ಉತ್ತರಕರ್ನಾಟಕದ ಸಮಸ್ಯೆಗಳಿಗೆ ಬೊಮ್ಮಾಯಿ ಉತ್ತರವಾಗಬೇಕಿದೆ...!

Ghataprabha
ಘಟಪ್ರಭಾ ನದಿ
Published on
ಕರ್ನಾಟಕದ ಪಶ್ಚಿಮಘಟ್ಟಗಳಲ್ಲಿ ಹೇರಳವಾದ ಜಲಸಂಪತ್ತು ಇದೆ. ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಂದಲೇ 2000 ಟಿಎಂಸಿ ಅಡಿ ನೀರು ಲಭ್ಯವಿದೆ. ಅರಣ್ಯ ಸಂಪತ್ತಿಗೆ ಹಾನಿಯಾಗದಂತೆ ಒಂದಿಷ್ಟು ಪ್ರಮಾಣದ ನೀರನ್ನು ಬಯಲುಸೀಮೆ ಕಡೆಗೆ ಹರಿಸಿದರೆ ಉತ್ತರದಲ್ಲಿಯೂ ಹಸಿರು ಕ್ರಾಂತಿ ಸಾಧಿಸುವುದು ಕಷ್ಟವೇನಲ್ಲ.

ಬಸವರಾಜ ಬೊಮ್ಮಾಯಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಉತ್ತರ ಕರ್ನಾಟಕ ಮೂಲದವರಾಗಿರುವುದರಿಂದ ಈ ಭಾಗಕ್ಕೆ ಸಹಜವಾಗಿಯೇ ಅವರ ಮೇಲೆ ಹಲವು ನಿರೀಕ್ಷೆಗಳಿವೆ. ಬೊಮ್ಮಾಯಿ ನೀರಾವರಿ ಸಚಿವರಾಗಿ ಕೆಲಸ ಮಾಡಿದ್ದರಿಂದ ಹಾಗೂ ನೀರಾವರಿ ಹೋರಾಟಗಳಲ್ಲಿ ಪಾಲ್ಗೊಂಡು ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬಂದಿರುವುದರಿಂದ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯ ಸರಿಪಡಿಸುವುದು ಅವರ ಪ್ರಥಮ ಆದ್ಯತೆಯಾಗಬೇಕಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆ, ಮಹಾದಾಯಿ ಸಮಸ್ಯೆ ಇತ್ಯರ್ಥ, ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವುದು ಮತ್ತು ಘೊಷಣೆಯಾದ ನೀರಾವರಿ ಯೋಜನೆಯ ಅನುಷ್ಠಾನ ಕಾರ್ಯ ಚುರುಕುಗೊಳಿಸಿ ಹೊಸ ನೀರಾವರಿ ಕ್ಷೇತ್ರ ಸೃಷ್ಟಿಸುವತ್ತ ಗಮನ ಹರಿಸಬೇಕು.

