ಬಜೆಟ್ ಬದಲಾಯಿತು, ಕಾಂಗ್ರೆಸ್ ಬದಲಾಗಲಿಲ್ಲ...!

3-679fae31d916c
Published on
ಬಜೆಟ್ ಅಥವಾ ಮುಂಗಡಪತ್ರ ಜನಜೀವನಕ್ಕೆ ನೇರ ಸಂಬಂಧ ಹೊಂದಿರುವ ವಿಷಯವೇ ಆದರೂ, ಅದಕ್ಕೆ ಪ್ರತಿಕ್ರಿಯಿಸಬೇಕಾದವರು ಅರ್ಥವ್ಯವಸ್ಥೆಯ ಗಂಧ ಇರುವ ವಿಶೇಷಜ್ಞರು. ವಿಷಯ ತಿಳಿದವರ ಅಭಿಪ್ರಾಯಕ್ಕೆ ಮಾತ್ರ ಇಲ್ಲಿ ಮನ್ನಣೆ. ಜನಸಾಮಾನ್ಯರು ಕೂಡ ವಿಷಯತಜ್ಞರ ಅಭಿಪ್ರಾಯಕ್ಕೆ ತಲೆದೂಗುತ್ತಾರೆ.

ಇದು ಪರ ಮತ್ತು ವಿರೋಧ ಎರಡೂ ಆಭಿಪ್ರಾಯಕ್ಕೂ ಅನ್ವಯ. ಉಳಿದಂತೆ ಬಜೆಟ್ ಕುರಿತ ಸಂತೃಪ್ತಿ ಅಥವಾ ಅತೃಪ್ತಿ ಸಾರ್ವತ್ರಿಕವಾಗಿ ಒಂದು ಮೇನಿಯಾ ಅಷ್ಟೇ!ಇರಲಿ, ಹಾಗೆ ನೋಡಿದರೆ ಕೇಂದ್ರ ಮುಂಗಡಪತ್ರದ ವಿಚಾರದಲ್ಲಿ ಸಕಲ ಮಾಧ್ಯಮಗಳೂ ಸೇರಿ ಎಲ್ಲ ವಲಯಗಳಿಂದ ಇದೇ ಮೊದಲ ಬಾರಿಗೆ ಮುಕ್ತ ಪ್ರಶಂಸೆ ವ್ಯಕ್ತವಾಗಿರುವುದು ವಿಶೇಷ. ಇದೊಂದು ಸ್ವಾಗತಾರ್ಹ ಬೆಳವಣಿಗೆ. ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಈ ಮಾತಿನ ವ್ಯಾಪ್ತಿಗೆ ಬರುವುದಿಲ್ಲ. ಆ ವಿಚಾರವನ್ನು ಕೊನೆಯಲ್ಲಿ ರ್ಚಚಿಸುತ್ತೇನೆ.

ಮೂಲಭೂತವಾಗಿ ಕೇಂದ್ರ ಮತ್ತು ರಾಜ್ಯ ಮುಂಗಡಪತ್ರಗಳಿಗೆ ಒಂದಕ್ಕೊಂದು ಪೂರಕ ಸಂಬಂಧವಿದ್ದರೂ, ಅವುಗಳ ಒಳ ಮತ್ತು ಹೊರಗಿನ ನೋಟ (Approach), ಉದ್ದೇಶ, ಅದರ ಕಾರಣಗಳು, ಪರಿಣಾಮಗಳು, ಮಾಗೋಪಾಯಗಳು ವಿಭಿನ್ನವಾಗಿರುತ್ತವೆ. ಉದಾಹರಣೆಗೆ, ರಾಜ್ಯದ ಮುಂಗಡಪತ್ರಗಳು ಆ ರಾಜ್ಯದ ಆಯ, ವ್ಯಯ, ಅಂದರೆ ಉತ್ಪನ್ನ ಬೆಳವಣಿಗೆ, ವೆಚ್ಚಗಳನ್ನೇ ಪ್ರಧಾನವಾಗಿ ಗುರಿಯಾಗಿಸಿಕೊಂಡಿರುತ್ತವೆ. ತುಸು ಮಟ್ಟಿಗೆ ಕೇಂದ್ರದ ನೆರವಿನ ಕಡೆಗೆ ರಾಜ್ಯಗಳ ದೃಷ್ಟಿ ನೆಟ್ಟಿರುತ್ತದೆ. ಅದು ಬಹುಪಾಲು ಅಲ್ಲ. ಕಾರಣ, ಕೇಂದ್ರದ ದೃಷ್ಟಿ, ನೆರವು ಇತ್ಯಾದಿಗಳು ಸಶಕ್ತ ರಾಜ್ಯಗಳಿಗಿಂತಲೂ ಅಶಕ್ತ ಅಥವಾ ಬೀಮಾರು ರಾಜ್ಯಗಳ ಕಡೆಗೇ ಇರುತ್ತದೆ. ಅದರ ಕಾರಣಗಳ ಚರ್ಚೆ ಇಲ್ಲಿ ಅಪ್ರಸ್ತುತ.

