಕಡಿಮೆಯಾಗುತ್ತದೆ.
ಕುಟುಂಬದ ಸದಸ್ಯರು ಅವರ ಆಹಾರ ಪಥ್ಯದಲ್ಲಿ ಎಚ್ಚರಿಸುವುದು, ಸೂಕ್ತ ವೈದ್ಯಕೀಯ ವ್ಯವಸ್ಥೆ ದೊರಕಿಸಿಕೊಡುವುದು ಮುಖ್ಯ. ಕಾಯಿಲೆಯನ್ನು ಅಗತ್ಯವಾದ ರೀತಿಯಲ್ಲಿ ಚಿಕಿತ್ಸೆ ಮಾಡುವುದು ಹೇಗೆ ಮುಖ್ಯವೋ ಹಾಗೆಯೇ ದುಶ್ಚಟ ಇರುವ ವ್ಯಕ್ತಿಯನ್ನು ಚಿಕಿತ್ಸೆಗೊಳಿಸುವುದು ಅಷ್ಟೇ ಮುಖ್ಯ ಎಂದು ಮಕ್ಕಳಿಗೆ ಅರ್ಥವಾಗುವಂತೆ ತಿಳಿಹೇಳಬೇಕು.ಇಂತಹ ವಿಷಯದಲ್ಲಿ ಅವರು ಒಳ್ಳೆಯವರು ಕೆಟ್ಟವರು ಇತ್ಯಾದಿ ಹಣೆಪಟ್ಟಿ ಹಚ್ಚುವುದೂ ಅಗತ್ಯವಿಲ್ಲ.
ಎರಡನೆಯದಾಗಿ ಮಕ್ಕಳಿಗೆ ತಿಳಿಸಿ ಹೇಳಿ -ಪಾಲಕರ ಪಾಲಕರ ದುಶ್ಚಟಗಳಿಗೆ ಮಕ್ಕಳು ಜವಾಬ್ದಾರಿಯಲ್ಲ. ಅವರಲ್ಲಿ ದುಶ್ಚಟ ಹುಟ್ಟಿಕೊಳ್ಳಲು ಹಾಗೂ ಅದನ್ನು ನಿಲ್ಲಿಸಲು ಮಕ್ಕಳು ಕಾರಣಕರ್ತರು ಅಲ್ಲ. ಹಾಗೆಂದು ಮಕ್ಕಳ ಪಾತ್ರವೇ ಇಲ್ಲ ಎಂದಲ್ಲ. ಮಕ್ಕಳು ಚಿಕಿತ್ಸೆಯಲ್ಲಿ ಸಹಕರಿಸಬಹುದೇ ಹೊರತು ಅವರೇ ಗುಣಪಡಿಸಲು ಸಾಧ್ಯವಿಲ್ಲ ಎಂದು ಅರ್ಥ. ಇದರಿಂದ ಮಕ್ಕಳ ಮನಸ್ಸಿನಲ್ಲಿ ಕಾಲ್ಪನಿಕ ಜವಾಬ್ದಾರಿ ಹಾಗೂ ಆತಂಕ ಕಮ್ಮಿಯಾಗುತ್ತದೆ.
ನಿಮ್ಮ ಮನೆಯಲ್ಲಿ ಮಾತ್ರ ಸಮಸ್ಯೆಯಲ್ಲ. ಬಹಳಷ್ಟು ಮಕ್ಕಳು ತಮ್ಮ ಮನೆಯಲ್ಲಿ ಮಾತ್ರ ಇಂತಹ ಸಮಸ್ಯೆ ಇದೆ ಎಂದು ಗಾಬರಿಗೊಳ್ಳುತ್ತಾರೆ. ನಿಮ್ಮ ಶಾಲೆಯ ಬೇರೆ ವಿದ್ಯಾರ್ಥಿಗಳ ಪಾಲಕರಿಗೂ ಇಂತಹ ಸಮಸ್ಯೆ ಇರಬಹುದು, ಜಗತ್ತಿನಲ್ಲಿ ಬಹಳಷ್ಟು ಜನಕ್ಕೆ ಇಂತಹ ಸಮಸ್ಯೆ ಇದೆ ಎನ್ನುವ ಅರಿವನ್ನು ಮಕ್ಕಳಿಗೆ ಕೊಡುವುದು ಮುಖ್ಯ. ದುಶ್ಚಟ ಸಹಜವೂ ಅಲ್ಲ ಸಾರ್ವತ್ರಿಕವೂ ಅಲ್ಲ ಆದರೆ ಸರ್ವವ್ಯಾಪಿ. ಸಮಸ್ಯೆಯ ಬಗ್ಗೆ ಬೇರೆಯವರ ಬಳಿ ಹೇಳಿಕೊಳ್ಳುವುದು ಅವಮಾನವಲ್ಲ. ಸಹಾಯ ಬೇಕಾದಲ್ಲಿ ನಿಸ್ಸಂಕೋಚವಾಗಿ ಪಡೆದುಕೊಳ್ಳಬಹುದು ಎನ್ನುವುದನ್ನು ಮನವರಿಕೆ ಮಾಡಿಕೊಡಿ.