2008-13ರ ಅವಧಿಯಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಬೀದರ್​ನಿಂದ ಚಾಮರಾಜನಗರದವರೆಗೂ ಅಖಂಡ ಕರ್ನಾಟಕದ ನೀರಾವರಿ ವ್ಯವಸ್ಥೆ ಬಗ್ಗೆ ಹಾಗೂ ಅದನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಆಸಕ್ತಿಯಿಂದ ಕೆಲಸ ಮಾಡಿದ್ದಾರೆ. ಮಹಾದಾಯಿ ನೀರನ್ನು ಮಲಪ್ರಭೆಗೆ ಸೇರಿಸುವ ಯೋಚನೆ ಹರಿಬಿಟ್ಟಿದ್ದು ಬಾದಾಮಿ ಮಾಜಿ ಶಾಸಕ ಬಿ.ಎಂ. ಹೊರಕೇರಿ ಆದರೂ ಯೋಜನೆ ಅನುಷ್ಠಾನದ ಹೋರಾಟಕ್ಕೆ ಮುನ್ನುಡಿ ಬರೆದಿದ್ದು ಬಸವರಾಜ ಬೊಮ್ಮಾಯಿಯವರು. 1998ರಲ್ಲಿಯೇ ಕಳಸಾ ಬಂಡೂರಿ ಹೋರಾಟ ಸಮಿತಿ ರಚಿಸಿ ಅದರ ಅಧ್ಯಕ್ಷರಾದರು. 2007ರಲ್ಲಿ ಧಾರವಾಡದಿಂದ ನವಲಗುಂದ ತಾಲೂಕಿನ ಕೊನೆ ಹಳ್ಳಿಯವರೆಗೆ 232 ಕಿ.ಮೀ. ಪಾದಯಾತ್ರೆ ಮಾಡಿ ನಮ್ಮ ನೀರಿನ ಹಕ್ಕು ಪಡೆಯಲು ಜನಾಂದೋಲನ ರೂಪಿಸಿದರು. ಹೀಗಾಗಿ ಉತ್ತರ ಕರ್ನಾಟಕದ ನೆಲ, ಜಲ, ಅಭಿವೃದ್ಧಿ ಕುರಿತು ಕಾಳಜಿ ಹಾಗೂ ಅನುಭವ ಹೊಂದಿರುವ ಬೊಮ್ಮಾಯಿಯವರ ಅವಧಿಯಲ್ಲಿ ಉತ್ತರ ಕರ್ನಾಟಕ ಹೊಸ ದಿಕ್ಕಿನತ್ತ ಸಾಗಬಹುದು ಎಂಬ ಆಶಾಭಾವನೆ ಗರಿಗೆದರಿದೆ.

ನೀರಾವರಿ ಯೋಜನೆಗಳಲ್ಲಿ ಉತ್ತರಕ್ಕೆ ಅನ್ಯಾಯ?: ಕರ್ನಾಟಕಕ್ಕೆ ಕೃಷ್ಣಾ ಕಣಿವೆ ನೀರಿನ ಪಾಲು 904 ಟಿಎಂಸಿ ಅಡಿ. ಕಾವೇರಿ ಕಣಿವೆ ನೀರಿನ ಪಾಲು 280 ಟಿಎಂಸಿ ಅಡಿ. ಕಾವೇರಿಗಿಂತ ಕೃಷ್ಣೆಯ ಜಲಾನಯನ ಪ್ರದೇಶಗಳಲ್ಲಿಯ ಅಣೆಕಟ್ಟುಗಳಿಂದ 3 ಪಟ್ಟು ಹೆಚ್ಚು ಭೂಮಿಯನ್ನು ನೀರಾವರಿಗೆ ಒಳಪಡಿಸಬಹುದು. ಕಾವೇರಿ ನೀರಿನ ಪಾಲಿನಲ್ಲಿ ಹೆಚ್ಚೆಂದರೆ 12-13 ದಶಲಕ್ಷ ಹೆಕ್ಟೇರ್ ಭೂಮಿಗೆ ನೀರು ಒದಗಿಸಲು ಸಾಧ್ಯ. ಆದರೆ ಕೃಷ್ಣಾ ಕಣಿವೆಯಲ್ಲಿ ನಮಗೆ ದೊರೆತಿರುವ ನೀರಿನಿಂದ ಅಂದಾಜು 40 ರಿಂದ 45 ದಶಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದು.

