ಪಾಕಿಸ್ತಾನ ಸಹಾಯಕ ಟರ್ಕಿ ಮೇಲೆ ಬಹಿಷ್ಕಾರದ ಸ್ಟ್ರೈಕ್

3-6826293f81a21
Published on

ಭಾರತ ವಿರುದ್ಧದ ದಾಳಿಯಲ್ಲಿ ಪಾಕಿಸ್ತಾನ ಬಳಸಿರುವ ಡ್ರೋನ್​ಗಳನ್ನು ಟರ್ಕಿ ಪೂರೈಸಿದೆ. ಅಲ್ಲದೆ, ಪಾಕಿಸ್ತಾನವನ್ನು ಅಜರ್​ಬೈಜಾನ್ ಬಹಿರಂಗವಾಗಿ ಬೆಂಬಲಿಸಿದೆ. ಹಾಗಾಗಿ, ಈ ಎರಡೂ ದೇಶಗಳಿಂದ ಆಮದಾಗುವ ಸರಕುಗಳಿಗೆ ಕೇಂದ್ರ ಸರ್ಕಾರ ಬಹಿಷ್ಕಾರ ಹೇರಬೇಕು ಎಂದು ವರ್ತಕರ ವಲಯ ಬಲವಾಗಿ ಒತ್ತಾಯಿಸಿದೆ.

ಅಭಿಯಾನ ಆರಂಭ

ಟರ್ಕಿ ಮತ್ತು ಅಜರ್​ಬೈಜಾನ್ ದೇಶಗಳ ಪ್ರವಾಸೋದ್ಯಮಕ್ಕೂ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದೆ. ಮತ್ತೊಂದೆಡೆ, ಟರ್ಕಿಯಿಂದ ಭಾರತಕ್ಕೆ ಪ್ರಮುಖವಾಗಿ ಪೂರೈಕೆಯಾಗುವ ಸೇಬು ಮತ್ತು ಅಮೃತಶಿಲೆಯನ್ನು (ಮಾರ್ಬಲ್) ವರ್ತಕರ ವಲಯವು ಬಹಿಷ್ಕರಿಸಿದೆ.

ಯಾಕೆ ವಿರೋಧ?

ಜಮ್ಮು-ಕಾಶ್ಮೀರದ ಪಹಲ್ಗಾಮ್ಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮೂಲಕ ಪಾಕಿಸ್ತಾನ ಮತ್ತು ಪಿಒಕೆ ಪ್ರದೇಶದಲ್ಲಿನ ಉಗ್ರರ ಒಂಬತ್ತು ಅಡುಗುತಾಣಗಳನ್ನು ಧ್ವಂಸಗೊಳಿಸಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ತೋರಿದ ಪ್ರತಿರೋಧದಲ್ಲಿ ಅದು ಟರ್ಕಿ ನಿರ್ವಿುಸಿದ ಡ್ರೋನ್​ಗಳನ್ನು ಬಳಸಿತ್ತು. ಭಾರತೀಯ ಸೇನೆಯು ಈ ಡ್ರೋನ್​ಗಳನ್ನು ಹೊಡೆದುರುಳಿಸಿತು. ಟರ್ಕಿ ಪಾಕಿಸ್ತಾನಕ್ಕೆ 350 ಡ್ರೋನ್​ಗಳನ್ನು ಪೂರೈಸಿದೆ.

ಬುಕಿಂಗ್ ರದ್ದು

ಟರ್ಕಿ ಮತ್ತು ಅಜರ್​ಬೈಜಾನ್ ದೇಶಗಳಿಗೆ ಪ್ರವಾಸ ತೆರಳುವುದನ್ನು ಬಹಿಷ್ಕರಿಸಬೇಕು ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಬುಕಿಂಗ್ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಆನ್​ಲೈನ್ ಟ್ರಾವಲ್ ಕಂಪನಿಯಾದ ಮೇಕ್ ಮೈ ಟ್ರಿಪ್ ತಿಳಿಸಿದೆ. ಎರಡೂ ದೇಶಗಳ ಪ್ರವಾಸದ ಬುಕಿಂಗ್​ನಲ್ಲಿ ಶೇಕಡ 60ರಷ್ಟು ಕಡಿಮೆಯಾಗಿದೆ. ಟಿಕೆಟ್ ರದ್ದತಿಯಂತೂ ಶೇ.250ರಷ್ಟಕ್ಕೆ ಮುಟ್ಟಿದೆ ಎಂದು ಹೇಳಿದೆ. ಕಳೆದ ಒಂದು ವಾರದಿಂದ ಈ ದೇಶಗಳ ನಿಲುವಿನ ವಿರುದ್ಧ ಭಾರತದ ಪ್ರವಾಸಿಗರು ಅಸಮಾಧಾನಗೊಂಡಿದ್ದಾರೆ. ಹಾಗಾಗಿ, ಅಲ್ಲಿಗೆ ತೆರಳುವವರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಟರ್ಕಿ ಹಾಗೂ ಅಜರ್​ಬೈಜಾನ್ ಬುಕಿಂಗ್​ಗಳು ರದ್ದುಗೊಂಡಿರುವುದರಿಂದ ತಮ್ಮ ಕಂಪನಿಗೆ ಸುಮಾರು 5 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂದು ಇಜಿ ಮಾಯ್ ಟ್ರಿಪ್​ನ ಸಂಸ್ಥಾಪಕ ಪ್ರಶಾಂತ್ ಪಿಟ್ಟಿ ಹೇಳಿದ್ದಾರೆ.

ಯಾವೆಲ್ಲ ಉತ್ಪನ್ನಗಳು ಆಮದು?

ಭಾರತವು ಟರ್ಕಿಯಿಂದ ಮುಖ್ಯವಾಗಿ ಸೇಬು, ಅಮೃತಶಿಲೆ (ಮಾರ್ಬಲ್), ಚಿನ್ನ, ಸುಣ್ಣ, ಸಿಮೆಂಟ್, ಖನಿಜ ತೈಲ, ನೈಸರ್ಗಿಕ ಹರಳು, ಉಕ್ಕು ಮತ್ತು ಕಬ್ಬಿಣವನ್ನು ಆಮದು ಮಾಡಿಕೊಳ್ಳುತ್ತಿದೆ. ಟರ್ಕಿಗೆ ಭಾರತವು ವಾಹನ ಮತ್ತು ಅದರ ಬಿಡಿಭಾಗ, ಪ್ಲಾಸ್ಟಿಕ್, ರಬ್ಬರ, ಹತ್ತಿ, ಫೈಬರ್, ಔಷಧ ಮತ್ತು ಎಲೆಕ್ಟ್ರಿಕಲ್ ಉಪಕರಣಗಳನ್ನು ರಫ್ತು ಮಾಡುತ್ತಿದೆ. ಭಾರತವು ಅಜರ್​ಬೈಜಾನ್​ಗೆ ಹೊಗೆಸೊಪು್ಪ ಮತ್ತು ಅದರ ಉತ್ಪನ್ನಗಳು, ಚಹಾ, ಕಾಫಿ, ದ್ವಿದಳ ಧಾನ್ಯ, ಪ್ಲಾಸ್ಟಿಕ್, ರಬ್ಬರ, ಕಾಗದವನ್ನು ರಫ್ತು ಮಾಡುತ್ತಿದೆ. ಅಜರ್​ಬೈಜಾನ್​ನಿಂದ ಪಶು ಆಹಾರ, ರಾಸಾಯನಿಕ, ಸಾರವರ್ಧಿತ ತೈಲ, ಸುಗಂಧ ದ್ರವ್ಯವನ್ನು ಆಮದು ಮಾಡಿಕೊಳ್ಳುತ್ತಿದೆ.

ಆಮದು-ರಫ್ತು ಪ್ರಮಾಣ

ಕಳೆದ ಆರ್ಥಿಕ ವರ್ಷದ (2024-25) ಏಪ್ರಿಲ್​ನಿಂದ ಫೆಬ್ರವರಿವರೆಗೆ ಭಾರತವು ಟರ್ಕಿಗೆ 44,400 ಕೋಟಿ ರೂ. ಮೌಲ್ಯದ ಸರಕುಗಳನ್ನು ರಫ್ತು ಮಾಡಿದೆ. ದೇಶದ ಒಟ್ಟು ರಫ್ತಿನ ಪೈಕಿ ಈ ಪಾಲು ಶೇಕಡ 1.5ರಷ್ಟಿದೆ. ಇದೇ ಅವಧಿಯಲ್ಲಿ ಅಜರ್​ಬೈಜಾನ್​ಗೆ 735 ಕೋಟಿ ರೂ. ಮೌಲ್ಯದ ಸರಕುಗಳು ರಫ್ತಾಗಿವೆ. ಟರ್ಕಿಯಿಂದ ಭಾರತವು ಇದೇ ಅವಧಿಯಲ್ಲಿ 24,200 ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ದೇಶದ ಒಟ್ಟು ಆಮದಿನ ಪೈಕಿ ಈ ಪಾಲು ಶೇ.0.5ರಷ್ಟಿದೆ. ಅಜರ್​ಬೈಜಾನ್​ನಿಂದ 16.50 ಕೋಟಿ ರೂ. ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ.