ಮುಖ್ಯವಾಗಿ ರಾಜ್ಯ ಮುಂಗಡಪತ್ರದ ಮೇಲೆ ಜಗತ್ತಿನ ಇತರ ದೇಶಗಳಲ್ಲಿ ಆಗುತ್ತಿರುವ ನಕಾರಾತ್ಮಕ ಅಥವಾ ಸಕಾರಾತ್ಮಕ ಬೆಳವಣಿಗೆಗಳ ಕಡೆಗಿನ ಗಮನ ಕಡಿಮೆ ಇರುತ್ತದೆ. ಆದರೆ ಕೇಂದ್ರ ಮುಂಗಡಪತ್ರ ವಿಚಾರ ಹಾಗಲ್ಲ. ದೇಶದ ಆಂತರಿಕ ಆರ್ಥಿಕ, ಔದ್ಯಮಿಕ ಮತ್ತು ಸಾಮಾಜಿಕ ವಿದ್ಯಮಾನಗಳಷ್ಟೇ ಅಲ್ಲದೆ, ಜಾಗತಿಕ ದೇಶಗಳ ಆರ್ಥಿಕ, ಸಾಮಾಜಿಕ, ಮಿಲಿಟರಿ, ಔದ್ಯಮಿಕ ವಿದ್ಯಮಾನಗಳ ಮೇಲೂ ಕೇಂದ್ರ ಮುಂಗಡಪತ್ರ ತನ್ನ ಗಮನ ಹರಿಸಬೇಕಾಗುತ್ತದೆ.

ಉದಾಹರಣೆಗೆ, ಅಮೆರಿಕದ ಅಧ್ಯಕ್ಷೀಯ ಚುನಾವಣೆ, ಆನಂತರದ ಬೆಳವಣಿಗೆಗಳು, ರಷ್ಯಾ- ಯೂಕ್ರೇನ್ ಯುದ್ಧ, ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ, ಮಧ್ಯಪ್ರಾಚ್ಯದ ಬಿಕ್ಕಟ್ಟು, ಸುಡಾನ್​ನಂತಹ ದೇಶಗಳಲ್ಲಿ ಆಗುತ್ತಿರುವ ಕ್ಷೋಭೆ ಇತ್ಯಾದಿ ಬೆಳವಣಿಗೆಗಳು ಭಾರತದ ಅರ್ಥ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಉಂಟು ಮಾಡುತ್ತವೆ. ಕಾರಣ, ಆ ಎಲ್ಲ ದೇಶಗಳೊಂದಿಗೆ ಭಾರತ ಹೊಂದಿರುವ ವ್ಯಾಪಾರ, ವಾಣಿಜ್ಯ, ರಾಜಕೀಯ ವ್ಯವಹಾರಗಳ ಸಂಬಂಧ.

ವಿಶೇಷವಾಗಿ ರಷ್ಯಾ, ಮಧ್ಯಪ್ರಾಚ್ಯ, ಸುಡಾನ್ ದೇಶಗಳನ್ನು ಇಂಧನ, ನೈಸರ್ಗಿಕ ಅನಿಲಕ್ಕಾಗಿ, ಆಹಾರೋತ್ಪನ್ನ ಮತ್ತು ವಾಣಿಜ್ಯ ವಹಿವಾಟಿಗಾಗಿ ಹೊಂದಿರುವ ಸಂಬಂಧಗಳು ಭಾರತದ ಕೈಕಾಲು ಮತ್ತು ಬಾಯನ್ನು ಕಟ್ಟಿ ಹಾಕುವ ಸಂಭವ ಇರುತ್ತದೆ. ಈ ಎಲ್ಲ ಅಡೆತಡೆಗಳ ನಡುವೆಯೂ ಭಾರತ ಸರಕಾರ ತನ್ನ ಆರ್ಥಿಕ ಬೆಳವಣಿಗೆ ದರವನ್ನು ಶೇ. 6.6ಕ್ಕೆ ಗುರಿ ಇರಿಸಿದ್ದು ಮತ್ತು ವಿತ್ತೀಯ ಕೊರತೆ ಪ್ರಮಾಣವನ್ನು ಶೇ. 4.4ರ ಆಸುಪಾಸಿಗೆ ಮಿತಿಗೊಳಿಸಿದ್ದು ಈ ಸಲದ ಕೇಂದ್ರ ಮುಂಗಡಪತ್ರದ ದೊಡ್ಡ ಸವಾಲು ಮತ್ತು ಸಾಧನೆ ಎಂಬರ್ಥದಲ್ಲಿ ಬಹುತೇಕ ಅರ್ಥ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟು ಮಾತ್ರವಲ್ಲ, ಇದು ನಮ್ಮೆಲ್ಲರ ನಿರೀಕ್ಷೆ ಆಗಿತ್ತು ಎಂತಲೂ ಬಹುತೇಕ ತಜ್ಞರು ಮುಚ್ಚುಮರೆಯಿಲ್ಲದೆ ಹೇಳಿದ್ದಾರೆ.

ಇನ್ನು ಈ ಸಲದ ಆದ್ಯತೆ ಗಮನ ಸೆಳೆಯುವಂತಿದೆ. ಒಂದು ರೀತಿಯಲ್ಲಿ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್​ನಲ್ಲಿ ಟಾಪ್ ಡೌನ್ ಅಪೋ›ಚ್ ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಕೃಷಿ ಕೇಂದ್ರ ಮುಂಗಡಪತ್ರದಲ್ಲಿ ಮೊದಲ ಆದ್ಯತೆ ಪಡೆದುಕೊಂಡಿತು. ಬಜೆಟ್ ಪುಸ್ತಕದಲ್ಲಿ ಮೊದಲು ಕೃಷಿ ವಲಯದ ಪ್ರಸ್ತಾವನೆ ನೀಡಿದರೆ ಏನು ಬಂತು ಅಂತ ಮನೋದಾರಿದ್ರ್ಯ ಹೊಂದಿರುವವರು ಪ್ರಶ್ನೆ ಮಾಡಬಹುದು. ಈ ಹಿಂದೆ ಬಿ.ಎಸ್. ಯಡಿಯೂರಪ್ಪನವರು ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದಾಗಲೂ ಹೀಗೇ ಮೂಗು ಮುರಿದವರಿದ್ದಾರೆ.

ಆದರೆ ಅದೇ ಕೃಷಿ ಬಜೆಟ್ ನಲ್ಲಿ ಮೊಳಕೆ ಒಡೆದ ಕ್ರಾಂತಿಕಾರಕ ಚಿಂತನೆ ರೈತ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ, ರೈತ ಸಮ್ಮಾನ್ ನಿಧಿ, ಹೈನುಗಾರಿಕೆಗೆ ಸಹಾಯಧನ ಇತ್ಯಾದಿ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬಂದದ್ದು. ಹಾಲಿ ಕರ್ನಾಟಕ ಸರಕಾರಕ್ಕೆ ಆ ಯೋಜನೆಗಳನ್ನು ಮುಂದುವರೆಸಲು ಸಾಧ್ಯವಾಗಿಲ್ಲ. ಆ ಮಾತು ಬೇರೆ.

ಕೇಂದ್ರ ಬಜೆಟ್ ವಿಷಯಕ್ಕೆ ಬರುವುದಾದರೆ, ಕೃಷಿ ವಲಯಕ್ಕೆ ಅನುದಾನ 5286 ಕೋಟಿ ರೂ.ಗಳ ಭರಪೂರ ಅನುದಾನ ಹೆಚ್ಚಳದ ಜೊತೆಗೆ ಹಾಲಿ ಜಾರಿಯಲ್ಲಿರುವ ಎಲ್ಲ ಕಾರ್ಯಕ್ರಮಗಳನ್ನು ಮುಂದುವರೆಸುತ್ತ ಸುಸ್ಥಿರ ಕೃಷಿ ಅಭಿವೃದ್ಧಿಗೆ ಪಂಚಾಯತಿ ಮಟ್ಟದಲ್ಲಿ ಕೃಷಿ ಸಂಸ್ಕರಣಾ ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ ಮಾಡಿರುವುದು ಕ್ರಾಂತಿಕಾರಕ ನಿರ್ಧಾರ. ಹತ್ತಿ ಕೃಷಿ ಸಬಲೀಕರಣಕ್ಕೆ ಕೇಂದ್ರ ಸರಕಾರ ಈ ಬಾರಿ ವಿಶೇಷ ಆದ್ಯತೆ ನೀಡಿದೆ. ಮೀನುಗಾರಿಕೆಗೆ 60 ಸಾವಿರ ಕೋಟಿ ರೂ.ಗಳ ಅನುದಾನ ನೀಡಿರುವುದರಿಂದ ಅದರಲ್ಲಿ ಸಿಂಹಪಾಲನ್ನು ಬಳಸಿಕೊಳ್ಳುವ ಅವಕಾಶವಿದೆ. ಕೃಷಿಕರ ಅಲ್ಪಾವಧಿ ಸಾಲದ ಮೊತ್ತವನ್ನು 3ರಿಂದ 5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಒಟ್ಟಾರೆ ಹೇಳುವುದಾದರೆ ಕೃಷಿಗೆ ಬಜೆಟ್ ಪುಸ್ತಕದಲ್ಲೂ ಮತ್ತು ಅನುದಾನ ಹಂಚಿಕೆ ಎರಡರಲ್ಲೂ ಆದ್ಯತೆ ಸ್ಪಷ್ಟವಾಗಿ ಕಾಣುತ್ತದೆ.

ಆರೋಗ್ಯ ಮತ್ತು ಶಿಕ್ಷಣ ಆದ್ಯತಾ ವಲಯವಾಗಿ ಕೇಂದ್ರ ಮುಂಗಡಪತ್ರದಲ್ಲಿ ಪ್ರಕಟೀಕರಣಗೊಂಡಿದೆ. ಆಯುಷ್ಮಾನ್ ಭಾರತ ವಿಮಾ ಯೋಜನೆ ಮತ್ತು ತತ್ಸಮಾನ ಯೋಜನೆಗಳಿಗೆ ಶೇ. 30ರಷ್ಟು ಅನುದಾನ ಹಂಚಿಕೆ ಹೆಚ್ಚಳ ಮಾಡಲಾಗಿದೆ. ಹತ್ತು ಸಾವಿರ ಮೆಡಿಕಲ್ ಸೀಟುಗಳ ಹೆಚ್ಚಳ, ಕ್ಯಾನ್ಸರ್ ಚಿಕಿತ್ಸಾ ಔಷಧವು ಸೇರಿ 36 ವಿವಿಧ ಅತಿಮುಖ್ಯ ಔಷಧಗಳನ್ನು ಜೀವರಕ್ಷಕ ಔಷಧಗಳ ವ್ಯಾಪ್ತಿಗೆ ತಂದಿರುವುದು, ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕಗಳ ಸ್ಥಾಪನೆ ಘೊಷಣೆ ಇತ್ಯಾದಿ ತೀರ್ವನಗಳು ಸಮಾಜಕಲ್ಯಾಣ ಮತ್ತು ಆರ್ಥಿಕ ಬೆಳವಣಿಗೆ ಈ ಎರಡು ಆಯಾಮಗಳನ್ನು ಹೊಂದಿವೆ ಎಂದರೆ ಅತಿಶಯೋಕ್ತಿ ಅಲ್ಲ.

