ಬದಲಾಗುತ್ತಿರುವ ಪೋಷಣೆಯ ಶೈಲಿ...

Family
Published on
ಇತ್ತೀಚೆಗೆ ಯೂಟ್ಯೂಬ್​ನಲ್ಲಿ ಭಾರತದ ಪ್ರಖ್ಯಾತ ಕ್ರೀಡಾಪಟುವೊಬ್ಬರ ಸಂದರ್ಶನ ನೋಡುತ್ತಿದ್ದೆ. ತಮ್ಮ ಕ್ರೀಡಾಪಯಣದ ಕುರಿತು ವಿವರಿಸುತ್ತಿದ್ದ ಅವರಿಗೆ ಸಂದರ್ಶಕ ಪುತ್ರಿಯ ನಟನಾ ವೃತ್ತಿಜೀವನದ ಬಗ್ಗೆ ಕೇಳಿದರು. ಆಗ ಆ ಕ್ರೀಡಾಪಟು, ‘ಆಕೆಯ ವೃತ್ತಿಜೀವನದ ಯಾವುದೇ ನಿರ್ಧಾರದಲ್ಲಿ ನಾವು ಪಾಲಕರು ತಲೆ ಹಾಕುವುದಿಲ್ಲ. ಅದನ್ನೆಂದೂ ನಾವುಗಳು ರ್ಚಚಿಸುವುದೇ ಇಲ್ಲ’ ಅಂತ ಹೇಳಿದರು. ಕ್ರೀಡಾಪಟುವಿನ ಈ ಹೇಳಿಕೆ ಬಗ್ಗೆ ವಿಡಿಯೋವಿನ ಕಾಮೆಂಟ್ ಸೆಕ್ಷನ್​ನಲ್ಲಿ ಮೆಚ್ಚುಗೆಯ ಬಹಳಷ್ಟು ಮಾತುಗಳು ವ್ಯಕ್ತವಾಗಿದ್ದವು. ಕೆಲವರಂತೂ ‘ಆತ ಶ್ರೇಷ್ಠ ಆಟಗಾರನಷ್ಟೆ ಅಲ್ಲ ಮಾದರಿ ಅಪ್ಪ ಕೂಡ’ ಎಂದೆಲ್ಲ ಹೊಗಳಿದ್ದರು.

ಇನ್ನೇನು ಕೆಲವೇ ದಿನಗಳಲ್ಲಿ ಮಕ್ಕಳ ದಿನ (ನವೆಂಬರ್ 14) ಬರಲಿದೆ. ನಮ್ಮ ಮಕ್ಕಳ ಫೋಟೋ ನಮ್ಮ ಸ್ಟೇಟಸ್ಸಿನಲ್ಲಿ ಹಾಕಿಕೊಂಡು ಸಂಭ್ರಮಿಸಲಿದ್ದೇವೆ. ಈ ಮಕ್ಕಳ ದಿನಾಚರಣೆ ನಮ್ಮ ಮತ್ತು ಮಕ್ಕಳ ಸಂಬಂಧಗಳನ್ನು ವಿಮಶಿಸುವ ದಿನವೂ ಹೌದಲ್ಲವೇ. ಅಮೆರಿಕದ ರಾಷ್ಟ್ರೀಯ ವೈದ್ಯಕೀಯ ಲೈಬ್ರರಿಯು ಕಳೆದ ವರ್ಷ ‘ಪೋಷಿಸುವ ಶೈಲಿ ಮತ್ತು ಮಕ್ಕಳ ಮೇಲೆ ಅದರ ಪರಿಣಾಮ’ ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧ ಪ್ರಕಟಿಸಿತು. ಭಾರತ ಮತ್ತು ಅಮೆರಿಕದ ಜೀವನಶೈಲಿಗಳಲ್ಲಿ ಅಜಗಜಾಂತರವಿರುವ ಕಾರಣ ಅದರ ಹೆಚ್ಚಿನ ಅಂಶಗಳು ನಮಗೆ ಅಪ್ರಸ್ತುತವಾಗಿದ್ದರೂ ಕೆಲವುಗಳು ಎಲ್ಲರಿಗೂ ಅನ್ವಯವಾಗುವಂತಹುಗಳು. ಆ ಸಂಶೋಧನಾ ಪ್ರಬಂಧದಲ್ಲಿ ಹೇಳಿರುವಂತೆ ಅಮೆರಿಕದಲ್ಲಿ ಹೆಚ್ಚುತ್ತಿರುವ ವಲಸೆ ಮತ್ತು ಸಾಮಾಜಿಕ, ಆರ್ಥಿಕ ಬದಲಾವಣೆಗಳ ಕಾರಣಕ್ಕೆ ಕುಟುಂಬಗಳ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿರುವುದರ ಪ್ರಭಾವ ಪಾಲಕರು ಮಕ್ಕಳನ್ನು ಬೆಳೆಸುವ ರೀತಿಯಲ್ಲೂ ಆಗತೊಡಗಿದೆ. ಈ ಬದಲಾವಣೆಯನ್ನು ನಾವು ನಮ್ಮಲ್ಲೂ ಗಮನಿಸಬಹುದು.

