

ಸಾಮಾನ್ಯವಾಗಿ ಯಾವುದೇ ವ್ಯಕ್ತಿ ( ಮಗುವೇ ಆಗಿದ್ದರೂ), ಮತ್ತೊಬ್ಬ ವ್ಯಕ್ತಿಯ ಕಾನೂನುಬಾಹಿರ ಅಭಿರಕ್ಷಣೆಯಲ್ಲಿ / ಇಲ್ಲೀಗಲ್ ಕಸ್ಟಡಿಯಲ್ಲಿ ಇದ್ದಾಗ ಮಾತ್ರ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಬಹುದು. ನಮ್ಮ ಭಾರತದ ಕಾನೂನಿನಲ್ಲಿ ತಂದೆ /ಅಥವಾ ತಾಯಿ/ ಪೋಷಕರಲ್ಲಿ ಒಬ್ಬರು ಮಗುವನ್ನು ತಮ್ಮ ಸುಪರ್ದಿನಲ್ಲಿ ತೆಗೆದುಕೊಳ್ಳುವುದನ್ನು ( ಪೇರೆಂಟಲ್ ಅಬ್ಡಕ್ಷನ್) ಅಪರಾಧ ಎಂದು ಪರಿಗಣಿಸುವುದಿಲ್ಲ. ಆದರೂ ನೀವು ರಿಟ್ ಹಾಕಿ. ಮಗುವಿನ ಹಿತದೃಷ್ಟಿಯಿಂದ ಹೇಬಿಯಸ್ ಕಾರ್ಪಸ್ ಪೆಟಿಷನ್ನಲ್ಲಿಯೂ ಸಹ ನಿಮಗೆ ಮಗುವನ್ನು ಒಪ್ಪಿಸಬೇಕು ಎನ್ನುವ ಆದೇಶವನ್ನು ನ್ಯಾಯಾಲಯ ಮಾಡಬಹುದು. ಪ್ರಯತ್ನಿಸಿ ನೋಡಿ. ಆ ನಂತರ ಮಗುವಿನ ಶಾಶ್ವತ / ಪರ್ಮನೆಂಟ್ ಕಸ್ಟಡಿಗೆ ನಿಮ್ಮ ತಾಲೂಕಿನ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ.
ನನ್ನ ಗಂಡ ರಾತ್ರಿ ಪ್ರತಿ ದಿನ ಅತ್ಯಾಚಾರಕ್ಕಿಂತಲೂ ಹೀನವಾಗಿ ನನಗೆ ತುಂಬಾ ದೈಹಿಕ ಹಿಂಸೆ ಕೊಡುತ್ತಾರೆ. ನನಗೆ ತಡೆದುಕೊಳ್ಳಲು ಆಗುತ್ತಿಲ್ಲ. ಎಂಟು ವರ್ಷಗಳಾದರೂ ಬದಲಾಗಿಲ್ಲ. ಎರಡು ಮಕ್ಕಳಿದ್ದಾರೆ ಎಂದು ಸುಮ್ಮನಿದ್ದೆ. ಈಗ ನನಗೆ ಬೆಳಗಾದರೆ ಎದ್ದು ನಡೆಯಲೂ ಆಗುವುದಿಲ್ಲ, ಇಂತಹ ಹಿಂಸೆಯಿರುವಾಗ ನಾನು ಏನು ಮಾಡಬೇಕು? ನನಗೆ ತವರಿನ ಸಹಾಯವೂ ಇಲ್ಲ. ನಾನು ಹೆಚ್ಚಾಗಿ ಓದಿಕೊಂಡಿಲ್ಲ. ನಮ್ಮಂತಹವರಿಗೆ ಯಾವ ಸಹಾಯವೂ ಇಲ್ಲವೇ?
ಮದುವೆಯ ಹೆಸರಿನಲ್ಲಿ ಹೆಂಡತಿಯ ಮೇಲೆ ದಿನನಿತ್ಯ ಅತ್ಯಾಚಾರ ಮಾಡುವುದು ತಪ್ಪು. ನಿಮ್ಮ ನೋವು ಅರ್ಥವಾಗುತ್ತದೆ,. ನೀವು ಅನ್ಯಾಯವನ್ನು ಸಹಿಸಿಕೊಂಡು ಸುಮ್ಮನಿರಬೇಡಿ. ತಾವು ಈ ಕೂಡಲೇ ನಿಮ್ಮ ತಾಲೂಕಿನ ಕಾನೂನು ಸೇವಾ ಕೇಂದ್ರಕ್ಕೆ ಹೋಗಿ ಅಲ್ಲಿಯ ಕಾರ್ಯದರ್ಶಿಯವರಿಗೆ ನಿಮ್ಮ ಸಮಸ್ಯೆಯನ್ನು ವಿವರಿಸಿ ಹೇಳಿ. ಒಂದು ಅರ್ಜಿಯನ್ನೂ ಕೊಡಿ. ಅವರು ನಿಮಗೆ
ಮತ್ತು ನಿಮ್ಮ ಮಕ್ಕಳಿಗೆ ತಕ್ಷಣಕ್ಕೆ ಯಾವುದಾದರೂ ಒಂದು ಸಂಘ /ಸಂಸ್ಥೆಯಲ್ಲಿ ರಕ್ಷಣೆ ಕೊಡಿಸುತ್ತಾರೆ. ಆ ನಂತರ ನೀವು ನಿಮ್ಮ ಪತಿಯ ವಿರುದ್ಧ ಡೊಮೆಸ್ಟಿಕ್ ವಯಲೆನ್ಸ್ / ಕೌಟುಂಬಿಕ ಹಿಂಸೆಯಿಂದ ರಕ್ಷಣೆ ಪಡೆಯುವ ಪ್ರಕರಣವನ್ನು ದಾಖಲಿಸಿ. ಆ ಪ್ರಕರಣದಲ್ಲಿ ನಿಮಗೂ ನಿಮ್ಮ ಮಕ್ಕಳಿಗೂ ಜೀವನಾಂಶ ಕೊಡಬೇಕೆಂದು ಕೇಳಿಕೊಳ್ಳಿ. ಕೇಸು ನಡೆಯುವಾಗಲೂ ನಿಮಗೆ ಜೀವನಾಂಶ ಕೊಡುವಂತೆ ಮಧ್ಯಂತರ ಆದೇಶವನ್ನೂ ನ್ಯಾಯಾಲಯ ಮಾಡಬಹುದು. ಈ ಎಲ್ಲಕ್ಕೂ ಉಚಿತ ಕಾನೂನು ಸಹಾಯ ಸಿಗುತ್ತದೆ. ಎಲ್ಲ ಖರ್ಚನ್ನೂ ನಿಮ್ಮ ತಾಲ್ಲೂಕಿನ ಕಾನೂನು ಸೇವಾ ಕೇಂದ್ರವೇ ಭರಿಸುತ್ತದೆ. ನೀವು ಹೆದರಬೇಕಾಗಿಲ್ಲ.
(ಲೇಖಕರು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು ಮತ್ತು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಹಿರಿಯ ಮಧ್ಯಸ್ಥಿಕೆಗಾರರು,)