ಬ್ರಿಟಿಷರ ಅಂಗಳದಲ್ಲಿ ದಾಖಲೆಗಳ ಸೀಮೋಲ್ಲಂಘನ

Untitled design (4)
Published on
(ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)

ಆ ಇಪ್ಪತೈದು ದಿನಗಳಲ್ಲಿ ಚಮತ್ಕಾರವೇ ನಡೆದುಹೋಯಿತು! ಐದು ಪಂದ್ಯಗಳ ಟೆಸ್ಟ್ ಸರಣಿ ಪೂರ್ತಿ 25 ದಿನ ನಡೆಯಿತು.

  • ಒಟ್ಟಾರೆ 7187 ರನ್​ಗಳು ಸ್ಕೋರ್​ಬೋರ್ಡ್​ನಲ್ಲಿ ದಾಖಲಾದವು. ಅದರಲ್ಲಿ 3809 ರನ್​ಗಳನ್ನು ಭಾರತ ತಂಡವೊಂದೇ ಗಳಿಸಿತ್ತು!
  • ಉಭಯ ತಂಡಗಳ ಬ್ಯಾಟರ್​ಗಳು ಒಟ್ಟು 6736 ರನ್ ಗಳಿಸಿದರು.
  • ಸರಣಿಯಲ್ಲಿ 21 ಶತಕಗಳು ದಾಖಲಾದವು. ಭಾರತದ ಪರ 12, ಇಂಗ್ಲೆಂಡ್ ಪರ 9 ಶತಕ ಸಿಡಿದವು.
  • 5 ಪಂದ್ಯದ 19 ಇನಿಂಗ್ಸ್​ಗಳ ಪೈಕಿ 14 ಬಾರಿ 300ಕ್ಕೂ ಹೆಚ್ಚಿನ ಮೊತ್ತ ದಾಖಲಾಯಿತು.
  • 9 ಆಟಗಾರರು 400ಕ್ಕೂ ಅಧಿಕ ರನ್ ಗಳಿಸಿದರು.
  • ಭಾರತದ ಪರ 28 ಬಾರಿ ಬ್ಯಾಟ್ಸ್​ಮನ್​ಗಳು 50ಕ್ಕೂ ಹೆಚ್ಚಿನ ರನ್ ಗಳಿಸಿದರು.
  • 19 ಶತಕದ ಜತೆಯಾಟಗಳು ದಾಖಲಾದವು.
  • ಒಟ್ಟು 1860.4 ಓವರ್​ಗಳ ಆಟ ನಡೆಯಿತು. ಇದರಲ್ಲಿ ಭಾರತದ ಬ್ಯಾಟ್ಸ್ ಮನ್​ಗಳು 1052 ಓವರ್​ಗಳನ್ನು ಎದುರಿಸಿದರೆ, ಭಾರತದ ಬೌಲರ್​ಗಳು 808.4 ಓವರ್ ಬೌಲಿಂಗ್ ಮಾಡಿದರು. ಇಂಗ್ಲೆಂಡ್ 88 ವಿಕೆಟ್ ಕಬಳಿಸಿದರೆ, ಭಾರತೀಯ ಬೌಲರ್​ಗಳು ಕಬಳಿಸಿದ್ದು 84 ವಿಕೆಟ್.
  • ವೊದಲ ಎರಡು ಟೆಸ್ಟ್​ಗಳಲ್ಲಿ ಭಾರತ ಪ್ರಥಮ ಇನಿಂಗ್ಸ್ ಮುನ್ನಡೆ ಗಳಿಸಿದ್ದರೆ, ಕೊನೆಯ ಎರಡು ಟೆಸ್ಟ್​ಗಳಲ್ಲಿ ಇಂಗ್ಲೆಂಡ್ ಪ್ರಥಮ ಇನಿಂಗ್ಸ್ ಮುನ್ನಡೆ ಪಡೆದಿತ್ತು. 3ನೇ ಟೆಸ್ಟ್​ನಲ್ಲಿ ಉಭಯ ತಂಡಗಳು ತಲಾ 387 ರನ್ ಗಳಿಸಿ ಇನಿಂಗ್ಸ್ ಟೈ ಆಗಿದ್ದು ವಿಶೇಷ. 5ರಲ್ಲಿ 3 ಪಂದ್ಯಗಳಲ್ಲಿ ಮೊದಲ ಇನಿಂಗ್ಸ್ ಮುನ್ನಡೆ 30 ರನ್​ಗಿಂತ ಕಡಿಮೆ ಅಂತರದ್ದಾಗಿತ್ತು.

