ಸಿ ಸೆಕ್ಷನ್: ವರವೋ ಶಾಪವೋ?

Pregnancy
Published on
ಒಂದು ವೇಳೆ ಸಾಮಾನ್ಯ ಹೆರಿಗೆಯಾಗದಿದ್ದರೆ, ಸಿ-ಸೆಕ್ಷನ್ ಡೆಲಿವರಿ ಅಗತ್ಯ. ಆದರೆ ಅದೆಷ್ಟೋ ಜನರು ಸಿಸೇರಿಯನ್​ಗೆ ಪ್ರಿ-ಪ್ಲಾನ್ ಮಾಡಿರುತ್ತಾರೆ. ಕೆಲವೊಮ್ಮೆ ಆರೋಗ್ಯದ ದೃಷ್ಟಿಯಿಂದ ನಿರ್ಧಾರವಾದರೆ, ಬಹಳಷ್ಟು ಬಾರಿ ರಿಸ್ಕ್ ಕಮ್ಮಿ ಎಂದು ವೈದ್ಯರು ಅಥವಾ ಕುಟುಂಬಸ್ಥರ ಒತ್ತಡದಿಂದ ತೀರ್ಮಾನ ಕೈಗೊಳ್ಳುತ್ತಾರೆ. ಆದರೆ ನಿಜವಾಗಿಯೂ ಸಿಸೇರಿಯನ್​ನಲ್ಲಿ ಅಪಾಯವಿಲ್ಲವೇ ಎಂದು ತಿಳಿಸುವ ಪ್ರಯತ್ನ ಈ ಲೇಖನದ ಉದ್ದೇಶ.

| ಎನ್ . ಗುರುನಾಗನಂದನ 
ಪ್ರತಿ ತಾಯಿಗೂ ಹೆರಿಗೆ ಎಂಬುದು ಮತ್ತೊಮ್ಮೆ ಹುಟ್ಟಿ ಬಂದ ಅನುಭವ ನೀಡುತ್ತದೆ. ಅದಕ್ಕೇ ಹಿರಿಯರೂ ನೋವಿಲ್ಲದ ಸುಖಕರ ಹೆರಿಗೆ ಆಗಲಿ ಎಂದು ಹರಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಹೆರಿಗೆ ಸಂಖ್ಯೆ ಕಡಿಮೆಯಾಗಿ ಸಿಸೇರಿಯನ್ ಹೆರಿಗೆಗೆ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಹೌದು, ಭಾರತದಲ್ಲಿ ಸಿ-ಸೆಕ್ಷನ್ ಡೆಲಿವರಿ ಹೆಚ್ಚಾಗುತ್ತಿವೆ. 2006ರಲ್ಲಿ ಸಿ-ಸೆಕ್ಷನ್ ಹೆರಿಗೆ ಸಂಖ್ಯೆ ಶೇ. 8.5ರಷ್ಟು ಇತ್ತು. ಆದರೆ 2021ರಲ್ಲಿ ಶೇ. 21.5ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ತಿಳಿಸುತ್ತದೆ. ವಿಶೇಷವೆಂದರೆ ಒಂದು ರಾಷ್ಟ್ರದಲ್ಲಿ ಸಿ-ಸೆಕ್ಷನ್ ಹೆರಿಗೆ ಶೇ. 10-15ಕ್ಕಿಂತ ಹೆಚ್ಚಾಗಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಹಾಗಾದರೆ ಭಾರತದಲ್ಲಿ ಸಿಸೇರಿಯನ್ ಡೆಲಿವರಿ ಹೆಚ್ಚಾಗಲು ಕಾರಣಗಳೇನೆಂದು ನೋಡಿದಾಗ ಕುತೂಹಲಕರ ಮಾಹಿತಿ ತಿಳಿದು ಬಂದಿದೆ.

