ಆರೈಕೆದಾರರಿಗೂ ಮಾನಸಿಕ ರೋಗದ ಆತಂಕ!

Representative image
ಸಾಂದರ್ಭಿಕ ಚಿತ್ರ
Published on: 

ಕೆ.ಎಂ. ಪಂಕಜ ಬೆಂಗಳೂರು

ಪ್ರತಿ ನಿಮಿಷವೂ ಮುಖ್ಯ (Every Minute Counts) ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ ವಿಶ್ವ ಪಾರ್ಶ್ವವಾಯು ದಿನ ಆಚರಿಸಲಾಗುತ್ತಿದೆ. ಇದು ಪಾರ್ಶ್ವವಾಯುವಿನ ಲಕ್ಷಣಗಳನ್ನು ತ್ವರಿತವಾಗಿ ಗುರುತಿಸಿ, ತಕ್ಷಣವೇ ಕ್ರಮ ಕೈಗೊಳ್ಳಬೇಕಾದ ತುರ್ತು ಅಗತ್ಯವನ್ನು ಸಾರುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದರಿಂದ ಚೇತರಿಕೆಯ ಪ್ರಮಾಣವನ್ನು ಗಮನಾರ್ಹವಾಗಿ ಸುಧಾರಿಸಬಹುದು ಮತ್ತು ಅಂಗವೈಕಲ್ಯವನ್ನು ಕಡಿಮೆ ಮಾಡಬಹುದು. ಹಾಗಾಗಿ ತುರ್ತು ವೈದ್ಯಕೀಯ ಆರೈಕೆಯಲ್ಲಿ ವಿಳಂಬ ಮಾಡದೆ ತ್ವರಿತವಾಗಿ ಚಿಕಿತ್ಸೆ ಕೊಡಿಸುವ ಮೂಲಕ ಗಂಭೀರ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ.

ಮನುಷ್ಯ ಎಂದ ಮೇಲೆ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಇವುಗಳಲ್ಲಿ ಕೆಲವು ಕೇವಲ ರೋಗಿಗಳನ್ನು ಬಾಧಿಸಿದರೆ, ಬಹುತೇಕ ರೋಗಗಳು ಇಡೀ ಕುಟುಂಬವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಮಾನಸಿಕವಾಗಿ ಕಾಡುತ್ತವೆ. ಅಂತಹ ಕಾಯಿಲೆಗಳಲ್ಲಿ ಪ್ರಮುಖವಾದದ್ದು ಪಾರ್ಶ್ವವಾಯು. ಜಾಗತಿಕ ಮಟ್ಟದಲ್ಲಿ ಒಟ್ಟಾರೆ ಸಾವಿನಲ್ಲಿ ಮಿದುಳಿನ ಪಾರ್ಶ್ವವಾಯು ಎರಡನೇ ಹಾಗೂ ಅಂಗವೈಕಲ್ಯಕ್ಕೆ ಮೂರನೇ ಪ್ರಮುಖ ಕಾರಣವಾಗಿದೆ. ಪ್ರತಿ ವರ್ಷ ಸುಮಾರು 18 ಲಕ್ಷ ಜನರು ಪಾರ್ಶ್ವವಾಯುವಿಗೆ ತುತ್ತಾಗುತ್ತಾರೆ. ಭಾರತದಂತಹ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಪಾರ್ಶ್ವವಾಯು ಪ್ರಕರಣಗಳು ಶೇ. 100ಕ್ಕಿಂತಲೂ ಹೆಚ್ಚಾಗಿದೆ.

ಭಾರತದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಸರಾಸರಿ 145 ಪಾರ್ಶ್ವವಾಯು ಪ್ರಕರಣಗಳು ವರದಿಯಾಗುತ್ತವೆ. ಸಂಶೋಧಕರ ಪ್ರಕಾರ, ಭಾರತದಲ್ಲಿ ಪ್ರತಿ ನಿಮಿಷಕ್ಕೆ ಮೂವರು ವ್ಯಕ್ತಿಗಳು ಪಾರ್ಶ್ವವಾಯುವಿಗೆ ಒಳಗಾಗುತ್ತಾರೆ. ಸಾಮಾನ್ಯವಾಗಿ ವಯಸ್ಸಾದವರಲ್ಲಿ ಮಿದುಳಿನ ಪಾರ್ಶ್ವವಾಯು ಹೆಚ್ಚು ಕಂಡುಬರುತ್ತದೆಯಾದರೂ, ಇದು ಯಾವುದೇ ವಯಸ್ಸಿನ ವ್ಯಕ್ತಿಗೂ ಸಂಭವಿಸಬಹುದು.

