ಸೈಕ್ಲಿಂಗ್ ಆರೋಗ್ಯದ ಕಿಂಗ್...: ಸೆಲೆಬ್ರಿಟಿ ಕಾರ್ನರ್​ನಲ್ಲಿ ಭಾಸ್ಕರ್ ರಾವ್​

Celeb Corner
Published on

‘ಮಕ್ಕಳಾಗಿದ್ದಾಗ ನಾವು ಬಳಸುವ ಮೊದಲ ಮಷಿನ್ ಎಂದರೆ ಸೈಕಲ್. ಹಾಗೆಯೇ, ಮೋಟಾರು ಗಾಡಿಯ ಸೆಳೆತ ಹೆಚ್ಚಾದಾಗ ನಾವು ದೂರಮಾಡುವ ಮೊದಲ ಮಷಿನ್ ಸಹ ಸೈಕಲ್...’-

ಇಂಥದ್ದೊಂದು ಜನಪ್ರಿಯ ಹೇಳಿಕೆಯನ್ನು ನೀವು ಕೇಳಿರಬಹುದು. ಎಷ್ಟು ನಿಜವಾದ ಮಾತಲ್ಲವೇ? ಪ್ರತಿಯೊಬ್ಬರು ಸಹ ಮಕ್ಕಳಾಗಿದ್ದಾಗ ಮೊದಲು ಆಸೆಪಡುವುದು ಸೈಕಲ್​ಗಾಗಿ. ಆದರೆ, ಯೌವನಕ್ಕೆ ಬರುತ್ತಿದ್ದಂತೆಯೇ ಬಹಳಷ್ಟು ಜನರ ಮನಸ್ಸಿನಿಂದ, ಬದುಕಿನಿಂದ ಸೈಕಲ್ ದೂರವಾಗುತ್ತದೆ.

ಸೈಕಲ್ ಎನ್ನುವುದು ಬರೀ ಸಾಧನವಷ್ಟೇ ಅಲ್ಲ. ಅದು ಒಳ್ಳೆಯ ಆರೋಗ್ಯದ ಗುಟ್ಟು ಸಹ ಹೌದು. ನಾವು ಆರೋಗ್ಯವಾಗಿರುವುದಕ್ಕೆ ದೈಹಿಕವಾಗಿ ಸಕ್ರಿಯವಾಗಿರಬೇಕು. ಹಾಗೆ ಸಕ್ರಿಯವಾಗಿರಲು ಜಾಗಿಂಗ್, ವಾಕಿಂಗ್, ಯೋಗ ... ಹೀಗೆ ಒಬ್ಬೊಬ್ಬರು ಒಂದೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಈ ಪೈಕಿ ಸೈಕ್ಲಿಂಗ್ ಸಹ ಒಂದು.

ಆರಂಭದಲ್ಲಿ ಸೈಕ್ಲಿಂಗ್ ಎನ್ನುವುದು ಸಾರಿಗೆಯ ಒಂದು ವಿಧಾನವಾಗಿತ್ತು. ಮೋಟಾರ್ ಬೈಕ್ ಅಥವಾ ಕಾರುಗಳ ಹಾವಳಿ ಹೆಚ್ಚಾಗಿರದ ಸಂದರ್ಭದಲ್ಲಿ ಸೈಕಲ್ ಶ್ರೀಮಂತಿಕೆಯ ಸಂಕೇತವೂ ಆಗಿತ್ತು. ಬೈಕ್ ಮತ್ತು ಕಾರ್​ಗಳು ಹೆಚ್ಚಾದಂತೆಲ್ಲ, ಸೈಕಲ್​ಗೆ ಬೇಡಿಕೆ ಕಡಿಮೆಯಾಯಿತು. ಆದರೆ, ಈಗ ಸೈಕಲ್​ನ್ನು ಬರೀ ಸಾರಿಗೆಯ ವಿಧಾನವೆಂದು ಪರಿಗಣಿಸಲಾಗುವುದಿಲ್ಲ ಅಥವಾ ಅದರಿಂದ ಬಡತನ-ಶ್ರೀಮಂತಿಕೆಯನ್ನು ಅಳೆಯಲಾಗುವುದಿಲ್ಲ. ಅದನ್ನು ಮೀರಿ ಸೈಕಲ್ ಮನುಷ್ಯನ ಒಳ್ಳೆಯ ಸಂಗಾತಿಯಾಗುತ್ತಿದೆ.

