

ಅಫ್ಘಾನಿಸ್ತಾನವನ್ನು ತನ್ನ ಸಾಮರಿಕ ಹಿತ್ತಲು ಮಾಡಿಕೊಳ್ಳುವ ಪಾಕಿಸ್ತಾನದ ಕನಸು ಭಗ್ನವಾಗಿದೆ. ಅಪ್ಘಾನ್ ತಾಲಿಬಾನ್ಗೂ, ಪಾಕ್ ತಾಲಿಬಾನ್ಗೂ ವಾಸ್ತವದ ಅರಿವಾಗಿದ್ದು, ಪಾಕಿಸ್ತಾನದ ಒಳಬೇಗುದಿಯನ್ನು ಹೆಚ್ಚಿಸಿದೆ. ತನ್ನದೇ ತಪು್ಪಗಳಿಂದಾಗಿ ಅದು ಸಂಕಷ್ಟಕ್ಕೆ ಸಿಲುಕಿರುವುದು ಸ್ಪಷ್ಟ.
ತಾಲಿಬಾನ್ ಒಂದು ಭಯೋತ್ಪಾದಕ ಸಂಘಟನೆ ಎಂಬ ಅಭಿಪ್ರಾಯ ಜಾಗತಿಕವಾಗಿ ಸಾರ್ವತ್ರಿಕವಾಗಿದ್ದರಿಂದ ಯಾವ ದೇಶವೂ ಅದನ್ನು ಮಾನ್ಯ ಮಾಡಲಿಲ್ಲ ಮತ್ತದನ್ನು ವಿಶ್ವಸಂಸ್ಥೆಯ ಜತೆಗೆ ಜಾಗತಿಕ ಆರ್ಥಿಕ ಸಂಸ್ಥೆಗಳೂ ದೂರ ಇಟ್ಟವು. ಹೀಗಾಗಿ ಯುದ್ಧದಿಂದ ಕ್ಷತಿಗೊಂಡಿದ್ದ ಅಫ್ಘನ್ ಅರ್ಥವ್ಯವಸ್ಥೆಯನ್ನು ಸುಧಾರಿಸಲು ತಾಲಿಬಾನ್ಗೆ ಯಾವುದೇ ಜಾಗತಿಕ ಸಂಸ್ಥೆಗಳಿಂದ ಒಂದು ಬಿಡಿಗಾಸೂ ಸಿಗದಂಥ ಸ್ಥಿತಿ ನಿರ್ವಣವಾಗಿತ್ತು. ಸೌದಿ ಅರೇಬಿಯಾ ಮತ್ತು ಯುಎಇಗಳಿಂದ ದೊರೆಯುತ್ತಿದ್ದ ಹಣಕಾಸಿನ ನೆರವು ತಾಲಿಬಾನ್ ಸೇನೆ ಜೀವ ಹಿಡಿದುಕೊಂಡಿರಲಷ್ಟೇ ಸಾಲುವಂತಿದ್ದವು. ಅಮೆರಿಕದಿಂದ ಡಾಲರ್ಗಳ ಪ್ರವಾಹ ನಿಂತುಹೋಗಿದ್ದರಿಂದ ಪಾಕಿಸ್ತಾನದಿಂದ ಏನೂ ಗಿಟ್ಟುವಂತಿರಲಿಲ್ಲ. ಇಷ್ಟಾಗಿಯೂ, ತಾಲಿಬಾನ್ ಅನ್ನು ತನ್ನ ಆಶ್ರಯದಲ್ಲಿಟ್ಟುಕೊಂಡು, ಅದು ಸ್ವತಂತ್ರ ನೀತಿ ಅನುಸರಿಸುವ ಅವಕಾಶಗಳನ್ನೂ ತಡೆದು, ಅದನ್ನು ತನ್ನ ಭೂ-ರಾಜಕೀಯ ಅಗತ್ಯಗಳಿಗೆ ಉಪಯೋಗಿಸಿಕೊಳ್ಳುವುದು ಪಾಕಿಸ್ತಾನದ ನೀತಿಯಾಗಿತ್ತು. ಅದೇನೆಂದು ಸಂಕ್ಷಿಪ್ತವಾಗಿ ನೋಡಿ ಮುಂದೆ ಹೋಗೋಣ.