ಪುನರ್​ವಸತಿ ಕೇಂದ್ರ: ಪಾರ್ಶ್ವವಾಯುವಿಗೆ ಒಳಗಾಗಿ ದೀರ್ಘಕಾಲದ ಆರೈಕೆಯ ಅಗತ್ಯವಿರುವ ರೋಗಿಗಳಿಗೆ ಸರ್ಕಾರದಿಂದ ಜಿಲ್ಲಾ ಮಟ್ಟದಲ್ಲಿ ಪುನರ್​ವಸತಿ ಕೇಂದ್ರದ ವ್ಯವಸ್ಥೆ ಮಾಡುವ ಅಗತ್ಯವಿದೆ. ಇದರ ಹೊರತಾಗಿಯೂ ಕ್ಷಯರೋಗ ತಪಾಸಣೆ ರೀತಿಯಲ್ಲಿ ವಾರಕ್ಕೆ ಒಮ್ಮೆಯಾದರೂ ರೋಗಿಯ ಮನೆಗೆ ತೆರಳಿ ಆರೋಗ್ಯ ವಿಚಾರಿಸುವ, ಸಾಂತ್ವನ ಹೇಳುವ ವ್ಯವಸ್ಥೆಯನ್ನಾದರೂ ಜಾರಿಗೆ ತರಬೇಕಿದೆ. ಇದರಿಂದ ರೋಗಿಯ ಜತೆಗೆ ಕುಟುಂಬದ ಸದಸ್ಯರಿಗೂ ಮಾನಸಿಕವಾಗಿ ನೆರವಾದಂತಾಗುತ್ತದೆ ಎನ್ನುತ್ತಾರೆ ವೈದ್ಯರು.

ಪಾರ್ಶ್ವವಾಯುವಿಗೆ ಕಾರಣ ಮತ್ತು ವಿಧಗಳು: ಮಿದುಳಿನ ರಕ್ತನಾಳಗಳಲ್ಲಿ ರಕ್ತ ಹೆಪು್ಪಗಟ್ಟಿ ರಕ್ತ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದರೆ ಅಥವಾ ರಕ್ತಸ್ರಾವ ಸಂಭವಿಸಿದರೆ ಪಾರ್ಶ್ವವಾಯು ಉಂಟಾಗುತ್ತದೆ. ಪಾಶ್ವವಾಯುವಿನಲ್ಲಿ ಹಲವು ವಿಧಗಳಿವೆ. ಮಿದುಳಿನ ಯಾವುದೇ ಭಾಗಕ್ಕೆ ರಕ್ತ ಸಂಚಾರದಲ್ಲಿ ತಕ್ಷಣ ತಡೆಯುಂಟಾದಾಗ (ಇಶ್ಕಿಮಿಕ್ ಪಾರ್ಶ್ವವಾಯು) ಅಥವಾ ಮಿದುಳಿನ ರಕ್ತನಾಳವೊಂದು ಸ್ಪೋಟಗೊಂಡಾಗ (ಹೆಮೊರೇಜ್ ಪಾರ್ಶ್ವವಾಯು) ಮಿದುಳಿನಲ್ಲಿ ಆಘಾತ ಸಂಭವಿಸುತ್ತದೆ. ಪಾರ್ಶ್ವವಾಯುವಿನ ಒಟ್ಟಾರೆ ಪ್ರಕರಣಗಳಲ್ಲಿ ಶೇ. 80 ರಕ್ತನಾಳದ ಹೆಪು್ಪಗಟ್ಟುವಿಕೆ ರಕ್ತ ಹೆಪು್ಪಗಟ್ಟುವಿಕೆಯಿಂದ ಸಂಭವಿಸುತ್ತವೆ. ಇನ್ನು ಪಾರ್ಶ್ವವಾಯುವಿನ ರೋಗದ ಲಕ್ಷಣಗಳು ಮಿದುಳಿನ ಯಾವ ಪ್ರದೇಶದ ರಕ್ತ ಸಂಚಾರಕ್ಕೆ ಅಡ್ಡಿಯಾಗಿದೆ ಎಂಬುದನ್ನು ಅವಲಂಬಿಸಿರುತ್ತದೆ. ಹಾಗಾಗಿ ರೋಗಿ ಮತ್ತು ಸಂಬಂಧಿಕರು ಹೆಚ್ಚು ತಡ ಮಾಡದೆ ವೈದ್ಯರನ್ನು ಸಂರ್ಪಸಬೇಕು. ಅದೇ ರೀತಿ ವೈದ್ಯರೂ ರೋಗಿಗಳಿಗೆ ಪ್ರಾಥಮಿಕ ಹಂತದಲ್ಲಿ ತಪಾಸಣೆ ನಡೆಸಿ, ಪಾರ್ಶ್ವವಾಯು ದೃಢಪಟ್ಟಲ್ಲಿ, ಹೆಚ್ಚಿನ ಸಮಯ ವ್ಯರ್ಥ ಮಾಡದೆ ಸಿಟಿ ಸ್ಕಾ್ಯನ್ ಅಥವಾ ಎಂಆರ್​ಐ ಸೌಲಭ್ಯಗಳಿರುವ ಮತ್ತು ತಜ್ಞರ ಸೇವೆ ದೊರೆಯುವ ಆಸ್ಪತ್ರೆಗೆ ದಾಖಲು ಮಾಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಸ್ಟ್ರೋಕ್ ಲಕ್ಷಣಗಳು