ಸ್ಟಾರ್ಟಪ್ ವಲಯಕ್ಕೆ ಸಂಜೀವಿನಿ: ಸ್ಟಾರ್ಟಪ್ ಉತ್ತೇಜನಕ್ಕೆ ನೀಡುವ ಅನುದಾನವನ್ನು 10 ಸಾವಿರ ಕೋಟಿ ರೂಪಾಯಿಗೆ ಏರಿಕೆ ಮಾಡಿರುವುದು ಗಮನಾರ್ಹ. ಈ ಬಾಬ್ತಿನಲ್ಲಿ ಹೆಚ್ಚಿನ ಪಾಲನ್ನು ಬಳಸಿಕೊಳ್ಳಲು ಕರ್ನಾಟಕಕ್ಕೆ ಅವಕಾಶ ಮುಕ್ತವಾಗಿದೆ. ಉದ್ಯೋಗ ಸೃಷ್ಟಿಗೆ ಇದೊಂದು ಅತ್ಯುಪಯುಕ್ತ ಉಪಕ್ರಮ ಎಂಬುದರಲ್ಲಿ ಎರಡು ಮಾತಿಲ್ಲ.

ಪ್ರವಾಸೋದ್ಯಮ ಪೋ›ತ್ಸಾಹಕ್ಕೆ ಭರಪೂರ ಅನುದಾನ ನೀಡಿ, ಹೋಂಸ್ಟೇ ಇತ್ಯಾದಿ ಗ್ರಾಮೀಣ ಉದ್ಯಮ, ಉದ್ಯೋಗ ಪೋ›ತ್ಸಾಹಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕಕ್ಕೂ ಅವಕಾಶ ಅಗಾಧವಾಗಿದೆ. ಇಷ್ಟೆಲ್ಲಾ ಇದ್ದೂ ಬಜೆಟ್ ಮಂಡನೆ ನಂತರ ಹೆಚ್ಚು ಚರ್ಚೆ ಆಗಿದ್ದು 12.75 ಲಕ್ಷ ರೂಪಾಯಿಗಳವರೆಗಿನ ವರಮಾನಕ್ಕೆ ತೆರಿಗೆ ಇಲ್ಲ ಎಂಬುದೇ ಆಗಿದೆ. ಅದಕ್ಕೆ ಕಾರಣ- ಕೇಂದ್ರ ಸರಕಾರದ ಈ ಉದಾರತೆಯನ್ನು ಯಾರೊಬ್ಬರೂ ನಿರೀಕ್ಷೆ ಮಾಡಿರಲಿಲ್ಲ.

ಅದಕ್ಕೆ ಕಾರಣ ಬಹುಪಾಲು ಬಡ ಮಧ್ಯಮ ವರ್ಗಕ್ಕೆ ಸೇರಿದವರ ಬದುಕಿನ ಬವಣೆ. ಸ್ವಾತಂತ್ರ್ಯ ಬಂದ 65 ವರ್ಷದವರೆಗೆ ಈ ವರ್ಗದ 2.5 ಲಕ್ಷ ರೂ. ವಾರ್ಷಿಕ ಗಳಿಕೆ ಮಾತ್ರ ತೆರಿಗೆ ವಿನಾಯಿತಿ ಹೊಂದಿತ್ತು. ಕೇಂದ್ರದಲ್ಲಿ ಮೋದಿ ಆಡಳಿತದ ಹತ್ತು ವರ್ಷಗಳಲ್ಲಿ ಹಂತಹಂತವಾಗಿ ಅದು 7.5 ಲಕ್ಷಕ್ಕೆ ತಲುಪಿತ್ತು. ಒಟ್ಟಾರೆ ಜಾಗತಿಕ ಆರ್ಥಿಕ ಪರಿಸ್ಥಿತಿ, ದೇಶದ ಜಿಡಿಪಿ ಬೆಳವಣಿಗೆಯ ಹಾವು ಏಣಿ ಆಟ, ಹಣದುಬ್ಬರದ ಪರಿಸ್ಥಿತಿ ಬಲ್ಲವರು ಈ ಬಾರಿ ತೆರಿಗೆ ರಿಬೇಟ್ ವ್ಯಾಪ್ತಿ ಹಿಗ್ಗುವುದೇ ಅನುಮಾನ ಎಂದುಕೊಂಡಿದ್ದರು. ಆರ್ಥಿಕ ತಜ್ಞರೂ ಈ ಮಾತಿಗೆ ಹೊರತಲ್ಲ. ಆದರೆ ಬಜೆಟ್ ಭಾಷಣದ ಕೊನೆಯಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು ಹನ್ನೆರಡೂ ಮುಕ್ಕಾಲು ಲಕ್ಷಕ್ಕೆ ಏರಿಕೆ ಮಾಡಿದ್ದು ಸುದೀರ್ಘ ಕರತಾಡನಕ್ಕೆ ಕಾರಣವಾಯಿತು.