ಭಾರತೀಯ ಜೀವನಶೈಲಿಯಲ್ಲಿ ಕೂಡುಕುಟುಂಬಗಳು

ಶಹರೀಕರಣ ಮತ್ತು ಏರುತ್ತಿರುವ ದಿನನಿತ್ಯದ ವೆಚ್ಚ ಅಪ್ಪ-ಅಮ್ಮ ಇಬ್ಬರ ಹೆಗಲಿಗೂ ಸಂಸಾರದ ಆರ್ಥಿಕ ನಿರ್ವಹಣೆಯ ನೊಗವನ್ನು ಕಟ್ಟಿದೆ. ಇದು ಮಕ್ಕಳ ಒಂಟಿತನಕ್ಕೆ ಕಾರಣವಾಗುತ್ತಿದ್ದು, ಅವರ ಬೆಳವಣಿಗೆಯ ಸಮಯದಲ್ಲಿ ಹಲವು ರೀತಿಯ ಸವಾಲುಗಳನ್ನು ಎದುರಿಸುವಂತೆ ಮಾಡುತ್ತಿದೆ. ಮನಶಾಸ್ತ್ರದ ಒಂದು ಭಾಗವಾಗಿರುವ ‘ಪೋಷಿಸುವ ಶೈಲಿ’ಯ ಕುರಿತು ಅಧ್ಯಯನದ ಕೊರತೆ ಭಾರತದಲ್ಲಿದೆ. ಮೊದಲೆಲ್ಲ ಕೂಡುಕುಟುಂಬಗಳಲ್ಲಿ ಬೆಳೆಯುತ್ತಿದ್ದ ನಮಗೆ ಇದರ ಜರೂರತ್ತೂ ಇರಲಿಲ್ಲ ಬಿಡಿ. ಆದರೆ ಬದಲಾಗುತ್ತಿರುವ ಭಾರತೀಯ ಜೀವನಶೈಲಿಯಲ್ಲಿ ಕೂಡುಕುಟುಂಬಗಳು ಕಳೆದು ಅಣುಸಂಸಾರಗಳಾಗಿ ಮಾರ್ಪಟ್ಟಿವೆ. ಇಂತಹ ಪರಿಸ್ಥಿತಿಯಲ್ಲಿ ಇಂತಹುದೊಂದು ಅಧ್ಯಯನದ ಜರೂರತ್ತು ನಮಗೀಗ ಕಾಣತೊಡಗಿದೆ. ಜಾಗತಿಕವಾಗಿ ನೋಡುವುದಾದರೆ ಈ ಕುರಿತಾದ ಹೆಚ್ಚಿನ ಸಂಶೋಧನೆಗಳು ನಡೆದಿದ್ದು, ಈ ಸಾಲಿನಲ್ಲಿ ನಮಗೆ ಮೊದಲು ಕಾಣುವುದು ನ್ಯೂಯಾರ್ಕ್ ಮೂಲದ ಡಾ. ಡಯಾನ ಬಾಮ್ರಿಂಡ್ ಹೆಸರು.

