ಶರೀರದಲ್ಲಿನ ಚಕ್ರಗಳು ಹಾಗೂ ಆಧ್ಯಾತ್ಮಿಕ ಉನ್ನತಿ

3-67a102f0709fe
Published on
ನಾವು ಕಳೆದ ತಿಂಗಳಿನಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದೇವಷ್ಟೆ. ಈ ಹಬ್ಬವು, ಭೌತಿಕವಾಗಿ ಸೂರ್ಯನು ದಕ್ಷಿಣಾರ್ಧ ಗೋಳದಿಂದ ಉತ್ತರಕ್ಕೆ ತನ್ನ ಪಯಣವನ್ನು ಪ್ರಾರಂಭಿಸುವುದನ್ನಷ್ಟೇ ಅಲ್ಲದೆ, ಸಂವತ್ಸರದಲ್ಲಿ ಆಧ್ಯಾತ್ಮಿಕ ಸಾಧನೆಗೆ ಪ್ರಶಸ್ತವಾದ ಉತ್ತರಾಯಣ ಕಾಲದ ಆರಂಭವನ್ನು ಸೂಚಿಸುವ ಹಬ್ಬವೂ ಆಗಿದೆ.

ನಮ್ಮ ಸಂಸ್ಕೃತಿಯಲ್ಲಿ ಮಾತ್ರವಲ್ಲದೆ, ಸಾಮಾನ್ಯವಾಗಿ ಜನಮನದಲ್ಲಿಯೂ ಉತ್ತರದ ದಿಕ್ಕು ಎತ್ತರವನ್ನು ಸೂಚಿಸುತ್ತದೆ. ಆದ್ದರಿಂದ ಉತ್ತರ ದಿಕ್ಕಿನೆಡೆಗಿನ ಚಲನೆಯನ್ನು ಎತ್ತರಕ್ಕೇರುವ ಅಥವಾ ಮಂಗಳಕರ ಅಥವಾ ಪ್ರಗತಿಪರವೆಂದು ಪರಿಗಣಿಸಲಾಗುತ್ತದೆ. ಇದು, ನಮ್ಮ ಐಹಿಕ ಜೀವನಕ್ಕೆ ಮಾತ್ರವಲ್ಲದೆ ಆಧ್ಯಾತ್ಮಿಕ ಜೀವನಕ್ಕೂ ಅನ್ವಯಿಸುತ್ತದೆ.

ಮಾನವ ವ್ಯಕ್ತಿತ್ವಕ್ಕೆ ಮೂರು ಶರೀರಗಳಿವೆ. ಮೊದಲನೆಯದು, ಕಣ್ಣಿಗೆ ಕಾಣುವ ಸ್ಥೂಲ ಶರೀರ (gross body), ಎರಡನೆಯದು, ಶಕ್ತಿ/ಚೈತನ್ಯಮಯವಾದ ಸೂಕ್ಷ್ಮ ಶರೀರ (subtle body) ಹಾಗೂ ಮೂರನೆಯದು, ಯಾವುದೇ ಪ್ರತ್ಯೇಕ ಗುಣ-ಲಕ್ಷಣಗಳಿಲ್ಲದ ಕಾರಣ ಶರೀರ (casual body). ಉಪನಿಷತ್ತಿನಲ್ಲಿ ಉಲ್ಲೇಖಿಸಲಾಗಿರುವ ಪಂಚಕೋಶ ವ್ಯವಸ್ಥೆಯು ಸ್ಥೂಲ- ಸೂಕ್ಷ್ಮ- ಕಾರಣ ಶರೀರಗಳು ಪರಸ್ಪರ ಹೇಗೆ ಒಂದಕ್ಕೊಂದು ಸಂಬಂಧಿಸಿವೆ ಎಂಬುದನ್ನು ವಿವರಿಸುತ್ತದೆ.

ಪಂಚೇಂದ್ರಿಯಗಳಿಂದ ಕೂಡಿದ ಸ್ಥೂಲ ಶರೀರವು ಪಂಚ ಮಹಾಭೂತಗಳಾದ ಆಕಾಶ, ವಾಯು, ಅಗ್ನಿ, ಜಲ ಮತ್ತು ಪೃಥ್ವಿಗಳಿಂದ ರಚಿತವಾಗಿದ್ದು, ಪ್ರಾಣಶಕ್ತಿಯ ಪ್ರಭಾವದಿಂದ ಕಾರ್ಯ ನಿರ್ವಹಿಸುತ್ತದೆ. ಸ್ಥೂಲ ಶರೀರವನ್ನು ಅನ್ನಮಯ ಕೋಶವೆಂದೂ, ಸ್ಥೂಲ ಶರೀರದಲ್ಲಿ ಸರ್ವಕ್ರಿಯೆಗಳಿಗೆ ಆಧಾರವಾದ ಪ್ರಾಣಶಕ್ತಿಯನ್ನು ಪ್ರಾಣಮಯ ಕೋಶವೆಂದೂ ಕರೆಯುತ್ತಾರೆ. ಸ್ಥೂಲ ಶರೀರವನ್ನು ಆಶ್ರಯಿಸಿರುವ ಯೋಚನೆ, ಭಾವನೆ ಮತ್ತು ಸ್ಮರಣೆಗಳ ಆಗರವಾದ ಮನಸ್ಸನ್ನು ಮನೋಮಯ ಕೋಶವೆಂದೂ, ಮನಸ್ಸನ್ನು ಮುನ್ನಡೆಸುವ ಬುದ್ಧಿಶಕ್ತಿಯನ್ನು ವಿಜ್ಞಾನಮಯ ಕೋಶವೆಂದೂ ಕರೆಯುತ್ತಾರೆ.