ಪಾರ್ಶ್ವವಾಯುವಿನ ರೋಗ ಲಕ್ಷಣಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಬಿ-ಫಾಸ್ಟ್ ಎಂಬ ಸಂಕ್ಷಿಪ್ತ ರೂಪ ಬಳಸಲಾಗುತ್ತದೆ. ಅದೆಂದರೆ ಬಿ-ಬ್ಯಾಲೆನ್ಸ್ (ದೇಹದ ಸಮತೋಲನ), ಇ-ಐಸ್ (ಕಣ್ಣಿನ ಸಮಸ್ಯೆಯಿಂದ ಹಠಾತ್ ಕುರುಡುತನ), ಎಫ್- ಫೇಶಿಯಲ್ ಡ್ರೂಪಿಂಗ್ (ಮುಖ ವಕ್ರವಾಗುವುದು), ಎ- ಆಮ್ರ್ ಲಿಫ್ಟ್ (ಕೈಗಳ ಚಲನೆ ಶಕ್ತಿ ಸ್ವಾಧೀನ ಕಳೆದುಕೊಳ್ಳುವುದು), ಎಸ್- ಸ್ಪೀಚ್ (ಮಾತಿನಲ್ಲಿ ತೊದಲುವಿಕೆ), ಟಿ- ಟೈಮ್ ಆಫ್ ಆನ್​ಸೆಟ್ (ಪಾರ್ಶ್ವವಾಯು ಸಂಭವಿಸಿದಾಗ ಸುವರ್ಣ ಸಮಯದಲ್ಲಿ ಆಸ್ಪತ್ರೆಗೆ ತಲುಪುವುದು). ಇವಲ್ಲದೆ ತಲೆಸುತ್ತು, ಮೂರ್ಛೆರೋಗ, ತಲೆನೋವು, ಪ್ರಜ್ಞಾಹೀನ ಸ್ಥಿತಿ, ಮರೆವು, ವರ್ತನೆಯಲ್ಲಿ ಬದಲಾವಣೆ ಸಹ ಪಾರ್ಶ್ವವಾಯುವಿನ ರೋಗಲಕ್ಷಣಗಳಾಗಿವೆ.

ಆಹಾರ ಪದ್ಧತಿ ಮತ್ತು ಪಥ್ಯ...

  • ಪಾರ್ಶ್ವವಾಯುವಿನಿಂದ ಗುಣಮುಖರಾದ ನಂತರವೂ ರೋಗಿಗಳು ಉತ್ತಮ ಆಹಾರ ಪದ್ಧತಿ ಮತ್ತು ಪಥ್ಯ ಪಾಲಿಸುವ ಮೂಲಕ ಗಂಭೀರ ಕಾಯಿಲೆಗಳನ್ನು ನಿಯಂತ್ರಿಸಬಹುದಾಗಿದೆ.

  • ಸ್ಕಿಮ್ಡ್​​ ಹಾಲು, ಕಡಿಮೆ ಕೊಬ್ಬಿನ ಡೈರಿ ಪದಾರ್ಥಗಳು ಹಾಗೂ ಮೊಸರು ಸೇವಿಸಬಹುದು.

