ಸ್ವರ್ಗಕ್ಕೆ ಕಿಚ್ಚು ಹಚ್ಚಿದ ಸೊಳ್ಳೆಗಳ ಮೇಲೆ ಬ್ರಹ್ಮಾಸ್ತ್ರ

dengue
Published on
ಹವಾಯಿ ದ್ವೀಪಗಳ ಕಾಡುಗಳಲ್ಲಿ ಡ್ರೋನ್ ಮೂಲಕ ಸೊಳ್ಳೆಗಳನ್ನು ತುಂಬಿಕೊಂಡಿರುವ ಬುಟ್ಟಿಗಳನ್ನು ಎಸೆಯುತ್ತಿರುವ ವಿಡಿಯೋವೊಂದು ಕಳೆದ ಕೆಲವು ದಿನಗಳಿಂದ ವೈರಲ್ ಆಗುತ್ತಿದೆ. ದಟ್ಟ ಕಾಡಿನ ನಡುವೆ ಮೇಲಿನಿಂದ ಬೀಳುತ್ತಿರುವ ಆ ಬುಟ್ಟಿಗಳನ್ನು ನೋಡಿದ ನನಗೆ ಎಂದೋ ನೋಡಿದ್ದ ದಿ ಗಾಡ್ಸ್ ಮಸ್ಟ್ ಬಿ ಕ್ರೇಜಿ ಚಿತ್ರ ನೆನಪಾಯಿತು. ದೊಡ್ಡ ಕಾಡಿನ ನಡುವೆ ನಾಗರಿಕತೆಯ ಸೋಂಕಿಲ್ಲದೆ ಬದುಕುತ್ತಿದ್ದ ಆದಿವಾಸಿ ಕುಟುಂಬವೊಂದರ ಹಿರಿಯನಿಗೆ ಒಮ್ಮೆ ಕಾಡಿನ ಮೇಲೆ ಜೆಟ್ ಹಾರಿಸಿಕೊಂಡು ಹೋಗುತ್ತಿದ್ದ ಪೈಲಟ್ ಕುಡಿದು ಎಸೆದ ತಂಪು ಪಾನೀಯದ ಬಾಟಲ್ ಸಿಗುತ್ತದೆ. ಅಲ್ಲಿಂದ ಅವರ ಜೀವನದಲ್ಲಿ ಊಹಿಸದ ತಿರುವುಗಳು ಜರುಗುತ್ತ ಬದುಕು ಅಲ್ಲೋಲ ಕಲ್ಲೋಲವಾಗುತ್ತದೆ. ಇದು ಚಿತ್ರದ ಕಥೆಯ ತಿರುಳು. ಅಂದ ಹಾಗೆ ಹವಾಯಿ ದ್ವೀಪಗಳ ಮೇಲೆ ಹೆಲಿಕಾಪ್ಟರ್​ನಿಂದ ಎಸೆದ ಬುಟ್ಟಿಗಳು ಅವು ಬೀಳುವ ಸ್ಥಳಗಳಲ್ಲಿ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಲೆಂದೇ ವಿನ್ಯಾಸಗೊಂಡಿವೆ. ಆದರೆ ಈ ಬಾರಿ ಮನುಷ್ಯರದಲ್ಲ, ಸೊಳ್ಳೆಗಳದ್ದು.