ಅನ್ನಮಯ ಕೋಶವು ಸ್ಥೂಲ ಶರೀರ; ಪ್ರಾಣಮಯ, ಮನೋಮಯ ಮತ್ತು ವಿಜ್ಞಾನಮಯ ಈ ಮೂರು ಕೋಶಗಳೂ ಸೇರಿರುವುದು, ಸೂಕ್ಷ್ಮ ಶರೀರ. ಪ್ರಾಣಶಕ್ತಿಯು ಅಂತ್ಯದಲ್ಲಿ ಸ್ಥೂಲ ಶರೀರವನ್ನು ತ್ಯಜಿಸಿದಾಗ ಮರಣವು ಸಂಭವಿಸುತ್ತದೆ. ಮರಣ ಕಾಲದಲ್ಲಿ, ಸೂಕ್ಷ್ಮ ಶರೀರವು, ಸ್ಥೂಲ ಶರೀರವನ್ನು ಬಿಟ್ಟುಹೋಗುತ್ತದೆ. ಸ್ಥೂಲ ಶರೀರದ ಅಂತರಂಗವು ಸೂಕ್ಷ್ಮ ಶರೀರವಾದರೆ, ಸೂಕ್ಷ್ಮಶರೀರದ ಅಂತರಂಗವು ಕಾರಣ ಶರೀರ ಅಥವಾ ಆನಂದಮಯ ಕೋಶ. ಇದು ಯಾವುದೇ ಗುಣ-ಲಕ್ಷಣಗಳಿಲ್ಲದ ಪರಿಶುದ್ಧ ಆನಂದದ ನೆಲೆ.

ಮೇಲೆ ಹೇಳಿರುವ ಸ್ಥೂಲ, ಸೂಕ್ಷ್ಮ ಹಾಗೂ ಕಾರಣ ಶರೀರಗಳು ಮತ್ತು ಅವುಗಳ ಕಾರ್ಯವಿಧಾನಗಳ ಬಗ್ಗೆ ಇಷ್ಟೆಲ್ಲಾ ತಿಳಿಯುವುದರಿಂದ ನಮಗೇನು ಪ್ರಯೋಜನ? ಎಲ್ಲಾ ಜೀವಿಗಳ ಅಂತಿಮ ಗಮ್ಯವಾದ ಆನಂದದ ತಾಣವಾದ ಕಾರಣ ಶರೀರವನ್ನು ಅನುಭವಿಸಲು ಸ್ಥೂಲ ಹಾಗೂ ಸೂಕ್ಷ್ಮ ಶರೀರಗಳ ಹಂತವನ್ನು ಮೀರಿ ಮೇಲೆ ಹೋಗಬೇಕಾಗುತ್ತದೆ; ಇದು ನಮ್ಮ ಆಧ್ಯಾತ್ಮಿಕ ಪಯಣದಲ್ಲಿ ಅತ್ಯವಶ್ಯಕ. ಹೇಗೆ ನಮ್ಮ ದೈಹಿಕ ಬಲಹೀನತೆಯನ್ನು, ನಾವು ದೈನಂದಿನ ವ್ಯಾಯಾಮ- ಕಸರತ್ತುಗಳಿಂದ ಗೆಲ್ಲಬಹುದೋ, ಅಂತೆಯೇ ಮಾನಸಿಕ ಬಲಹೀನತೆಯನ್ನೂ ನಾವು ದೈನಂದಿನ ಧ್ಯಾನದ ಅಭ್ಯಾಸದಿಂದ ಹಂತಹಂತವಾಗಿ ಗೆಲ್ಲಬಹುದಾಗಿದೆ. ಧ್ಯಾನವು ಮನಸ್ಸಿಗೆ ವ್ಯಾಯಾಮವಿದ್ದಂತೆ!

ಪಂಚಕೋಶಗಳ ಪೈಕಿ ಪ್ರಾಣಮಯ ಕೋಶವು ಎರಡನೆಯದು. ಪ್ರಾಣಶಕ್ತಿಯೇ ನಮ್ಮ ಸ್ಥೂಲ ಶರೀರ ಮತ್ತು ಮನಸ್ಸುಗಳ ಸರ್ವಕ್ರಿಯೆಗಳ ಚಾಲಕ ಶಕ್ತಿ. ಈ ಪ್ರಾಣಶಕ್ತಿಯು ನಮ್ಮ ದೇಹದಲ್ಲಿ, ಪಾನ, ಅಪಾನ, ವ್ಯಾನ, ಉದಾನ ಮತ್ತು ಸಮಾನ ಎಂಬ ಐದು ರೂಪಗಳಲ್ಲಿ ಪ್ರಕಟವಾಗಿ ಸರ್ವಕ್ರಿಯೆಗಳನ್ನು ನಡೆಸುತ್ತದೆ. ಈ ಪ್ರಾಣಶಕ್ತಿಯು ನಮ್ಮ ದೇಹದಲ್ಲಿ ಏಳು ಶಕ್ತಿಕೇಂದ್ರಗಳಾದ ಚಕ್ರಗಳಲ್ಲಿ ನೆಲೆಸಿರುತ್ತದೆ. ಒಂದೊಂದು ಚಕ್ರವೂ ನಮ್ಮಲ್ಲಿನ ಒಂದೊಂದು ರೀತಿಯ ಕ್ರಿಯೆಗೆ ಮೂಲವಾಗಿರುತ್ತದೆ. ಈ ಏಳು ಚಕ್ರಗಳ ವ್ಯವಸ್ಥೆಯೇ ನಮ್ಮ ಎಲ್ಲಾ ದೈಹಿಕ ಹಾಗೂ ಮಾನಸಿಕ ಕ್ರಿಯೆಗಳಿಗೆ ಕೀಲಿಕೈ ಆಗಿದೆ. ಇದರ ಬಗ್ಗೆ ನಾವೀಗ ತಿಳಿಯೋಣ.

