

ಸತತವಾಗಿ 30 ದಿನಗಳ ಕಾಲ ಬಂಧನದಲ್ಲಿರುವ ಅಥವಾ ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆಗೊಳಗಾಗುವ ಪ್ರಧಾನಿ, ಮುಖ್ಯಮಂತ್ರಿ, ಕೇಂದ್ರ, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಸಚಿವರನ್ನು ಅಧಿಕಾರದಿಂದ ಪದಚ್ಯುತಗೊಳಿಸಲು ಅವಕಾಶ ಕಲ್ಪಿಸುವ ಮೂರು ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಲೋಕಸಭೆಯಲ್ಲಿ ಬುಧವಾರ ಮಂಡಿಸಲಾಯಿತು. ಪ್ರತಿಪಕ್ಷಗಳ ತೀವ್ರ ವಿರೋಧದ ನಂತರ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಒಪ್ಪಿಸಲಾಗಿದೆ. ರಾಜಕೀಯವಾಗಿ ಭಾರಿ ಸಂಚಲನ ಮೂಡಿಸಿರುವ ಈ ಮಸೂದೆಯ ಮಹತ್ವವೇನು, ಇದನ್ನು ತರಲು ಹೊರಟಿರುವ ಸರ್ಕಾರದ ಉದ್ದೇಶವೇನು ಈ ಕುರಿತಾದ ಮಾಹಿತಿ ಇಲ್ಲಿದೆ.
ರಾಜಕೀಯ ಶುದ್ಧೀಕರಣದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಕಳಂಕಿತರು ಅಧಿಕಾರಕ್ಕೆ ಅಂಟಿಕೊಂಡಿರಬಾರದು ಎಂಬ ಉದ್ದೇಶದಿಂದ ಮೂರು ಹೊಸ ಮಸೂದೆಗಳನ್ನು ರೂಪಿಸಿದ್ದು, ರಾಜಕೀಯ ಪಕ್ಷಗಳಲ್ಲಿ ಸಂಚಲನವೇ ಸೃಷ್ಟಿಯಾಗಿದೆ. ಹಾಗಾಗಿ, ಬುಧವಾರ ಲೋಕಸಭೆಯಲ್ಲಿ ಭಾರಿ ಗಲಾಟೆ ನಡೆದ ಬಳಿಕ ಮೂರೂ ಮಸೂದೆಗಳನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಒಪ್ಪಿಸಲಾಗಿದೆ.
ಗಂಭೀರ ಸ್ವರೂಪದ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ ಪ್ರಧಾನಿ, ಮುಖ್ಯಮಂತ್ರಿ, ಕೇಂದ್ರ ಅಥವಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಚಿವರನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸಿದಾಗ ಅಂಥವರನ್ನು ಹುದ್ದೆಗಳಿಂದ ಪದಚ್ಯುತಗೊಳಿಸುವ ಪ್ರಕ್ರಿಯೆಗೆ ಕಾನೂನು ಚೌಕಟ್ಟು ವಿಧಿಸಲು ಈ ಮಸೂದೆಗಳನ್ನು ರೂಪಿಸಲಾಗಿದೆ ಎಂದು ಕಾರಣಗಳು ಮತ್ತು ಉದ್ದೇಶದಲ್ಲಿ ತಿಳಿಸಲಾಗಿದೆ. ಮಸೂದೆಯ ಪ್ರಕಾರ, 30 ದಿನಗಳ ಕಾಲ ನಿರಂತರ ಬಂಧನದಲ್ಲಿ ಇದ್ದವರನ್ನು 31ನೇ ದಿನ ಪದಚ್ಯುತಗೊಳಿಸಲು ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಬಂಧನದಿಂದ ಬಿಡುಗಡೆ ಆದವರನ್ನು ಪ್ರಧಾನಮಂತ್ರಿ, ಮುಖ್ಯಮಂತ್ರಿ ಅಥವಾ ಸಚಿವರನ್ನಾಗಿ ನೇಮಿಸಲು ಯಾವುದೇ ನಿರ್ಬಂಧ ಇರುವುದಿಲ್ಲ.
