ಕೃಷಿ ಚಾವಡಿ: ತಾರಸಿ ಮೇಲೆ ಮಂಗಳೂರು ಮಲ್ಲಿಗೆ ಬೆಳೆಯಬಹುದೆ?

MANGALORE
Published on
  • ನಾನು ಮಧ್ಯವಯಸ್ಕ ಮಹಿಳೆ. ನಮಗೆ 40/60 ಅಡಿ ಅಳತೆಯ ತಾರಸಿ ಇದೆ. ಅಲ್ಲಿ ತೋಟ ಮಾಡಿ ಮಂಗಳೂರು ಮಲ್ಲಿಗೆ ಬೆಳೆಯಬಹುದೇ? ಅದರಿಂದ ಆದಾಯ ನಿರೀಕ್ಷೆ ಮಾಡಬಹುದೇ?

| ವಿಜಯಲಕ್ಷ್ಮಿ ಹೆಗಡೆ

ತಾರಸಿ ತೋಟದಲ್ಲಿ ನೀವು ಏನನ್ನು ಬೇಕಾದರೂ ಬೆಳೆಯಬಹುದು. ಆದರೆ ಅದಕ್ಕೆ ಬೇಕಾದ ವಾತಾವರಣ ಹಾಗೂ ಅವುಗಳಿಗೆ ನೀಡಬೇಕಾದ ಆಹಾರ ಕ್ರಮಗಳ ಅನುಸರಣೆ ಮುಖ್ಯ. ಪ್ರಮುಖವಾಗಿ ನಾವು ತರಕಾರಿಗಳನ್ನು ಬೆಳೆಯಲು ಪೋ›ತ್ಸಾಹ ನೀಡುತ್ತೇವೆ. ಕಾರಣ ವಿಷಮುಕ್ತ ಊಟ ಮಾಡಲಿ ಎಂದು. ಅದಕ್ಕೆ ಪೂರಕವಾಗಿ ಹೂವುಗಳು, ಔಷಧೀಯ ಸಸ್ಯಗಳು, ಹಣ್ಣುಗಳ ಜೋಡಣೆ ಮಾಡಬಹುದು.

ನನ್ನ ಸ್ನೇಹಿತರು ತಮ್ಮ ತಾರಸಿ ತೋಟದಲ್ಲಿ ಮುಗಿಲ ಮಲ್ಲಿಗೆಯನ್ನು ಹಬ್ಬಿಸಿದ್ದಾರೆ. ಅದೂ ಹೊರಭಾಗದ ಅಂಗಳದಲ್ಲಿ ನೆಟ್ಟು ತಾರಸಿಯ ಕಟ್ಟೆಗಳಿಗೆ ವ್ಯಾಪಿಸುವಂತೆ ಮಾಡಿದ್ದಾರೆ. ಅದೇ ರೀತಿ ಇನ್ನೊಬ್ಬರು ಸೆಂಟ್ ಮಲ್ಲಿಗೆಯನ್ನು, ಜಾಜಿ ಮಲ್ಲಿಗೆಯನ್ನೂ ಬೆಳೆದಿದ್ದಾರೆ. ಅವರದು ವ್ಯಾಪಾರಿ ಉದ್ದೇಶವಲ್ಲ. ಹಾಗೆ ಮಾಡಿದ್ದರೆ ಅಲ್ಪಸ್ವಲ್ಪ ಆದಾಯ ಬರುತ್ತಿತ್ತೇನೊ.

ನೀವು ಯಾವ ಪ್ರದೇಶದವರು ಎಂದು ಹೇಳಿಲ್ಲ. ಬೆಂಗಳೂರಿನವರಾಗಿದ್ದರೆ ಅನೇಕ ವರ್ಷಗಳ ಕಾಲ ತಾರಸಿ ತೋಟದ ಬಗ್ಗೆ ಅಂಕಣ ಬರೆದ ಅನಸೂಯ ಶರ್ಮಾ ಅವರ (9845378990) ಬಳಿ ಮಾತನಾಡಿ. ಅಥವಾ ತಾರಸಿ ತೋಟದ ಪಾಠ ಮಾಡುವ ರಾಜೇಂದ್ರ ಹೆಗಡೆ (9448629528) ಹಾಗೂ ವಿಶ್ವನಾಥ್ ಅವರ (9845627217) ಬಳಿಯೂ ನೀವು ವಿಚಾರಿಸಬಹುದು.