1971ರ ಯುದ್ಧ ಮತ್ತು ವಿಭಜನೆ ಹಾಗೂ 1984ರ ಸಿಯಾಚಿನ್ ಹಿನ್ನಡೆ ಭಾರತವನ್ನು ಸಾಂಪ್ರದಾಯಿಕ ಯುದ್ಧದಲ್ಲಿ ಮಣಿಸುವುದು ಅಸಾಧ್ಯ ಎಂಬ ಅರಿವನ್ನು ಪಾಕಿಸ್ತಾನಕ್ಕೆ ಮೂಡಿಸಿತ್ತು. ಶಕ್ತಿ ಸಮತೋಲನಕ್ಕಾಗಿ ಅದು 1987ರ ಹೊತ್ತಿಗೆ ಅಣ್ವಸ್ತ್ರಗಳನ್ನು ಗಳಿಸಿಕೊಂಡರೂ ಅವುಗಳನ್ನು ಬೇಕೆಂದಾಗ ಉಪಯೋಗಿಸಲು ಸಾಧ್ಯವಿರಲಿಲ್ಲ. ಅಂತಹದೊಂದು ವಿಫಲ ಪ್ರಯತ್ನವನ್ನು ಅದು ಜುಲೈ 1990ರಲ್ಲಿ ಮಾಡಹೋಗಿ ಭಾರತದಿಂದ ಮಾರಣಾಂತಿಕ ಪೆಟ್ಟು ತಿನ್ನುವ ಅಪಾಯವನ್ನು ಕಂಡುಕೊಂಡು ತೆಪ್ಪಗಾಗಿತ್ತು. ಹೀಗಾಗಿ ಅಣ್ವಸ್ತ್ರಗಳು ಭಾರತದ ವಿರುದ್ಧ ಪ್ರಯೋಜನಕ್ಕೆ ಬರುವಂತಿರಲಿಲ್ಲ. ತನ್ನ ಜನರಿಗೇ ತೋರಿಸಿ, ತಾನೆಷ್ಟು ಶಕ್ತಿವಂತ ಎಂದವರನ್ನು ಮರುಳು ಮಾಡಲಷ್ಟೇ ಅವುಗಳ ಪ್ರಯೋಜನ ಪಾಕ್ ಸೇನೆಗಿದ್ದದ್ದು.
ಸಾಂಪ್ರದಾಯಿಕ ಅಸ್ತ್ರಗಳಲ್ಲಂತೂ ಪಾಕ್ ಸೇನೆ ಭಾರತೀಯ ಸೇನೆಯಿಂದ ಮೈಲುಗಟ್ಟಲೆ ಹಿಂದಿತ್ತು. ಇಂತಹ ಸನ್ನಿವೇಶದಲ್ಲಿ ಯಾವುದೇ ಕಾರಣದಿಂದ, ಮುಖ್ಯವಾಗಿ ಕಾಶ್ಮೀರದಲ್ಲಿ ತನ್ನ ಭಯೋತ್ಪಾದಕ ಕೃತ್ಯಗಳಿಗೆ ಪ್ರತಿಯಾಗಿ ಭಾರತವೇನಾದರೂ 1965ರಲ್ಲಿ ಮಾಡಿದಂತೆ ಪಂಜಾಬ್ ಮತ್ತು ರಾಜಸ್ಥಾನ ವಲಯದಲ್ಲಿ ಯುದ್ಧ ಆರಂಭಿಸಿದರೆ ತಾವು ಸಿಂಧ್ ಹಾಗೂ ಪಂಜಾಬ್ಗಳೆರಡನ್ನೂ ಭಾರತಕ್ಕೆ ಬಿಟ್ಟುಕೊಟ್ಟು ಉತ್ತರದ ಪರ್ವತ ಸೀಮೆಗಳಿಗೆ ಓಡಿಹೋಗಬೇಕಾಗುತ್ತದೆ ಎಂದು ಪಾಕ್ ಸೇನಾ ವರಿಷ್ಠರು ಮತ್ತು ವಿಶೇಷಜ್ಞರು ಲೆಕ್ಕ ಹಾಕಿದರು. ಆಗ ಅವರಿಗೆ ಕಂಡ ಬೆಳ್ಳಿರೇಖೆಯೇ ಅಫ್ಘಾನಿಸ್ತಾನ.