ನಮ್ಮ ದೇಹದಲ್ಲಿರುವ ಶಕ್ತಿಕೇಂದ್ರಗಳನ್ನು ಚಕ್ರಗಳೆಂದು ಕರೆಯುತ್ತಾರೆ. ಅಂತಹ ಏಳು ಚಕ್ರಗಳು ನಮ್ಮ ಸೂಕ್ಷ್ಮ ಶರೀರದಲ್ಲಿದ್ದು, ಪ್ರಾಣಶಕ್ತಿಯು ಯಾವ ಚಕ್ರದಲ್ಲಿ ನೆಲೆಯಾಗಿದೆಯೆಂಬುದು ನಮ್ಮ ಆಧ್ಯಾತ್ಮಿಕ ಪ್ರಗತಿಯ ಹಂತವನ್ನು ನಿರ್ಧರಿಸುತ್ತದೆ.

ಶರೀರದ ಅತ್ಯಂತ ಕೆಳಭಾಗದಲ್ಲಿರುವುದು ಮೂಲಾಧಾರ ಚಕ್ರ. ಬೆನ್ನೆಲುಬಿನ ಕೆಳಭಾಗದಲ್ಲಿ, ತೊಡೆಸಂದಿನ ಸಮೀಪದಲ್ಲಿ ನೆಲೆಯಾಗಿರುವ ಈ ಚಕ್ರವು, ದೇಹದ ತ್ಯಾಜ್ಯ ವಿಸರ್ಜನೆ ಹಾಗೂ ಸಂತಾನೋತ್ಪತ್ತಿ ಕ್ರಿಯೆಗೆ ಅವಶ್ಯಕವಾದ ಶಕ್ತಿಯನ್ನು ಹೊಂದಿರುತ್ತದೆ. ಮೇಲಿನಿಂದ ಕೆಳಮುಖವಾಗಿ ಹರಿಯುವ ಅಪಾನವೆಂಬ ಪ್ರಾಣವಾಯುವು, ಈ ಚಕ್ರದ ಕಾರ್ಯ ನಿರ್ವಹಣೆ ಮಾಡುತ್ತದೆ. ನಮ್ಮ ಹೆಚ್ಚಿನ ಪ್ರಾಣಶಕ್ತಿಯು ಈ ಚಕ್ರದಲ್ಲಿ ಕೇಂದ್ರೀಕೃತವಾಗಿದ್ದರೆ, ನಾವು ಹೆಚ್ಚಿನ ಸಮಯವನ್ನು ಆಹಾರ, ವಿಸರ್ಜನೆ ಮತ್ತು ಸಂತಾನೋತ್ಪತ್ತಿಗಳಿಗೆ ಸಂಬಂಧಿಸಿದ ಪ್ರವೃತ್ತಿಗಳಲ್ಲಿಯೇ (basal instincts) ತೊಡಗಿಸಿಕೊಳ್ಳುತ್ತೇವೆ.

ಮುಂದಿನದು, ನಮ್ಮ ನಾಭಿ ಹಾಗೂ ತೊಡೆಸಂದುಗಳ ನಡುವೆ ಇರುವ ಸ್ವಾಧಿಷ್ಠಾನ ಚಕ್ರ. ಈ ಚಕ್ರದಲ್ಲಿರುವ ಶಕ್ತಿಯು ದೇಹದಲ್ಲಿ ಜೀರ್ಣಕ್ರಿಯೆ, ಪೋಷಕಾಂಶಗಳ ಸಮೀಕರಣ (Assimilation) ಹಾಗೂ ಚಯಾಪಚಯ ಕ್ರಿಯೆಗಳಿಗೆ (Metabolism) ನೆರವಾಗುತ್ತದೆ. ಮೂಲಾಧಾರ ಚಕ್ರದಂತೆ ಈ ಚಕ್ರವೂ ಸಹ, ಮಾನವರಿಗೂ ಪಶುಗಳಿಗೂ ಸಮಾನವಾಗಿರುವ ಪ್ರವೃತ್ತಿ ಆಧಾರಿತ (Instinct Based) ಕ್ರಿಯೆಗಳಿಗೆ ನೆರವಾಗುತ್ತದೆ. ಈ ಚಕ್ರಕ್ಕೂ ಅಪಾನವಾಯುವೇ ಶಕ್ತಿಯನ್ನೊದಗಿಸುತ್ತದೆ.

