

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಜತೆಜತೆಗೆ ಮಕ್ಕಳಿಗೆ ಜೀವನ ಶಿಕ್ಷಣ ಮತ್ತು ಸಂಸ್ಕಾರವನ್ನು ತಿಳಿಸಿಕೊಡುವ ಉದ್ದೇಶದಿಂದ 1990ರಲ್ಲಿ ಶಾಂತಿವನ ಟ್ರಸ್ಟ್ನ ಮೂಲಕ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯನ್ನು ಆರಂಭಿಸಿದೆವು. ಮಕ್ಕಳ ಮನೋವಿಜ್ಞಾನದ ಬೆಳವಣಿಗೆ ಹಾಗೂ ವೈಚಾರಿಕತೆ, ಭಾವನಾತ್ಮಕ ರಚನೆ ಮತ್ತು ಸೃಜನಶೀಲತೆಯ ಅರಿವು ಉಂಟಾಗಲು ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಅತ್ಯುತ್ತಮವಾದ ಮಾರ್ಗವಾಗಿದೆ.
ಪ್ರತಿ ವರ್ಷವೂ ಶಾಲಾ ಮಕ್ಕಳಿಗೆ ಮೌಲ್ಯಾಧಾರಿತ ಪುಸ್ತಕಗಳನ್ನು ಪ್ರಕಟಿಸಿ ವಿತರಣೆ ಮಾಡಿ ಅವರ ಜ್ಞಾನವನ್ನು ವೃದ್ಧಿ ಮಾಡುವಲ್ಲಿ ನಾವು ಪ್ರಯತ್ನಿಸುತ್ತಿದ್ದೇವೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಪ್ರತ್ಯೇಕವಾಗಿ ನೈತಿಕ ಹಾಗೂ ಮೌಲ್ಯಾಧಾರಿತ ಪುಸ್ತಕಗಳನ್ನು ರಚಿಸಲಾಗುತ್ತಿದೆ. ಬೇರೆ ಬೇರೆ ಜಿಲ್ಲೆಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಈ ಪುಸ್ತಕಗಳನ್ನು ವಿತರಿಸಿ, ಅವುಗಳ ಅಧ್ಯಯನಕ್ಕೆ ಪ್ರೋತ್ಸಾಹಿಸಲಾಗುತ್ತದೆ. ಅಲ್ಲದೆ ತಾಲೂಕು, ಜಿಲ್ಲಾ ಮಟ್ಟದಲ್ಲಿ ಈ ಪುಸ್ತಕಗಳನ್ನು ಆಧರಿಸಿ ಭಾಷಣ, ಪ್ರಬಂಧ, ಕಂಠಪಾಠ, ಚಿತ್ರಕಲಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಎಲ್ಲಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರಿಂದ ಪುರಸ್ಕಾರ ನೀಡಲಾಗುತ್ತದೆ.
ಮಕ್ಕಳ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ ಹಾಗೂ ನೈತಿಕ-ಆಧ್ಯಾತ್ಮಿಕ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳನ್ನು ಶಾಂತಿವನ ಟ್ರಸ್ಟ್ನ ಮೂಲಕ ನಡೆಸಿಕೊಂಡು ಬರಲಾಗುತ್ತಿದೆ. ಶಾಂತಿವನ ಪ್ರಕಟಿಸುವ ಮೌಲ್ಯಾಧಾರಿತ ಪುಸ್ತಕದಲ್ಲಿ ಜ್ಞಾನ, ಮೌಲ್ಯ ವಿಚಾರಗಳನ್ನು ಒಳಗೊಂಡಿರುವ ಬರಹ, ಪುರಾಣೇತಿಹಾಸ ಕಥೆಗಳಿವೆ. ಅವುಗಳ ಮೂಲಕ ತ್ಯಾಗ, ಪ್ರೀತಿ, ಪ್ರೇಮ, ಸಾಧನೆ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತದೆ. ಅದರ ಜತೆಗೆ ವೈಜ್ಞಾನಿಕವಾಗಿ ಸಾಧನೆ ಮಾಡಿದ ವಿಜ್ಞಾನಿಗಳ ಕುರಿತಾದ ವಿವರ ಮುಂತಾದ ಹಲವು ಮಾಹಿತಿ, ಪ್ರೇರಣಾದಾಯಕ ಸಂಗತಿಗಳನ್ನು ಪುಸ್ತಕ ಒಳಗೊಂಡಿದೆ.
