

| ಮೇಧಾ ಜೋಶಿ
ಒಬ್ಬ ಬಡ ಸಂಪ್ರದಾಯಸ್ಥ ದಂಪತಿ. ಅವರಿಗೆ ನಾಲ್ಕು ಜನ ಗಂಡು ಮಕ್ಕಳು ಮತ್ತು ನಾಲ್ಕು ಜನ ಸೊಸೆಯಂದಿರು. ಎಲ್ಲ ಮಕ್ಕಳಿಗೂ ಇಬ್ಬಿಬ್ಬರು ಮಕ್ಕಳು. ಹೀಗೆ ತುಂಬ ದೊಡ್ಡ ಪರಿವಾರ. ತುಂಬಾ ಬಡತನ ಮತ್ತು ಕಷ್ಟ. ಮನೆಮನೆಗೆ ಹೋಗಿ ಎಲ್ಲ ಮಕ್ಕಳು ಗೋಪಾಳಕ್ಕೆ ಹೋಗಿ ಭಿಕ್ಷೆ ಬೇಡಿ ಅಕ್ಕಿ ಜೋಳ ಏನು ಬರುತ್ತದೆಯೋ ಅದನ್ನೇ ಮಧ್ಯಾಹ್ನಕ್ಕೆ ಬೇಯಿಸಿ ಪರಿವಾರದವರೆಲ್ಲ ಒಂದು ಹೊತ್ತು ಊಟ ಮಾಡುತ್ತಿದ್ದರು. ಇವರ ಧರ್ಮನಿಷ್ಠೆಯನ್ನು ಪರೀಕ್ಷಿಸಲೆಂದು ನವಗ್ರಹಗಳಲ್ಲಿ ಇಬ್ಬರಾದ ಬುಧ ಮತ್ತು ಬೃಹಸ್ಪತಿ, ವಟುಗಳ ವೇಷದಲ್ಲಿ ಆ ಪರಿವಾರದ ಮನೆ ಬಾಗಿಲಿಗೆ ಬರುತ್ತಾರೆ.
‘‘ಮೂರು ದಿನಗಳಿಂದ ನಿರಾಹಾರರಾಗಿದ್ದೇವೆ ತುಂಬಾ ಹಸಿವೆ ಆಗಿದೆ. ನಮಗೆ ಊಟಕ್ಕೆ ಹಾಕಿ’’ ಎಂದು ಬೇಡುತ್ತಾರೆ. ಆಗ ಆ ತಾಯಿ, ‘‘ನನ್ನ ಮಕ್ಕಳು ಭಿಕ್ಷೆಗೆ ಹೋಗಿದ್ದಾರೆ. ಅವರು ಬಂದ ನಂತರ ನಿಮಗೆ ಅವಶ್ಯವಾಗಿ ಜೋಳದ ಭಕ್ಷ್ಯವನ್ನು ಮಾಡಿ ಹಾಕುತ್ತೇನೆ’’ ಎನ್ನುತ್ತಾಳೆ. ಆಗ ಆ ವಟುಗಳ ಹಸಿವೆಯು ಸಹನೆ ಮೀರಿ ‘‘ಇದ್ದದ್ದನ್ನು ಹಾಕಿ’’ ಎಂದಾಗ ಜೋಳದ ಹಿಟ್ಟಿನ ರೊಟ್ಟಿಯನ್ನು ಮಾಡಿ ಅದರಲ್ಲಿ ಮೊಸರು ಬೆಲ್ಲ ಹಾಕಿ ಅದನ್ನೇ ಆದರದಿಂದ ಬಡಿಸುತ್ತಾಳೆ. ಕೊನೆಗೆ ಕುಡಿಯಲು ಮಜ್ಜಿಗೆಯನ್ನು ಕೊಡುತ್ತಾಳೆ. ಆ ವಟುಗಳು ಅದನ್ನೇ ಪ್ರೀತಿಯಿಂದ ಸ್ವೀಕರಿಸಿ ಸಂತೋಷಗೊಳ್ಳುತ್ತಾರೆ. ನಂತರ ಆ ದಂಪತಿ ‘‘ನೀವಿಬ್ಬರೂ ಯಾರು’’ ಎಂದು ಕೇಳಿದಾಗ ‘‘ನಾವು ಬುಧ-ಬೃಹಸ್ಪತಿಗಳು. ಧಾನ್ಯ ಸಮೃದ್ಧಿ ಬೇಕೆಂದರೆ ಅಡುಗೆ ಮನೆಯಲ್ಲಿ, ಧನ ಸಮೃದ್ಧಿ ಬೇಕೆಂದರೆ ಧನದ ಪೆಟ್ಟಿಗೆಯಲ್ಲಿ ನಮ್ಮ ಚಿತ್ರವನ್ನು ಬರೆದು ಭಕ್ತಿಯಿಂದ ಪೂಜಿಸಬೇಕು. ಪೂಜೆಯಿಂದ ಧನ-ಧಾನ್ಯದ ಅಭಿವೃದ್ಧಿಯಾಗುವುದು’’ ಎಂದು ಹೇಳಿ ಅಂತರ್ಧಾನರಾಗುತ್ತಾರೆ. ಅಂತೆಯೇ ಆ ದಂಪತಿಗಳು ಅಂದಿನಿಂದ ಬುಧ-ಬೃಹಸ್ಪತಿಯನ್ನು ಪೂಜಿಸಿ ಸಕಲ ಅಭಿವೃದ್ಧಿಗಳನ್ನು ಹೊಂದಿ ಸಪರಿವಾರರಾಗಿ ಸಂತೋಷದಿಂದ ಜೀವನ ನಡೆಸುತ್ತಾರೆ.