ಅದರ ಮೇಲಿನ ಚಕ್ರವೇ ಮಣಿಪೂರಕ ಚಕ್ರ. ನಾಭಿಯ ಸ್ಥಾನದಲ್ಲಿರುವ ಈ ಚಕ್ರವು, ದೇಹದ ಮೇಲ್ಭಾಗ ಹಾಗೂ ಕೆಳಭಾಗಗಳ ಕಾರ್ಯಗಳನ್ನು ಸಮೀಕರಿಸಿ ನಿರ್ವಹಿಸಲು ಸಹಕರಿಸುವುದಲ್ಲದೆ, ಉಸಿರಾಟ, ರಕ್ತ ಪರಿಚಲನೆ, ಪಚನ ಕ್ರಿಯೆ ಹಾಗೂ ವಿಸರ್ಜನಾ ಕ್ರಿಯೆಗಳ ನಡುವೆ ಹೊಂದಾಣಿಕೆಯನ್ನು ಒದಗಿಸುತ್ತದೆ. ಈ ಚಕ್ರದಲ್ಲಿರುವ ಸಮಾನವಾಯುವು ಮೇಲಿನ ಎಲ್ಲಾ ಕ್ರಿಯೆಗಳಲ್ಲೂ ಸಮತೋಲನವನ್ನು ಕಾಪಾಡುತ್ತದೆ. ಅದೇ ಕಾರಣಕ್ಕೆ, ಗರ್ಭದಲ್ಲಿರುವ ಮಗುವಿನಲ್ಲಿ ತಾಯಿಯಿಂದ ಬಂದ ಪೋಷಕಾಂಶಗಳು, ಕರುಳುಬಳ್ಳಿಯ ಮೂಲಕ ನಾಭಿಯಲ್ಲಿ ಸ್ವೀಕರಿಸಲ್ಪಟ್ಟು, ಸಮಾನವಾಯುವಿನ ಸಹಾಯದಿಂದ ಶಿಶುವಿನ ದೇಹದ ಎಲ್ಲಾ ಭಾಗಗಳಿಗೆ ವಿತರಿಸಲ್ಪಡುತ್ತದೆ.

ನಂತರದ ಚಕ್ರವೇ ಅನಾಹತ ಚಕ್ರ. ಇದು ನಮ್ಮ ಹೃದಯದ ಭಾಗದಲ್ಲಿ ಎರಡು ಶ್ವಾಸಕೋಶಗಳ ನಡುವೆ, ವಪೆಯ (Diaphragm) ಮೇಲೆ ಕೇಂದ್ರೀಕೃತವಾಗಿರುತ್ತದೆ. ಕೈಕಾಲುಗಳ ಚಲನೆ ಮತ್ತು ಎಲ್ಲಾ ಅಂಗಗಳ ಕ್ರಿಯೆಗಳನ್ನು ನಿರ್ವಹಿಸುವ ಈ ಚಕ್ರದಲ್ಲಿ ಪ್ರಾಣಶಕ್ತಿಯು ವ್ಯಾನವಾಯುವಿನ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ.

ಇದು ಬಹಳ ಪ್ರಭಾವಶಾಲಿ ಚಕ್ರವಾಗಿದ್ದು, ವ್ಯಾನವಾಯುವು ಶಕ್ತಿಯನ್ನು ದೇಹದ ಸರ್ವ ಅಂಗಾಂಗಗಳಿಗೆ ಸಮಾನವಾಗಿ ಹರಡುವಂತೆ ಮಾಡಿ, ಯಾವುದೇ ಅಸಮತೋಲನವಿಲ್ಲದಿರುವಂತೆ ನೋಡಿಕೊಳ್ಳುತ್ತದೆ. ನಾವು ನಮ್ಮ ಹೃದಯಭಾಗದಲ್ಲಿ ಅನುಭವಿಸುವ ಭಾವನೆಗಳನ್ನು ನಿಯಂತ್ರಿಸಿ, ಅನಾಹತ ಚಕ್ರದ ಮೇಲೆ ಹಿಡಿತವನ್ನು ಸಾಧಿಸಿದರೆ, ನಮಗೆ ಮನೋನಿಯಂತ್ರಣ ಶಕ್ತಿಯು ಸಿದ್ಧಿಸುತ್ತದೆ.

ಮುಂದಿನ ಚಕ್ರ ವಿಶುದ್ಧಿ ಚಕ್ರ. ಇದು ಗಂಟಲಿನ ತಳಭಾಗದಲ್ಲಿ ಕೇಂದ್ರೀಕೃತವಾಗಿದ್ದು, ಮೇಲ್ಮುಖವಾಗಿ ಚಲಿಸುವ ಉದಾನವಾಯುವು ಈ ಚಕ್ರದಲ್ಲಿ ಕಾರ್ಯನಿರ್ವಹಿಸುತ್ತದೆ. ನಮ್ಮ ನಿಶ್ವಾಸಕ್ರಿಯೆಗೆ ನೆರವಾಗುವ ಈ ವಾಯುವು ಉತ್ತಮ ಆಲೋಚನಾಶಕ್ತಿ ಮತ್ತು ವಾಕ್-ಶಕ್ತಿಗಳನ್ನು ನೀಡುತ್ತದೆ. ಈ ಚಕ್ರದ ಮೇಲಿನ ಹಿಡಿತವು ಒಬ್ಬ ವ್ಯಕ್ತಿಯನ್ನು ಉತ್ತಮ ವಾಗ್ಮಿ ಅಥವಾ ತತ್ವಜ್ಞ ಅಥವಾ ಕವಿಯನ್ನಾಗಿ ಪರಿವರ್ತಿಸಬಲ್ಲದು.