ಉದಾಹರಣೆಗೆ, ವಿಜ್ಞಾನಿಗಳು ಅನೇಕ ಸಾಧನೆಗಳನ್ನು ಮಾಡುತ್ತಾರೆ. ಅವರ ಸಾಧನೆಯಿಂದ ನಾವು ತಂತ್ರಜ್ಞಾನದಲ್ಲಿ ಈ ಹಂತ ತಲುಪಲು ಸಾಧ್ಯವಾಗಿದೆ. ಹಂತ ಹಂತವಾಗಿ ಅವರು ಆವಿಷ್ಕಾರಗಳನ್ನು ಮಾಡಿದ್ದರಿಂದ ನಾವು ತಂತ್ರಜ್ಞಾನ, ಬಾಹ್ಯಾಕಾಶ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹಂತ ತಲುಪಲು ಸಾಧ್ಯವಾಗಿದೆ ಎಂಬುದನ್ನು ಎಳವೆಯಲ್ಲೇ ಅವರಿಗೆ ಅರಿವು ಮೂಡಿಸಿ ಸಾಧನೆ ಮಾಡಲು ಪ್ರೇರೇಪಿಸುವ ಕಾರ್ಯ ಈ ಮೂಲಕ ಆಗುತ್ತಿದೆ. ಪುಸ್ತಕ ಓದಿದ ಪ್ರತಿಯೊಬ್ಬ ವಿದ್ಯಾರ್ಥಿಯ ಮನದಲ್ಲಿ ‘ಸಾಧಿಸಬೇಕು’ ಎಂಬ ಛಲ ಮೂಡುವಂತೆ ಮಾಡುವುದು ಕಾರ್ಯಕ್ರಮದ ಉದ್ದೇಶಗಳಲ್ಲೊಂದು.
ನಾವು ಸುಮಾರು ಎರಡು ದಶಕಗಳ ಹಿಂದೆ ಸೀಮೆಎಣ್ಣೆ ಬಳಸಿಕೊಂಡು ದೀಪ ಉರಿಸುತ್ತಿದ್ದೆವು. ಅದುವೇ ನಮಗೆ ದೊಡ್ಡ ಬೆಳಕಿನ ಶಕ್ತಿಯಾಗಿತ್ತು. ಆ ಬೆಳಕಿಗೆ ನಮ್ಮ ಕಣ್ಣು ಹೊಂದಿಕೊಂಡಿತ್ತು. ಆದರೆ ಬಳಿಕ ವಿಜ್ಞಾನಿಗಳಿಂದ ವಿದ್ಯುತ್ ಹಾಗೂ ವಿವಿಧ ರೀತಿಯ ಬಲ್ಬ್ಗಳ ಬಗ್ಗೆ ಸಂಶೋಧನೆಯಾಯಿತು. ನಮ್ಮ ಮ್ಯೂಸಿಯಂ/ ವಸ್ತುಸಂಗ್ರಹಾಲಯಕ್ಕೆ ಹೋದರೆ ಈ ಬಗ್ಗೆ ತಿಳಿಯುತ್ತದೆ.