ನಿರಂತರವಾಗಿ ಸೈಕಲ್ ತುಳಿಯುವುದರಿಂದ ಬೊಜ್ಜು ಕರಗುತ್ತದೆ, ಇಮ್ಯೂನ್ ಸಿಸ್ಟಂ ಹೆಚ್ಚುತ್ತದೆ, ತೂಕ ಕಡಿಮೆಯಾಗುತ್ತದೆ, ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತವೆ, ಮಾನಸಿಕವಾಗಿ ನೆಮ್ಮದಿ ಸಿಗುತ್ತದೆ ಎಂದು ಹಲವು ಸಂಶೋಧನೆಗಳು ತಿಳಿಸಿವೆ. ಅಷ್ಟೇ ಅಲ್ಲ, ಇದರಿಂದ ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ ಮತ್ತು ಟ್ರಾಫಿಕ್ ಸಿಗ್ನಲ್​ಗಳಲ್ಲಿ ಕಾಯುವುದು ತಪು್ಪತ್ತದೆ ಎನ್ನುವುದು ಸಹ ಬಹಳ ಮುಖ್ಯವಾದ ವಿಷಯ. ಇವೆಲ್ಲಕ್ಕಿಂತ ಹೆಚ್ಚಾಗಿ, ಯಾವುದೇ ಒಂದು ನಾಡು ಅಥವಾ ನುಡಿಯ ಪರಿಚಯವಾಗಬೇಕು ಎಂದರೆ ಅದು ಸೈಕಲ್​ನಿಂದ ಮಾತ್ರ ಸಾಧ್ಯ. ಕಾರ್ ಅಥವಾ ಬಸ್​ನಲ್ಲಿ ಹೋದರೆ, ನಮಗೆ ಆ ಜಾಗದ, ಜನರ ವೈಶಿಷ್ಟ್ಯ ಗೊತ್ತಾಗುವುದಿಲ್ಲ. ಅದೇ ಸೈಕಲ್​ನಲ್ಲಿ ಪ್ರಯಾಣ ಮಾಡಿದರೆ, ನಮಗೆ ಆ ಜಾಗದ ಮತ್ತು ಅಲ್ಲಿನ ಸೊಗಡಿನ ನಿಕಟ ಪರಿಚಯವಾಗುತ್ತದೆ.