ವಾಸ್ತವದಲ್ಲಿ ಕೇಂದ್ರ ಬಜೆಟ್​ನ ದೃಷ್ಟಿ ಅಂಗನವಾಡಿ ಕೇಂದ್ರಗಳನ್ನೂ ಬಿಟ್ಟಿಲ್ಲ. ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ, ಸಾಮಾಜಿಕ ಸಬಲೀಕರಣ, ನಗರ ಗ್ರಾಮೀಣ ಕ್ಷೇತ್ರಗಳ ಬೆಳವಣಿಗೆ, ವಿಜ್ಞಾನ, ತಂತ್ರಜ್ಞಾನ, ರಕ್ಷಣೆ ಹೀಗೆ ಯಾವುದನ್ನೂ ಬಿಡದೆ ಸಮಾನ ಆದ್ಯತೆ ನೀಡಿದರೂ ಮೊಸರಲ್ಲಿ ಕಲ್ಲು ಹುಡುಕುವವರಿಗೆ ಏನೂ ಕಡಿಮೆ ಇಲ್ಲ. ಕಾಂಗ್ರೆಸ್ ಸ್ಪಾನ್ಸರ್ಡ್ ಸಾಮಾಜಿಕ ಜಾಲತಾಣಗಳ ಟ್ರೋಲ್​ಗಳನ್ನು ನೋಡಬೇಕು. ಮೋದಿ ಸರಕಾರ ಅಧಿಕಾರಕ್ಕೆ ಬರುವ ಮೊದಲು ತೆರಿಗೆ ಪದ್ಧತಿಯೇ ಇರಲಿಲ್ಲ ಎಂಬಂತೆ, ಬಿಗ್ ಬಾಸ್ ವಿನ್ನರ್ ಹನುಮಂತುಗೆ ಸೆಲೆಕ್ಟ್ ಮಾಡಿ ಶೇ. 30ರಷ್ಟು ಮನರಂಜನಾ ತೆರಿಗೆ ವಿಧಿಸಿದ್ದಾರೆ ಎಂಬುದರವರೆಗೆ.

ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಪಾತಾಳ ಕಂಡಿದೆ ಎಂಬುದೂ ಅಂಥದ್ದೇ ಒಂದು ವರಸೆ. ಅದೇ ವೇಳೆ ಈ ವಾಟ್ಸ್ಯಾಪ್ ವಿವಿ ಆರ್ಥಿಕ ತಜ್ಞರಿಗೆ ಜಪಾನ್ ಯೆನ್ ಶೇ. 8.8,ಯುರೋ ಶೇ. 7.6, ಸಿಂಗಾಪುರ ಡಾಲರ್ ಶೇ. 6.6, ಕೆನಡಿಯನ್ ಡಾಲರ್ ಶೇ. 6.3, ಚೈನೀಸ್ ಯೆನ್ ಶೇ. 5.3 ಕುಸಿತ ಕಂಡಿದೆ. ಹಾಗೆ ನೋಡಿದರೆ ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಕುಸಿತ ಕಂಡಿದ್ದು ಶೇ. 3.3ರಷ್ಟು ಮಾತ್ರ. ಈ ಜಾಗತಿಕ ಕುಸಿತದ ತುಲನೆಯಲ್ಲಿ ಇವರಿಗೆ ಮಜಾ ಸಿಗುವುದಿಲ್ಲ. ಸುಳ್ಳು ಸುದ್ದಿ ಹಬ್ಬಿಸುವುದಕ್ಕೆ ಬುಡವಿಲ್ಲ ಕೊನೆಯಿಲ್ಲ.