ಅಫ್ಘಾನಿಸ್ತಾನವನ್ನು ಪದಾಕ್ರಾಂತಗೊಳಿಸಿಕೊಳ್ಳಲು ಮಂಗೋಲರಿಂದ ಹಿಡಿದು ಬ್ರಿಟಿಷರವರೆಗೆ ಯಾರಿಗೂ ಸಾಧ್ಯವಾಗಿಲ್ಲ ಎನ್ನುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಬ್ರಿಟಿಷರು ಬಳಸಿದ್ದೂ ಭಾರತೀಯ ಸೈನಿಕರನ್ನೇ. ಅವರನ್ನು ಅಫ್ಘನ್ನರು ಮೂರು ಸಲ ಬಡಿದು ಓಡಿಸಿದ್ದರು. ಇಂದು ಅದೇ ಭಾರತೀಯ ಸೇನೆ ಸಿಂಧ್ ಮತ್ತು ಪಂಜಾಬ್ಗಳನ್ನು ಆಕ್ರಮಿಸಿಕೊಂಡರೆ ತಾವು ತಮ್ಮ ಸೇನೆಯನ್ನು ಅಫ್ಘಾನಿಸ್ತಾಕ್ಕೆ ಕೊಂಡೊಯ್ದು, ಅಲ್ಲಿ ಭದ್ರವಾಗಿ ನೆಲೆನಿಂತು ಭಾರತೀಯ ಸೇನೆಯನ್ನು ಎದುರಿಸಬೇಕು, ಆ ತಂತ್ರದಿಂದಲೇ ಕಳೆದುಹೋದ ಪ್ರದೇಶಗಳನ್ನೂ ಮತ್ತೆ ಗಳಿಸಿಕೊಳ್ಳಬಹುದು ಎನ್ನುವುದು ಪಾಕ್ ಸೇನಾನಾಯಕರ ತರ್ಕವಾಗಿತ್ತು. ಅಂದರೆ ಅಫ್ಘಾನಿಸ್ತಾನವನ್ನು ಒಂದು ಸಾಮರಿಕ ಹಿತ್ತಲು ಮಾಡಿಕೊಳ್ಳುವುದು ಅವರ ರಣನೀತಿಯಾಗಿತ್ತು. ಹೊರಗಿನ ಯಾರನ್ನೂ ತಮ್ಮೊಳಗೆ ಬಿಟ್ಟುಕೊಳ್ಳದ ಅಫ್ಘನ್ನರು ತಮ್ಮನ್ನು ಮಾತ್ರ ಒಳಬಿಟ್ಟುಕೊಳ್ಳುತ್ತಾರೆ ಎಂದು ಪಾಕ್ನ ಸಮರತಜ್ಞರು ತಿಳಿದದ್ದು ಮೂರ್ಖತನವೇ ಅಥವಾ ಧಾರ್ವಿುಕ ಬಾಂಧವ್ಯದ ಮೇಲಿಟ್ಟ ವಿಶ್ವಾಸವೇ ತಿಳಿಯದು. ಒಟ್ಟಿನಲ್ಲಿ ಅಫ್ಘಾನಿಸ್ತಾನವನ್ನು ತನಗೆ ಸಮೀಪವಾಗಿರಿಸುವ ಹಾಗೂ ತನಗೆ ಬೇಕೆಂದಾಗ ‘ಆಶ್ರಯ’ವನ್ನೂ ನೀಡುವ ಅಫ್ಘನ್ ನಾಯಕತ್ವವೆಂದರೆ ತಾಲಿಬಾನ್ ಮಾತ್ರ ಎಂದು ಪಾಕಿಸ್ತಾನ ತೀರ್ವನಿಸಿತು.
