

|ಪಂಕಜಾ ಕೆ.ಎಂ.
ಕರೊನಾಗೂ ಮೊದಲು ಇಷ್ಟೊತ್ತಿಗೇ ಏಳಬೇಕು, ತಿಂಡಿ -ಊಟ, ನಿದ್ರೆ ಇಷ್ಟೊತ್ತಿಗೇ ಮಾಡಬೇಕು ಎಂಬ ನಿಯಮ ಇತ್ತು. ಅದಕ್ಕೆ ಮಕ್ಕಳ ಮೈಂಡ್ ಕೂಡ ಸೆಟ್ ಆಗಿತ್ತು. ಈಗ ಶಾಲೆಯಿಲ್ಲ. ಮನೆಯಲ್ಲೇ ಇರೋದ್ರಿಂದ ದಿನಚರಿಯೂ ಬದಲಾಗಿದೆ. ಹಾಗಾಗಿ ಅವರ ಬಾಡಿ ಕ್ಲಾಕ್ ಬದಲಾಗಿದೆ. ಇದರಿಂದ ದೇಹದಲ್ಲಿನ ಹಾಮೋರ್ನ್ಸ್ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತಿದೆ. ಈ ಬಗ್ಗೆ ಮಕ್ಕಳು ಅರಿತುಕೊಂಡು ಶಿಸ್ತು ರೂಢಿಸಿಕೊಳ್ಳುವ ಅವಶ್ಯಕತೆ ಇದೆ.
ಬಾಡಿ ಕ್ಲಾಕ್ ಅರ್ಥಾತ್ ಬಯಾಲಾಜಿಕಲ್ ಕ್ಲಾಕ್... ಇದು ಮೆದುಳಿನ ಮಧ್ಯಭಾಗದಲ್ಲಿರುತ್ತದೆ. ಸೂರ್ಯ ಉದಯಿಸುವುದಕ್ಕೆ ಹಾಗೂ ಅಸ್ತಮಿಸುವುದಕ್ಕೆ ಅನುಗುಣವಾಗಿ ದೇಹದ ಚಲನವಲನಗಳ ಮೇಲೆ ನಿಯಂತ್ರಣ ಹೊಂದಿರುತ್ತದೆ. ಅಂದರೆ ಸೂರ್ಯ ಉದಯಿಸುತ್ತಲೇ ನಿದ್ರೆಯಿಂದ ಎಚ್ಚರವಾಗುವುದು, ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಊಟ- ತಿಂಡಿ ಮಾಡುವುದು, ರಾತ್ರಿ ನಿದ್ರೆ ಬರುವಂತೆ ಮಾಡುವುದು... ಹೀಗೆ ಆಯಾ ಸಮಯಕ್ಕೆ ಏನೇನು ಮಾಡಬೇಕೋ ಅದಕ್ಕೆ ಬಾಡಿ ಕ್ಲಾಕ್ ಹೊಂದಿಕೊಂಡಿರುತ್ತದೆ. ಯಾವಾಗ ಇದರಲ್ಲಿ ಏರುಪೇರು ಆಗುತ್ತದೋ ಆಗ ಅಲಸ್ಯ ಮನೆ ಮಾಡುತ್ತದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದು ಶುರುವಾಗುತ್ತದೆ. ಬಾಡಿ ಕ್ಲಾಕ್ ನೈಸಗಿರ್ಕವಾಗಿ ಹೊಂದಿಕೊಳ್ಳುವ ಪ್ರಕ್ರಿಯೆ ಅಥವಾ ದಿನಚರಿ. ಮನುಷ್ಯ ಮಾತ್ರವಲ್ಲ ಇದು ಪ್ರಾಣಿಗಳಲ್ಲೂ ಇದೆ. ಹಾಗಾಗಿಯೇ ಬೆಳಗ್ಗೆ ಗೂಡಿನಿಂದ ಹೊರ ಬರುವ ಹಕ್ಕಿಗಳು ಸಂಜೆಯಾಗುತ್ತಲೇ ಮರಳಿ ಗೂಡು ಸೇರುತ್ತವೆ.