ಸೆಕ್ಷನ್ 5ಎ ಸೇರ್ಪಡೆ: ಸಂವಿಧಾನದ 75ನೇ ವಿಧಿಗೆ ಸೆಕ್ಷನ್ 5ಎ ಅನ್ನು ಸೇರ್ಪಡೆ ಮಾಡಲಾಗುತ್ತಿದೆ. ಅದರ ಪ್ರಕಾರ, ಹಾಲಿ ಜಾರಿಯಲ್ಲಿರುವ ಯಾವುದೇ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾದ ಅಪರಾಧಕ್ಕಾಗಿ ಸತತ 30 ದಿನಗಳಿಂದ ಬಂಧನದಲ್ಲಿರುವ ಅಥವಾ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಒಳಗಾದ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಪ್ರಧಾನಿಯು 31ನೇ ದಿನದಂದು ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಬೇಕು. ಪ್ರಧಾನಿ ಶಿಫಾರಸು ಮಾಡದಿದ್ದರೂ 31ನೇ ದಿನದಂದು ಅಧಿಕಾರ ಕಳೆದುಕೊಳ್ಳುತ್ತಾರೆ. ಅಂಥದ್ದೇ ಪ್ರಕರಣಗಳಲ್ಲಿ ಭಾಗಿಯಾದ ಆರೋಪದ ಮೇಲೆ ಪ್ರಧಾನಿಯು 30 ದಿನಗಳಿಂದ ಬಂಧನದಲ್ಲಿದ್ದರೆ 31ನೇ ದಿನದಂದು ಅವರು ರಾಜೀನಾಮೆ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಅವರು ರಾಜೀನಾಮೆ ನೀಡದಿದ್ದಲ್ಲಿ 31ನೇ ದಿನದಂದು ಸ್ವಯಂಚಾಲಿತವಾಗಿ ಪದಚ್ಯುತರಾಗುತ್ತಾರೆ ಎಂಬ ಅಂಶ ಮಸೂದೆಯಲ್ಲಿದೆ. ಈ ಮಾದರಿ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಚಿವರಿಗೂ ಅನ್ವಯವಾಗುತ್ತದೆ. ರಾಜ್ಯಗಳಲ್ಲಿ ರಾಜ್ಯಪಾಲರು ಪದಚ್ಯುತಗೊಳಿಸುವ ಅಧಿಕಾರವನ್ನು ಹೊಂದಿರುತ್ತಾರೆ. ದೆಹಲಿ ಮತ್ತು ಇತರ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಯವರು ಮತ್ತು ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಸಕ್ಷಮ ಅಧಿಕಾರಿಗಳಾಗಿರುತ್ತಾರೆ ಎಂಬ ಉಲ್ಲೇಖ ಮಸೂದೆಯಲ್ಲಿದೆ.
ಈ ಹಿಂದೆ ದೆಹಲಿ ಮುಖ್ಯಮಂತ್ರಿಯಾಗಿದ್ದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅಬಕಾರಿ ನೀತಿ ಹಗಣದಲ್ಲಿ ಜೈಲಿನಲ್ಲಿದ್ದರೂ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ. ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ಅವರನ್ನು 2024ರ ಮಾರ್ಚ್ 21ರಂದು ಬಂಧಿಸಿತ್ತು. ಜಾಮೀನು ಸಿಕ್ಕ ಬಳಿಕ ಸೆಪ್ಟೆಂಬರ್ 13ರಂದು ಜೈಲಿನಿಂದ ಬಿಡುಗಡೆಯಾದರು. ಜಾಮೀನು ಸಿಕ್ಕ ಬಳಿಕ ಸೆ.17ರಂದು ರಾಜೀನಾಮೆ ನೀಡಿ ಆತಿಶಿ ಅವರನ್ನು ಸಿಎಂ ಆಗಿಸಿದ್ದರು. ಆದರೆ, ಸಿಎಂ ಹುದ್ದೆಯಲ್ಲಿದ್ದು ಜೈಲಿಗೆ ಸೇರಿದ ಮೊದಲಿಗ ಕೇಜ್ರಿವಾಲ್. ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು. ಕೇಜ್ರವಾಲ್ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಜೈಲಿನಲ್ಲೂ ‘ಸಿಎಂ’ ಆಗಿ ಮುಂದುವರಿದರು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಇದೇ ಅವರಿಗೆ ವ್ಯತಿರಿಕ್ತವಾಗಿ, ಆಮ್ ಆದ್ಮಿ ಪಕ್ಷ ದಾರುಣ ಸೋಲು ಅನುಭವಿಸಿತು.