ಡಾ. ಡಯಾನ ಬಾಮ್ರಿಂಡ್ ಮೂಲತಃ ಓರ್ವ ಮನಶಾಸ್ತ್ರಜ್ಞೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಓದಿ ಡಾಕ್ಟರೇಟ್ ಪಡೆದ ಈಕೆ ನಂತರ ಮಕ್ಕಳ ಪೋಷಣೆ ಕುರಿತು ಆಳ ಅಧ್ಯಯನ ಮಾಡಿ ಹಲವು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ತನ್ನ ಅಧ್ಯಯನದ ಆಧಾರದ ಮೇಲೆ ಡಯಾನ ಬಾಮ್ರಿಂಡ್ ಪೋಷಿಸುವ ಶೈಲಿಗಳನ್ನು ಮೂರು ಮುಖ್ಯವರ್ಗಗಳನ್ನಾಗಿ ವಿಂಗಡಿಸಿದರು. ಮೊದಲನೆಯದು ಆಥಾರಿಟೇರಿಯನ್ ಅಂದರೆ ಸರ್ವಾಧಿಕಾರಿ ಪಾಲಕರು. ಈ ವರ್ಗದ ಪಾಲಕರಿಂದ ಮಕ್ಕಳಿಗೆ ಒಮ್ಮೆ ಆಜ್ಞೆ ಆಯಿತೆಂದರೆ ಅಷ್ಟೇ ಮತ್ಯಾವುದೇ ಸಬೂಬು, ರಿಯಾಯಿತಿಗೆ ಆಸ್ಪದ ಇಲ್ಲವೇ ಇಲ್ಲ. ಶಿಸ್ತಿನ ಕಡೆಗೆ ಹೆಚ್ಚು ಗಮನ ಕೊಡುವ ಸರ್ವಾಧಿಕಾರಿ ಪಾಲಕರು ಮಕ್ಕಳಿಗೆ ಅವರ ಮೇಲಿರುವ ನಿರೀಕ್ಷೆಗಳನ್ನು ಚೆನ್ನಾಗಿ ಅರ್ಥೈಸಿರುತ್ತಾರೆ.

ಮಕ್ಕಳಲ್ಲಿ ಆತ್ಮವಿಶ್ವಾಸ

ಡಾ.ಡಯಾನ ಹೇಳುವಂತೆ ಇಂತಹ ಪಾಲಕರು ಮಕ್ಕಳಿಗೆ ಹಾಕುವ ಕಟ್ಟಳೆಗಳು ಮಕ್ಕಳ ಒಳಿತಿಗಾಗಿಯೇ ಆಗಿದ್ದರೂ ಅದು ಮಕ್ಕಳ ಮೇಲೆ ಹೆಚ್ಚು ಒತ್ತಡವನ್ನುಂಟು ಮಾಡುವುದರ ಜೊತೆಗೆ ಅದರಿಂದ ಅವರಲ್ಲಿ ಕೀಳರಿಮೆ ಮನೆಮಾಡುತ್ತದೆ. ಸರ್ವಾಧಿಕಾರಿ ಪಾಲಕರುಗಳು ಮಕ್ಕಳಿಗೆ ಚಿಕ್ಕಂದಿನಿಂದಲೇ ತಾವು ಹಾಕಿಕೊಟ್ಟ ಗೆರೆಯಲ್ಲಿಯೇ ನಡೆಯುವ ಶಿಸ್ತನ್ನು ರೂಢಿಸಿರುವ ಕಾರಣ ದೊಡ್ಡವರಾದ ಮೇಲೆ ಮಕ್ಕಳು ತಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸೋಲುತ್ತಾರೆ. ನಿರಂತರ ಒತ್ತಡದ ಕಾರಣ ಇಂತಹ ಮಕ್ಕಳಲ್ಲಿ ಆತ್ಮವಿಶ್ವಾಸ ಕಮ್ಮಿಯಾಗಿ ಪಾಲಕರಿಗಿಂತ ಜೀವನದ ತಮ್ಮ ಪ್ರಮುಖ ನಿರ್ಧಾರಗಳಿಗೆ ತಮ್ಮ ಗೆಳೆಯ-ಗೆಳತಿಯ ಮೇಲೆಯೇ ಅವಲಂಬಿತರಾಗುವ ಸಾಧ್ಯತೆ ಹೆಚ್ಚು.