ಸೋವಿಯೆತ್ ಸೇನೆಯ ವಿರುದ್ಧ ಹೋರಾಡಲು ತಾನು ನೀಡಿದ ಸಹಾಯ ಮತ್ತು ಮಿಲಿಯಾಂತರ ಪಖ್ತೂನಿ ಅಫ್ಘನ್ನರಿಗೆ ತಾನು ದಶಕಗಟ್ಟಲೆ ಊಟ, ವಸತಿ ಒದಗಿಸಿದ್ದನ್ನು ‘ಪಖ್ತೂನಿ’ ತಾಲಿಬಾನ್ ಎಂದೂ ಮರೆಯುವುದಿಲ್ಲವೆಂದೂ ಪಾಕಿಸ್ತಾನ ನೆಮ್ಮದಿಗೊಂಡಿತು. ಜತೆಗೆ, ಭಾರತವನ್ನು ಸಹಸ್ರ ಗಾಯಗಳಿಂದ ರಕ್ತ ಹರಿಸಿಕೊಂಡು ಒದ್ದಾಡುವಂತೆ ಮಾಡುವ ತನ್ನ ಭಯೋತ್ಪಾದಕ ನೀತಿಗೆ ತಾಲಿಬಾನ್ ಸಹಕಾರಿಯಾಗುತ್ತದೆಂದೂ ಆಶಿಸಿತು. ಅದು ನಿಜವಾಯಿತು ಕೂಡ. 1999ರ ಡಿಸೆಂಬರ್ನಲ್ಲಿ ಕಾಶ್ಮೀರಿ ಮತ್ತು ಪಾಕಿಸ್ತಾನಿ ಭಯೋತ್ಪಾದಕರನ್ನು ಬಳಸಿಕೊಂಡು ಐಎಸ್ಐ ಆಯೋಜಿಸಿದ ನಮ್ಮ ಐಸಿ-814 ವಿಮಾನದ ಅಪಹರಣವನ್ನು ಒಂದು ಉದಾಹರಣೆಯಾಗಿ ನೆನಪಿಸಿಕೊಳ್ಳಿ. ವಿಮಾನ ಕಂದಹಾರ್ ತಲುಪಿದಾಗ ತಾಲಿಬಾನ್ ವಿದೇಶ ಮಂತ್ರಿ ವಕೀಲ್ ಅಹ್ಮದ್ ನಮಗೆ ಸಹಕಾರ ನೀಡುವಂತೆ ನಟಿಸುತ್ತಲೇ ಐಎಸ್ಐಗೆ ಬೇಕಾದ್ದನ್ನು ಸಾಧಿಸಿಕೊಟ್ಟದ್ದನ್ನು ಮರೆಯಲಾದೀತೇ? ಆಗ ಭಾರತ ನೀಡಿದ ಒಂದು ಲಕ್ಷ ಡಾಲರ್ಗಳು ಸೇರಿದ್ದು ಅಲ್-ಖಯೀದಾ ಕೈಗೆ, ಅದನ್ನು ಆ ಕುಖ್ಯಾತ ಮೂಲಭೂತವಾದಿ ಭಯೋತ್ಪಾದಕ ಸಂಘಟನೆ ಬಳಸಿದ್ದು ತನ್ನ ಕೆಲವು ಭಯೋತ್ಪಾದಕರಿಗೆ ಜರ್ಮನಿಯಲ್ಲಿ ವಿಮಾನ ಚಾಲನಾ ತರಬೇತಿ ಕೊಡಿಸಲು ಎಂದು ಕೆಲವು ಮೂಲಗಳು ಹೇಳುತ್ತವೆ! ಅದರ ಪರಿಣಾಮವೇ ಸೆಪ್ಟೆಂಬರ್ 11, 2001ರಂದು ಅಮೆರಿಕ ಮೇಲೆ ನಡೆದ ದಾಳಿ. ತಾಲಿಬಾನ್ ತನ್ನ ಸೃಷ್ಟಿಕರ್ತನ ಕೈ ಮೀರತೊಡಗಿದ್ದರ ಮೊದಲ ದೊಡ್ಡ ಉದಾಹರಣೆ ಇದು.