ತಮಿಳುನಾಡಿನ ಅಬಕಾರಿ ಸಚಿವ ವಿ.ಸೆಂಥಿಲ್ ಬಾಲಾಜಿ ಅವರನ್ನು ಭ್ರಷ್ಟಾಚಾರ ಮತ್ತು ಆರ್ಥಿಕ ಅಪರಾಧ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿತ್ತು. ನ್ಯಾಯಾಂಗ ಬಂಧನದಲ್ಲಿದ್ದರೂ ಅವರು ಹುದ್ದೆಯಲ್ಲಿ ಮುಂದುವರಿದಿದ್ದರು. 2023ರ ಜೂನ್ನಲ್ಲಿ ಬಂಧನಕ್ಕೆ ಒಳಗಾಗಿದ್ದರು. ಆದರೆ, 2024ರ ಫೆಬ್ರವರಿ 13ರವರೆಗೂ ಸಚಿವ ಸ್ಥಾನದಲ್ಲಿ ಮುಂದುವರಿದಿದ್ದರು.
ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಜಮೀನು ಹಗರಣ ಪ್ರಕರಣದಲ್ಲಿ 2024ರಲ್ಲಿ ಐದು ತಿಂಗಳು ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಯಾದರು.
ಈ ಮಸೂದೆಗಳು ಪ್ರಜಾಪ್ರಭುತ್ವ ಮತ್ತು ಸುಶಾಸನವನ್ನು ಬಲಿಷ್ಠಗೊಳಿಸುತ್ತವೆ. ಈವರೆಗೆ ಕಾನೂನಿನ ಪ್ರಕಾರ ದೋಷಿ ಎಂದು ಸಾಬೀತಾದ ಜನಪ್ರತಿನಿಧಿಗಳನ್ನು ಮಾತ್ರ ಪದಚ್ಯುತಗೊಳಿಸಬಹುದಿತ್ತು. ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತು ಗಂಭಿರ ಅಪರಾಧದ ಆರೋಪ ಹೊತ್ತಿರುವ ನಾಯಕರನ್ನು ಪದಚ್ಯುತಗೊಳಿಸುವ ಯಾವುದೇ ಅವಕಾಶ ಪ್ರಸಕ್ತ ಕಾನೂನಿನಲ್ಲಿ ಇಲ್ಲ.
1.ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025- ಇದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಅನ್ವಯವಾಗುತ್ತದೆ.
2.ಕೇಂದ್ರಾಡಳಿತ ಸರ್ಕಾರ (ತಿದ್ದುಪಡಿ) ಮಸೂದೆ 2025 - ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯ.
3.ಜಮ್ಮು ಮತ್ತು ಕಾಶ್ಮೀರ ಪುನರ್ರಚನೆ (ತಿದ್ದುಪಡಿ) ಮಸೂದೆ 2025- ಜಮ್ಮು-ಕಾಶ್ಮೀರಕ್ಕೆ ಅನ್ವಯ.
ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಷಾ ಸಂವಿಧಾನ (130ನೇ ತಿದ್ದುಪಡಿ) ಮಸೂದೆ, 2025, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದಿಪಡಿ) ಮಸೂದೆ ಮತ್ತು ಜಮ್ಮು ಮತ್ತು ಕಾಶ್ಮೀರ ಮರು ಸಂಘಟನೆ (ತಿದ್ದುಪಡಿ) ಮಸೂದೆಯನ್ನು ಮಂಡಿಸಿದರು. ಮಸೂದೆ ಮಂಡನೆಯಾಗುತ್ತಿದ್ದಂತೆ ವಿರೋಧ ಪಕ್ಷಗಳ ಸಂಸದರು ಪ್ರತಿಭಟನೆ ನಡೆಸಿ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಕೆಲವು ಸದಸ್ಯರು ಮಸೂದೆಯ ಪ್ರತಿಗಳನ್ನು ಹರಿದು ಕಾಗದದ ತುಣುಕುಗಳನ್ನು ಅಮಿತ್ ಷಾ ಮೇಲೆ ಎಸೆದರು.
