

| ಉಮೇಶ್ ಕುಮಾರ್ ಶಿಮ್ಲಡ್ಕ
ಜಗತ್ತಿನ ಅತ್ಯಂತ ಜನಪ್ರಿಯ ಬಾಡಿಬಿಲ್ಡರ್, ಪವರ್ಲಿಫ್ಟರ್ ಲ್ಯಾರಿ ವ್ಹೀಲ್ಸ್ ರೀತಿ ಆಗಬೇಕು ಎಂದು ಕನಸು ಕಾಣುತ್ತಿರುವ ಯುವಜನರು ಸಾಕಷ್ಟಿದ್ದಾರೆ. ಅಂತಹ ಯುವಕರ ಪೈಕಿ ಬ್ರಿಟನ್ನ 23 ವರ್ಷದ ರಿಯಾನ್ ಕ್ರೌಲೆ, ಅಭಿಮಾನಿ ಬಳಗದಲ್ಲಿ ‘ಬಿಗ್ ರಿಗ್’ ಎಂದೇ ಗುರುತಿಸಿಕೊಂಡಿದ್ದ. ಅವನಿಗೆ ಇನ್ಸ್ಟಾಗ್ರಾಮ್ಲ್ಲಿ 1.57 ಲಕ್ಷ ಫಾಲೋಯರ್ಸ್! ಬಾಡಿಬಿಲ್ಡಿಂಗ್ ಮತ್ತು ಪವರ್ಲಿಫ್ಟಿಂಗ್ ತರಬೇತಿಯನ್ನು ಲ್ಯಾರಿ ವ್ಹೀಲ್ಸ್ ಬಳಿಯೇ ಪಡೆಯಲು ದುಬೈಗೆ ತೆರಳಿದ್ದ. ಅಲ್ಲಿ ಎರಡು ವಾರದ ಹಿಂದೆ ಲ್ಯಾರಿ ಸಮ್ಮುಖದಲ್ಲಿ 220 ಕಿಲೋ ಬೆಂಚ್ ಪವರ್ಲಿಫ್ಟ್ ಮಾಡುತ್ತಿದ್ದಾಗ ಅನಾಹುತ ನಡೆದುಹೋಯಿತು. ರಿಯಾನ್ ಕ್ರೌಲೆಯ ಎದೆಯ ಸ್ನಾಯು ಎಲುಬಿನಿಂದಲೇ ಕಿತ್ತುಕೊಂಡು ಮೇಲೆದ್ದು ಬಂತು. ಭಯಾನಕ ದೃಶ್ಯ ವಿಡಿಯೋದಲ್ಲೂ ಸೆರೆಯಾಗಿತ್ತು. ಇದನ್ನು ಕ್ರೌಲೆ ತನ್ನ ಇನ್ಸ್ಟಾಗ್ರಾಮ್ಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಸಣ್ಣ ತಪು್ಪ ನಡೆದರೂ ಆಗುವ ಅನಾಹುತದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಲ್ಯಾರಿ ವ್ಹೀಲ್ಸ್ ಕೂಡ ಇನ್ಸ್ಟಾಗ್ರಾಂ ಖಾತೆಯಲ್ಲಿ ಕ್ರೌಲೆಯ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ಭಾರ ಎತ್ತುವಲ್ಲಿ ಅಜಾಗರೂಕತೆ, ಕ್ಷಣದ ಮೈಮರೆವು ಭಾರಿ ಅಪಾಯ ತಂದೊಡ್ಡಬಲ್ಲದು. ಬಾಡಿಬಿಲ್ಡರ್/ಪವರ್ಲಿಫ್ಟರ್ನ ಸ್ನಾಯುಗಳು ಹರಿದುಬಿಡಬಹುದು. ಭಾರ ಮೈಮೇಲೆ ಬಿದ್ದು ಎಲುಬುಗಳು ಮುರಿಯಬಹುದು. ಭಾರ ಎತ್ತುವ ಮಿತಿಯನ್ನು ಹೆಚ್ಚಿಸುತ್ತ ಸಾಗುವುದರಿಂದ ಹೃದಯದ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಹೃದಯಾಘಾತ ಮತ್ತು ಇತರ ಅಪಾಯಗಳೂ ಎದುರಾಗಬಹುದು. ಬಾಡಿಬಿಲ್ಡರ್ಗಳು ಸ್ನಾಯುವನ್ನು ಉಬ್ಬಿಸಲು ಪ್ರೊಟೀನ್ ಪೌಡರ್, ಗುಳಿಗೆ ಮುಂತಾದವುಗಳನ್ನು ಸೇವಿಸುತ್ತಾರೆ. ಇದು ಅಲ್ಪಾವಧಿ ಪ್ರಯೋಜನ ನೀಡಿದರೂ, ದೀರ್ಘಾವಧಿಯಲ್ಲಿ ಆಸ್ಟಿಯೋಪೊರೊಸಿಸ್ ಅಥವಾ ಎಲುಬುಗಳ ನಾಶ, ಕಿಡ್ನಿ ಸಮಸ್ಯೆಗಳನ್ನು ತಂದೊಡ್ಡಬಹುದು.
