

ಸಮದೋಷ ಸಮಾಗ್ನಿಶ್ಚಸಮಧಾತು ಮಲಕ್ರಿಯಾಃ |
ಪ್ರಸನ್ನಾತ್ನೇಂದ್ರಿಯ ಮನಃಸ್ವಸ್ಥ ಇತ್ಯಭಿಧೀಯತೇ||
ವ್ಯಕ್ತಿಯೋರ್ವನಲ್ಲಿ ದೋಷಗಳು (ತ್ರಿದೋಷ), ಧಾತುಗಳು (ಸಪ್ತಧಾತುಗಳು), ಅಗ್ನಿ, ಮಲಕ್ರಿಯೆಗಳು ಸಮವಾಗಿದ್ದು ಇಂದ್ರಿಯಗಳು, ಮನಸ್ಸು ಮತ್ತು ಆತ್ಮವು ಸಂತೃಪ್ತವಾಗಿದ್ದರೆ ಆತನನ್ನು ಪೂರ್ಣ ಸ್ವಸ್ಥನಾಗಿದ್ದಾನೆ ಎನ್ನಬಹುದಾಗಿದೆ. ಅಂದರೆ ಮನುಷ್ಯನ ಆರೋಗ್ಯ ಎಂದರೆ ದೇಹದ ಆರೋಗ್ಯವಲ್ಲದೆ, ಅದು ಮನಸ್ಸು ಇತ್ಯಾದಿಗಳನ್ನು ಒಳಗೊಂಡ ಒಂದು ಸ್ಥಿತಿಯಾಗಿದೆ. ಇಂದಿನ ದಿನಗಳಲ್ಲಿ ಸಂಪೂರ್ಣ ಆರೋಗ್ಯವಂತ ಮನುಷ್ಯನನ್ನು ಕಾಣುವುದು ಅಪರೂಪ. ಯಾಕೆಂದರೆ ಬಹುತೇಕರು ಸದಾ ಒಂದಲ್ಲ ಒಂದು ದೈಹಿಕ, ಮಾನಸಿಕ ಅನಾರೋಗ್ಯದಿಂದ ಬಳಲುವವರೇ ಆಗಿದ್ದಾರೆ. ಬಾಹ್ಯವಾಗಿ ಕಾಣುವ ದೇಹ ಗಟ್ಟಿಮುಟ್ಟಾಗಿ ದೃಢಕಾಯ ಹೊಂದಿದ್ದರೂ ಮಾನಸಿಕವಾಗಿ ಜರ್ಜರಿತಗೊಂಡಿರಬಹುದು ಅಥವಾ ಮಾನಸಿಕವಾಗಿ ದೃಢತೆ ಹೊಂದಿದ್ದರೂ ಶರೀರ ಕೃಶವಾಗಿರಬಹುದು.
ದೈಹಿಕವಾಗಿ ಎದುರಾಗುವ ವಿವಿಧ ಅನಾರೋಗ್ಯಗಳಲ್ಲದೆ, ಒತ್ತಡ, ದುಗುಡ, ಖಿನ್ನತೆ, ಒಂಟಿತನ, ಏಕತಾನತೆ ಮೊದಲಾದ ಮಾನಸಿಕ ಅನಾರೋಗ್ಯ ಸಮಸ್ಯೆಗಳೂ ಇತ್ತೀಚೆಗೆ ಬಹುವಾಗಿ ಮಾನವ ಸಮುದಾಯವನ್ನು ಬಾಧಿಸುತ್ತಿವೆ. ಇಂತಹ ಅನಾರೋಗ್ಯಗಳಿಂದಾಗಿ ಜನರು ಸುಖ-ನೆಮ್ಮದಿಯ ‘ಸ್ವಾಸ್ಥ್ಯ ಜೀವನ’ವನ್ನು ಹೊಂದಲು ಸಾಧ್ಯವಾಗುತ್ತಿಲ್ಲ. ಅನಾರೋಗ್ಯ ಹಾಗೂ ಜಿಗುಪ್ಸೆಯಿಂದ ಅನೇಕರು ಆತ್ಮಹತ್ಯೆಯಂಥ ಪ್ರಯತ್ನಕ್ಕೆ ಮುಂದಾಗುವುದೂ ಇದೆ. ಅದೇನೇ ಇರಲಿ ಭಗವಂತ ನೀಡಿದಂಥ ಈ ಮಾನವ ಜನ್ಮ, ಬದುಕನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿ, ಸಾರ್ಥಕತೆ ಪಡೆಯುವುದು ಅಗತ್ಯವಾಗಿದೆ. ಬದಲಾಗಿ ದುಡುಕಿನ ನಿರ್ಧಾರ ಕೈಗೊಂಡು ಜೀವನ ಹಾಳು ಮಾಡಿಕೊಳ್ಳಬಾರದು.