ಚಕ್ರಗಳ ಮೇಲ್ಮುಖ ಅನುಕ್ರಮಣಿಕೆಯಲ್ಲಿ ಬರುವ ಆರನೆಯ ಚಕ್ರವೇ ಮೂರನೆಯ ಕಣ್ಣು ಎಂದು ಕರೆಯಲ್ಪಡುವ ಆಜ್ಞಾ ಚಕ್ರ. ಭ್ರೂಮಧ್ಯದಲ್ಲಿರುವ (ಎರಡು ಹುಬ್ಬುಗಳು ಸಂಧಿಸುವ ಸ್ಥಳ) ಆಜ್ಞಾ ಚಕ್ರವು ಮೆದುಳಿನ ಮಧ್ಯಭಾಗದ ಮುಂದೆ ಸ್ಥಿತವಾಗಿದೆ. ಈ ಚಕ್ರವು ಅತ್ಯಂತ ಶಕ್ತಿಶಾಲಿಯಾಗಿದ್ದು, ಮುಖ್ಯ ಪ್ರಾಣವಾಯುವು ಇದರ ಆಧಾರ.

ಈ ಚಕ್ರದ ಮೇಲೆ ಹಿಡಿತ ಸಾಧಿಸಿದಲ್ಲಿ ಒಬ್ಬ ವ್ಯಕ್ತಿಯು ಅತೀಂದ್ರಿಯ (ಭೌತಿಕ ಸಂವೇದನಾತೀತ) ವಿಷಯಗಳನ್ನು ಅಥವಾ ವ್ಯಕ್ತಿ- ಜೀವಿ- ವಸ್ತುಗಳನ್ನು ಗ್ರಹಿಸಬಲ್ಲನು. ಈ ಕಾರಣದಿಂದಲೇ ದೇವ- ದೇವತೆಗಳ ಸ್ವರೂಪವನ್ನು ಚಿತ್ರಿಸುವಾಗ ಅವರ ಅತೀಂದ್ರಿಯ ಶಕ್ತಿಯನ್ನು ಬಿಂಬಿಸುವ ಮೂರನೆಯ ಕಣ್ಣನ್ನೂ ಸಾಂಕೇತಿಕವಾಗಿ ತೋರಿಸಲಾಗುತ್ತದೆ. ಶಿವನನ್ನು ತ್ರಿನೇತ್ರ ಅಥವಾ ಮುಕ್ಕಣ್ಣನೆಂದೇ ಕರೆಯುತ್ತಾರಲ್ಲವೇ?

ಅಂತಿಮ ಹಾಗೂ ಪರಮ ಆನಂದದ ಅನುಭವಕ್ಕೆ ದ್ವಾರವಾಗಿರುವ ಚಕ್ರವೆಂದರೆ, ನೆತ್ತಿಯ ಕೇಂದ್ರಭಾಗದಲ್ಲಿ ಗುರುತಿಸಲ್ಪಡುವ ಸಹಸ್ರಾರ ಚಕ್ರ. ಇದರ ಆಧಾರವೂ ಮುಖ್ಯ ಪ್ರಾಣ ವಾಯುವೇ ಆಗಿದೆ. ಈ ಚಕ್ರವನ್ನು, ವ್ಯಕ್ತಿಯ ಆಧ್ಯಾತ್ಮಿಕ ಸಾಮರ್ಥ್ಯಗಳ ಬೆಳವಣಿಗೆಯನ್ನು ಸಂಕೇತಿಸುವ, ಸಹಸ್ರದಳ ಕಮಲದಿಂದ ಕಲ್ಪಿಸಲಾಗುತ್ತದೆ.

ಸ್ಥೂಲ ಹಾಗೂ ಸೂಕ್ಷ್ಮ ಶರೀರಾನುಭವಗಳ ಹಂತವನ್ನು ಮೀರಿ ಪಡೆವ, ‘ಕಾರಣಶರೀರ’ದ ಅನುಭವಗಳಿಗೆ ಈ ಚಕ್ರವು ಪ್ರವೇಶದ್ವಾರವಾಗಿದೆ. ಅದರರ್ಥ, ಮೂಲಾಧಾರದಿಂದ ವಿಶುದ್ಧಿ ಚಕ್ರಗಳ ಹಂತದವರೆಗೆ ವ್ಯಕ್ತಿಯು ಸ್ಥೂಲ ಶರೀರದ ವಿವಿಧ ಅನುಭವಗಳನ್ನು ಪಡೆಯುತ್ತಾ ಬಂದು, ಆಜ್ಞಾ ಚಕ್ರದ ಮೂಲಕ ಸೂಕ್ಷ್ಮ ಶರೀರದ ಅನುಭವಗಳನ್ನು ಪಡೆಯುತ್ತಾನೆ. ಆದರೆ, ಯಾರು ಮೂಲಾಧಾರದಲ್ಲಿ ನೆಲೆಸಿರುವ ಪ್ರಾಣಶಕ್ತಿಯನ್ನು ತನ್ನ ಸಾಧನೆಯಿಂದ ಆರು ಚಕ್ರಗಳ ಮೂಲಕ ಊರ್ಧ್ವಮುಖವಾಗಿ ಚಲಿಸುವಂತೆ ಮಾಡಿ, ಸಹಸ್ರಾರ ಚಕ್ರಕ್ಕೆ ತಲುಪಿಸುತ್ತಾನೆಯೋ, ಆತನು ಮಾತ್ರವೇ ‘ಕಾರಣ ಶರೀರ’ದ ಆನಂದವನ್ನು ಅನುಭವಿಸಬಹುದು.