ಸೀಮೆಎಣ್ಣೆ ಬರ್ನಲ್ ಬಳಸಿ ಗಾಳಿ ಊದಿ ಬೆಳಕು ಪಡೆದ ವಿಧಾನದಿಂದ (ಗ್ಯಾಸ್ಲೈಟ್ ಎನ್ನುತ್ತಿದ್ದೆವು), ಬ್ಯಾಟರಿ ಚಾಲಿತ ಟಾರ್ಚ್ ಲೈಟ್, ಈಗಿನ ಆಧುನೀಕರಣ ವಿನ್ಯಾಸದ ಲೈಟ್ವರೆಗೆ ಅನೇಕ ಆವಿಷ್ಕಾರಗಳನ್ನು ಗುರುತಿಸಬಹುದು. ಇನ್ನು ವಾಹನಗಳಲ್ಲಿ ಲೈಟಿಂಗ್ ವ್ಯವಸ್ಥೆ ಹೇಗಿತ್ತು ಎಂದು ಗಮನಿಸಿದಾಗ ಕಾರ್ಬೆಡ್ ಹಾಕಿ ಅದನ್ನು ಉರಿಸಿದರೆ ಇಂತಿಷ್ಟು ಹೊತ್ತು ಉರಿಯುತ್ತಿತ್ತು. ಸೈಕಲ್ ಚಕ್ರಕ್ಕೆ ಡೈನಮೋ ಅಳವಡಿಸಿ ಪೆಡಲ್ ತುಳಿಯುವಾಗ ಉತ್ಪತ್ತಿಯಾಗುವ ಶಕ್ತಿಯಿಂದ ದೀಪ ಬೆಳಗುತ್ತಿತ್ತು. ಮುಂದೆ ಡಿ.ಸಿ., ಎ.ಸಿ. ವಿದ್ಯುತ್ ಬಂದವು. ಇವೆಲ್ಲವನ್ನೂ ಮ್ಯೂಸಿಯಂನಲ್ಲಿ ಕಾಣಬಹುದು. ಇಂತಹ ಸಂಶೋಧನೆ, ಆವಿಷ್ಕಾರ ಬೆಳವಣಿಗೆಗಳ ಬಗ್ಗೆ ಕುತೂಹಲಕಾರಿಯಾಗಿ ಮಕ್ಕಳಿಗೆ ಮನಮುಟ್ಟುವಂತೆ ಪುಸ್ತಕಗಳ ಮೂಲಕ ತಿಳಿಸಿಕೊಡಲಾಗುತ್ತದೆ.
ನಾನು ಬಾಲ್ಯದಲ್ಲಿದ್ದಾಗ ಶ್ರೀಕ್ಷೇತ್ರದಲ್ಲಿ ಜನರೇಟರ್ಗಾಗಿ ಪ್ರತ್ಯೇಕ ಕೊಠಡಿ ಇತ್ತು. ಆ ಜನರೇಟರ್ನಲ್ಲಿ ಕರೆಂಟ್ ಉತ್ಪತ್ತಿಯಾಗಿ ದೇವಸ್ಥಾನಕ್ಕೆ, ನಮ್ಮ ನಿವಾಸಕ್ಕೆ ಮತ್ತು ಕೆಲವು ಮುಖ್ಯ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗಿತ್ತು. ಆ ಜನರೇಟರ್ ಚಾಲನೆ ಮಾಡಲು ಡೀಸೆಲ್/ ಸೀಮೆಎಣ್ಣೆ ಬೇಕಾಗಿತ್ತು. ಅದಕ್ಕೆ ಬಹಳ ಖರ್ಚು ತಗಲುತ್ತಿತ್ತು. ಹಾಗಾಗಿ ರಾತ್ರಿ ವೇಳೆ ಸುಮಾರು 10 ಗಂಟೆಗೆ ಜನರೇಟರ್ ನಿಲ್ಲಿಸುತ್ತಿದ್ದರು. ಜನರೇಟರ್ ನಿಲ್ಲಿಸುವ ಮೊದಲು ನಮ್ಮ ನಿವಾಸದ ಅಜ್ಜಿಯ ಕೋಣೆಗೆ, ಅಮ್ಮನ ಕೋಣೆಗೆ, ತಂದೆಯವರ ಕೋಣೆಗೆ ಎಂದು ಎಲ್ಲಾ ಕೋಣೆಗಳಿಗೂ ಲಾಟೀನು ಕೊಡುತ್ತಿದ್ದರು. ಮುಂದೆ ನೀರಿನಿಂದ ವಿದ್ಯುತ್ ಶಕ್ತಿ ಉತ್ಪಾದನೆಯ ಆವಿಷ್ಕಾರವಾಗಿ ಜಲಪಾತವಿರುವಲ್ಲಿ ರಭಸವಾಗಿ ಬೀಳುವ ನೀರಿನ ಶಕ್ತಿಯನ್ನು ವಿದ್ಯುತ್ ಉತ್ಪಾದಿಸುವ ರೀತಿಯಲ್ಲಿ ಪರಿವರ್ತಿಸಿ ಸಂಶೋಧನೆಗಳು ನಡೆದು ಬಹಳ ಯಶಸ್ವಿಯಾದವು.