9/11 ದಾಳಿಗಳಿಗೆ ಪ್ರತಿಯಾಗಿ ಒಸಾಮಾ ಬಿನ್ ಲಾಡೆನ್ ಮತ್ತವನ ಸಹಚರರನ್ನು ಹುಡುಕಿ ಕೊಲ್ಲಲು ಅಫ್ಘಾನಿಸ್ತಾನದ ಮೇಲೆ ಎರಗಿದ ಅಮೆರಿಕ ಆ ಹಾದಿಯಲ್ಲಿ ತಾಲಿಬಾನ್ ಸರ್ಕಾರವನ್ನು ಕಿತ್ತೊಗೆಯಿತು. ನೇತಾರ ಮುಲ್ಲಾ ಒಮರ್ ಸೇರಿದಂತೆ ಬಹುತೇಕ ತಾಲಿಬಾನಿಗಳು ಆಶ್ರಯವನ್ನರಸಿ ಪಾಕಿಸ್ತಾನಕ್ಕೆ ಓಡಿಬಂದರು. ಮತ್ತು ಪಾಕ್ ನೆಲದಿಂದ ಅಮೆರಿಕನ್ ಸೇನೆಯ ವಿರುದ್ಧ ಗೆರಿಲ್ಲಾ ಯುದ್ಧ ಆರಂಭಿಸಿದರು. ತಾಲಿಬಾನಿ ಅಫ್ಘಾನಿಸ್ತಾನವನ್ನು ತನ್ನ ಸಾಮರಿಕ ಹಿತ್ತಲು ಮಾಡಿಕೊಳ್ಳಲು ಪಾಕಿಸ್ತಾನ ಲೆಕ್ಕಹಾಕಿತ್ತು. ಆದರೆ ಇತಿಹಾಸದ ಒಂದು ಸುಂದರ ವಿಪರ್ಯಾಸದಂತೆ ಪಾಕಿಸ್ತಾನವನ್ನೇ ತಾಲಿಬಾನ್ ತನ್ನ ಸಾಮರಿಕ ಹಿತ್ತಲು ಮಾಡಿಕೊಂಡಿತು!
ಅಮೆರಿಕ ತನ್ನ ‘ಭಯೋತ್ಪಾದನೆಯ ವಿರುದ್ಧದ ಸಮರ’ದಲ್ಲಿ ಸೇರಲೇಬೇಕೆಂದೂ, ಇಲ್ಲದಿದ್ದರೆ ಗತಿ ನೆಟ್ಟಗಿರುವುದಿಲ್ಲವೆಂದೂ ಪಾಕಿಸ್ತಾನದ ಮೇಲೆ ಅಮೆರಿಕ ಒತ್ತಡ ಹಾಕಿದಾಗ ಇಸ್ಲಾಮಾಬಾದ್ಗೆ ಇಕ್ಕಟ್ಟು. ಕೊನೆಗೂ ಪಾಕ್ ಸೇನಾ ಆಡಳಿತಗಾರ ಪರ್ವೆಜ್ ಮುಷರಫ್ ಅಮೆರಿಕಕ್ಕೆ ಸಹಕಾರ ನೀಡುತ್ತಲೇ ತಾಲಿಬಾನಿಗಳನ್ನು ರಕ್ಷಿಸುವ, ಬೇಟೆನಾಯಿಯೊಂದಿಗೆ ಸೇರಿ ಬೇಟೆಯಾಡುವ, ಮೊಲದೊಂದಿಗೆ ಸೇರಿ ಓಡುವ ಇಬ್ಬಂದಿ ನೀತಿಗೆ ಶರಣಾದರು. ಆದರೆ ಅಮೆರಿಕನ್ ಸೈನಿಕರು ಮತ್ತು ಯುದ್ಧಸಾಮಗ್ರಿಗಳು ಅಫ್ಘಾನಿಸ್ತಾನ ತಲುಪಲು ತನ್ನ ನೆಲ ಹಾಗೂ ವಾಯುಪ್ರದೇಶದ ಮೂಲಕ ಪಾಕಿಸ್ತಾನ ಅವಕಾಶ ಮಾಡಿಕೊಟ್ಟದ್ದನ್ನೇ ಮಿತ್ರದ್ರೋಹ ಎಂದು ಪರಿಗಣಿಸಿದ ತಾಲಿಬಾನ್ ಪ್ರತೀಕಾರಕ್ಕಿಳಿದು ತನ್ನ ಸೈನಿಕರು ಪಾಕಿಸ್ತಾನಿ ಸೇನಾ ಠಿಕಾಣಿಗಳ ಮೇಲೆ, ಸೇನಾವಾಹನಗಳ ಮೇಲೆ ದಾಳಿಯೆಸಗುವಂತೆ ಮಾಡಿತು. ಜತೆಗೇ, ಗಡಿನಾಡು ಪ್ರಾಂತ್ಯದಲ್ಲಿದ್ದ ಅಫ್ಘನ್ ನಿರಾಶ್ರಿತರ ಶಿಬಿರಗಳಲ್ಲಿ ಪಾಕ್-ವಿರೋಧಿ ಚಟುವಟಿಕೆಗಳು ರೂಪುಗೊಳ್ಳುವಂತೆಯೂ ಮಾಡಿತು. ಜಲೋಝಾಯ್, ಕಚ್ಛಾಗಢೀ, ಝುರೀನೂರ್ನಂಥ ಬೃಹತ್ ನಿರಾಶ್ರಿತ ಶಿಬಿರಗಳು ಪಾಕ್-ವಿರೋಧಿ ತಾಲಿಬಾನ್ ಚಟುವಟಿಕೆಗಳ ಕೇಂದ್ರಸ್ಥಾನಗಳಾಗಿವೆ ಎಂಬ ಆಪಾದನೆಯೊಂದಿಗೆ ಪಾಕ್ ಸೇನೆ ಅವುಗಳನ್ನೆಲ್ಲ ಮುಚ್ಚಿಬಿಟ್ಟಿತು. ಆದರೆ ಪಖ್ತೂನಿಗಳೇ ಆದ ಆ ಅಫ್ಘನ್ ನಿರಾಶ್ರಿತರನ್ನು ಪೂರ್ಣವಾಗಿ ದಿಕ್ಕೆಡಿಸುವುದು ಹೆಚ್ಚಿನ ಅಪಾಯಕ್ಕೆ ಮೂಲ ಎಂದು ತಿಳಿದು ಅವರನ್ನು ದೂರದೂರದ ಪುಟ್ಟಪುಟ್ಟ ಅಂದರೆ ತಾನು ಕಣ್ಣಿಡಬಹುದಾದ ಶಿಬಿರಗಳಿಗೆ ವರ್ಗಾಯಿಸಿತು. ಆದರೆ ಪಾಕ್ ನೆಲದಲ್ಲಿದ್ದ ಸುಮಾರು ನಲವತ್ತು ಲಕ್ಷ ನಿರಾಶ್ರಿತರ ಮೇಲೆ ಕಣ್ಣಿಡುವುದು ಪಾಕ್ ಸೇನೆಗೆ ಸಾಧ್ಯವೇ ಇರಲಿಲ್ಲ. ಅವರೊಂದಿಗೆ ಗಡಿನಾಡು ಪ್ರಾಂತ್ಯದ ಪಖ್ತೂನಿಗಳೂ ಕೂಡಿಕೊಂಡು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ಅಥವಾ ಪಾಕ್ ತಾಲಿಬಾನ್ ತಲೆಯೆತ್ತಿತು.
ಅಫ್ಘನ್ ತಾಲಿಬಾನಿಗಳ ಬೆಂಬಲ ಪಡೆದ ಪಾಕ್ ತಾಲಿಬಾನಿಗಳ ವಿರುದ್ಧ ಪಾಕ್ ಸೇನೆ ಕಾರ್ಯಾಚರಣೆ ಕೈಗೊಂಡಾಗ ಅದರಲ್ಲೇ ಇದ್ದ ಸಹಸ್ರಾರು ಪಖ್ತೂನಿ ಸೈನಿಕರು ಪಾಳಯ ಬದಲಾಯಿಸಿ ತಾಲಿಬಾನಿಗಳ ಕಡೆ ಸೇರಿಕೊಂಡರು. ತನ್ನದೇ ನೆಲದ ಪಖ್ತೂನಿಗಳ ಬಗ್ಗೆ ಪಾಕಿಸ್ತಾನದ ಅಜ್ಞಾನ ಎಷ್ಟಿತ್ತೆನ್ನುವುದರ ಬಗ್ಗೆ ನಿಮಗೊಂದು ಉದಾಹರಣೆ ನೀಡುತ್ತೇನೆ. ಸೇನಾ ಕಾರ್ಯಾಚರಣೆಯಲ್ಲಿ ಪಾಕ್ ತಾಲಿಬಾನಿಗಳು