ರೂಪ- ನಾಮಗಳನ್ನು ಮೀರಿದ ಪರಿಶುದ್ಧ- ಪೂರ್ಣ ಪ್ರಜ್ಞೆಯಲ್ಲಿ ಲೀನವಾಗಿ ಪಡೆಯುವ ಯೋಗದ ಅತ್ಯುನ್ನತ ಅನುಭವವನ್ನೇ ಆತ್ಮಜ್ಞಾನ ಅಥವಾ ಆತ್ಮಸಾಕ್ಷಾತ್ಕಾರವೆಂದು ತಿಳಿಯಲಾಗಿದೆ. ಇದನ್ನೇ ಸತ್- ಚಿತ್- ಆನಂದದ ಸ್ಥಿತಿಯೆಂದೂ ಕರೆಯುತ್ತಾರೆ.

ಈಗ ನಾವು, ನಮ್ಮ ಪ್ರಾಣಶಕ್ತಿಯನ್ನು ಮೂಲಾಧಾರದಿಂದ, ಆಧ್ಯಾತ್ಮಿಕ ಪಯಣದ ಗಮ್ಯವಾದ ಸತ್- ಚಿತ್- ಆನಂದ ಸ್ಥಿತಿಯ ತಾಣವಾದ ಸಹಸ್ರಾರ ಚಕ್ರದೆಡೆಗೆ ಏರುವಂತೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ನಮ್ಮ ಸೂಕ್ಷ್ಮ ಶರೀರದಲ್ಲಿ, ಮೂಲಾಧಾರದಿಂದ ಹಿಡಿದು ಸಹಸ್ರಾರದವರೆಗೆ ಸಪ್ತಚಕ್ರಗಳನ್ನು ಸುಷುಮ್ನಾ, ಇಡಾ ಮತ್ತು ಪಿಂಗಳಾ ಎಂಬ ಮೂರು ಲಂಬವಾದ ನಾಡಿಗಳು ಜೋಡಿಸುತ್ತವೆ. ನಮ್ಮ ಸ್ಥೂಲ ಶರೀರದ ಬೆನ್ನುಹುರಿಯ ಮೂಲಕ ಈ ನಾಡಿಗಳು ಹಾದುಹೋಗುತ್ತವೆಯೆಂದು ನಾವು ಭಾವಿಸಬಹುದು. ಮೂಲಾಧಾರ ಚಕ್ರದಲ್ಲಿ ಕುಂಡಲಿನಿ ಶಕ್ತಿಯು ಸುತ್ತಿಕೊಂಡ ಸರ್ಪದೋಪಾದಿಯಲ್ಲಿ ಕೇಂದ್ರಿತವಾಗಿರುತ್ತದೆ. ಸುತ್ತಿಕೊಂಡ ಸರ್ಪವು ಕುಂಡಲಿನಿ ಶಕ್ತಿಯ ಸಂಕೇತ.

ಮೂರು ನಾಡಿಗಳ ಪೈಕಿ, ಸುಷುಮ್ನಾ ನಾಡಿಯು ಬೆನ್ನುಹುರಿಯ ಮಧ್ಯದಲ್ಲಿದ್ದು, ಇಡಾ ನಾಡಿಯು ಎಡಭಾಗದಲ್ಲಿಯೂ, ಪಿಂಗಳಾ ನಾಡಿಯು ಬಲಭಾಗದಲ್ಲಿಯೂ ಇರುತ್ತದೆ. ಕುಂಡಲಿನಿ ಶಕ್ತಿಯು ಮಧ್ಯದಲ್ಲಿರುವ ಸುಷುಮ್ನಾ ನಾಡಿಯ ಮೂಲಕ ಮೂಲಾಧಾರದಿಂದ ಸಹಸ್ರಾರದವರೆಗೆ ಮೇಲೇರಬಹುದು. ಇಡಾ ನಾಡಿಯು ದೇಹದ ಎಡಭಾಗಕ್ಕೆ ಮತ್ತು ಪಿಂಗಳಾ ನಾಡಿಯು ಬಲಭಾಗಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಇಡಾ ಹಾಗೂ ಪಿಂಗಳಾ ನಾಡಿಗಳಲ್ಲಿನ ಶಕ್ತಿಯಲ್ಲಿ ಸಮತೋಲನವನ್ನು ಸಾಧಿಸುವುದರಿಂದ ಒಬ್ಬ ಸಾಧಕನು ಕುಂಡಲಿನಿ ಶಕ್ತಿಯನ್ನು ಸುಷುಮ್ನಾ ನಾಡಿಯ ಮೂಲಕ ಮೇಲೇರಿಸಬಹುದು.