ಅಮೆರಿಕ ಸಂಯುಕ್ತ ಸಂಸ್ಥಾನದ ರಾಜ್ಯಗಳಲ್ಲಿ ಒಂದಾಗಿರುವ ಹವಾಯಿ ಒಟ್ಟು ಏಳು ದ್ವೀಪಗಳನ್ನು ಹೊಂದಿದ್ದು ಇವು ಭೂಲೋಕದ ಸ್ವರ್ಗವೆಂದೇ ಖ್ಯಾತಿ ಗಳಿಸಿವೆ. ಹೀಗಾಗಿ ಇಲ್ಲಿ ಪ್ರವಾಸಿಗರು ದಂಡಿಯಾಗಿ ಬರುತ್ತಾರೆ. ಇಂತಹ ಸ್ವರ್ಗದಲ್ಲಿ ಇದೀಗ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇಲ್ಲಿನ ಸ್ಥಳೀಯರು ಹೇಳುವ ಕತೆಯನ್ನು ನಂಬುವುದಾದರೆ ಮೊದಲು ಹವಾಯಿಯಲ್ಲಿ ಒಂದೂ ಸೊಳ್ಳೆ ಇರಲಿಲ್ಲ. 1862ರಲ್ಲಿ ಇಲ್ಲಿಗೆ ಮೀನುಗಳನ್ನು ತುಂಬಿಕೊಂಡು ಬಂದ ಹಡಗೊಂದು ಮೀನುಗಳ ಜೊತೆಗೆ ಸೊಳ್ಳೆಗಳನ್ನೂ ಹೊತ್ತು ತಂದು ಇಲ್ಲಿ ಬಿಟ್ಟಿದ್ದೇ ಬಂತು. ನೂರೂ ಚಿಲ್ಲರೆ ವರ್ಷಗಳಲ್ಲಿ ಆ ಸೊಳ್ಳೆಗಳು ತಮ್ಮ ಸಂಖ್ಯೆಯನ್ನು ಯದ್ವಾ ತದ್ವಾ ಏರಿಸಿಕೊಂಡು ಈ ಸ್ವರ್ಗಕ್ಕೆ ಅಕ್ಷರಶಃ ಕಿಚ್ಚನ್ನು ಹಚ್ಚಿವೆ. ತೀರ ತಂಪು ಹವಾಮಾನ ಸೊಳ್ಳೆಗಳ ಸಂತಾನೋತ್ಪತ್ತಿಗೆ ಅಷ್ಟಾಗಿ ಪ್ರಶಸ್ತ್ತಲ್ಲದ ಕಾರಣ, ಮೊದಲೆಲ್ಲ ಈ ದ್ವೀಪಗಳ ತೀರಪ್ರದೇಶಗಳಲ್ಲಷ್ಟೇ ಕಂಡುಬರುತ್ತಿದ್ದ ಸೊಳ್ಳೆಗಳ ಕುರಿತು ಇಲ್ಲಿಯವರು ಅಷ್ಟೇನೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಹವಾಮಾನ ವೈಪರೀತ್ಯದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಹವಾಯಿ ದ್ವೀಪಗಳ ಎತ್ತರದ ಪ್ರದೇಶಗಳ ವಾತಾವರಣ ಬದಲಾಗಿ ಹಿಂದಿನ ಚಳಿ ಮಾಯವಾಗಿದೆ. ಇದೊಂದು ರೀತಿ ಸೊಳ್ಳೆಗಳಿಗೆ ವರವಾಗಿ ಪರಿಣಮಿಸಿದ್ದು ಇವುಗಳನ್ನು ಹಿಡಿಯುವವರೇ ಇಲ್ಲವೆನ್ನುವಂತಹ ಸನ್ನಿವೇಶ ಸೃಷ್ಟಿಯಾಗಿದೆ.

ಸೊಳ್ಳೆಗಳ ಸಂತಾನೋತ್ಪತ್ತಿಯ ಪ್ರಕ್ರಿಯೆ ಕೊಂಚ ವಿಭಿನ್ನ. ಹೆಣ್ಣು ಸೊಳ್ಳೆಯು ಗಂಡು ಸೊಳ್ಳೆಯ ವೀರ್ಯವನ್ನು ತನ್ನ ದೇಹದಲ್ಲಿರುವ ಚೀಲಗಳಲ್ಲಿ ಸಂಗ್ರಹಿಸಿ ಇಟ್ಟುಕೊಂಡಿರುತ್ತದೆ. ಈ ಸಂಗ್ರಹವು ಹೆಣ್ಣು ಸೊಳ್ಳೆಯ ಪೂರ್ತಿ ಜೀವಿತ ಕಾಲದವರೆಗೂ ಮರಿಗಳನ್ನು ಮಾಡಲು ಸಾಕು. ಸಂತಾನೋತ್ಪತ್ತಿಯ ಮೊದಲ ಹಂತವಾದ ಮೊಟ್ಟೆಗಳ ತಯಾರಿಕೆಗೆ ತಯಾರಾದ ಹೆಣ್ಣು ಸೊಳ್ಳೆಯು ತನ್ನ ಸಂಗ್ರಹದಲ್ಲಿರುವ ವೀರ್ಯಾಣುಗಳನ್ನು ಬಳಸಿಕೊಂಡು ತನ್ನ ಅಂಡಾಣುಗಳ ಜೊತೆಗೆ ಸೇರುವಂತೆ ಮಾಡಿ ಆನಂತರ ಭ್ರೂಣವನ್ನು ನೀರಿನಲ್ಲಿ ಬಿಡುಗಡೆ ಮಾಡುತ್ತದೆ. ಇಲ್ಲಿಂದ ಭ್ರೂಣವು ಮರಿಯಾಗಲು ಸುಮಾರು ಎರಡರಿಂದ ನಾಲ್ಕು ವಾರಗಳು ಬೇಕು. ಆದರೆ ಸುತ್ತಲಿನ ತಾಪಮಾನ ಹೆಚ್ಚಿದಂತೆ ಈ ಸಮಯವು ಕಡಿಮೆಯಾಗಿ ಒಂದು ವಾರಕ್ಕೆ ಇಳಿಯುವ ಸಾಧ್ಯತೆಗಳಿವೆ. ಹೀಗಾದಾಗ ಸೊಳ್ಳೆಗಳ ಸಂತತಿ ಬೆಳೆಯುವ ವೇಗ ಮಿತಿ ಮೀರುತ್ತದೆ. ಪೂರ್ತಿ ಪರಿಸರ ವ್ಯವಸ್ಥೆಯನ್ನೇ ಅವು ಹಾಳುಗೆಡವುತ್ತವೆ.