ಭಾರತೀಯರ ಸಂಖ್ಯೆ

ಟರ್ಕಿಯಲ್ಲಿ 3 ಸಾವಿರಕ್ಕೂ ಹೆಚ್ಚು ಭಾರತೀಯರು ನೆಲೆಸಿದ್ದಾರೆ. ಈ ಪೈಕಿ ವಿದ್ಯಾರ್ಥಿಗಳ ಸಂಖ್ಯೆ 200 ಆಗಿದೆ. ಅಜರ್​ಬೈಜಾನ್​ನಲ್ಲಿ 1500ಕ್ಕೂ ಹೆಚ್ಚು ನೆಲೆಸಿದ್ದಾರೆ. 2023ರಲ್ಲಿ ಟರ್ಕಿಗೆ 3 ಲಕ್ಷ ಭಾರತೀಯ ಪ್ರವಾಸಿಗರು ಭೇಟಿ ನೀಡಿದ್ದರೆ, ಇದೇ ಅವಧಿಯಲ್ಲಿ ಅಜರ್​ಬೈಜಾನ್​ಗೆ ಭೇಟಿ ನೀಡಿದ ಭಾರತೀಯರ ಸಂಖ್ಯೆ 2 ಲಕ್ಷಕ್ಕೂ ಹೆಚ್ಚಿದೆ. 2024ರಲ್ಲಿ ಟರ್ಕಿಗೆ 2.50 ಲಕ್ಷಕ್ಕೂ ಹೆಚ್ಚು ಮತ್ತು ಅಜರ್​ಬೈಜಾನ್​ಗೆ 30 ಸಾವಿರ ಭಾರತೀಯರು ಭೇಟಿ ನೀಡಿದ್ದಾರೆ.

ಕೃತಘ್ನ ಟರ್ಕಿ

ಟರ್ಕಿಯು 2023ರ ಫೆಬ್ರವರಿಯಲ್ಲಿ ಭೀಕರ ಭೂಕಂಪನದಿಂದ ನಲುಗಿದಾಗ ಭಾರತ ‘ಆಪರೇಷನ್ ದೋಸ್ತ್’ ಮೂಲಕ ನೆರವಿನ ಹಸ್ತ ಚಾಚಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಹಲವು ತಂಡಗಳು ಟರ್ಕಿಗೆ ಧಾವಿಸಿದವು. ಪರಿಹಾರ ಸಾಮಗ್ರಿ, ಔಷಧ, ವೈದ್ಯಕೀಯ ಉಪಕರಣಗಳನ್ನು ಒದಗಿಸಿತು. ಗಾಯಾಳುಗಳ ಸೂಕ್ತ ಚಿಕಿತ್ಸೆ, ಆರೈಕೆ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿತು. ಆದರೆ, ಟರ್ಕಿ ಈ ಸಹಾಯವನ್ನು ಮರೆತು, ಭಾರತಕ್ಕೆ ಅಪಕಾರ ಮಾಡುತ್ತಿದೆ. ಪಾಕಿಸ್ತಾನದ ಷಡ್ಯಂತ್ರಕ್ಕೆ ಕೈಜೋಡಿಸಿದೆ.

ಭಾರತೀಯ ಪ್ರವಾಸಿಗರು ಟರ್ಕಿ ಮತ್ತು ಅಜರ್​ಬೈಜಾನ್​ನ ಆರ್ಥಿಕತೆಗೆ ಸಾವಿರಾರು ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಅಲ್ಲಿ ಉದ್ಯೋಗಗಳನ್ನು ಹೆಚ್ಚಿಸಿದ್ದಾರೆ. ಹೋಟೆಲ್ ಹಾಗೂ ವಿಮಾನಯಾನ ಕ್ಷೇತ್ರಕ್ಕೆ ಉತ್ತೇಜನ ಒದಗಿಸಿದ್ದಾರೆ. ಕಳೆದ ವರ್ಷವೇ (2024) ಈ ದೇಶಗಳ ಆರ್ಥಿಕತೆಗೆ ಭಾರತೀಯ ಪ್ರವಾಸಿಗರು 4 ಸಾವಿರ ಕೋಟಿ ರೂ. ಒದಗಿಸಿದ್ದಾರೆ. ಆದರೆ, ಈ ಎರಡೂ ದೇಶಗಳು ಪಹಲ್ಗಾಮ್ ದಾಳಿಯ ದೋಷಿ ಪಾಕಿಸ್ತಾನವನ್ನು ಬೆಂಬಲಿಸಿವೆ. ಈಗ ಇವರಿಗೆ ಬುದ್ಧಿ ಕಲಿಸುವ ಸಮಯ ಬಂದಿದೆ. ಭಾರತ ಮತ್ತು ಜಗತ್ತಿನ ವಿವಿಧೆಡೆ ನೋಡಲು ತುಂಬ ರಮಣೀಯ ತಾಣಗಳಿವೆ. ಆದರೆ, ಈ ಎರಡೂ ದೇಶಗಳನ್ನು (ಟರ್ಕಿ ಮತ್ತು ಅಜರ್​ಬೈಜಾನ್) ನಿಮ್ಮ ಪಟ್ಟಿಯಿಂದ ಬಿಟ್ಟುಬಿಡಿ. | ಹರ್ಷ ಗೋಯಂಕಾ ಉದ್ಯಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net