ಬೆಂಗಳೂರಿನಲ್ಲಿ ಮಂಗಳೂರು ಮಲ್ಲಿಗೆಯನ್ನು ಬೆಳೆದವರು ನನಗೆ ಸಿಗಲಿಲ್ಲ. ಆದರೆ ಕೇರಳದವರೊಬ್ಬರು ತಿರುವನಂತಪುರದಲ್ಲಿ ಬೆಳೆದ ಮಾಹಿತಿಯನ್ನು ಗೆಳೆಯರೊಬ್ಬರು ನೀಡಿದರು. ಅದಕ್ಕಾಗಿ ಅವರು ಕೋಕೋಪಿಟ್​ನ್ನು ಮಾಧ್ಯಮವಾಗಿ ಬಳಸಿದ್ದಾರಂತೆ.

ಹತ್ತು ಕಿಲೋ ಗ್ರೋ ಬ್ಯಾಗ್ಸ್ ನಲ್ಲಿ ಅವರು ಬೆಳೆದಿದ್ದಾರೆ. ಅವರಲ್ಲಿ ಇರುವುದು 14 ಗಿಡಗಳು ಮಾತ್ರ. ಚಳಿಗಾಲದಲ್ಲಿ ಒಳ್ಳೆಯ ಮೊಗ್ಗುಗಳು ಲಭ್ಯ. ಒಟ್ಟಾರೆ 50 ದಿನ ಮಾತ್ರ ಇಳುವರಿ. ಉಳಿದಂತೆ ಅವು ಸುಮ್ಮನುಳಿದಿರುತ್ತವೆ. ಗಿಡದ ನಾಟಿ, ಚಿಗುರು ಚಿವುಟುವಿಕೆ ಮಾಡಬೇಕು. ಮುರುಟು ರೋಗ, ಹುಳ ಮುಂತಾದ ಪೀಡೆಗಳಿಗೆ ಬೇವಿನ ಎಣ್ಣೆಯ ಬಳಕೆ. ಪ್ರತಿ ವರ್ಷ ಕೋಕೋಪಿಟ್ ಬದಲಾಯಿಸಬೇಕು.

ಮಾಧ್ಯಮದಲ್ಲಿ ಹೆಚ್ಚು ಪೋಷಕಾಂಶವಿದ್ದಷ್ಟೂ ಮೊಗ್ಗುಗಳ ಪ್ರಮಾಣ ಅಧಿಕವಾಗುತ್ತದೆ. ನೀರು ಮಾತ್ರ ನಿರಂತರ ಬೇಕು. ಅವರೇ ಮಾರುಕಟ್ಟೆಯಲ್ಲಿ ನಿಂತು ಮಾರಾಟ ಮಾಡುವುದು ರೂಢಿ. ಒಂಬತ್ತು ಇಂಚಿನ ದಂಡೆಗೆ 100 ರೂ. ಬೆಲೆ ಇದೆ. ಅದು ವ್ಯಾಪಾರಸ್ಥರಲ್ಲಿ, ನಾವೇ ನೇರವಾಗಿ ಮಾರಿದರೆ ಏನಾಗಬಹುದು?

ಹೀಗೆ ನಾನಾ ಮುಖಗಳ ಪರಿಗಣನೆ ಮಾಡಿ ಕೃಷಿ ಕೈಗೊಳ್ಳಿ. ನಿಮ್ಮ ಮನೆಯ ಹತ್ತಿರ ಹೂವಿನ ಮಾರುಕಟ್ಟೆ ಇದ್ದರೆ ಯಾವುದೂ ಕಷ್ಟವಲ್ಲ. ರೈತರು ಮಾಡುವಂತೆ ವಿಪರೀತ ರಾಸಾಯನಿಕಗಳನ್ನು ಬಳಸುವ ಅಗತ್ಯವೂ ಇಲ್ಲ. ತಾರಸಿಯನ್ನು ಹಸುರಾಗಿಸುವ ಪ್ರಯತ್ನ ಇಂದೇ ಮಾಡಿ. ಮಲ್ಲಿಗೆಯೊಂದಿಗೆ ಬೇರೆ ಹೂವು, ತರಕಾರಿ, ಹಣ್ಣುಗಳನ್ನೂ ಬೆಳೆಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net