ಕುಂಡಲಿನಿ ಶಕ್ತಿಯನ್ನು ಮೇಲೇರುವಂತೆ ಮಾಡಲು, ಕ್ರಿಯಾ ಯೋಗ, ಹಠ ಯೋಗ, ಲಯ ಯೋಗ ಮುಂತಾದ ಹಲವು ಸಾಧನಾಪಥಗಳನ್ನು ವಿವಿಧ ಗುರುಗಳು ಉಪದೇಶಿಸಿದ್ದಾರೆ. ಈ ಎಲ್ಲಾ ಪಥಗಳಲ್ಲಿಯೂ, ಸಾಧಕನು ಕೆಲವು ದೈಹಿಕ ಮತ್ತು ಮಾನಸಿಕ ಸಂಯಮವಿಧಿಗಳನ್ನು ಶ್ರದ್ಧೆಯಿಂದ ಅನುಸರಿಸಬೇಕಾಗಿರುತ್ತದೆ. ಮೂಲಾಧಾರದಲ್ಲಿ ನೆಲೆಸಿರುವ ಕುಂಡಲಿನಿ ಶಕ್ತಿಯನ್ನು ಊರ್ಧ್ವಮುಖವಾಗಿ ಹರಿಸಿ ಸಹಸ್ರಾರ ಚಕ್ರದಲ್ಲಿ ಐಕ್ಯವಾಗುವಂತೆ ಮಾಡುವುದೇ ಎಲ್ಲಾ ಪಥಗಳ ಗಮ್ಯ. ಇದನ್ನು ನಾವು ನೀರನ್ನು ಗುರುತ್ವಾಕರ್ಷಣ ಶಕ್ತಿಯ ವಿರುದ್ಧ ಮೇಲ್ಮುಖವಾಗಿ ಒಂದು ಲಂಬವಾದ ಕೊಳವೆಯ ಮೂಲಕ ಹರಿಸುವ ಕ್ರಿಯೆಗೆ ಸ್ಥೂಲವಾಗಿ ಹೋಲಿಸಬಹುದು.

ಇದನ್ನು ಸಾಧಿಸಬೇಕಾಗಿದ್ದರೆ, ಮೊದಲು ನೀರನ್ನು ಮೇಲಕ್ಕೆ ತಳ್ಳಲು ಅಗತ್ಯವಾದ ಒತ್ತಡವಿರಬೇಕು. ಅಲ್ಲದೆ, ಆ ಕೊಳವೆಯಲ್ಲಿ ಯಾವುದೇ ರಂಧ್ರಗಳಿರಬಾರದು; ರಂಧ್ರಗಳಿದ್ದರೆ ನೀರಿನ ದುರ್ವ್ಯಯವಾಗುತ್ತದೆ. ಅಷ್ಟೇ ಅಲ್ಲದೆ, ಕೊಳವೆಯು ಪೂರ್ಣ ನೇರ ಮತ್ತು ಲಂಬವಾಗಿರಬೇಕು.

ಯೋಗಾಭ್ಯಾಸದಲ್ಲಿನ ಆಸನಗಳು ನಮ್ಮ ಬೆನ್ನುಹುರಿಯನ್ನು, ತನ್ಮೂಲಕ ಸುಷುಮ್ನ ನಾಡಿಯನ್ನು ನೇರವಾಗಿ ಇರುವಂತೆ ಮಾಡುತ್ತವೆ. ಇದಕ್ಕೆ ವಿವಿಧ ಬಂಧಗಳು ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ಪ್ರಾಣಾಯಾಮಗಳೂ ಸಹಾಯ ಮಾಡುತ್ತವೆಯಲ್ಲದೆ, ನಾಡಿಗಳನ್ನು ಸದೃಢವಾಗಿರಿಸುತ್ತವೆ. ಬ್ರಹ್ಮಚರ್ಯ, ಉಪವಾಸ, ಮೌನ, ದೈಹಿಕ ಹಾಗೂ ಮಾನಸಿಕ ಕ್ರಿಯೆಗಳ ನಿಯಂತ್ರಣ- ಮುಂತಾದ ಸಾಧನೆಗಳು, ಸಪ್ತ ಚಕ್ರಗಳಲ್ಲಿ ನೆಲೆಸಿರುವ ಪಂಚ ಪ್ರಾಣವಾಯುಗಳ ದುರ್ವ್ಯಯವನ್ನು ತಡೆದು, ಕುಂಡಲಿನಿ ಶಕ್ತಿಯ ಊರ್ಧ್ವಮುಖ ಚಲನೆಗೆ ಅಗತ್ಯವಾದ ಶಕ್ತಿಯನ್ನು ನೀಡುತ್ತವೆ.

ಪತಂಜಲಿ ಯೋಗಶಾಸ್ತ್ರ, ಹಠಯೋಗ ಪ್ರದೀಪಿಕಾ, ಯೋಗ ಕುಂಡಲಿನಿ ಉಪನಿಷತ್ತು ಮುಂತಾದ ಯೋಗಶಾಸ್ತ್ರ ಗ್ರಂಥಗಳಲ್ಲದೆ, ಶಿವ ಪುರಾಣ ಮತ್ತು ಪದ್ಮ ಪುರಾಣಗಳೂ ಮೇಲೆ ಹೇಳಿರುವ ಯೋಗಸಾಧನೆಗಳ ಬಗ್ಗೆ ವಿವರವಾಗಿ ತಿಳಿಸುತ್ತವೆ.