ನಮ್ಮ ಅಜ್ಜ-ಅಜ್ಜಿಯಂದಿರ ಕಾಲದಲ್ಲಿ ಈಗಿರುವಷ್ಟು ಸೌಕರ್ಯಗಳು ಇರಲಿಲ್ಲ. ಒಂದು ಬೆಂಕಿಪೊಟ್ಟಣ ತರಬೇಕಾದರೂ ಹತ್ತಾರು ಮೈಲಿ ನಡೆಯಬೇಕಾಗುತ್ತಿತ್ತು. ಅದಕ್ಕಾಗಿ ಅವರು ಬೇಸರಿಸಿಕೊಳ್ಳುತ್ತಿರಲಿಲ್ಲ. ಎಲ್ಲ ಕೆಲಸ, ಕಾರ್ಯಗಳನ್ನು ಪ್ರೀತಿಯಿಂದ ಮಾಡುತ್ತಿದ್ದರು. ಅದೆಷ್ಟೇ ಕಷ್ಟಗಳಿದ್ದರೂ ಧೈರ್ಯಗೆಡದೆ ನೆಮ್ಮದಿ-ಸಂತೃಪ್ತಿಯ ಜೀವನ ನಡೆಸುತ್ತಿದ್ದರು. ಕೂಡು ಕುಟುಂಬವಿದ್ದರೂ ಎಲ್ಲರೂ ಒಬ್ಬರನ್ನೊಬ್ಬರು ಕಾಳಜಿ ವಹಿಸುತ್ತ, ಪ್ರೀತಿ ತೋರುತ್ತ ಆದರದಿಂದ ಕಾಣುತ್ತಿದ್ದರು. ತಿನ್ನಲು ಗುಟುಕಿನಷ್ಟೇ ಇದ್ದರೂ ಮನೆಯವರಿಗೆಲ್ಲ ಹಂಚಿ ತಿನ್ನುತ್ತಿದ್ದರು. ಅಂದಿನ ಪರಿಸ್ಥಿತಿಗಿಂತ ಈಗಿನದ್ದು ವ್ಯತಿರಿಕ್ತ. ಮನೆಯವರಲ್ಲಿ ಬೇಕೋ ಬೇಡವೋ ಎಂಬ ರೀತಿಯ ಮಾತು, ಆತ್ಮೀಯತೆಯ ಕೊರತೆ, ಮನೆಯಲ್ಲಿ ಇರುವುದು ನಾಲ್ವರೇ ಆದರೂ ಎಲ್ಲರೂ ಒಟ್ಟಾಗಿ ಕೂತುಣ್ಣುವುದು ಅಪರೂಪ. ಕೆಲವು ಪೇಟೆ-ಪಟ್ಟಣಗಳಲ್ಲಿ ಅದೆಷ್ಟು ವರ್ಷಗಳ ಕಾಲ ಒಂದೇ ಕಡೆ ಇದ್ದರೂ ಅಕ್ಕ-ಪಕ್ಕದ ಮನೆಯವರ ಪರಿಚಯವೇ ಇರುವುದಿಲ್ಲ.