ಮೊದಲನೆಯದಾಗಿ ತಾಯಿಗೆ ಕಾಡುವ ಹೆರಿಗೆ ಭಯ ಸಿ-ಸೆಕ್ಷನ್ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ನೋವು ಹೆಚ್ಚಾದರೆ ಏನು ಮಾಡುವುದು, ಮಗುವಿಗೇನಾದರೂ ಅಪಾಯವಾದರೆ...’ ಎಂಬ ಹತ್ತಾರು ಆಲೋಚನೆಗಳು. ಇದರ ಜತೆಗೆ ಸರಿಯಾಗಿ ಕಾಳಜಿವಹಿಸದೆ ಇರುವುದರಿಂದ ತಾಯಿ ಮತ್ತು ಮಗುವಿನ ಸುರಕ್ಷತೆಗಾಗಿ, ಅನಾರೋಗ್ಯಕರ ಜೀವನಶೈಲಿಯಿಂದ ಸಿಸೇರಿಯನ್ ಡೆಲಿವರಿ ಮೊರೆ ಹೋಗವುದು ಅನಿವಾರ್ಯ ಎಂದು ತಜ್ಞರು ಹೇಳುತ್ತಾರೆ. ಹಣಕಾಸಿನ ಸ್ಥಿತಿ ಕೂಡ ಹೆರಿಗೆಯ ವಿಧಾನ ನಿರ್ಧರಿಸುತ್ತಿದೆ. ಶಸ್ತ್ರ ಚಿಕಿತ್ಸೆ ಆಧಾರಿತ ಹೆರಿಗೆಯನ್ನು ಕೆಲವು ಸ್ಥಿತಿವಂತ ಜನರು ಆಯ್ದುಕೊಳ್ಳುತ್ತಿದ್ದಾರೆ ಎಂದು ಕೆಲವು ವರದಿಗಳು ತಿಳಿಸುತ್ತವೆ. ಹೆಚ್ಚು ನೋವಾಗುವುದು ಬೇಡ ಎಂದು ಸಿಸೇರಿಯನ್​ನತ್ತ ಮುಖ ಮಾಡಲಾಗುತ್ತಿದೆ. ಆದರೆ ಈ ವಿಧಾನದಲ್ಲಿ ಹೆರಿಗೆಯ ನಂತರ ನೋವು ಇದ್ದೇ ಇರುತ್ತದೆ ಎಂದು ಹಿರಿಯ ಪ್ರಸೂತಿ ತಜ್ಞರಾದ ಅರುಣಾ ಮುರಳೀಧರ್ ಹೇಳುತ್ತಾರೆ.

ನೈಸರ್ಗಿಕ ಹೆರಿಗೆಯ ಮಾಹಿತಿ ಬೇಕಿದೆ!