ಉತ್ತರ ಮತ್ತು ದಕ್ಷಿಣ ಕರ್ನಾಟಕದ ಬಹುತೇಕ ನೀರಾವರಿ ಯೋಜನೆಗಳು ಕರ್ನಾಟಕ ಏಕೀಕರಣದ ನಂತರವೇ ಪ್ರಾರಂಭವಾಗಿವೆ. ಆದರೆ, ಉತ್ತರ ಮತ್ತು ದಕ್ಷಿಣದ ನೀರಾವರಿ ಯೋಜನೆಗಳಲ್ಲಿ ಬಹಳಷ್ಟು ತಾರತಮ್ಯವಾಗಿದೆ. ಆಡಳಿತಾತ್ಮಕ ಅನುಮೋದನೆ, ಗಂಭೀರ ಮೇಲ್ವಿಚಾರಣೆ, ಮಾರ್ಗದರ್ಶನ, ಸಕಾಲಿಕ ನಿರ್ಧಾರ ತೆಗೆದುಕೊಳ್ಳುವುದು ಹಾಗೂ ಯೋಜನೆಗೆ ಅಗತ್ಯ ಹಣಕಾಸು ಸೌಲಭ್ಯ ಒದಗಿಸುವುದು ಅತ್ಯವಶ್ಯ. ಈ ವಿಷಯದಲ್ಲಿ ಪ್ರಾರಂಭದಿಂದಲೂ ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ಅಧಿಕಾರಸ್ಥ ರಾಜಕಾರಣಿಗಳು ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಕುರಿತು ವಿಶೇಷ ಗಮನ ಹರಿಸಿಲ್ಲ. 3-4 ದಶಕಗಳಿಂದ ಬಹುತೇಕ ಯೋಜನೆಗಳು ನನೆಗುದಿಗೆ ಬಿದ್ದಿವೆ.

ಘಟಪ್ರಭಾ-ಮಲಪ್ರಭಾ ಅಣೆಕಟ್ಟು ಕಾಮಗಾರಿಗಳು 1981-82ರಲ್ಲಿ ಪೂರ್ಣಗೊಂಡರೂ ಶಾಖಾ ಕಾಲುವೆ, ಉಪ ಕಾಲುವೆ ಹಾಗೂ ವಿತರಣಾ ಕಾಲುವೆಗಳ ನಿರ್ಮಾಣ ಕೆಲಸ 2002ರಲ್ಲಿ ಪೂರ್ಣಗೊಂಡಿತು. ಯುಕೆಪಿ-3ರಲ್ಲಿ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳ ಹಾಗೂ ಉಪಯೋಜನೆಗಳು ಸೇರಿ ಕೃಷ್ಣಾ ಕಣಿವೆಯ 40ಕ್ಕೂ ಅಧಿಕ ಯೋಜನೆಗಳು ನನೆಗುದಿಗೆ ಬಿದ್ದಿವೆ. ದೂಧಗಂಗಾ, ರಾಮಥಾಳ, ಸೊಂತಿ, ಬಸಾಪೂರ, ಬಳ್ಳಾರಿ ನಾಲಾ, ತಿಮ್ಮಾಪೂರ, ಗುಡ್ಡದ ಮಲ್ಲಾಪೂರ, ಹಿರಣ್ಯಕೇಶಿ, ದಂಡಾವತಿ ಏತ ನೀರಾವರಿ ಯೋಜನೆಗಳಲ್ಲಿ ಕೆಲವು ಅಪೂರ್ಣವಾಗಿವೆ. ಕೆಲವು ಪ್ರಾರಂಭವೇ ಆಗಿಲ್ಲ. 3 ದಶಕಗಳ ನಂತರ ಕಳಸಾ ಬಂಡೂರಿ ಯೋಜನೆ ಸಮಸ್ಯೆಗೆ ರ್ತಾಕ ಅಂತ್ಯ ದೊರಕಿದ್ದು, ಯೋಜನೆ ಅನುಷ್ಠಾನಗೊಳ್ಳಬೇಕಿದೆ.