ಅನಾರೋಗ್ಯಕ್ಕೆ ಆಧುನಿಕ ಜೀವನಶೈಲಿ ಹಾಗೂ ಒತ್ತಡದ ಬದುಕು ಕೂಡ ಕಾರಣ. ಜೀವನ ಜಂಜಾಟಗಳು, ಕೆಲಸದ ನಿರ್ವಹಣೆ, ಏರುತ್ತಿರುವ ಅವಶ್ಯಕತೆಗಳು ಜನರನ್ನು ಜರ್ಜರಿತಗೊಳಿಸುತ್ತೀವೆ. ಮಕ್ಕಳು ಕೂಡ ಹೆಚ್ಚಿನ ಅಂಕ ಪಡೆಯಬೇಕೆಂಬ ಆಸೆಯ ಹಿಂದೆ ಬಿದ್ದು, ಶಾಲೆ ಮತ್ತು ಮನೆಯಲ್ಲಿ ಸದಾ ಕಾಲ ಓದಿನಲ್ಲೇ ಕಳೆಯುವಂತಾಗುವುದು, ಇತರ ಚಟುವಟಿಕೆಯಿಲ್ಲದೆ ಏಕತಾನತೆಗೆ ಒಳಗಾಗುತ್ತಿದ್ದಾರೆ. ಓದು, ಕೆಲಸ, ಸಂಸಾರ ನಿರ್ವಹಣೆ, ದುಶ್ಚಟ, ಕೀಳರಿಮೆ ಮುಂತಾದ ಕಾರಣಗಳಿಂದ ಜನರು ಒತ್ತಡಕ್ಕೆ ಸಿಲುಕುತ್ತಾರೆ. ಮಗು ಬೆಳಗ್ಗೆ ಎದ್ದು ಶಾಲೆಗೆ ಹೋಗಲು ತಯಾರಾಗುತ್ತದೆ. ನಿತ್ಯಕರ್ಮ ಮುಗಿಸಿ ಒಂದಷ್ಟು ಓದಿ, ಬರೆದೋ ಮಾಡಿ ಶಾಲಾ ಸಮವಸ್ತ್ರ ಧರಿಸಿ, ಪುಸ್ತಕಗಳನ್ನೆಲ್ಲ ಬ್ಯಾಗ್ಗೆ ತುಂಬಿಸುತ್ತಿರುವಾಗಲೇ ಶಾಲಾವಾಹನ ಗೇಟಿನ ಬಳಿ ಬಂದಿರುತ್ತದೆ. ಬೆಳಗ್ಗೆ ಕರೆಂಟಿಲ್ಲದ ಕಾರಣ ಹಿಟ್ಟು ಕಡೆಯಲು ಆಗಿಲ್ಲ, ಅಡುಗೆ ತಯಾರಿಗಿಲ್ಲ. ಸ್ನಾನಕ್ಕೆ ಬಿಸಿನೀರು ತಯಾರಾಗಿಲ್ಲ. ಹಾಗಾಗಿ ದೋಸೆ ಮಾಡಲಾಗದೆ, ಬ್ರೆಡ್ಗೆ ಸ್ವಲ್ಪ ಜಾಮ್ ಸವರಿ ಅದನ್ನೇ ಮಗುವಿಗೆ ತಿನ್ನಿಸಿ ಕಳುಹಿಸುತ್ತಾಳೆ. ಒಂದೆರಡು ದಿನ ಹೀಗೇ ನಡೆದಾಗ ಸಮಯಕ್ಕೆ ಸರಿಯಾಗಿ ಅಡುಗೆ ಮಾಡಲು ಕಷ್ಟವಾದಾಗ ‘ರೆಡಿಮೇಡ್-ಫಾಸ್ಟ್ ಫುಡ್’ ಮೊರೆ ಹೋಗಬೇಕಾಗುತ್ತದೆ. ಸಂಜೆಯೂ ಮಾಡಿ ಕೊಡಲು ಸುಲಭವೆಂದು ಫಾಸ್ಟ್ಫುಡ್ ನೀಡತೊಡಗುತ್ತಾರೆ. ಒಂದೆರಡು ವಾರ ಫಾಸ್ಟ್ಫುಡ್ನ ರುಚಿ ಕಂಡ ನಾಲಿಗೆ ಮತ್ತೆ-ಮತ್ತೆ ಅದನ್ನೇ ಬಯಸುತ್ತದಲ್ಲದೆ, ಮನೆಯಲ್ಲಿ ಮಾಡಿದ ಅವಲಕ್ಕಿ, ಉಪ್ಪಿಟ್ಟು, ಮೊಸರನ್ನ, ದೋಸೆ ಇತ್ಯಾದಿ ತಿನಿಸುಗಳನ್ನು ಕಂಡಾಗ ಮಕ್ಕಳು ಮುಖ ಕಿವಿಚಲು ಆರಂಭಿಸುತ್ತಾರೆ. ಪರಿಣಾಮವಾಗಿ ಮಕ್ಕಳ ಮೇಲಿನ ಮುದ್ದಿನಿಂದಲೋ ಅಥವಾ ‘ನಾನು ಮಾಡಿಕೊಡುವುದನ್ನು ತಿನ್ನುವುದಿಲ್ಲ ಅದನ್ನಾದರೂ ತಿನ್ನುತ್ತಾರಲ್ಲ’ ಎಂಬ ಸಮಾಧಾನದಿಂದಲೋ ಫಾಸ್ಟ್ಫುಡ್ ನಿತ್ಯ ಆಹಾರವಾಗುತ್ತಿರುವುದು ವಿಪರ್ಯಾಸ. ಫಾಸ್ಟ್ಫುಡ್ಡೇ ಇರಲಿ, ಮನೆಯಲ್ಲಿ ಮಾಡಿದ ತಿಂಡಿಯೇ ಆಗಿರಲಿ ಅದು ದೇಹಕ್ಕೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ತೀರ್ವನಿಸಿ, ಸೇವಿಸುವ ಅಧಿಕಾರ ನಮ್ಮದೇ ಆಗಿರುತ್ತದೆ. ಯಾಕೆಂದರೆ ತಿನ್ನವುದಾದರೆ ನಮ್ಮ ಹೊಟ್ಟೆ ತುಂಬುವ ತನಕ ತಿನ್ನಬಹುದು. ಆಮೇಲೆ ತಿನ್ನಲು ಸಾಧ್ಯವೇ ಇಲ್ಲ. ಹಾಗೇನಾದರೂ ಇದ್ದರೆ ಹೊಟ್ಟೆಯಲ್ಲಿರುವ ಆಹಾರ ಕರಗಿ ಬಳಿಕ ತಿನ್ನಬೇಕಷ್ಟೇ.
ನಮ್ಮ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯ-ಶಾಂತಿವನದಲ್ಲಿ ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು, ಚಿಕಿತ್ಸೆಗಾಗಿ ಅನೇಕರು ಬರುತ್ತಿರುತ್ತಾರೆ. ಹೆಚ್ಚಿನ ಸ್ಥೂಲಕಾಯದವರು ತೂಕ ಇಳಿಸಿಕೊಳ್ಳಲು, ಬೊಜ್ಜು ಕರಗಿಸಿಕೊಳ್ಳಲು ಇಲ್ಲಿ ‘ಸಾಧಕ’ರಾಗಿ ದೇಹಾರೋಗ್ಯ ಕಾಪಾಡಿಕೊಳ್ಳಲು ನೋಂದಾಯಿಸಿಕೊಳ್ಳುತ್ತಾರೆ. ಮಿತ ಆಹಾರ, ಯೋಗ, ಪ್ರಾಣಾಯಾಮ, ವಿವಿಧ ಪ್ರಕೃತಿ ಚಿಕಿತ್ಸೆಗಳ ಮೂಲಕ ಸಾಧಕರಿಗೆ ಚಿಕಿತ್ಸೆ ನೀಡಲಾಗುತ್ತದೆ. ಜೊತೆಗೆ ಮುಂದೆ ಹೇಗೆ ಆರೋಗ್ಯ ಕಾಪಾಡಿಕೊಳ್ಳಬೇಕೆಂಬ ಮಾಹಿತಿ, ಮಾರ್ಗದರ್ಶನವನ್ನೂ ನೀಡಲಾಗುತ್ತದೆ. ಒಮ್ಮೆ ಗಣ್ಯ ವ್ಯಕ್ತಿಯೊಬ್ಬರು ದೇಹದ ತೂಕ ಇಳಿಸಿಕೊಳ್ಳಲು ಪ್ರಕೃತಿ ಚಿಕಿತ್ಸೆಗೆ ದಾಖಲಾಗಿದ್ದರು. ಅಲ್ಲಿ ಒಂದೆರಡು ವಾರದಲ್ಲಿ ಆರೇಳು ಕೆ.