

ಕನ್ನಡ ಕಾವ್ಯಪರಂಪರೆಯಲ್ಲಿ ಮಹಾಕಾವ್ಯಗಳದೊಂದು ಅನನ್ಯ ಶ್ರೇಣಿಯಿದೆ. ಅದು ನಮ್ಮ ಕವಿಗಳ ಕಾವ್ಯಪ್ರತಿಭೆ, ಮಹತ್ವಾಕಾಂಕ್ಷೆ ಮತ್ತು ಅಭಿಜಾತ ಕಾವ್ಯಮಾರ್ಗದ ನಿರಂತರ ಅನುಸಂಧಾನಗಳ ಫಲವೆನ್ನಬೇಕು. ಅದೊಂದು ಕಾವ್ಯಪ್ರಕಾರವಾಗಿರುವಂತೆಯೇ ಮೌಲ್ಯವನ್ನು ಸೂಚಿಸುವ ಪದವೂ ಹೌದು. ಭಾರತೀಯ ಕಾವ್ಯಮೀಮಾಂಸೆಯಲ್ಲಿ ಮಹಾಕಾವ್ಯ ಮಹಾಪುರುಷರ ಜೀವನವನ್ನು ಕುರಿತಾದುದು; ಅದು ಅನೇಕ ಅಧ್ಯಾಯಗಳ (ಸರ್ಗಗಳ), ಅನೇಕ ರಸಗಳ, ಜೀವನದ ಹತ್ತುಹಲವು ತಿಕ್ಕಾಟಗಳ ಸಂಕೀರ್ಣ ನೇಯ್ಗೆ. ಪಾಶ್ಚಾತ್ಯರಲ್ಲೂ ಇದು ಉದಾತ್ತ ವಿಷಯವನ್ನು ಗಂಭೀರ ಶೈಲಿಯಲ್ಲಿ ಹೇಳುವ ಎಪಿಕ್. ಕನ್ನಡದ ಆಧುನಿಕ ಸಾಹಿತ್ಯದಲ್ಲಿ ಮಹಾಕಾವ್ಯವನ್ನು ಹೊಸಕಾಲಕ್ಕೆ ತಕ್ಕಂತೆ ನಿರ್ವಿುಸುವ ಪ್ರಸ್ತಾಪ ಮತ್ತು ಪ್ರಯತ್ನಗಳು ನವೋದಯದ ಕಾಲದಿಂದಲೇ ಆರಂಭವಾದವು. ಶುರುವಿನಲ್ಲಿ ಕುರ್ತಕೋಟಿಯವರಂಥ ಧೀಮಂತ ವಿಮರ್ಶಕರೂ ಆಧುನಿಕ ಕಾಲದಲ್ಲಿ ಮಹಾಕಾವ್ಯಗಳ ಪ್ರಸ್ತುತತೆಯ ಕುರಿತು ಅನುಮಾನಿಸಿದ್ದಿದೆ. ಕುವೆಂಪು, ಗೋಕಾಕ, ಪುತಿನ ಇಂಥ ಶ್ರೇಷ್ಠ ಕವಿಗಳ ಮಹಾಕಾವ್ಯಗಳು ವಿದ್ವದ್ ಜನಾದರಣೆ ಗಳಿಸಿವೆ ಮತ್ತು ಕಾವ್ಯ ವಿಮರ್ಶಕರಿಗೆ ಆಹ್ವಾನವೀಯುವ ಜ್ಯೋತಿಸ್ತಂಭಗಳಂತಿವೆ. ಎಚ್.ಎಸ್.ವೆಂಕಟೇಶಮೂರ್ತಿಯವರ ‘ಬುದ್ಧಚರಣ’ ಈ ಸಾಲಿಗೆ ಹೊಸ ಸೇರ್ಪಡೆ.
ಈ ಕೃತಿಯನ್ನು ಕವಿ ‘ಲಲಿತ ಛಂದೋಲಯದ ಮಹಾಕಾವ್ಯ’ ಎಂದು ಕರೆದಿದ್ದಾರೆ. ಕಂದ, ಅಷ್ಟಪದಿ ವಾರ್ಧಕ, ಸಾನೆಟ್ ಮತ್ತು ರಗಳೆ ಈ ಮುಂತಾದ ಪ್ರಕಾರಗಳನ್ನೊಳಗೊಂಡ ಇಲ್ಲಿಯ ಛಂದೋ ವೈವಿಧ್ಯ ಮನಸಿಗೆ ಹಿತವನ್ನೂ, ಉಲ್ಲಾಸವನ್ನೂ ಕೊಡುವ ಶಯ್ಯೆಯದು. ಇಷ್ಟು ವರ್ಷಗಳ ಈ ಕವಿಯ ವಿವಿಧ ಕಾವ್ಯ ಪ್ರಯೋಗಗಳು ಇಲ್ಲಿ ಸಾರ್ಥಕ ವಿಕಾಸ ಪಡೆದಿವೆ ಮತ್ತು ನಾವೀನ್ಯತೆಯಿಂದ ಮನ ಸೆಳೆಯುವಂತಿವೆ.
ಇದು ಬುದ್ಧ ಚರಿತೆ. ನಮ್ಮಂತೆ ಮಾನವನಾಗಿ ಹುಟ್ಟಿದವ ದುಃಖದ ಮೂಲವನ್ನು ಅನ್ವೇಷಿಸಲು ಹೊರಟ ಕಥೆ. ಅವನ ಚರಿತ್ರೆ ಅಥವಾ ಪುರಾಣವನ್ನು ಹೇಳುವಾಗ ಪೂರ್ವಸೂರಿಗಳ ಮಾರ್ಗವನ್ನೇ ಕಾವ್ಯ ಕ್ರಮಿಸಿದೆ. ರಾಮನ, ಕೃಷ್ಣನ ಕಥೆ ಅಥವಾ ಕಾವ್ಯ ಬರೆಯುವಾಗ ಹೇಗೆ ನಾವು ‘ಅಸಂಭವ’ಗಳನ್ನೂ ಒಪ್ಪಿಕೊಳ್ಳುತ್ತ ಕಾವ್ಯವನ್ನೂ, ಅದರಿಂದ ಒಡಮೂಡುವ ರಸ, ಧ್ವನಿ, ಚಿಂತನದ್ರವ್ಯಗಳನ್ನೂ ಕುರಿತು ಮಥಿಸುತ್ತೇವೆಯೋ ಹಾಗೆಯೇ ಬುದ್ಧನ ಕಾವ್ಯ ಸೃಷ್ಟಿಯಲ್ಲಿ ಕವಿ ಅನುಸರಿಸಿದ ಕ್ರಮಕ್ಕೆ ಅನುಗುಣವಾಗಿ ಕಾವ್ಯದ ಓದು ಸಾಗಬೇಕಾದುದು ಅನಿವಾರ್ಯ. ಪೂರ್ವ ಜನ್ಮಗಳಿಂದ ಬುದ್ಧನಾಗುವ, ಯಶೋಧರೆಯಾಗುವ ಜೀವಗಳ ಮಾಗುವಿಕೆಯ ಹಂತಗಳನ್ನು ಹೇಳುವ ಕಥನಮಾರ್ಗದಲ್ಲೇ ಕ್ರೋಧ, ಕ್ರೌರ್ಯ, ಮದ, ಮತ್ಸರ, ಜೀವಹಿಂಸೆಯಂಥ ಜೀವಾಳದ ಪ್ರಶ್ನೆಗಳನ್ನೂ ಈ ಮಹಾಕಾವ್ಯ ಎದುರಿಸಿದೆ. ಕಲಾಬು ಎಂಬ ಕ್ರೂರಿ ದೊರೆಯ ನೆತ್ತರಿನ ದಾಹವನ್ನು ಚಿತ್ರಿಸುವ ಭಾಗ ನೋಡಬೇಕು ( ಪುಟ 24ರಿಂದ 27). ‘ಅರಸುತನದ ಕ್ರೌರ್ಯ ಬೇಡ’ ಎಂಬುದು ಈ ಪಥದ ಗ್ರಹಿಕೆ (ಪುಟ 40). ಸಿದ್ಧಾರ್ಥನಾಗಿ ಜನಿಸಿದಾಗಲೂ ‘ಹಿಂಸೆಯಾವರ್ತದ ವೃತ್ತ’ ಅವನ ಒಳಮನವನ್ನು ಕಲಕುತ್ತಲೇ ಇದೆ. ‘ಒಂದನ್ನೊಂದು ಕೊಂದೆ ಜೀವಿಸಬೇಕೆ?’ ಎಂಬ ನೋವು ಅವನ ಶೋಧನೆಯ ಆರ್ತಮಾರ್ಗದಲ್ಲಿದೆ. ‘ಅಳಿವೆ ಆಧಾರ ಉಳಿವಿಗೆ’ ಎಂಬ ಸತ್ಯದ ಅರಿವು ಅವನನ್ನು ನೋಯಿಸುತ್ತದೆ. ದಶಪಾರಮಿ ಕಥೆಗಳ ಕಷ್ಟಗಳ ಹಾದಿಯಲ್ಲಿ ಬೋಧಿಸತ್ವ ಸಾಗಿಬಂದಿದ್ದಾನೆ. ಸುಮ್ಮನೆ ಅಲ್ಲ, ಅವನು ಭಿಕ್ಕುಗಳಿಗೆ ಹೇಳುವ ಮಾತು:
ಅವಳೇ ಸಿದ್ಧಾರ್ಥನನ್ನ ಕರುಣಿಸಿ ಕೈ ಹಿಡಿದುದ್ಧರಿಸಿದವಳು. ಯಶೋಧರೆಯೆಂಬ ತಾಯಿ.
ಭವದ ವ್ಯೂಹ ಬಿಡಿಸುವುದು ಕಷ್ಟ ಭಿಕ್ಕುಗಳೇ, ನನಗಿರುವುದು ಪೂರ್ವದರಿವು; ನಿಮಗಿರದು (ಪುಟ 23)
ಕರ್ವಶ್ರಿತವು ದೇಹ ಎನ್ನುವುದ ತಿಳಿಯಿರಿ!
ತೊಡಗಿ ನಿವೃತ್ತಿಯಲಿ! ಪ್ರವೃತ್ತಿ ದುಃಖಮಯ
ಕಾಲ ಬರುವನು ಕಾಲ ಸಪು್ಪಳವು ಕೇಳುವುದು.
ಏನು ಬರುವುದು ಜೊತೆಗೆ ಯೋಚಿಸಿರಿ ನೀವೆಲ್ಲ
ಆಳಿಲ್ಲ ಕಾಳಿಲ್ಲ ಮನೆಯಿಲ್ಲ ಮಠವಿಲ್ಲ! (ಪುಟ 228)
ಹಾಗೆಯೇ ಮಾನವನ ತೀರದ ದಾಹಗಳ ಕುರಿತು ಸಿದ್ಧಾರ್ಥನಾಗಿ ಜನಿಸಿದಾಗಲೂ ಅವನಲ್ಲಿ ಕಾಣುವ ಅಚ್ಚರಿ, ಆತಂಕಗಳಿಗೆ ಈ ಮೊದಲು ಕಾವ್ಯ ಬಾಯಿ ಕೊಟ್ಟಿರುವುದನ್ನೂ ನೆನೆಯಬೇಕು. ಈ ಮಹಾಕಾವ್ಯದ ಕಥನಮಾರ್ಗದ ಹಿನ್ನೆಲೆಯಲ್ಲಿ ಮಾಸ್ತಿಯವರ ಯಶೋಧರೆ ಕೇಳುವ ಪ್ರಶ್ನೆಗಳನ್ನು ಇಲ್ಲಿಯ ಯಶೋಧರೆ ಕೇಳುವುದಿಲ್ಲ, ಮಾತ್ರವಲ್ಲ, ಕೇಳಿಕೊಳ್ಳಲಾರಳು ಕೂಡ. ಅವಳೂ ಬುದ್ಧನ ಶೋಧನಾಮಾರ್ಗದಲ್ಲೇ ಇರುವವಳು, ಅವರ ಅಗಲುವಿಕೆಗೆ ಮುಂದೆ ಮತ್ತೆ ಮನಸುಗಳು ಒಂದಾಗಿ ಕ್ರಮಿಸುವ ಮಾರ್ಗವೂ ಇದೆ. ಅವು ಜನ್ಮಾಂತರಗಳಿಂದ ಒಟ್ಟಾಗಿ ಶೋಧನೆ ನಡೆಸಿದ ಜೋಡಿಜೀವಗಳು ಎಂಬ ಸೂಚನೆ ಮಧ್ಯಕಾಂಡದಲ್ಲಿಯೇ ಬಂದಿದೆ (ಪುಟ 89).