ನಾಲ್ಕು ವರ್ಷಗಳ ಹಿಂದಿನ ವಿಷಯ ಎಷ್ಟು ಜನರಿಗೆ ನೆನಪಿದೆಯೋ ಗೊತ್ತಿಲ್ಲ. ನಾನು ಬೆಂಗಳೂರಿನ ಪೊಲೀಸ್ ಕಮಿಷನರ್ ಆಗುವುದಕ್ಕಿಂತ ಮುಂದೆ ಕೆಲವು ವರ್ಷಗಳ ಕಾಲ ಕೆಎಸ್​ಆರ್​ಪಿಯಲ್ಲಿದ್ದೆ. ಈ ಸಂದರ್ಭದಲ್ಲಿ ಕೆಲವು ವಿಷಯಗಳನ್ನು ಗಮನಿಸಿದ್ದೆ. ಅದೊಂದು ಅದ್ಭುತ ಪಡೆಯಾದರೂ ಅಲ್ಲಿನ ಒಳರಾಜಕೀಯದಿಂದ ಹಲವರು ಬೇಸತ್ತಿದ್ದರು. ಕೆಲವರು ಡಿಪ್ರೆಶನ್​ಗೆ ಒಳಗಾಗಿದ್ದರು. ಅವರ ಆತ್ಮಸ್ಥೈರ್ಯ ಹೆಚ್ಚಿಸಬೇಕೆಂಬ ನಿಟ್ಟಿನಲ್ಲಿ ಬೀದರ್​ನಿಂದ ಬೆಂಗಳೂರಿಗೆ ಜಾಥಾ ಆಯೋಜಿಸಿದ್ದೆ. ನೂರಾರು ಕಿಲೋಮೀಟರ್​ಗಳ ಪ್ರಯಾಣಕ್ಕೆ ಥಾಯ್ಲೆಂಡ್​ನಿಂದ ಸೈಕಲ್​ಗಳನ್ನು ತರಿಸಲಾಗಿತ್ತು. ಸಿಬ್ಬಂದಿಯ ಫಿಟ್​ನೆಸ್ ಮತ್ತು ಆತ್ಮಸ್ಥೈರ್ಯ ಹೆಚ್ಚಿಸುವ ಜತೆಗೆ, ಈ ಜಾಥಾ ಉದ್ದಕ್ಕೂ ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡೇ ಬಂದೆವು. ಈ ಸಂದರ್ಭದಲ್ಲಿ ನಮ್ಮ ನಾಡಿನ ಸಂಸ್ಕೃತಿ ಮತ್ತು ಜನರನ್ನು ಇನ್ನಷ್ಟು ಹತ್ತಿರದಿಂದ ನೋಡುವುದಕ್ಕೆ ಸಾಧ್ಯವಾಯಿತು.

ನಾವು ಸೈಕ್ಲಿಂಗ್ ಮಾಡುವುದರ ಜತೆಗೆ, ರಾಜ್ಯದ ಹಲವು ಊರುಗಳಿಗೆ ಭೇಟಿಕೊಟ್ಟಿದ್ದೇವೆ. ಹಲವು ಊರುಗಳಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಆಯೋಜಿಸಿದ್ದೇವೆ. ಅಲ್ಲಿನ ಪರಿಸರವನ್ನು ಶುಚಿಗೊಳಿಸುವುದರ ಜತೆಗೆ, ಸಾವಿರಾರು ಗಿಡಗಳನ್ನು ನೆಟ್ಟಿದ್ದೇವೆ. ಹಲವು ಊರುಗಳಲ್ಲಿ ಕೋಮು ಸಾಮರಸ್ಯ ವೃದ್ಧಿಸಿದ್ದೇವೆ. ಶಾಲೆಯ ಮಕ್ಕಳ ಜತೆಗೆ ಸಂವಾದ ಮಾಡಿದ್ದೇವೆ. ನಮಗೆ ಗೊತ್ತಿದ್ದನ್ನು ಹೇಳಿಕೊಟ್ಟಿದ್ದೇವೆ. ಗೊತ್ತಿಲ್ಲದ ಹಲವು ವಿಷಯಗಳನ್ನು ಈ ಪ್ರಯಾಣದಲ್ಲಿ ಕಲಿತಿದ್ದೇವೆ. ಇದರ ಮರುವರ್ಷವೇ ಇಲಾಖೆಯ ಮಹಿಳೆಯರನ್ನು ಕರೆದುಕೊಂಡು ಬೆಳಗಾವಿಯಿಂದ ಬೆಂಗಳೂರಿನವರೆಗೆ ಇನ್ನೊಂದು ವಿಶೇಷ ಯಾತ್ರೆ ಬಂದಿದ್ದೆವು. ಈ ಬಾರಿ ನಮ್ಮ ಜತೆಗೆ ನಾಲ್ವರು ಐಎಎಸ್ ಅಧಿಕಾರಿಗಳು ಸಹ ಭಾಗವಹಿಸಿದ್ದರು. ಪ್ರತಿದಿನ ನೂರು ಕಿಲೋಮೀಟರ್​ಗಳನ್ನು ತುಳಿದು, ಐದು ದಿನಗಳಲ್ಲಿ ಈ ಯಾತ್ರೆ ಮುಗಿಸಿದ್ದವು. ಈ ಯಾತ್ರೆಗಳು ನಮಗೆ ಕೊಟ್ಟ ಅದ್ಭುತ ಮತ್ತು ಅನನ್ಯವಾದ ಅನುಭವವನ್ನು ಮರೆಯುವುದಕ್ಕೆ ಸಾಧ್ಯವಿಲ್ಲ.