ಜಿ. ತೂಕವನ್ನು ಸಾಧನಾ ಚಿಕಿತ್ಸೆಯ ಮೂಲಕ ಕಳೆದುಕೊಂಡಿದ್ದರು. ಕೆಲ ದಿನಗಳ ಬಳಿಕ ಅವರು, ‘ಇನ್ನು ಚಿಕಿತ್ಸೆ ಸಾಕು ನಾನಿನ್ನು ಮರಳುತ್ತೇನೆ’ ಎಂದು ಹೇಳಿ ವೈದ್ಯರಿಗೆ, ಸೇವೆ ನೀಡಿದ ಸಿಬಂದಿ ವರ್ಗಕ್ಕೆ ಧನ್ಯವಾದ ಸಲ್ಲಿಸಿ ಚಿಕಿತ್ಸಾ ಕೇಂದ್ರದಿಂದ ಹೊರಗೂ ಹೋಗಿರಲಿಲ್ಲ, ಆಗಲೇ ಅವರು ತಮ್ಮ ಮೊಬೈಲ್ನಿಂದ ಮನೆಗೆ ಕರೆ ಮಾಡಿ, ‘ನಾನು ಮನೆಗೆ ಬರುತ್ತಿದ್ದೇನೆ. ಅಂಗಡಿಯಿಂದ ಒಂದಷ್ಟು ಮಾಂಸಗಳನ್ನು ತರಿಸಿ ಅಡುಗೆ ತಯಾರಿಸಿಡು’ ಎಂದು ಹೇಳುತ್ತಿದ್ದರಂತೆ. ಈ ಘಟನೆಯನ್ನು ವೈದ್ಯರೊಬ್ಬರು ನೋವಿನಿಂದ ನನ್ನೊಡನೆ ಹಂಚಿಕೊಂಡು, ಅವರು ಒಂದೆರಡು ವಾರದಲ್ಲಿ ಪಡೆದ ಚಿಕಿತ್ಸೆ ‘ನೀರಿನ ಮೇಲೆ ಮಾಡಿದ ಹೋಮ’ದಂತಾಯಿತು ಎಂದರು. ಈ ರೀತಿ ಚಿಕಿತ್ಸೆ ಪಡೆಯುವುದರಿಂದ ಯಾವುದೇ ಪ್ರಯೋಜನವಿಲ್ಲ. ಯಾಕೆಂದರೆ ವೈದ್ಯರು ರೋಗಕ್ಕೆ ಪರಿಹಾರ ನೀಡುತ್ತಾರೆ ಹೌದು. ಆ ಔಷಧವನ್ನು ವೈದ್ಯರ ಸೂಚನೆಯಂತೆ ಕ್ರಮ ಪ್ರಕಾರವಾಗಿ ಸೇವಿಸುತ್ತ, ಅವರ ಸಲಹೆ-ಸೂಚನೆ ಪಾಲಿಸಿದಾಗ ಮಾತ್ರ ನಿರೋಗಿಯಾಗಲು ಸಾಧ್ಯ. ಜೊತೆಗೆ, ‘ನಾನು ಬೇಗ ಹುಷಾರಾಗಬೇಕು. ಯಾವುದೇ ಕಷ್ಟ ಸಹಿಸಲು, ತ್ಯಾಗ ಮಾಡಲು ಸಿದ್ಧ’ ಎಂಬ ಮನಃಸ್ಥಿತಿ ಇರಬೇಕು. ಯಾಕೆಂದರೆ ನಮ್ಮ ಆರೋಗ್ಯ ಇರುವುದು ನಮ್ಮ ಸಾಧನೆಯಿಂದಲೇ ಹೊರತು, ವೈದ್ಯರ ಕೈಯ್ಯಲ್ಲಲ್ಲ. ನಮ್ಮ ದೇಹ-ಮಾನಸಿಕ ಆರೋಗ್ಯದ ಕಡೆಗೆ ಗಮನ ನೀಡುತ್ತ, ದೇಹಕ್ಕೆ ಮತ್ತು ಮನಸ್ಸಿಗೆ ಬೇಕಾದುದನ್ನು ಮಾತ್ರ ಸ್ವೀಕರಿಸಿ, ಬೇಡವಾದುದನ್ನು ಬದಿಗಿರಿಸಿದರೆ ಸ್ವಸ್ಥ ಆರೋಗ್ಯ ಹೊಂದಬಹುದು.