ಡಾ.ಡಯಾನ ಪ್ರತಿಪಾದಿಸಿರುವ ಎರಡನೇ ವಿಧದ ಪಾಲಕರು ಅಥಾರಿಟೇಟಿವ್ ಅರ್ಥಾತ್ ಅಧೀಕೃತರು. ಈ ವರ್ಗದ ಪಾಲಕರು ಮಕ್ಕಳ ವಿಷಯದಲ್ಲಿ ಖಚಿತ ನಿರ್ಧಾರಗಳನ್ನು ಹೊಂದಿರುತ್ತಾರೆ. ಆದರೆ ಅನಿವಾರ್ಯವೆನಿಸಿದರೆ ತಮ್ಮ ನಿರ್ಧಾರಗಳನ್ನು ಬದಲಿಸಬಲ್ಲರು ಕೂಡ. ಈ ಪಾಲಕರು ಮಕ್ಕಳಿಗೆ ಅಗತ್ಯವಿದ್ದಷ್ಟು ಸ್ವಾತಂತ್ರ್ಯ ನೀಡುತ್ತಾರೆ. ಎಲ್ಲದಕ್ಕೂ ತಮ್ಮ ನಿರ್ಧಾರಗಳನ್ನು ಮಕ್ಕಳ ಮೇಲೆ ಹೇರದ ಈ ಪಾಲಕರು ತೀರಾ ಅಗತ್ಯವಿದ್ದಾಗ ಮಕ್ಕಳ ನೆರವಿಗೆ ಬರುತ್ತಾರೆ. ಇದು ಮಕ್ಕಳಿಗೆ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ನೀಡುವ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ಬೆಳೆಯುವಂತೆ ಮಾಡುತ್ತದೆ. ಜೊತೆಗೆ ಪಾಲಕರು ಹಾಕುವ ಮಿತಿಗಳು ಮಕ್ಕಳಲ್ಲಿ ಅತ್ಯಗತ್ಯವಾದ ಶಿಸ್ತನ್ನೂ ಬೆಳೆಸುತ್ತದೆ. ಡಾ. ಡಯಾನರ ಪ್ರಕಾರ ಅಧೀಕೃತರದ್ದು ಅತ್ಯುತ್ತಮ ಶೈಲಿಯ ಪಾಲಕತ್ವ.