ಇದೆಲ್ಲಕ್ಕೂ ಕಾರಣವಾಗಿದ್ದು ನನ್ನ ಸೈಕಲ್​ಪ್ರೀತಿ. ಈ ಪ್ರೀತಿ ಹಲವು ವರ್ಷಗಳ ಹಿಂದಿನದ್ದು. 1979ರಲ್ಲೇ ನನ್ನ ಏಓನ್ ಸೈಕಲ್​ನಲ್ಲಿ ಪಟ್ನಾದಿಂದ ಬನಾರಸ್​ಗೆ ಸೈಕಲ್ ಮೇಲೆ ಹೋಗಿದ್ದೆ. ಯೂಥ್ ಹಾಸ್ಟಲ್ ವತಿಯಿಂದ ಬೆಂಗಳೂರಿನಿಂದ ಬೆಳಗಾವಿಯವರೆಗೆ ಸೈಕಲ್​ನಲ್ಲಿ ಪ್ರಯಾಣ ಮಾಡಿದ್ದೆ. ಸಾರಿಗೆ ಆಯುಕ್ತನಾದ ಮೇಲೆ ‘ಟೂರ್ ಆಫ್ ನೀಲ್​ಗಿರೀಸ್’ ಎಂಬ ಯಾತ್ರೆಯಡಿ ಬೆಂಗಳೂರಿನಿಂದ ಊಟಿಗೆ ಸೈಕಲ್​ನಲ್ಲಿ ಹೋಗಿದ್ದೆ. ಬೆಳಗಾವಿಯಲ್ಲಿ ಐಜಿ ಆಗಿದ್ದಾಗ, ಭಾನುವಾರಗಳಂದು ಸೈಕಲ್​ನಲ್ಲೇ ಧಾರವಾಡಕ್ಕೆ ಹೋಗುತ್ತಿದ್ದೆ. ಹೀಗೆ ಸಮಯ ಮತ್ತು ಅವಕಾಶಗಳು ಸಿಕ್ಕಾಗಲೆಲ್ಲ ಸೈಕ್ಲಿಂಗ್ ಮಾಡುತ್ತಿದ್ದೆ. ಇದರಿಂದಲೇ ದೈಹಿಕವಾಗಿ ಮತ್ತು ಮಾನಸಿಕವಾಗಿ ಫಿಟ್ ಆಗಿರುವುದಕ್ಕೆ ಸಾಧ್ಯವಾಗಿದೆ.