ಆಯುರ್ವೆದದಲ್ಲಿ ತ್ರಿದೋಷಗಳೆಂದರೆ ವಾತ, ಪಿತ್ತ ಮತ್ತು ಕಫ. ಪಂಚಮಹಾಭೂತಗಳಾದ ಆಕಾಶ, ವಾಯು, ತೇಜಸ್ಸು, ಅಪ್, ಪೃಥ್ವಿಗಳ ಪೈಕಿ ಮೊದಲಿನ ಎರಡರ ಸಂಯೋಜನೆಯಿಂದ ವಾತವೂ, ಮೂರನೆಯದರಿಂದ ಪಿತ್ತವೂ, ಕೊನೆಯ ಎರಡರ ಸಂಯೋಜನೆಯಿಂದ ಕಫವೂ ಸಂಜನಿಸಿ ದೇಹಧಾರಣೆ, ಪೋಷಣೆಗಳಿಗೂ ಅಂತೆಯೇ ದೇಹದ ರೋಗನಾಶಗಳಿಗೂ ಕಾರಣವಾಗುತ್ತವೆ. ದೇಹ ಆರೋಗ್ಯವಂತವಾಗಿ ಸುಸ್ಥಿತಿಯಲ್ಲಿ ಇರುವಾಗ ವಾಯು, ಪಿತ್ತ, ಕಫಗಳನ್ನು ತ್ರಿಧಾತುಗಳೆಂದು ಕರೆಯುತ್ತೇವೆ. ಇವುಗಳ ಪೈಕಿ ಯಾವುದೇ ಒಂದರ ಹೆಚ್ಚಳ ಅಥವಾ ಕೊರತೆಯಿಂದ ಆರೋಗ್ಯ ಹದಗೆಟ್ಟಾಗ ಅದನ್ನು ದೋಷವೆಂದು ಸೂಚಿಸುತ್ತೇವೆ. ವಾತದೋಷವು ಶುಷ್ಕ, ತಂಪು, ಬೆಳಕು, ನಿಮಿಷ ಮತ್ತು ಚಲನೆಯ ಗುಣಲಕ್ಷಣ ಹೊಂದಿರುತ್ತದೆ. ನೋವು ಅವ್ಯವಸ್ಥಿತ ವಾತದ ವಿಶಿಷ್ಟ ಗುಣಲಕ್ಷಣ. ಸಮತೋಲನ ತಪ್ಪಿದ ವಾತಕ್ಕೆ ಸಂಬಂಧಿಸಿದ ಕೆಲವು ರೋಗಗಳೆಂದರೆ ವಾಯು ತುಂಬಿರುವಿಕೆ, ಸಂಧಿವಾತ, ವಾಯುನೋವು ಇತ್ಯಾದಿ. ಪಿತ್ತವು ಚಯಾಪಚಯ ಕ್ರಿಯೆಯನ್ನು ಪ್ರತಿನಿಧಿಸುತ್ತದೆ. ಉಷ್ಣ, ತೇವವಾದದು, ದ್ರವ, ತೀಕ್ಷ್ಣ ಮತ್ತು ಹುಳಿ ಇದರ ವಧಿಸಲು ಪಿತ್ತರಸವನ್ನು ಬಳಸುವ ಶಕ್ತಿತತ್ತ್ವವಾಗಿದೆ.
