ನವರಾತ್ರಿ ವೈಭವ 3: ಚಂದ್ರಘಂಟಾ ಪೂಜೆ

Navarathri
Published on

| ಎಚ್.ವಿ.ದೀಪಕ್ ನರಸಿಂಹ

ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ತ್ರಕೈರ್ಯುತಾ |

ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||

ನವರಾತ್ರಿಯ ಮೂರನೆಯ ದಿನವಾದ ಇಂದು ಪರಮ ಶಾಂತಿದಾಯಕ ಮತ್ತು ಶ್ರೇಯಸ್ಕರವಾದ ದೇವಿ ಚಂದ್ರಘಂಟಾ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ದುರ್ಗಾಮಾತೆಯ ವಿವಾಹಿತ ರೂಪ ಚಂದ್ರಘಂಟಾ. ಶಿವನನ್ನು ಮದುವೆಯಾದ ಮೇಲೆ ಈಕೆ ತನ್ನ ಹಣೆಯಲ್ಲಿ ಗಂಟೆಯಾಕಾರದ ಅರ್ಧಚಂದ್ರನನ್ನು ಧರಿಸಿದಳು. ದುಷ್ಟಶಕ್ತಿಗಳನ್ನು ಸಂಹರಿಸಲು ಸಿದ್ಧಳಾಗಿ ನಿಂತಿರುವ ರೂಪ ಈಕೆಯದು. ಸಿಂಹದ ಮೇಲೆ ಕುಳಿತ ಈಕೆಗೆ ಹತ್ತು ಕೈಗಳಿವೆ. ಒಂದೊಂದು ಕೈಯಲ್ಲೂ ಒಂದೊಂದು ಆಯುಧ ಹಿಡಿದಿದ್ದಾಳೆ. ಈ ದಿನ ಸಾಧಕನ ಮನಸ್ಸು ‘ಮಣಿಪೂರ’ ಚಕ್ರ ಪ್ರವೇಶ ಮಾಡುತ್ತದೆ. ಸ್ವಾದಿಷ್ಠಚಕ್ರದ ಮೇಲ್ಭಾಗದ ನಾಭಿಯ ಕೇಂದ್ರಬಿಂದುವಿನಲ್ಲಿ ಬಣ್ಣವನ್ನು ಹೊಂದಿರುವ ಈ ಚಕ್ರವನ್ನು ಅಗ್ನಿತತ್ತ್ವ ನಿಗ್ರಹಿಸುತ್ತದೆ. ಉತ್ತರ ಪ್ರದೇಶದ ವಾರಾಣಸಿಯಲ್ಲಿ ಚಂದ್ರಘಂಟಾ ದೇವಿಯ ಪ್ರಸಿದ್ಧ ದೇವಾಲಯವಿದೆ.

ಚಂದ್ರಘಂಟಾ ದೇವಿಯ ಕವಚ

ರಹಸ್ಯಂ ಶ್ರೀನನಿ ವಕ್ಷಾ್ಯಮಿ ಶೈವೇಶಿ ಕಮಲಾನನೇಶ್ರೀ ಚಂದ್ರಘಂಟಸ್ಯ ಕವಚಂ ಸರ್ವಸಿದ್ಧಿದಾಯಕಂಬಿನಾ ನ್ಯಾಸಂ ಬಿನಾ ವಿನಿಯೋಗಂ ಬಿನಾ ಶಪೋಧ ಬಿನಾ ಹೋಮಂಸ್ನಾನಂ ಶೌಚಾದಿ ನಾಸ್ತಿ ಶ್ರದ್ಧಾಮಾತ್ರೇನ ಸಿದ್ದಿದಾಂಕುಶಿಶ್ಯಾಮ ಕುಟಿಲಾಯ ವಜ್ರಕಾಯ ನಿಂದಕಾಯ ಚನ ದಾತಾವ್ಯಂ ನ ದಾತಾವ್ಯಂ ನ ದಾತಾವ್ಯಂ ಕದಾಚಿತಂದೇವಿ ಚಂದ್ರಘಂಟೆಯ ಮಂತ್ರ: ಓಂ ದೇವಿ ಚಂದ್ರಘಂಟಾಯೈ ನಮಃ

ಯಾರು ಜೀವನದಲ್ಲಿ ಭರವಸೆಯನ್ನು ಕಳೆದುಕೊಂಡು ವ್ಯವಹಾರದಲ್ಲಿ ಹೊಸ ಹಾದಿಯನ್ನು ತುಳಿಯಲು ಇಚ್ಛಿಸುತ್ತಾರೋ ಅವರು ಚಂದ್ರಘಂಟಾ ದೇವಿಯನ್ನು ಪೂಜೆ ಮಾಡಿದರೆ ಅವರು ಸಾಗುವ ದಾರಿಯಲ್ಲಿ ಬೆಳಕನ್ನು ಚೆಲ್ಲುತ್ತಾಳೆ. ಯಶಸ್ಸಿನ ಮೆಟ್ಟಿಲೇರಲು ತಾಯಿಗೆ ಕಮಲಪುಷ್ಪಗಳಿಂದ ಪೂಜಿಸಿದರೆ ಸಂಪೂರ್ಣ ಫಲವನ್ನು ನೀಡುತ್ತಾಳೆ.