  • ಭತ್ತ, ದ್ವಿದಳ ಧಾನ್ಯಗಳು, ಅಕ್ಕಿಯ ನೂಡಲ್ಸ್, ರೊಟ್ಟಿ, ಹೆಸರು ಕಾಳು, ಬಾರ್ಲಿ, ಓಟ್ಸ್​ನಂತಹ ನಾರಿನಂಶ ಇರುವ ಆಹಾರ ಉತ್ತಮ.

  • ಸೇಬು, ದ್ರಾಕ್ಷಿ, ಬಾಳೆಹಣ್ಣು, ದಾಳಿಂಬೆ, ಕಲ್ಲಂಗಡಿ, ಪರಂಗಿ, ಸೀಬೆಹಣ್ಣು ಮತ್ತು ನೇರಳೆ ಹಣ್ಣು

  • ಕ್ಯಾರೆಟ್, ಬೀನ್ಸ್, ಎಲೆಕೋಸು, ಟೊಮ್ಯಾಟೊ, ದಂಟಿನ ಸೊಪು್ಪ, ಮೆಂತ್ಯ ಸೊಪು್ಪ, ಮುಸುಕಿನ ಜೋಳ, ಮೂಲಂಗಿ, ಈರುಳ್ಳಿ, ಆಲೂಗಡ್ಡೆ, ಸೌತೆ ಕಾಯಿ, ಬೀಟ್ ರೂಟ್, ಗೆಡ್ಡೆಕೋಸು.

  • ಬಾದಾಮಿ, ವಾಲ್ನಟ್, ಪೆಕ್ಯಾನ್.

  • ಮೀನು, ಕಡಿಮೆ ಎಣ್ಣೆಯಲ್ಲಿ ಬೇಯಿಸಿದ ಕೋಳಿ ಮಾಂಸ, ಕಡಿಮೆ ಕೊಬ್ಬುಳ್ಳ ಮಾಂಸ (ಕೆಂಪು ಮಾಂಸ ತಿನ್ನಬಾರದು).

ಆರೈಕೆದಾರರು ಎರಡನೇ ರೋಗಿ!

ಈ ರೀತಿ ಪಾರ್ಶ್ವವಾಯುವಿಗೆ ಒಳಗಾಗುತ್ತಿರುವ ರೋಗಿಗಳ ಆರೈಕೆ ಮಾಡುತ್ತಿರುವವರೂ ರೋಗಿಗಳಾಗುತ್ತಿದ್ದಾರೆ. ಇವರನ್ನು ಎರಡನೇ ರೋಗಿ (ಪ್ಯಾಸಿವ್ ಪೇಷೆಂಟ್) ಎನ್ನುತ್ತಾರೆ. ಪಾರ್ಶ್ವವಾಯುವಿಗೆ ಒಳಗಾದವರಲ್ಲಿ ಶೇ. 30 ಮಂದಿ ಅಂಗವೈಕಲ್ಯಕ್ಕೆ ಒಳಗಾಗುತ್ತಾರೆ. ಇಂಥವರ ಚೇತರಿಕೆಗೆ ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಇದು ರೋಗಿಗಳ ಆರೈಕೆದಾರರನ್ನು ಆರ್ಥಿಕವಾಗಿ ಮಾತ್ರವಲ್ಲದೆ, ಸಾಮಾಜಿಕವಾಗಿ, ಮಾನಸಿಕವಾಗಿಯೂ ಸಮಸ್ಯೆಗೆ ದೂಡುತ್ತದೆ. ಪರಿಣಾಮವಾಗಿ ರೋಗಿಗಳು ಶೋಷಣೆಗೆ ಒಳಗಾಗುವುದಕ್ಕೆ, ಕುಟುಂಬದಲ್ಲಿ ಅನೈತಿಕ ಸಂಬಂಧಕ್ಕೆ ಬೆಳೆಯುವುದಕ್ಕೆ ಹಾಗೂ ಕೌಟುಂಬಿಕ ಕಲಹಗಳಿಗೆ ಕಾರಣವಾಗುತ್ತದೆ. ಇದಕ್ಕೆ ಉದಾಹರಣೆಗಳಾಗಿ ಕೆಲವು ನೈಜ ಘಟನೆಗಳೇ ಇಲ್ಲಿವೆ.