ತಿಳಿಯಿರಿ ಈ ಏಳು ಸಿ
ಮದ್ಯಪಾನ ವ್ಯಸನಿಗಳ ಮಕ್ಕಳ ರಾಷ್ಟ್ರೀಯ ವೇದಿಕೆ ಏಳು ‘ಸಿ’ಗಳನ್ನು ಹೇಳುತ್ತದೆ.
(1) didn't cause it. (ಇದಕ್ಕೆ ನಾನು ಕಾರಣನಲ್ಲ) (2) I can't cure it. (ನಾನು ಇದನ್ನು ವಾಸಿ ಮಾಡಲು ಆಗುವುದಿಲ್ಲ) (3) I can't control it. (ನಾನು ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ) (4) I can care for myself (ನನ್ನ ಬಗ್ಗೆ ನಾನು ಕಾಳಜಿವಹಿಸುತ್ತೇನೆ.) (5) By communicating my feelings (ನನ್ನ ಭಾವನೆಗಳನ್ನು ಹಂಚಿಕೊಳ್ಳುವುದು ಮುಖಾಂತರ) (6) Making healthy choices (ಆರೋಗ್ಯವಂತ ಆಯ್ಕೆಗಳ ಮುಖಾಂತರ) (7) By celebrating myself (ನನ್ನ ಬದುಕನ್ನು ಸಂಭ್ರಮಿಸುವ ಮುಖಾಂತರ) ದುಶ್ಚಟಗಳ ಹಿನ್ನೆಲೆಯ ಕುಟುಂಬದಿಂದ ಬಂದಿರುವ ಮಕ್ಕಳು ಅದರಲ್ಲಿಯೂ ತಂದೆ ಅಥವಾ ತಾಯಿ ದುಶ್ಚಟಕ್ಕೆ ಒಳಗಾದಾಗ ಮಕ್ಕಳು ಏಕಾಂಗಿತನ ಅನುಭವಿಸುತ್ತಾರೆ.
ಪಾಲಕರು ತಮ್ಮ ದುಶ್ಚಟದ ತೀವ್ರತೆಗೆ ಅನುಗುಣವಾಗಿ ಭಾವನಾತ್ಮಕ ಏರಿಳಿತಕ್ಕೆ ಒಳಗಾಗುತ್ತಾರೆ ತಾವೇ ಕೊಟ್ಟ ಭರವಸೆಗಳನ್ನು ಮರೆತುಬಿಡುತ್ತಾರೆ. ಇದರಿಂದ ಪಾಲಕರು ಮಕ್ಕಳ ಮನಸ್ಸಿನಲ್ಲಿ ಅಸಹಾಯಕತೆ ಏಕಾಂಗಿತನ ಅಭದ್ರತೆಯ ಭಾವನೆಯನ್ನು ಸೃಷ್ಟಿಸುತ್ತಾರೆ. ಮಕ್ಕಳು ಹದಿ ವಯಸ್ಸಿಗೆ ಬಂದಾಗ ಪಾಲಕರ ದುಶ್ಚಟದ ಮಾರ್ಗವನ್ನು ಹಿಡಿಯಬಹುದು. ಕೆಲವು ಮಕ್ಕಳು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ವಿಕಾಸ ಹೊಂದದೆ ಮುದುಡಿದ ಮನಸ್ಸಿನಿಂದ ಬಹಳ ಸಾಮಾನ್ಯ ಬದುಕು ಬದುಕಬಹುದು. ಅಥವಾ ಕೆಲವು ಮಕ್ಕಳು ಇದೆಲ್ಲವನ್ನೂ ಮೀರಿ ನಿಲ್ಲುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಾರೆ. ಮಕ್ಕಳ ಭವಿಷ್ಯತ್ತಿನ ಒಳಿತಿಗೋಸ್ಕರವಾದರೂ ಅಗತ್ಯ ಚಿಕಿತ್ಸೆಯನ್ನು ಪಡೆದುಕೊಂಡು, ತಮ್ಮ ದುಶ್ಚಟಗಳಿಂದ ಹೊರಬರಲು ಪಾಲಕರು ಸಂಕಲ್ಪ ಮಾಡುವುದು ಮುಖ್ಯ.