ಮಾನವತ್ವದ ಔನ್ನತ್ಯದ ಪ್ರತಿಮೆಯಾಗಿ ಬುದ್ಧ ಚರಿತೆಯನ್ನು ಕಟ್ಟುವಲ್ಲಿ ಈ ಕಾವ್ಯ ಕೃತಾರ್ಥವಾಗಿದೆ. ಅದಕ್ಕೆ ತಕ್ಕ ಲಯ ಮತ್ತು ನುಡಿಗಟ್ಟಿಗಾಗಿ ಕವಿ ಪಟ್ಟ ಶ್ರಮ ಸಾರ್ಥಕವಾಗಿದೆ. ಸಂಸಾರವನ್ನು ತ್ಯಜಿಸಿ ಹೊರಟ ಸಿದ್ಧಾರ್ಥ ನದಿಗೆ ಹಾರಿ ‘ಇನ್ನೊಂದು ದಡ’ ಮುಟ್ಟುವ ದೃಶ್ಯವೊಂದು ಈ ಕಾವ್ಯದಲ್ಲಿದೆ. ಅವನ ಇಡೀ ಬದುಕನ್ನು ಸಾಂಕೇತಿಸುವ ಅಪೂರ್ವ ಕಾವ್ಯಭಾಗವದು (ಪುಟ 139). ‘ಹರಿವ ಹೊಳೆಯಲ್ಲೊಂದು/ತೇಲುದೀಪದ ಹಾಗೆ ಕಾಣುವನು ಶಾಕ್ಯಮುನಿ’- ಮುಂಜಾವಿನ ಹೊಂಬೆಳಕಿನ ಚೆಲುವು ತುಂಬಿದ ನದಿಯಲ್ಲಿ ಆಚೆ ದಡದತ್ತ ತಲೆಯೆತ್ತಿ ಈಸುತ್ತಿರುವ ಸಿದ್ಧಾರ್ಥ ಕಂಡುದು ಹೀಗೆ ಎನ್ನುತ್ತಾರೆ ಕವಿ. ಈ ಪರಿಣತ ಕವಿಯ ಕಾವ್ಯಸಿದ್ಧಿಯನ್ನು ತೋರುವ ಸಾಲುಗಳಿವು. ಅವರ ಕಾವ್ಯಜೀವನದ ಒಂದು ಮಹತ್ವದ ಸಾಧನೆ ಈ ಮಹಾಕಾವ್ಯದಲ್ಲಿ ಸಂಭವಿಸಿದೆ. ಅಂಗುಲಿಮಾಲನಿಗೆ ಬುದ್ಧ ಹೇಳುವ ಮಾತು ಕವಿಯ ಮಾತಾಗಿಯೂ ಓದುವಂತಿದೆ:
‘ಶಾಂತಿಮಾರ್ಗಕೆ ತೋರು ಬೆರಳನ್ನು ತೋರುತ್ತ ನಿಂತಿರುವೆ. ತೆಗೆದುಕೋ ನನ್ನ ಈ ಬೆರಳನ್ನು.
ದಿಕ್ಸೂಚಿಯಾಗಿ ತೋರಲಿ ಶಾಂತಿಮಾರ್ಗವನು’ (ಪುಟ 235).
(ಲೇಖಕರು ವಿಮರ್ಶಕರು)