ಹವಾಯಿ ದ್ವೀಪಗಳು ತಮ್ಮ ನೈಸರ್ಗಿಕ ಸೌಂದರ್ಯದ ಜೊತೆಗೆ ಅಲ್ಲಿ ಕಾಣಸಿಗುವ ವೈವಿಧ್ಯಮಯ ಪ್ರಾಣಿ ಪಕ್ಷಿ ಸಂಕುಲದ ಕಾರಣಕ್ಕೂ ಹೆಸರುವಾಸಿ. ಬಲು ಅಪರೂಪದ ಹಾಗೂ ಕೇವಲ ಇಲ್ಲಷ್ಟೇ ಕಾಣಸಿಗುವ ಅಪರೂಪದ ಪಕ್ಷಿಗಳನ್ನು ನೋಡಲು ಹವಾಯಿ ದ್ವೀಪಗಳಿಗೆ ಬಹಳಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಅಂತಹುದರಲ್ಲಿ ಪಕ್ಷಿಜ್ವರದ ಕಾರಣಕ್ಕೆ ಇಲ್ಲಿನ ಪಕ್ಷಿ ಸಂಕುಲ ಅಪಾಯದಲ್ಲಿದ್ದು ತಮ್ಮ ಉಳಿವಿಗಾಗಿ ಹೋರಾಡುತ್ತಿವೆ. ಥೇಟು ಮನುಷ್ಯರ ಕೇಸಿನಂತೆ ಇಲ್ಲಿಯೂ ಈ ಪಕ್ಷಿ ಮಲೇರಿಯಾದ ಮುಖ್ಯ ಕಾರಣ ಸೊಳ್ಳೆ ಕಡಿತ. ಮೊದಲೆಲ್ಲ ಎಲ್ಲೆಂದರಲ್ಲಿ ಹಾರಾಡುತ್ತ ಪ್ರವಾಸಿಗರ ಮನ ತಣಿಸುತ್ತಿದ್ದ ಸ್ಥಳೀಯ ಪಕ್ಷಿಗಳ ಸಂಖ್ಯೆಯು ಮಲೇರಿಯಾದ ಹೊಡೆತಕ್ಕೆ ನಲುಗಿ ಕುಸಿಯುತ್ತಿದೆ. ಹವಾಯಿಯ ರಾಜ್ಯ ಪಕ್ಷಿಯಾಗಿರುವ ಮತ್ತು ಬಾತುಗಳ ಗುಂಪಿಗೆ ಸೇರಿರುವ ನೆನೆ, ಆಲಾಲ ಎಂಬ ಕಾಗೆ ಮತ್ತು ತಮ್ಮ ಆಕರ್ಷಕ ಬಣ್ಣಗಳ ಕಾರಣ ಎಲ್ಲರ ಗಮನ ಸೆಳೆಯುವ ಗಾತ್ರದಲ್ಲಿ ನಮ್ಮ ಗುಬ್ಬಿಯಷ್ಟಿರುವ ಹನಿಕ್ರೀಪರ್ಸ್ ಎಂಬ ಪಕ್ಷಿಗಳ ಗುಂಪು ಇತ್ತೀಚಿನ ದಿನಗಳಲ್ಲಿ ಹವಾಯಿ ದ್ವೀಪಗಳಲ್ಲಿ ಕಾಣುವುದೇ ಅಪರೂಪವಾಗಿದೆ. ಪಕ್ಷಿತಜ್ಞರ ಪ್ರಕಾರ ಈಗಾಗಲೇ ಹನಿಕ್ರೀಪರ್ಸ್ ಗುಂಪಿನ ಮೂವತ್ಮೂರು ಜಾತಿಯ ಪಕ್ಷಿಗಳು ಕಣ್ಮರೆಯಾಗಿದ್ದು ಉಳಿದ ಹದಿನೇಳು ಜಾತಿಯವು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ. ಇದು ಹೀಗೆಯೇ ಮುಂದುವರೆದರೆ ಈ ಎಲ್ಲ ಪಕ್ಷಿಗಳ ಸಂತತಿಯು ಮುಂದಿನ ಹತ್ತು ವರ್ಷಗಳಲ್ಲಿ ಸಂಪೂರ್ಣವಾಗಿ ನಿರ್ನಾಮವಾಗಲಿದೆ. ಇದರ ಸುಳಿವನ್ನು ಅರಿತ ಸ್ಥಳೀಯ ಆಡಳಿತವು ತಕ್ಷಣ ಸೊಳ್ಳೆಗಳ ನಿಯಂತ್ರಣಕ್ಕೆ ಮುಂದಾಗಿದೆ. ಆದರೆ ಅವರ ಆರಂಭದಲ್ಲಿದ್ದ ಉಮೇದು ತಣ್ಣಗಾಗಲು ಹೆಚ್ಚಿನ ದಿನ ಹಿಡಿಯಲಿಲ್ಲ. ಏಕೆಂದರೆ ಹವಾಯಿ ದ್ವೀಪಗಳ ವ್ಯಾಪ್ತಿ ದೊಡ್ಡದಾಗಿರುವ ಜೊತೆಗೆ ಇದೊಂದು ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಕಾರಣಕ್ಕೆ ಇಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಸಾಯನಿಕದ ಸಿಂಪಡಣೆಯಂತಹ ಸಾಂಪ್ರದಾಯಿಕ ತಂತ್ರವನ್ನು ಬಳಸಲು ಆಗುವುದಿಲ್ಲ.

ಹೀಗಾಗಿ ಹವಾಯಿ ಸೊಳ್ಳೆ ಕೇಸು ವಿಜ್ಞಾನಿಗಳ ಪಾಲಿಗೆ ಗೋಜಲಾಗಿ ಪರಿಣಮಿಸಿದ್ದು ಅವರೀಗ ಈ ಸವಾಲನ್ನು ಮೆಟ್ಟಿ ನಿಲ್ಲಲು ಬಳಸಿದ್ದು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತಹುದೊಂದು ಉಪಾಯ.

ಇನ್ ಕಂಪಾಟಿಬಲ್ ಇಸೆಕ್ಟ್ ಟೆಕ್ನಿಕ್ ಯಾನೆ ಅಸಮಂಜಸ ಕೀಟ ತಂತ್ರ ಹವಾಯಿ ದ್ವೀಪಗಳಲ್ಲಿ ಸೊಳ್ಳೆಗಳ ಕಾಟವನ್ನು ತಡೆಯಲು ವಿಜ್ಞಾನಿಗಳು ಬಳಸಿದ ತಂತ್ರ. ಇದರನ್ವಯ ಲ್ಯಾಬ್​ಗಳಲ್ಲಿ ಗಂಡು ಸೊಳ್ಳೆಗಳನ್ನು ಅಭಿವೃದ್ಧಿಪಡಿಸಿ ನಂತರ ಅವುಗಳನ್ನು ಸೊಳ್ಳೆ ನಿಯಂತ್ರಿಸಬೇಕಾದ ಪ್ರದೇಶಗಳಲ್ಲಿ ಡ್ರೋನ್ ಮುಖಾಂತರ ಮೇಲಿನಿಂದ ಎಸೆಯಲಾಗುತ್ತಿದೆ. ಅಸಲಿಗೆ ಹೀಗೆ ಅಭಿವೃದ್ಧಿಪಡಿಸಿದ ಗಂಡು ಸೊಳ್ಳೆಗಳು ವೋಲ್ಬಚಿಯಾ ಎಂಬ ಬ್ಯಾಕ್ಟೀರಿಯಾದಿಂದ ಸೋಂಕಿತವಾಗಿರುತ್ತವೆ. ಈ ಸೊಳ್ಳೆಗಳ ಜೊತೆಗೆ ಹೆಣ್ಣು ಸೊಳ್ಳೆಗಳ ಮಿಲನವಾದಾಗ ಹೆಣ್ಣು ಸೊಳ್ಳೆಗಳ ದೇಹದಲ್ಲಿ ಆ ಬ್ಯಾಕ್ಟೀರಿಯಾ ಪ್ರವೇಶಿಸಿ ಮೊಟ್ಟೆಗಳ ತಯಾರಿಕೆಯ ಕ್ಷಮತೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಅವು ತಮ್ಮ ಸಂತಾನೋತ್ಪತ್ತಿಯ ಶಕ್ತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತವೆ. ಹೀಗೆ ಸೋಂಕಿತ ಗಂಡು ಸೊಳ್ಳೆಗಳ ಜೊತೆಗೆ ಹೆಣ್ಣುಗಳ ಮಿಲನ ಹೆಚ್ಚಿದಂತೆ ಹೆಣ್ಣು ಸೊಳ್ಳೆಗಳಿಂದ ಹೊಸ ಸೊಳ್ಳೆಗಳನ್ನು ಉತ್ಪಾದಿಸುವ ಕ್ಷಮತೆಯನ್ನು ಕಿತ್ತುಕೊಂಡು ಅವುಗಳ ಮೂಲವನ್ನೇ ಚಿವುಟಲಾಗುತ್ತದೆ. ಈ ರೀತಿಯಲ್ಲಿ ಪೀಳಿಗೆಯಿಂದ ಪೀಳಿಗೆಗೆ ಹೆಣ್ಣು ಸೊಳ್ಳೆಗಳ ಸಂಖ್ಯೆ ಕಡಿಮೆಯಾಗುತ್ತ ಹೋಗಿ ಕ್ರಮೇಣ ನಿಯಂತ್ರಣಕ್ಕೆ ಬರುತ್ತದೆ.

ಸೊಳ್ಳೆಗಳ ಹಾವಳಿ ಕೇವಲ ಹವಾಯಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಇದು ಇದೀಗ ಜಾಗತಿಕ ಕಾಟ. ಸೊಳ್ಳೆಗಳಲ್ಲಿ 3500ಕ್ಕೂ ಅಧಿಕ ಜಾತಿಗಳಿದ್ದು ಅವುಗಳಲ್ಲಿ ಕೆಲವಷ್ಟೇ ರೋಗಗಳನ್ನು ಹರಡುತ್ತವೆ. ಹೆಣ್ಣು ಸೊಳ್ಳೆಯು ಸಂತಾನೋತ್ಪತ್ತಿಗಾಗಿ ಮೊಟ್ಟೆಗಳನ್ನು ತಯಾರಿಸಲು ಅಗತ್ಯವಾದ ಪೊ›ಟೀನ್ ಮತ್ತು ಪೋಷಕಾಂಶಗಳನ್ನು ಪಡೆಯಲು ಮಾನವನನ್ನೂ ಸೇರಿದಂತೆ ಹಲವು ಪ್ರಾಣಿಪಕ್ಷಿಗಳನ್ನು ಕಚ್ಚುತ್ತವೆ. ಮಾನವನನ್ನು ಕಚ್ಚಿ ಮಲೇರಿಯಾದಂತಹ ರೋಗವನ್ನು ಹರಡುವುದಕ್ಕೆ ಅನಫಲಿಸ್ ಜಾತಿಯ ಸೊಳ್ಳೆಗಳು ಕುಖ್ಯಾತಿ ಗಳಿಸಿದರೆ ಹಕ್ಕಿಗಳಲ್ಲಿ ರೋಗಗಳನ್ನು ಹರಡುವಲ್ಲಿ ಕ್ಯೂಲೆಕ್ಸ್, ಎಡೆಸ್, ಕ್ಯೂಲಿಸೆಟಾ ಜೆನೆರಾದಂತಹ ಸೊಳ್ಳೆಗಳು ಹೆಸರುವಾಸಿಯಾಗಿವೆ. ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಸೊಳ್ಳೆಗಳ ಸಂಖ್ಯೆಯೂ ಎಲ್ಲೆಡೆ ಹೆಚ್ಚಿದಂತೆ ಅವುಗಳ ನಿಯಂತ್ರಣ ವಿಜ್ಞಾನಿಗಳಿಗೆ ತಲೆಬಿಸಿ ಮಾಡುತ್ತಿದೆ. ಜೊತೆಗೆ ಅವು ಮಳೆಯಲ್ಲಿ ನಿಂತ ನೀರಿನಲ್ಲಿ ಮೊಟ್ಟೆಯಿಡುತ್ತ ಬೇಸಿಗೆಯಲ್ಲಿ ವೇಗವಾಗಿ ತಮ್ಮ ಸಂಖ್ಯೆಯನ್ನು ಏರಿಸಿಕೊಳ್ಳುತ್ತ ಆಲ್ ಸೀಸನ್ ಪ್ರಾಬ್ಲಮ್ ಆಗಿ ಪರಿಣಮಿಸಿವೆ.