ಪ್ರಪಂಚದಲ್ಲೇ ಯಾರೂ ನೀಡಲಾಗದ ಅತಿ ಹೆಚ್ಚು ನೋವು, ಸಂಕಟವನ್ನು ಹೆರಿಗೆ ನೀಡುತ್ತದೆ ಎಂದು ಯಾರೋ ಹೇಳಿದ ಮಾತನ್ನು ಕೇಳಿ ಬಹಳಷ್ಟು ಜನ ಭಯದಿಂದ ದಯವಿಟ್ಟು ಸಿಸೇರಿಯನ್ ಡೆಲಿವರಿ ಮಾಡಿಕೊಡಿ ಎಂದು ಬರುತ್ತಾರೆ. ಆದರೆ ನೈಸರ್ಗಿಕ ಹೆರಿಗೆಯಿಂದ ತಾಯಿ ಮತ್ತು ಮಗು ಇಬ್ಬರಿಗೂ ಪ್ರಯೋಜನ ಹೆಚ್ಚು. ಮಗು, ತಾಯಿಯ ದೇಹದಿಂದ ಹೊರಬರುವಾಗ ಅಲ್ಲಿರುವ ಬ್ಯಾಕ್ಟೀರಿಯಾ ಮಗುವಿಗೆ ಅಂಟಿಕೊಳ್ಳುತ್ತವೆ. ಅವು ಮಗುವಿನ ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ. ಅಸ್ತಮಾ, ನರಗಳಿಗೆ ಸಂಬಂಧ ಪಟ್ಟ ರೋಗ ಮುಂತಾದ ಹಲವಾರು ಸಮಸ್ಯೆಗಳು ಮಗುವಿಗೆ ಕಾಡದಂತೆ ಆ ಬ್ಯಾಕ್ಟೀರಿಯಾಗಳು ಮಾಡುತ್ತವೆ. ತಾಯಿಯಲ್ಲಿ ಹೆಚ್ಚಿನ ರಕ್ತಸ್ರಾವವಾಗದಂತೆ ನೈಸರ್ಗಿಕ ಹೆರಿಗೆ ನೋಡಿಕೊಳ್ಳುತ್ತದೆ. ಅದರೊಂದಿಗೆ ಮುಂದಿನ ಗರ್ಭಧಾರಣೆಗೆ ಕೂಡ ಸಹಕಾರಿ. ಹೆರಿಗೆ ಸಂದರ್ಭದಲ್ಲಿ ನೋವಾಗುವುದು ಸಹಜ. ಅದನ್ನು ಹಿಮ್ಮೆಟ್ಟಲು ಹಲವಾರು ವಿಧಾನಗಳಿವೆ. ಹಾಗಾಗಿ ಹೆದರಿಕೊಂಡು ಸಿ-ಸೆಕ್ಷನ್ ಡೆಲಿವರಿಗೆ ಹೋಗಬಾರದು. ವೈದ್ಯರು ಕೂಡ ಗರ್ಭಧರಿಸಿದ ದಿನದಿಂದಲೇ ನೈಸರ್ಗಿಕ ಹೆರಿಗೆಯ ಬಗ್ಗೆ ಮಾಹಿತಿ ನೀಡಿ ತಾಯಿ, ಕುಟುಂಬದ ಜತೆ ಸಮಾಲೋಚಿಸಬೇಕು.

| ಅರುಣಾ ಮುರಳೀಧರ್, ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ

ಅನುಕೂಲ ಅನನುಕೂಲ

ನೈಸರ್ಗಿಕ ಹೆರಿಗೆಗೆ ಮಹಿಳೆಯ ದೇಹ ಸಜ್ಜಾಗಿರುತ್ತದೆ. ನೋವನ್ನು ತಗ್ಗಿಸಲು ಎಂಡಾರ್ಫಿನ್ ಹಾರ್ವೇನ್ ತಯಾರಾಗಿರುತ್ತದೆ. ಆಸ್ಪತ್ರೆಯಲ್ಲೂ ಹೆಚ್ಚು ದಿನ ಇರುವ ಅವಶ್ಯಕತೆ ಇಲ್ಲ. 1-2 ದಿನಗಳಲ್ಲಿ ತಾಯಿ ಮಗು ಆರೋಗ್ಯವಾಗಿ ಮನೆಯಲ್ಲಿರಬಹುದು. ನೈಸರ್ಗಿಕ ಹೆರಿಗೆಯ ನಂತರ ತಾಯಿ ಸಕ್ರಿಯವಾಗಿರುತ್ತಾಳೆ. ಮೊದಲ ಬಾರಿಗೆ ಮಗುವನ್ನು ಮುದ್ದಾಡಿ ಎದೆಹಾಲು ನೀಡುವ ಶಕ್ತಿಯನ್ನು ಹೊಂದಿರುತ್ತಾಳೆ. ಇದರಿಂದ ತಾಯಿ ಮಗುವಿನ ಬಾಂಧವ್ಯ ಹೆಚ್ಚಾಗುತ್ತದೆ. ಆದರೆ ಇದು ಸಿಸೇರಿಯನ್ ಹೆರಿಗೆಯಲ್ಲಿ ಆಗುವುದಿಲ್ಲ. ಅನೆಸ್ತೇಶಿಯಾದಿಂದ ಉಂಟಾಗುವ ಮಂಪರಿನಿಂದ ಮಗುವನ್ನು ನೋಡುವುದು ಕೂಡ ಕಷ್ಟವಾಗುತ್ತದೆ. ಸಿಸೇರಿಯನ್ ಮಗುವಿಗೆ ಎದೆಹಾಲು ನೀಡಲು ಹಲವಾರು ತೊಡಕುಗಳನ್ನು ಉಂಟು ಮಾಡುತ್ತದೆ. ಸಿ-ಸೆಕ್ಷನ್​ನಿಂದ ತಾಯಿಯ ದೇಹದಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆಗಳಿವೆ. ಇದರೊಂದಿಗೆ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಕೂಡ ಆಗಬಹುದು. ಶಸ್ತ್ರ ಚಿಕಿತ್ಸೆ ಸಮಯದಲ್ಲಿ ಗರ್ಭಕೋಶದ ಸಮೀಪವಿರುವ ಅಂಗಗಳಿಗೆ ಗಾಯವಾಗಬಹುದು. ಸಿಸೇರಿಯನ್ ಅನ್ನು ಅವಶ್ಯಕವಲ್ಲದ ಸಮಯದಲ್ಲಿ ಆರಿಸಿಕೊಂಡಾಗ ತೊಂದರೆಯಾಗುತ್ತದೆ. ಸಿ-ಸೆಕ್ಷನ್ ಡೆಲಿವರಿ ವರವೋ ಅಥವಾ ಶಾಪವೋ ಎಂಬುದು ಪರಿಸ್ಥಿತಿಯ ಮೇಲೆ ಅವಲಂಬಿತವಾಗಿದೆ.