1. ರಾಜರಾಜೇಶ್ವರಿ ನಗರದ ನಿವಾಸಿ 65 ವರ್ಷದ ಮಹಿಳೆ ಕಳೆದ ಐದು ವರ್ಷಗಳಿಂದ ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದರು. ಇವರ ಆರೈಕೆ ಮಾಡುತ್ತಿದ್ದ 42 ವರ್ಷದ ಮಗ ತಾಯಿಯ ಚಿಕಿತ್ಸೆಗೆ ಖರ್ಚು ಮಾಡಿ ಆರ್ಥಿಕವಾಗಿ ಸೋತಿದ್ದಲ್ಲದೆ, ಆಕೆ ಅನುಭವಿಸುತ್ತಿದ್ದ ನೋವು ನೋಡಲಾರದೆ ಮಾನಸಿಕವಾಗಿಯೂ ಕುಗ್ಗಿದ್ದರು. ಪರಿಣಾಮವಾಗಿ ತಾಯಿಯನ್ನು ನಾಲ್ಕನೇ ಮಹಡಿಯಿಂದ ದೂಡಿ ಕೊಲೆಗೈದು ಜೈಲು ಸೇರಿದ್ದಾರೆ!

2. ಮತ್ತೊಂದು ಪ್ರಕರಣದಲ್ಲಿ, ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ 38 ವರ್ಷದ ರೋಗಿಗೆ ಫಿಸಿಯೋಥೆರಪಿ ಮಾಡಲು ಬರುತ್ತಿದ್ದ ಆಕ್ಯುಪಂಕ್ಚರ್ ತಂತ್ರಜ್ಞನೊಬ್ಬ, ರೋಗಿಯ ಪತ್ನಿಯೊಂದಿಗೆ ಸಲುಗೆ ಬೆಳೆಸಿಕೊಂಡು ಅಕ್ರಮ ಸಂಬಂಧ ಹೊಂದಿದ್ದ. ಕೊನೆಗೆ ಇಬ್ಬರೂ ಸೇರಿ ರೋಗಿಯನ್ನು ಕೊಲೆ ಮಾಡಿ ಜೈಲು ಪಾಲಾಗಿದ್ದಾರೆ.

3. ಬೆಂಗಳೂರಿನ ಜೆ.ಪಿ. ನಗರ ನಿವಾಸಿ 45 ವರ್ಷದ ದಂತ ವೈದ್ಯ, ಬಿಪಿ, ಸಕ್ಕರೆ ಕಾಯಿಲೆ ನಿರ್ಲಕ್ಷಿಸಿ, ಪ್ರೇಯಸಿಗಾಗಿ ಪತ್ನಿಗೆ ವಿಚ್ಛೇದನ ನೀಡಿದ್ದ. ಆದರೆ ಪಾರ್ಶ್ವವಾಯುವಿಗೆ ತುತ್ತಾದ ಅವನನ್ನು ಪ್ರೇಯಸಿ ಕೈಬಿಟ್ಟು ಹೋದಳು. ಕೊನೆಗೆ ವಿಚ್ಛೇದನ ಪಡೆದಿದ್ದ ಪತ್ನಿ ಹಾಗೂ ವೃದ್ಧ ತಾಯಿ ಆತನ ಆರೈಕೆ ಮಾಡುವಂತಾಗಿದೆ.

ಈ ಪ್ರಕರಣಗಳು ಪಾರ್ಶ್ವವಾಯುವಿನ ಗಂಭೀರತೆ ಹಾಗೂ ಅದು ಕುಟುಂಬಗಳಲ್ಲಿ ಸೃಷ್ಟಿಸುತ್ತಿರುವ ಸಾಮಾಜಿಕ ಆರ್ಥಿಕ ಹಾಗೂ ಭಾವನಾತ್ಮಕ ಒತ್ತಡಗಳನ್ನು ತೋರಿಸುತ್ತದೆ. ಹೀಗೆ ದೀರ್ಘಕಾಲ ಆರೈಕೆಯ ಅಗತ್ಯತೆ ಇರುವ ಪಾರ್ಶ್ವವಾಯು ಕಾಯಿಲೆ ರೋಗಿಯ ಜತೆಗೆ ಕುಟುಂಬದವರನ್ನೂ ಬಳಲಿಸುತ್ತದೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಕ್ರಮ ಕೈಗೊಳ್ಳುವ ಅಗತ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net