ಕಫವು ನೀರಿನಂಥ ಅಂಶ. ತಂಪು, ಮೃದುತ್ವ ನಿಧಾನ ಮತ್ತು ಪೋಷಕಾಂಶಗಳ ವಾಹಕವಾಗಿರುವುದು ಇದರ ಗುಣಲಕ್ಷಣ. ಇದು ಶರೀರದ ಪೋಷಕ ಘಟಕ. ಎಲ್ಲ ಮೃದು ಅಂಗಗಳು ಕಫದಿಂದ ಮಾಡಲ್ಪಟ್ಟಿವೆ ಮತ್ತು ಇದು ಪೋಷಣೆಯ ಜೊತೆಗೆ ರುಚಿಯ ಗ್ರಹಿಕೆಯಲ್ಲಿ ಮಹತ್ವ ಪಾತ್ರವಹಿಸುತ್ತದೆ. ವಾತಾವರಣ ಹಾಗೂ ಸೇವಿಸುವ ಆಹಾರದಲ್ಲಿನ ಏರು-ಪೇರುಗಳಿಂದಾಗಿ ದೇಹಾರೋಗ್ಯದಲ್ಲಿ ಬದಲಾವಣೆಗಳು ಉಂಟಾಗುವುದು ಸಾಮಾನ್ಯ. ಆಗ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಅಗತ್ಯ.
ದೇಹದ ಪ್ರತಿಯೊಂದು ಅಂಗಾಂಗವೂ ತನ್ನದೇ ಆದ ಮಹತ್ವ ಹೊಂದಿವೆ. ಆದರೆ ನಾಲಿಗೆಯು ದೇಹದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಷ್ಟೇ ಅಲ್ಲ, ಮಾನವನ ಎಲ್ಲ ವ್ಯವಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾಲಿಗೆ ಮೂಳೆಯನ್ನು ಹೊಂದಿಲ್ಲ. ಅದು ಹೇಗೆ ಬೇಕೋ ಹಾಗೆ ಹೊರಳುತ್ತದೆ. ಅತ್ತಿತ್ತ ಹೊರಳುವ ನಾಲಿಗೆಯನ್ನು ಯಾರು ನಿಯಂತ್ರಿಸಿ ಬೇಕಾದಂತೆ ಬಳಸಿಕೊಳ್ಳುತ್ತಾರೋ ಅವರು ಗೆದ್ದಂತೆಯೇ ಸರಿ. ನಾಲಿಗೆಯನ್ನು ನಿಯಂತ್ರಿಸಲಾಗದೆ, ಅದರ ಅಡಿಯಾಳಾಗುವವ ಸೋತಂತೆಯೇ ಸರಿ. ಮಾತು ಮಾತ್ರವಲ್ಲ ಆಹಾರದ ಬಗ್ಗೆಯೂ ನಾಲಿಗೆಯ ಮೇಲೆ ನಿಯಂತ್ರಣ ಹೊಂದುವುದು ಅಗತ್ಯ. ಹಿತ ಭುಕ್-ಮಿತ ಭುಕ್ ಎಂಬಂತೆ ಹಿತ-ಮಿತವಾದ ಆಹಾರ ದೇಹದ ಆರೋಗ್ಯಕ್ಕೆ ಪೂರಕವಾದುದು. ಅದರಲ್ಲೂ ನಮ್ಮ ದೇಹಾರೋಗ್ಯಕ್ಕೆ ಉತ್ತಮವಾದುದನ್ನು ಮಾತ್ರ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಮ್ಮ ದೇಹ, ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತ ಆರೋಗ್ಯವಂತ ವ್ಯಕ್ತಿಗಳಾಗೋಣ. ನಮ್ಮ ಕುಟುಂಬದ, ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಕರಿಸೋಣ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)