ಕೇಂದ್ರ ಮುಂಗಡ ಪತ್ರದ ಕುರಿತು ರಾಹುಲ್ ಗಾಂಧಿ ಹೇಳಿಕೆಯಲ್ಲಿ ಎರಡು ಅಂಶಗಳಿವೆ. ಮೊದಲನೆಯದು, ಆಗಿರುವ ದೊಡ್ಡ ಗಾಯಕ್ಕೆ ಸಣ್ಣ ಬ್ಯಾಂಡೇಡಿನ ಉಪಕ್ರಮ ಎಂಬುದು. ಭಾರತದ ಆರ್ಥಿಕತೆಗೆ ಕಾಂಗ್ರೆಸ್ ಮಾಡಿದ ಗಾಯಕ್ಕೆ ಹತ್ತು ವರ್ಷದ ಹಿಂದೆ ಉಪಚಾರ ಶುರು ಮಾಡದೇ ಹೋಗಿದ್ದರೆ ಇಂದು ಪೇಷಂಟ್ ಬದುಕಿರುವ ಸಾಧ್ಯತೆಯೇ ಇರುತ್ತಿರಲಿಲ್ಲ ಎಂಬ ಕನಿಷ್ಠ ತಿಳಿವಳಿಕೆ ಅವರಿಗೆ ಇಲ್ಲದೆ ಹೋದದ್ದು ವಿಪರ್ಯಾಸ. ಇನ್ನು ಎರಡನೆಯದು, ಕೇಂದ್ರ ಸರಕಾರ ಬೌದ್ಧಿಕ ದಿವಾಳಿತನಕ್ಕೆ ಸಿಲುಕಿದೆ ಎಂಬುದು. ರಾಹುಲ್ ಮಾತು ಮತ್ತು ಕೃತಿ ಹಾಗೂ ಕಾಂಗ್ರೆಸ್ ಪಕ್ಷದ ನಡವಳಿಕೆ ಮತ್ತು ಸ್ಥಿತಿಗತಿ ನೋಡಿದ ಮೇಲೆ ಈ ಮಾತಿಗೆ ಹೆಚ್ಚಿನ ಚರ್ಚೆ ಅಗತ್ಯವಿಲ್ಲ ಎಂದು ತೋರುತ್ತದೆ.

ನಗೆ ತರಿಸುವುದು ರಾಹುಲ್ ಹಾದಿಯನ್ನೇ ಅನುಸರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದಿಂದ ಬರುವ ತೆರಿಗೆ ಪಾಲು ಮತ್ತು ಅಭಿವೃದ್ಧಿ ಅನುದಾನದ ಪಾಲನ್ನು ಪಡೆದ ನಂತರವೂ, ಈ ಸಲದ ಕೇಂದ್ರದ ಬಂಪರ್ ಬಜೆಟ್ಟಿಂದ ಕರ್ನಾಟಕ ಹೇರಳ ಲಾಭ ಪಡೆಯುವ ಆಲೋಚನೆ ಬಿಟ್ಟು ‘ಕರ್ನಾಟಕಕ್ಕೆ ಸಿಕ್ಕಿದ್ದು ಖಾಲಿ ಚೊಂಬು’ ಎಂಬ ಹೇಳಿಕೆ.

ಕಡೆಯದಾಗಿ, ಕರ್ನಾಟಕ ಭಾರತದ ಭಾಗ ಎಂದು ತಿಳಿದಾಗ ಕೇಂದ್ರದ ಬಜೆಟ್ಟಿನ ಲಾಭ ಕರ್ನಾಟಕಕ್ಕೂ ಆಗುತ್ತದೆ ಎಂಬ ಸಾಮಾನ್ಯ ತಿಳಿವಳಿಕೆ ಇವರಲ್ಲಿ ಮೂಡೀತು! ಕರ್ನಾಟಕದ ಅಭಿವೃದ್ಧಿ ಎಂದರೆ ಕಟ್ಟಡ, ಸೇತುವೆಯ ನಿರ್ವಣವಷ್ಟೇ ಅಲ್ಲ, ಅದಕ್ಕೂ ಮೀರಿದ್ದು ಕನ್ನಡಿಗರ ಅಭ್ಯುದಯ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಂಡರೆ ಬಜೆಟ್​ನಲ್ಲಿ ಕರ್ನಾಟಕ, ಕನ್ನಡ, ಕನ್ನಡಿಗರು, ನಾವು ನೀವು, ಅವರು, ಇವರು ಎಲ್ಲರೂ ಕಾಣುತ್ತಾರೆ. ಸಿದ್ದರಾಮಯ್ಯ ಕಣ್ತೆರೆದು ನೋಡಲಿ...

(ಲೇಖಕರು ಬಿಜೆಪಿಯ ಹಿರಿಯ ವಕ್ತಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net