ನನ್ನ ಗುರು ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರು ಸಹ ನನಗೆ ಕುಂಡಲಿನಿ ಸಾಧನೆಯ ಕುರಿತು ಪ್ರತಿಯೊಂದು ಹಂತದಲ್ಲಿಯೂ ಮಾರ್ಗದರ್ಶನ ನೀಡಿದ್ದರು. ಕುಂಡಲಿನಿ ಶಕ್ತಿಯ ಪ್ರಚೋದನೆಯನ್ನು ಹೇಗೆ ಮಾಡಬೇಕು, ಪ್ರತಿಯೊಂದು ಚಕ್ರದಲ್ಲಿ ಕುಂಡಲಿನಿ ಶಕ್ತಿಯ ಧಾರಣೆಯನ್ನು ಹೇಗೆ ಮಾಡಬೇಕು, ಅದರಿಂದ ಉಂಟಾಗುವ ವಿಶೇಷ ಅನುಭವಗಳನ್ನು ಹೇಗೆ ಸ್ವೀಕರಿಸಬೇಕು, ಈ ಸಾಧನೆಯಿಂದ ಲಭ್ಯವಾಗುವ ಶಕ್ತಿಗಳನ್ನು ಯಾವ ರೀತಿ ಉಪಯೋಗಿಸಬೇಕು ಈ ಎಲ್ಲಾ ವಿಚಾರಗಳಲ್ಲಿಯೂ ಅವರು ಹೆಜ್ಜೆಹೆಜ್ಜೆಗೂ ಮಾರ್ಗದರ್ಶನ ನೀಡುತ್ತಿದ್ದರು.

ಅದಕ್ಕಿಂತ ಮುಖ್ಯವಾಗಿ, ಇಂತಹ ವಿಶೇಷ ಅನುಭವ ಹಾಗೂ ಶಕ್ತಿಗಳಿಂದ ಆಕರ್ಷಿತನಾಗಿ ಅವುಗಳಲ್ಲಿಯೇ ಮೈಮರೆತು, ಸುಸಮಯದಲ್ಲಿ ಎಲ್ಲಾ ಶಕ್ತಿಗಳನ್ನೂ ಸಹಸ್ರಾರ ಚಕ್ರದಲ್ಲಿ ಐಕ್ಯಗೊಳಿಸಿ ಪರಮೋಚ್ಚ ಆನಂದವನ್ನು ಗಳಿಸುವ ಅತ್ಯುನ್ನತ ಗುರಿಯಿಂದ ಎಂದಿಗೂ ವಿಚಲಿತನಾಗಬಾರದೆಂದು ನನ್ನನ್ನು ಆಗಾಗ್ಗೆ ಎಚ್ಚರಿಸುತ್ತಿದ್ದರು.

ಆ ಪರಮೋಚ್ಚ ಆನಂದದ ಸ್ಥಿತಿಯಲ್ಲಿಯೇ ಸದಾ ಇರಬೇಕೆಂಬ ಆಕರ್ಷಣೆಯು ನನ್ನಲ್ಲಿ ಸಹಜ. ಆದರೆ, ದಿನನಿತ್ಯ ಸುಮಾರು ಒಂದು ಕೋಟಿ ಶಾಲಾ ಮಕ್ಕಳಿಗೆ ಪೋಷಣೆ, ಸಹಸ್ರಾರು ರೋಗಿಗಳಿಗೆ ಆರೋಗ್ಯ, ಸಾವಿರಾರು ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ಒದಗಿಸುವ ಜಾಗತಿಕ ಮಾನವೀಯ ಸೇವಾ ಅಭಿಯಾನದ ಜವಾಬ್ದಾರಿಯನ್ನು ಹೊತ್ತಿರುವುದರಿಂದ, ನಾನು ಕ್ರಿಯಾಶೀಲನಾಗದೆ ಸದಾ ಪರಮಾನಂದದ ಸ್ಥಿತಿಯಲ್ಲಿಯೇ ಸುಮ್ಮನೇ ಕುಳಿತಿರುವುದು ಅಸಾಧ್ಯವಷ್ಟೆ! ಮೇಲೆ ಹೇಳಿದ ಸಾಧನಾಪಥದಲ್ಲಿ ಪರಿಶ್ರಮ ವಹಿಸಿ ಮುನ್ನಡೆದು, ಯಾರು ಬೇಕಾದರೂ ಆತ್ಮಜ್ಞಾನವನ್ನು ಗಳಿಸಿ ಆನಂದವನ್ನು ಅನುಭವಿಸಬಹುದು.

ಈ ಆಧ್ಯಾತ್ಮ ವಿದ್ಯೆಯ ಅತ್ಯುತ್ತಮ ವಿಶಿಷ್ಟತೆಯೇನೆಂದರೆ, ಅದನ್ನು ಒಮ್ಮೆ ನಾವು ಕಲಿತರೆ ಸಾಕು, ಅದು ಜನ್ಮಜನ್ಮಗಳಲ್ಲಿಯೂ ನಮ್ಮೊಂದಿಗೆ ಇರುತ್ತದೆ. ಇತರ ಐಹಿಕ ವಿದ್ಯೆಗಳಾದರೋ ಒಂದು ಜನ್ಮದಲ್ಲಿ ಮಾತ್ರ ಪ್ರಯೋಜನಕ್ಕೆ ಬರುತ್ತವೆ! ಇಂತಹ ಶ್ರೇಷ್ಠ ಆಧ್ಯಾತ್ಮಿಕ ಜ್ಞಾನವನ್ನು ನಾವು ಇತರರ ಏಳಿಗೆಗೆ ಮಾತ್ರ ಉಪಯೋಗಿಸಬೇಕು; ಆಗ ಮಾತ್ರ ನಮ್ಮ ಆಧ್ಯಾತ್ಮಿಕ ಸಾಮರ್ಥ್ಯಗಳು ಸಾರ್ಥಕವಾಗುತ್ತವೆ!

(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net