ಉತ್ತರ ಕರ್ನಾಟಕದಲ್ಲಿ 74 ನದಿಗಳು: ಕರ್ನಾಟಕದ ಕೃಷಿಭೂಮಿಯ ಶೇಕಡ 62ರಷ್ಟು ಬಯಲುಸೀಮೆಯ ಪ್ರದೇಶ ಉತ್ತರ ಕರ್ನಾಟಕದಲ್ಲಿದೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ ಸೇರಿದಂತೆ ಸುದೈವದಿಂದ ದಕ್ಷಿಣ ಕರ್ನಾಟಕದಲ್ಲಿ ಹುಟ್ಟುವ ತುಂಗಭದ್ರಾ, ವರದಾ, ಧರ್ವ ಒಳಗೊಂಡು ಒಟ್ಟು 74 ನದಿಗಳು ಉತ್ತರ ಕರ್ನಾಟಕದಲ್ಲಿ ಹರಿದಿವೆ. ಅನುಕೂಲಕರವಾದ ನೈಸರ್ಗಿಕ ಪರಿಸರ ಉಪಯೋಗಿಸಿಕೊಂಡು, ನೀರಾವರಿ ಸದ್ಬಳಕೆ ಮಾಡಿಕೊಂಡು ಕೃಷಿಯನ್ನು ಬಲಪಡಿಸಿದರೆ ಉತ್ತರ ಕರ್ನಾಟಕದ ಅಭಿವೃದ್ಧಿಯ ವೇಗವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಹೊಸ ಅವಕಾಶಗಳು: ಕರ್ನಾಟಕದಲ್ಲಿ ದಕ್ಷಿಣಕ್ಕಿಂತ ಉತ್ತರದಲ್ಲಿ ಬಹಳಷ್ಟು ವಿಶಾಲವಾದ ಕೃಷಿ ಭೂಮಿ ಇದೆ. ಕೃಷ್ಣಾ ಕಣಿವೆಯ ಲಭ್ಯವಿರುವ ಒಟ್ಟು ಜಲ ಸಂಪನ್ಮೂಲದ ಜೊತೆಗೆ ಹೊಸ ನೀರಾವರಿ ಯೋಜನೆಗಳೊಂದಿಗೆ ಹೊಸ ಅಚ್ಚುಕಟ್ಟು ಪ್ರದೇಶ ಸೃಷ್ಟಿಸಲು ಅವಕಾಶಗಳಿವೆ. ಪಶ್ಚಿಮಘಟ್ಟಗಳಲ್ಲಿ ಹುಟ್ಟುವ ಕಾಳಿ ನದಿಯ 50 ಟಿಎಂಸಿ ಅಡಿ ನೀರಿನಿಂದ ಘಟಪ್ರಭಾ-ಮಲಪ್ರಭಾ ನದಿಗಳನ್ನು ಸದೃಢಗೊಳಿಸಬಹುದು. ಹಾಗೂ ಶರಾವತಿ ನದಿಯಿಂದ ವರದಾ ನದಿಗೆ 50 ಟಿಎಂಸಿ ಅಡಿ ನೀರು ಹರಿಸಲು ಸಾಧ್ಯವಿದೆ. ಆ ಮೂಲಕ ತುಂಗಭದ್ರೆಯನ್ನು ಸದೃಢಗೊಳಿಸಬಹುದು.

ಹಿರಣ್ಯಕೇಶಿ ನದಿಯ 10 ಟಿಎಂಸಿ ಅಡಿ ಪ್ರವಾಹದ ನೀರನ್ನು ಹಿಡಕಲ್ ಜಲಾಶಯದಲ್ಲಿ ಸದ್ಬಳಕೆ ಮಾಡಿಕೊಳ್ಳಬಹುದು. ಪೆನಿನ್ಸೂಲಾರ್ ನದಿ ಜೋಡಣೆ ಯೋಜನೆಯಡಿಯಲ್ಲಿ ಗೋದಾವರಿ-ಮಹಾನದಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆಯಡಿ ದೊರೆಯಬೇಕಾದ ನ್ಯಾಯಯುತವಾದ ಪಾಲನ್ನು ಪಡೆದುಕೊಂಡು ಹಾಗೂ ಮಹಾಪೂರದ ನೀರನ್ನು ಸದ್ಬಳಕೆ ಮಾಡಿಕೊಂಡು ಕೃಷ್ಣೆಯ ನೀರನ್ನು ಘಟಪ್ರಭಾ, ಮಲಪ್ರಭೆಗೆ ಸೇರಿಸಬಹುದು. ಈ ಕುರಿತು ನಮ್ಮ ಎಂ.ಆರ್.ಎನ್. (ನಿರಾಣಿ) ಫೌಂಡೇಶನ್​ನಿಂದ ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಬಚಾವತ್ ಆಯೋಗ ಸ್ಕಿಂ ‘ಬಿ’ ತೀರ್ಪಿನ ಅನ್ವಯ 130 ಟಿಎಂಸಿ ಅಡಿ ನೀರು ಬಳಕೆ ಮಾಡಲು ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದಿಂದ ಅಧಿಸೂಚನೆ ಹೊರಡಿಸಿ ಶೀಘ್ರ ಕೆಲಸ ಪ್ರಾರಂಭಿಸಬೇಕು.