ಮೊನ್ನೆ ಮುಗಿದ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಪೈಪೋಟಿಯ ದೃಷ್ಟಿಯಿಂದ ಟೆಸ್ಟ್ ಇತಿಹಾಸದ ಶ್ರೇಷ್ಠ ಸರಣಿಗಳಲ್ಲೊಂದಾಗಿ ದಾಖಲಾಯಿತು. 5 ಪಂದ್ಯಗಳ ಸರಣಿಯೊಂದರಲ್ಲಿ ಉಭಯ ತಂಡಗಳು ಇಷ್ಟೊಂದು ನಿಕಟವಾಗಿ ಜಿದ್ದಾಜಿದ್ದಿ ನಡೆಸಿದ್ದು, ರನ್ ಗಳಿಕೆ, ವಿಕೆಟ್ ಕಬಳಿಕೆ ಮತ್ತು ಒಟ್ಟಾರೆ ಫಲಿತಾಂಶದಲ್ಲಿ ಇಷ್ಟೊಂದು ಸರಿಸಮನಾಗಿ ಕಾದಾಡಿದ್ದು ಅಪರೂಪವೆನಿಸಿತು. ಅಂತಿಮವಾಗಿ ಸರಣಿ ಗೌರವ 2-2ರಿಂದ ಹಂಚಿಕೆಯಾಗಿದ್ದು ಅತ್ಯಂತ ಸೂಕ್ತವಾಗಿತ್ತು.

ಜೇಮ್ಸ್​ ಆಂಡರ್​ಸನ್, ಸ್ಟುವರ್ಟ್ ಬ್ರಾಡ್ ಮತ್ತು ಮೊಯಿನ್ ಆಲಿಯಂಥ ಶ್ರೇಷ್ಠ ಬೌಲರ್​ಗಳ ನಿವೃತ್ತಿ ಬಳಿಕ ಇಂಗ್ಲೆಂಡ್ ಅನನುಭವಿ ಬೌಲಿಂಗ್ ಬಳಗದೊಂದಿಗೆ ಭಾರತದ ವಿರುದ್ಧ ಆಡಿತು. ದಿಗ್ಗಜ ಬ್ಯಾಟರ್​ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಮತ್ತು ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್ ನಿವೃತ್ತಿ ಬಳಿಕ ಮೊದಲ ಸರಣಿ ಆಡಿದ ಭಾರತ ತಂಡವೂ ಅನನುಭವಿ ಬ್ಯಾಟರ್​ಗಳೊಂದಿಗೆ ಕಣಕ್ಕಿಳಿದಿತ್ತು. ಇಂಗ್ಲೆಂಡ್ ಪ್ರವಾಸಕ್ಕೆ ಮುನ್ನ 58 ಟೆಸ್ಟ್ ಆಡಿದ್ದ ಕೆಎಲ್ ರಾಹುಲ್ ಭಾರತದ ಪರ ಅತ್ಯಂತ ಹಿರಿಯ ಬ್ಯಾಟರ್ ಎನಿಸಿದ್ದರೆ, 43 ಪಂದ್ಯ ಆಡಿದ್ದ ರಿಷಬ್ ಪಂತ್ ನಂತರದ ಸೀನಿಯರ್ ಎನಿಸಿದ್ದರು. ನಾಯಕ ಶುಭಮನ್ ಗಿಲ್​ಗಿದ್ದಿದ್ದು 32 ಟೆಸ್ಟ್​ಗಳ ಅನುಭವ ಮಾತ್ರ. ಭಾರತ ತಂಡದ ಅತ್ಯಂತ ಹಿರಿಯ ಸದಸ್ಯರೆನಿಸಿದ್ದ, ವೇಗಿ ಜಸ್​ಪ್ರೀತ್ ಬುಮ್ರಾ 3 ಪಂದ್ಯಗಳಿಗೆ ಮಾತ್ರ ಲಭ್ಯರಾದರೆ, ಇಂಗ್ಲೆಂಡ್ ತಂಡಕ್ಕೆ ನಂ.1 ವೇಗಿ ಜೋಫ್ರಾ ಆರ್ಚರ್ ಕೇವಲ 2 ಪಂದ್ಯಗಳಲ್ಲಿ ಆಡಿದರು. ಆದರೆ, ಹಿಂದಿನ ಅನುಭವದ ಬಲಕ್ಕಿಂತ ಈ ಸರಣಿಯಲ್ಲಿ ಪ್ರತಿಯೊಬ್ಬ ಆಟಗಾರ ಗಳಿಸಿಕೊಂಡ ಅನುಭವ ಹಿರಿದೆನಿಸಿತು.