ಅಂಕಿಅಂಶಗಳು ಹೇಳುವಂತೆ ಜಾಗತಿಕವಾಗಿ ವರ್ಷಕ್ಕೆ ಸರಾಸರಿ ಹತ್ತು ಲಕ್ಷ ಜನರು ಸೊಳ್ಳೆ ಕಡಿತದಿಂದ ಹರಡುವ ಕಾಯಿಲೆಗಳಿಗೆ ತುತ್ತಾಗಿ ಜೀವ ತೆರುತ್ತಿದ್ದಾರೆ. ಅದರಲ್ಲಿ ಮಲೇರಿಯಾ ನಲವತ್ತು ಪ್ರತಿಶತ ಸಾವುಗಳಿಗೆ ಕಾರಣವಾಗಿದ್ದರೆ ನಂತರದ ಸ್ಥಾನವನ್ನು ಡೆಂಗ್ಯೂ ಪಡೆದುಕೊಂಡಿದೆ. ಚಿಕೂನ್​ಗುನ್ಯ, ಝೈಕಾ, ಹಳದಿ ಜ್ವರಗಳು ಸಹ ಇವುಗಳಿಗೆ ತೀವ್ರ ಪೈಪೋಟಿ ನೀಡುತ್ತಿವೆ. ಮಜವೆಂದರೆ ಇಷ್ಟೆಲ್ಲ ಭಾನಗಡಿ ಮಾಡುವ ಸೊಳ್ಳೆಗಳ 3500 ಜಾತಿಗಳಲ್ಲಿ ಮಾನವನಿಗೆ ಕಚ್ಚುವವು ಶೇಕಡಾ ಒಂಬತ್ತು ಜಾತಿಯವುಗಳು ಮಾತ್ರ. ರಾಸಾಯನಿಕಗಳನ್ನು ಸಿಂಪಡಿಸಿ ಸೊಳ್ಳೆಗಳನ್ನು ಕೊಲ್ಲುವ ಹಳೇ ಪದ್ಧತಿಯಲ್ಲಿ ಸೊಳ್ಳೆಗಳ ಜೊತೆಗೆ ಅದು ಇತರ ಸೂಕ್ಷ್ಮ ಜೀವಿಗಳಿಗೂ ಹಾನಿ ಮಾಡುವುದರಿಂದ ಮತ್ತದು ಸಣ್ಣ ವ್ಯಾಪ್ತಿಯ ಪ್ರದೇಶಕ್ಕಷ್ಟೇ ಸೂಕ್ತವಾಗಿರುವ ಕಾರಣಕ್ಕೆ ಅಸಮಂಜಸ ಕೀಟ ತಂತ್ರವೂ ಸೇರಿದಂತೆ ಬದಲಿ ಉಪಾಯಗಳನ್ನು ಹುಡುಕುವತ್ತ ತಮ್ಮ ಚಿತ್ತವನ್ನು ಹರಿಸುತ್ತಿದ್ದಾರೆ ವಿಜ್ಞಾನಿಗಳು.