ಕೊಯ್ನಾ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ಸಮುದ್ರ ಸೇರಿಸುವ 67.5 ಟಿಎಂಸಿ ಅಡಿ ನೀರನ್ನು ಕರ್ನಾಟಕ ಪಡೆದು ವಿದ್ಯುತ್ ನೀಡುವ ಒಡಂಬಡಿಕೆ ಮಾಡಿಕೊಂಡು ಆ ನೀರಿನ ಮೂಲಕ ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಗಳ ಬರಡು ಭೂಮಿಯನ್ನು ನೀರಾವರಿಗೆ ಒಳಪಡಿಸಬೇಕು. ಪ್ರಧಾನಿ ಮಧ್ಯಸ್ಥಿಕೆಯಲ್ಲಿ ನ್ಯಾಯಾಲಯದ ಹೊರಗೆ ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ಮಹಾದಾಯಿ ವಿವಾದ ಇತ್ಯರ್ಥ ಪಡಿಸಿ ಆದ್ಯತೆ ಮೆರೆಗೆ ಅನುಷ್ಠಾನಗೊಳಿಸಬೇಕು. ತುಂಗಭದ್ರಾ ಜಲಾಶಯದಲ್ಲಿ ಹೂಳು ತೆಗೆಯಲು ಅಥವಾ ಪರ್ಯಾಯವಾಗಿ ಮತ್ತೊಂದು ಕಿರು ಅಣೆಕಟ್ಟು ನಿರ್ವಿುಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ಅದು ಶೀಘ್ರ ಅನುಷ್ಠಾನಕ್ಕೆ ಬರಬೇಕು.

ಈ ಎಲ್ಲ ಮೂಲಗಳಿಂದ ಉತ್ತರ ಕರ್ನಾಟಕಕ್ಕೆ ಅಂದಾಜು 458 ಟಿಎಂಸಿಯಷ್ಟು ನೀರಿನ ಲಭ್ಯತೆ ಇದೆ. ಕರ್ನಾಟಕದ ಪಶ್ಚಿಮಘಟ್ಟಗಳಲ್ಲಿ ಹೇರಳವಾದ ಜಲಸಂಪತ್ತು ಇದೆ. ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಂದಲೇ 2000 ಟಿಎಂಸಿ ಅಡಿ ಲಭ್ಯವಿದೆ. ಅರಣ್ಯ ಸಂಪತ್ತಿಗೆ ಹಾನಿಯಾಗದಂತೆ ಒಂದಿಷ್ಟು ಪ್ರಮಾಣದ ನೀರನ್ನು ಬಯಲುಸೀಮೆ ಕಡೆಗೆ ಹರಿಸಿದರೆ ಉತ್ತರದಲ್ಲಿಯೂ ಹಸಿರು ಕ್ರಾಂತಿ ಸಾಧಿಸಬಹುದು. ರಾಜ್ಯದಲ್ಲಿರುವ ಒಟ್ಟು ಜಲರಾಶಿಯನ್ನು ಕ್ರೋಡೀಕರಿಸಿ ಸದ್ಬಳಕೆ ಮಾಡಿಕೊಳ್ಳುವ ಕಾರ್ಯದಲ್ಲಿ ಆಂಧ್ರ, ತೆಲಂಗಾಣ ಸರ್ಕಾರಗಳು ಯಶಸ್ವಿಯಾಗಿವೆ. ಈ ನಿಟ್ಟಿನಲ್ಲಿ ಕಾಲೇಶ್ವರಂ, ಪಟ್ಟೆಸಿಮಾದಂತಹ ಮಾದರಿ ಯೋಜನೆಗಳನ್ನು ಕರ್ನಾಟಕದಲ್ಲಿಯೂ ಅಳವಡಿಸಿಕೊಳ್ಳಬೇಕು. ತೆಲಂಗಾಣ ಸರ್ಕಾರ -ಠಿ; 80 ಸಾವಿರ ಕೋಟಿ ವೆಚ್ಚದ ಕಾಲೇಶ್ವರಂ ಯೋಜನೆಯನ್ನು ಖಾಸಗಿ ಹಣಕಾಸು ಸಂಸ್ಥೆಗಳ ನೆರವು ಪಡೆದು ಅನುಷ್ಠಾನಗೊಳಿಸಿದಂತೆ ಯುಕೆಪಿಗೂ ನಮ್ಮ ಸರ್ಕಾರ ಈ ಸೂತ್ರ ಅನುಸರಿಸಬಹುದು. ನೀರಾವರಿಯೊಂದಿಗೆ ನಾಗರಿಕರಿಗೆ ಶುದ್ಧ ಕುಡಿಯುವ ನೀರು ನೀಡುವ ತೆಲಂಗಾಣದ ‘ಮಿಷನ್ ಭಗೀರಥ’ ಯೋಜನೆಯಂಥ ಕಾರ್ಯಕ್ರಮವನ್ನು ಕಾರ್ಯಗತ ಮಾಡಿದರೆ ಆರೋಗ್ಯ ಕರ್ನಾಟಕದೆಡೆಗೆ ದಿಟ್ಟ ಹೆಜ್ಜೆ ಇಡಬಹುದು.