ಮುಂಜಾಗ್ರತೆ ಏನು?: ಬಾಡಿಬಿಲ್ಡಿಂಗ್/ಪವರ್ಲಿಫ್ಟಿಂಗ್ ಅಪಾಯ ತಗ್ಗಿಸುವುದಕ್ಕೆ ಸುರಕ್ಷಿತ ವ್ಯಾಯಾಮ ಮುಂಜಾಗ್ರತೆಗಳನ್ನು ತೆಗೆದುಕೊಳ್ಳಬೇಕು. ಯಾವಾಗಲೂ ವ್ಯಾಯಾಮ ಆರಂಭಿಸುವುದಕ್ಕೆ ಮುನ್ನ 5ರಿಂದ 10 ನಿಮಿಷ ವಾಮ್ರ್ ಅಪ್ ಮತ್ತು ಕೂಲ್ ಡೌನ್ ಮಾಡಬೇಕು. ಇದಕ್ಕಾಗಿ ವಾಕಿಂಗ್, ಸ್ಟ್ರೆಚಿಂಗ್ ಮುಂತಾದ ಮೈಲ್ಡ್ ವ್ಯಾಯಾಮಗಳನ್ನು ಮಾಡಬೇಕು. ನಂತರ ನಿಧಾನವಾಗಿ ಸಾಮರ್ಥ್ಯಕ್ಕೆ ಅನುಗುಣವಾಗಿ ಭಾರ ಎತ್ತುವ ವ್ಯಾಯಾಮ ಮಾಡಬೇಕು. ಈ ರೀತಿ ಮಾಡುವುದರಿಂದ ಸಹಜವಾಗಿಯೇ ಶರೀರ ಬಲಿಷ್ಠವಾಗುತ್ತ ಸಾಗುತ್ತದೆ.
ಬಾಡಿಬಿಲ್ಡಿಂಗ್ 2 ವಿಧ: ನ್ಯಾಚುರಲ್ - ಯಾವುದೇ ರೀತಿಯ ಪರ್ಫಾಮೆನ್ಸ್. ಎನ್ಹಾನ್ಸಿಂಗ್ ಡ್ರಗ್ಸ್ ಬಳಸದೆಯೇ ಸಹಜವಾಗಿ ದೇಹದಾರ್ಢ್ಯ ಬೆಳೆಸಿಕೊಳ್ಳುವುದು ಇದರ ವಿಧಾನ. ಇದರಲ್ಲೂ ವಿವಿಧ ಸ್ಪರ್ಧೆಗಳಿದ್ದು, ಡೋಪಿಂಗ್ ಟೆಸ್ಟ್ ಕೂಡ ಇರುತ್ತದೆ. ಪ್ರೊಫೆಷನಲ್- ಐಎಫ್ಬಿಬಿ (ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಬಾಡಿಬಿಲ್ಡರ್ಸ್ ) ಪ್ರಮಾಣ ಪತ್ರವೂ ಇರುತ್ತದೆ. ಅಥವಾ ವಾಬ್ಬಾ ಇಂಟರ್ನ್ಯಾಷನಲ್ ಪ್ರೊ ಕಾರ್ಡ್ ಕೂಡ ಸಿಗುತ್ತದೆ.