ಗಾಂಬೂಸಿಯಾದಂತಹ ಸೊಳ್ಳೆಗಳ ಮೊಟ್ಟೆಗಳನ್ನು ತಿನ್ನುವ ಮೀನುಗಳನ್ನು ಕೃಷಿ ಪ್ರದೇಶದಲ್ಲಿ ನೀರು ನಿಲ್ಲುವ ಹೊಂಡ ಮತ್ತು ಕೆರೆಗಳಲ್ಲಿ ಬೆಳೆಸುವುದು ಅಂತಹ ಪ್ರಯತ್ನಗಳಲ್ಲಿ ಒಂದು. ರಾಸಾಯನಿಕಗಳನ್ನು ಬಳಸುವ ಮೊದಲೇ ಚಾಲ್ತಿಯಲ್ಲಿದ್ದ ಈ ತಂತ್ರವು ಬಹಳ ಉಪಯುಕ್ತವೆಂಬುದಂತೂ ಖಂಡಿತ ಹೌದು. ತಾನಿರುವ ಹೊಂಡದಲ್ಲಿ ಸೊಳ್ಳೆಗಳು ಇಡುವ ಮೊಟ್ಟೆಯನ್ನು ತಿಂದು ತೇಗಿ ಅವುಗಳ ಸಂತಾನವನ್ನು ನಿರ್ನಾಮ ಮಾಡುವ ಈ ಮೀನುಗಳು ಅವುಗಳ ಜೊತೆಗೆ ಅಲ್ಲಿರುವ ಸಣ್ಣ ಮೀನುಗಳನ್ನು, ಕಪ್ಪೆಗಳ ಗೊದಮೊಟ್ಟೆಗಳನ್ನೂ ತಿಂದು ಖಾಲಿ ಮಾಡುತ್ತವೆಯೆಂಬುದು ಗಾಂಬೂಸಿಯಾ ಮೇಲಿರುವ ಅಪವಾದ.

ಸೊಳ್ಳೆಗಳನ್ನು ಕೊಲ್ಲುವ ಈ ಎಲ್ಲ ಸಾಂಪ್ರದಾಯಿಕ ಪದ್ಧತಿಗಳ ನಡುವೆ ಇದೀಗ ನೂತನ ತಂತ್ರಜ್ಞಾನವೊಂದು ಎಂಟ್ರಿ ಕೊಟ್ಟಿದೆ. ವಿಜ್ಞಾನಿಗಳು ಇದೀಗ ಸೊಳ್ಳೆಗಳ ವಂಶವಾಹಿಯನ್ನು ಪ್ರಯೋಗಶಾಲೆಯಲ್ಲಿ ಮಾರ್ಪಡಿಸಿ ಅಂತಹವುಗಳ ಮೊಟ್ಟೆಯನ್ನು ಇತರ ಸೊಳ್ಳೆಗಳು ಮೊಟ್ಟೆಯಿಡುವ ಸ್ಥಳಗಳಲ್ಲಿ ಬಿಡುತ್ತಾರೆ. ಅಲ್ಲಿಂದ ಹೊರಬರುವ ಸೊಳ್ಳೆಗಳ ಜೊತೆಗೆ ಸ್ಥಳೀಯ ಸೊಳ್ಳೆಗಳ ಮಿಲನವಾದ ನಂತರ ಹುಟ್ಟುವ ಹೆಣ್ಣು ಸೊಳ್ಳೆಗಳು ಪ್ರೌಢಾವಸ್ಥೆಗೆ ತಲುಪುವ ಮೊದಲೇ ಸತ್ತು ಹೋಗುತ್ತವೆ. ಈ ವಂಶವಾಹಿಯನ್ನು ಮಾರ್ಪಡಿಸಿರುವ ಸೊಳ್ಳೆಗಳ ಪ್ರಯೋಗವನ್ನು ಈಗಾಗಲೇ ಬ್ರೆಝಿಲ್ ಮತ್ತು ಅಮೆರಿಕದಂತಹ ಹಲವು ದೇಶಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದ್ದು ಶೀಘ್ರವೇ ಮತ್ತಷ್ಟು ದೇಶಗಳು ಈ ತಂತ್ರಜ್ಞಾನವನ್ನು ಅಪ್ಪಿಕೊಳ್ಳಲಿವೆ. ಸಂಶೋಧಕರು ಗಮನಿಸಿದಂತೆ ಹಲವು ಜಾತಿಯ ಸೊಳ್ಳೆಗಳು ಈಗಾಗಲೇ ನಾವು ಹೆಚ್ಚು ಬಳಸುವ ಡಿಡಿಟಿಯಂತಹ ರಾಸಾಯನಿಕಗಳಿಗೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿವೆ. ಹೀಗಿರುವಾಗ ನಾವೂ ನಮ್ಮ ಆಯುಧಗಳನ್ನು ಬದಲಿಸಬೇಕಾಗಿರುವುದು ಅನಿವಾರ್ಯವಲ್ಲವೇ?

(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net