ಹತರಾಗತೊಡಗಿದಾಗ ಅವರ ದೇಹಗಳನ್ನು ಪರಿಶೀಲಿಸಿ, ಹಲವರಿಗೆ ಸುನ್ನತಿಯಾಗಿಲ್ಲದ್ದನ್ನು ಕಂಡುಕೊಂಡ ಪಾಕ್ ಸೇನೆ, ಅವರೆಲ್ಲರೂ ಭಾರತದಿಂದ ಬಂದು ತಾಲಿಬಾನಿಗಳ ಜತೆ ಸೇರಿಕೊಂಡಿರುವ ಹಿಂದೂಗಳು ಎಂದು ಹೇಳತೊಡಗಿತು. ಐಎಸ್ಐನ ಸಾರ್ವಜನಿಕ ಸಂಪರ್ಕ ಇಲಾಖೆ ಐಎಸ್ಪಿಆರ್ ಅಂತೂ ಇದನ್ನು ಜಗತ್ತಿಗೇ ಸಾರಿ, ಭಾರತ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದೆ ಎಂದು ಅಪಪ್ರಚಾರ ಮಾಡತೊಡಗಿತು. ಆದರೆ ಕೆಲವೇ ದಿನಗಳಲ್ಲಿ ಹೊರಬಂದ ಸತ್ಯವೆಂದರೆ ಆ ಮೃತ ತಾಲಿಬಾನಿಗಳೆಲ್ಲ ಗಡಿನಾಡಿನವರೇ ಮತ್ತು ಮುಸ್ಲಿಮರೇ, ಬಡತನ ಹಾಗೂ ದುರ್ಗಮ ಗಡಿನಾಡಿನಲ್ಲಿ ಪೂರಕ ಸೌಲಭ್ಯಗಳಿಲ್ಲದ ಕಾರಣ ಸುನ್ನತಿ ಆಗದೇ ಇರುವುದು ಸಾಮಾನ್ಯ, ಆ ನೆಲದಲ್ಲಿ ಸುನ್ನತಿ ಕಡ್ಡಾಯವಲ್ಲ, ಇದು ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ ಎಂದು. ತನ್ನದೇ ಜನರ ಪಾರಂಪರಿಕ ರೀತಿರಿವಾಜುಗಳ ಬಗ್ಗೆ ಸರ್ಕಾರವೊಂದಕ್ಕೆ ಅರಿವಿಲ್ಲದರ ಒಂದು ಅತ್ಯುತ್ತಮ ಉದಾಹರಣೆ ಇದು.
ಮುಂದಿನ ದೊಡ್ಡ ಕಥೆಯನ್ನು ಚಿಕ್ಕದಾಗಿಸಿ ಹೇಳುವುದಾದರೆ, ಪಖ್ತೂನಿಗಳ ಪಾಕ್-ದ್ವೇಷ ಕಾಲು ಶತಮಾನದ ನಂತರ ಮತ್ತೆ ಭುಗಿಲೆದ್ದಿತು ಮತ್ತು ಭಯೋತ್ಪಾದಕ ಪಾಕಿಸ್ತಾನವೇ ವ್ಯಾಪಕ ಭಯೋತ್ಪಾದನೆಗೆ ತುತ್ತಾಗತೊಡಗಿತು. ಎರಡು ವರ್ಷಗಳ ಹಿಂದೆ ಅಫ್ಘಾನಿಸ್ತಾನವನ್ನು ತಾಲಿಬಾನ್ಗೇ ಬಿಟ್ಟು ಅಮೆರಿಕ ಓಡಿಹೋಗುವ ಹೊತ್ತಿಗೆ ಅಫ್ಘಾನಿಸ್ತಾನಕ್ಕೆ ಯಾರು ನಿಜವಾದ ಹಿತವರು ಎಂದು ತಾಲಿಬಾನ್ಗೆ ಅರಿವಾಗಿತ್ತು. ಆ ಅರಿವು ಪಾಕ್ ತಾಲಿಬಾನ್ಗೂ ತಲುಪಿತು. ಇಂದು