ಯಾವುದೇ ಸಂದರ್ಭದಲ್ಲೂ ಪ್ರಾಣಿ-ಪಕ್ಷಿಗಳ ದಿನಚರಿ ಬದಲಾಗುವುದಿಲ್ಲ. ಆದರೆ ಮನುಷ್ಯನಲ್ಲಿ ಇದು ಪದೇಪದೆ ಬದಲಾಗುತ್ತದೆ. ಸದ್ಯ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಂತೂ ಮಕ್ಕಳಲ್ಲಿ ಉಂಟಾಗಿರುವ ನಾನಾ ಆರೋಗ್ಯ ಸಮಸ್ಯೆಗಳಿಗೆ ಬಾಡಿ ಕ್ಲಾಕ್ ಬದಲಾವಣೆಯೇ ಕಾರಣವಾಗುತ್ತಿದೆ. ಆರೋಗ್ಯಕರ ಹಾಗೂ ಉತ್ತಮ ದಿನಚರಿಯಿಂದ ಮೆದುಳಿನ ಮಧ್ಯಭಾಗದಲ್ಲಿರುವ ಬಾಡಿ ಕ್ಲಾಕ್ ಪರಿಸರಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ. ದೇಹಕ್ಕೆ ಬೇಕಾದ ಆರೋಗ್ಯಕರ ರಾಸಾಯನಿಕಗಳನ್ನು ಉತ್ಪಾದಿಸಲು ನೆರವಾಗುತ್ತದೆ. ರಾತ್ರಿ ವೇಳೆ ಉತ್ಪಾದನೆಯಾಗುವ ಈ ರಾಸಾಯನಿಕಗಳು ಮನುಷ್ಯ ಸಮರ್ಪಕವಾಗಿ ದಿನಚರಿ ನಡೆಸಲು ನೆರವಾಗುತ್ತವೆ. ಹಾಗಾಗಿ ಮನುಷ್ಯ ಬೆಳಗ್ಗೆ ಎದ್ದಾಗ ಉಲ್ಲಸಿತನಾಗಿರುತ್ತಾನೆ. ಸಂಜೆಯಾಗುತ್ತಲೇ ಈ ರಾಸಾಯನಿಕಗಳ ಪ್ರಮಾಣ ಕುಗ್ಗಿದಂತೆ ಆಯಾಸ ಉಂಟಾಗುತ್ತದೆ.
ನಿರೀಕ್ಷೆಗಿಂತ ತೀವ್ರ ತೊಂದರೆ...
ಬಾಡಿಕ್ಲಾಕ್ ಬದಲಾದರೆ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ. ಸಾಮಾನ್ಯವಾಗಿ 3-9 ವರ್ಷದವರೆಗಿನ ಚಿಕ್ಕ ಮಕ್ಕಳಲ್ಲಿ ಹೆಚ್ಚಿನ ಒತ್ತಡ, ನಿದ್ರಾಹಿನತೆ, ಅಧಿಕ ತೂಕ, ಖಿನ್ನತೆ, ಕೋಪ, ಅಲಸ್ಯ, ಸೋಮಾರಿತನ, ರೋಗ ನಿರೋಧಕ ಶಕ್ತಿ ಕುಂದುವಿಕೆ, ರಕ್ತದೊತ್ತಡ, ಮಧುಮೇಹ, ಬೊಜ್ಜು ಮುಂತಾದ ಸಮಸ್ಯೆ ಎದುರಾಗಿ ಬೆಳವಣಿಗೆ ಕುಂಠಿತವಾಗುತ್ತದೆ. 10ರಿಂದ 17 ವರ್ಷದವರೆಗಿನವರಲ್ಲಿ ಈ ಮೇಲಿನ ಎಲ್ಲ ಸಮಸ್ಯೆ ಜತೆಗೆ ಹಾಮೋರ್ನ್ಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದು ಅವರ ದೇಹದಲ್ಲಿ ಕೆಲ ಬದಲಾವಣೆ ಆಗುವ ಸಮಯ. ಇದು ಸರಿಯಾಗಿ ಆಗದಿದ್ದರೆ ಮುಂದೆ ಲೈಂಗಿಕ ಸಮಸ್ಯೆ, ತಪ್ಪು ಕಲ್ಪನೆಗಳು, ಆಸಕ್ತಿ ಕಳೆದುಕೊಳ್ಳುವುದು, ಒಂಟಿತನ, ಸಮಾಜದ ಬಗೆಗೆ ನಿರ್ಲಕ್ಷ್ಯ, ಸಾಮಾಜಿಕವಾಗಿ ಸ್ಪಂದಿಸದೇ ಇರುವುದು ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ.