ಹೀಗೆ ವಿಜ್ಞಾನಿಗಳ ಸಂಶೋಧನೆಯ ಕೊಡುಗೆಯಿಂದಾಗಿ ನಮಗೆ ವಿದ್ಯುತ್ಶಕ್ತಿ ದೊರೆತಿದೆ. ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದನೆಯ ಆವಿಷ್ಕಾರಗಳೂ ಬಹಳ ಯಶಸ್ವಿಯಾದವು. ಸರಕಾರ ಅದಕ್ಕೆ ಉತ್ತೇಜನವನ್ನೂ ನೀಡುತ್ತಿದೆ. ಹೀಗೆ ಹಿಂದಿನ ಪೀಳಿಗೆಯ ಹತ್ತು ಹಲವು ವಿಚಾರಗಳನ್ನು ಇಂದಿನ ಪೀಳಿಗೆಗೆ ತಿಳಿಯಪಡಿಸುವ ಕಾರ್ಯ ಅಗತ್ಯವಾಗಿ ಮಾಡಬೇಕು. ಯಾಕೆಂದರೆ ನಮ್ಮ ಇತಿಹಾಸ ಮಕ್ಕಳು ಅರಿತುಕೊಂಡಷ್ಟು ಭವಿಷ್ಯದಲ್ಲಿ ಸುಲಭವಾಗಿ ಇನ್ನಷ್ಟು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ.
ನಮ್ಮ ಕ್ಷೇತ್ರದಲ್ಲಿ ಅನೇಕ ಕಡೆ ಸೋಲಾರ್ ಘಟಕಗಳ ಮೂಲಕ ವಿದ್ಯುತ್ ಉತ್ಪಾದಿಸಿ ಬಳಕೆ ಮಾಡಲಾಗುತ್ತಿದೆ. ಹೊಸದಾಗಿ ನಿರ್ವಣವಾಗುತ್ತಿರುವ ಕ್ಯೂ ಕಾಂಪ್ಲೆಕ್ಸ್ಗೂ ಈ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ವಾಹನಗಳನ್ನೂ ಈಗ ವಿದ್ಯುತ್ಶಕ್ತಿ, ಸೋಲಾರ್ ಶಕ್ತಿ ಮೂಲಕ ಓಡಿಸುವ ಆಧುನಿಕ ತಂತ್ರಜ್ಞಾನದ ಅಳವಡಿಕೆ ನಮ್ಮ ನಾಡಿನಲ್ಲೂ ಆಗುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಇಂಧನ ಬಳಕೆ ಕಡಿಮೆಯಾಗಿ ಪರಿಸರ ಸ್ನೇಹಿ ಸೋಲಾರ್ ವಾಹನಗಳೇ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ವಿಚಾರಗಳನ್ನೆಲ್ಲ ಮಕ್ಕಳು ತಿಳಿದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಮಕ್ಕಳಿಗಾಗಿಯೇ ಲೇಖನಗಳನ್ನು ಬರೆಸುತ್ತೇವೆ.