5 ಪಂದ್ಯಗಳ ಸರಣಿಯಲ್ಲಿ ಎಲ್ಲ ಪಂದ್ಯಗಳು 5 ದಿನಗಳು ನಡೆದು, ಪೂರ್ಣ 25 ದಿನಗಳ ಆಟ ಕಾಣುವುದು ವಿರಳ. ಕಳೆದ 25 ವರ್ಷಗಳಲ್ಲಿ 4 ಸರಣಿಗಳು ಮಾತ್ರ ಇದಕ್ಕೆ ಸಾಕ್ಷಿಯಾಗಿವೆ. ಬೌಲಿಂಗ್ ಪಿಚ್​ಗಳಲ್ಲಿ 3-4 ದಿನಗಳಲ್ಲಿ ಪಂದ್ಯ ಮುಗಿದುಹೋಗುವುದೇ ವಾಡಿಕೆಯಾಗಿರುವ ನಡುವೆ, ಈ ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನಡುವೆ ಸಮಬಲದ ಹೋರಾಟ ನಡೆಯಿತು. ಭಾರತದ ನಾಯಕ ಶುಭಮಾನ್ ಗಿಲ್ ಒಂದೇ ಸರಣಿಯಲ್ಲಿ ಅತ್ಯಧಿಕ 4 ಶತಕ (ಅದರಲ್ಲೊಂದು ದ್ವಿಶತಕ) ಸಿಡಿಸಿದ ನಾಯಕನೆಂಬ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ್ದಲ್ಲದೆ, ಒಟ್ಟಾರೆ 754 ರನ್ ಗಳಿಸಿ ಗರಿಷ್ಠ ರನ್​ಗಳ ಭಾರತೀಯ ದಾಖಲೆ ನಿರ್ವಿುಸಿದರು. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ 4 ಪಂದ್ಯಗಳಿಂದ 304 ರನ್ ಹಾಗೂ 17 ವಿಕೆಟ್ ಗಳಿಕೆಯೊಂದಿಗೆ ಅತ್ಯುತ್ತಮ ಆಲ್ರೌಂಡ್ ನಿರ್ವಹಣೆ ಮೆರೆದರು. ಒಂದೇ ಸರಣಿಯಲ್ಲಿ ಭಾರತದ ಮೂವರು ಬ್ಯಾಟರ್​ಗಳು 500ಕ್ಕೂ ಅಧಿಕ ರನ್ ಗಳಿಸಿದ್ದೂ ದಾಖಲೆ.

