

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ತಿಂಗಳ 5ರಿಂದ 7ರವರೆಗೆ ಕಲಬುರಗಿಯಲ್ಲಿ ನಡೆಯಲಿದೆ. ಕಾವ್ಯ, ನಾಟಕ, ಕತೆ, ಕಾದಂಬರಿ, ಪ್ರಬಂಧ, ಜೀವನಚಿತ್ರ, ಆತ್ಮಚರಿತ್ರೆ, ವಿಮರ್ಶೆ, ಮಕ್ಕಳ ಸಾಹಿತ್ಯ ಹೀಗೆ ಎಲ್ಲ ಸಾಹಿತ್ಯಪ್ರಕಾರಗಳಲ್ಲೂ ಕೃಷಿ ಮಾಡಿರುವ ಎಚ್.ಎಸ್. ವೆಂಕಟೇಶಮೂರ್ತಿ ಅವರು ಈ ಸಮ್ಮೇಳನದ ಸರ್ವಾಧ್ಯಕ್ಷರು. ಅವರೊಂದಿಗಿನ ಒಡನಾಟದ ಕ್ಷಣಗಳನ್ನು ನಾಡಿನ ನಾನಾ ಕ್ಷೇತ್ರಗಳ ಸಾಧಕರು ಇಲ್ಲಿ ಮೆಲುಕು ಹಾಕಿದ್ದಾರೆ.
2006ರ ಜೂನ್ ತಿಂಗಳೂಂತ ನೆನಪು. ನಾನು ಬೆಂಗಳೂರಿನ ನನ್ನ ತಮ್ಮ ಶಂಕರನ ಮನೆಗೆ ಬಂದಿದ್ದೆ. ಸಂಜೆ ವೆಂಕಟೇಶಮೂರ್ತಿ ಸಿಕ್ಕಿದ. ಯಾಕೋ ತುಂಬ ಸುಸ್ತಾದವನಂತೆ ನಿಸ್ತೇಜನಾಗಿ ಕಂಡ. ರಸ್ತೆ ಬದಿಯ ಪೆಟ್ಟಿಗೆ ಅಂಗಡಿಯ ಬೆಂಚಿನ ಮೇಲೆ ಕೂತು, ಅರ್ಧರ್ಧ ಟೀ ಕುಡಿದೆವು.
ಇದಕ್ಕೆ ಕೇವಲ ಒಂದೆರಡು ತಿಂಗಳ ಹಿಂದಷ್ಟೇ ಮೂರ್ತಿ, ರಾಜಲಕ್ಷ್ಮಿ, ನರಹಳ್ಳಿ ಮತ್ತು ರಜನಿ ಸೇರಿ ಚಿಂತಾಮಣಿಗೆ ಬಂದಿದ್ದರು. ಇಡೀ ದಿನ ನಮ್ಮೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಹೋಗಿಬಂದೆವು. ರಾಜಲಕ್ಷ್ಮಿ ಅತ್ಯಂತ ಉತ್ಸಾಹದಿಂದಿದ್ದರು. ಯಾವುದೇ ಗಂಭೀರ ಖಾಯಿಲೆಯ ಸಣ್ಣ ಸುಳಿವೂ ಅವರಲ್ಲಿ ನಮಗೆ ಕಂಡಿರಲಿಲ್ಲ.
ಅವರಿಗೆ ಇಂಥ ದಾರುಣ ಅಕಾಲ ಅಂತ್ಯವೆ? ಗೆಳೆಯನಿಗೆ ಏನೂ ಹೇಳಲು ತೋಚದೆ, ಮೌನವಾಗಿ ಅವನ ಬೆನ್ನು ಸವರಿದೆ. ಅಲ್ಲಿಂದಾಚೆಗೆ ಮೂರ್ತಿ ಸದಾ ತನ್ನ ಪತ್ನಿಯೊಂದಿಗಿದ್ದು, ಪ್ರೀತಿಯಿಂದ ಆಕೆಯ ಆರೈಕೆ, ಶುಶ್ರೂಷೆ ಮಾಡಿದ. ಏನು ಮಾಡಿದರೇನು? ಕ್ರಮೇಣ ಖಾಯಿಲೆ ಉಲ್ಬಣಿಸುತ್ತ ಹೋಯಿತು. ಆಕೆ ಒಂದು ರೀತಿಯ ಭ್ರಮಾಧೀನ ಸ್ಥಿತಿ ತಲುಪಿದರು.
(ಮೂರ್ತಿ ಈ ಬಗ್ಗೆ ತನ್ನ ಅನಾತ್ಮ ಕಥನದಲ್ಲಿ ದಟ್ಟವಾಗಿ ಬರೆದಿದ್ದಾನೆ). ಕೊನೆಗೆ 2007ರ ಜನವರಿ 6ರಂದು ರಾಜಲಕ್ಷ್ಮಿನಮ್ಮನ್ನಗಲಿ ಹೋಗಿಬಿಟ್ಟರು. ಈ ಆಘಾತದಿಂದ ಚೇತರಿಸಿಕೊಳ್ಳಲು ಮೂರ್ತಿಗೆ ವರ್ಷಗಳೇ ಬೇಕಾಯಿತು. ಆ ಮೂಕ ಸಂಕಟದಿಂದ, ದುಸ್ಸಹವಾದ ಒಬ್ಬಂಟಿತನದಿಂದ ಅವನನ್ನು ಪಾರು ಮಾಡಿದ್ದು ಅವನ ಕಾವ್ಯವೆಂದೇ ಹೇಳಬೇಕು. ‘ಉತ್ತರಾಯಣ’ ಎಂಬ ಕವನಗುಚ್ಛದಲ್ಲಿ ತನ್ನ ಅಂತರಾಳದ ನೋವು, ಯಾತನೆಗಳನ್ನು ಮೂರ್ತಿ ಮನ ಬಿಚ್ಚಿ ತೋಡಿಕೊಂಡಿದ್ದಾನೆ. ಓದುಗರ ಎದೆ ಹಿಂಡುವಂತಿರುವ ‘ಉತ್ತರಾಯಣ’ದ ವೈಶಿಷ್ಟ್ಯ- ಅಲ್ಲಿ ಶೋಕವು ನಿಜವಾದ ಅರ್ಥದಲ್ಲಿ ಶ್ಲೋಕವಾಗಿದೆ, ಅಪೂರ್ವ ಕಲಾಕೃತಿಯಾಗಿ ರೂಪಾಂತರಗೊಂಡಿದೆ.
| ಬಿ.ಆರ್. ಲಕ್ಷ್ಮಣರಾವ್ ಹಿರಿಯ ಕವಿ