ದೈವದ ಕೃಪಾಕಟಾಕ್ಷಕ್ಕೆ ಭಕ್ತಿಮಾರ್ಗದಲ್ಲಿ ಮೂರನೆಯದ್ದು ‘ಸ್ಮರಣೆ’. ಭಗವಂತನ ಹೆಸರುಗಳು, ಗುಣ, ಮಹಾತ್ಮೆ್ಯ, ಲೀಲೆ, ಅವನ ಸರ್ವವ್ಯಾಪಕತ್ವ ಇತ್ಯಾದಿಗಳನ್ನು ಸದಾಕಾಲದಲ್ಲಿಯೂ ಸ್ಮರಿಸುತ್ತಿರುವುದೇ ‘ಸ್ಮರಣ ಭಕ್ತಿ’. ಈ ಭಕ್ತಿಯ ಸಾಧನೆಯಲ್ಲಿ ಭಗವನ್ನಾಮ ಜಪಕ್ಕೆ ಬಹಳಷ್ಟು ಪ್ರಾಮುಖ್ಯ ಇದೆ. ತಿರುಗಾಡುತ್ತಿರುವಾಗ, ಊಟ ಮಾಡುವಾಗ, ಯಾವುದೇ ಕೆಲಸ ಮಾಡುತ್ತಿರುವಾಗ ಸಾಧಕನ ಚಿತ್ತವೃತ್ತಿ ಭಗವನ್ನಾಮ ಸ್ಮರಣೆಯಲ್ಲೇ ಸಂಲಗ್ನವಾಗಿರಬೇಕು.

‘ಪ್ರಕೃತಿಯಲ್ಲಿರುವ ಜಲ, ಆಹಾರ ಮೊದಲಾದವುಗಳೆಲ್ಲವೂ ಭಗವನ್ಮಯಗಳಾಗಿ ಕಾಣಿಸುತ್ತಿವೆ. ಯಾವ ಪದಾರ್ಥವನ್ನು ನೋಡಿದರೂ ಭಗವಂತನೇ ಸ್ಮರಣೆಗೆ ಬರುತ್ತಿರುತ್ತಾನೆ’ (ತಿರುವಾಯ್ ಮೊಷಿ 6-7-1) ಎಂದು ಆಳ್ವಾರರು ತಿಳಿಸುತ್ತಾರೆ. ‘ಉತ್ತಮ ಭಕ್ತನಾದವನು ನಿರಂತರವೂ ಭಗವನ್ನಾಮವನ್ನು ಸ್ಮರಿಸುತ್ತಲೇ ಇರುವರು’ ಎಂದಿದ್ದಾರೆ ಪೂಯಾಹೈ ಆಳ್ವಾರರು (ಮೊದಲ್ ತಿರುವಂದಾದಿ - 88).

‘ಭಗವನ್ನಾಮವನ್ನು ಒಂದು ಸಲ ಸ್ಮರಿಸಿದರೆ ಸಾಕು, ಭಗವಂತನು ಆ ಭಕ್ತನ ಮನಸ್ಸಿನಲ್ಲಿ ನೆಲೆಸಿಬಿಡುತ್ತಾನೆ’ ಎಂದು ಪೇಯಾಳ್ವಾರರು (ಮೂನ್ರಾಂ ತಿರುವಂದಾದೆ - 81) ತಿಳಿಸಿದ್ದಾರೆ. ‘ಭಗವನ್ನಾಮ ಸ್ಮರಣೆಯನ್ನು ಮಾಡುವವರು ನರಕವನ್ನು ಪಡೆಯುವುದಿಲ್ಲ’ ಎಂದು ತೊಂಡರಡಿಪ್ಪೊಡಿ ಆಳ್ವಾರರು (ತಿರುಮಾಲೈ-12) ಸ್ಮರಣಭಕ್ತಿಯನ್ನು ಬಹಳವಾಗಿ ಕೊಂಡಾಡಿದ್ದಾರೆ.

(ಲೇಖಕರು ಆಧ್ಯಾತ್ಮಿಕ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net