ಒಂದು ಖುಷಿಯ ವಿಷಯವೆಂದರೆ, ಇಂದು ಸೈಕ್ಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಹಲವು ಸೈಕ್ಲಿಂಗ್ ಕ್ಲಬ್​ಗಳು ಹುಟ್ಟಿಕೊಂಡಿವೆ. ಈ ಮೂಲಕ ಸೈಕ್ಲಿಸ್ಟ್​ಗಳಿಗೆ ಒಳ್ಳೆಯ ವೇದಿಕೆ ನಿರ್ವಣವಾಗುತ್ತಿದೆ. ಬೆಂಗಳೂರು ಮೊದಲಿನಿಂದ ಯುವಕರ ನಗರ ಎಂದೇ ಜನಪ್ರಿಯ. ಏಕೆಂದರೆ, ಇಲ್ಲಿ ಐಟಿ-ಬಿಟಿ ಕಂಪನಿಗಳು ಹೆಚ್ಚಿದ್ದು, ಯುವ ಜನತೆ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆರಂಭದಲ್ಲಿ ಬೈಕ್, ಕಾರ್ ಎಂದು ಓಡಾಡಿಕೊಂಡಿದ್ದವರಿಗೆ, ಕ್ರಮೇಣ ಸೈಕಲ್​ನ ಮಹತ್ವ ಗೊತ್ತಾಗಿದೆ. ಅದೇ ಕಾರಣಕ್ಕೆ, ಇಂದು ಹಲವರು ವಾರಾಂತ್ಯಗಳಲ್ಲಿ ನಂದಿ ಬೆಟ್ಟ, ಕನಕಪುರ, ಮೈಸೂರು ಮುಂತಾದ ಕಡೆ ಸೈಕ್ಲಿಂಗ್ ಹೋಗುವುದಷ್ಟೇ ಅಲ್ಲ, ತಮ್ಮ ಆಫೀಸುಗಳಿಗೂ ಸೈಕಲ್​ಗಳಲ್ಲೇ ಹೋಗುತ್ತಿದ್ದಾರೆ. ಬೆಂಗಳೂರಿನಲ್ಲಿ ಕೆಲವು ಕಡೆ ಸೈಕ್ಲಿಂಗ್ ಟ್ರಾ್ಯಕ್​ಗಳು ಸಹ ಇದೆ. ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಸೈಕ್ಲಿಂಗ್ ಸಂಸ್ಕೃತಿಯೇ ನಶಿಸುತ್ತಿದೆ ಎನ್ನುವಂತಿತ್ತು. ಆದರೆ, ಇಂದು ಸೈಕ್ಲಿಂಗ್ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.

ಸರಿಯಾಗಿ ಪ್ರೋತ್ಸಾಹ ಕೊಟ್ಟರೆ, ಫ್ರಾನ್ಸ್, ಬೆಲ್ಜಿಯಂ, ನೆದರ್​ಲ್ಯಾಂಡ್ ಮಟ್ಟಕ್ಕೆ ನಾವೂ ಬೆಳೆಯಬಹುದು. ಅಲ್ಲೆಲ್ಲಾ ಸೈಕಲ್ ಬಳಸುವವರ ಸಂಖ್ಯೆ ದೊಡ್ಡದಿದೆ. ನಮ್ಮಲ್ಲೂ ಸೈಕಲ್ ಕಂಪನಿಗಳು ಅಪ್​ಡೇಟ್ ಆಗಿ, ಅತ್ಯಾಧುನಿಕ ಸೈಕಲ್​ಗಳನ್ನು ಹೊರತಂದರೆ ಪರಿಸ್ಥಿತಿ ಇನ್ನಷ್ಟು ಸುಧಾರಿಸುತ್ತದೆ. ಸೈಕ್ಲಿಂಗ್​ಗೆ ಖಂಡಿತಾ ಒಳ್ಳೆಯ ಭವಿಷ್ಯವಿದೆ. ಭಾರತದಲ್ಲಿ ಮುಂಬೈ, ಪುಣೆ, ಗುರ್ಗಾಂವ್​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈಕ್ಲಿಂಗ್ ಮಾಡುವವರಿದ್ದಾರೆ. ಬೇರೆ ನಗರಗಳನ್ನೆಲ್ಲ ಹಿಂದಿಕ್ಕಿ, ಬೆಂಗಳೂರು ದೇಶದ ಸೈಕ್ಲಿಂಗ್ ರಾಜಧಾನಿ ಆಗಬೇಕು ಎಂಬುದು ನನ್ನ ಆಸೆ.

(ಲೇಖಕರು ಹಿರಿಯ ಐಪಿಎಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net