ಮೂರನೇ ವಿಧದ ಪಾಲಕರು

ಇನ್ನು ಮೂರನೇ ವಿಧದ ಪಾಲಕರು ಪರ್ವಿುಸ್ಸಿವ್ ಅಂದರೆ ಅನುಮೋದಕರು. ಇವರುಗಳದ್ದು ಸರ್ವಾಧಿಕಾರಿ ಪಾಲಕರ ಶೈಲಿಗೆ ತದ್ವಿರುದ್ಧವಾದುದು. ಮಕ್ಕಳಿಗೆ ಯಾವ ಕಟ್ಟಳೆಗಳನ್ನೂ ವಿಧಿಸದೆ ಅವರಿಷ್ಟದಂತೆ ಬದುಕಲು ಬಿಡುವ ಇಂತಹ ಪಾಲಕರು ಹೆಚ್ಚಾಗಿ ತಮ್ಮ ಪಾಲಕರಾಗಿ ಸರ್ವಾಧಿಕಾರಿ ಶೈಲಿಯ ಪಾಲಕರನ್ನು ಹೊಂದಿದ್ದ ಕಾರಣಕ್ಕೆ ಅವರ ಧೋರಣೆಗೆ ಬೇಸತ್ತು ತಮ್ಮ ಮಕ್ಕಳಿಗೂ ಆ ಪರಿಸ್ಥಿತಿ ಬರಬಾರದೆಂಬ ಕಾರಣಕ್ಕೆ ಸಂಪೂರ್ಣ ವಿರುದ್ಧ ಶೈಲಿಯನ್ನು ತಮ್ಮದಾಗಿಸಿಕೊಂಡಿರುತ್ತಾರೆ. ಮಕ್ಕಳನ್ನು ಪ್ರೀತಿಸಿ ಅವರಿಗೆ ಸ್ವಾತಂತ್ರ್ಯ ನೀಡುವುದೇನೋ ಓಕೆ. ಆದರೆ ಯಾವ ಕಟ್ಟಳೆಗಳೂ ಇಲ್ಲದ ಮಕ್ಕಳು ಆ ಸ್ವಾತಂತ್ರ್ಯವನ್ನು ಹೇಗೆ ಬಳಸಿಕೊಳ್ಳುತ್ತಾರೆಂಬುದು ಮುಖ್ಯವಾಗುತ್ತದೆ. ಡಯಾನರ ಅಭಿಪ್ರಾಯದಂತೆ ಈ ರೀತಿ ಬೆಳೆಸಲ್ಪಟ್ಟ ಮಕ್ಕಳು ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಛಾತಿಯನ್ನು ಹೊಂದಿರುವುದಿಲ್ಲ. ತಮಗೆ ಬೇಕಾದದ್ದು ಸಿಗದಿದ್ದರೆ ರೌದ್ರಾವತಾರವನ್ನು ತಳೆಯುವ ಈ ಮಕ್ಕಳು ಮಾರ್ಗದರ್ಶನ ನೀಡುವವರು ಯಾರೂ ಇಲ್ಲದ ಕಾರಣಕ್ಕೆ ತಪ್ಪುದಾರಿ ಹಿಡಿಯುವ ಸಾಧ್ಯತೆಗಳೇ ಜಾಸ್ತಿ.

ಡಾ.ಡಯಾನ ಬಾಮ್ರಿಂಡ್ ಪ್ರತಿಪಾದಿಸಿದ ಮೂರು ವಿಧದ ಪೋಷಿಸುವ ಶೈಲಿಗಳಿಗೆ ಕೆಲ ಟೀಕೆಗಳು ಕೇಳಿಬಂದರೂ ಆಕೆಯ ಕಾರ್ಯ ಈ ಕ್ಷೇತ್ರದಲ್ಲಿ ಮೈಲಿಗಲ್ಲುಗಳಾಗಿದ್ದಂತೂ ಖರೆ. ಮುಂದೆ ಮೆಕಾಬಿ ಮತ್ತು ಮಾರ್ಟಿನ್ ಎಂಬ ಮನಶಾಸ್ತ್ರಜ್ಞರು ಡಯಾನರ ಮೂರು ಶೈಲಿಗಳಿಗೆ ‘ನಿಗ್ಲೆಕ್ಟಫುಲ್’ ಅಂದರೆ ‘ನಿರ್ಲಕ್ಷ್ಯದ ಶೈಲಿ’ಯೆಂಬ ನಾಲ್ಕನೇ ಶೈಲಿಯನ್ನು ಸೇರಿಸಿದರು. ಈ ಪೈಕಿಯ ಪಾಲಕರು ತಮ್ಮ ಮಕ್ಕಳ ಬಗ್ಗೆ ಯಾವುದೇ ಕಾಳಜಿ ಹೊಂದದೆ ಬೇಜವಾಬ್ದಾರಿ ತೋರುವ ಕಾರಣ ಮಕ್ಕಳ ಜೀವನಕ್ಕೆ ತಾವೇ ಮುಳ್ಳಾಗುತ್ತಾರೆ. ಸಾಮಾನ್ಯವಾಗಿ ಇಂತಹ ತಂದೆ-ತಾಯಿಯರ ಮಧ್ಯೆ ಹೊಂದಾಣಿಕೆ ಇಲ್ಲದಿರುವುದು ಅಥವಾ ವಿಚ್ಛೇದಿತ ಪಾಲಕರು ಮಕ್ಕಳ ಪೋಷಣೆಯಲ್ಲಿ ಈ ರೀತಿಯ ನಿಷ್ಕಾಳಜಿ ತೋರಿಸುವ ಸಾಧ್ಯತೆ ಹೆಚ್ಚು ಎಂಬುದನ್ನು ಮೆಕಾಬಿ ಮತ್ತು ಮಾರ್ಟಿನ್ ತಮ್ಮ ಸಂಶೋಧನೆಯಲ್ಲಿ ಕಂಡುಕೊಂಡರು. ‘ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು’ ಎಂಬಂತೆ ನಿರ್ಲಕ್ಷ್ಯ ಶೈಲಿಯ ಪಾಲಕರು ಆ ಕಾರಣಕ್ಕೆ ಮಕ್ಕಳಲ್ಲಿ ಹುಟ್ಟುಹಾಕುವ ಖಿನ್ನತೆ ಮುಂದೆ ಅವರನ್ನು ಮಾನಸಿಕ ಅಸ್ವಸ್ಥರನ್ನಾಗಿಸಬಹುದು ಎಂಬುದು ಮೆಕಾಬಿ ಮತ್ತು ಮಾರ್ಟಿನ್​ರ ವಾದ.