ನಾನು ಮತ್ತು ನನ್ನ ಶ್ರೀಮತಿ ಹೇಮಾವತಿ, ಅನೇಕ ವಿಚಾರಗಳ ಬಗ್ಗೆ ಲೇಖನವನ್ನು ಬರೆಯುತ್ತೇವೆ. ರಾಜ್ಯದ ಖ್ಯಾತ ಲೇಖಕರಿಂದ ಲೇಖನ ಬರೆಸುತ್ತೇವೆ. ಇವುಗಳನ್ನು ಸಂಗ್ರಹಿಸಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗಾಗಿ ಎರಡು ಪುಸ್ತಕಗಳನ್ನು ಪ್ರಕಟಿಸುತ್ತೇವೆ. ಇದುವರೆಗೆ 23 ಲಕ್ಷ ಪುಸ್ತಕಗಳನ್ನು ಅಚ್ಚು ಹಾಕಿದ್ದೇವೆ. ಇದೆಲ್ಲದರ ಹಿಂದಿನ ಉದ್ದೇಶವೇನೆಂದರೆ ಮಕ್ಕಳು ಓದಬೇಕು, ಓದುವ ಆಸಕ್ತಿ ಬೆಳೆಸಿಕೊಳ್ಳಬೇಕು ಎನ್ನುವುದಾಗಿದೆ.
ಹೀಗೆ ಮುದ್ರಿಸಿದ ಪುಸ್ತಕಗಳನ್ನು ಮಕ್ಕಳು ಓದದಿದ್ದರೆ ಏನು ಮಾಡುವುದು? ಓದುವಂತೆ ಮಾಡಲು ಏನಾದರೂ ಮಾಡಬೇಕು ಎಂದು ಚಿಂತಿಸಿದಾಗ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಇಟ್ಟು ಬಹುಮಾನ ನೀಡಿ ಪ್ರೋತ್ಸಾಹಿಸುವ ಯೋಜನೆಯೂ ಇದೆ. ಪ್ರತಿ ವರ್ಷ ರಾಜ್ಯ ಮಟ್ಟದ ಅಂಚೆ-ಕುಂಚ, ಚಿತ್ರಕಲಾ ಸ್ಪರ್ಧೆಗಳನ್ನು ನಡೆಸಿ ಮಕ್ಕಳಿಗೆ ವಿಶೇಷವಾಗಿ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗ, ಸಾರ್ವಜನಿಕರಿಗೆ ಸಾರ್ವಜನಿಕ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆಗಳು ಇರುತ್ತವೆ. ಅಂಚೆ-ಕುಂಚ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳು, ಚಿತ್ರಕಲೆಯನ್ನು ವಿಶೇಷ ವಿಷಯವಾಗಿ ತೆಗೆದುಕೊಂಡು ಅಧ್ಯಯನ ಮುಂದುವರಿಸಿದಲ್ಲಿ ಕ್ಷೇತ್ರದ ವತಿಯಿಂದ ಅವರಿಗೆ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಲಾಗುತ್ತದೆ.
