ಬೆಟ್ಟದ ಮೇಲೊಂದು ಮನೆ ಮಾಡಿ…

Helping Human
Published on

| ರವಿ ಮಡೋಡಿ

ಊರಿನಲ್ಲಿ ವ್ಯಕಿಯೊಬ್ಬರು ಪ್ರಾಮಾಣಿಕವಾಗಿ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಬೇರೆಯವರಿಗೆ ಸಹಾಯವನ್ನು ಮಾಡುತ್ತಿದ್ದರು. ಇದನ್ನು ಸಹಿಸದ ಕೆಲವು ವ್ಯಕ್ತಿಗಳು ಅವರ ಕಾರ್ಯದ ಬಗ್ಗೆ ಇಲ್ಲಸಲ್ಲದ ಆರೋಪ, ಅಪಮಾನ ಮಾಡುತ್ತಿದ್ದರು. ಇದರಿಂದ ಆ ವ್ಯಕ್ತಿಗೆ ಬಹಳ ಬೇಸರವಾಯಿತು. ಸಮಾಜವೇ ತನ್ನ ಬಗ್ಗೆ ಆಕ್ಷೇಪವನ್ನು ಹೊಂದಿರುವಾಗ ತಾನು ಇದರಲ್ಲಿ ಮುಂದುವರಿಯುವುದು ಅರ್ಥವಿಲ್ಲ ಎಂದು ಭಾವಿಸಿದರು. ಹಾಗಾಗಿ ತಾವು ಮಾಡುವ ಕಾರ್ಯದಿಂದ ದೂರ ಸರಿಯುವುದಕ್ಕೆ ನಿಶ್ಚಯಿಸಿದರು.

ಇದೇ ಸಮಯದಲ್ಲಿ ಬಡ ಹುಡುಗನೊಬ್ಬ ಅವರ ಬಳಿಗೆ ಸಹಾಯ ಯಾಚಿಸಿಕೊಂಡು ಬಂದ. ಇನ್ನು ಮುಂದೆ ತಾನು ಯಾರಿಗೂ ಸಹಾಯ ಮಾಡಲಾರೆ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿ ಹುಡುಗನನ್ನು ಹೊರಕ್ಕೆ ಕಳುಹಿಸಿದರು. ಇವರ ಈ ನಡವಳಿಕೆ ಗಮನಿಸಿದ ವ್ಯಕ್ತಿಯ ತಂದೆ, ಬೇಸರ ಹೊಂದಿದ ಮಗನಲ್ಲಿ ಕಾರಣ ಕೇಳಿದರು. ತಾನು ಬಹಳ ನಿಷ್ಠೆಯಿಂದ ಕಾರ್ಯ ಮಾಡಿದರೂ ಸಹಿಸದ ವ್ಯಕ್ತಿಗಳು ಇದ್ದಾರೆ. ವಿನಾಕಾರಣ ಅಪವಾದ, ಆಕ್ಷೇಪ ಮಾಡುತ್ತಿದ್ದಾರೆ. ಹೀಗಾಗಿ, ಇನ್ನು ಮುಂದೆ ಯಾರಿಗೂ ಸಹಾಯವನ್ನು ಮಾಡಬಾರದು ಎಂದು ನಿಶ್ಚಯಿಸಿದ್ದೇನೆ ಎಂದು ಮಗ ತಿಳಿಸಿದ. ತಂದೆ ಸರಿಯೆಂದು ಒಂದು ಹಾಳೆ ಹಾಗೂ ಲೇಖನಿ ತರುವುದಕ್ಕೆ ಸೂಚಿಸಿದರು. ತಂದೆಯು ಹಾಳೆಯಲ್ಲಿ ಎರಡು ಸಮಾನಾಂತರ ಗೆರೆಗಳನ್ನು ಎಳೆದರು. ಅದರಲ್ಲಿ ಒಂದು ರೇಖೆ ಚಿಕ್ಕದಾಗಿದ್ದರೆ ಮತ್ತೊಂದು ರೇಖೆ ಮೊದಲ ರೇಖೆಗಿಂತ ಬಹಳ ಉದ್ದವಾಗಿತ್ತು. ಅದನ್ನು ಮಗನಿಗೆ ತೋರಿಸಿ ಹೇಳಿದರು.