ರಾಹುಲ್ 532 ರನ್ ಗಳಿಸಿದರೆ, ರವೀಂದ್ರ ಜಡೇಜಾ 516 ರನ್ ಗಳಿಸಿದರು. ಜಡೇಜಾ ಆಡಿದ 10 ಇನಿಂಗ್ಸ್​ಗಳಲ್ಲಿ 6 ಅರ್ಧ ಶತಕ ಬಾರಿಸಿ ಅಪರೂಪದ ಸ್ಥಿರತೆ ಪ್ರದರ್ಶಿಸಿದರು. ಅದರಲ್ಲೂ 2ನೇ ಇನಿಂಗ್ಸ್​ನಲ್ಲಿ ಕ್ರೀಸಿಗಿಳಿದ 5ರಲ್ಲಿ 4 ಬಾರಿ ನಾಟೌಟ್ ಆಗಿ ಮರಳಿದ್ದು ವಿಶೇಷ. 4ನೇ ಟೆಸ್ಟ್​ನಲ್ಲಿ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ 5ನೇ ವಿಕೆಟ್​ಗೆ ಸುಮಾರು 55 ಓವರ್​ಗಳ ಕಾಲ ಹೆಬ್ಬಂಡೆಯಂತೆ ಕ್ರೀಸ್ ಕಚ್ಚಿ ನಿಂತು 203 ರನ್​ಗಳ ಅಜೇಯ ಜತೆಯಾಟವಾಡಿದ್ದು ಇಡೀ ಸರಣಿಯ ಮೇರು ಸಾಹಸ ಎನ್ನಬಹುದು. ವೊದಲ ಇನಿಂಗ್ಸ್​ನಲ್ಲಿ 311 ರನ್​ಗಳ ಹಿನ್ನಡೆ ಅನುಭವಿಸಿದ್ದ ಭಾರತವೇನಾದರೂ ಈ ಪಂದ್ಯವನ್ನು ಸೋತಿದ್ದರೆ ಇಂಗ್ಲೆಂಡ್ ಕೊನೆಯ ಪಂದ್ಯಕ್ಕೆ ಮುನ್ನವೇ 3-1ರಿಂದ ಸರಣಿ ಗೆದ್ದುಬಿಡುತ್ತಿತ್ತು. ಆದರೆ, ಪ್ರತೀ ಬಾರಿ ತಂಡ ಒತ್ತಡಕ್ಕೆ ಸಿಲುಕಿದಾಗಲೂ ಬ್ಯಾಟರ್​ಗಳು, ಬೌಲರ್​ಗಳು ಅವಿಸ್ಮರಣೀಯ ಆಟವಾಡಿದರು.

5ನೇ ಟೆಸ್ಟ್​ನಲ್ಲಿ ಕರುಣ್ ನಾಯರ್ 3149 ದಿನಗಳ ಸುದೀರ್ಘ ಅಂತರದ ಬಳಿಕ ಗಳಿಸಿದ ಟೆಸ್ಟ್ ಅರ್ಧ ಶತಕದಿಂದ ಭಾರತ ನಿಕೃಷ್ಟ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರಾಯಿತು. 2ನೇ ಇನಿಂಗ್ಸ್​ನಲ್ಲಿ ಯಶಸ್ವಿ ಜೈಸ್ವಾಲ್​ರ ಭರ್ಜರಿ ಶತಕ ಹಾಗೂ ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ ಗಳಿಸಿದ ಅರ್ಧ ಶತಕ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದವು. ಅದರಲ್ಲೂ, ಪ್ರಸಿದ್ಧ ಕೃಷ್ಣ ಜತೆ 10ನೇ ವಿಕೆಟ್​ಗೆ 39 ರನ್ ಜತೆಯಾಟದಲ್ಲಿ ಭಾಗಿಯಾದ ಸುಂದರ್, ಅಷ್ಟೂ 39 ರನ್​ಗಳನ್ನು ತಾವೇ ಗಳಿಸಿ ಭಾರತದ ಗೆಲುವಿನ ಟಾರ್ಗೆಟ್​ಗೆ ಕೊಡುಗೆ ನೀಡಿದರು. ಪಂದ್ಯದ ಅಂತಿಮ ದಿನದಾಟದಲ್ಲಿ ಇಂಗ್ಲೆಂಡ್ ಕೊನೆಯ 4 ವಿಕೆಟ್​ಗಳಿಂದ 35 ರನ್ ಗಳಿಸಲಾಗದೆ, 6 ರನ್​ಗಳಿಂದ ಸೋತಿದ್ದನ್ನು ನೋಡುವಾಗ ಸುಂದರ್ ಆಟದ ಮೌಲ್ಯ ಅರಿವಿಗೆ ಬರುತ್ತದೆ.

ಆಟಗಾರರ ಸಾಹಸ ಮತ್ತು ಆಕ್ರಮಣಶೀಲತೆ ಮತ್ತು ಮುಂಗೋಪದ ಪ್ರಸಂಗಗಳು ಈ ಸರಣಿಯುದ್ದಕ್ಕೂ ಗಮನ ಸೆಳೆದವು. ಸರಣಿಯಲ್ಲಿ ಭಾರತದ ಪರ ಮೊದಲ ಹಾಗೂ ಕೊನೆಯ ಶತಕಗಳನ್ನು ಯಶಸ್ವಿ ಜೈಸ್ವಾಲ್ ಸಿಡಿಸಿದರೆ, ರಿಷಬ್ ಪಂತ್ ಮೊದಲ ಟೆಸ್ಟ್​ನ ಎರಡೂ ಇನಿಂಗ್ಸ್​ಗಳಲ್ಲಿ, ನಾಯಕ ಶುಭಮಾನ್ ಗಿಲ್ 2ನೇ ಟೆಸ್ಟ್​ನ ಎರಡೂ ಇನಿಂಗ್ಸ್​ಗಳಲ್ಲಿ ಶತಕ ಗಳಿಸಿ ಅಪರೂಪದ ಸಾಧನೆ ಮಾಡಿದರು. 3ನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಶೋಯಿಬ್ ಬಷೀರ್ ಹೆಬ್ಬೆರಳು ಮುರಿದಿದ್ದರೂ ಬೌಲಿಂಗ್ ಮಾಡಿದರೆ, ರಿಷಬ್ ಪಂತ್ 4ನೇ ಟೆಸ್ಟ್​ನಲ್ಲಿ ಕಾಲಿನ ಹೆಬ್ಬೆರಳು ಮುರಿದಿದ್ದರೂ ಬ್ಯಾಟಿಂಗ್ ಮಾಡಿ ಭಾರತದ ಐತಿಹಾಸಿಕ ಡ್ರಾ ಫಲಿತಾಂಶಕ್ಕೆ ಕೊಡುಗೆ ನೀಡಿದರು. 5ನೇ ಟೆಸ್ಟ್​ನಲ್ಲಿ ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ ಕೈಮುರಿದಿದ್ದರೂ ಒಂದೇ ಕೈಯಲ್ಲಿ ಬ್ಯಾಟ್ ಹಿಡಿದು ಕ್ರೀಸಿಗೆ ಆಗಮಿಸುವ ಮೂಲಕ ಸಾಹಸ- ಸ್ಪೂರ್ತಿ ತೋರಿದರು.

ಲಾರ್ಡ್ಸ್​ನ 3ನೇ ಟೆಸ್ಟ್​ನಲ್ಲಿ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದ ಇಂಗ್ಲೆಂಡ್​ನ ಆರಂಭಿಕ ಬ್ಯಾಟರ್ ಜಾಕ್ ಕ್ರೌಲಿ ವಿರುದ್ಧ ನಾಯಕ ಗಿಲ್ ಆವೇಶದಿಂದ ಏರಿಹೋಗಿದ್ದು, ಆಟದಂಗಳದ ಆಕ್ರಮಣಶೀಲತೆಯನ್ನು ಮತ್ತೊಂದು ಸ್ಥರಕ್ಕೆ ಕೊಂಡೊಯ್ದರೆ, 4ನೇ ಟೆಸ್ಟ್​ನಲ್ಲಿ ಅಜೇಯ ಜತೆಯಾಟವಾಡಿದ ಜಡೇಜಾ ಮತ್ತು ಸುಂದರ್​ಗೆ ಶತಕ ತಪ್ಪಿಸುವುದಕ್ಕಾಗಿ 15 ಓವರ್ ಆಟ ಬಾಕಿ ಇರುವಂತೆಯೇ ಇಂಗ್ಲೆಂಡ್ ಡ್ರಾ ಮಾಡಿಕೊಳ್ಳುವಂತೆ ಆಹ್ವಾನಿಸಿದ್ದು ಕ್ರೀಡಾಸ್ಪೂರ್ತಿ ಕುಗ್ಗಿಸಿದ ಕ್ಷಣಗಳಾಗಿ ದಾಖಲಾದವು. ವರ್ಷಾಂತ್ಯದ ಆಶಸ್ ಸರಣಿಗೆ ಪೂರ್ವಾಭ್ಯಾಸವಾಗಿ ಇಂಗ್ಲೆಂಡ್ 4-1ರಿಂದ ಭಾರತದ ವಿರುದ್ಧ ಗೆಲ್ಲಲಿದೆ ಎಂದು ಮಾಜಿ ಕ್ರಿಕೆಟಿಗ ಗ್ರೇಮ್ ಸ್ವಾನ್ ಭವಿಷ್ಯ ನುಡಿದಿದ್ದರು. ಭಾರತ 4 ಹಾಗೂ 5ನೇ ಟೆಸ್ಟ್​ನಲ್ಲಿ ಪವಾಡಸದೃಶ ಆಟ ಆಡದಿದ್ದರೆ ಈ ಭವಿಷ್ಯ ನಿಜವಾಗುವ ಅಪಾಯವೂ ಇತ್ತು. ತೀರಾ ನಿಕಟ ಪೈಪೋಟಿಯ ಈ ಸರಣಿಯಲ್ಲಿ ತಂತ್ರಗಾರಿಕೆ, ತಂಡ ಸಂಯೋಜನೆಯಲ್ಲಿ ಚಾತುರ್ಯ ಮೆರೆದಿದ್ದರೆ ಭಾರತಕ್ಕೂ 4-1 ಅಥವಾ 3-2ರಿಂದ ಸರಣಿ ಗೆಲ್ಲುವ ಅವಕಾಶಗಳಿದ್ದವು.

ಮೊದಲ ಟೆಸ್ಟ್​ನಲ್ಲಿ ಮೊದಲ 4 ದಿನ ಮೇಲುಗೈ ಹೊಂದಿದ್ದ ಭಾರತ ಕೊನೆ ದಿನ ಇಂಗ್ಲೆಂಡ್ ಬ್ಯಾಟರ್​ಗಳನ್ನು ಕಟ್ಟಿಹಾಕಲು ತಜ್ಞ ಸ್ಪಿನ್ನರ್ ಇಲ್ಲದೆ ಸೋತಿತ್ತು. ಲಾರ್ಡ್ಸ್​ನ 3ನೇ ಟೆಸ್ಟ್ ನಲ್ಲಿ 22 ರನ್​ಗಳಿಂದ ಸೋಲುವುದಕ್ಕೂ ಇಂಗ್ಲೆಂಡ್​ನ 2ನೇ ಇನಿಂಗ್ಸ್​ನಲ್ಲಿ ಕೆಳಕ್ರಮಾಂಕಕ್ಕೆ ಕಡಿವಾಣ ಹಾಕಲು ತಜ್ಞ ಸ್ಪಿನ್ನರ್ ಇಲ್ಲದ್ದೇ ಕಾರಣವಾಗಿತ್ತು. ಆದರೂ, ಭಾರತ 5 ಟೆಸ್ಟ್ ಗಳಲ್ಲಿ ಒಮ್ಮೆಯೂ ತಜ್ಞ ಸ್ಪಿನ್ನರ್, ಮ್ಯಾಚ್ ವಿನ್ನರ್ ಕುಲ್​ದೀಪ್ ಯಾದವ್​ಗೆ ಆಡುವ ಅವಕಾಶ ನೀಡಲೇ ಇಲ್ಲ. 4ನೇ ಟೆಸ್ಟ್​ನಲ್ಲೂ ಬಹುಶಃ ಕುಲ್​ದೀಪ್ ಆಡಿದ್ದರೆ, ಇಂಗ್ಲೆಂಡ್ 669 ರನ್​ಗಳ ದೊಡ್ಡ ಮೊತ್ತ ಪೇರಿಸುವುದು ಕಷ್ಟವಾಗುತ್ತಿತ್ತು. ಅಲ್ಲದೇ ಇಡೀ ಸರಣಿಯಲ್ಲಿ 4 ಶತಕ ಬಾರಿಸಿದ ಜೋ ರೂಟ್​ಗೆ ಕಡಿವಾಣ ಹಾಕುವುದಕ್ಕೆ ಕುಲ್​ದೀಪ್​ರ ಸ್ಪಿನ್ ಅಸ್ತ್ರ ಬೇಕಿತ್ತು. ಅದೇ ರೀತಿ ಎಡಗೈ ವೇಗಿ ಅರ್ಷದೀಪ್ ಸಿಂಗ್​ಗೂ ಒಂದು ಪಂದ್ಯದಲ್ಲೂ ಅವಕಾಶ ನೀಡಲೇ ಇಲ್ಲ. ಆಕಾಶ್​ದೀಪ್, ಪ್ರಸಿದ್ಧ ಕೃಷ್ಣ ದೊರೆತ ಅವಕಾಶ ಬಳಸಿಕೊಂಡಂತೆ, ಅರ್ಷದೀಪ್​ಗೂ ಒಂದು ಅವಕಾಶ ಕಲ್ಪಿಸಬೇಕಿತ್ತು.