ಪೋಷಣಾ ಶೈಲಿ

ಡಾ.ಡಯಾನ ತದನಂತರ ಮೆಕಾಬಿ ಮತ್ತು ಮಾರ್ಟಿನ್ ಇವರುಗಳೆಲ್ಲ ತಮ್ಮ ಸಂಶೋಧನೆಗಳನ್ನು ಪ್ರಕಟಿಸಿದ್ದುದು ಎಪ್ಪತ್ತರ ದಶಕದಲ್ಲಿಯಾದರೂ ಅವು ಇಂದಿಗೂ ಪ್ರಸ್ತುತವಾಗಿವೆ. ಬದಲಾಗುತ್ತಿರುವ ಆಧುನಿಕ ಜೀವನಶೈಲಿಯಲ್ಲಿ ಮಕ್ಕಳ ಹಾಗೂ ಪಾಲಕರ ನಡುವಿನ ಸಂಬಂಧಗಳು ಮತ್ತು ಮಕ್ಕಳಿಂದ ಪಾಲಕರ ನಿರೀಕ್ಷೆಗಳೂ ಬದಲಾಗುತ್ತಿವೆ. ಹೀಗಾಗಿ ಇವುಗಳಿಗೆಲ್ಲ ಹೊಸ ಹೆಸರು ನೀಡುತ್ತ ಅದಕ್ಕೂ ಆಪ್ತಸಮಾಲೋಚಕರನ್ನು ಸಂರ್ಪಸುವ ಕಾಲದಲ್ಲಿ ನಾವಿದ್ದೇವೆ. ಹೀಗಾಗಿ ಡಯಾನ ಹೆಸರಿಸಿದ ಶೈಲಿಗಳ ಪಟ್ಟಿಗೆ ಇನ್ನೂ ಹಲವು ಹೊಸ ಹೊಸ ಪೋಷಿಸುವ ಶೈಲಿಗಳು ಸೇರ್ಪಡೆಯಾಗಿವೆ.