ಯಾವುದೇ ಜಾತಿ ಧರ್ಮವಿಲ್ಲದೇ ಸರ್ವರೂ ಈ ಪೂಜೆಯನ್ನು ಮಾಡಲು ಅರ್ಹರು. ಮನುಷ್ಯಜನ್ಮವನ್ನು ಪಡೆದ ಪ್ರತಿಯೊಬ್ಬರೂ ಜ್ಞಾನಕ್ಕೆ ಅರ್ಹರು. ಆದ್ದರಿಂದ ಜ್ಞಾನವನ್ನು ಪಡೆಯುವುದು ಎಲ್ಲರ ಆದ್ಯಕರ್ತವ್ಯ. ಜ್ಞಾನದಿಂದಲೇ ಮೋಕ್ಷ. ಬ್ರಹ್ಮವಿದ್ಯೆ ಹಾಗೂ ವಿಜ್ಞಾನಾದಿ ಸಕಲಶಾಸ್ತ್ರಗಳ ವಿಶೇಷಜ್ಞಾನ ಪಡೆಯಲು ಬುಧ-ಬೃಹಸ್ಪತಿಗಳ ಅನುಗ್ರಹ ಇರಲಿ ಎಂದು ಪೂಜಿಸಿ ಪ್ರಾರ್ಥಿಸೋಣ. ಹೇಗೆ ಹೂವಿನೊಡನೆ ದಾರವೂ ದೇವರ ಪಾದ ಸೇರಿ ಧನ್ಯವಾದಂತೆ ಮೋಕ್ಷಪ್ರದವಾದ ಜ್ಞಾನವನ್ನು ಪ್ರಾರ್ಥಿಸಿದರೆ ಜತೆಯಲ್ಲಿ ಧನ-ಧಾನ್ಯ, ಸಂಪತ್ತಿನ ಅಭಿವೃದ್ಧಿ ಪ್ರಾಪ್ತವಾಗುತ್ತದೆ ಎನ್ನುವದರಲ್ಲಿ ಸಂದೇಹವಿಲ್ಲ.
ಪೂಜಾ ವಿಧಾನ: ಬುಧ-ಬೃಹಸ್ಪತಿಯ ಚಿತ್ರವನ್ನು ಬರೆದು ಅಥವಾ ಚಿತ್ರ ಲಭ್ಯವಿದ್ದರೆ ಅದನ್ನು ಮಣೆಯ ಮೇಲೆ ಇಟ್ಟು ರಂಗವಲ್ಲಿಯನ್ನು ಹಾಕಿ ಎಡ ಬಲದಲ್ಲಿ ದೀಪವನ್ನು ಹಚ್ಚಿಟ್ಟು ಅನೇಕ ತರಹದ ಹೂ-ಪತ್ರೆಗಳನ್ನು, ಉತ್ತರಾಣಿ ಮೊದಲಾದವುಗಳನ್ನು ಸಮರ್ಪಿಸಬೇಕು. ಅರಿಷಿನ ಕುಂಕುಮ ಅಕ್ಷತೆ ಗಜ್ಜೆ ವಸ್ತ್ರಗಳಿಂದ ಪೂಜೆ-ಪ್ರಾರ್ಥನೆಗಳನ್ನು ಮಾಡಬೇಕು. ಜೋಳದ ರೊಟ್ಟಿ, ಮೊಸರು, ಬೆಲ್ಲ, ಮೊಸರನ್ನ ಇವುಗಳನ್ನು ನಿವೇದಿಸಿ ವಟುಗಳಿಗೆ ಭೋಜನ ಮಾಡಿಸಬೇಕು. ಹೀಗೆ ಶ್ರಾವಣಮಾಸದ ಬುಧವಾರ- ಗುರುವಾರಗಳಲ್ಲಿ ಈ ಪೂಜೆಯನ್ನು ಮಾಡಬೇಕು. ಬುಧನಿಗೆ ಕ್ಷೀರಾನ್ನ ಹಾಗು ಬೃಹಸ್ಪತಿಗೆ ಮೊಸರನ್ನ ನೈವೇದ್ಯ ವಿಶೇಷವಾಗಿದೆ.
ಪ್ರಿಯಂಗುಕಲಿಕಾಶ್ಯಾಮಂ ರೂಪೇಣಾಪ್ರತಿಮಂ ಬುಧಮ್ |
ಸೌಮ್ಯಂ ಸೌಮ್ಯಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಮ್ ||
ದೇವತೆಗಳಿಗೆ ಗುರುವಾದ್ದರಿಂದ ಬೃಹಸ್ಪತಿಯು ದೇವಗುರು ಎಂದು ಪ್ರಸಿದ್ಧ. ಉಳಿದ ಗ್ರಹಗಳಿಗಿಂತ ಗಾತ್ರದಲ್ಲಿಯೂ ದೊಡ್ಡವನಾದ್ದರಿಂದ ಇವನು ಗುರು. ಸಕಲ ವೇದವಿದ್ಯಾ ಪ್ರವೀಣ, ಅತಿ ಧಾರ್ವಿುಕ, ವಿನಯಶೀಲ, ನಿಪುಣ, ಸಾಹಸಿ, ಇವು ಗುರುವಿನ ಸ್ವರೂಪ. ಅಸುರರನ್ನು ಸೋಲಿಸಿ ಸದಾ ದೇವತೆಗಳನ್ನು ರಕ್ಷಿಸುವಲ್ಲಿ ಇವರದ್ದೇ ಪ್ರಧಾನ ಪಾತ್ರ. ಮೇಧಾಶಕ್ತಿ ವಿಶೇಷವಾಗಿ ಬೆಳೆಯಲು ಗುರುವಿನ ಅನುಗ್ರಹ ಬೇಕು.
ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಮ್ | ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್ ||