ಮಸೂದೆ ಕುರಿತು ಮಾತನಾಡಿದ ಅಮಿತ್ ಷಾ, ‘ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಕಾನೂನಿನ ವ್ಯಾಪ್ತಿಗೆ ತರಲು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಮತ್ತೊಂದೆಡೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ತಮ್ಮನ್ನು ವ್ಯಾಪ್ತಿಯಿಂದ ಹೊರಗಿಡುವುದಕ್ಕೆ, ಜೈಲಿನಿಂದ ಸರ್ಕಾರ ನಡೆಸುವುದಕ್ಕೆ ಮತ್ತು ಅಧಿಕಾರಕ್ಕೆ ಅಂಟಿಕೊಂಡಿರುವುದಕ್ಕೆ ಈ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಸಂವಿಧಾನಕ್ಕೆ 39ನೇ ತಿದ್ದುಪಡಿ ತರುವ ಮೂಲಕ ಪ್ರಧಾನಮಂತ್ರಿಗಳನ್ನು ಕಾನೂನು ಕ್ರಮದಿಂದ ಹೊರಗಿಡುವಂತಹ ಸವಲತ್ತು ನೀಡಿದ್ದರು’ ಎಂದು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಬಂಧನಕ್ಕೂ ಮುನ್ನ ಎಲ್ಲ ಹುದ್ದೆಗಳಿಗೆ ರಾಜೀನಾಮೆ: ಲೋಕಸಭೆಯಲ್ಲಿ ಮೂರು ಮಸೂದೆಗಳ ಮೇಲಿನ ಚರ್ಚೆಯ ವೇಳೆ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಮಾತನಾಡಿ, 2010ರಲ್ಲಿ ಅಮಿತ್ ಷಾ ಗುಜರಾತ್ ಗೃಹ ಸಚಿವರಾಗಿದ್ದಾಗಿನ ಸಂದರ್ಭದಲ್ಲಿ ಬಂಧನಕ್ಕೆ ಒಳಗಾಗಿದ್ದನ್ನು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಮಿತ್ ಷಾ ‘ನನ್ನ ವಿರುದ್ಧ ಅಂದು ಸುಳ್ಳು ಆರೋಪಗಳನ್ನು ಹೊರಿಸಲಾಗಿತ್ತು. 2010ರಲ್ಲಿ ಬಂಧನಕ್ಕೆ ಒಳಗಾಗುವ ಮೊದಲೇ ನಾನು ನೈತಿಕ ಜವಾಬ್ದಾರಿ ಹೊತ್ತು ಎಲ್ಲ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದೆ. ನ್ಯಾಯಾಲಯಗಳಿಂದ ನಾನು ಖುಲಾಸೆಗೊಳ್ಳುವವರೆಗೂ ಯಾವುದೇ ಸಾಂವಿಧಾನಿಕ ಹುದ್ದೆಯನ್ನೂ ಪಡೆದಿರಲಿಲ್ಲ. ನನಗೆ ನೀವು ನೈತಿಕತೆಯ ಪಾಠ ಮಾಡಬೇಕಿಲ್ಲ’ ಎಂದು ತಿರುಗೇಟು ನೀಡಿದರು.
ಲೋಕಸಭೆಯಲ್ಲಿ ಮಂಡಿಸಿದ ಮಸೂದೆಗಳಿಗೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿ, ‘ಹೊಸ ಮಸೂದೆಗಳ ಮೂಲಕ ರಾಜನು ಯಾರನ್ನಾ ದರೂ ತನ್ನ ಇಚ್ಛೆಯಂತೆ ತೆಗೆದುಹಾಕಬಹುದಾದ ಮಧ್ಯಯುಗದ ಕಾಲಕ್ಕೆ ನಾವು ಹಿಂದಿರುಗುತ್ತಿದ್ದೇವೆ. ಚುನಾಯಿತ ವ್ಯಕ್ತಿ ಎಂದರೇನು ಎಂಬ ಪರಿಕಲ್ಪನೆ ಇಲ್ಲ, ಅವರಿಗೆ ನಿಮ್ಮ ಮುಖ ಇಷ್ಟವಿಲ್ಲ, ಹಾಗಾಗಿ ಜಾರಿ ನಿರ್ದೇಶನಾಲಯದ ಮೂಲಕ ಪ್ರಕರಣ ದಾಖಲಿಸಲು ಹೇಳುತ್ತಾರೆ ಮತ್ತು ನಂತರ ಪ್ರಜಾಸತ್ತಾತ್ಮಕವಾಗಿ ಚುನಾಯಿತನಾದ ವ್ಯಕ್ತಿಯನ್ನು 30 ದಿನದಲ್ಲಿ ಅಧಿಕಾರದಿಂದ ಕೆಳಗಿಳಿಸಲಾಗುತ್ತದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.