ಸರಿಪಡಿಸಿಕೊಳ್ಳುವುದು ಹೇಗೆ?
ಕೋವಿಡ್ನಿಂದಾಗಿ ಕಳೆದ ಒಂದು ವರ್ಷದಿಂದ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡುವುದು, ಸಮಯಕ್ಕೆ ಸರಿಯಾಗಿ ನಿದ್ರೆ, ಆಟ, ಊಟ... ಈ ಎಲ್ಲ ಕ್ರಿಯೆಗಳಲ್ಲೂ ಬದಲಾವಣೆ ಆಗಿದೆ. ಲೇಟಾಗಿ ಮಲಗಿ ಲೇಟಾಗಿ ಏಳುವ, ಹೆಚ್ಚು ಬಾರಿ ಆಹಾರ ಸೇವಿಸುವ, ಹೊತ್ತಿಲ್ಲದ ಹೊತ್ತಿನಲ್ಲೂ ತಿಂಡಿ ತಿನ್ನುವ ಪರಿಪಾಠ ಶುರುವಾಗಿದೆ. ಇದೆಲ್ಲವೂ ದೇಹದ ಪರಿಸರಕ್ಕೆ ವಿರುದ್ಧವಾದದ್ದು. ಹಾಗಾಗಿ ಮಕ್ಕಳು ಉತ್ತಮ ಅಭ್ಯಾಸ ರೂಢಿಸಿಕೊಳ್ಳಬೇಕು. ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡಬೇಕು. ಸ್ನಾನ ಮಾಡಿ ಶುಭ್ರವಾಗಬೇಕು. ಹಸಿದಾಗ ಮಾತ್ರ ಆಹಾರ ಸೇವಿಸಬೇಕು. ಜಂಕ್ಫುಡ್ನಿಂದ ದೂರ ಇರಬೇಕು. ಸಾಧ್ಯವಾದಷ್ಟು ದೈಹಿಕ ಚಟುವಟಿಕೆಗಳಲ್ಲಿ ತೊಡಗಬೇಕು. ಓದಿಗೆ ಸಮಯ ಮೀಸಲಿಡಬೇಕು. ಸಾಮಾಜಿಕ ಹೊಂದಾಣಿಕೆ, ಮಾನವೀಯ ಮೌಲ್ಯ, ಪರಿಸರ ಪ್ರೇಮ, ಪ್ರಾಣಿ- ಪಕ್ಷಿಗಳ ಕಾಳಜಿ ಬಗ್ಗೆ ಅರಿತುಕೊಳ್ಳಬೇಕು. ಮಕ್ಕಳು ಇದನ್ನೆಲ್ಲ ತಾವೇ ಪಾಲಿಸದಿದ್ದರೆ ಪಾಲಕರು ದಿನಚರಿ ಸಿದ್ಧಪಡಿಸಿ ಪಾಲಿಸುವಂತೆ ತಿಳಿಹೇಳಬೇಕು. ಮಕ್ಕಳೊಂದಿಗೆ ಪಾಲಕರು ಹೆಚ್ಚು ಸಮಯ ಕಳೆಯಬೇಕು. ಅಕ್ಕಪಕ್ಕದ ಮಕ್ಕಳೊಂದಿಗೆ ಸುರತ ಎನಿಸಿದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಆಟವಾಡಲೂ ಅವಕಾಶ ನೀಡಬೇಕು. ಜಂಕ್ಫುಡ್ ಬದಲಿಗೆ ಆರೋಗ್ಯಕರ ಹಾಗೂ ಪೌಷ್ಟಿಕ ಆಹಾರ ತಿನ್ನಬೇಕು.