ಕಾಡಿನಲ್ಲಿ ತನ್ನ ಮರಿಯೊಂದಿಗೆ ವಿಹರಿಸುತ್ತಿರುವ ಆನೆಯನ್ನೊಮ್ಮೆ ಗಮನಿಸಿ. ಆ ಮರಿಯು ಯಾವತ್ತೂ ತನ್ನ ತಾಯಿಯ ಕಾಲಬುಡದಲ್ಲಿಯೇ ಸುತ್ತುತ್ತಿರುತ್ತದೆ. ಆ ತಾಯಿಯೂ ಅಷ್ಟೇ. ಬೇರೆ ಯಾವ ಪ್ರಾಣಿಯೂ ತನ್ನ ಮರಿಯ ಬಳಿ ಸುಳಿಯದಂತೆ ಸದಾ ರಕ್ಷಣೆಯಲ್ಲಿ ತೊಡಗಿರುತ್ತದೆ. ಇದು ಆನೆಯ ಪೋಷಣಾ ಶೈಲಿ ಅಥವಾ ಎಲಿಫಂಟ್ ಪೆರೆಂಟಿಂಗ್. ಈ ಪೈಕಿಯ ಪಾಲಕರು ಮಕ್ಕಳ ಬಗ್ಗೆ ತುಸು ಹೆಚ್ಚೇ ಅನಿಸುವಷ್ಟು ಕಾಳಜಿ ಹೊಂದಿದ್ದು ಅವರ ಪ್ರತಿಯೊಂದು ನಿರ್ಧಾರಗಳಲ್ಲೂ ಮೂಗು ತೂರಿಸುತ್ತಿರುತ್ತಾರೆ. ಮಕ್ಕಳೂ ಪ್ರತಿಯೊಂದಕ್ಕೂ ಪಾಲಕರ ಮೇಲೆಯೇ ನಿರ್ಭರವಾಗಿದ್ದು ಅವರ ಅನುಪಸ್ಥಿತಿಯಲ್ಲಿ ನೀರ ಹೊರಗಿನ ಮೀನಿನಂತೆ ಚಡಪಡಿಸುತ್ತಾರೆ. ಈ ಅತಿ ಅವಲಂಬನೆ ಮಕ್ಕಳನ್ನು ಮಾನಸಿಕವಾಗಿ ದುರ್ಬಲರನ್ನಾಗಿ ಮಾಡುವ ಜೊತೆಗೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ ಪಾಲಕರು ಮತ್ತು ಮಕ್ಕಳು ಒಟ್ಟಾಗಿ ಸೋಲುವಂತೆ ಮಾಡುತ್ತದೆ.

ವು ಯಾವ ವರ್ಗಕ್ಕೆ ಸೇರಿದ್ದೀರಿ?

ಇತ್ತೀಚೆಗೆ ಹೆಚ್ಚು ಕೇಳಿ ಬರುತ್ತಿರುವ ‘ಹೆಲಿಕಾಪ್ಟರ್’ ಪೋಷಣಾ ಶೈಲಿಯೂ ಹೆಚ್ಚುಕಮ್ಮಿ ಇದೇ ವರ್ಗಕ್ಕೆ ಸೇರುತ್ತದೆ. ಇಲ್ಲಿ ಪಾಲಕರು ಸದಾ ಮಕ್ಕಳ ಯೋಗಕ್ಷೇಮದ ಕುರಿತು ಚಿಂತಿಸುತ್ತ ಅವರ ಬಗ್ಗೆ ತುಸು ಹೆಚ್ಚೇ ಎನಿಸುವಷ್ಟು ಕಾಳಜಿ ತೋರುತ್ತ ಸ್ವತಃ ಮಕ್ಕಳಿಗೂ ಕಿರಿಕಿರಿಯನ್ನುಂಟು ಮಾಡುತ್ತಾರೆ. ಸದ್ಯದ ದಿನಗಳಲ್ಲಿ ಸುದ್ದಿಯಲ್ಲಿರುವುದು ಹುಲಿ ಪೋಷಣಾ ಶೈಲಿ. ಇದನ್ನು ಮಕ್ಕಳ ವಿದ್ಯಾಭ್ಯಾಸ, ಕಲೆ ಅಥವಾ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಕುರಿತು ಎತ್ತರದ ಆಸೆಗಳನ್ನಿಟ್ಟುಕೊಂಡು ತಮ್ಮ ಆ ನಿರೀಕ್ಷೆಗಳನ್ನು ತಲುಪಲು ಮಕ್ಕಳಿಗೆ ಸ್ವಲ್ಪವೂ ಸ್ವಾತಂತ್ರ್ಯ ನೀಡದೆ ಒತ್ತಡ ಹೇರುವ ಪಾಲಕರನ್ನು ಈ ವರ್ಗಕ್ಕೆ ಸೇರಿಸಲಾಗುತ್ತದೆ. ಪಾಲಕರಲ್ಲೂ ಎಷ್ಟೊಂದು ವೈವಿಧ್ಯತೆಯಲ್ಲವಾ. ಒಂದು ಕ್ಷಣ ಯೋಚಿಸಿ ಹೇಳಿ, ನೀವು ಯಾವ ವರ್ಗಕ್ಕೆ ಸೇರಿದ್ದೀರಿ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net