ಈ ಸಮಯದಲ್ಲಿ ಸಿ-ಸೆಕ್ಷನ್ ಅವಶ್ಯ

ತಾಯಿಯ ದೇಹದ ತೂಕ ಹೆಚ್ಚಿದ್ದರೆ ಅಥವಾ ಎತ್ತರ ಕಮ್ಮಿ ಇದ್ದರೆ ಸಿಸೇರಿಯನ್ ನತ್ತ ವೈದ್ಯರು ಗಮನ ಹರಿಸುತ್ತಾರೆ. ಹಾಗೆಯೇ ಹೆರಿಗೆ ಸಂದರ್ಭದಲ್ಲಿ ತಾಯಿಯ ಆರೋಗ್ಯದಲ್ಲಿ ಏರುಪೇರು, ಗರ್ಭದಲ್ಲಿ ಮಗುವಿನ ಅಸಹಜ ಸ್ಥಾನ ಮುಂತಾದ ಸಮಸ್ಯೆಗಳಿದ್ದಾಗ ನೈಸರ್ಗಿಕ ಹೆರಿಗೆ ಕಷ್ಟವಾಗುತ್ತದೆ. ನೋವು ಶುರುವಾದ ನಂತರ ಕ್ರಮೇಣವಾಗಿ ಮಗುವಿನ ತಲೆ ಹೊರಗೆ ಕಾಣಲು ಶುರುವಾಗುತ್ತದೆ. ಹಾಗೆಯೇ ಪೂರ್ಣವಾಗಿ ಹೊರಬರಬೇಕು. ಆದರೆ 5-6 ಗಂಟೆಗಳಾದರೂ ಮಗುವಿನ ದೇಹ ಪೂರ್ಣವಾಗಿ ಹೊರಬಾರದೆ ಇದ್ದಾಗ ಸಿ-ಸೆಕ್ಷನ್​ಗೆ ಮುಂದಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಿಸೇರಿಯನ್ ಹೆರಿಗೆ ಹೆಚ್ಚುತ್ತಿರುವುದಕ್ಕೆ ಇದೇ ಬಹಳ ಪ್ರಮುಖ ಕಾರಣ. ಮಗುವಿನ ಬೆಳವಣಿಗೆಯಲ್ಲಿ ಲೋಪ, ತಾಯಿಯ ಕರುಳು ಕುತ್ತಿಗೆಗೆ ಸುತ್ತಿಕೊಂಡಂತಹ ಸಂದರ್ಭಗಳಲ್ಲಿ ಸಿಸೇರಿಯನ್ ಡೆಲಿವರಿ ತಾಯಿ-ಮಗುವಿನ ಜೀವ ಉಳಿಸುತ್ತದೆ.

ಸಲಹೆ, ಅಭಿಪ್ರಾಯ ಮತ್ತು ಬರಹಗಳಿಗೆ: lalithavijayavani@gmail.com

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net