ಪಾಕಿಸ್ತಾನ ಕೊಡಬಹುದಾದ ಮದ್ದುಗುಂಡಿನ ಅಗತ್ಯವಿಲ್ಲ, ಈಗ ಬೇಕಾಗಿರುವುದು ಭಾರತ ಕೊಡಬಹುದಾದ ಗೋಧಿ ಮತ್ತು ಔಷಧಗಳು ಎಂದು ತಾಲಿಬಾನ್ ಸರ್ಕಾರ ಹೇಳಿದರೆ, ಪಿಒಕೆ ಭಾರತಕ್ಕೆ ಸೇರಬೇಕು ಎಂದು ಪಾಕ್ ತಾಲಿಬಾನ್ ಘೊಷಿಸಿದೆ! ಇಂಗು ತಿಂದ ಮಂಗನಂತಾದ ಪಾಕಿಸ್ತಾನ ಡ್ಯೂರಾಂಡ್ ಗಡಿರೇಖೆಯ ಆಚೀಚಿನ ಪಖ್ತೂನಿಗಳನ್ನು ಪ್ರತ್ಯೇಕಿಸುವುದೇ ಅವರ ಶಕ್ತಿಯನ್ನು ಕುಗ್ಗಿಸುವ ಮಾರ್ಗ ಎಂದು ತೀರ್ವನಿಸಿ ತನ್ನ ನೆಲದಲ್ಲಿರುವ ಸುಮಾರು ಹದಿನೇಳು ಲಕ್ಷ ಅಫ್ಘನ್ನರನ್ನು ಬಲವಂತವಾಗಿ ತೋರ್ಖಂ ಮತ್ತು ಚಮನ್ ಗಡಿಮಾರ್ಗಗಳ ಮೂಲಕ ಬಲವಂತವಾಗಿ ಅಫ್ಘಾನಿಸ್ತಾನಕ್ಕೆ ಅಟ್ಟಲು ನವೆಂಬರ್ ಮೊದಲ ವಾರದಿಂದ ಆರಂಭಿಸಿದೆ. ಅಫ್ಘಾನಿಸ್ತಾನಕ್ಕೆ ಹೋಗಬಯಸದೇ ಪಶ್ಚಿಮದ ದೇಶಗಳಲ್ಲಿ ಆಶ್ರಯ ಅರಸಿ ಹೋಗುವವರ ಮೇಲೆ ತಲಾ 830 ಡಾಲರ್ಗಳ ನಿರ್ಗಮನ ಶುಲ್ಕ ವಿಧಿಸಿದೆ. ನಾಲ್ಕು ದಶಕಗಳಿಂದಲೂ ಪಾಕಿಸ್ತಾನವೇ ಮನೆಯಾಗಿರುವವರಿಗೆ ಅಫ್ಘಾನಿಸ್ತಾನದಲ್ಲಿ ಎಲ್ಲಿಗೆ ಹೊಗಬೇಕೆಂದು ತಿಳಿಯುತ್ತಿಲ್ಲ, ಪಶ್ಚಿಮದ ದೇಶಗಳಲ್ಲಿ ಆಶ್ರಯವನ್ನು ಇಚ್ಛಿಸುವವರ ಬಳಿ ಪಾಕಿಸ್ತಾನಕ್ಕೆ ತೆರಲು ಎರಡೂವರೆ ಲಕ್ಷ ಪಾಕ್ ರೂಪಾಯಿಗಳು ಇಲ್ಲ! ಅಂತಿಮವಾಗಿ ಆಗಿರುವುದೇನೆಂದರೆ, ಅಫ್ಘಾನಿಸ್ತಾನವನ್ನು ತನ್ನ ಸಾಮರಿಕ ಹಿತ್ತಲು ಮಾಡಿಕೊಳ್ಳುವ ಪಾಕ್ ಕನಸು ಹಳವಂಡವಾಗಿದೆ, ಅಫ್ಘನ್ನರಿಗೆ ಪಾಕ್ ನೆಲ ನರಕವಾಗಿದೆ. ಸುಳ್ಳುಗಳ ಮೇಲೆ ಕಟ್ಟಿದ ಸೌಧಗಳು ಒಂದುದಿನ ಕುಸಿಯುತ್ತವೆ. ಈಗ ಅದೇ ಆಗುತ್ತಿದೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)