ಮೈಸೂರು ಮಹಾರಾಜರ ಜಲಸಂರಕ್ಷಣೆಯ ಕಾಳಜಿಯಿಂದ ಹಳೇ ಮೈಸೂರು ಭಾಗದಲ್ಲಿ 25 ಸಾವಿರಕ್ಕೂ ಅಧಿಕ ಕೆರೆಗಳಿವೆ. ಆದರೆ ಉತ್ತರ ಕರ್ನಾಟಕಕ್ಕೆ ಈ ಸೌಭಾಗ್ಯವಿಲ್ಲ. ಹೀಗಾಗಿ ನಮ್ಮ ಭಾಗದಲ್ಲಿ ಅಂತರ್ಜಲ ದಾಖಲೆ ಪ್ರಮಾಣದಲ್ಲಿ ಕುಸಿದಿದೆ. ಅಂತರ್ಜಲಕ್ಕೆ ಕಾಯಕಲ್ಪ ನೀಡುವ ವಿನೂತನ ಹಾಗೂ ಪರಿಸರಸ್ನೇಹಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಉತ್ತರ ಕರ್ನಾಟಕದ ಅಷ್ಟೂ ಯೋಜನೆಗಳನ್ನು ಒಂದೇ ಬಜೆಟ್​ನಲ್ಲಿ ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ. ಬದಲಾಗಿ 3-4 ವರ್ಷಗಳವರೆಗೆ ಬಜೆಟ್​ನಲ್ಲಿ ದೊಡ್ಡ ಪ್ರಮಾಣದ ಅನುದಾನ ಮೀಸಲಿಟ್ಟು ಯೋಜನೆಗಳನ್ನು ಹಂತ-ಹಂತವಾಗಿ ಪೂರ್ಣಗೊಳಿಸಬಹುದು. ದಶಕಗಳಿಂದಿರುವ ಉತ್ತರ ಕರ್ನಾಟಕದವರ ಉತ್ತರವಿಲ್ಲದ ಪ್ರಶ್ನೆಗಳಿಗೆ ಬಸವರಾಜ ಬೊಮ್ಮಾಯಿ ಉತ್ತರವಾಗುತ್ತಾರಾ? ಕಾದು ನೋಡೋಣ.

(ಲೇಖಕರು ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net