‘ನೋಡು ಮಗು, ಚಿಕ್ಕದಾದ ಮೊದಲ ರೇಖೆ ನಿನ್ನ ಬಗ್ಗೆ ಬಂದ ಆಕ್ಷೇಪ, ಅಪಮಾನ, ಅನುಮಾನಗಳು ಇದ್ದಂತೆ. ಅದೇ ಈ ದೊಡ್ಡ ರೇಖೆ ನೀನು ಮಾಡುವ ಕಾರ್ಯ, ಅದಕ್ಕೆ ಬೇಕಾದ ತತ್ಪರತೆ, ಅದರಿಂದ ಹೊರಹೊಮ್ಮುವ ಸಾಧನೆ ಎಂಬಂತೆ. ನೀನು ನಿನ್ನ ಸಾಧನೆ ಹಾಗೂ ಪ್ರಾಮಾಣಿಕತೆಯ ಮೂಲಕವಾಗಿ ಎರಡನೇ ಗೆರೆಯನ್ನು ಎಷ್ಟು ದೊಡ್ಡದಾಗಿಯೂ ರಚಿಸಿಕೊಳ್ಳಬಹುದು. ಎರಡನೇ ಗೆರೆ ದೊಡ್ಡದಾದಷ್ಟು ಮೊದಲ ರೇಖೆ ಚಿಕ್ಕದಾಗಿ ಕಾಣುತ್ತದೆ. ನಿನ್ನ ಲಕ್ಷ್ಯ ದೊಡ್ಡ ಗೆರೆಯೇ ವಿನಃ ಚಿಕ್ಕ ಗೆರೆಯಲ್ಲ. ನೀನು ಪ್ರಾಮಾಣಿಕವಾಗಿ ಕಾರ್ಯಗಳನ್ನು ಮಾಡುವಾಗ ಈ ಬಗ್ಗೆ ಯೋಚಿಸುವ ಅಗತ್ಯ ಇಲ್ಲ’ ಎಂದರು. ಆಗ ತಂದೆಯ ಮಾತಿನ ಮರ್ಮ ಮಗನಿಗೆ ತಿಳಿಯಿತು. ಅಗ್ನಿಯೊಂದು ಆಶ್ರಯವನ್ನು ನೀಡಿದ ಕಟ್ಟಿಗೆಯನ್ನೇ ಸುಡುವಂತೆ ಇಂತಹ ವಿಷಯಗಳು ನಮ್ಮ ಜೀವನದಲ್ಲಿಯೂ ಎದುರಾಗಿ ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತವೆ. ನಮ್ಮ ಯಾವುದೇ ಕಾರ್ಯದ ಬಗ್ಗೆ ಸಲಹೆ ಕೊಡುವವರು, ಸರಿಯಿಲ್ಲ ಎನ್ನುವವರು, ಆರೋಪ ಮಾಡುವವರು ಇದ್ದೇ ಇರುತ್ತಾರೆ. ಆದರೆ, ನಿಮ್ಮ ಕಾರ್ಯ ಪ್ರಾಮಾಣಿಕವಾಗಿದ್ದರೆ ಆ ಬಗ್ಗೆ ಚಿಂತಿಸುವ ಅಗತ್ಯವೇ ಇರುವುದಿಲ್ಲ. ‘ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯಾ?’ ಎನ್ನುವ ಶರಣರ ಮಾತಿನಂತೆ ಸ್ತುತಿನಿಂದೆಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಮುನ್ನುಗ್ಗಿದಾಗ ಅಂದುಕೊಂಡಿದ್ದನ್ನು ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net