ಒಟ್ಟಾರೆ ಇಂಗ್ಲೆಂಡ್ ವಿರುದ್ಧದ ಈ ಸರಣಿಯಿಂದ ಭಾರತ ಗಳಿಸಿದ್ದು ಬಹಳ. ಗಿಲ್ ನಾಯಕತ್ವ, ಶತಕಗಳ ಮಳೆಗರೆದ ಬ್ಯಾಟರ್​ಗಳ ಸಾಹಸ, ಮೊಹಮ್ಮದ್ ಸಿರಾಜ್​ರ ವೀರಾವೇಶದ ಬೌಲಿಂಗ್ ಎಲ್ಲವೂ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದೆನಿಸಿದವು. 2ನೇ ಟೆಸ್ಟ್​ನಲ್ಲಿ 333 ರನ್​ಗಳ ಬೃಹತ್ ಅಂತರದಿಂದ ಗೆದ್ದ ಭಾರತ, ಕೊನೆಯ ಟೆಸ್ಟ್​ನ ಕೊನೆಯ ದಿನ 35 ರನ್​ಗಳ ಸಣ್ಣ ಮೊತ್ತ ರಕ್ಷಿಸಿಕೊಂಡು 6 ರನ್​ಗಳ ದಾಖಲೆ ಅಂತರದಿಂದ ಐತಿಹಾಸಿಕ ಜಯ ದಾಖಲಿಸಿತು. ಒಟ್ಟಿನಲ್ಲಿ ಕಳೆದ ಆಸ್ಟ್ರೇಲಿಯಾ ಪ್ರವಾಸದ ನಿರಾಸೆಗೆ ಹೋಲಿಸಿದರೆ, ಈ ಸರಣಿಯಲ್ಲಿ ಸಪ್ಪೆ ಕ್ಷಣಗಳೇ ಕಾಣಲಿಲ್ಲ. ಆದರೂ, ಭಾರತಕ್ಕೆ ಎಲ್ಲೆಡೆ ಇಂಗ್ಲೆಂಡ್​ನಂಥ ಬ್ಯಾಟಿಂಗ್ ಪಿಚ್​ಗಳೇ ಸಿಗುವುದಿಲ್ಲ. ಹಾಗಾಗಿ ಟೆಸ್ಟ್ ಪಂದ್ಯ ಗೆಲ್ಲುವುದಕ್ಕೆ ಅಗತ್ಯವಾದ 20 ವಿಕೆಟ್ ಕಬಳಿಸುವುದಕ್ಕೆ ಕುಲ್​ದೀಪ್​ರಂಥ ತಜ್ಞ ಸ್ಪಿನ್ನರ್​ಗೆ ತಂಡದಲ್ಲಿ ಜಾಗ ಕಲ್ಪಿಸಲೇಬೇಕು. 3ನೇ ಕ್ರಮಾಂಕದಲ್ಲಿ ಸುದರ್ಶನ್, ಕರುಣ್ ನಾಯರ್ ಇಬ್ಬರೂ ವಿಫಲರಾಗಿರುವ ಕಾರಣ, ಇನ್ನಾದರೂ, ಶ್ರೇಯಸ್ ಅಯ್ಯರ್​ಗೆ

‘ಟೆಸ್ಟ್’ ಅವಕಾಶ ಕೊಡುವುದು ಮೇಲು. ಕೊನೆಯದಾಗಿ ಗೌತಮ್ ಗಂಭೀರ್ ತರಬೇತಿ ಹಾಗೂ ಗಿಲ್ ಚೊಚ್ಚಲ ನಾಯಕತ್ವಕ್ಕೆ ಇದು ಅಗ್ನಿಪರೀಕ್ಷೆಯಾಗಿತ್ತು. ಗಿಲ್ ತೇರ್ಗಡೆಯಾದರೆ, ಗಂಭೀರ್ ಸದ್ಯಕ್ಕೆ ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net