ಕಥೆಗಳಿಗೆ ಸಂಬಂಧಪಟ್ಟಂತೆ ಕಲಾವಿದರಿಂದ ಚಿತ್ರಗಳನ್ನು ರಚಿಸಿ ಪುಸ್ತಕವನ್ನು ಆಕರ್ಷಕವಾಗಿ ಮುದ್ರಿಸುವಂತೆ ಮಾಡುತ್ತೇವೆ. ಪುಸ್ತಕಕ್ಕೆ ಇಂತಿಷ್ಟು ಎಂಬ ಮೌಲ್ಯ ನಿಗದಿಪಡಿಸಿ ಪುಸ್ತಕವನ್ನು ಮಕ್ಕಳು ಖರೀದಿಸುವಂತೆ ಮಾಡುತ್ತೇವೆ. ಯಾಕೆಂದರೆ ಪುಸ್ತಕವನ್ನು ಹಣ ಕೊಟ್ಟು ಖರೀದಿಸುವ ಮಕ್ಕಳು ಖಂಡಿತ ಪುಸ್ತಕ ಓದುತ್ತಾರೆ ಎನ್ನುವ ಭಾವನೆ ನಮ್ಮದು. ಉಚಿತವಾಗಿ ಕೊಟ್ಟರೆ ಓದದೆಯೂ ಇರಬಹುದು. ಉಚಿತವಾಗಿ ನೀಡಿದರೆ ನೆಲಕಡಲೆ ಕಟ್ಟುವುದಕ್ಕೋ, ಸಕ್ಕರೆ ಕಟ್ಟುವುದಕ್ಕೋ ಉಪಯೋಗ ಮಾಡುತ್ತಾರೆ ಎಂದು ಕೆಲವರು ಹಾಸ್ಯ ಮಾಡುವುದು ಉಂಟು. ಹಣ ಕೊಟ್ಟು ಖರೀದಿಸಿದರೆ ಓದುವ ಆಸೆ ಹುಟ್ಟುತ್ತದೆ. ಹಣ ಕೊಟ್ಟಿದ್ದಕ್ಕಾದರೂ ಓದುವ ಎಂಬ ಮನೋಭಾವ ಉಂಟಾಗುತ್ತದೆ. ಪುಸ್ತಕದಲ್ಲಿ ಏನಿದೆ ಎಂದು ಪುಟ ತಿರುವಿದಾಗ ಕಥೆಗಳು, ಆಕರ್ಷಕ ಚಿತ್ರಗಳನ್ನು ಗಮನಿಸಿ ಆಕರ್ಷಿತರಾಗಿ ಓದುತ್ತಾರೆ. ಈ ರೀತಿಯಾಗಿ ಒಂದೂವರೆ ಲಕ್ಷ ಪುಸ್ತಕಗಳನ್ನು ಪ್ರತಿ ವರ್ಷ ಮುದ್ರಿಸಿ ಶಾಲೆಗಳಿಗೆ ಕೊಟ್ಟು ಮಕ್ಕಳು ಖರೀದಿಸುವಂತೆ ಮಾಡಿ ಅವರ ಜ್ಞಾನವನ್ನು ವೃದ್ಧಿಸುವ ಎಲ್ಲ ಪ್ರಯತ್ನಗಳನ್ನು ನಾವು ಮಾಡುತ್ತಿದ್ದೇವೆ.
ಈಗ ಹೊಸದಾಗಿ ಈ ಪುಸ್ತಕಗಳಲ್ಲಿ ವೇದಗಣಿತವನ್ನು ಅಳವಡಿಸಿದ್ದೇವೆ. ಸುಲಭವಾಗಿ ಲೆಕ್ಕಗಳನ್ನು ಮಾಡುವ ವಿಧಾನವನ್ನು ಕಂಡು ಹುಡುಕಿದ್ದು ವೇದಗಳು. ಸುಮಾರು ಐದು ಸಾವಿರ ವರ್ಷಗಳ ಹಿಂದೆಯೇ ಲೆಕ್ಕ, ಗಣಿತವನ್ನು ಮಾಡುವುದು ಹೇಗೆ ಕೂಡಿಸುವುದು, ಗುಣಿಸುವುದು, ಭಾಗಿಸುವುದು, ಹೇಗೆ ಎನ್ನುವುದನ್ನು ವೇದಗಳಿಂದ ಸುಲಭವಾಗಿ ತಿಳಿದುಕೊಳ್ಳಬಹುದುದೆಂದು ಋಷಿ, ಮುನಿಗಳು, ಹಿರಿಯರು ನಿರೂಪಿಸಿದ್ದಾರೆ. ಹಾಗಾಗಿ ಆ ವಿಚಾರವನ್ನೂ ಈ ಬಾರಿ ಪುಸ್ತಕದಲ್ಲಿ ಅಚ್ಚು ಮಾಡಿದ್ದೇವೆ. ಈ ರೀತಿ ವೈವಿಧ್ಯಮಯವಾದಂತಹ ಲೇಖನಗಳು, ಬದುಕಿಗೆ ಬೇಕಾದಂತಹ ಸಂದೇಶಗಳನ್ನು ಪುಸ್ತಕದಲ್ಲಿ ಮುದ್ರಿಸಿದ್ದೇವೆ. ಪುಸ್ತಕದಲ್ಲಿನ ಕಥೆಗಳಲ್ಲಿ ಅನುಕಂಪ, ಪ್ರೀತಿ, ಪ್ರೇಮ, ದಯೆ ಮತ್ತು ಶಾಂತಿ ಮುಂತಾದ ಮೌಲ್ಯಗಳ ವಿಚಾರಗಳನ್ನು ತುಂಬಿ ಸಕಾರಾತ್ಮಕ ಚಿಂತನೆ, ಧೈರ್ಯ, ಧನಾತ್ಮಕ ಬದುಕು ರೂಪಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ. ನಮ್ಮ ಸಂಸ್ಕೃತಿ, ಸಂಪ್ರದಾಯದ ಕುರಿತೂ ಬೆಳಕು ಚೆಲ್ಲಲಾಗುತ್ತದೆ.
ಮಕ್ಕಳ ಮುಂದೆ ಇನ್ನೊಬ್ಬರನ್ನು ನಿಂದಿಸುವುದು, ಕೆಟ್ಟದಾಗಿ ಮಾತನಾಡುವುದು, ಅಸಭ್ಯವಾಗಿ ವರ್ತಿಸುವುದು ಮಾಡಲೇಬಾರದು. ಯಾಕೆಂದರೆ ಮಕ್ಕಳ ಮನಸ್ಸು ಹಸಿ ಗೋಡೆಯಿದ್ದಂತೆ. ಮಕ್ಕಳ ಎದುರು ದುರ್ವರ್ತನೆ ತೋರಿದಾಗ ಹಸಿ ಗೋಡೆಗೆ ಕಲ್ಲು ಎಸೆದಾಗ ಕಲ್ಲು ಗಟ್ಟಿಯಾಗಿ ಹಿಡಿಯುವಂತೆ ಮಕ್ಕಳೂ ಕೂಡ ಹಿರಿಯರಂತೆ ಟೀಕೆ ಮಾಡುವುದು, ಹಾಸ್ಯ, ದೂಷಣೆ ಮುಂತಾದವುಗಳನ್ನು ಮಾಡುತ್ತಾರೆ. ಹೀಗಾಗಿ ಮಕ್ಕಳಿಗೆ ಸದ್ವಿಚಾರಗಳನ್ನು ಅವಶ್ಯವಾಗಿ ತಿಳಿಸಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಆ ನಿಟ್ಟಿನಲ್ಲಿ ನಮ್ಮ ಈ ಪ್ರಯತ್ನ ಬಹಳ ಯಶಸ್ವಿಯಾಗಿದೆ. ಆರೋಗ್ಯಯುತವಾದ ಜೀವನ ಸಾಗಿಸಲು ನೈತಿಕ ಮೌಲ್ಯದ ಶಿಕ್ಷಣದ ಅರಿವು ಅತ್ಯಂತ ಅವಶ್ಯಕ. ಎಳವೆಯಲ್ಲಿಯೇ ಮಕ್ಕಳಿಗೆ ಇದರ ಅರಿವು ಮೂಡಿಸುವ ಮೂಲಕ ಸದೃಢ ಹಾಗೂ ಸುಸಂಸೃ್ಕ ಭಾವೀ ಜನಾಂಗವನ್ನು ನಿರ್ಮಾಣ ಮಾಡುವ ಆಶಯ ನಮ್ಮದು.
| ಲೇಖಕರು, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು